ಪ್ರಾಣಿ, ಪಕ್ಷಿ, ಸರೀಸೃಪಗಳ ವಿಚಾರ ಶಕ್ತಿ ಮನುಷ್ಯರಿಗೆ ಹೋಲಿಸಿದರೆ ತುಂಬಾ ಕಡಿಮೆ. ಅವುಗಳ ತಲೆಯಲ್ಲಿ ಓಡುವುದು ಪ್ರಮುಖವಾಗಿ ನಾಲ್ಕೇ ವಿಷಯಗಳು. ಆ ದಿನದ ಆಹಾರ, ತಾವು ಇನ್ನೊಂದು ಪ್ರಾಣಿಗೆ ಆಹಾರವಾಗದಂತೆ ಕಾಪಾಡಿಕೊಳ್ಳುವುದು, ಸಂಗಾತಿಯನ್ನು ಹುಡುಕಿಕೊಳ್ಳುವುದು ಮತ್ತು ತಮ್ಮ ಮರಿಗಳನ್ನು ಬೆಳೆಸುವುದು. ಜಿಂಕೆಗೆ ಹಸಿರು ಹುಲ್ಲು ಹುಡುಕುವುದು ಎಷ್ಟು ಮುಖ್ಯವೋ, ಮರೆಯಲ್ಲಿ ಅಡಗಿರುವ ಹುಲಿಯ ಬಾಯಿಗೆ ತಾನು ಆಹಾರವಾಗದಂತೆ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಈ ಸ್ಪರ್ಧೆಯಲ್ಲಿ, ಸದಾ ಜಾಗರೂಕತೆಯಿಂದ ಇರುವ ಮತ್ತು ಅಗತ್ಯ ಬಿದ್ದಾಗ ಅತಿ ವೇಗದಲ್ಲಿ ಓಡಿ ಪ್ರಾಣ ಉಳಿಸಿಕೊಳ್ಳುವ ಜಿಂಕೆಗಳು ಮಾತ್ರ ಪ್ರೌಢಾವಸ್ಥೆಗೆ ತಲುಪಲು ಸಾಧ್ಯ. ಹಾಗಾಗಿ ಆ ಗುಣ ಲಕ್ಷಣಗಳನ್ನು ಉಳ್ಳ ಜಿಂಕೆಗಳ ಸಂತತಿ ಮಾತ್ರ ಉಳಿದುಕೊಂಡು ಬಂದಿತು. ಬೇಟೆಗಾರ ಪ್ರಾಣಿಗಳಾದ ಸಿಂಹಗಳಲ್ಲಿ, ಪ್ರತಿಸ್ಪರ್ಧಿ ಸಿಂಹಗಳೊಡನೆ ಕಾದಾಡಿ ಗೆದ್ದ ಸಿಂಹಕ್ಕೆ ಮಾತ್ರ ಸಂತತಿ ಮುಂದುವರೆಸುವ ಅವಕಾಶ ಉಂಟು. ಹಾಗಾಗಿ ಸಿಂಹಗಳಲ್ಲಿ ಕಾದಾಟಕ್ಕೆ ಅನುಕೂಲವಾಗುವ ಭೀಕರತೆಯ ಅಂಶಗಳು ವಂಶವಾಹಿಯಾದವು. ಅಬ್ಬರಿಸುವ ಸಿಂಹ ಕಾಡಿನ ರಾಜನಾದರೆ, ಅವನ ಗುಣ ಲಕ್ಷಣಗಳು ಹೇಗಿದ್ದರೆ ಚೆನ್ನ ಎಂದು ನಿರ್ಧರಿಸುವ ಹೆಣ್ಣು ಸಿಂಹ ನ್ಯಾಚುರಲ್ ಸೆಲೆಕ್ಷನ್ ಮಾಡುವ ಕಿಂಗ್ ಮೇಕರ್ ಆಯಿತು. ನವಿಲುಗಳಲ್ಲಿ ಇರುವುದು ಸೌಂದರ್ಯದ ಸ್ಪರ್ಧೆ. ಆಕರ್ಷಕ ಗರಿಯನ್ನು ಹೊಂದದೆ ಇದ್ದ ನವಿಲುಗಳು ಬ್ರಹ್ಮಚಾರಿಗಳಾಗಿ ಉಳಿದವು. ವೈರಿಗಳ ಜೊತೆ ಕಾದಾಟಕ್ಕೆ ಮತ್ತು ಬೇರೆ ಯಾವುದೇ ಉಪಯೋಗಕ್ಕೆ ಬಾರದ ತನ್ನ ಗರಿಯನ್ನು ಮುಚ್ಚಿಕೊಂಡು ಓಡುವ ನವಿಲು, ಗರಿಗಳು ತನಗೆ ಹೊರೆಯಾದರೂ ತನ್ನ ಸಂತತಿ ಮುಂದುವರೆಸುವದಕ್ಕೆ, ಹೆಣ್ಣುಗಳನ್ನು ಆಕರ್ಷಿಸುವುದಕ್ಕೆ ಪೋಷಿಸುತ್ತದೆ. ವಂಶ ಮುಂದುವರೆಯುವುದಕ್ಕೆ ಅದು ಪ್ರಕೃತಿ ತಂದಿಟ್ಟ ಅನಿವಾರ್ಯತೆ.
