Sunday, August 7, 2022

ಗೇಮ್ ಗಳು ಹೊಸ ಪೀಳಿಗೆಯವರಿಗೆ ಸೇರಿದ್ದು

ಚಕ್ರವರ್ತಿ ಅಶೋಕ ತನ್ನ ಸಂದೇಶಗಳನ್ನು ಕಲ್ಲಿನಲ್ಲಿ ಕೆತ್ತಿಸುತ್ತಿದ್ದ. ನಂತರದ ರಾಜರುಗಳು ತಾಮ್ರದ ಹಾಳೆಗಳ ಮೇಲೆ, ಇಲ್ಲವೇ ರೇಷ್ಮೆ ಬಟ್ಟೆಯ ಮೇಲೆ ತಮ್ಮ ಸಂದೇಶಗಳನ್ನು ಬರೆಯತೊಡಗಿದರು. ೧೭-೧೮ನೆ ಶತಮಾನದ ಹೊತ್ತಿಗೆ ಪ್ರಿಂಟಿಂಗ್ ಪ್ರೆಸ್ ಮತ್ತು ಕಾಗದದ ಆವಿಷ್ಕಾರ ಆಗಿತ್ತು. ಆಗ ಎಲ್ಲರ ಕೈಯಲ್ಲೂ, ಎಲ್ಲರ ಮನೆಯಲ್ಲೂ ಪುಸ್ತಕಗಳು. ಎರಡನೇ ಜಾಗತಿಕ ಮಹಾ ಯುದ್ಧದ ಹೊತ್ತಿಗೆ ಹಿಟ್ಲರ್, ಮುಸ್ಸಲೋನಿ ತಮ್ಮ ಭಾಷಣಗಳನ್ನು ರೇಡಿಯೋ ನಲ್ಲಿ ಬಿತ್ತರಿಸಲು ಆರಂಭಿಸಿದ್ದರು. ನಂತರ ಬಂದಿದ್ದು ಚಲನಚಿತ್ರಗಳು. ಅದು ಒಂದು ದೊಡ್ಡ ಉದ್ಯಮವೇ ಆಗಿ ಬೆಳೆಯಿತು. ಆದರೆ ಅದರ ತಲೆಯ ಮೇಲೆ ಕಾಲು ಇಡಲೆಂಬಂತೆ ಬಂತು ಟಿವಿ. ಇಂಟರ್ನೆಟ್, ಯೂಟ್ಯೂಬ್, tiktok ಬಂದ ಮೇಲೆ ಟಿವಿ ಕೂಡ ಹಿಂದೆ ಬಿತ್ತು. ಆದರೆ ಇಂದಿನ ಚಿಣ್ಣರನ್ನು ನೋಡಿ. ಅವರಿಗೆ ಗೇಮ್ ಗಳು ಸೆಳೆದಷ್ಟು ಬೇರೆ ಯಾವುದು ಸೆಳೆಯುವುದಿಲ್ಲ.


ಮನುಷ್ಯ ಕಲ್ಪನಾ ಜೀವಿ. ಅವನಿಗೆ ಹಗಲುಗನಸುಗಳು ಹುಟ್ಟಿಸುವ ರೋಮಾಂಚನ ವಾಸ್ತವ ಹುಟ್ಟಿಸುವುದಿಲ್ಲ. ಅದಕ್ಕೆ ಅವನು ಬೇರೆಯ ಲೋಕದಲ್ಲಿ ಕಳೆದು ಹೋಗಲು ಇಷ್ಟ ಪಡುತ್ತಾನೆ. ಅದಕ್ಕೆ ಸಹಾಯವಾಗಿದ್ದು ಮೊದ ಮೊದಲಿಗೆ ಪುಸ್ತಕಗಳು, ಕಾದಂಬರಿಗಳು. ಚಲನಚಿತ್ರಗಳು ಹುಟ್ಟಿಸುವ ಉದ್ರೇಕದ ಭಾವನೆಗಳು ಪುಸ್ತಕಗಳು ಹುಟ್ಟಿಸಲು ಸಾಧ್ಯವೇ? ಕ್ರಮೇಣ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗಿ ಚಲನಚಿತ್ರ ನೋಡುವವರ ಸಂಖ್ಯೆ ಜಾಸ್ತಿ ಆಯಿತು. ಬೋರಾಗಿಸುವ ಎರಡು ತಾಸಿನ ಚಿತ್ರ ನೋಡದೆ ಹತ್ತು youtube ವಿಡಿಯೋ ನೋಡುವ ಅವಕಾಶ ಇದ್ದರೆ ಜನ ಅದನ್ನೇ ಕೇಳುವುದಿಲ್ಲವೇ? ಆದರೆ ವಿಡಿಯೋ ನೋಡುವ ರೋಮಾಂಚನಕ್ಕಿಂತ ಗೇಮ್ ಆಡುವ ಥ್ರಿಲ್ ದೊಡ್ಡದು. ನೀವು ಗೇಮ್ ಆಡಲು ಶುರು ಇಟ್ಟರೆ ನಿಮಗೆ ಬೇರೆ ಯಾವುದೂ ರುಚಿಸುವುದಿಲ್ಲ. ಆತಂಕಕಾರಿ ವಿಷಯ ಎಂದರೆ ಗೇಮ್ ಗಳು ನಮ್ಮ ಮೆದುಳಿನಲ್ಲಿ ಹುಟ್ಟಿಸುವ ಡೋಪಮೈನ್ ರಭಸ ನಮ್ಮನ್ನು ಮತ್ತೆ ಮತ್ತೆ ಅದೇ ಅನುಭವಕ್ಕೆ ಹಾತೊರೆಯುವಂತೆ ಮಾಡುತ್ತದೆ. ಕ್ರಮೇಣ ಮನುಷ್ಯ ಅದಕ್ಕೆ ದಾಸನಾಗಿ ಹೋಗುತ್ತಾನೆ. ಅದು ಡ್ರಗ್ ಗಳು ಹುಟ್ಟಿಸುವ ನಶೆಗೆ ಮನುಷ್ಯ ದಾಸ ಆದಂತೆ. ಡ್ರಗ್ ಮತ್ತು ಗೇಮ್ ಗಳು ಕಾರ್ಯ ನಿರ್ವಹಿಸುವ ವೈಖರಿ ಬೇರೆ ಬೇರೆಯಾದರು ಅದರ ಪರಿಣಾಮ ಮಾತ್ರ ಒಂದೇ. ಡ್ರಗ್ ಗಳು ಮನುಷ್ಯನನ್ನು ಬೇಗನೆ ಸಾವಿನ ದವಡೆಗೆ ಒಯ್ದರೆ, ಗೇಮ್ ಗಳು ಹಾಗೆ ಮಾಡುವುದಿಲ್ಲ. ಬದಲಿಗೆ ಅವನ ಸೃಜನಶೀಲತೆ ಕಸಿದುಕೊಳ್ಳುತ್ತವೆ. ಆ ಮನುಷ್ಯನಿಗೆ ಬೇರೆಯವರ ಸುಖ-ದುಃಖಗಳು ಅರಿವಿಗೆ ಬರುವುದಿಲ್ಲ. ಏಕೆಂದರೆ ಅವನು ಜೀವಿಸುವುದು ಅವನದೇ ಲೋಕದಲ್ಲಿ.


