ಮನಸ್ಸಿನ ಭಾವನೆಗಳಿಗೆ ಬರೀ ಮೆದುಳು ಸ್ಪಂದಿಸುವುದಿಲ್ಲ, ಇಡೀ ದೇಹವೇ ಅದಕ್ಕೆ ಸ್ಪಂದಿಸುತ್ತದೆ. ಅದು ಹೇಗೆ ನೋಡೋಣ. ಬೇರೆಯವರ ಏಳಿಗೆ ಕಂಡರೆ ನಿಮಗೆ ಸಹಿಸಲು ಆಗುವುದಿಲ್ಲ. ಅವರನ್ನು ಕಂಡರೆ ನಿಮಗೆ 'ಹೊಟ್ಟೆ ಉರಿ'. ಯಾರೋ ನಿಮ್ಮನ್ನು ಹಾಡಿ ಹೊಗಳಿ ಬಿಡುತ್ತಾರೆ. ಆಗ ನಿಮಗೆ 'ಹೃದಯ ತುಂಬಿ' ಬರುತ್ತದೆ. ತೀವ್ರ ಕೋಪ ಬಂದಾಗ ಆಗುವುದು 'ಕಣ್ಣು ಕೆಂಪು' ಮತ್ತು ಸಣ್ಣಗೆ ನಡುಗುವುದು 'ಕೈ ಕಾಲು'. ಇನ್ನು ಸಂದೇಹವೇ ಬೇಕಿಲ್ಲ ಅಲ್ಲವೇ. ಮನಸ್ಸು ಮತ್ತು ದೇಹ ಬೇರೆ ಬೇರೆ ಅಲ್ಲ ಎಂದು ತಿಳಿಯುವುದಕ್ಕೆ.
ಮನಸ್ಸಿನ ಮೇಲೆ ಉಂಟಾಗುವ ದೀರ್ಘ ಕಾಲದ ಪರಿಣಾಮಗಳು ದೇಹದ ಮೇಲೆ ಕೂಡ ಪರಿಣಾಮ ಬೀರತೊಡಗುತ್ತವೆ. ಉದಾಹರಣೆಗೆ, ವಿಪರೀತ ಕೋಪ ಅಜೀರ್ಣತೆ ತಂದಿಡಬಹುದು. ಭುಜಗಳಲ್ಲಿನ ನೋವು ಹೊರಲಾರದ ಜವಾಬ್ದಾರಿಯಿಂದ ಉಂಟಾಗಿರಬಹುದು. ಗಂಟಲು ನೋವು ಮನ ಬಿಚ್ಚಿ ಮಾತನಾಡಲು ಅವಕಾಶ ಇಲ್ಲದ್ದು ಸೂಚಿಸಿರುತ್ತಿರಬಹುದು. ಬಿಟ್ಟು ಹೋಗದ ಕೆಮ್ಮು ನೀವು ನಿಮ್ಮ ಜೊತೆಗೆ ಸಮಾಧಾನದಿಂದ ಇಲ್ಲದಿರುವುದಕ್ಕೆ ಉಂಟಾಗಿರಬಹುದು.
ಸಣ್ಣ-ಪುಟ್ಟ ದೈಹಿಕ ಸಮಸ್ಯೆಗಳಷ್ಟೇ ಅಲ್ಲ. ಹೃದ್ರೋಗ, ಕ್ಯಾನ್ಸರ್ ನಂತಹ ರೋಗಗಳ ಮೂಲ ಕೂಡ ಮನಸ್ಸಿನ ಸಮಸೆಗಳಲ್ಲಿ ಇರುತ್ತದೆ ಎಂದು ಹೇಳುತ್ತಾರೆ ನಿವೃತ್ತ ವೈದ್ಯರಾದ Dr Gabor Mate. ಅವರು ತಮ್ಮ ವೃತ್ತಿ ಅನುಭವಗಳನ್ನು ಒಟ್ಟಾಗಿಸಿ ಒಂದು ಪುಸ್ತಕವನ್ನಾಗಿಸಿದ್ದಾರೆ. ಬರೀ ದೈಹಿಕ ಏರುಪೇರುಗಳು ರೋಗಗಳನ್ನು ಸೃಷ್ಟಿಸುವುದಿಲ್ಲ. ಸುತ್ತಲಿನ ವಾತಾವರಣಕ್ಕೆ ಮನಸ್ಸು ಸ್ಪಂದಿಸಿದ ರೀತಿಯಿಂದ ನಮ್ಮ ಜೀನ್ ಗಳು ಬದಲಾವಣೆ ಹೊಂದಿ ಕ್ಯಾನ್ಸರ್ ನಂತಹ ದೊಡ್ಡ ರೋಗಗಳಿಗೆ ಎಡೆ ಮಾಡಿಕೊಡುತ್ತವೆ ಎನ್ನುವುದು ಅವರ ವೃತ್ತಿ ಜೀವನದ ಅನುಭವ.