ಮನುಷ್ಯ ವಿಕಾಸ ಹೊಂದುತ್ತ ಪ್ರಾಣಿ ಲೋಕಕ್ಕಿಂತ ಭಿನ್ನ ಜೀವನ ಮಾಡುತ್ತಾನೆ. ಅವನು ಕೃಷಿ ಕಲಿತ ನಂತರ ಪ್ರತಿ ದಿನ ಆಹಾರಕ್ಕಾಗಿ ಅಲೆಯಬೇಕಾಗಿಲ್ಲ. ಮತ್ತು ಅವನಿಗೆ ನೈಸರ್ಗಿಕವಾಗಿ ಯಾವುದೇ ಶತ್ರುಗಳಿಲ್ಲವಾದ್ದರಿಂದ ಅವನು ಪ್ರತಿ ಕ್ಷಣ ಯಾವ ಕಡೆಯಿಂದ ಆಪತ್ತು ಬಂದಿತು ಎಂದು ವಿಚಾರ ಮಾಡಬೇಕಿಲ್ಲ. ಆದರೂ ಜೀವ ವಿಕಾಸದ ಪ್ರವೃತ್ತಿಗಳು ಅವನಲ್ಲಿ ಇನ್ನು ಹಾಸು ಹೊಕ್ಕಾಗಿದೆ. ಅವನಿಗೆ ಸಂಗಾತಿಯನ್ನು ಆಕರ್ಷಿಸಲು ನವಿಲಿನ ಹಾಗೆ ಗರಿ ಇಲ್ಲ. ಬದಲಿಗೆ ಆಕರ್ಷಕ ಮುತ್ತಿನ ಹಾರದ ಕಾಣಿಕೆ ನೀಡಿ ತನ್ನ ಸಂಗಾತಿಗೆ ತನ್ನ ಶ್ರೀಮಂತಿಕೆಯ ಸಾಮರ್ಥ್ಯ ತೋರಿಸುತ್ತಾನೆ. ಹಾಸ್ಯ ಮಾತುಗಳನ್ನಾಡುತ್ತಾ, ತಾನೆಷ್ಟು ಚತುರ ಎಂದು ಬಿಂಬಿಸಲು ಪ್ರಯತ್ನಿಸುತ್ತಾನೆ. ಹೆಣ್ಣು ತಾನು ಉಡುವ ವಸ್ತ್ರಾಭರಣಗಳಲ್ಲಿ ಕುಶಲತೆ ತೋರಿಸುತ್ತಾಳೆ. ತನ್ನ ಸೊಂಟ ಬಳುಕಿಸಿ ತನಗೆ ಸರಿಯಾದ ಜೋಡಿಯನ್ನು ಆಕರ್ಷಿಸುತ್ತಾಳೆ. ಕಾಡಿನಲ್ಲಿ ಪ್ರಾಣಿಗಳು ಹೆಣ್ಣಿಗಾಗಿ ಕಾದಾಡುತ್ತವೆ. ಮನುಷ್ಯನು ಹಿಂದೆ ರಾಜ-ಮಹಾರಾಜರ ಕಾಲದಲ್ಲಿ ಹೆಣ್ಣಿಗಾಗಿ ಕಾದಿದ್ದು ಉಂಟು. ಆದರೆ ಇಂದು ಅದು ಮಾರ್ಪಾಡಾಗಿ, ಸೌಂದರ್ಯ-ಶ್ರೀಮಂತಿಕೆ-ಸಾಮಾಜಿಕ ಸ್ಥಾನಮಾನ ಇವುಗಳ ಮೇಲೆ ಗಂಡು-ಹೆಣ್ಣು ಜೋಡಿಯ ಏರ್ಪಾಡುಗಳಾಗುತ್ತವೆ. ಪ್ರಾಣಿಗಳು ದೈಹಿಕ ಶಕ್ತಿಯಿಂದ ಹೆಚ್ಚಿನ ಸಾಮಾಜಿಕ ಸ್ಥಾನಮಾನ ಹೊಂದಲು ಪ್ರಯತ್ನಿಸಿದರೆ, ನಾವುಗಳು ನಮ್ಮ ಓದು, ವರಮಾನ, ನಾವು ಧರಿಸುವ ವಸ್ತ್ರ, ಓಡಿಸುವ ಕಾರು, ನಮ್ಮ ಉದ್ಯೋಗ ತಂದು ಕೊಡುವ ಅಧಿಕಾರ ಇವುಗಳ ಮೂಲಕ ಸಾಮಾಜಿಕ ಸ್ಥಾನಮಾನ ಗಳಿಸಲು ಮತ್ತು ಅದರ ಮೂಲಕ ಒಳ್ಳೆಯ ಸಂಗಾತಿಯನ್ನು ಆಕರ್ಷಿಸಲು ಮತ್ತು ಸಂತತಿ ಮುಂದುವರೆಸಲು ಜೀವನ ಸವೆಸುತ್ತೇವೆ. ಮನುಷ್ಯನ ಜೀವನ ರೀತಿಗಳು ಪ್ರಾಣಿಗಳಿಗಿಂತ ಬೇರೆ ಇರಬಹುದು ಆದರೆ ಉದ್ದೇಶ ಮಾತ್ರ ಒಂದೇ. ಪ್ರಕೃತಿಗೆ ಮನುಷ್ಯನು ಕೂಡ ಒಂದು ಪ್ರಾಣಿಯೇ.
