Saturday, February 24, 2024

ಯುಗಳ ಗೀತೆ ಹಾಡಿದರೆ ವಿಷಾದ ಗೀತೆ ಕೂಡ ಹಾಡಲೇ ಬೇಕು

ಅಮಾವಾಸ್ಯೆ ಕಳೆದು ೫-೬ ದಿನಗಳಷ್ಟೇ ಆಗಿತ್ತು. ರಾತ್ರಿ ಹೊತ್ತು ಸೆಖೆ ತಾಳದೆ ಹೊರಗೆ ಬಾಲ್ಕನಿಯಲ್ಲಿ ಬಂದು ಮಲಗಿದೆ. ಸಹಜವಾಗಿ ಕಣ್ಣು ಆಕಾಶದತ್ತ ನೋಡಿತು. ಆ ಕಡೆ ಪೂರ್ತಿ ಕತ್ತಲು ಇಲ್ಲ, ಈ ಕಡೆ ಶುಭ್ರ ಬೆಳದಿಂಗಳು ಕೂಡ ಅಲ್ಲ. ಕೆಂಪು ದೀಪ ಮಿಟುಕಿಸುತ್ತ ಹಾರುವ ವಿಮಾನಗಳು ಇದು ಬೆಂಗಳೂರಿನ ಆಕಾಶ ಎನ್ನುವ ಸಂಜ್ಞೆ ಬಿಟ್ಟರೆ ಬೇರೆ ಏನು ಗೋಚರಿಸುತ್ತಿರಲಿಲ್ಲ. ಅಲ್ಲಿ ಚಂದ್ರನಿಲ್ಲ ಎನ್ನುವ ಕೊರತೆ ಎದ್ದು ಕಾಣುತ್ತಿತ್ತು. 


ಕೇಳುತ್ತಿದ್ದ ೯೦ ರ ದಶಕದ ಹಿಂದಿ ಹಾಡುಗಳು ಕೂಡ ಅದೇ ಭಾವವನ್ನು ಹೊಮ್ಮಿಸುತಿದ್ದವು. 


ಮೊದಲಿಗೆ ಆಶಿಕಿ ಚಿತ್ರದ ಗೀತೆ:


'ಚಾಂದ ಕಿ ಜರೂರತ್ ಹೈ ಜೈಸೇ ಚಾಂದನಿ ಕೆ ಲಿಯೇ, 

ಬಸ್ ಏಕ್ ಸನಮ್ ಚಾಹಿಯೇ ಆಶಿಕಿ ಕೆ ಲಿಯೇ'


ಹೌದಲ್ಲವೇ? ಚಂದ್ರನಿಲ್ಲದೆ ಬೆಳೆದಿಂಗಳೆಲ್ಲಿ? ಪ್ರೇಯಸಿ ಇರದೇ ಪ್ರೀತಿ ಎಲ್ಲಿ?


ನಂತರ ಇನ್ನೊಂದು ಗೀತೆ 'ಹಮ್ ಹೈ ರಾಹಿ ಪ್ಯಾರ್ ಕೆ' ಚಿತ್ರದ್ದು 


'ಜಬ್ ತಕ್ ನ ಪಡೆ ಆಶಿಕಿ ಕಿ ನಜರ್,

ಸಿಂಗಾರ್ ಅಧೂರಾ ರೆಹತಾ ಹೈ'


ಇದೂನು ಸರಿಯೇ. ಮೆಚ್ಚುವವರು ಇರದೇ ಹೋದರೆ ಸಿಂಗಾರಕ್ಕೆ ಯಾವ ಬೆಲೆ?


ಆಕಾಶಕ್ಕೂ ಒಂದು ಅಪೂರ್ಣತೆ ಇದೆ. ಅಲ್ಲಿ ಚಂದ್ರನಿದ್ದರೆ ಕಳೆ. ಇಲ್ಲದಿದ್ದರೆ ಅಲ್ಲಿ ಯಾವ ಆಕರ್ಷಣೆಯೂ ಇಲ್ಲ. ಅದು ಬರಿ ಕಗ್ಗತ್ತಲು.


ಹಗಲು ಹೊತ್ತಿನಲ್ಲಿ ಉರಿಯುವ ಸೂರ್ಯ ನಮಗೆ ಬೆವರಿಳಿಸಿ ಕಂಗಾಲು ಮಾಡಿ ಬಿಡುತ್ತಾನೆ. ಅದೇ ಸೂರ್ಯನ ಬೆಳಕು ಚಂದ್ರನ ಮೇಲೆ ಬಿದ್ದು ಪ್ರತಿಫಲಗೊಂಡು ಆ ಬೆಳಕು ಉಷ್ಣತೆ ಕಳೆದುಕೊಂಡು ಬೆಳದಿಂಗಳಾಗಿ ರಾತ್ರಿಯಲ್ಲಿ ಆಹ್ಲಾದತೆ ತಂದು ಕೊಡುತ್ತದೆ. ಸಮುದ್ರವನ್ನು ಉಕ್ಕೇರಿಸತ್ತದೆ. ಪ್ರೇಮಿಗಳಿಗೆ ಮತ್ತೇರಿಸುತ್ತದೆ. ಕವಿಗಳಿಗೆ ಉತ್ತೇಜನ ನೀಡುತ್ತದೆ. ದಣಿದ ಜೀವಗಳಿಗೆ ತಂಪೆರುಯುತ್ತದೆ. ಆದರೆ ಆ ಸಂತೋಷ ನಿಮಗೆ ಪ್ರತಿ ದಿನ ಇಲ್ಲ.


