ಮುತ್ತತ್ತಿರಾಯನ ಆಶೀರ್ವಾದದಿಂದ ಮುತ್ತುರಾಜನಾಗಿ ಹುಟ್ಟಿ, ಹೊಟ್ಟೆಪಾಡಿಗೆ ನಾಟಕ ಕಂಪನಿ ಸೇರಿ, ನಂತರ ಸಿನೆಮಾದಲ್ಲಿ ರಾಜಕುಮಾರನಾಗಿ ಪರಿಚಯವಾಗಿ, 'ಬೇಡರ ಕಣ್ಣಪ್ಪ' ನಿಂದ 'ಜೀವನ ಚೈತ್ರ' ದವರೆಗೆ ಕನ್ನಡ ಚಿತ್ರರಂಗದ ಅನಭಿಷಕ್ತ ರಾಜನಾಗಿ ಮೆರೆದ ಅಣ್ಣಾವ್ರ ಜೀವನಗಾಥೆ ಕೂಡ ಅಷ್ಟೇ ಆಸಕ್ತಿದಾಯಕವಾದದ್ದು.
ರಾಜಕುಮಾರ ಅಂದರೆ ಕೇವಲ ನಟನಲ್ಲ. 'ನಾನಿರುವುದೇ ನಿಮಗಾಗಿ' ಹಾಡಿನ ಮೂಲಕ ಕನ್ನಡದ ಮೊದಲ ರಾಜ ಮಯೂರವರ್ಮನ ಪಾತ್ರಕ್ಕೆ ಜೀವ ತುಂಬಿದ ವ್ಯಕ್ತಿಯನ್ನು ಕೇವಲ ನಟ ಎಂದು ಹೇಗೆ ಕರೆಯುವುದು? 'ನಾವಿರುವ ತಾಣವೇ ಗಂಧದ ಗುಡಿ' ಎಂದು ಹಾಡಿ ನಮ್ಮಲ್ಲಿ ಅಭಿಮಾನ ಮೂಡಿಸುವುದು ಕೇವಲ ನಟನಿಂದ ಸಾಧ್ಯವೇ? ಭಕ್ತಿ ಪ್ರಧಾನ ಚಿತ್ರಗಳಿಂದ ಬಾಂಡ್ ಚಿತ್ರಗಳವೆರೆಗೆ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡ ರಾಜಕುಮಾರ್ ಕನ್ನಡಿಗರ ಆರಾಧ್ಯ ದೈವವಾಗಿ ಬದಲಾದದ್ದು ಅವರ ವಿನಯದಿಂದ ಮತ್ತು ಅಗಾಧ ಪ್ರತಿಭೆಯಿಂದ.
'ಯಾರೇ ಕೂಗಾಡಲಿ, ಎಮ್ಮೆ ನಿನಗೆ ಸಾಟಿಯಿಲ್ಲ', 'ಬೆಳ್ಳಿ ಮೂಡಿತೋ, ಕೋಳಿ ಕೂಗಿತೋ', 'ಚಿನ್ನದ ಗೊಂಬೆಯಲ್ಲ, ದಂತದ ಗೊಂಬೆಯಲ್ಲ' ಹೀಗೆ ಅವರ ನೂರಾರು ಹಾಡುಗಳು ಅಂದಿಗೂ, ಇಂದಿಗೂ ಮನರಂಜಿಸುವುದಲ್ಲದೆ ಬದುಕಿನ ದ್ವಂದ್ವಗಳಿಗೆ ಸಲಹೆ ನೀಡುವ ಸಂಗಾತಿಯಾಗುತ್ತವೆ. ಅದಕ್ಕೆ ಏನೋ, ಅವರು ಕಾಲವಾದರೂ ಮತ್ತೆ ರಾಜಣ್ಣ ನೆನಪಾಗುವುದು ಅವರ ಹಾಡುಗಳ ಮೂಲಕ ಮತ್ತು ಅವರ ಸಂಭಾಷಣೆಗಳ ಮೂಲಕ.
ಹೊಸ ಪೀಳಿಗೆ ರಾಜಣ್ಣ ಗೊತ್ತಿಲ್ಲ. ಆದರೆ ಹಿಂದಿನ ೨-೩ ಪೀಳಿಗೆಗಳಿಗೆ ರಾಜಣ್ಣ ಒಂದು ಆದರ್ಶಮಯ ಮತ್ತು ನೈತಿಕತೆ ಎತ್ತಿ ಹಿಡಿಯುವ ಜೀವನದ ಮಾರ್ಗ ತೋರಿಸಿದರು. ಅವರು ಚಿ, ಉದಯಶಂಕರ್ ಅವರ ಜೊತೆ ನಡೆಸಿದ ಸಂಭಾಷಣೆ ಇಲ್ಲಿದೆ. ಕೇಳಿ ನೋಡಿ.
https://fb.watch/k5WNUoQPTv/