ನಾನು ಚಿಕ್ಕವನಿದ್ದಾಗ ನಮ್ಮ ಮನೆಯಲ್ಲಿ ಇದ್ದದ್ದು ರೇಡಿಯೋ ಮಾತ್ರ. ನನ್ನ ಅಕ್ಕಳಿಗೆ ಕಾದಂಬರಿ ಓದುವ ಹವ್ಯಾಸ ಇತ್ತು. ಆದರೆ ಅವುಗಳು ನಮ್ಮ ಮೆದುಳಿನಲ್ಲಿ ಹುಟ್ಟಿಸುವ ಡೋಪಮೈನ್ ರಭಸ ಅಷ್ಟರಲ್ಲೇ ಇತ್ತು. ಎಲ್ಲರ ಮನೆಯಲ್ಲಿ ಬಂದ ಹಾಗೆ ನಮ್ಮ ಮನೆಯಲ್ಲಿ ಕೂಡ ಬಂದೆ ಬಿಟ್ಟಿತು ಟಿವಿ. ಕಟುಕರ ಮನೆಯ ಗಿಳಿ 'ಕೊಲ್ಲು, ಕತ್ತರಿಸು' ಎಂದ ಹಾಗೆ ಅದು ಬದಲಾದ ಕಾಲಮಾನವನ್ನು ತೋರಿಸುತ್ತಿತ್ತು. ಸ್ಮಾರ್ಟ್ ಫೋನ್ ಗಳು ನಮ್ಮ ಕೈ ಸೇರಿದ ಮೇಲೆ ನಾವು ವಾಸ್ತವಕ್ಕಿಂತ ಕಲ್ಪನೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದೇವೆ. ನೀವು ಬರಹಗಾರ ಆದರೆ ನಿಮ್ಮ ಬರಹಗಳನ್ನು ಹತ್ತಿಪ್ಪತ್ತು ಜನ ಓದಿದರೆ ಅದೇ ಜಾಸ್ತಿ. ಅದೇ ನೀವು ಚಿಕ್ಕ ವಿಡಿಯೋಗಳನ್ನು ಮಾಡಿದರೆ ಕನಿಷ್ಠ ನೂರು ಜನ ಆದರೂ ನೋಡುತ್ತಾರೆ. ಆದರೆ ಅವುಗಳನ್ನು ಮೀರಿಸುವಂತೆ ಬಂದಿರುವ ಗೇಮ್ ಗಳು ಹೊಸ ಪೀಳಿಗೆಯ ಮಕ್ಕಳನ್ನು ವ್ಯಸನಿಗಳನ್ನಾಗಿಸಿವೆ. ಅದು ಅಲ್ಪ ಪ್ರಮಾಣದಲ್ಲಿ ಇದ್ದರೆ ಒಳ್ಳೆಯದು ಇರುತ್ತಿತ್ತೇನೋ? ಆದರೆ ಮನುಷ್ಯನ ಮೆದುಳು ರೂಪುಗೊಂಡಿದ್ದೆ ರೋಮಾಂಚನ ಬಯಸಲು. ಅಪಾಯ ಎಂದು ಗೊತ್ತಿದ್ದರೂ F1 ರೇಸಿಂಗ್ ಜನ ನೋಡಲು ಹೋಗುವುದಿಲ್ಲವೆ? ಎತ್ತರದಿಂದ ನೆಗೆಯುವ ಬಂಗೀ ಜಂಪಿಂಗ್ ಹುಟ್ಟಿಸುವ ರೋಮಾಂಚನ ಪಡೆಯಲು ಜನ ದುಡ್ಡು ಖರ್ಚು ಮಾಡುವುದಿಲ್ಲವೇ?


ನನ್ನ ಆರು ವರ್ಷದ ಮಗ ತಾನು ದೊಡ್ಡವನಾದ ಮೇಲೆ ಗೇಮರ್ ಆಗುತ್ತೇನೆ ಎಂದು ಹೇಳುತ್ತಾನೆ. ನಾನು ಅಸಹಾಯಕತೆಯಿಂದ ಅವನನ್ನು ನೋಡುತ್ತೇನೆ. ಆದರೆ ಪ್ರಕೃತಿ ವಿಕಾಸಗೊಂಡಿದ್ದು ಹೀಗೆಯೇ. ಪುಸ್ತಕಗಳು ಹೊಸದಾಗಿ ಬಂದಾಗ, ಅದು ಕೆಟ್ಟ ಹವ್ಯಾಸ ಎಂದು ಹೇಳುವ ಕೆಲವರಾದರೂ ಇದ್ದರೇನೋ? ಆದರೆ ಪುಸ್ತಕಗಳು ನಿಲ್ಲಲಿಲ್ಲ. ಹಾಗೆಯೆ ಇಂದಿನ ಕಾಲಕ್ಕೆ ಗೇಮ್ ಗಳು. ಅವು ಹೊಸ ಪೀಳಿಗೆಗೆ ಸೇರಿದ್ದು. ಇದು ಇಷ್ಟಕ್ಕೆ ನಿಲ್ಲುತ್ತದೆ ಎಂದುಕೊಳ್ಳಬೇಡಿ. AR/VR ತಂತ್ರಜ್ಞಾನ ಅಭಿವೃದ್ಧಿ ಆಗುತ್ತಿದೆಯಲ್ಲ. ಅದು ಹುಟ್ಟಿಸುವ ಭ್ರಮಾ ಲೋಕ ತುಂಬಾನೇ ವಿಚಿತ್ರವಾದದ್ದು. ಅದರ ಮೇಲೆ Facebook ಸೇರಿದಂತೆ ಹಲವಾರು ಸಂಸ್ಥೆಗಳು ಕೋಟ್ಯಂತರ ರೂಪಾಯಿ ವ್ಯಯಿಸುತ್ತಿವೆ. ನಮ್ಮ ಆಫೀಸ್ ನಲ್ಲಿ ಕೂಡ ಅದರ ಲ್ಯಾಬ್ ಇದೆ. ಅದರ ಒಳ ಹೊಕ್ಕಾಗ ಆದ ಅನುಭವ ರೋಮಾಂಚನಕಾರಿ. ಅದು ನಮ್ಮ ಮೆದುಳಿನಲ್ಲಿ ಹುಟ್ಟಿಸುವ ಡೋಪಮೈನ್ ರಭಸ ಹೆಚ್ಚಿನ ಪ್ರಮಾಣದ್ದು.


ಪಂಚೇಂದ್ರಿಯಗಳಲ್ಲಿ ಮುಖ್ಯವಾದದ್ದು ಕಣ್ಣು. ಅದು ಕೂಡ ಮೆದುಳಿನ ಒಂದು ಭಾಗ. ಹಾಗಾಗಿ ಕಣ್ಣು ಹುಟ್ಟಿಸುವ ಭ್ರಮೆಗೆ ಮೆದುಳು ತಕ್ಷಣವೇ ಪ್ರತಿಕ್ರಿಯೆ ನೀಡುತ್ತದೆ. ಅದಕ್ಕಾಗಿ ನೀವು ಧ್ಯಾನಕ್ಕೆ ಕುಳಿತಾಗ ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳುತ್ತೀರಿ. ಕಣ್ಣು ಮುಚ್ಚಿದ್ದರೆ ಮೆದುಳಿಗೆ ಸಿಗುವ ಮಾಹಿತಿ ಕಡಿಮೆ ಆಗುತ್ತದೆ ಆಗ ನಿಮ್ಮ ಮನಸ್ಸು ಶಾಂತ ಆಗುತ್ತದೆ. ಆದರೆ ಧ್ಯಾನ ಮಾಡುವುದು ಪ್ರಕೃತಿ ವಿರುದ್ಧದ ಈಜು. ನೀವು ಶಾಂತ ಆದರೆ ನಿಮ್ಮನ್ನು ಹುಟ್ಟಿಸಿ ಪ್ರಕೃತಿಗೆ ಏನು ಪ್ರಯೋಜನ? ಅದಕ್ಕೆ ಅದು ನಮ್ಮನ್ನು ಹೊಸ ಅನುಭವಗಳಿಗೆ ಹಾತೊರೆಯುವಂತೆ ಮಾಡುವ ಸ್ವಭಾವಗಳನ್ನು ನಮ್ಮ ಜೀನ್ ಗಳಲ್ಲಿ ಬರೆದುಬಿಟ್ಟಿದೆ. ಎಲ್ಲ ಆವಿಷ್ಕಾರಗಳಿಗೂ ಅದೇ ಮೂಲ. ಹಿಂದೆ ಒಂದು ಕಾಲದಲ್ಲಿ ಪುಸ್ತಕ, ಚಲನ ಚಿತ್ರಗಳು ಹುಟ್ಟಿದ್ದು ಇದೇ ತರಹದ ತುಡಿತದಿಂದ. ಇಂದಿಗೆ ಗೇಮ್ ಗಳು. ಮುಂದೆ ಬರಲಿರುವ AR/VR ಕೂಡ ಪ್ರಕೃತಿ ವಿಕಾಸದ ಒಂದು ಭಾಗವೇ.

