Sunday, June 19, 2022

ಕಥೆ: ಸೌಂದರ್ಯ ತಂದ ದುರಾದೃಷ್ಟ

(ಇತಿಹಾಸದ ಹಲವಾರು ಅಂಶಗಳನ್ನು ಒಟ್ಟು ಮಾಡಿ ಬರೆದ ಕಾಲ್ಪನಿಕ ಕಥೆ)

 


ಅದು
೧೪ನೇ ಶತಮಾನ. ವಿಜಯನಗರದ ಸಂಸ್ಥಾಪಕರಲ್ಲಿ ಒಬ್ಬನಾದ ಬುಕ್ಕರಾಯನ ಮೊಮ್ಮಗ ದೇವರಾಯ ಆಳ್ವಿಕೆ ನಡೆಸುತ್ತಿದ್ದ ಕಾಲ. ವಿಜಯನಗರವು ತುಂಗಭದ್ರೆಯ ದಡದಲ್ಲಿ ಹುಟ್ಟಿದರೂ ಅದು ಕಾಲ ಕ್ರಮೇಣ ಕೃಷ್ಣ, ಭೀಮಾ ನದಿಗಳವರೆಗೂ ಹಬ್ಬಿತ್ತು. ಅದೊಂದು ದಿನ ಒಬ್ಬ ಅರ್ಚಕನೊಬ್ಬ ರಾಜನನ್ನು ಭೇಟಿಯಾಗಲು ರಾಜಧಾನಿ ಹಂಪೆಗೆ ಬಂದಿದ್ದ. ರಾಜನನ್ನು ಕಾಣಲು ತವಕಿಸುವ ಕವಿಗಳು, ವಿದ್ವಾಂಸರು, ಅರ್ಚಕರಿಗೇನು ಹಂಪೆಯಲ್ಲಿ ಕಡಿಮೆ ಇರಲಿಲ್ಲ. ಆಸ್ಥಾನದಲ್ಲಿ ತುಂಬಿದ್ದ ಹರಟೆ, ಸದ್ದು-ಗದ್ದಲಗಳೆಲ್ಲ ರಾಜನ ಆಗಮನದೊಂದಿಗೆ ಮೌನವಾಯಿತು. ರಾಜಯೋಗ್ಯ ವಸ್ತ್ರಗಳಲ್ಲಿ ಅಲಂಕೃತನಾಗಿದ್ದ ರಾಜ, ಸಿಂಹಾಸನದಲ್ಲಿ ಕುಳಿತು ಸಂಜ್ಞೆ ಮಾಡಿದೊಡನೆ ಮತ್ತೆ ಸಭೆಯ ಕಲಾಪಗಳು ಆರಂಭವಾದವು. 

 

ಅರ್ಚಕನ ಸರದಿ ಬಂದಾಗ, ಅವನು ರಾಜನಿಗೆ ವಂದಿಸುತ್ತಾ ಹೇಳಿದ "ಮನ್ಮಥನಂತೆ ಕಂಗೊಳಿಸುತ್ತ ಇರುವ ರಾಜನೇ, ನಿನ್ನ ಪಕ್ಕ ಒಬ್ಬ ರತಿಯೂ ಕುಳಿತಿದ್ದರೆ ಅದು ನೋಡುಗರ ಕಣ್ಣಿಗೆ ಹಬ್ಬವಾಗುತ್ತಿತ್ತು"        

 

ಆಶ್ಚರ್ಯ ಚಕಿತನಾದ ರಾಜ ಕೇಳಿದ "ಅರ್ಚಕರೇ, ರತಿಯಂತಹ ಸುಂದರಿಯನ್ನು ನೀವು ಎಲ್ಲಾದರೂ ನೋಡಿದ್ದೀರಾ?"

 

ಅರ್ಚಕ ಹೇಳಿದ "ಹೌದು ಮಹಾರಾಜ. ರತಿಯೇ ನಿಮಗಾಗಿ ಮರು ಜನ್ಮ ತಾಳಿ ಬಂದಿದ್ದಾಳೆ. ಹಂಸದ ನಡಿಗೆ, ಉದ್ದನೆಯ ಕೇಶ ರಾಶಿ, ಕೋಗಿಲೆಯ ಕಂಠ. ಅವಳ ಅಂದವನ್ನು ಹೊಗಳಲು ಪದಗಳು ಸಾಲವು"

 

ರಾಜನಲ್ಲಿ ಆಸೆ ಹುಟ್ಟಿತು. "ಅವಳು ಇರುವುದು ಎಲ್ಲಿ? ಅವಳ ತಂದೆ-ತಾಯಿ ಯಾರು?"

