Wednesday, August 3, 2022

ಸುಖಕ್ಕಿಂತ ದುಃಖಗಳೇ ನಮ್ಮನ್ನು ಹೆಚ್ಚು ಮನುಷ್ಯರನ್ನಾಗಿಸುತ್ತವೆ

ಬಡತನಕೆ ಉಣುವ ಚಿಂತೆ,
ಉಣಲಾದರೆ ಉಡುವ ಚಿಂತೆ, 
ಉಡಲಾದರೆ ಇಡುವ ಚಿಂತೆ,
ಇಡಲಾದರೆ ಹೆಂಡಿರ ಚಿಂತೆ,
ಹೆಂಡಿರಾದರೆ ಮಕ್ಕಳ ಚಿಂತೆ,
ಮಕ್ಕಳಾದರೆ ಬದುಕಿನ ಚಿಂತೆ,
ಬದುಕಾದರೆ ಕೇಡಿನ ಚಿಂತೆ,
ಕೇಡಾದರೆ ಮರಣದ ಚಿಂತೆ

~ ಅಂಬಿಗರ ಚೌಡಯ್ಯ

ಹೌದಲ್ಲವೇ? ಒಂದು ಕಾಲದಲ್ಲಿ ಹಣದಿಂದ ಹೆಚ್ಚು-ಕಡಿಮೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದುಕೊಂಡಿದ್ದೆ. ಆಗ ನಾನಿನ್ನು ಈ ವಚನ ಓದಿರಲಿಲ್ಲ ಅಷ್ಟೇ. ಈಗ ನನಗೆ ಉಣುವ ಚಿಂತೆ ಇಲ್ಲ. ಆದರೆ ಅದಕ್ಕೆ ತಕ್ಕಂತೆ ಕಾಡುವ ಚಿಂತೆಗಳ ಸ್ವರೂಪ ಕೂಡ ಬದಲಾಗಿದೆ. ಓಶೋ ಒಂದು ಪ್ರವಚನದಲ್ಲಿ ಹೇಳಿದ್ದ. ನೀವು ಶ್ರೀಮಂತರಾಗಿ, ಆಗಲೂ ಕೂಡ ನಿಮಗೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ಆವಾಗ ನಿಮ್ಮ ಮನಸ್ಸು ಆಧ್ಯಾತ್ಮಿಕತೆ ಕಡೆಗೆ ಹೊರಳುವುದು ಎಂದು. ಸೂಪರ್ ಸ್ಟಾರ್ ಎನಿಸಿಕೊಂಡ ರಜನೀಕಾಂತ್ ಹಿಮಾಲಯದ ಗುಹೆಗಳಿಗೆ ಧ್ಯಾನ ಮಾಡಲು ಹೋಗುವುದಿಲ್ಲವೆ? ಅವರು ತಮ್ಮ ಚಿತ್ರಗಳಲ್ಲಿ ಮಾಡುವ ಮ್ಯಾಜಿಕ್ ಅವರ ಸ್ವಂತ ಜೀವನದಲ್ಲಿ ಮಾಡಲು ಸಾಧ್ಯವೇ? ಅವರಿಗೆ ಗೊತ್ತಾಗಿದೆ. ನಟನೆ ಮಾಡುವುದು ಪ್ರೇಕ್ಷಕರಿಗಾಗಿ, ಮತ್ತು ಧ್ಯಾನ ಮಾಡುವುದು ತಮಗಾಗಿ ಎಂದು.