Wednesday, August 3, 2022

ಸುಖಕ್ಕಿಂತ ದುಃಖಗಳೇ ನಮ್ಮನ್ನು ಹೆಚ್ಚು ಮನುಷ್ಯರನ್ನಾಗಿಸುತ್ತವೆ

ಬಡತನಕೆ ಉಣುವ ಚಿಂತೆ,
ಉಣಲಾದರೆ ಉಡುವ ಚಿಂತೆ, 
ಉಡಲಾದರೆ ಇಡುವ ಚಿಂತೆ,
ಇಡಲಾದರೆ ಹೆಂಡಿರ ಚಿಂತೆ,
ಹೆಂಡಿರಾದರೆ ಮಕ್ಕಳ ಚಿಂತೆ,
ಮಕ್ಕಳಾದರೆ ಬದುಕಿನ ಚಿಂತೆ,
ಬದುಕಾದರೆ ಕೇಡಿನ ಚಿಂತೆ,
ಕೇಡಾದರೆ ಮರಣದ ಚಿಂತೆ

~ ಅಂಬಿಗರ ಚೌಡಯ್ಯ

ಹೌದಲ್ಲವೇ? ಒಂದು ಕಾಲದಲ್ಲಿ ಹಣದಿಂದ ಹೆಚ್ಚು-ಕಡಿಮೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದುಕೊಂಡಿದ್ದೆ. ಆಗ ನಾನಿನ್ನು ಈ ವಚನ ಓದಿರಲಿಲ್ಲ ಅಷ್ಟೇ. ಈಗ ನನಗೆ ಉಣುವ ಚಿಂತೆ ಇಲ್ಲ. ಆದರೆ ಅದಕ್ಕೆ ತಕ್ಕಂತೆ ಕಾಡುವ ಚಿಂತೆಗಳ ಸ್ವರೂಪ ಕೂಡ ಬದಲಾಗಿದೆ. ಓಶೋ ಒಂದು ಪ್ರವಚನದಲ್ಲಿ ಹೇಳಿದ್ದ. ನೀವು ಶ್ರೀಮಂತರಾಗಿ, ಆಗಲೂ ಕೂಡ ನಿಮಗೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ಆವಾಗ ನಿಮ್ಮ ಮನಸ್ಸು ಆಧ್ಯಾತ್ಮಿಕತೆ ಕಡೆಗೆ ಹೊರಳುವುದು ಎಂದು. ಸೂಪರ್ ಸ್ಟಾರ್ ಎನಿಸಿಕೊಂಡ ರಜನೀಕಾಂತ್ ಹಿಮಾಲಯದ ಗುಹೆಗಳಿಗೆ ಧ್ಯಾನ ಮಾಡಲು ಹೋಗುವುದಿಲ್ಲವೆ? ಅವರು ತಮ್ಮ ಚಿತ್ರಗಳಲ್ಲಿ ಮಾಡುವ ಮ್ಯಾಜಿಕ್ ಅವರ ಸ್ವಂತ ಜೀವನದಲ್ಲಿ ಮಾಡಲು ಸಾಧ್ಯವೇ? ಅವರಿಗೆ ಗೊತ್ತಾಗಿದೆ. ನಟನೆ ಮಾಡುವುದು ಪ್ರೇಕ್ಷಕರಿಗಾಗಿ, ಮತ್ತು ಧ್ಯಾನ ಮಾಡುವುದು ತಮಗಾಗಿ ಎಂದು.

ಆದರೆ ಇದರಲ್ಲಿ ಆಸಕ್ತಿಯ ವಿಷಯ ಎಂದರೆ 'ಉಣುವ ಚಿಂತೆ, ಹೆಂಡತಿಯ ಚಿಂತೆ, ಮಕ್ಕಳ ಚಿಂತೆ'  ಎಂದ ವಚನಕಾರ 'ಉಣುವ ಸಂತೋಷ, ಹೆಂಡತಿಯ ಸಂತೋಷ, ಮಕ್ಕಳ ಸಂತೋಷ'  ಎಂದು ಹೇಳಲಿಲ್ಲ. ಅದು ಏಕೆಂದರೆ ಸಂತೋಷ ಕ್ಷಣಿಕ, ಚಿಂತೆ ದೀರ್ಘ ಕಾಲದ್ದು. ಪರೀಕ್ಷೆಯಲ್ಲಿ ಮೊದಲ ದರ್ಜೆ ಗಳಿಸಿದ ಸಂತೋಷ ಹದಿನೈದು ದಿನದಲ್ಲಿ ಮರೆಯಾಗುತ್ತದೆ. ಆದರೆ ಫೇಲಾದ ಚಿಂತೆ ವರುಷವಿಡೀ ಕಾಡುತ್ತದೆ. ಪ್ರಕೃತಿ ನಮ್ಮನ್ನು ರೂಪುಗೊಳಿಸಿದ್ದು ಹಾಗೆಯೆ. ಅದು ನಮ್ಮ ಮೆದುಳಿನಲ್ಲಿ ರಾಸಾಯನಿಕಗಳ ಮೂಲಕ ಕ್ಷಣಿಕ ಕಾಲದ ಮಟ್ಟಿಗೆ ಸಂತೋಷ ಹುಟ್ಟಿಸಿ, ನಾವುಗಳು ಮತ್ತೆ ಮತ್ತೆ ಆ ಅನುಭವಕ್ಕೆ ಹಾತೊರೆಯುವಂತೆ ಮಾಡುತ್ತದೆ. ಹಾಗಾಗಿ ಸಂತೋಷ ಎನ್ನುವುದು ನೆನಪು ಮಾತ್ರ. ಆದರೆ ದುಃಖ ಎನ್ನುವುದು ಪಕ್ಕದಲ್ಲೇ ಇರುವ ಪ್ರತಿ ಕ್ಷಣ ಚುಚ್ಚಿ ಇರಿಯುವ ಸಂಗಾತಿ.