ಮನುಷ್ಯನು ತನ್ನ ಜೀನ್ ಗಳನ್ನೂ ಸೃಷ್ಟಿಸುವುದಿಲ್ಲ ಬದಲಿಗೆ ಜೀನ್ ಗಳು ಮನುಷ್ಯನನ್ನು ಸೃಷ್ಟಿಸುತ್ತವೆ ಎಂದು ನಾವು ಕಲಿತುಕೊಂಡಾಗಿದೆಯಲ್ಲ. ಆ ಜೀನ್ ಗಳು ಮನುಷ್ಯ ಸೇರಿದಂತೆ ಎಲ್ಲ ಪ್ರಾಣಿ, ಪಕ್ಷಿಗಳಲ್ಲಿ ತಾನು ಸ್ವಾರ್ಥಿಯಾಗುವಂತೆ, ಮೊದಲು ತಾನು ಆಹಾರ ಹುಡುಕಿ ಕೊಳ್ಳುವಂತೆ, ಹಾಗೆಯೇ ಕಾದಾಟ ಮಾಡಿದರು ಸರಿ, ಮೋಸದಿಂದ ಆದರೂ ಸರಿ ತನ್ನ ವಂಶವನ್ನು ಬೆಳೆಸುವಂತೆ ಪ್ರಚೋದಿಸುತ್ತವೆ. ಒಬ್ಬ ವ್ಯಕ್ತಿ ಸತ್ತರೂ, ಅವನ/ಅವಳ ಜೀನ್ ಗಳು ಅವರ ಮಕ್ಕಳ ಪೀಳಿಗೆಗೆ ಹರಿದು ಹೋಗಿ, ತಾವು ಬದುಕಿಕೊಳ್ಳುತ್ತವೆ. ಹಾಗೆಯೇ ಆ ಪೀಳಿಗೆಯಲ್ಲೂ, ಮುಂದಿನ ಪೀಳಿಗೆಗೆ ಹರಿದು ಹೋಗುವ ಏರ್ಪಾಡು ಮಾಡಿಕೊಂಡು ಚಿರಂಜೀವಿಯಾಗುತ್ತವೆ.
ಸ್ವಾರ್ಥ ಎನ್ನುವುದು ನಿಸರ್ಗದಲ್ಲಿ ಬದುಕಿರುವ ಎಲ್ಲ ಜೀವಿಗಳಲ್ಲಿ ಇರುವ ಸಹಜ ಸ್ವಭಾವ. ಮೊದಲಿಗೆ ತಾನು, ತನ್ನ ಊಟ, ತನ್ನ ಸಂಗಾತಿ, ತನ್ನ ಮಕ್ಕಳು. ಅವರ ಏಳಿಗೆಗೆ ಬೇರೆಯವರು ಜೀವ ತೆರಬೇಕಾದರೆ ಅದು ಆಗಿ ಹೋಗಲಿ ಎನ್ನುವುದು ಎಲ್ಲ ಜೀವಿಗಳಲ್ಲಿ ಜೀನ್ ಗಳು ಬರೆದ ಸಾಂಕೇತಿಕ ಭಾಷೆ. ಹಾಗಾಗಿ ಪ್ರಕೃತಿ ಯಾವ ಕಾಲಕ್ಕೂ ಆದರ್ಶ ಎನ್ನಿಸುವ ಸಮಾಜ ಸೃಷ್ಟಿಸಲಾರದು. ಇಲ್ಲಿ ಪ್ರತಿ ದಿನ ನಿಮ್ಮ ಇರುವನ್ನು ನೀವು ಧೃಢ ಪಡಿಸಬೇಕು. ಇಲ್ಲದಿದ್ದರೆ ಪ್ರಕೃತಿ ನಿಮ್ಮನ್ನು ಕಡೆಗಣಿಸಿ ಇತರೆ ಪ್ರಬಲರಿಗೆ ಅವಕಾಶ ಮಾಡಿಕೊಡುತ್ತದೆ.
References:
1. The Rise and Fall of The Third Chimpanzee by Jared Diamond
2. The Red Queen by Matt Ridley
3. The Selfish Gene by Richard Dawkins