ಆದರೆ ಇದರಲ್ಲಿ ಆಸಕ್ತಿಯ ವಿಷಯ ಎಂದರೆ 'ಉಣುವ ಚಿಂತೆ, ಹೆಂಡತಿಯ ಚಿಂತೆ, ಮಕ್ಕಳ ಚಿಂತೆ'  ಎಂದ ವಚನಕಾರ 'ಉಣುವ ಸಂತೋಷ, ಹೆಂಡತಿಯ ಸಂತೋಷ, ಮಕ್ಕಳ ಸಂತೋಷ'  ಎಂದು ಹೇಳಲಿಲ್ಲ. ಅದು ಏಕೆಂದರೆ ಸಂತೋಷ ಕ್ಷಣಿಕ, ಚಿಂತೆ ದೀರ್ಘ ಕಾಲದ್ದು. ಪರೀಕ್ಷೆಯಲ್ಲಿ ಮೊದಲ ದರ್ಜೆ ಗಳಿಸಿದ ಸಂತೋಷ ಹದಿನೈದು ದಿನದಲ್ಲಿ ಮರೆಯಾಗುತ್ತದೆ. ಆದರೆ ಫೇಲಾದ ಚಿಂತೆ ವರುಷವಿಡೀ ಕಾಡುತ್ತದೆ. ಪ್ರಕೃತಿ ನಮ್ಮನ್ನು ರೂಪುಗೊಳಿಸಿದ್ದು ಹಾಗೆಯೆ. ಅದು ನಮ್ಮ ಮೆದುಳಿನಲ್ಲಿ ರಾಸಾಯನಿಕಗಳ ಮೂಲಕ ಕ್ಷಣಿಕ ಕಾಲದ ಮಟ್ಟಿಗೆ ಸಂತೋಷ ಹುಟ್ಟಿಸಿ, ನಾವುಗಳು ಮತ್ತೆ ಮತ್ತೆ ಆ ಅನುಭವಕ್ಕೆ ಹಾತೊರೆಯುವಂತೆ ಮಾಡುತ್ತದೆ. ಹಾಗಾಗಿ ಸಂತೋಷ ಎನ್ನುವುದು ನೆನಪು ಮಾತ್ರ. ಆದರೆ ದುಃಖ ಎನ್ನುವುದು ಪಕ್ಕದಲ್ಲೇ ಇರುವ ಪ್ರತಿ ಕ್ಷಣ ಚುಚ್ಚಿ ಇರಿಯುವ ಸಂಗಾತಿ.

ಅದನ್ನು ನಮ್ಮ ವಚನಕಾರರು ಎಂದೋ ಅರಿತಿದ್ದರು. 'ಸಾಸಿವೆ ಕಾಳಿನಷ್ಟು ಸುಖಕ್ಕೆ, ಸಾಗರದಷ್ಟು ದುಃಖ ನೋಡಾ' ಎಂದು ಅಲ್ಲಮ ಪ್ರಭುಗಳು ಹೇಳಲಿಲ್ಲವೇ? ಅವರಿಗೆ ಸುಖ ಮತ್ತು ದುಃಖಗಳ ನಡುವಿನ ಅಪಾರ ಪ್ರಮಾಣದ ಅಂತರ ಮತ್ತು ತೀವ್ರತೆಯ ಅರಿವಿತ್ತು.ಆದರೆ ಪ್ರಕೃತಿ, ನಮ್ಮ ಮನಸ್ಥಿತಿಯನ್ನು ಸಾಸಿವೆ ಕಾಳಿನಷ್ಟು ಸಿಗುವ ಸುಖಕ್ಕೆ ಬೆಂಬತ್ತಿ ಹೋಗಿ, ಸಾಗರದಷ್ಟು ದುಃಖವನ್ನು ಅನುಭವಿಸುವಂತೆ ಮಾಡಿಬಿಡುತ್ತದೆ. ಅಂಬಿಗರ ಚೌಡಯ್ಯ ಹೇಳಿದಂತೆ ಉಣುವ ಚಿಂತೆಯಿಂದ, ಮರಣದ ಚಿಂತೆಗೆ ನಮಗರಿವಿಲ್ಲದಂತೆ ಬದಲಾಗುತ್ತ ಹೋಗಿಬಿಡುತ್ತೇವೆ. ಆದರೆ ವಚನಕಾರರು ತಮ್ಮ ಇಷ್ಟ ದೈವದ ಮೊರೆ ಹೊಕ್ಕು, ಶಿವಚಿಂತನೆಯಲ್ಲಿ ಇಲ್ಲವೇ ಗುಹೇಶ್ವರನ ಧ್ಯಾನದಲ್ಲಿ ಕಾಲ ಕಳೆದು ಮಾಯೆಯಿಂದ ಹೊರ ಬರುತ್ತಾರೆ. ಅದರಿಂದಲೇ 'ಮನದ ಮುಂದಣ ಆಸೆಯೇ ಮಾಯೆ' ಎನ್ನುವ ವಚನ ಅವರಿಗೆ ಹೇಳಲು ಸಾಧ್ಯವಾಗುತ್ತದೆ.

