Tuesday, November 9, 2021

ಎಲ್ಲಮ್ಮನ ಮಕ್ಕಳು

(William Dalrymple ಬರೆದ 'Nine Lives' ಪುಸ್ತಕದ 'The Daughters of Yellamma' ಅಧ್ಯಾಯದ ಭಾವಾನುವಾದ ಮತ್ತು ಕಿರು ರೂಪ)

 

"ಹೌದು, ಕೆಲವೊಂದು ಸಲ ಅದರಲ್ಲಿ ಸುಖ ಇದೆ" ಎಂದಳು ರಾಣಿಬಾಯಿ. "ಯಾರಿಗೆ ದೈಹಿಕ ಸುಖ ಹೊಂದುವುದು ಇಷ್ಟವಿಲ್ಲ? ಸುಂದರ ಯುವಕ, ಸೌಮ್ಯವಾಗಿ ನಡೆಸಿಕೊಳ್ಳುವಾಗ..."

 

ತನ್ನ ಮಾತನ್ನು ಅರೆಕ್ಷಣ ನಿಲ್ಲಿಸಿ, ಕೆರೆಯ ಕಡೆ ನೋಡುತ್ತಾ ತನ್ನಲ್ಲೇ ನಕ್ಕಳು. ಮರು ಘಳಿಗೆ ಅವಳ ಮುಖ ಕಪ್ಪಿಟ್ಟಿತು "ಇಲ್ಲಿನ ಜನ ಒರಟರು, ಬಾಂಬೆ ಯ ಹುಡುಗರ ಹಾಗಲ್ಲ"

 

"ದಿನಕ್ಕೆ ಎಂಟು ಜನ" ಎಂದು ಸೇರಿಸಿದಳು ಅವಳು ಸ್ನೇಹಿತೆ ಕಾವೇರಿ. "ಕೆಲವೊಂದು ಸಲ ಹತ್ತು. ಎಲ್ಲ ಗೊತ್ತಿಲ್ಲದ ಜನರು. ಅದೆಂತಹ ಜೀವನ?" ರಾಣಿಬಾಯಿ ಹೇಳಿದಳು "ಎಲ್ಲರು ನಮ್ಮ ಜೊತೆ ಮಲಗುತ್ತಾರೆ ಆದರೆ ಮದುವೆಯಾಗುವುದಿಲ್ಲ. ನಮ್ಮನ್ನು ಅಪ್ಪಿಕೊಳ್ಳುತ್ತಾರೆ ಆದರೆ ರಕ್ಷಿಸುವುದಿಲ್ಲ"

 

"ಇದನ್ನು ಬಿಟ್ಟು ನಮಗೆ ಬದಲಿ ದಾರಿಯೆಲ್ಲಿದೆ? ಓದು, ಬರಹ ಗೊತ್ತಿರದ ನಮಗೆ ಯಾರು ಕೆಲಸ ಕೊಡುತ್ತಾರೆ? ದೇಹ ಸೌಂದರ್ಯ ಕಳೆದು ಹೋದಾಗ ನಾವು ಒಂಟಿಯಾಗಿ ಹೋಗುತ್ತೇವೆ. ಮತ್ತೆ ರೋಗಗಳು? ಕಳೆದ ವಾರವಷ್ಟೇ ಗುಪ್ತ ರೋಗಕ್ಕೆ ದೇವದಾಸಿಯೊಬ್ಬಳು ತೀರಿ ಹೋದಳು"

 

"ಎಲ್ಲಮ್ಮ ಇದು ಹೀಗಾಗಲು ಬಯಸಿರಲಿಲ್ಲ. ಜಗತ್ತು ಇದನ್ನು ಮಾಡಿದ್ದು. ಮತ್ತು ರೋಗಗಳನ್ನು ಕೂಡ ಅದೇ ತಂದದ್ದು. ನಮ್ಮ ದೇವಿಗೆ ನಮ್ಮ ಕಣ್ಣೀರು ಒರೆಸುವುದು ಬಿಟ್ಟು ಬೇರೇನು ಮಾಡಲು ಸಾಧ್ಯ?"

 

ಬೆಳಗಾಂ ನಿಂದ ನಾವು ಬಂದಿದ್ದು ಸವದತ್ತಿಯ ಎಲ್ಲಮ್ಮಳ ದರುಶನಕ್ಕೆ. ರಾಣಿಬಾಯಿ, ಕಾವೇರಿ ಮತ್ತು ನಾನು. ಬೆಟ್ಟದ ಮೇಲೆ ದೇವಸ್ಥಾನ, ಪಕ್ಕದಲ್ಲೊಂದು ಹೊಂಡ. ಋಷಿ ಜಮದಗ್ನಿಯ ಹೆಂಡತಿ ಎಲ್ಲಮ್ಮ ಕಾಮದಾಸೆಗೆ ಸಿಲುಕಿ, ಗಂಡನಿಂದ ಶಾಪಗ್ರಸ್ಥಳಾದ ಕಥೆ ಇಲ್ಲೇ ನಡೆದಿದ್ದು ಎಂದು ಪ್ರತೀತಿ.

