Saturday, November 27, 2021

The Satanic world of Narcissists

Definition

Google searches define a narcissist as a person who is self-centered, lies easily to put others in pain, lacks empathy and emotionally blackmail others regularly. They are well known for manipulating the facts to their advantage. They do not accept any accountability for themselves and pass on the entire blame to the other party. More the pain their victims go through, higher the satisfaction the narcissist gets. They just suck the spirit out of their victims by causing fear and guilt in them.

 

Tactics they employ

One of the major methods they employ is gaslighting. An example of this would be a narcissist doing something abusive and then denying it happened. Narcissist may also convince their victims that they're too sensitive or think too much to instill self-doubt in them.

 

They are also aided with flying monkeys. These flying monkeys are the people who take side of the narcissists. They do not give a hearing to the other party and jump into argument with the victim to support the objective of the narcissist. This is the trick narcissists employ to confuse the victims that their thinking is wrong and make them yield.

 

Narcissist set a trap creating anger in the victims by getting into arguments with them, make their victims lose emotional control and say unwanted things and use it later for their advantage. They instill guilt in their victims and play it repeatedly to emotionally crush the souls of their victims.

 

Identification and Defense

The irony is it is not easy to spot a narcissist. They look normal and fair people to the outside world. Only after someone goes through the emotional abuse by the narcissist, he/she can identify him or her. Any of your efforts to change him/her or make him aware of his/her personality disorder will only make things worse. Narcissists never admit any of their mistakes and skillfully pass it to the other party.

 

Though you spotted a narcissist after going through the emotional abuse, you need to quickly set-up boundaries as a defense, both physical and emotional. You should take care not to divulge with any sensitive information with them. Avoid arguments with them and don't try to explain. Just remain calm and emotionally stable to break their game. Even when they change their tactics, you should not fall for them. Most importantly, you should not lose self-confidence in you and move on your life leaving them behind.

 

Summary

It would be painful if the narcissist is a close family member but there is not much option left for you. They are unlikely to change for their life. And for those narcissists outside of your family, you should know that they exist, become aware of their characteristics and intentions as early as possible, and get out of their way at the first instance. You should be nice to everyone but should not give them opportunity to abuse. If it becomes unavoidable, you should use their own tactics on them and make them leave you.

 

This quote summarizes it in a sentence:

Love everybody but never sell your sword




Wednesday, November 24, 2021

ದೇಹದ ಗುಡಿಯ ನೋಡಿರಣ್ಣ

ಕನಕದಾಸರ ರಚನೆ ಹೀಗಿದೆ:


"ಏಸು ಕಾಯಂಗಳ ಕಳೆದು

ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು

ದಾಟಿ ಬಂದ ಈ ಶರೀರ ...


ದಾಸನಾಗು, ವಿಶೇಷನಾಗು"


ಆಧುನಿಕ ವಿಕಾಸ ವಿಜ್ಞಾನ (Evolutionary Science) ಕೂಡ ಇದನ್ನೇ ಹೇಳುವುದು. ಜಲಚರಗಳಿಂದ, ಉಭಯವಾಸಿ, ಪಕ್ಷಿಗಳು, ಪ್ರಾಣಿಗಳು, ಸಸ್ತನಿಗಳು ಮತ್ತು ಕೊನೆಗೆ ಅವು ಮಾರ್ಪಾಡಾಗಿ ಮಾನವ ವಿಕಾಸ ಹೊಂದಿದ್ದು. ನಮ್ಮ ವಿಷ್ಣು ಪುರಾಣ ಕೂಡ ಅದನ್ನೇ ಹೇಳುತ್ತದೆ. ವಿಷ್ಣುವಿನ ದಶಾವತಾರ ಆರಂಭ ಆಗುವುದು "ಮತ್ಸ್ಯಾವತಾರ" ದಿಂದ. ನಂತರ ಕೂರ್ಮಾವತಾರ. ಹೀಗೆ ಕೊನೆಯಲ್ಲಿ "ಕೃಷ್ಣ" ಬರುತ್ತಾನೆ.


ಮಾನವನ ದೇಹದಲ್ಲಿರುವ ಸಂಕೀರ್ಣ ನರಮಂಡಲ, ಹೊಸ ವಿಷಯಗಳನ್ನು ಗ್ರಹಿಸಬಲ್ಲ ಮೆದುಳು ಮತ್ತು ಅಗತ್ಯಕ್ಕೆ ತಕ್ಕಂತೆ ಮಾರ್ಪಾಡಾದ ಅಂಗಾಂಗಗಳು, ಪಂಚೇಂದ್ರಿಯಗಳು ಬೇರೆ ಯಾವುದೇ ಪ್ರಾಣಿ-ಪಕ್ಷಿಯಲ್ಲಿ ಅಭಿವೃದ್ಧಿ ಹೊಂದಿಲ್ಲ. ಅದಕ್ಕೆ ಮಾನವ ಬೇರೆ ಜೀವ ಸಂಕುಲಕ್ಕಿಂತ ಹೆಚ್ಚಿನ ಅನುಭವಗಳನ್ನು ಹೊಂದುತ್ತಾನೆ. ಮನುಷ್ಯನ ಮೆದುಳು ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ತನ್ನನ್ನು ಕೂಡ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ.


ದೇಹ ಮತ್ತು ಮನಸ್ಸು ಬೇರೆ ಬೇರೆಯಲ್ಲ. ದೇಹದ ಅಭಿವೃದ್ಧಿ ಹೊಂದಿದ ಭಾಗವೇ ಮನಸ್ಸು. ಅದಕ್ಕೆ ನೋಡಿ ಮನಸ್ಸು ಭಾರವಾದಾಗ ದೇಹ ನಿಶ್ಚಲವಾಗುತ್ತದೆ. ಮತ್ತು ದೇಹ ರೋಗದಿಂದ ಬಳಲಿದಾಗ ಮನಸ್ಸು ಮಂಕಾಗುತ್ತದೆ. ದೇಹ ಮತ್ತು ಮನಸ್ಸು ಒಂದರೊಂದಿಗೆ ಇನ್ನೊಂದು ಸಂಪೂರ್ಣ ಬೆಸೆದುಕೊಂಡಿವೆ. ಆರೋಗ್ಯವಂತ ಮನಸ್ಸು, ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುತ್ತದೆ. ಅರೋಗ್ಯವಂತ ದೇಹ, ಮನಸ್ಸು ಹೊಸ ಅನುಭವಗಳನ್ನು ಹೊಂದಲು ಅನುವು ಮಾಡಿಕೊಡುತ್ತದೆ. ದೇಹ ಅರ್ಥವಾದರೆ ಮನಸ್ಸು ಕೂಡ ಅರ್ಥವಾಗುತ್ತಾ ಹೋಗುತ್ತದೆ.