ಅದನ್ನು ನಮ್ಮ ವಚನಕಾರರು ಎಂದೋ ಅರಿತಿದ್ದರು. 'ಸಾಸಿವೆ ಕಾಳಿನಷ್ಟು ಸುಖಕ್ಕೆ, ಸಾಗರದಷ್ಟು ದುಃಖ ನೋಡಾ' ಎಂದು ಅಲ್ಲಮ ಪ್ರಭುಗಳು ಹೇಳಲಿಲ್ಲವೇ? ಅವರಿಗೆ ಸುಖ ಮತ್ತು ದುಃಖಗಳ ನಡುವಿನ ಅಪಾರ ಪ್ರಮಾಣದ ಅಂತರ ಮತ್ತು ತೀವ್ರತೆಯ ಅರಿವಿತ್ತು.ಆದರೆ ಪ್ರಕೃತಿ, ನಮ್ಮ ಮನಸ್ಥಿತಿಯನ್ನು ಸಾಸಿವೆ ಕಾಳಿನಷ್ಟು ಸಿಗುವ ಸುಖಕ್ಕೆ ಬೆಂಬತ್ತಿ ಹೋಗಿ, ಸಾಗರದಷ್ಟು ದುಃಖವನ್ನು ಅನುಭವಿಸುವಂತೆ ಮಾಡಿಬಿಡುತ್ತದೆ. ಅಂಬಿಗರ ಚೌಡಯ್ಯ ಹೇಳಿದಂತೆ ಉಣುವ ಚಿಂತೆಯಿಂದ, ಮರಣದ ಚಿಂತೆಗೆ ನಮಗರಿವಿಲ್ಲದಂತೆ ಬದಲಾಗುತ್ತ ಹೋಗಿಬಿಡುತ್ತೇವೆ. ಆದರೆ ವಚನಕಾರರು ತಮ್ಮ ಇಷ್ಟ ದೈವದ ಮೊರೆ ಹೊಕ್ಕು, ಶಿವಚಿಂತನೆಯಲ್ಲಿ ಇಲ್ಲವೇ ಗುಹೇಶ್ವರನ ಧ್ಯಾನದಲ್ಲಿ ಕಾಲ ಕಳೆದು ಮಾಯೆಯಿಂದ ಹೊರ ಬರುತ್ತಾರೆ. ಅದರಿಂದಲೇ 'ಮನದ ಮುಂದಣ ಆಸೆಯೇ ಮಾಯೆ' ಎನ್ನುವ ವಚನ ಅವರಿಗೆ ಹೇಳಲು ಸಾಧ್ಯವಾಗುತ್ತದೆ.

ಸುಖ ಅಲ್ಪ ಕಾಲದ್ದು, ದುಃಖ ದೀರ್ಘ ಕಾಲದ್ದು ಅಂದರೆ ನಾವು ಸುಖದ ಹಿಂದೆ ಬೀಳದೆ, ದುಃಖವನ್ನು ದೂರವಿಡುವ ಕಾರ್ಯ ಕೈಗತ್ತಿಕೊಳ್ಳಬೇಕಲ್ಲವೇ? ಅದನ್ನೇ ನೋಡಿ ಬುದ್ಧ ಮಾಡಿದ್ದು. ಅವನು ಸುಖದ ಮೂಲ ಯಾವುದು ಎಂದು ಕೇಳಲಿಲ್ಲ. ಬದಲಿಗೆ ದುಃಖದ ಮೂಲ ಯಾವುದು ಎಂದು ಹುಡುಕಿದ. ಅವನಿಗೆ ಜ್ಞಾನೋದಯ ಆಯಿತು. 'ಆಸೆಯೇ ದುಃಖದ ಮೂಲ' ಎನ್ನುವ ಸರಳ ಸತ್ಯವನ್ನು ಜಗತ್ತಿಗೆ ಸಾರಿದ. ಸತ್ಯ ಸರಳ ಆದರೆ ಸುಲಭ ಅಲ್ಲ. ಸಂತೋಷ ನೀವು ಬೇಡ ಎಂದು ತಿರಸ್ಕಿರಿಸದರೆ ಅದು ಪ್ರಕೃತಿಯ ವಿರುದ್ಧದ ಈಜು. ಅದು ಮತ್ತೆ ಸುಖಕ್ಕೆ ನಿಮ್ಮನ್ನು ಚಡಪಡಿಸುವಂತೆ ಮಾಡುತ್ತದೆ. ಮತ್ತೆ ಲೌಕಿಕದ ತಿರುಗಣಿಗೆ ಬೀಳುವಂತೆ ಮಾಡುತ್ತದೆ. ಬುದ್ಧ ದುಃಖದ ತೀವ್ರತೆ ಅನುಭವಿಸದೇ ಇದ್ದರೆ ಅದರ ಮೂಲ ಹುಡುಕಲು ಹೋಗುತ್ತಿರಲಿಲ್ಲ. ಶಿವಧ್ಯಾನದ ಆಶ್ರಯ ಇರದಿದ್ದರೆ ದಾಸರಿಗೆ, ವಚನಕಾರರಿಗೆ ಮುಕ್ತಿ ಎಲ್ಲಿತ್ತು?


ಇತಿಹಾಸ ಹೇಳುವುದು ಕೂಡ ಇದನ್ನೇ. ಒಂದು ಗೆದ್ದ ದೊಡ್ಡಸ್ತಿಕೆಗೆ, ಹಲವಾರು ಸೋಲಿನ ಅವಮಾನಗಳು ಜೊತೆಯಾಗಿಬಿಡುತ್ತವೆ. ಗೆಲುವಿಗಿಂತ ಸೋಲು ಭೀಕರ. ಗೆಲುವು ಮದ ಏರಿಸಿದರೆ, ಸೋಲು ಪಾಠ ಕಲಿಸುತ್ತದೆ. ಸುಖಕ್ಕಿಂತ ದುಃಖಗಳೇ ನಮ್ಮನ್ನು ಹೆಚ್ಚು ಮನುಷ್ಯರನ್ನಾಗಿಸುತ್ತವೆ. ದುಃಖಗಳೇ ಸಿದ್ಧಾರ್ಥನನ್ನು ಬುದ್ಧನನ್ನಾಗಿ ಬದಲಾಯಿಸಿದ್ದು. ಆ ಸತ್ಯದ ಅರಿವೇ ಬಸವಣ್ಣ, ಅಲ್ಲಮರಾದಿಯಾಗಿ ವಚನಕಾರರನ್ನು ಅಜರಾಮರ ಆಗಿಸಿದ್ದು.