ಅದಕ್ಕೆ ಪರಿಹಾರವಾಗಿ ಅವರು ಏಳು ಸೂತ್ರಗಳನ್ನು ಸೂಚಿಸುತ್ತಾರೆ. ಅದರಲ್ಲಿ ಮೊದಲನೆಯದು ಪರಿಸ್ಥಿತಿಯನ್ನು ಹೇಗಿದೆಯೋ ಹಾಗೆ ಒಪ್ಪಿಕೊಳ್ಳುವುದು. ಅದು ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎರಡನೆಯದು, ನಮ್ಮ ಅರಿವನ್ನು ವಿಸ್ತಾರ ಮಾಡಿಕೊಳ್ಳುವುದು. ಅದು ರೋಗಲಕ್ಷಣಗಳನ್ನು ಬೇಗನೆ ಗುರುತಿಸಲು ಸಹಾಯ ಮಾಡುತ್ತದೆ. ಮತ್ತು ಸಾಧ್ಯ ಪರಿಹಾರಗಳ ಅರಿವು ಕೂಡ ಮೂಡಿಸುತ್ತದೆ. ಮೂರನೆಯದು, ಕೋಪವನ್ನು ಹತ್ತಿಕ್ಕದೆ ಅದನ್ನು ಕಡಿಮೆ ಮಾಡಿಕೊಳ್ಳುವ ದಾರಿ ಹುಡುಕಿಕೊಳ್ಳುವುದು. ನಾಲ್ಕನೆಯದು, ಬೇರೆಯವರು ನಿಮ್ಮ ಮೇಲೆ ದಬ್ಬಾಳಿಕೆ ಮಾಡದಂತೆ ಗಡಿ ರೇಖೆ ಗುರುತಿಸಿ ಅದನ್ನು ಕಾಪಾಡಿಕೊಳ್ಳುವುದು. ನೀವೇ ದಬ್ಬಾಳಿಕೆ ಮಾಡುವ ಪ್ರವೃತ್ತಿಯವರಾಗಿದ್ದರೆ, ಅದರಿಂದ ಹೊರ ಬರುವುದು. ಐದನೆಯದು, ಸಮಸ್ಯೆಗಳನ್ನು ನಾವು ಮುಚ್ಚಿಟ್ಟುಕೊಳ್ಳದೆ, ಸಮಾನ ಮನಸ್ಕರಲ್ಲಿ ಹಂಚಿಕೊಳ್ಳುವುದು. ಉತ್ತಮ ಸಂಬಂಧಗಳನ್ನು ಕಾಪಾಡಿಕೊಳ್ಳುವುದು. ಆರನೆಯದು, ನಮ್ಮಲ್ಲಿರುವ ಸ್ವಂತಿಕೆ ಮತ್ತು ವಿಶೇಷ ಕೌಶಲ್ಯಗಳನ್ನು ಮತ್ತಷ್ಟು ಬೆಳೆಸುವುದರ ಮೂಲಕ ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದು. ಏಳನೆಯದು, ಹವ್ಯಾಸಗಳ ಮೂಲಕ (ಸಾಹಿತ್ಯ, ಸಂಗೀತ, ಚಿತ್ರಕಲೆ ಇತ್ಯಾದಿ) ಮನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸುವುದು ಇಲ್ಲವೇ ನಮ್ಮನ್ನು ಉಲ್ಲಾಸಗೊಳಿಸುವ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು.
ಅಷ್ಟೆಲ್ಲ ಮಾಡಿದರೆ ನಿಮಗೆ ರೋಗ ಬರುವುದೇ ಇಲ್ಲ ಎಂದು ಅವರು ಹೇಳುವುದಿಲ್ಲ. ಆದರೆ ಅವುಗಳನ್ನು ಮಾಡಿದರೆ ನಿಮಗೆ ರೋಗ ಬರುವ ಸಾಧ್ಯತೆಗಳು ಕಡಿಮೆ ಆಗುತ್ತಾ ಹೋಗುತ್ತವೆ. ಏಕೆಂದರೆ ರೋಗ ಉಂಟು ಮಾಡುವ ಮತ್ತು ಉಲ್ಬಣಗೊಳಿಸುವ ಭಾವನೆಗಳು ನಿಮ್ಮಲ್ಲಿ ಹತೋಟಿಗೆ ಬಂದಿರುತ್ತವೆ ಅನ್ನುವ ಕಾರಣಕ್ಕಾಗಿ. ಹೆಚ್ಚಿನ ವಿವರಕ್ಕಾಗಿ "When the Body Says No" ಪುಸ್ತಕ ಓದಿ.
No comments:
Post a Comment