ದೇಹವನ್ನು ಅರ್ಥ ಮಾಡಿಕೊಳ್ಳಲು, ದಂಡಿಸಲು ಮತ್ತು ಅದರಿಂದ ಮನಸ್ಸು ಹೊಸ ಪ್ರಪಂಚಕ್ಕೆ ತೆರೆದೆಕೊಳ್ಳುವಂತೆ ಮಾಡಲು ಹುಟ್ಟಿದ್ದೇ ಹಠ ಯೋಗ, ಯೋಗಾಸನಗಳು. ಸಾಧು, ಸಂತರು ಅಧ್ಯಾತ್ಮ ಸಾಧನೆಗೆ ತೊಡಗಿದ್ದೆ ದೇಹವನ್ನು ಅರ್ಥ ಮಾಡಿಕೊಳ್ಳುವುದರ ಮೂಲಕ. ಅದಕ್ಕೆ ಸಂತ ಶಿಶುನಾಳ ಶರೀಫರು ಹಾಡಿದ್ದು:


"ಗುಡಿಯ ನೋಡಿರಣ್ಣ 

ದೇಹದ ಗುಡಿಯ ನೋಡಿರಣ್ಣ,

ಗುಡಿಯ ನೋಡಿರಿದು

ಪೊಡವಿಗೆ ಒಡೆಯನು,

ಅಡಗಿಕೊಂಡು

ಕಡುಬೆಡಗಿನಲಿರುತಿಹ,

ಗುಡಿಯ ನೋಡಿರಣ್ಣ

ದೇಹದ ಗುಡಿಯ ನೋಡಿರಣ್ಣ" 


ಈ ಹಾಡು ನನಗೆ ಇನ್ನೂ ಸಂಪೂರ್ಣ ಅರ್ಥ ಆಗಿಲ್ಲ. ಅರ್ಥ ಆದ ದಿನ, ನನ್ನ ಜೀವನವು ಮುಗಿದಿರುತ್ತದೆ ಎನ್ನುವ ಅರಿವು ನನಗಿದೆ.

Monday, November 22, 2021

ಗಂಡನ ಮನೆಯಲಿ ಮಾರಿ ಮುತ್ತು, ತವರು ಮನೆಯಲಿ ಸ್ವಾತಿ ಮುತ್ತು

ಹಾಗೆ ಕೆಲವು ಹೆಂಡತಿಯರಿರುತ್ತಾರೆ (ಎಲ್ಲರೂ ಅಲ್ಲ). ಅವರಿಗೆ ತವರು ಮನೆ ಪ್ರೇಮಲೋಕ. ಗಂಡನ ಮನೆ ರಣರಂಗ. ಅವರಿಗೆ ತಮ್ಮ ತಂದೆ ಎಂದರೆ ಹೀರೋ. ಗಂಡ ಎಂದರೆ ಶುದ್ಧ ಶನಿ. ಗಂಡನ ಮನೆಯವರೆಲ್ಲ ಸೋಂಭೇರಿಗಳು. ತವರು ಮನೆಯಲ್ಲಿರುವ ತಮ್ಮಂದಿರು ಎಷ್ಟೋ ವರ್ಷ ಖಾಲಿ ಅಡ್ಡಾಡಿದರೂ, ಅವರಿಗಿನ್ನೂ ಸಮಯ ಬಂದಿರಲಿಲ್ಲ ಅಷ್ಟೇ. ಅವರ ತಾಯಿ ಕರುಣಾಮಯಿ. ಆದರೆ ಅತ್ತೆ ಮಾತ್ರ ಜಗತ್ತಿನಲ್ಲಿ ಎಲ್ಲೂ ಇಲ್ಲದ ಕ್ರೂರಿ.


ಹಾಲುಂಡ ತವರಿಗೆ ಮಾತ್ರ ಅವರಲ್ಲಿ ಎಲ್ಲೂ ಇಲ್ಲದ ಮಮಕಾರ. ಗಂಡನ ಮನೆಯವರೆದ್ದೆಲ್ಲ  ಸುಮ್ಮನೆ ಹಾಹಾಕಾರ. ತಮ್ಮ ಸೋದರ-ಸೋದರಿಯರು ಪ್ರೀತಿ ಸೂಸುವ ಚಂದನೆಯ ಗಿಳಿಗಳು. ಗಂಡನ ಸೋದರ-ಸೋದರಿಯರು ಕಾ-ಕಾ ಎಂದು ಅರಚುವ ಕಾಗೆಗಳು.


ತವರು ಮನೆಯ ಅಸ್ತಿ ತಮ್ಮಂದಿರಿಗೆ ಇರಲಿ ಎನ್ನುವ ಔದಾರ್ಯತೆ. ಗಂಡನ ಮನೆಯ ಆಸ್ತಿಯೋ? ಕಾನೂನು-ಕೋರ್ಟ್ ಎಂದು ವೀರಾವೇಶ ತೋರುವ ಝಾನ್ಸಿ ರಾಣಿ ಲಕ್ಷ್ಮೀಬಾಯಿಯರು. ತಮ್ಮ ತಂದೆ ತಪ್ಪು ಮಾತನಾಡಿದನೋ, ಅದು ಏನೋ ಬಾಯಿ ತಪ್ಪಿನಿಂದ ಬಂದ ಮಾತು ಅಷ್ಟೇ. ಅದೇ ಗಂಡ ಮಾತನಾಡಿದನೋ, ಜೈಲಿಗೆ ಕಳಿಸದೆ ಹಾಗೆ ಬಿಟ್ಟರೆ ಬುದ್ಧಿ ಬರದು ಎನ್ನುವ ಕ್ರೋಧ. ತಮ್ಮ ತಮ್ಮಂದಿರು ತಪ್ಪು ಮಾಡಿದರೋ, ಅದು ಆವೇಶ ಅಷ್ಟೇ. ಅದನ್ನು ಬೇಗ ಮರೆತಷ್ಟು ವಾಸಿ. ಅದೇ ಗಂಡನ ಮನೆಯವರು ಮಾಡಿದರೆ, ಅವರನ್ನು ಆಗಿಂದಾಗಲೇ ಮನೆಯಿಂದ ಆಚೆ ತಳ್ಳಿ ಬಿಡಬೇಕು.


ತಾವೇ ತಪ್ಪು ಮಾತನಾಡಿದರೆ, ಅದನ್ನು ಅಲ್ಲೇ ಕ್ಷಮಿಸಿಬಿಟ್ಟರೆ ವಾಸಿ. ಇಲ್ಲವೆಂದರೆ ಎಷ್ಟು ಸಲ ಅದೇ ಮಾತು ಆಡುವಿರಿ ಎಂದು ಗಂಡನ ಮೇಲೆ ಅಪವಾದ ಹೊರಿಸುತ್ತಾರೆ. ಅದೇ ಗಂಡ ಮಾತನಾಡಿದನೋ, ಅವನನ್ನು ಚುಚ್ಚಿ, ಚುಚ್ಚಿ ಹುಚ್ಚನನ್ನಾಗಿ ಮಾಡದಿದ್ದರೆ ಕೇಳಿ.