Sunday, July 31, 2022

ಕುರಿ, ತೋಳ ಮತ್ತು ಕುರಿ ಕಾಯುವ ನಾಯಿ

ಲಕ್ಷಾಂತರ ವರ್ಷಗಳ ಹಿಂದೆ ಮಾನವ ಅಲೆಮಾರಿಯಾಗಿ, ಬೇಟೆಯಾಡುತ್ತ ಜೀವಿಸುತ್ತಿದ್ದ. ಆದರೆ ಅವನು ಕ್ರಮೇಣ ಕೃಷಿಕನಾಗಿ ಮಾರ್ಪಟ್ಟ. ಏಕೆಂದರೆ ಅದು ಬೇಟೆಗೆ ಹೋಲಿಸಿದರೆ ಸುಲಭ ಮತ್ತು ಅದರಿಂದ ಹೆಚ್ಚು ಹೊಟ್ಟೆಗಳನ್ನು ತುಂಬಿಸಬಹುದಾಗಿತ್ತು. ಕೃಷಿ ಜೀವನ ಮನುಷ್ಯರು ಒಟ್ಟಿಗೆ ಬಂದು ಒಂದು ಸಮಾಜ ಕಟ್ಟಲು ಸಹಾಯವಾಯಿತು. ಪ್ರಕೃತಿ ಮನುಷ್ಯನಿಗೆ ಮತ್ತು ಎಲ್ಲ ಜೀವಿಗಳಿಗೆ ಸುಲಭ ಜೀವನ ಹುಡುಕಿಕೊಳ್ಳಲು ಪ್ರಚೋದಿಸುತ್ತದೆ. ಹಾಗಾಗಿ ಎಲ್ಲರಿಗೂ ಕೃಷಿ ಕೆಲಸ ಇಷ್ಟವಾಗದೇ, ಕೃಷಿ ಮಾಡುವವರನ್ನು ದೋಚುವ (ಮೋಸದಿಂದಲೋ ಅಥವಾ ದಬ್ಬಾಳಿಕೆಯಿಂದಲೋ) ಮತ್ತು ಅದರಿಂದ ಸುಲಭ ಜೀವನ ಸಾಗಿಸುವ ವೃತ್ತಿಯನ್ನು ಹಲವರು ಆಯ್ದುಕೊಂಡರು. ಇಂತಹ ಕಳ್ಳರನ್ನು ಎದುರಿಸಲು, ಅವರಿಂದ ಸಾಮಾನ್ಯ ಜನರನ್ನು ರಕ್ಷಿಸಲು ದಂಡನಾಯಕರು, ತಳವಾರರು ಹುಟ್ಟಿಕೊಂಡರು. ಅಂತಹ ಹಲವರು ದಂಡನಾಯಕರಿಗೆ ನಾಯಕ ಆದವನೇ ರಾಜ ಎನಿಸಿಕೊಂಡ. ಹೀಗೆ ನಮ್ಮ ಸಮಾಜ ರೂಪುಗೊಳ್ಳುತ್ತ ಹೋಯಿತು.


ಇಂದಿಗೂ ಕೂಡ ಎಲ್ಲಾ ಸಮಾಜಗಳಲ್ಲಿ ಹಲವಾರು ಲೋಪ ದೋಷಗಳಿರುತ್ತವೆ. ದೌರ್ಬಲ್ಯಗಳಿರುತ್ತವೆ. ಅವುಗಳ ದುರ್ಬಳಕೆ ಮಾಡಿಕೊಳ್ಳುವ ಜನರು ಹುಟ್ಟಿಕೊಳ್ಳುತ್ತಾರೆ. ಉದಾಹರಣೆಗೆ ಮಾಫಿಯಾ ಅಥವಾ  ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು. ಕೆಲವರು ದಬ್ಬಾಳಿಕೆ ಮಾಡುತ್ತಾರೆ. ಇನ್ನು ಕೆಲವರು ಮೋಸ ಮಾಡಿ ತಮ್ಮ ಜಾಣ್ಮೆ ಮೆರೆಯುತ್ತಾರೆ. ಆದರೆ ಅವರು ಬದುಕುವುದು ಸಮಾಜದ ರಕ್ತ ಹೀರುತ್ತ ಅಲ್ಲದೆ ಯಾವುದೇ ಕೃಷಿ ಸಾಧನೆಯಿಂದಲ್ಲ.


ಎಲ್ಲ ಸಮಾಜದಲ್ಲಿ ಮೂರು ವರ್ಗದ ಜನರಿರುತ್ತಾರೆ. ಹೆಚ್ಚಿನವರು ಕುರಿಗಳು. ಅವರಿಗೆ ತಮ್ಮನ್ನು ತಾವು ಕಾಪಾಡಿಕೊಳ್ಳುವುದು ಗೊತ್ತಿಲ್ಲ. ಕೆಲವರು ತೋಳಗಳು. ಅವರು ಕುರಿಗಳನ್ನು ಹರಿದು ತಿನ್ನುತ್ತಾರೆ. ಇನ್ನು ಕೆಲವರು ಕುರಿ ಕಾಯುವ ನಾಯಿಗಳು. ಅವರು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಕುರಿಗಳನ್ನು ಕಾಪಾಡುತ್ತಾರೆ. ಸುತ್ತಲಿನ ಪರಿಸರ ಸದಾ ಗಮನಿಸುತ್ತಾ ಇರುತ್ತಾರೆ. ತೋಳ ಕಣ್ಣಿಗೆ ಬಿದ್ದೊಡನೆ ಎಚ್ಚರಿಸುತ್ತಾರೆ. ಮತ್ತು ಅವಶ್ಯಕತೆ ಬಿದ್ದರೆ ಕಾದಾಟಕ್ಕೆ ಇಳಿಯುತ್ತಾರೆ.


ಉದಾಹರಣೆಗೆ, ಮುಂಬೈ ನಲ್ಲಿ ಭಯೋತ್ಪಾದಕರ ಧಾಳಿಯಾದಾಗ, ಅಲ್ಲಿನ ಸಾರ್ವಜನಕರು ಕುರಿಗಳಾಗಿದ್ದರು. ತೋಳ ಪಾತ್ರ ವಹಿಸಿದ ಭಯೋತ್ಪಾದಕರ ಗುಂಡಿಗೆ ಬಲಿಯಾಗಿ ಸುಲಭದಲ್ಲಿ ಪ್ರಾಣ ತೆತ್ತರು. ಆದರೆ ಆ ತೋಳಗಳನ್ನು ಎದುರಿಸಿದ 'ಬ್ಲಾಕ್ ಕ್ಯಾಟ್ ಕಮಾಂಡೋ' ಗಳು ಮತ್ತು ಶಸ್ತ್ರಸಜ್ಜಿತ ಪೋಲಿಸ್ ರು ವಹಿಸಿದ ಪಾತ್ರ ಕುರಿಗಳನ್ನು ಕಾಯುವುದು ಮತ್ತು ತೋಳವನ್ನು ಓಡಿಸುವುದು ಇಲ್ಲವೇ ಕೊಲ್ಲುವುದು ಆಗಿತ್ತು.


ಭಾರತದ ಚರಿತ್ರೆಯನ್ನು ಗಮನಿಸುತ್ತಾ ಹೋಗಿ. ನಮ್ಮ ಹಾಗೆ ಪರಕೀಯರಿಂದ ಹಲವಾರು ಬಾರಿ ಅಕ್ರಮಣಕ್ಕೊಳಗಾದ ದೇಶ ಬೇರೆ ಯಾವುದೂ ಇಲ್ಲ. ಹಾಗೆ ಅಕ್ರಮಣಕ್ಕೊಳಗಾದಾಗ ದೇಶದಲ್ಲಿ ಇದ್ದ ಪರಿಸ್ಥಿತಿ ಗಮನಿಸಿ. ಕುರಿ ಕಾಯುವ ನಾಯಿ ಕಡಿಮೆ ಸಂಖ್ಯೆಯಲ್ಲಿದ್ದಾಗ, ಕುರಿಗಳೇ ಹೆಚ್ಚು ತುಂಬಿಕೊಂಡಿದ್ದಾಗ ತೋಳ ಸುಲಭದಲ್ಲಿ ಗೆಲ್ಲಲು ಸಾಧ್ಯ ಅಲ್ಲವೇ? ತೋಳಗಳ ಹಿಂಡಿನಲ್ಲಿ ಪ್ರತಿ ತೋಳ ಹೋರಾಡುತ್ತದೆ. ಆದರೆ ಕುರಿ ಹಿಂಡು ಚೆಲ್ಲಾಪಿಲ್ಲಿಯಾಗಿ ಸುಲಭಕ್ಕೆ ಪ್ರಾಣ ಕಳೆದುಕೊಳ್ಳುತ್ತವೆ. ಜೊತೆಗೆ ಕೆಲವೇ ಇದ್ದ ಕಾವಲು ನಾಯಿಗಳನ್ನು ಕೂಡ ಸಾವಿನ ಅಂಚಿಗೆ ತಳ್ಳಿಬಿಡುತ್ತವೆ. ನಿಮಗೆ ಪರಿಸ್ಥಿತಿ ಅರ್ಥವಾಗಿರಲಿಕ್ಕೆ ಸಾಕು.


