"ತುತ್ತು ಅನ್ನ ತಿನ್ನೋಕೆ,
ಬೊಗಸೆ ನೀರು ಕುಡಿಯೋಕೆ,
ತುಂಡು ಬಟ್ಟೆ ಸಾಕು ನಮ್ಮ ಮಾನ ಮುಚ್ಚೋಕೆ,
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ"
ವಿಷ್ಣುವರ್ಧನ್ ಹಾಡಿದ ಈ ಹಾಡು ಅಂದಿಗೆ ಜನಪ್ರಿಯವಾಗಿತ್ತು. ಇಂದಿಗೂ ಕೇಳಲು ಯೋಗ್ಯವಾಗಿದೆ. ಇರುವ ಸ್ವಲ್ಪದರಲ್ಲೇ ಮನುಷ್ಯ ನೆಮ್ಮದಿಯಾಗಿ ಬದುಕಬಹುದು ಎನ್ನುವುದು ಅದರ ಸಂದೇಶವಾಗಿತ್ತು. ಆದರೆ ನಾವು ಬದುಕುವ ರೀತಿ ನೋಡಿ? ಇಂದಿಗೆ ತಿನ್ನುವುದಕ್ಕೆ ತುತ್ತು ಅನ್ನ ಸಾಕಾದರೂ, ನಾಳೆಗೆ, ನಾಡಿದ್ದಕ್ಕೆ ಹೀಗೆ ಮತ್ತೆ ತುತ್ತು ಅನ್ನ ಬೇಕಲ್ಲ. ಅದಕ್ಕೆ ಸಾಧ್ಯವಾದಷ್ಟು ಅಕ್ಕಿ ಪ್ಯಾಕೆಟ್ ಗಳನ್ನು ಮನೆಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತೇವೆ. ಗೋದಾಮುಗಳಲ್ಲಿ ಕೆಲ ವರುಷಗಳಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿ ದಾಸ್ತಾನು ಲಭ್ಯ. ಕುಡಿಯುವುದು ಬೊಗಸೆ ನೀರೇ ಆದರೂ, ಮನೆಯಲ್ಲಿ ಸಾವಿರಾರು ಲೀಟರ್ ನೀರು ಹಿಡಿದಿಡುವ ಟ್ಯಾಂಕ್ ಕಟ್ಟಿಸುತ್ತೇವೆ. ಹಾಗೆಯೇ ಊರಿಗೊಂದು ಕೆರೆ, ನದಿಗೊಂದು ಆಣೆಕಟ್ಟು. ಅವೆಲ್ಲ ಮನುಷ್ಯನ ದಾಹ ನೀಗಿಸುವುದಕ್ಕೆ. ಒಂದು ದಿನಕ್ಕಲ್ಲ. ಬರಲಿರುವ ದಿನಗಳಿಗೂ ಕೂಡ. ತುಂಡು ಬಟ್ಟೆ ಸಾಕು ನಮ್ಮ ಮಾನ ಮುಚ್ಚೋಕೆ. ಆದರೆ ನಮ್ಮ ಅಂದ ಚೆಂದಕೆ ಬೇಕು ಹಲವಾರು ಡಜನ್ ಬಟ್ಟೆಗಳು. ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ. ಆದರೆ ನಮಗೆ ಬೇಕು ಕನಿಷ್ಠ ೩೦ x ೪೦ ಅಡಿಯ ಮನೆ. ಉಳ್ಳವರಿಗೆ ಅವರಿಗೆ ಅಂತಸ್ತಿಗೆ ತಕ್ಕಂತೆ ವಿಶಾಲವಾದ ಮನೆ.
ಪ್ರಕೃತಿ ಸೃಷ್ಟಿಸಿದ ಜೀವ ಸಂಕುಲದಲ್ಲಿ ಮನುಷ್ಯನನ್ನು ಹೊರತು ಪಡಿಸಿದರೆ, ಇಂತಹ ಅನುಕೂಲಗಳು ಯಾವುದೇ ಪ್ರಾಣಿ, ಪಕ್ಷಿಗಿಲ್ಲ. ಅವುಗಳೆಲ್ಲ ಅಂದಿನ ಆಹಾರ ಅಂದೇ ಹುಡುಕಿಕೊಳ್ಳಬೇಕು. ಇಲ್ಲದಿದ್ದರೆ ಉಪವಾಸ. ಅವಕ್ಕೆ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳುವುದು ಕೂಡ ಗೊತ್ತಿಲ್ಲ. ಯಾವ ಹುಲಿ, ಸಿಂಹಕ್ಕೂ ಜಗತ್ತಿನಲ್ಲಿರುವ ಕಾಡಿಗೆಲ್ಲ ತಾನೊಬ್ಬನೇ ರಾಜ ಆಗಬೇಕೆನ್ನುವ ಆಸೆ ಇಲ್ಲ. ಆದರೆ ಮನುಷ್ಯ ಪ್ರಪಂಚದಲ್ಲಿ ಉಂಟು ಅಲೆಕ್ಸಾಂಡರ್, ನೆಪೋಲಿಯನ್, ಹಿಟ್ಲರ್.