ಒಂದೇ ನಾಣ್ಯಕ್ಕೆ ಎರಡು ಮುಖವಿದ್ದ ಹಾಗೆ ಹೆಂಡತಿಯರಿಗೆ ಕೂಡ ಎರಡು ಮುಖ ಉಂಟು. ಕೆಲವರಲ್ಲಿ ಆ ಮುಖಗಳ ನಡುವೆ ಹೆಚ್ಚು ವ್ಯತ್ಯಾಸ ಇರದಿದ್ದರೆ, ಇನ್ನು ಕೆಲವರು ಮಾತ್ರ ಗಂಡನ ಮನೆಯಲಿ ಮಾರಿ ಮುತ್ತು, ತವರು ಮನೆಯಲಿ ಸ್ವಾತಿ ಮುತ್ತು.

ವಿಪರ್ಯಾಸಗಳು

೧. ಪುನೀತ್ ರಾಜಕುಮಾರ್ ಅಕಾಲ ಮರಣಕ್ಕೆ ಈಡಾದಾಗ ಸಂತಾಪ ವ್ಯಕ್ತ ಪಡಿಸಿದ ಕೆಲವರು ತಾವು ಮಾತ್ರ ೮೦ ವರ್ಷ ಬದುಕುವ ಭ್ರಮೆಯಲ್ಲಿರುತ್ತಾರೆ.


೨. ಪುನೀತ್ ರಾಜಕುಮಾರ್ ಮಾಡಿದ ಸಮಾಜ ಸೇವೆ ಕೊಂಡಾಡುವ ಕೆಲವು ಹೆಣ್ಣು ಮಕ್ಕಳು, ತಮ್ಮ ಗಂಡ ಯಾವುದೊ ಸಾಮಾಜಿಕ ಸಂಸ್ಥೆಗೆ ೨೦೦೦ ರೂಪಾಯಿ ದೇಣಿಗೆ ನೀಡಿದರೆ ಆಕಾಶವೇ ಕಳಚಿ ಬಿದ್ದ ಹಾಗೆ ಆಡುತ್ತಾರೆ.


೩. ಬೇರೆಯವರ ಮಕ್ಕಳ ಮೇಲೆ ಘೋರ ಅಪವಾದ ಹೊರಿಸುವ ಕೆಲವರು, ತಮ್ಮ ಮಕ್ಕಳೇ ತಪ್ಪು ಮಾಡಿದಾಗ ಅದು ಆವೇಶದಲ್ಲಿ ಆದ ತಪ್ಪು ಅಷ್ಟೇ ಎಂದು ಸಮರ್ಥಿಸಿಕೊಳ್ಳುತ್ತಾರೆ.


೪. ಬೇರೆಯಯವರಿಗೆ ಆಸ್ತಿ ಪಾಲು ವಿಷಯದಲ್ಲಿ ಸಲಹೆ ನೀಡುವ ಕೆಲವು ವಕೀಲರು, ತಮ್ಮ ಮಕ್ಕಳಿಗೆ ನ್ಯಾಯ ಸಮ್ಮತವಾಗಿ ಪಾಲು ನೀಡಿರುವುದಿಲ್ಲ.


೫. ಗಂಡನ ಮನೆಯಲಿ ಮಾರಿ ಮುತ್ತು, ತವರು ಮನೆಯಲಿ ಸ್ವಾತಿ ಮುತ್ತು - ಕೆಲವು ಹೆಂಡತಿಯರು
ನಿಮ್ಮ ಅನುಭವಕ್ಕೆ ಬಂದ ವಿಪರ್ಯಾಸಗಳು ಯಾವು?

Tuesday, November 16, 2021

ಬರಲಿರುವ ಅತಿಥಿಗೆ ಕಾಯದೆ

ಕವಿ ಕುವೆಂಪು ಬರೆದರು:

 

'ತೆರೆದಿದೆ ಮನೆ

ಓ, ಬಾ ಅತಿಥಿ

ಹೊಸ ಬೆಳಕಿನ

ಹೊಸ ಗಾಳಿಯ

ಹೊಸ ಬಾಳನು

ತಾ ಅತಿಥಿ'


ಇದು ಒಬ್ಬ ಆಶಾವಾದಿಯ ಗೀತೆ. ಆದರೆ ಬಂದಿರುವ ಅತಿಥಿ ಸಂತೋಷ ತರಲಿದ್ದಾನೋ ಅಥವಾ ಪಾಪದ ಕೂಪಕ್ಕೆ ತಳ್ಳಲಿದ್ದಾನೋ ಅನುಭವಿಸಿದ ಮೇಲೆಯಷ್ಟೇ ಗೊತ್ತಾಗುವುದು. ಸಂತೋಷ ನಮ್ಮಲ್ಲಿರದೆ ಅದನ್ನು ಒಬ್ಬ ಅತಿಥಿ ತಂದು ಕೊಡುತ್ತಾನೆ ಎಂದುಕೊಂಡರೆ ಬದುಕು ನಮಗೆ ಪಾಠ ಕಲಿಸದೇ ಬಿಡದು. ಒಂದು ವೇಳೆ ನಿಮಗೆ ಬೇಕಾದ ಅತಿಥಿ ನಿಮ್ಮಿಂದ ದೂರವಾಗಿ, ಬೇಡವಾದ ಅತಿಥಿ ನಿಮ್ಮ ಮನೆಗೆ ವಕ್ಕರಿಸಿಕೊಂಡರೆ ಆಗೇನು ಮಾಡುವಿರಿ? ಆಗ ಇದೇ ಹಾಡನ್ನು ಹಾಡಲು ಸಾಧ್ಯವೇ? ನಾವು ಕಲಿಯದ ಪಾಠಗಳನ್ನು ಬದುಕು ಮತ್ತೆ ಮತ್ತೆ ಕಲಿಸದೇ ಬಿಡುವುದಿಲ್ಲ. ಹತ್ತಿರದವರ ಅಗಲಿಕೆ, ಬಲವಾಗಿ ನಂಬಿದ್ದಲ್ಲಿ ಮೋಸ, ಮನಸ್ಸಿಟ್ಟು ಮಾಡಿದ ಕೆಲಸದಲ್ಲಿ ಸೋಲು ಇವುಗಳು ಸ್ವಾರ್ಥಭರಿತ ಸಂಬಂಧಗಳ ಅರ್ಥಹೀನ ಬದುಕನ್ನು ಮನದಟ್ಟು ಮಾಡಿಕೊಡುತ್ತವೆ. 'ನಾನು' ಎನ್ನುವ 'ಅಹಂ' ಕರಗಿದಷ್ಟು 'ಮಾಯೆ' ಎನ್ನುವ ಪೊರೆಯು ಕಳಚುತ್ತಾ ಹೋಗುತ್ತದೆ. ಆಗ ನಮಗೆ ಗೋಪಾಲಕೃಷ್ಣ ಅಡಿಗರ ಕಾವ್ಯ ಅರ್ಥವಾಗುತ್ತಾ ಹೋಗುತ್ತದೆ.