ಇದು ಗಾಲಿ ತಿರುಗಿದ ಹಾಗೆ ಅಲ್ಲವೇ? ಹುಣ್ಣಿಮೆ ನಂತರ ನಿಮಗೆ ಬೇಕೋ ಬೇಡವೋ ಅಮಾವಾಸ್ಯೆಯ ಕತ್ತಲು ಅನಿಭವಿಸಿದ ಮೇಲೆಯೇ ಇನ್ನೊಮ್ಮೆ ಹುಣ್ಣಿಮೆ. ನಿಮಗೆ ಹುಣ್ಣಿಮೆಯ ಸಂತೋಷ ಬೇಕೆಂದರೆ ಅಮಾವಾಸ್ಯೆ ಹುಟ್ಟಿಸುವ ದಿಗಿಲು ಕೂಡ ಅನುಭವಿಸಬೇಕು. ಯುಗಳ ಗೀತೆ ಹಾಡಿದರೆ ವಿಷಾದ ಗೀತೆ ಕೂಡ ಹಾಡಲೇ ಬೇಕು. ಸರಸ-ವಿರಸವೆಂಬ ಹುಣ್ಣಿಮೆ-ಅಮಾವಾಸ್ಯೆಗಳು ಎಲ್ಲರ ಬಾಳಿನಲ್ಲಿ ಉಂಟು. ಅದು ಪ್ರಕೃತಿ ನಿಯಮ.


ನೀವು ಪ್ರಕೃತಿಯನ್ನು ಮೀರಿಸುವ ಸನ್ಯಾಸಿಯಾದರೆ ನಿಮಗೆ ಹುಣ್ಣಿಮೆ ಸಂತೋಷ ತರದು ಹಾಗೆಯೇ ಅಮಾವಾಸ್ಯೆಯ ಕತ್ತಲು ಭೀತಿಗೊಳಿಸದು. ಆದರೆ ಉಳಿದ ಭಾವನಾತ್ಮಕ ಮನುಜರಿಗೆ ಹುಣ್ಣಿಮೆಯ-ಅಮಾವಾಸ್ಯೆಗಳ ಚಕ್ರಗಳಿಂದ ಹೊರ ಬರಲು ಆಗದು. ಹುಣ್ಣಿಮೆ ಇರುವಷ್ಟು ಹೊತ್ತು ಆನಂದಿಸಿ. ಅದು ಕ್ಷೀಣಿಸಿದಾಗ ಸಂತೋಷದಿಂದಲೇ ಬೀಳ್ಕೊಡಿ. ಏಕೆಂದರೆ ಇನ್ನೊಂದು ಹುಣ್ಣಿಮೆ ಬಂದೆ ಬರುತ್ತದೆ.

ಹೊಸ ತೇರು, ಹಳೆ ಜಾತ್ರೆ, ಸಮಾಯಾತೀತ ಶ್ರೀ ಮಲ್ಲಿಕಾರ್ಜುನ


ನಮ್ಮೂರಿನಲ್ಲಿ ಇಂದು ಭರತ ಹುಣ್ಣಿಮೆಯ ದಿನದಂದು ಶ್ರೀ ಮಲ್ಲಿಕಾರ್ಜುನನ ಜಾತ್ರೆ. ಇಲ್ಲಿ ಜಾತ್ರೆಯ ದಿನದಂದು ಎಳೆಯುವ ತೇರು ಎಷ್ಟು ವರುಷ ಹಳೆಯದು, ಯಾರು ಮಾಡಿಸಿದ್ದು ಎಂದು ಈ ಊರಿನಲ್ಲಿರುವ ೮೦-೯೦ ವರುಷದ ವೃದ್ಧರಿಗೂ ತಿಳಿದಿಲ್ಲ. ಅವರಿಗೆ ಜಾತ್ರೆಯ ದಿನದಂದು ತೇರು ಎಳೆದದ್ದು ಅಷ್ಟೇ ನೆನಪು. ತೇರಿನ ಹಳೆಯ ಭಾಗಗಳು (ಕಟ್ಟಿಗೆಯಿಂದ ಮಾಡಿದ್ದು) ಗಮನಿಸಿ ನೋಡಿದಾಗ ಇದು ೧೨೦ ರಿಂದ ೧೫೦ ವರುಷ ಹಳೆಯದು ಎಂದು ಅಂದಾಜು ಮಾಡಬಹುದು. ಗಟ್ಟಿ-ಮುಟ್ಟ್ಯಾಗಿರುವ ಜನ ತುಂಬಾ ಭಾರವೆನಿಸುವ ಹಗ್ಗ ಹಿಡಿದು ತೇರು ಎಳೆದರೆ, ಉಳಿದೆಲ್ಲ ಭಕ್ತರಿಗೆ ತೇರಿನ ಕಳಸಕ್ಕೆ ಬಾಳೆ ಹಣ್ಣು ಎಸೆಯುವ ಸಂಭ್ರಮ. ತೇರು ತನ್ನ ಮನೆಗೆ ಮರಳಿದ ನಂತರ ಸಂಜೆ ಹೊತ್ತಿಗೆ ಜಾತ್ರೆ ಶುರು. ಇದು ಸಾವಿರಾರು ವರುಷಗಳಿಂದ ಇಲ್ಲಿ ನೆಲೆಗೊಂಡಿರುವ ಶ್ರೀ ಮಲ್ಲಿಕಾರ್ಜುನನ ಜಾತ್ರೆ.