ಕಾಡು ಪೋಷಿಸಿದಷ್ಟು ಮಾತ್ರ ಜಿಂಕೆಗಳ ಇರಲು ಸಾಧ್ಯ. ಅವುಗಳ ಸಂಖ್ಯೆ ಹೆಚ್ಚಾಗದಂತೆ ಆಹಾರ ಸರಪಣಿಯ ಪಿರಮಿಡ್ ನಲ್ಲಿ ಹುಲಿಗಳಿವೆ. ಮನುಷ್ಯನನ್ನು ಬೇಟೆ ಆಡುವ ಪ್ರಾಣಿಗಳಿಗೆ ಉಳಿಗಾಲ ಎಲ್ಲಿದೆ? ಕಾಳ್ಗಿಚ್ಚು ಬಿದ್ದಾಗ ಅಳಿಲಿನಿಂದ ಆನೆಯವರೆಗೆ ಎಲ್ಲವೂ ಜೀವ ಕಳೆದುಕೊಳ್ಳುತ್ತವೆ. ಆದರೆ ಮನುಷ್ಯನಿಗೆ ಇಂತಹ ಅವಘಡಗಳಿಂದ ಪಾರಾಗುವ ಬಗೆ ಗೊತ್ತಿದೆ. ಮನುಷ್ಯ ಜನಸಂಖ್ಯೆಗೆ ಮಾತ್ರ ಇಲ್ಲ ಮಿತಿ.
ಮನುಷ್ಯ ಜನಸಂಖ್ಯೆ ಜಾಸ್ತಿಯಾದಂತೆಲ್ಲ, ಪ್ರಕೃತಿ ಮತ್ತು ಇತರ ಪ್ರಾಣಿ ಸಂಕುಲದ ಮೇಲೆ ಮನುಷ್ಯನ ದಬ್ಬಾಳಿಕೆ ಕೂಡ ಹೆಚ್ಚುತ್ತಾ ಹೋಗುತ್ತದೆ. ಕೆಲವು ಚಲನಚಿತ್ರಗಳಲ್ಲಿ ಮನುಷ್ಯ ನಿರ್ಮಿತ ರೋಬೋಟ್ ಗಳು ತಾವೇ ಪರಿಸ್ಥಿತಿಯನ್ನು ಕೈಗತ್ತಿಗೊಂಡು ತಮ್ಮನ್ನು ನಿರ್ಮಿಸಿದವರ ಮೇಲೆ ಧಾಳಿಗೆ ಮುಂದಾಗುತ್ತವಲ್ಲ. ಇಂದಿಗೆ ಪ್ರಕೃತಿಗೆ ಕೂಡ ಮನುಷ್ಯನ ಬಗ್ಗೆ ಹಾಗೆಯೇ ಅನಿಸುತ್ತಿರಬಹುದಲ್ಲವೇ?
ಮನುಷ್ಯರ ಜನಸಂಖ್ಯೆ ಮತ್ತು ದುರಾಸೆ ಕಡಿಮೆ ಆಗದಿದ್ದಲ್ಲಿ, ಪ್ರಕೃತಿ ತನ್ನ ಯೋಜನೆ ಬದಲಿಸದೆ ಇರದು. ಡೈನೋಸಾರ್ ಭೂಮಿಗೆ ಭಾರವಾದಾಗ ಪ್ರಕೃತಿಯ ಯಾವುದೊ ಯೋಜನೆಗೆ ಸಿಕ್ಕಿ ಕಣ್ಮರೆಯಾದವು. ಎಷ್ಟೋ ಮನುಷ್ಯ ನಾಗರಿಕತೆಗಳು (ಉದಾಹರಣೆಗೆ ಮಾಯನ್ ನಾಗರೀಕತೆ) ಪ್ರಕೃತಿಯ ವಿಕೋಪಕ್ಕೆ ಸಿಕ್ಕಿ ತಮ್ಮ ಅಸ್ತಿತ್ವ ಕಳೆದುಕೊಂಡವು. ಪ್ರಕೃತಿಯನ್ನು ಗೆಲ್ಲಲು ಹೊರಟವರು ತಾವೇ ಮರೆಯಾಗಿ ಹೋದರು. ತುತ್ತು ಅನ್ನ, ಬೊಗಸೆ ನೀರು ಸಾಕೆನಿಸಿದಿದ್ದರೆ ಅದಕ್ಕೂ ಕಲ್ಲು ಬೀಳುವ ಕಾಲ ಬರಬಹುದು. ಇದು ಬರೀ ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಘರ್ಷಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಸಮಾಜದಲ್ಲಿ ಪ್ರತಿಷ್ಠೆಯ ಸ್ಪರ್ಧೆಗೆ ಬಿದ್ದ ಪ್ರತಿಯೊಬ್ಬರಿಗೂ ತುತ್ತು ಅನ್ನ, ಬೊಗಸೆ ನೀರು ಇವುಗಳ ಮಹತ್ವ ತಿಳಿಯದೆ ಹೋದರೆ ಅದನ್ನು ಕಲಿಸುವ ಕಾಲ ಬಂದೇ ಬಿಡುತ್ತದೆ.
No comments:
Post a Comment