 

'ಸಪ್ತಸಾಗರದಾಚೆ ಎಲ್ಲೊ

ಸುಪ್ತ ಸಾಗರ ಕಾದಿದೆ'

 

ಕವಿ ಆಶಾವಾದಿ. ಕವಿ ನಿರಾಶಾವಾದಿ. ಭಾವನೆಗಳು ಉಯ್ಯಾಲೆಯ ಹಾಗೆ. ಮುಂದೆ ಜೀಕಿದಷ್ಟು ಬಲವಾಗಿ ಹಿಂದೆ ತಳ್ಳುತ್ತವೆ. ಭಾವನೆಗಳೆಂಬ ಸಪ್ತ ಸಾಗರಗಳನ್ನು ಗೆದ್ದು ತಟಸ್ಥ ಸ್ಥಿತಿಗೆ ತಲುಪಿದಾಗ ಅದುವರೆಗೆ ಅರಿವಿಗೆ ಬರದಿದ್ದ ಸುಪ್ತ ಸಾಗರ ನಮ್ಮ ಅನುಭವಕ್ಕೆ ಬರತೊಡಗುತ್ತದೆ. ಅದು ನಮ್ಮದೇ ಸುಪ್ತ ಮನಸ್ಸು. ಮನದಾಳದ ರಾಗ-ದ್ವೇಷಗಳು ತಮ್ಮ ಅಲೆಯ ಬಡಿತ ನಿಲ್ಲಿಸಿದಾಗ, ಕಂಪನವಿಲ್ಲದ ನೀರಿನ ಭಾವಿಯ ತಳ ಗೋಚರವಾಗತೊಡಗುತ್ತದೆ. ಬೀಸುವ ಗಾಳಿಗೆ ನೀರು ಕಂಪಿಸಿದರೆ ಮತ್ತೆ ಎಲ್ಲವೂ ಅಸ್ಪಷ್ಟ. ತಹಬದಿಗೆ ಬಂದಾಗ ಸುಪ್ತ ಮನಸ್ಸಿನ ಆಳ, ಅಗಲಗಳು ಸ್ಪಷ್ಟ. ಸ್ಪಷ್ಟತೆಯೊಡನೆ  'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ' ಎನ್ನುವ ಕವಿಯ ಮಾತು ನಮ್ಮ ಅನುಭವಕ್ಕೆ ಬರತೊಡಗುತ್ತದೆ. ಆ ಸತ್ಯ ಅರ್ಥವಾದ ಮೇಲೂ ಮತ್ತೆ ಸ್ವಾರ್ಥ ತುಂಬಿದ ಸಂಬಂಧಗಳಿಗೆ ಹಾತೊರೆದರೆ ನಮ್ಮ ಕಲಿಕೆ ಅಪೂರ್ಣ.

 

'ಇಂತಾದರೂ ಬಾ

ಅಂತಾದರೂ ಬಾ

ಎಂತಾದರೂ ಬಾ'

 

ಎಂದು ಬರಲಿರುವ ಅಥವಾ ಬಾರದಿರುವ ಅತಿಥಿಗೆ ಕಾಯದೆ, ಬದುಕಿನ ತಿರುಗಣಿಗೆ ಸಿಕ್ಕು ಸುತ್ತದೆ, ನಮ್ಮ ಸುಪ್ತ ಮನಸಿನ ಭಾವಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ನಮ್ಮದಲ್ಲವೇ? ಬೇಕಿದ್ದ ಅತಿಥಿ ಸಂತೋಷ ತರಬಹುದು ಹಾಗೆಯೇ ಬೇಡದ ಅತಿಥಿ ನಮ್ಮ ಭಾವಿಗೆ ಕಲ್ಲು ಹಾಕಬಹುದು. ಆದರೆ ಎಷ್ಟು ಬೇಗನೆ ಕಂಪನ ನಿಲ್ಲಿಸಬೇಕು ಎನ್ನುವುದು ಮಾತ್ರ ನಮಗೆ ಇರುವ ಸ್ವಾತಂತ್ರ್ಯ. ನಮ್ಮ ಸಂತೋಷ, ನಮ್ಮ ಸ್ವಾತಂತ್ರ್ಯ ಯಾವುದೋ ಅತಿಥಿ ನಿರ್ಧರಿಸಬಾರದಲ್ಲವೇ?


ಕುವೆಂಪು ರಚಿಸಿದ ಆ ಗೀತೆ ಕೇಳಲು ನನಗೆ ಇಷ್ಟ. ಆದರೆ ಅದು ಬದುಕುವ ದಾರಿಯಲ್ಲ ಎನ್ನುವುದು ಮಾತ್ರ ನನಗೆ ಜೀವನ ಕಲಿಸಿ ಕೊಟ್ಟ ಪಾಠ. ಹಾಗೆಯೇ ಅಡಿಗರ ಕಾವ್ಯ ಎಲ್ಲರಿಗೂ ಸಿದ್ಧಾಂತ ಆಗಬೇಕೆಂದು ಏನಿಲ್ಲ. ಬದುಕು ಕೊಡಮಾಡುವ ವಿಶಿಷ್ಟ ಅನುಭವ ಎಲ್ಲರಿಗೂ ಒಂದೇ ಆಗಬೇಕೆಂದಿಲ್ಲ. ನಮ್ಮ ನಮ್ಮ ಬುತ್ತಿ ನಾವು ಉಣ್ಣಬೇಕು ಅಷ್ಟೇ.

Thursday, November 11, 2021

Book Summary: Autobiography of a Yogi

This book is not just the tale of Sri Paramahansa Yogananda. It is also account of his lineage of Guru’s, Sri Yukteshwar Giri and Lahiri Mahasaya. And many numerous yogis who had supernatural powers.

Determined to be a Yogi from childhood, Sri Paramahansa Yogananda captures vivid memories of his meetings with various yogi’s during his spiritual journey. One yogi who levitated during meditation, another who appeared in two different places at the same time, one who tamed wild tigers, one who never slept, another who never ate, and the list goes on and on. All these fetes appear to be supernatural to us which science can’t explain yet but are quite common in the world of spiritual practitioners. For those who could transcend materialistic inclinations and practice meditation for long periods, certain siddhis come naturally. That would be to foresee the future or the power to heal the ailing. But they are more interested in their spiritual sadhana than showing off their supernatural powers.

This book provides insight into the world of numerous such yogis, their ways of thinking and living which are very different than that of common men driven by sensual pleasures and hoarding of wealth. For those on the spiritual path, this book would certainly be a motivation and the yogi’s mentioned in this book would only increase their resolve to remain committed to the spiritual path.



Tuesday, November 9, 2021

ಎಲ್ಲಮ್ಮನ ಮಕ್ಕಳು

(William Dalrymple ಬರೆದ 'Nine Lives' ಪುಸ್ತಕದ 'The Daughters of Yellamma' ಅಧ್ಯಾಯದ ಭಾವಾನುವಾದ ಮತ್ತು ಕಿರು ರೂಪ)

 

"ಹೌದು, ಕೆಲವೊಂದು ಸಲ ಅದರಲ್ಲಿ ಸುಖ ಇದೆ" ಎಂದಳು ರಾಣಿಬಾಯಿ. "ಯಾರಿಗೆ ದೈಹಿಕ ಸುಖ ಹೊಂದುವುದು ಇಷ್ಟವಿಲ್ಲ? ಸುಂದರ ಯುವಕ, ಸೌಮ್ಯವಾಗಿ ನಡೆಸಿಕೊಳ್ಳುವಾಗ..."