ಸುಖ ಅಲ್ಪ ಕಾಲದ್ದು, ದುಃಖ ದೀರ್ಘ ಕಾಲದ್ದು ಅಂದರೆ ನಾವು ಸುಖದ ಹಿಂದೆ ಬೀಳದೆ, ದುಃಖವನ್ನು ದೂರವಿಡುವ ಕಾರ್ಯ ಕೈಗತ್ತಿಕೊಳ್ಳಬೇಕಲ್ಲವೇ? ಅದನ್ನೇ ನೋಡಿ ಬುದ್ಧ ಮಾಡಿದ್ದು. ಅವನು ಸುಖದ ಮೂಲ ಯಾವುದು ಎಂದು ಕೇಳಲಿಲ್ಲ. ಬದಲಿಗೆ ದುಃಖದ ಮೂಲ ಯಾವುದು ಎಂದು ಹುಡುಕಿದ. ಅವನಿಗೆ ಜ್ಞಾನೋದಯ ಆಯಿತು. 'ಆಸೆಯೇ ದುಃಖದ ಮೂಲ' ಎನ್ನುವ ಸರಳ ಸತ್ಯವನ್ನು ಜಗತ್ತಿಗೆ ಸಾರಿದ. ಸತ್ಯ ಸರಳ ಆದರೆ ಸುಲಭ ಅಲ್ಲ. ಸಂತೋಷ ನೀವು ಬೇಡ ಎಂದು ತಿರಸ್ಕಿರಿಸದರೆ ಅದು ಪ್ರಕೃತಿಯ ವಿರುದ್ಧದ ಈಜು. ಅದು ಮತ್ತೆ ಸುಖಕ್ಕೆ ನಿಮ್ಮನ್ನು ಚಡಪಡಿಸುವಂತೆ ಮಾಡುತ್ತದೆ. ಮತ್ತೆ ಲೌಕಿಕದ ತಿರುಗಣಿಗೆ ಬೀಳುವಂತೆ ಮಾಡುತ್ತದೆ. ಬುದ್ಧ ದುಃಖದ ತೀವ್ರತೆ ಅನುಭವಿಸದೇ ಇದ್ದರೆ ಅದರ ಮೂಲ ಹುಡುಕಲು ಹೋಗುತ್ತಿರಲಿಲ್ಲ. ಶಿವಧ್ಯಾನದ ಆಶ್ರಯ ಇರದಿದ್ದರೆ ದಾಸರಿಗೆ, ವಚನಕಾರರಿಗೆ ಮುಕ್ತಿ ಎಲ್ಲಿತ್ತು?


ಇತಿಹಾಸ ಹೇಳುವುದು ಕೂಡ ಇದನ್ನೇ. ಒಂದು ಗೆದ್ದ ದೊಡ್ಡಸ್ತಿಕೆಗೆ, ಹಲವಾರು ಸೋಲಿನ ಅವಮಾನಗಳು ಜೊತೆಯಾಗಿಬಿಡುತ್ತವೆ. ಗೆಲುವಿಗಿಂತ ಸೋಲು ಭೀಕರ. ಗೆಲುವು ಮದ ಏರಿಸಿದರೆ, ಸೋಲು ಪಾಠ ಕಲಿಸುತ್ತದೆ. ಸುಖಕ್ಕಿಂತ ದುಃಖಗಳೇ ನಮ್ಮನ್ನು ಹೆಚ್ಚು ಮನುಷ್ಯರನ್ನಾಗಿಸುತ್ತವೆ. ದುಃಖಗಳೇ ಸಿದ್ಧಾರ್ಥನನ್ನು ಬುದ್ಧನನ್ನಾಗಿ ಬದಲಾಯಿಸಿದ್ದು. ಆ ಸತ್ಯದ ಅರಿವೇ ಬಸವಣ್ಣ, ಅಲ್ಲಮರಾದಿಯಾಗಿ ವಚನಕಾರರನ್ನು ಅಜರಾಮರ ಆಗಿಸಿದ್ದು.

No comments:

Post a Comment