 

"ನನ್ನ ಹೆತ್ತವರು ನನ್ನನು ದೇವರಿಗೆ ಅರ್ಪಿಸಿದಾಗ ನನಗೆ ಕೇವಲ ಆರು ವರುಷ" ತನ್ನ ಕಥೆ ಹೇಳಲು ಶುರುವಿಟ್ಟಳು ರಾಣಿಬಾಯಿ. "ಅಂದಿಗೆ ನನಗೆ ಯಾವ ವಿಚಾರಗಳು ತಿಳಿದಿರಲಿಲ್ಲ. ನನ್ನ ಅಪ್ಪ ಇದರಿಂದ ನಮ್ಮ ಬಡತನ ಕಳೆದು ಹೋಗುವುದು ಎಂದು ಹೇಳಿದ್ದಷ್ಟೇ ಗೊತ್ತು. ದುಡ್ಡು ಗಳಿಸುವ ವಿಚಾರ ಇಷ್ಟ ಆದರೂ ಅದು ಎಲ್ಲಿಂದ ಬರುವುದು ಎಂದು ತಿಳಿದಿರಲಿಲ್ಲ"

 

"ನಾನು ಋತುಮತಿಯಾದ ಕೆಲವೇ ದಿನಗಳಿಗೆ, ನನ್ನನ್ನು ಪಕ್ಕದ ಹಳ್ಳಿಯ ಕುರಿ ಕಾಯುವವನಿಗೆ ೫೦೦ ರೂಪಾಯಿಗೆ ಮಾರಿ ಬಿಟ್ಟ. ಅಷ್ಟೊತ್ತಿಗೆಲ್ಲ ನಮ್ಮ ಪಕ್ಕದ ಗುಡಿಸಲುಗಳಿಗೆ ಗಂಡಸರು ಬಂದು ಹೋಗುವುದನ್ನು ಗಮನಿಸಿದ್ದ ನನಗೆ ಮುಂದೆ ಇರುವ ಜೇವನದ ಅಂದಾಜು ಸಿಗಲಾರಂಭಿಸಿತ್ತು. ಒಂದು ದಿನ ನನ್ನನ್ನು ಪಕ್ಕದ ಹಳ್ಳಿಗೆ ಕರೆದುಕೊಂಡು ಹೋಗಿ, ನನ್ನ ಚಿಕ್ಕಮ್ಮ, ಅವಳೂ ಕೂಡ ದೇವದಾಸಿ, ಅವಳ ಮನೆಯಲ್ಲಿ ಬಿಟ್ಟು ನನ್ನ ಮನೆಯವರೆಲ್ಲ ವಾಪಸ್ಸು ಹೋಗಿಬಿಟ್ಟರು. ಆಗ ಏನೋ ನಡೆಯುವುದರ ಸುಳಿವು ಸಿಕ್ಕ ನಾನು ದೊಡ್ಡ ದನಿಯಲ್ಲಿ ರೋದಿಸತೊಡಗಿದೆ. ನನ್ನ ದೇವದಾಸಿ ಚಿಕ್ಕಮ್ಮ, ನಾನು ಅಳಬಾರದು, ಇದು ನಮ್ಮ ಧರ್ಮ, ಅಳುವುದು ಮಂಗಳವಲ್ಲ ಎಂದು ಭೋದಿಸಿದಳು. ಗಂಡಸು ಬಂದೊಡನೆ ಮನೆಯಿಂದ ಹೊರ ನಡೆದಳು ಚಿಕ್ಕಮ್ಮ. ಬಂದವನು ಬಲಿಷ್ಠ, ಏನು ಹೊಡೆದರು, ಚೂರಿದರೂ ಬಿಡಲಿಲ್ಲ. ನನ್ನನ್ನು ಉಪಯೋಗಿಸಿಕೊಂಡು, ಒಪ್ಪಿಕೊಂಡಿದ್ದ ೫೦೦ ರೂಪಾಯಿ ಕೂಡ ಕೊಡದೆ ಓಡಿ ಹೋದ"

 