 

ತನ್ನ ಮಾತನ್ನು ಅರೆಕ್ಷಣ ನಿಲ್ಲಿಸಿ, ಕೆರೆಯ ಕಡೆ ನೋಡುತ್ತಾ ತನ್ನಲ್ಲೇ ನಕ್ಕಳು. ಮರು ಘಳಿಗೆ ಅವಳ ಮುಖ ಕಪ್ಪಿಟ್ಟಿತು "ಇಲ್ಲಿನ ಜನ ಒರಟರು, ಬಾಂಬೆ ಯ ಹುಡುಗರ ಹಾಗಲ್ಲ"

 

"ದಿನಕ್ಕೆ ಎಂಟು ಜನ" ಎಂದು ಸೇರಿಸಿದಳು ಅವಳು ಸ್ನೇಹಿತೆ ಕಾವೇರಿ. "ಕೆಲವೊಂದು ಸಲ ಹತ್ತು. ಎಲ್ಲ ಗೊತ್ತಿಲ್ಲದ ಜನರು. ಅದೆಂತಹ ಜೀವನ?" ರಾಣಿಬಾಯಿ ಹೇಳಿದಳು "ಎಲ್ಲರು ನಮ್ಮ ಜೊತೆ ಮಲಗುತ್ತಾರೆ ಆದರೆ ಮದುವೆಯಾಗುವುದಿಲ್ಲ. ನಮ್ಮನ್ನು ಅಪ್ಪಿಕೊಳ್ಳುತ್ತಾರೆ ಆದರೆ ರಕ್ಷಿಸುವುದಿಲ್ಲ"

 

"ಇದನ್ನು ಬಿಟ್ಟು ನಮಗೆ ಬದಲಿ ದಾರಿಯೆಲ್ಲಿದೆ? ಓದು, ಬರಹ ಗೊತ್ತಿರದ ನಮಗೆ ಯಾರು ಕೆಲಸ ಕೊಡುತ್ತಾರೆ? ದೇಹ ಸೌಂದರ್ಯ ಕಳೆದು ಹೋದಾಗ ನಾವು ಒಂಟಿಯಾಗಿ ಹೋಗುತ್ತೇವೆ. ಮತ್ತೆ ರೋಗಗಳು? ಕಳೆದ ವಾರವಷ್ಟೇ ಗುಪ್ತ ರೋಗಕ್ಕೆ ದೇವದಾಸಿಯೊಬ್ಬಳು ತೀರಿ ಹೋದಳು"

 

"ಎಲ್ಲಮ್ಮ ಇದು ಹೀಗಾಗಲು ಬಯಸಿರಲಿಲ್ಲ. ಜಗತ್ತು ಇದನ್ನು ಮಾಡಿದ್ದು. ಮತ್ತು ರೋಗಗಳನ್ನು ಕೂಡ ಅದೇ ತಂದದ್ದು. ನಮ್ಮ ದೇವಿಗೆ ನಮ್ಮ ಕಣ್ಣೀರು ಒರೆಸುವುದು ಬಿಟ್ಟು ಬೇರೇನು ಮಾಡಲು ಸಾಧ್ಯ?"

 

ಬೆಳಗಾಂ ನಿಂದ ನಾವು ಬಂದಿದ್ದು ಸವದತ್ತಿಯ ಎಲ್ಲಮ್ಮಳ ದರುಶನಕ್ಕೆ. ರಾಣಿಬಾಯಿ, ಕಾವೇರಿ ಮತ್ತು ನಾನು. ಬೆಟ್ಟದ ಮೇಲೆ ದೇವಸ್ಥಾನ, ಪಕ್ಕದಲ್ಲೊಂದು ಹೊಂಡ. ಋಷಿ ಜಮದಗ್ನಿಯ ಹೆಂಡತಿ ಎಲ್ಲಮ್ಮ ಕಾಮದಾಸೆಗೆ ಸಿಲುಕಿ, ಗಂಡನಿಂದ ಶಾಪಗ್ರಸ್ಥಳಾದ ಕಥೆ ಇಲ್ಲೇ ನಡೆದಿದ್ದು ಎಂದು ಪ್ರತೀತಿ.

 

"ನನ್ನ ಹೆತ್ತವರು ನನ್ನನು ದೇವರಿಗೆ ಅರ್ಪಿಸಿದಾಗ ನನಗೆ ಕೇವಲ ಆರು ವರುಷ" ತನ್ನ ಕಥೆ ಹೇಳಲು ಶುರುವಿಟ್ಟಳು ರಾಣಿಬಾಯಿ. "ಅಂದಿಗೆ ನನಗೆ ಯಾವ ವಿಚಾರಗಳು ತಿಳಿದಿರಲಿಲ್ಲ. ನನ್ನ ಅಪ್ಪ ಇದರಿಂದ ನಮ್ಮ ಬಡತನ ಕಳೆದು ಹೋಗುವುದು ಎಂದು ಹೇಳಿದ್ದಷ್ಟೇ ಗೊತ್ತು. ದುಡ್ಡು ಗಳಿಸುವ ವಿಚಾರ ಇಷ್ಟ ಆದರೂ ಅದು ಎಲ್ಲಿಂದ ಬರುವುದು ಎಂದು ತಿಳಿದಿರಲಿಲ್ಲ"

 

"ನಾನು ಋತುಮತಿಯಾದ ಕೆಲವೇ ದಿನಗಳಿಗೆ, ನನ್ನನ್ನು ಪಕ್ಕದ ಹಳ್ಳಿಯ ಕುರಿ ಕಾಯುವವನಿಗೆ ೫೦೦ ರೂಪಾಯಿಗೆ ಮಾರಿ ಬಿಟ್ಟ. ಅಷ್ಟೊತ್ತಿಗೆಲ್ಲ ನಮ್ಮ ಪಕ್ಕದ ಗುಡಿಸಲುಗಳಿಗೆ ಗಂಡಸರು ಬಂದು ಹೋಗುವುದನ್ನು ಗಮನಿಸಿದ್ದ ನನಗೆ ಮುಂದೆ ಇರುವ ಜೇವನದ ಅಂದಾಜು ಸಿಗಲಾರಂಭಿಸಿತ್ತು. ಒಂದು ದಿನ ನನ್ನನ್ನು ಪಕ್ಕದ ಹಳ್ಳಿಗೆ ಕರೆದುಕೊಂಡು ಹೋಗಿ, ನನ್ನ ಚಿಕ್ಕಮ್ಮ, ಅವಳೂ ಕೂಡ ದೇವದಾಸಿ, ಅವಳ ಮನೆಯಲ್ಲಿ ಬಿಟ್ಟು ನನ್ನ ಮನೆಯವರೆಲ್ಲ ವಾಪಸ್ಸು ಹೋಗಿಬಿಟ್ಟರು. ಆಗ ಏನೋ ನಡೆಯುವುದರ ಸುಳಿವು ಸಿಕ್ಕ ನಾನು ದೊಡ್ಡ ದನಿಯಲ್ಲಿ ರೋದಿಸತೊಡಗಿದೆ. ನನ್ನ ದೇವದಾಸಿ ಚಿಕ್ಕಮ್ಮ, ನಾನು ಅಳಬಾರದು, ಇದು ನಮ್ಮ ಧರ್ಮ, ಅಳುವುದು ಮಂಗಳವಲ್ಲ ಎಂದು ಭೋದಿಸಿದಳು. ಗಂಡಸು ಬಂದೊಡನೆ ಮನೆಯಿಂದ ಹೊರ ನಡೆದಳು ಚಿಕ್ಕಮ್ಮ. ಬಂದವನು ಬಲಿಷ್ಠ, ಏನು ಹೊಡೆದರು, ಚೂರಿದರೂ ಬಿಡಲಿಲ್ಲ. ನನ್ನನ್ನು ಉಪಯೋಗಿಸಿಕೊಂಡು, ಒಪ್ಪಿಕೊಂಡಿದ್ದ ೫೦೦ ರೂಪಾಯಿ ಕೂಡ ಕೊಡದೆ ಓಡಿ ಹೋದ"