ಇದು ಸಮಾಜದ ಮತ್ತು ದೇಶದ ಮಟ್ಟದಲ್ಲಿ ನಡೆಯುತ್ತಿರುವ ನಿರಂತರ ಪ್ರಕ್ರಿಯೆ. ಇದು ಸಣ್ಣ ಮಟ್ಟದಲ್ಲಿ ಅಂದರೆ ಕುಟುಂಬದ ಒಳ ಜಗಳಗಳಲ್ಲಿ ಕೂಡ ನಡೆಯುತ್ತಿರುತ್ತದೆ. ನಿಮ್ಮ ಕುಟುಂಬದಲ್ಲೇ ಕುರಿ ಯಾರು, ತೋಳ ಯಾರು ಮತ್ತು ಕುಟುಂಬ ಕಾಯುವ ನಾಯಿ ಯಾರು ಎಂದು ಗಮನಿಸಿ ನೋಡಿ. ಎಲ್ಲದಕ್ಕೂ ಮುಂಚೆ ನಿಮ್ಮ ಪಾತ್ರ ಏನು ಎಂದು ತಿಳಿದುಕೊಳ್ಳಿ. ನೀವು ಕುರಿಯಾಗಿದ್ದರೆ ನನ್ನ ಸಂತಾಪಗಳು. ನಿಮ್ಮನ್ನು ದೂಷಣೆಗೆ ಗುರಿ ಮಾಡಿ, ನಿಮ್ಮನ್ನು ಹುರಿ ಮುಕ್ಕುವ ತೋಳಗಳು ಹತ್ತಿರಕ್ಕೆ ಬರುವ ಮುನ್ನವೇ ಎಚ್ಚೆತ್ತುಕೊಳ್ಳಿ. ನಾಯಿಗಳ ಸ್ನೇಹ ಗಳಿಸಿ ಮತ್ತು ಅವುಗಳ ಎಚ್ಚರಿಕೆ ಮೀರದಿರಿ. ಒಂದು ವೇಳೆ ನೀವು ತೋಳವೇ ಆಗಿದ್ದರೆ, ಎಲ್ಲಾ ಸಮಯದಲ್ಲಿ ನಿಮ್ಮ ಆಟ ನಡೆಯುವುದಿಲ್ಲ. ನಿಮ್ಮನ್ನು ಗಮನಿಸುವ ನಾಯಿಗಳು ಇವೆ. ನಿಮ್ಮ ಲೆಕ್ಕಾಚಾರ ಹೆಚ್ಚು ಕಡಿಮೆ ಆದರೆ ನಿಮ್ಮ ಕೊನೆ ಗ್ಯಾರಂಟಿ ಎನ್ನುವುದು ಮರೆಯಬೇಡಿ. ನೀವು ಕುಟುಂಬ ಕಾಯುವ ನಾಯಿ ಆಗಿದ್ದರೆ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು. ಕುರಿ ಎನ್ನುವ ಕುಟುಂಬ ಮತ್ತು ಸಮಾಜದ ರಕ್ಷಣೆ ಮಾಡಿದ್ದಕ್ಕೆ. 


ಇದೇ ತರಹದ ತರ್ಕವನ್ನು ಅಮೆರಿಕದ Navy Seal ಗಳಿಗೆ ಮತ್ತು ಇಸ್ರೇಲ್ ದೇಶದ Mossad ಕಮಾಂಡೋಗಳಿಗೆ ಹೇಳಿಕೊಡಲಾಗುತ್ತವೆ. ಆದರೆ ಇದು ಇತಿಹಾಸ ಓದಿದ ಮತ್ತು ಸಮಾಜವನ್ನು ಗಮನಿಸುವ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬಹುದಾದ ಸಾಮಾನ್ಯ ತಿಳುವಳಿಕೆ.



ಚಿತ್ರ: ಹೋರಾಟದ ನಂತರ ನಾಯಿಯನ್ನು ಕುರಿ ಸಂತೈಸುತ್ತಿರುವುದು  



Wednesday, July 27, 2022

ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ

೧೯೬೦ ಮತ್ತು ೭೦ ರ ದಶಕಗಳಲ್ಲಿ ರಾಜಕುಮಾರ್ ಮತ್ತು ಭಾರತಿ ಅವರು ಒಟ್ಟಾಗಿ ೨೧ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಜೋಡಿ ನೋಡಿಯೇ 'ಭಲೇ ಜೋಡಿ' ಎನ್ನುವ ಚಿತ್ರ ತಯಾರಾಗಿತ್ತು. ಅವರ 'ಹೃದಯ ಸಂಗಮ' ಎನ್ನುವ ಕಪ್ಪು ಬಿಳುಪಿನ ಚಿತ್ರದ ಒಂದು ಹಾಡು ನನಗೆ ಅಚ್ಚು ಮೆಚ್ಚು. ಈ ಹಾಡಿನ ಚಿತ್ರೀಕರಣದಲ್ಲಿ ದೃಶ್ಯ-ವೈಭವಗಳಿಲ್ಲ. ಬಟ್ಟೆ-ಆಭರಣಗಳ ಶ್ರೀಮಂತಿಕೆಯ ಪ್ರದರ್ಶನ ಇಲ್ಲ. ಆದರೆ ಪ್ರೀತಿಯ ತೋರ್ಪಡಿಕೆಯಲ್ಲಿ ಭರ್ತಿ ಶ್ರೀಮಂತಿಕೆ. ಅದರಲ್ಲಿ ನಾಯಕ-ನಾಯಕಿ ಹೀಗೆ ಹಾಡುತ್ತಾರೆ:


'ನೀ ತಂದ ಕಾಣಿಕೆ
ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ
ಅನುರಾಗ ಮಾಲಿಕೆ
ಅದಕಿಲ್ಲ ಹೋಲಿಕೆ'


ಹಳೆಯ ಕೆಲವೇ ಹಾಗಿತ್ತೋ ಅಥವಾ ಇದೆಲ್ಲ ಬರಿ ಕವಿಯ ಕಲ್ಪನೆ ಏನೋ ಗೊತ್ತಿಲ್ಲ. ಆದರೆ ಇಂದಿನ ಹೆಣ್ಣು ಮಕ್ಕಳಿಗೆ ಕಾಣಿಕೆ ಅಂದರೆ ಅದು ವಜ್ರದ್ದೋ ಇಲ್ಲವೇ ಬಂಗಾರದ್ದೋ ಆಗಿರಬೇಕು.ಯಾರಿಗೆ ಬೇಕು ನಗೆ ಹೂವ ಮಾಲಿಕೆ? ಹೇಳಿ, ನೀವೇ ಹೇಳಿ? ಗಂಡಸರೇನು ಕಡಿಮೆ ಇಲ್ಲ. ಮಾವನ ಆಸ್ತಿಯ ಮೌಲ್ಯ ಹೆಂಡತಿಯ ಅನುರಾಗಕ್ಕಿಂತ ಹೆಚ್ಚು ಮುಖ್ಯ.