"ಮರುದಿನ ನನ್ನ ಚಿಕ್ಕಮ್ಮಳ ಮೇಲೆ ಕೂಗಾಡಿದೆ, ನೀನು ಒಬ್ಬ ಸೂಳೆ. ನನ್ನನ್ನು ಕೂಡ ಒಬ್ಬ ಸೂಳೆ ಮಾಡಿಬಿಟ್ಟೆ. ಅದಾಗಿ ಕೆಲ ದಿನಗಳಿಗೆ ಅದೇ ಚಿಕ್ಕಮ್ಮ ನನ್ನನ್ನು ಬಾಂಬೆ ಗೆ ಸುತ್ತಾಡಿಸಿವುದಕ್ಕೆ ಎಂದು ಕರೆದುಕೊಂಡು ಹೋದಳು. ಅದು ಕೂಡ ಒಂದು ಉಪಾಯ ಎಂದು ನನಗೆ ತಿಳಿಯದೆ ಹೋಯಿತು. ಸೀದಾ ಒಬ್ಬ ಘರವಾಲಿ ಮನೆಗೆ ಕರೆದುಕೊಂಡು ಹೋಗಿ ೨೦೦೦ ರೂಪಾಯಿಗೆ ನನ್ನನ್ನು ಮಾರಿಬಿಟ್ಟಳು. ಆ ಘರವಾಲಿ ನನಗೆ ಸೀದಾ ದಂಧೆಗೆ ಇಳಿಸಲಿಲ್ಲ. ಕೆಲವು ದಿನ ಅಲ್ಲಿ ಅಡಿಗೆ, ಮನೆ ಕೆಲಸ ಮಾಡಿಕೊಂಡಿದ್ದೆ. ಕ್ರಮೇಣ ದಂಧೆಗೆ ಇಳಿಯದೆ ಬೇರೆ ದಾರಿ ಇರಲಿಲ್ಲ. ಇಬ್ಬರು ಮಕ್ಕಳಾದವು. ಅಲ್ಲಿ ದುಡಿದ ದುಡ್ಡಿನಲ್ಲಿ ತಂಗಿಯ ಮದುವೆ ಮಾಡಿದೆ. ಊರಲ್ಲಿ ಎಂಟು ಎಕರೆ ಜಮೀನು ಖರೀದಿ ಮಾಡಿ, ಎಮ್ಮೆ ಸಾಕಿದ್ದೇನೆ. ಇಷ್ಟರಲ್ಲೇ ಈ ಕೆಲಸ ಬಿಟ್ಟು ಎಮ್ಮೆ ಹಾಲು ಮಾರಿ ಜೀವನ ಮಾಡುತ್ತೇನೆ."

 

"ನನ್ನ ದೊಡ್ಡ ಮಗಳು ಸಣ್ಣ ವಯಸ್ಸಿನಲ್ಲೇ ಯಾರದೋ ಜೊತೆ ಓಡಿ ಹೋದಳು. ಅವಳು ವಾಪಸ್ಸು ಬಂದ ಮೇಲೆ ಅವಳನ್ನು ಯಾರೂ ಮದುವೆ ಆಗಲು ಒಪ್ಪಲಿಲ್ಲ. ಅವಳನ್ನು ದೇವದಾಸಿ ಮಾಡಿಬಿಟ್ಟೆ. ಚಿಕ್ಕ ಮಗಳಿಗೆ ಚರ್ಮದ ಮೇಲೆ ಬಿಳಿ ಮಚ್ಛೆಗಳಿದ್ದವು. ಅವಳಿಗೆ ಮದುವೆ ಮಾಡಲು ಆಗದೆ ಅವಳನ್ನು ಕೂಡ ದೇವದಾಸಿಯನ್ನಾಗಿ ಮಾಡಿಬಿಟ್ಟೆ. ನನ್ನನ್ನು ದೇವರಿಗೆ ಅರ್ಪಿಸಿದಾಗ ನನ್ನ ತಾಯಿಯನ್ನು ಬೈದುಕೊಂಡಿದ್ದ ನಾನು ಅದೇ ಕೆಲಸ ಮಾಡದೆ ಬೇರೆ ದಾರಿಯೇ ಇರಲಿಲ್ಲ"

 

"ನಾನು ಮಾಡಿದ್ದ ಪಾಪಗಳಿಗೋ ಏನೋ, ಇಂದಿಗೆ ಅವರಿಬ್ಬರೂ ಜೀವಂತ ಇಲ್ಲ". ಅದೇನಾಯಿತು ಎಂದು ಸ್ಪಷ್ಟವಾಗಿ ರಾಣಿಬಾಯಿ ಹೇಳದಿದ್ದರೂ, ನನಗೆ ಬೇರೆಯವರಿಂದ ತಿಳಿಯಿತು ಅವರು ಬಲಿಯಾಗಿದ್ದು ಏಡ್ಸ್ ಗೆ ಎಂದು.