 

"ಮರುದಿನ ನನ್ನ ಚಿಕ್ಕಮ್ಮಳ ಮೇಲೆ ಕೂಗಾಡಿದೆ, ನೀನು ಒಬ್ಬ ಸೂಳೆ. ನನ್ನನ್ನು ಕೂಡ ಒಬ್ಬ ಸೂಳೆ ಮಾಡಿಬಿಟ್ಟೆ. ಅದಾಗಿ ಕೆಲ ದಿನಗಳಿಗೆ ಅದೇ ಚಿಕ್ಕಮ್ಮ ನನ್ನನ್ನು ಬಾಂಬೆ ಗೆ ಸುತ್ತಾಡಿಸಿವುದಕ್ಕೆ ಎಂದು ಕರೆದುಕೊಂಡು ಹೋದಳು. ಅದು ಕೂಡ ಒಂದು ಉಪಾಯ ಎಂದು ನನಗೆ ತಿಳಿಯದೆ ಹೋಯಿತು. ಸೀದಾ ಒಬ್ಬ ಘರವಾಲಿ ಮನೆಗೆ ಕರೆದುಕೊಂಡು ಹೋಗಿ ೨೦೦೦ ರೂಪಾಯಿಗೆ ನನ್ನನ್ನು ಮಾರಿಬಿಟ್ಟಳು. ಆ ಘರವಾಲಿ ನನಗೆ ಸೀದಾ ದಂಧೆಗೆ ಇಳಿಸಲಿಲ್ಲ. ಕೆಲವು ದಿನ ಅಲ್ಲಿ ಅಡಿಗೆ, ಮನೆ ಕೆಲಸ ಮಾಡಿಕೊಂಡಿದ್ದೆ. ಕ್ರಮೇಣ ದಂಧೆಗೆ ಇಳಿಯದೆ ಬೇರೆ ದಾರಿ ಇರಲಿಲ್ಲ. ಇಬ್ಬರು ಮಕ್ಕಳಾದವು. ಅಲ್ಲಿ ದುಡಿದ ದುಡ್ಡಿನಲ್ಲಿ ತಂಗಿಯ ಮದುವೆ ಮಾಡಿದೆ. ಊರಲ್ಲಿ ಎಂಟು ಎಕರೆ ಜಮೀನು ಖರೀದಿ ಮಾಡಿ, ಎಮ್ಮೆ ಸಾಕಿದ್ದೇನೆ. ಇಷ್ಟರಲ್ಲೇ ಈ ಕೆಲಸ ಬಿಟ್ಟು ಎಮ್ಮೆ ಹಾಲು ಮಾರಿ ಜೀವನ ಮಾಡುತ್ತೇನೆ."

 

"ನನ್ನ ದೊಡ್ಡ ಮಗಳು ಸಣ್ಣ ವಯಸ್ಸಿನಲ್ಲೇ ಯಾರದೋ ಜೊತೆ ಓಡಿ ಹೋದಳು. ಅವಳು ವಾಪಸ್ಸು ಬಂದ ಮೇಲೆ ಅವಳನ್ನು ಯಾರೂ ಮದುವೆ ಆಗಲು ಒಪ್ಪಲಿಲ್ಲ. ಅವಳನ್ನು ದೇವದಾಸಿ ಮಾಡಿಬಿಟ್ಟೆ. ಚಿಕ್ಕ ಮಗಳಿಗೆ ಚರ್ಮದ ಮೇಲೆ ಬಿಳಿ ಮಚ್ಛೆಗಳಿದ್ದವು. ಅವಳಿಗೆ ಮದುವೆ ಮಾಡಲು ಆಗದೆ ಅವಳನ್ನು ಕೂಡ ದೇವದಾಸಿಯನ್ನಾಗಿ ಮಾಡಿಬಿಟ್ಟೆ. ನನ್ನನ್ನು ದೇವರಿಗೆ ಅರ್ಪಿಸಿದಾಗ ನನ್ನ ತಾಯಿಯನ್ನು ಬೈದುಕೊಂಡಿದ್ದ ನಾನು ಅದೇ ಕೆಲಸ ಮಾಡದೆ ಬೇರೆ ದಾರಿಯೇ ಇರಲಿಲ್ಲ"

 

"ನಾನು ಮಾಡಿದ್ದ ಪಾಪಗಳಿಗೋ ಏನೋ, ಇಂದಿಗೆ ಅವರಿಬ್ಬರೂ ಜೀವಂತ ಇಲ್ಲ". ಅದೇನಾಯಿತು ಎಂದು ಸ್ಪಷ್ಟವಾಗಿ ರಾಣಿಬಾಯಿ ಹೇಳದಿದ್ದರೂ, ನನಗೆ ಬೇರೆಯವರಿಂದ ತಿಳಿಯಿತು ಅವರು ಬಲಿಯಾಗಿದ್ದು ಏಡ್ಸ್ ಗೆ ಎಂದು.

 

ಸಂಜೆ ಹೊತ್ತಿಗೆ ಕಾವೇರಿಯನ್ನು ಅವಳ ಮನೆ ತಲುಪಿಸಿ, ರಾಣಿಬಾಯಿ ಯನ್ನು ಅವಳ ಊರಿಗೆ ತಲುಪಿಸಲು ಕಾರು ಹತ್ತಿದೆವು. ದಾರಿಯುದ್ದಕ್ಕೂ ಮಾತನಾಡುತ್ತ ಹೋದಳು ರಾಣಿಬಾಯಿ. "ನಮಗೆ, ದೇವದಾಸಿಯರಿಗೆ ಕೆಲ ಸೌಲಭ್ಯಗಳಿವೆ. ಹಬ್ಬಗಳಲ್ಲಿ ಜನ ನಮ್ಮ ಆಶೀರ್ವಾದ ತೆಗೆದುಕೊಳ್ಳುತ್ತಾರೆ. ನಾವು ದೇವಿಯ ಅವತಾರ ಎಂದು ಪೂಜೆ ಮಾಡುತ್ತಾರೆ. ನಾವು ಸಾಧಾರಣ ಸೂಳೆಯರಲ್ಲ. ನಮಗೆ ಘನತೆಯಿದೆ. ಆದರೆ ಸಂಭೋಗ, ಸಂಭೋಗವೇ. ಅಲ್ಲಿ ಯಾವ ದೈವತ್ವವು ಇಲ್ಲ."