ನೂರಾರು ವರುಷಗಳ ಹಳೆಯ ಸಂಪ್ರದಾಯ ಎನಿಸುವ ಪೂಜೆಗಳು ಬೆಳಿಗ್ಗೆ ಹೊತ್ತಿಗೆಲ್ಲ ಶುರು. ಹೆಚ್ಚು ಕಡಿಮೆ ಊರಿನ ಜನ ಎಲ್ಲ ಶ್ರೀ ಮಲ್ಲಿಕಾರ್ಜುನ ದರ್ಶನ ಪಡೆಯುವಷ್ಟರಲ್ಲಿ ಸುತ್ತ ಹತ್ತಾರು ಹಳ್ಳಿಗಳಿಂದ ಜನರ ಆಗಮನ, ಡೊಳ್ಳು ಬಾರಿಸುತ್ತ ಬರುವ ಕುರುಬರು ವಿಶೇಷ ಗಮನ ಸೆಳೆಯುತ್ತಾರೆ. ಸಣ್ಣ ಮಕ್ಕಳ ಕೈಯಲ್ಲಿ ಬಣ್ಣದ ಬಲೂನುಗಳು, ಹೆಂಗಳೆಯರ ಮುಖದಲ್ಲಿ ಭಕ್ರಿ ಭಾವ, ಗಂಡಸರ ಮುಖದಲ್ಲಿ ತೇರು ಎಳೆಯುವ ಉತ್ಸಾಹ. ಇದು ಪ್ರತಿ ವರುಷ ಜಾತ್ರೆಯ ದಿನ ಕಾಣ ಸಿಗುವ ನೋಟ.

ಶ್ರೀ ಮಲ್ಲಿಕಾರ್ಜುನ ಕಾಲಾತೀತ. ಆತನಿಗೆ ಹಳೆ ಪೀಳಿಗೆಯ ಭಕ್ತರು ಮಣ್ಣು ಸೇರಿದರೆ  ಹೊಸ ಪೀಳಿಗೆಯ ಭಕ್ತರು ಮಲ್ಲಿಕಾರ್ಜುನ ಜಾತ್ರೆ ನಡೆಸಿಕೊಂಡು ಹೋಗುತ್ತಾರೆ. ಸುಮಾರು ೫-೬ ಪೀಳಿಗೆಯ ಜನ ಎಳೆದ ತೇರು ಕೆಲವು ವರುಷಗಳಿಂದ ತೊಂದರೆ ಕೊಡುತ್ತಲಿತ್ತು. ಹೊಸ ಗಾಲಿಗಳು ಬಂದರು ತೊಂದರೆ ತಪ್ಪಲಿಲ್ಲ. ದಾರಿ ಬಿಟ್ಟು ಬರುವ ತೇರು, ಸಿಕ್ಕಿ ಹಾಕಿಕೊಂಡ ಜಾಗದಿಂದ ಮಿಸುಗಾಡದ ತೇರು, ತುಂಡಾಗುವ ಹಗ್ಗ ಹೀಗೆ ಹಲವು ತೊಂದರೆಗಳಿಂದ ತೇರನ್ನು ಒಂದೇ ದಿನದಲ್ಲಿ ಆದರೆ ಮನೆಗೆ ಸೇರಿಸಲು ಆಗುತ್ತಿರಲಿಲ್ಲ. ದೈವ ಕೃಪೆಯೋ, ಭಕ್ತರ ಕಾಳಜಿಯೋ ಒಟ್ಟಿನಲ್ಲಿ ಈ ವರುಷ ಹೊಸ ತೇರು ಬಂದಾಗಿದೆ. 

ಹಳೆಯ ತೇರನ್ನು ಕೊನೆಯ ಬಾರಿಗೆ ಎಳೆದು, ಹೊಸ ತೇರನ್ನು ಮಲ್ಲಿಕಾರ್ಜುನನ ಸೇವೆಗೆ ಬಿಡುವ ಜಾತ್ರೆ ಇಂದು. ಎರಡು ತೇರುಗಳನ್ನು ಒಟ್ಟಿಗೆ ನೋಡಿದ ಆನಂದ ಈ ದಿನ ನನ್ನದು. ಅಷ್ಟೇ ಅಲ್ಲ, ನಿಮಗೂ ಅದನ್ನು ತೋರಿಸುವ ಆಸೆ. ಒಮ್ಮೆ ವಿಡಿಯೋ ನೋಡಿ.


Sunday, January 28, 2024

One Sunday Morning

Distance covered: 75 km in 3 hours

Places: Manchanabele, Savanadurga


Tippagondanahalli Reservoir

Anjaneya waiting for his mask to be removed

Savana Durga 





Let's go!