 

ಸಂಜೆ ಹೊತ್ತಿಗೆ ಕಾವೇರಿಯನ್ನು ಅವಳ ಮನೆ ತಲುಪಿಸಿ, ರಾಣಿಬಾಯಿ ಯನ್ನು ಅವಳ ಊರಿಗೆ ತಲುಪಿಸಲು ಕಾರು ಹತ್ತಿದೆವು. ದಾರಿಯುದ್ದಕ್ಕೂ ಮಾತನಾಡುತ್ತ ಹೋದಳು ರಾಣಿಬಾಯಿ. "ನಮಗೆ, ದೇವದಾಸಿಯರಿಗೆ ಕೆಲ ಸೌಲಭ್ಯಗಳಿವೆ. ಹಬ್ಬಗಳಲ್ಲಿ ಜನ ನಮ್ಮ ಆಶೀರ್ವಾದ ತೆಗೆದುಕೊಳ್ಳುತ್ತಾರೆ. ನಾವು ದೇವಿಯ ಅವತಾರ ಎಂದು ಪೂಜೆ ಮಾಡುತ್ತಾರೆ. ನಾವು ಸಾಧಾರಣ ಸೂಳೆಯರಲ್ಲ. ನಮಗೆ ಘನತೆಯಿದೆ. ಆದರೆ ಸಂಭೋಗ, ಸಂಭೋಗವೇ. ಅಲ್ಲಿ ಯಾವ ದೈವತ್ವವು ಇಲ್ಲ."

 

"ರೋಗಗಳ ಬಗ್ಗೆ ನಿನಗೆ ಹೆದರಿಕೆ ಇಲ್ಲವೇ?" ನಾನು ಕೇಳಿದೆ.

 

"ಏಕಿಲ್ಲ? ಆದರೆ ನಾವು ಊಟ ಮಾಡಬೇಕೆಂದರೆ ನಮ್ಮ ಕೆಲಸ ಮುಂದುವರೆಸಲೇ ಬೇಕು. ದುಃಖ ಭರಿಸುವುದು ನಮ್ಮ ಕರ್ಮ. ಸಂತೋಷದ ಮುಖ ಹೊತ್ತು ಆಕರ್ಷಿಸಿಸದಿದ್ದರೆ ನಮ್ಮ ಹತ್ತಿರ ಬರುವರಾರು?" ರಾಣಿಬಾಯಿ ಉತ್ತರ ಕೊಟ್ಟಳು.

 

"ನಿನಗೆ ಭವಿಷ್ಯದ ಬಗ್ಗೆ ಆಸೆ ಇಲ್ಲವೇ?"

 

"ಏಕಿಲ್ಲ? ಅದಕ್ಕೆಂದೇ ಹೊಲ ಕೊಂಡುಕೊಂಡು ಎಮ್ಮೆ ಸಾಕಿದ್ದೇನೆ. ಇನ್ನು ಸ್ವಲ್ಪ ಹಣ ಉಳಿಸಿಕೊಂಡು ಅಲ್ಲಿಗೆ ಹೋಗಿ ನಿವೃತ್ತಿ ತೆಗೆದುಕೊಳ್ಳುತ್ತೇನೆ"

 

ರಾಣಿಬಾಯಿಯನ್ನು ಅವಳ ಮನೆಗೆ ಬಿಟ್ಟು ಬೆಳಗಾಂ ಗೆ ಮರಳಿದೆ. ಅಲ್ಲಿ ದೇವದಾಸಿಯರ ಜೊತೆ ಕೆಲಸ ಮಾಡುವ NGO ಸಂಸ್ಥೆಯಲ್ಲಿ ರಾಣಿಬಾಯಿಯ ಬಗ್ಗೆ ಮತ್ತು ಅವಳ ನಿವೃತ್ತಿ ಯೋಜನೆ ಬಗ್ಗೆ  ವಿಚಾರಿಸಿದೆ. ಅಲ್ಲಿ ತಿಳಿದು ಬಂತು ಈಗಾಗಲೇ ರಾಣಿಬಾಯಿಗೆ ಅವಳ ಮಕ್ಕಳಿಗೆ ಇದ್ದ ರೋಗ ಅಂಟಿಕೊಂಡು ಕೆಲವು ತಿಂಗಳುಗಳೇ ಕಳೆದಿವೆ. ಔಷಧಗಳು ಕೆಲ ದಿನಗಳ ಮಟ್ಟಿಗೆ ರೋಗ ಲಕ್ಷಣಗಳನ್ನು ಕಡಿಮೆ ಮಾಡಿದರು, ಸಂಪೂರ್ಣ ಗುಣ ಮಾಡಲಾರವು. ಅವಳು ತನ್ನ ಜಮೀನಿಗೆ ಹೋಗಿ ನಿವೃತ್ತಿ ತೆಗೆದುಕೊಳ್ಳುವುದಕ್ಕೆ ಈಗಾಗಲೇ ಕಾಲ ಮಿಂಚಿ ಹೋಗಿದೆ.

No comments:

Post a Comment