 

"ರೋಗಗಳ ಬಗ್ಗೆ ನಿನಗೆ ಹೆದರಿಕೆ ಇಲ್ಲವೇ?" ನಾನು ಕೇಳಿದೆ.

 

"ಏಕಿಲ್ಲ? ಆದರೆ ನಾವು ಊಟ ಮಾಡಬೇಕೆಂದರೆ ನಮ್ಮ ಕೆಲಸ ಮುಂದುವರೆಸಲೇ ಬೇಕು. ದುಃಖ ಭರಿಸುವುದು ನಮ್ಮ ಕರ್ಮ. ಸಂತೋಷದ ಮುಖ ಹೊತ್ತು ಆಕರ್ಷಿಸಿಸದಿದ್ದರೆ ನಮ್ಮ ಹತ್ತಿರ ಬರುವರಾರು?" ರಾಣಿಬಾಯಿ ಉತ್ತರ ಕೊಟ್ಟಳು.

 

"ನಿನಗೆ ಭವಿಷ್ಯದ ಬಗ್ಗೆ ಆಸೆ ಇಲ್ಲವೇ?"

 

"ಏಕಿಲ್ಲ? ಅದಕ್ಕೆಂದೇ ಹೊಲ ಕೊಂಡುಕೊಂಡು ಎಮ್ಮೆ ಸಾಕಿದ್ದೇನೆ. ಇನ್ನು ಸ್ವಲ್ಪ ಹಣ ಉಳಿಸಿಕೊಂಡು ಅಲ್ಲಿಗೆ ಹೋಗಿ ನಿವೃತ್ತಿ ತೆಗೆದುಕೊಳ್ಳುತ್ತೇನೆ"

 

ರಾಣಿಬಾಯಿಯನ್ನು ಅವಳ ಮನೆಗೆ ಬಿಟ್ಟು ಬೆಳಗಾಂ ಗೆ ಮರಳಿದೆ. ಅಲ್ಲಿ ದೇವದಾಸಿಯರ ಜೊತೆ ಕೆಲಸ ಮಾಡುವ NGO ಸಂಸ್ಥೆಯಲ್ಲಿ ರಾಣಿಬಾಯಿಯ ಬಗ್ಗೆ ಮತ್ತು ಅವಳ ನಿವೃತ್ತಿ ಯೋಜನೆ ಬಗ್ಗೆ  ವಿಚಾರಿಸಿದೆ. ಅಲ್ಲಿ ತಿಳಿದು ಬಂತು ಈಗಾಗಲೇ ರಾಣಿಬಾಯಿಗೆ ಅವಳ ಮಕ್ಕಳಿಗೆ ಇದ್ದ ರೋಗ ಅಂಟಿಕೊಂಡು ಕೆಲವು ತಿಂಗಳುಗಳೇ ಕಳೆದಿವೆ. ಔಷಧಗಳು ಕೆಲ ದಿನಗಳ ಮಟ್ಟಿಗೆ ರೋಗ ಲಕ್ಷಣಗಳನ್ನು ಕಡಿಮೆ ಮಾಡಿದರು, ಸಂಪೂರ್ಣ ಗುಣ ಮಾಡಲಾರವು. ಅವಳು ತನ್ನ ಜಮೀನಿಗೆ ಹೋಗಿ ನಿವೃತ್ತಿ ತೆಗೆದುಕೊಳ್ಳುವುದಕ್ಕೆ ಈಗಾಗಲೇ ಕಾಲ ಮಿಂಚಿ ಹೋಗಿದೆ.

Saturday, November 6, 2021

ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ

"ತುತ್ತು ಅನ್ನ ತಿನ್ನೋಕೆ, 

ಬೊಗಸೆ ನೀರು ಕುಡಿಯೋಕೆ,

ತುಂಡು ಬಟ್ಟೆ ಸಾಕು ನಮ್ಮ ಮಾನ ಮುಚ್ಚೋಕೆ,

ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ"


ವಿಷ್ಣುವರ್ಧನ್ ಹಾಡಿದ ಈ ಹಾಡು ಅಂದಿಗೆ ಜನಪ್ರಿಯವಾಗಿತ್ತು. ಇಂದಿಗೂ ಕೇಳಲು ಯೋಗ್ಯವಾಗಿದೆ. ಇರುವ ಸ್ವಲ್ಪದರಲ್ಲೇ ಮನುಷ್ಯ ನೆಮ್ಮದಿಯಾಗಿ ಬದುಕಬಹುದು ಎನ್ನುವುದು ಅದರ ಸಂದೇಶವಾಗಿತ್ತು. ಆದರೆ ನಾವು ಬದುಕುವ ರೀತಿ ನೋಡಿ? ಇಂದಿಗೆ ತಿನ್ನುವುದಕ್ಕೆ ತುತ್ತು ಅನ್ನ ಸಾಕಾದರೂ, ನಾಳೆಗೆ, ನಾಡಿದ್ದಕ್ಕೆ ಹೀಗೆ ಮತ್ತೆ ತುತ್ತು ಅನ್ನ ಬೇಕಲ್ಲ. ಅದಕ್ಕೆ ಸಾಧ್ಯವಾದಷ್ಟು ಅಕ್ಕಿ ಪ್ಯಾಕೆಟ್ ಗಳನ್ನು ಮನೆಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತೇವೆ. ಗೋದಾಮುಗಳಲ್ಲಿ ಕೆಲ ವರುಷಗಳಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿ ದಾಸ್ತಾನು ಲಭ್ಯ. ಕುಡಿಯುವುದು ಬೊಗಸೆ ನೀರೇ ಆದರೂ, ಮನೆಯಲ್ಲಿ ಸಾವಿರಾರು ಲೀಟರ್ ನೀರು ಹಿಡಿದಿಡುವ ಟ್ಯಾಂಕ್ ಕಟ್ಟಿಸುತ್ತೇವೆ. ಹಾಗೆಯೇ ಊರಿಗೊಂದು ಕೆರೆ, ನದಿಗೊಂದು ಆಣೆಕಟ್ಟು. ಅವೆಲ್ಲ ಮನುಷ್ಯನ ದಾಹ ನೀಗಿಸುವುದಕ್ಕೆ. ಒಂದು ದಿನಕ್ಕಲ್ಲ. ಬರಲಿರುವ ದಿನಗಳಿಗೂ ಕೂಡ. ತುಂಡು ಬಟ್ಟೆ ಸಾಕು ನಮ್ಮ ಮಾನ ಮುಚ್ಚೋಕೆ. ಆದರೆ ನಮ್ಮ ಅಂದ ಚೆಂದಕೆ ಬೇಕು ಹಲವಾರು ಡಜನ್ ಬಟ್ಟೆಗಳು. ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ. ಆದರೆ ನಮಗೆ ಬೇಕು ಕನಿಷ್ಠ ೩೦ x ೪೦ ಅಡಿಯ ಮನೆ. ಉಳ್ಳವರಿಗೆ ಅವರಿಗೆ ಅಂತಸ್ತಿಗೆ ತಕ್ಕಂತೆ ವಿಶಾಲವಾದ ಮನೆ.