Manchanabele Reservoir 

Savana Durga 

Thursday, January 4, 2024

ಆಶಾವಾದಿಯ ಕನಸುಗಳು ಮತ್ತು ನಿರಾಶಾವಾದಿಯ ಹತಾಶೆಗಳು

ಯಾವುದೇ ರಾಜಕಾರಣಿಯ ಭಾಷಣ ಕೇಳಿ ನೋಡಿ. ಅವರು ನಿಮಗೆ ಭವಿಷ್ಯದ ಕನಸು ಕಟ್ಟಿ ಕೊಡುತ್ತಾರೆ. ನಿಮ್ಮ ಚಿಕ್ಕ ಮಕ್ಕಳು ಸ್ವಲ್ಪ ಜಾಣತನ ತೋರಿದರು ಸಾಕು. ಮುಂದೆ ಅವರು ದೊಡ್ಡ ಮನುಷ್ಯರಾಗುವ ಕನಸು ನೀವೇ ಕಾಣತೊಡಗುತ್ತೀರಿ. ಭರವಸೆ ಹುಟ್ಟಿಸುವ ಯಾವುದೇ ಕೆಲಸಗಾರನ ಭವಿಷ್ಯದ ಅಂದಾಜು ಎಲ್ಲರಿಗೂ ಮನವರಿಕೆ ಆಗಿರುತ್ತದೆ. ಮನುಷ್ಯ ಎಂತಹ ಸೋಮಾರಿಯೇ ಆಗಿರಲಿ ಅವನು ಕನಸು ಕಾಣದೆ ಇರಲಾರ. ಅದು ಆಶಾವಾದಿಯ ಜಗತ್ತು.


ಒಂದು ಕಾಲದಲ್ಲಿ ಕನಸು ಕಂಡು ಆದರೆ ಕೈ ಸುಟ್ಟುಕೊಂಡು ನಿರಾಶಾವಾದಿಯಾಗಿ ಬದಲಾಗಿರುತ್ತಾರಲ್ಲ. ಅವರಿಗೆ ಯಾವುದರಲ್ಲೂ ಭರವಸೆ ಇರುವುದಿಲ್ಲ. ಅವರದ್ದು ಬರೀ ಹತಾಶೆಯ ಮಾತುಗಳು. ನಮ್ಮ ದೇಶ ಬದಲಾಗೋದಿಲ್ಲ ಬಿಡಿ ಅನ್ನುತ್ತಾ ಇರುತ್ತಾರೆ. ಭಾರತದ ಉಪಗ್ರಹ ಚಂದ್ರನ ಮೇಲೆ ಇಳಿದದ್ದು ಅವರಿಗೆ ಸಾಧನೆ ಎನಿಸುವುದಿಲ್ಲ.ಸಂತೆ ವ್ಯಾಪಾರಕ್ಕೆ ಸ್ಮಾರ್ಟ್ ಫೋನ್ ಬಳಕೆಯಾಗುವುದು ಅವರಿಗೆ ಪ್ರಗತಿ ಎನಿಸುವುದಿಲ್ಲ. 'ಏನೇ ಆಗಲಿ ನಮ್ಮ ದೇಶದ ಕಥೆ ಇಷ್ಟೇ ಬಿಡಿ' ಎಂದೇ ಅವರು ಹೇಳುವುದು. ದೇಶದ ಕಥೆ ಹೇಗೆಯೇ ಇರಲಿ ನಿರಾಶಾವಾದಿಗಳ ಕಥೆ ಮಾತ್ರ ಅಲ್ಲಿಯೇ ಉಳಿದಿರುತ್ತದೆ.


ವಿಚಾರ ಮಾಡಿ ನೋಡಿ. ಒಂದು ವಯಸ್ಸಿನವರೆಗೆ (ಸುಮಾರು ೧೬-೧೮ ವರುಷದವರೆಗೆ)  ಮನುಷ್ಯ ಆಶಾವಾದಿಯಾಗಿದ್ದರೆ ತೊಂದರೆ ಏನಿಲ್ಲ. ಆದರೆ ಮುಂದೆಯೂ ಅವನು ವಿಪರೀತ ಕನಸುಗಾರನಾದರೆ, ಅವನಿಗೆ ಜೀವನ ಪೆಟ್ಟು ಕೊಡದೆ ಬಿಡುವುದಿಲ್ಲ. ನಿರಾಶಾವಾದಿಗಳ ಎಚ್ಚರಿಕೆ ಸ್ವಭಾವ ಅವರನ್ನು ಮತ್ತೆ ಎಡವದಂತೆ ಕಾಯುತ್ತದೆ. ಆದರೆ ಸಂಪೂರ್ಣ ಆಶಾವಾದಿಗಳು ಅಪಾಯಗಳನ್ನು ನಿರ್ಲಕ್ಷಿಸುವ ಸ್ವಭಾವ ಹೊಂದಿರುತ್ತಾರೆ. ಅದೇ ಅವರಿಗೆ ಮುಳುವಾಗುತ್ತದೆ. ಮುಂದೆ ನಾವು ದೊಡ್ಡ ಮನುಷ್ಯರಾಗಬೇಕು ನಿಜ ಆದರೆ ಇಂದಿಗೆ ನಾವು ಎಚ್ಚರಿಕೆಯಿಂದ ಕೂಡ ಇರಬೇಕಾದದ್ದು ಅವಶ್ಯಕ ಅಲ್ಲವೇ?