'ಮೈ ಮರೆತು ನಿಂತೆ ಆ ನಿನ್ನ ನೋಟಕೆ
ನಾ ಹಾಡಿ ಕುಣಿದೆ ನಿನ್ನೆದೆ ತಾಳಕೆ'


ಈ ತರಹದ ನಿಷ್ಕಲ್ಮಶ ಮತ್ತು ಯಾವುದೇ ಷರತ್ತು-ಕರಾರುಗಳಿಲ್ಲದ ಪ್ರೀತಿ ಗಂಡ-ಹೆಂಡತಿ ಇಬ್ಬರೂ ಬಡವರಾಗಿದ್ದರೆ ಮಾತ್ರ ಸಾಧ್ಯವೇನೋ? ಅಲ್ಲಿ ಅಸ್ತಿ-ಅಂತಸ್ತಿನ ಅಡಚಣೆ ಇರುವುದಿಲ್ಲ. ಯಾರು ಹೆಚ್ಚು-ಕಡಿಮೆ ಎನ್ನುವ ವಾದ-ವಿವಾದಗಳಿರುವುದಿಲ್ಲ. ಆಗ ಸಂಗಾತಿಯ ನೋಟಕ್ಕೆ ಮೈ ಮರೆಯುವುದು, ಲಹರಿಯನ್ನು ಗೊತ್ತು ಮಾಡಿಕೊಳ್ಳುವುದು ಸಾಧ್ಯವೋ ಏನೋ? ಅದು ಬಿಟ್ಟು ಕೊಡು-ತೆಗೆದುಕೊಳ್ಳುವ ವ್ಯಾಪಾರದಲ್ಲಿ, ನಾನೇ ಶ್ರೇಷ್ಠ ಎನ್ನುವ ಸ್ಪರ್ಧೆಯಲ್ಲಿ ಹೇಗೆ ಸಾಧ್ಯ? ನೀವುಗಳು ಅವನ್ನೆಲ್ಲ ಮೀರಿ ನಿಂತ ಜೋಡಿಯಾಗಿದ್ದರೆ ನಿಮಗೆ ಅಭಿನಂದನೆಗಳು. ನಿಮ್ಮಂತವರನ್ನು ನೋಡಿಯೇ ಇಂತಹ ಕಾವ್ಯ ಸೃಷ್ಟಿಯಾಗಿರಲಿಕ್ಕೆ ಸಾಧ್ಯ.


'ಈ ಬಾಳ ಗುಡಿಗೆ ನೀನಾದೆ ದೀಪಿಕೆ
ಬೆಳಕಾಗಿ ನಿಂದೆ ನೀ ಎನ್ನ ಜೀವಕೆ'


ರಾಜಕುಮಾರ್ ಅಷ್ಟೇ ಅಲ್ಲ ಅವರ ಮಗ ಪುನೀತ್ ರ ಕಾಲವೂ ಮುಗಿದು ಹೋಗಿದೆ. ಇಂದಿಗೆ ಆದರ್ಶಮಯ ಚಿತ್ರಗಳು ಇಲ್ಲ. ಇಂದಿಗೆ ಹೆಣ್ಣು ಮಕ್ಕಳು ನೋಡುವುದು ಧಾರಾವಾಹಿಗಳನ್ನು. ಅದರಲ್ಲಿನ ಪಾತ್ರಗಳು ತೊಟ್ಟ ಆಭರಣಗಳನ್ನು ತಾವು ತೊಟ್ಟು ಯಾರಿಗೆ ಹೊಟ್ಟೆ ಉರಿಸಬೇಕು ಎನ್ನುವ ಲೆಕ್ಕಾಚಾರದಲ್ಲಿ ಅವರು ಮೈ ಮರೆತಿರುತ್ತಾರೆ. ಆ ಧಾರಾವಾಹಿಗಳಲ್ಲಿ ಹೆಣ್ಣಿನ ಪಾತ್ರಗಳೇ ಎಲ್ಲ ನಿರ್ಧಾರಗಳನ್ನು ಮಾಡುವುದು ನೋಡಿ ತಮ್ಮ ಕುಟುಂಬ ಕೂಡ ತಮ್ಮ ಕಪಿಮುಷ್ಠಿಯಲ್ಲಿ ಇರಬೇಕೆಂದು ಬಯಸುತ್ತಾರೆ. ಅವರಿಗೆ ಸುಮಧುರ ಗೀತೆಗಳು ಬೇಕಿಲ್ಲ. ಅವರವರ ಲೋಕ ಅವರವರಿಗೆ ಆಗಿ ಹೋಗಿದೆ. ಮಕ್ಕಳು ಮೊಬೈಲ್ ಗೇಮ್ ಗಳಲ್ಲಿ ಕಳೆದು ಹೋಗಿರುತ್ತಾರೆ. ನನ್ನ ತರಹದವರು ಹಳೆಯ ಹಾಡು ಕೇಳುತ್ತ ಹೊಸ ಲೇಖನ ಬರೆಯುತ್ತಾರೆ. ನಿಮ್ಮ ತರಹದವರು  'ಲೈಕ್' ಒತ್ತಿ ನಿಟ್ಟುಸಿರು ಬಿಡುತ್ತೀರಿ.


ವಾಸ್ತವ ಹೇಗಾದರೂ ಇರಲಿ, ಹಾಡು ಕೇಳುತ್ತ ಸಂತೋಷ ಹೊಂದಲು ಸಾಧ್ಯವಾಗುವುದಕ್ಕೆ ಅಲ್ಲವೇ ಹಾಡುಗಳು ಮಾಸದೆ ಉಳಿದಿರುವುದು. ಈ ಹಳೆಯ ಹಾಡು ಒಮ್ಮೆ ಕೇಳಿ ನೋಡಿ.


Tuesday, July 26, 2022

ಮನಸ್ಸು, ದೇಹ ಮತ್ತು ರೋಗ

ಮನಸ್ಸಿನ ಭಾವನೆಗಳಿಗೆ ಬರೀ ಮೆದುಳು ಸ್ಪಂದಿಸುವುದಿಲ್ಲ, ಇಡೀ ದೇಹವೇ ಅದಕ್ಕೆ ಸ್ಪಂದಿಸುತ್ತದೆ. ಅದು ಹೇಗೆ ನೋಡೋಣ. ಬೇರೆಯವರ ಏಳಿಗೆ ಕಂಡರೆ ನಿಮಗೆ ಸಹಿಸಲು ಆಗುವುದಿಲ್ಲ. ಅವರನ್ನು ಕಂಡರೆ ನಿಮಗೆ 'ಹೊಟ್ಟೆ ಉರಿ'. ಯಾರೋ ನಿಮ್ಮನ್ನು ಹಾಡಿ ಹೊಗಳಿ ಬಿಡುತ್ತಾರೆ. ಆಗ ನಿಮಗೆ 'ಹೃದಯ ತುಂಬಿ' ಬರುತ್ತದೆ. ತೀವ್ರ ಕೋಪ ಬಂದಾಗ ಆಗುವುದು 'ಕಣ್ಣು ಕೆಂಪು' ಮತ್ತು ಸಣ್ಣಗೆ ನಡುಗುವುದು 'ಕೈ ಕಾಲು'. ಇನ್ನು ಸಂದೇಹವೇ  ಬೇಕಿಲ್ಲ ಅಲ್ಲವೇ. ಮನಸ್ಸು ಮತ್ತು ದೇಹ ಬೇರೆ ಬೇರೆ ಅಲ್ಲ ಎಂದು ತಿಳಿಯುವುದಕ್ಕೆ.


