ಬಸವಣ್ಣವನವರು ತಾವು ಹುಟ್ಟಿದ ಕಾಲಮಾನದಲ್ಲಿ ಇದ್ದ ವಿಚಾರಗಳಿಗಿಂತ ಆಧುನಿಕತೆ ಹೊಂದಿದ್ದವರು. ಅನುಭವ ಮಂಟಪ ಆಗಲಿ, ಅಂತರ್ಜಾತಿ ವಿವಾಹಗಳೇ ಆಗಲಿ, ಲಿಂಗಾಯತ ಧರ್ಮವನ್ನು ಹುಟ್ಟಿ ಹಾಕಿದ್ದೆ ಆಗಲಿ, ತಾವು ವಚನಗಳನ್ನು ರಚಿಸುವುದಲ್ಲದೆ ಹಲವಾರು ಶರಣರಿಗೆ ವಚನ ರಚಿಸುವ ಪ್ರೋತ್ಸಾಹ ನೀಡಿ ಕನ್ನಡ ವಚನ ಸಾಹಿತ್ಯ ಸಮೃದ್ಧಿ ಇಷ್ಟೆಲ್ಲಾ ಕಾರ್ಯಗಳು ಜರುಗುವುದಕ್ಕೆ ಕಾರಣ ಆದರು. ಸನಾತನ ಧರ್ಮದ ಆಚಾರ-ವಿಚಾರಗಳನ್ನು ತಿರಸ್ಕರಿಸಿ 'ಕಾಯಕವೇ ಕೈಲಾಸ' ಎಂದು ಸಾರಿದರು. ಅವರ ಸಮಾಜ ಸುಧಾರಣೆ ಕಾರ್ಯಗಳನ್ನು ಅರಸೊತ್ತಿಗೆ ಒಪ್ಪದಿದ್ದಾಗ ಬಿಜ್ಜಳನ ರಾಜಧಾನಿಯನ್ನು ಬಿಟ್ಟು ಹೊರ ನಡೆದರು. ಕಲ್ಯಾಣದಲ್ಲಿ ಬಸವನಿಲ್ಲದಿದ್ದರೇನಂತೆ? ಬಸವನಿದ್ದಲ್ಲಿ ಕಲ್ಯಾಣ ಅಲ್ಲವೇ?
ಬಸವಣ್ಣವರ ಜೀವನ ದುರಂತ ಅಂತ್ಯ ಕಂಡರೂ, ಅವರು ಕಟ್ಟಿದ ಲಿಂಗಾಯತ ಧರ್ಮ ಬೆಳೆದು ಹೆಮ್ಮರ ಆಯಿತು. ಇಂದಿಗೂ ಪ್ರತಿಯೊಂದು ಲಿಂಗಾಯತ ಕುಟುಂಬದಲ್ಲಿ ಬಸವ ನಾಮಧೇಯರಿದ್ದಾರೆ. ಆದರೆ ಅವರಲ್ಲಿ ಎಷ್ಟು ಜನಕ್ಕೆ ಕೂಡಲ ಸಂಗನ ಒಲಿಸಿಕೊಳ್ಳುವ ಪರಿ ಗೊತ್ತು?
ನೀವು ಬಸವಣ್ಣನನ್ನು ಮೆಚ್ಚುವವರು ಆಗಿದ್ದರೆ, ಬಾಗೇವಾಡಿಯಿಂದ ಶುರು ಮಾಡಿ, ಬಸವಣ್ಣನವರ ಕಾರ್ಯಕ್ಷೇತ್ರ ಬಸವಕಲ್ಯಾಣದಲ್ಲಿ ಅಲೆದು ಕೊನೆಯಲ್ಲಿ ಅವರ ಐಕ್ಯ ಸ್ಥಳವಾದ ಕೂಡಲ ಸಂಗಮದಲ್ಲಿ ಕಾಲ ಕಳೆದು ನೋಡಿ. ಅಲ್ಲಿ ದೇವಸ್ಥಾನದ ಪ್ರಾಂಗಣದ ಕಟ್ಟೆಗಳ ಮೇಲೋ ಇಲ್ಲವೇ ಹೊಳೆಯ ದಡದಲ್ಲೋ ನಿಮಗೆ ಬಸವಣ್ಣನವರ ದರ್ಶನವಾದಂತೆ ಅನಿಸುತ್ತದೆ. ಬಸವ ಎನ್ನುವ ಭಕರ ಧ್ವನಿಯಿಂದ, ಹೃದಯ ಮುಟ್ಟುವ ವಚನಗಳ ಅರ್ಥಗಳ ಮೂಲಕ ಬಸವಣ್ಣನವರು ನಿಮಗೆ ಒಲಿಯುತ್ತಾರೆ. ಅವರಿಗೆ ಕೂಡಲ ಸಂಗಮ ಒಲಿದ ಹಾಗೆ.