ಸಂಪೂರ್ಣ ಆಶಾವಾದಿಯಾಗದೆ ಅಥವಾ ನಿರಾಶಾವಾದಿಯಾಗದೆ, ಎರಡರ ನಡುವಿನ ವಾಸ್ತವವಾದಿಯಾಗಿ ನೋಡಿ. ಅವನಿಗೆ ಜಗತ್ತು ಹೇಗೆ ಇದೆಯೋ ಹಾಗೆ ನೋಡಲು ಸಾಧ್ಯವಾಗುತ್ತದೆ. ಅವನಿಗೆ ಆಶಾವಾದಿಗೆ ಕಾಣುವ ಅವಕಾಶಗಳು ಮತ್ತು ನಿರಾಶಾವಾದಿಗೆ  ಕಾಣುವ ಅಪಾಯಗಳು ಎರಡು ಗೋಚರಿಸುತ್ತವೆ. ಅವನು ಸಮತೋಲನದಿಂದ, ಸಮಚಿತ್ತದಿಂದ ವರ್ತಿಸುತ್ತಾನೆ. ಅಪಾಯ ಗೊತ್ತಿರದ ಆಶಾವಾದಿ ಮತ್ತು ಪ್ರಯತ್ನ ನಿಲ್ಲಿಸಿರುವ ನಿರಾಶಾವಾದಿಗಿಂತ ಹೆಚ್ಚಿನ ಸಾಧನೆ ವಾಸ್ತವವಾದಿಯದ್ದಾಗಿರುತ್ತದೆ.


ಜಗತ್ತನ್ನೇ ಗೆಲ್ಲ ಹೋರಾಟ ಮಹತ್ವಕಾಂಕ್ಷಿಗಳು ಆಶಾವಾದಿಗಳಾಗಿದ್ದರು. ಅಪಾಯಗಳು ಅವರು ಮೈ ಮರೆತ ಕ್ಷಣಗಳಲ್ಲಿ ಅವರನ್ನು ಸಣ್ಣ ಯುದ್ಧಗಳಲ್ಲಿ ಅಳಿಸಿ ಹಾಕಿದವು. ನೆಪೋಲಿಯನ್ ವಾಟರ್ಲೂ ಕಾಳಗದಲ್ಲಿ ಸೋತ ಹಾಗೆ. ಬಲಿಷ್ಠ ವಿಜಯನಗರ ಸಾಮ್ರಾಜ್ಯವನ್ನು ಐದು ಸಣ್ಣ ರಾಜ್ಯಗಳು ಒಟ್ಟಿಗೆ ಸೇರಿ ಸೋಲಿಸಿದ ಹಾಗೆ. ಹಾಗೆಯೆ ನಿರಾಶಾವಾದಿಗಳು ಯಾವ ಚರಿತ್ರೆಯ ಪುಟಗಳಲ್ಲಿ ಕಾಣ ಸಿಗುವುದಿಲ್ಲ. ಏಕೆಂದರೆ ಅವರು ಸಾಧಿಸುವ ಕೆಲಸಗಳಿಗೆ ಕೈ ಹಾಕಲೇ ಇಲ್ಲ.


ವಾಸ್ತವವಾದಿಗಳ ಉದಾಹರಣೆ ಕೊಡಿ ಎಂದು ಕೇಳಲೇಬೇಡಿ. ಅವರು ಎಲ್ಲೆಲ್ಲೂ ಇದ್ದಾರೆ. ಉದಾಹರಣೆಗೆ ನಿಮ್ಮ ಬ್ಯಾಂಕ್ ಮ್ಯಾನೇಜರ್. ಅವನು ಸಾಲ ಕೊಡುವ ಮುನ್ನ ನಿಮ್ಮ ಸಾಲ ವಾಪಸ್ಸು ಕೊಡುವ ತಾಕತ್ತು ಅಳೆಯುತ್ತಾನೆ. ಅವನು ನಿಮ್ಮ ಕನಸುಗಳಿಗಿಂತ ವಾಸ್ತವಕ್ಕೆ ಬೆಲೆ ಕೊಡುತ್ತಾನೆ. ನವ ಭಾರತ ಕಟ್ಟಿದ ಗಾಂಧಿ-ನೆಹರು-ಪಟೇಲ್ ವಾಸ್ತವವಾದಿಗಳಾಗಿದ್ದರು. ಅವರು ಭಾರತಕ್ಕೆ ಸ್ವತಂತ್ರ ತರುವ ಜೊತೆಗೆ ಭಾರತದಲ್ಲಿ ಪ್ರಜಾಪ್ರಭುತ್ವ ನೆಲೆಯೂರುವಂತೆ ನೋಡಿಕೊಂಡರು. ಬಹುಕಾಲ ಬಾಳಿದ ಯಾವುದೇ ಸಂಘ-ಸಂಸ್ಥೆ, ಇಲ್ಲವೇ ದೇಶಗಳನ್ನೇ ಗಮನಿಸಿ ನೋಡಿ. ಅವುಗಳನ್ನು ವಾಸ್ತವವಾದಿಗಳೇ ಕಟ್ಟಿರುತ್ತಾರೆ. ಯುದ್ಧ ಮಾಡಿ ನಿರಾಶನಾದ ಸಾಮ್ರಾಟ್ ಅಶೋಕ, ಸಮಾಜ ಪ್ರಗತಿಗೆ ಪ್ರಯತ್ನ ಮಾಡುವ ಆಶಾವಾದಿಯೂ ಆಗಿದ್ದ. ಎಲ್ಲವನ್ನು ಹಿಂದೆ ಬಿಟ್ಟು ನಡೆದ ಬುದ್ಧ, ಶಾಂತಿ ಸಂದೇಶ ಸಾರುವ ಆಶಾವಾದಿಯೂ ಆಗಿದ್ದ. ಅದರ ಫಲ ಎಷ್ಟು ಜನ ಪಡೆದುಕೊಂಡರು ಎಂದು ವಿಚಾರ ಮಾಡದೆ ಇರುವ ನಿರಾಶಾವಾದಿಯೂ ಆಗಿದ್ದ.