ಮನಸ್ಸಿನ ಮೇಲೆ ಉಂಟಾಗುವ ದೀರ್ಘ ಕಾಲದ ಪರಿಣಾಮಗಳು ದೇಹದ ಮೇಲೆ ಕೂಡ ಪರಿಣಾಮ ಬೀರತೊಡಗುತ್ತವೆ. ಉದಾಹರಣೆಗೆ, ವಿಪರೀತ ಕೋಪ ಅಜೀರ್ಣತೆ ತಂದಿಡಬಹುದು. ಭುಜಗಳಲ್ಲಿನ ನೋವು ಹೊರಲಾರದ ಜವಾಬ್ದಾರಿಯಿಂದ ಉಂಟಾಗಿರಬಹುದು. ಗಂಟಲು ನೋವು ಮನ ಬಿಚ್ಚಿ ಮಾತನಾಡಲು ಅವಕಾಶ ಇಲ್ಲದ್ದು ಸೂಚಿಸಿರುತ್ತಿರಬಹುದು. ಬಿಟ್ಟು ಹೋಗದ ಕೆಮ್ಮು ನೀವು ನಿಮ್ಮ ಜೊತೆಗೆ ಸಮಾಧಾನದಿಂದ ಇಲ್ಲದಿರುವುದಕ್ಕೆ ಉಂಟಾಗಿರಬಹುದು.


ಸಣ್ಣ-ಪುಟ್ಟ ದೈಹಿಕ ಸಮಸ್ಯೆಗಳಷ್ಟೇ ಅಲ್ಲ. ಹೃದ್ರೋಗ, ಕ್ಯಾನ್ಸರ್ ನಂತಹ ರೋಗಗಳ ಮೂಲ ಕೂಡ ಮನಸ್ಸಿನ ಸಮಸೆಗಳಲ್ಲಿ ಇರುತ್ತದೆ ಎಂದು ಹೇಳುತ್ತಾರೆ ನಿವೃತ್ತ ವೈದ್ಯರಾದ Dr Gabor Mate. ಅವರು ತಮ್ಮ ವೃತ್ತಿ ಅನುಭವಗಳನ್ನು ಒಟ್ಟಾಗಿಸಿ ಒಂದು ಪುಸ್ತಕವನ್ನಾಗಿಸಿದ್ದಾರೆ. ಬರೀ ದೈಹಿಕ ಏರುಪೇರುಗಳು ರೋಗಗಳನ್ನು ಸೃಷ್ಟಿಸುವುದಿಲ್ಲ. ಸುತ್ತಲಿನ ವಾತಾವರಣಕ್ಕೆ ಮನಸ್ಸು ಸ್ಪಂದಿಸಿದ ರೀತಿಯಿಂದ ನಮ್ಮ ಜೀನ್ ಗಳು ಬದಲಾವಣೆ ಹೊಂದಿ ಕ್ಯಾನ್ಸರ್ ನಂತಹ ದೊಡ್ಡ ರೋಗಗಳಿಗೆ ಎಡೆ ಮಾಡಿಕೊಡುತ್ತವೆ ಎನ್ನುವುದು ಅವರ ವೃತ್ತಿ ಜೀವನದ ಅನುಭವ. 


ಅದಕ್ಕೆ ಪರಿಹಾರವಾಗಿ ಅವರು ಏಳು ಸೂತ್ರಗಳನ್ನು ಸೂಚಿಸುತ್ತಾರೆ. ಅದರಲ್ಲಿ ಮೊದಲನೆಯದು ಪರಿಸ್ಥಿತಿಯನ್ನು ಹೇಗಿದೆಯೋ ಹಾಗೆ ಒಪ್ಪಿಕೊಳ್ಳುವುದು. ಅದು ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎರಡನೆಯದು, ನಮ್ಮ ಅರಿವನ್ನು ವಿಸ್ತಾರ ಮಾಡಿಕೊಳ್ಳುವುದು. ಅದು ರೋಗಲಕ್ಷಣಗಳನ್ನು ಬೇಗನೆ ಗುರುತಿಸಲು ಸಹಾಯ ಮಾಡುತ್ತದೆ. ಮತ್ತು ಸಾಧ್ಯ ಪರಿಹಾರಗಳ ಅರಿವು ಕೂಡ ಮೂಡಿಸುತ್ತದೆ. ಮೂರನೆಯದು, ಕೋಪವನ್ನು ಹತ್ತಿಕ್ಕದೆ ಅದನ್ನು ಕಡಿಮೆ ಮಾಡಿಕೊಳ್ಳುವ ದಾರಿ ಹುಡುಕಿಕೊಳ್ಳುವುದು. ನಾಲ್ಕನೆಯದು, ಬೇರೆಯವರು ನಿಮ್ಮ ಮೇಲೆ ದಬ್ಬಾಳಿಕೆ ಮಾಡದಂತೆ ಗಡಿ ರೇಖೆ ಗುರುತಿಸಿ ಅದನ್ನು ಕಾಪಾಡಿಕೊಳ್ಳುವುದು. ನೀವೇ ದಬ್ಬಾಳಿಕೆ ಮಾಡುವ ಪ್ರವೃತ್ತಿಯವರಾಗಿದ್ದರೆ, ಅದರಿಂದ ಹೊರ ಬರುವುದು. ಐದನೆಯದು, ಸಮಸ್ಯೆಗಳನ್ನು ನಾವು ಮುಚ್ಚಿಟ್ಟುಕೊಳ್ಳದೆ, ಸಮಾನ ಮನಸ್ಕರಲ್ಲಿ ಹಂಚಿಕೊಳ್ಳುವುದು. ಉತ್ತಮ ಸಂಬಂಧಗಳನ್ನು ಕಾಪಾಡಿಕೊಳ್ಳುವುದು. ಆರನೆಯದು, ನಮ್ಮಲ್ಲಿರುವ ಸ್ವಂತಿಕೆ ಮತ್ತು ವಿಶೇಷ ಕೌಶಲ್ಯಗಳನ್ನು ಮತ್ತಷ್ಟು ಬೆಳೆಸುವುದರ ಮೂಲಕ ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದು. ಏಳನೆಯದು, ಹವ್ಯಾಸಗಳ ಮೂಲಕ (ಸಾಹಿತ್ಯ, ಸಂಗೀತ, ಚಿತ್ರಕಲೆ ಇತ್ಯಾದಿ) ಮನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸುವುದು ಇಲ್ಲವೇ ನಮ್ಮನ್ನು ಉಲ್ಲಾಸಗೊಳಿಸುವ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು.


ಅಷ್ಟೆಲ್ಲ ಮಾಡಿದರೆ ನಿಮಗೆ ರೋಗ ಬರುವುದೇ ಇಲ್ಲ ಎಂದು ಅವರು ಹೇಳುವುದಿಲ್ಲ. ಆದರೆ ಅವುಗಳನ್ನು ಮಾಡಿದರೆ ನಿಮಗೆ ರೋಗ ಬರುವ ಸಾಧ್ಯತೆಗಳು ಕಡಿಮೆ ಆಗುತ್ತಾ ಹೋಗುತ್ತವೆ. ಏಕೆಂದರೆ ರೋಗ ಉಂಟು ಮಾಡುವ ಮತ್ತು ಉಲ್ಬಣಗೊಳಿಸುವ ಭಾವನೆಗಳು ನಿಮ್ಮಲ್ಲಿ ಹತೋಟಿಗೆ ಬಂದಿರುತ್ತವೆ ಅನ್ನುವ ಕಾರಣಕ್ಕಾಗಿ. ಹೆಚ್ಚಿನ ವಿವರಕ್ಕಾಗಿ "When the Body Says No" ಪುಸ್ತಕ ಓದಿ.