ಪ್ರಕೃತಿ ಸೃಷ್ಟಿಸಿದ ಜೀವ ಸಂಕುಲದಲ್ಲಿ ಮನುಷ್ಯನನ್ನು ಹೊರತು ಪಡಿಸಿದರೆ, ಇಂತಹ ಅನುಕೂಲಗಳು  ಯಾವುದೇ ಪ್ರಾಣಿ, ಪಕ್ಷಿಗಿಲ್ಲ. ಅವುಗಳೆಲ್ಲ ಅಂದಿನ ಆಹಾರ ಅಂದೇ ಹುಡುಕಿಕೊಳ್ಳಬೇಕು. ಇಲ್ಲದಿದ್ದರೆ ಉಪವಾಸ. ಅವಕ್ಕೆ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳುವುದು ಕೂಡ ಗೊತ್ತಿಲ್ಲ. ಯಾವ ಹುಲಿ, ಸಿಂಹಕ್ಕೂ ಜಗತ್ತಿನಲ್ಲಿರುವ ಕಾಡಿಗೆಲ್ಲ ತಾನೊಬ್ಬನೇ ರಾಜ ಆಗಬೇಕೆನ್ನುವ ಆಸೆ ಇಲ್ಲ. ಆದರೆ ಮನುಷ್ಯ ಪ್ರಪಂಚದಲ್ಲಿ ಉಂಟು ಅಲೆಕ್ಸಾಂಡರ್, ನೆಪೋಲಿಯನ್, ಹಿಟ್ಲರ್. 


ಕಾಡು ಪೋಷಿಸಿದಷ್ಟು ಮಾತ್ರ ಜಿಂಕೆಗಳ ಇರಲು ಸಾಧ್ಯ. ಅವುಗಳ ಸಂಖ್ಯೆ ಹೆಚ್ಚಾಗದಂತೆ ಆಹಾರ ಸರಪಣಿಯ ಪಿರಮಿಡ್ ನಲ್ಲಿ ಹುಲಿಗಳಿವೆ. ಮನುಷ್ಯನನ್ನು ಬೇಟೆ ಆಡುವ ಪ್ರಾಣಿಗಳಿಗೆ ಉಳಿಗಾಲ ಎಲ್ಲಿದೆ? ಕಾಳ್ಗಿಚ್ಚು ಬಿದ್ದಾಗ ಅಳಿಲಿನಿಂದ ಆನೆಯವರೆಗೆ ಎಲ್ಲವೂ ಜೀವ ಕಳೆದುಕೊಳ್ಳುತ್ತವೆ. ಆದರೆ ಮನುಷ್ಯನಿಗೆ ಇಂತಹ ಅವಘಡಗಳಿಂದ ಪಾರಾಗುವ ಬಗೆ ಗೊತ್ತಿದೆ. ಮನುಷ್ಯ ಜನಸಂಖ್ಯೆಗೆ ಮಾತ್ರ ಇಲ್ಲ ಮಿತಿ.


ಮನುಷ್ಯ ಜನಸಂಖ್ಯೆ ಜಾಸ್ತಿಯಾದಂತೆಲ್ಲ, ಪ್ರಕೃತಿ ಮತ್ತು ಇತರ ಪ್ರಾಣಿ ಸಂಕುಲದ ಮೇಲೆ ಮನುಷ್ಯನ ದಬ್ಬಾಳಿಕೆ ಕೂಡ ಹೆಚ್ಚುತ್ತಾ ಹೋಗುತ್ತದೆ. ಕೆಲವು ಚಲನಚಿತ್ರಗಳಲ್ಲಿ ಮನುಷ್ಯ ನಿರ್ಮಿತ ರೋಬೋಟ್ ಗಳು ತಾವೇ ಪರಿಸ್ಥಿತಿಯನ್ನು ಕೈಗತ್ತಿಗೊಂಡು ತಮ್ಮನ್ನು ನಿರ್ಮಿಸಿದವರ ಮೇಲೆ ಧಾಳಿಗೆ ಮುಂದಾಗುತ್ತವಲ್ಲ. ಇಂದಿಗೆ ಪ್ರಕೃತಿಗೆ ಕೂಡ ಮನುಷ್ಯನ ಬಗ್ಗೆ ಹಾಗೆಯೇ ಅನಿಸುತ್ತಿರಬಹುದಲ್ಲವೇ?


ಮನುಷ್ಯರ ಜನಸಂಖ್ಯೆ ಮತ್ತು ದುರಾಸೆ ಕಡಿಮೆ ಆಗದಿದ್ದಲ್ಲಿ, ಪ್ರಕೃತಿ ತನ್ನ ಯೋಜನೆ ಬದಲಿಸದೆ ಇರದು. ಡೈನೋಸಾರ್ ಭೂಮಿಗೆ ಭಾರವಾದಾಗ ಪ್ರಕೃತಿಯ ಯಾವುದೊ ಯೋಜನೆಗೆ ಸಿಕ್ಕಿ ಕಣ್ಮರೆಯಾದವು. ಎಷ್ಟೋ ಮನುಷ್ಯ ನಾಗರಿಕತೆಗಳು (ಉದಾಹರಣೆಗೆ ಮಾಯನ್ ನಾಗರೀಕತೆ) ಪ್ರಕೃತಿಯ ವಿಕೋಪಕ್ಕೆ ಸಿಕ್ಕಿ ತಮ್ಮ ಅಸ್ತಿತ್ವ ಕಳೆದುಕೊಂಡವು. ಪ್ರಕೃತಿಯನ್ನು ಗೆಲ್ಲಲು ಹೊರಟವರು ತಾವೇ ಮರೆಯಾಗಿ ಹೋದರು. ತುತ್ತು ಅನ್ನ, ಬೊಗಸೆ ನೀರು ಸಾಕೆನಿಸಿದಿದ್ದರೆ ಅದಕ್ಕೂ ಕಲ್ಲು ಬೀಳುವ ಕಾಲ ಬರಬಹುದು. ಇದು ಬರೀ ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಘರ್ಷಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಸಮಾಜದಲ್ಲಿ ಪ್ರತಿಷ್ಠೆಯ ಸ್ಪರ್ಧೆಗೆ ಬಿದ್ದ ಪ್ರತಿಯೊಬ್ಬರಿಗೂ ತುತ್ತು ಅನ್ನ, ಬೊಗಸೆ ನೀರು ಇವುಗಳ ಮಹತ್ವ ತಿಳಿಯದೆ ಹೋದರೆ ಅದನ್ನು ಕಲಿಸುವ ಕಾಲ ಬಂದೇ ಬಿಡುತ್ತದೆ.