ಆಶಾವಾದಿಗಳ ಪ್ರಯತ್ನ, ನಿರಾಶಾವಾದಿಗಳ ಎಚ್ಚರಿಕೆ ಈ ಎರಡರ ಸಮ್ಮಿಶ್ರಣ ಬದುಕನ್ನು ಸುಲಭವಾಗಿಸುತ್ತದೆ. ಅವುಗಳು ವಾಹನದಲ್ಲಿ ಆಕ್ಸಿಲರೇಟರ್ ಮತ್ತು ಬ್ರೆಕ್ ಎರಡರನ್ನು ಅಗತ್ಯಕ್ಕೆ ತಕ್ಕಂತೆ ಉಪಯೋಗ ಮಾಡಿಕೊಂಡು ಮುಂದೆ ಸಾಗಿದ ಹಾಗೆ. ಕನಸುಗಳ ಜೊತೆಗೆ ಅಪಾಯಗಳನ್ನು ಸರಿದೂಗಿಸಿಕೊಂಡು ಹೋಗುವ ವಾಸ್ತವವಾದಿಗಳು ನಾವಾಗಬೇಕಲ್ಲವೇ? ನೀವು ಏನಂತೀರಿ?

Saturday, December 23, 2023

ಸಂಖ್ಯೆಗಳು, ಕಥೆಗಳು ಮತ್ತು ಭಾವನೆಗಳು

ನೀವು ಶಾಲೆ ಕಲಿಯುತ್ತಿದ್ದಾಗ ಗಣಿತದ ಸೂತ್ರಗಳನ್ನು ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ವ್ಯಾಖ್ಯಾನಗಳನ್ನು ನೆನಪಿಟ್ಟುಕೊಳ್ಳಲು ಶ್ರಮ ಪಡುತ್ತಿದ್ರಿ. ಆದರೆ ಅಜ್ಜಿ ಹೇಳಿದ ಕಥೆಗಳು, ರಾಗವಾಗಿ ಹಾಡಲು ಕಲಿತ ಪದಗಳು, ಸ್ನೇಹಿತರೊಡನೆ ಹಂಚಿಕೊಳ್ಳುತ್ತಿದ್ದ ತಮಾಷೆಯ ಮಾತುಗಳನ್ನು ನೆನಪಿಟ್ಟುಕೊಳ್ಳಲು ನಿಮಗೆ ಯಾವುದೇ ಶ್ರಮ ಬೇಕಿದ್ದಿರಲಿಲ್ಲ. ಹತ್ತಾರು ವರುಷಗಳ ನಂತರ ಸಿಕ್ಕ ಸ್ನೇಹಿತನೊಡನೆ, ಹಿಂದೆ ನೀವು  ಅವನನ್ನು ಗೇಲಿ ಮಾಡಿದ್ದು ಮತ್ತೆ ನೆನಪಿಸಿಕೊಂಡು ನಗಬಲ್ಲರಿ. ಆದರೆ ಆದರೆ ನಿಮಗೆ ನಾಲ್ಕನೇ ಕ್ಲಾಸಿನಲ್ಲಿ ಬಂದ ಅಂಕಗಳನ್ನು ನೆನಪಿಸಿಕೊಳ್ಳಲು ಕಷ್ಟ. ಯಾಕೆ ಹೀಗೆ ಎಂದು ಯೋಚಿಸಿದ್ದೀರಾ?

ಮನುಷ್ಯ ರೂಪುಗೊಂಡಿದ್ದೆ ಹಾಗೆ. ಲಕ್ಷಾಂತರ ವರುಷಗಳ ಹಿಂದೆ ಮನುಜ ಆದಿವಾಸಿಯಾಗಿ ಬದುಕುತ್ತಿದ್ದಾಗ ಅವನಿಗೆ ಭಾಷೆ, ಅಂಕೆ-ಸಂಖ್ಯೆಗಳ ಅರಿವಿರಲಿಲ್ಲ. ಅದು ಅವನಿಗೆ ಬೇಕಾಗಿದ್ದು ಇಲ್ಲ. ಆದರೆ ಅವನು ಕಾಡಿನಲ್ಲಿ ನೋಡಿದ ಪ್ರಾಣಿಗಳ ಚಿತ್ರಗಳನ್ನು ಕಲ್ಲಿನಲ್ಲಿ ಕೆತ್ತುತ್ತಿದ್ದ. ಕ್ರಮೇಣ ಅದು ಚಿತ್ರಕಲೆಯಾಗಿ ಬದಲಾಗಿತು. ಅವನ ಹೆಂಡತಿ ಮಗುವಿಗೆ ಬರಿ ಗುನುಗುತ್ತ ಜೋಗುಳ ಹಾಡುತ್ತಿದ್ದಳು. ಮುಂದೆ ಅವುಗಳು ಹಾಡುಗಳಾಗಿ ಬದಲಾದವು. ಮನುಷ್ಯರ ಗುಂಪು ದೊಡ್ಡದಾದಂತೆಲ್ಲ ಅವರಿಗೆ ಕೇವಲ ಸಂಜ್ಞೆಗಳು ಸಾಕಾಗದೆ ಭಾಷೆಯ ಅವಶ್ಯಕತೆ ಮೂಡಿತು. ಆಡು ಭಾಷೆಗೆ ಲಿಪಿ ಮೂಡಲು ಇನ್ನು ಕೆಲವು ಸಾವಿರ ವರುಷಗಳೇ ಕಳೆದವು. ವಸ್ತುಗಳ ಬದಲಾವಣೆಗೆ, ವ್ಯಾಪಾರಕ್ಕೆ ಅನುಕೂಲವಾಗಲು ಅವನಿಗೆ ಸಂಖ್ಯೆಗಳ ಅವಶ್ಯಕತೆ ಮೂಡಿತು. ಬರೀ ಕೈ ಬೆರಳುಗಳ ಎಣಿಕೆ ಸಾಕಾಗದೆ ಸೊನ್ನೆಯನ್ನು ಸಂಖ್ಯಾ ಪದ್ದತಿಗೆ ಸೇರಿಸಿದರು. ಪ್ರಕೃತಿ ವಿಕಾಸದಲ್ಲಿ ಕೊನೆಗೆ ಬಂದದ್ದು ಸಂಖ್ಯೆ. ಹಾಗಾಗಿ ಮಾನವನ ಮೆದುಳು ಭಾಷೆಯನ್ನು ಸಲೀಸಾಗಿ ಕಲಿಯುವಷ್ಟು ಸಂಖ್ಯೆಗಳನ್ನು ಗ್ರಹಿಸುವುದಿಲ್ಲ. ಹಾಗೆಯೆ ಭಾಷೆಗಿಂತ ಮೊದಲು ಮನುಷ್ಯ ಹಾವ-ಭಾವಗಳನ್ನು ಉಪಯೋಗಿಸಿ ವ್ಯವಹರಿಸುತ್ತಿದ್ದ. ಅದಕ್ಕೆ ಮನುಷ್ಯನ ಮುಖದ ಮೇಲೆ ಮೂಡುವ ಎಷ್ಟೋ ಭಾವನೆಗಳನ್ನು ಭಾಷೆಯಲ್ಲಿ ವ್ಯಕ್ತ ಪಡಿಸುವುದು ಕಷ್ಟ. ಅದಕ್ಕೆ ನೋಡಿ. ಎಂತಹ ಕಷ್ಟದ ವಿಷಯವೇ ಇರಲಿ, ಚಿತ್ರ ಬಿಡಿಸಿ ತೋರಿಸಿ ಅಥವಾ ಅಭಿನಯಿಸಿ ತೋರಿಸಿ. ಹೆಚ್ಚಿನ ವಿವರಣೆ ಕೊಡದೆ ನೀವು ಇನ್ನೊಬ್ಬರಿಗೆ ಸುಲಭದಲ್ಲಿ ವಿಷಯ ಅರ್ಥ ಮಾಡಿಸಬಹುದು.

ಕನ್ನಡ ನಾಡಿನ ಮೊದಲ ದೊರೆ ಮಯೂರ ವರ್ಮನ ಬಗ್ಗೆ ಜನ ಓದಿ ತಿಳಿದುಕೊಂಡಿದ್ದಕ್ಕಿಂತ ಚಲನಚಿತ್ರ ನೋಡಿ ಅರಿತವರೇ ಹೆಚ್ಚು. ಏಕೆಂದರೆ ಕಾದಂಬರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಚಲನಚಿತ್ರಗಳು ಸಾಧಾರಣ ಮನುಷ್ಯನಲ್ಲಿ ಭಾವಾವೇಶಗಳನ್ನು ಮೂಡಿಸುತ್ತವೆ. ಚಿತ್ರ ನೋಡಿ ಬಂದ ಜನಕ್ಕೆ ಮಯೂರ ವರ್ಮ ಯಾವ ಶತಮಾನದಲ್ಲಿ ಬದುಕಿದ್ದ ಎನ್ನುವ ವಿಷಯ ಗಮನಕ್ಕೆ ಬಾರದೆ ಹೋಗುತ್ತದೆ. ಆದರೆ ಮಯೂರನಿಗೆ ಬೀಳುತ್ತಿದ್ದ ಕನಸುಗಳು, ಅವನಲ್ಲಿ ಮೂಡುವ ರೋಷ, ಅವನ ಶೌರ್ಯ ಮತ್ತು 'ನಾನಿರುವುದೇ ನಿಮಗಾಗಿ' ಎನ್ನುವ ಹಾಡು ಅವರಿಗೆ ಮರೆಯಲು ಸಾಧ್ಯವೇ ಆಗುವುದಿಲ್ಲ. ಇದು ಬರೀ ಕನ್ನಡ ನಾಡಿಗೆ ಮಾತ್ರ ಸೀಮಿತವಲ್ಲ.

ಟೈಟಾನಿಕ್ ಚಿತ್ರ ನೆನಪಿಸಿಕೊಳ್ಳಿ. ಅದರಲ್ಲಿ ಲಕ್ಷಾಂತರ ಬೆಲೆ ಬಾಳುವ ಹಡಗು ಮುಳುಗಿ ಹೋಗುತ್ತದೆ. ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ ಚಿತ್ರ ನೋಡಿದ ಜನರಿಗೆ ನೆನಪಿನಲ್ಲಿ ಉಳಿಯುವುದು ನಾಯಕ-ನಾಯಕಿಯ ನಡುವಿನ ಪ್ರೀತಿ. ಮತ್ತು ಅದು ದುಃಖಾಂತ ಕಾಣುವ ರೀತಿ. ಅದು ಜನರ ಮನಸ್ಸಿನೊಳಗೆ ಇಳಿದಷ್ಟು ಬೇರೆ ವಿಷಯಗಳು ಇಳಿಯುವುದಿಲ್ಲ.

ಅಂಕೆ-ಸಂಖ್ಯೆಗಳಿಗೆ ಖಂಡಿತ ಮಹತ್ವ ಇದೆ. ಆದರೆ ಅದನ್ನು ಕಥೆಯ ರೂಪದಲ್ಲಿ ಹೇಳದೆ ಹೋದರೆ ಅದನ್ನು ಗ್ರಹಿಸುವುದು ಮತ್ತು ನೆನಪಿನಲ್ಲಿ ಇಟ್ಟುಕೊಳ್ಳುವುದು ಜನರಿಗೆ ಕಷ್ಟ. ಮತ್ತು ಕಥೆಯನ್ನು ನೀವು ಎಷ್ಟು ಪರಿಣಾಮಕಾರಿಯಾಗಿ ಹೇಳುತ್ತೀರೋ, ಅದು ಜನರ ಮನಸ್ಸಿಗೆ ಎಷ್ಟರ ಮಟ್ಟಿಗೆ ನಾಟುತ್ತದೋ ಎನ್ನುವುದು ಆ ಕಥೆ ಹುಟ್ಟಿಸುವ ಭಾವನೆಗಳ ಮೇಲೆ ಅವಲಂಬಿತ ಆಗಿರುತ್ತದೆ. ಜನರ ಮನಸ್ಸಿನಲ್ಲಿ ಭಾವನೆಗಳನ್ನು ಹುಟ್ಟಿಸದ ಕಥೆ ಅಲ್ಪಾಯುಷಿ. ಹಾಗೆಯೇ ರಾಮಾಯಣ, ಮಹಾಭಾರತಗಳು ಚಿರಂಜೀವಿಗಳಾಗಿರುವುದಕ್ಕೆ ಕಾರಣ ಅವು ಹುಟ್ಟಿಸುವ ವಿಚಾರ ಮತ್ತು ಭಾವನೆಗಳು.

ಅಂಕೆ-ಸಂಖ್ಯೆ ಗಳಲ್ಲಿ ನುರಿತವರು ವ್ಯಾಪಾರಿಗಳಾದರು, ಶ್ರೀಮಂತರಾದರು ಹಾಗೆಯೆ ಸುಲಭದಲ್ಲಿ ಜನ ಅವರನ್ನು ಮರೆತು ಹೋದರು. ಆದರೆ ಭಾವನೆಗಳಿಗೆ ಸ್ಪಂದಿಸುವ ಬಸವಣ್ಣನವರ ವಚನಗಳು, ದಾಸರ ಪದಗಳು ಜನರ ಬಾಯಲ್ಲಿ ಚಿರಸ್ಥಾಯಿಯಾಗಿ ಉಳಿದು ಹೋದವು. ಕಾಲ ಬದಲಾದರೂ, ಭಾಷೆ, ಜೀವನಶೈಲಿ ಬದಲಾದರೂ, ಆಧುನಿಕ ಮನುಷ್ಯನ ಭಾವನೆಗಳಿಗೂ, ಆದಿವಾಸಿಯ ಮನಸ್ಸಿನ ಭಾವನೆಗಳಿಗೂ ಏನೂ ವ್ಯತ್ಯಾಸವಿಲ್ಲ. ಅವನನ್ನು ಗೆಲ್ಲಲು, ಅವನ ಭಾವನೆಗಳಿಗೆ ಸ್ಪಂದಿಸಿದಾಗ ಮಾತ್ರ ಸಾಧ್ಯ. ಮತ್ತು ಅದಕ್ಕೆ ಅಂಕೆ-ಸಂಖ್ಯೆ ಗಳಿಂತ ಕಥೆ-ಗೀತೆಗಳೇ ಸುಲಭದ ಹಾದಿ.