 

ಅರ್ಚಕ ಉತ್ತರಿಸಿದ "ಅವಳು ಮುದಗಲ್ ನಲ್ಲಿ ಇರುವ ಒಬ್ಬ ಅಕ್ಕಸಾಲಿಗನ ಮಗಳು"

 

ರಾಜ ತನ್ನಲ್ಲೇ ವಿಚಾರ ಮಾಡಿದ 'ಮುದಗಲ್ ಇರುವುದು ನಮ್ಮ ಶತ್ರುಗಳ ಸರಹದ್ದಿನಲ್ಲಿ  ಅಲ್ಲವೇ?' ಮತ್ತು ಅರ್ಚಕನನ್ನು ಉದ್ದೇಶಿಸಿ ಹೇಳಿದ "ನೀನು ನಮಗೆ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು. ನೀನು ನಮ್ಮ ರಾಯಭಾರಿಯಾಗಿ ಅಲ್ಲಿಗೆ ತೆರಳಿ ಅವಳನ್ನು ವರಿಸುವ ನಮ್ಮ ಆಸೆಯನ್ನು ತಿಳಿಸಿ."

 

ಬಂಗಾರ, ವಜ್ರದ ಆಭರಣಗಳನ್ನು ಹುಡುಗಿಯ ಕುಟುಂಬಕ್ಕೆ ಕಾಣಿಕೆಯಾಗಿ ಅರ್ಪಿಸಲು ತೆಗೆದುಕೊಂಡು ಪ್ರಯಾಣ ಬೆಳೆಸಿದ ಅರ್ಚಕ. ಮುದುಗಲ್ ಪಟ್ಟಣದ ಅಕ್ಕಸಾಲಿಗನ ಮನೆ ತಲುಪಿದ. ಅವರಿಗೆ ವಿಷಯ ತಿಳಿಸಿದ.

 

ಆಶ್ಚರ್ಯ, ಸಂತೋಷ ಅವರಿಗೆ ಒಟ್ಟಿಗೆ ಆಗಿ ಅಕ್ಕಸಾಲಿಗ ತನ್ನ ಮಗಳಿಗೆ ಹೇಳಿದ "ನಾಳೆಯೇ ಹಂಪೆಗೆ ಹೊರಟು ಬಿಡೋಣ. ಒಳ್ಳೆಯ ರೇಷ್ಮೆ ಸೀರೆ ಉಟ್ಟು ರಾಣಿಯ ಹಾಗೆ ತಯಾರಿ ಆಗಿಬಿಡು".

 

ಅವನ ಮಗಳು ಪೆರ್ತಾಳ್ ತನಗೆ ಮದುವೆ ಇಷ್ಟ ಇಲ್ಲ ಎಂದು ಹೇಳಿದಳು. "ನಾನು ರಾಣಿಯಾದರೆ ಸಾಮಾನ್ಯರಂತೆ ಬದುಕಲು ಸಾಧ್ಯವಿಲ್ಲ. ನಿಮ್ಮನ್ನು ಬಿಟ್ಟು ದೂರ ಬಾಳಲು ನಾನು ಸಿದ್ಧಳಿಲ್ಲ"

 

ಪೆಚ್ಚು ಮೊರೆ ಹಾಕಿಕೊಂಡು ಅರ್ಚಕ ಹಿಂದಿರುಗಿದ. ವಿಷಯ ಅರಿತು ರಾಜ ಕೋಪದಿಂದ ಕೆಂಡಾಮಂಡಲನಾದ. ತನಗಾದ ಅವಮಾನ ಸರಿಪಡಿಸಲು ಎರಡು ಸಾವಿರ ಕುದುರೆ ಸವಾರರನ್ನು ಕರೆದುಕೊಂಡು ತನ್ನ ಶತ್ರುಗಳಾದ ಬಹಮನಿ ಸುಲ್ತಾನರ ರಾಜ್ಯಕ್ಕೆ ಸೇರಿದ ಮುದಗಲ್ ಪಟ್ಟಣಕ್ಕೆ ಲಗ್ಗೆ ಹಾಕಿದ. ಕುದುರೆಗಳು ನಾಗಾಲೋಟದಲ್ಲಿ ಬರುವುದು ದೂರದಿಂದ ಗಮನಿಸಿದ ಊರಿನ ಜನರು ಕೈಗೆ ಸಿಕ್ಕ ಸಾಮಾನುಗಳನ್ನು ತೆಗೆದುಕೊಂಡು ಊರು ತೊರೆದು ಹೋದರು. ರಾಜ ಬರುವ ಹೊತ್ತಿಗೆಲ್ಲ ಪಟ್ಟಣದ ಬೀದಿಗಳೆಲ್ಲ ಖಾಲಿಖಾಲಿ. ಪೆರ್ತಾಳ್ ಕುಟುಂಬ ಕೂಡ ಊರು ಬಿಟ್ಟು ಹೋಗಿತ್ತು. ಅದನ್ನು ಕಂಡು ಹತಾಶನಾದ ರಾಜ, ಹಿಂತಿರುಗುವ ಮುನ್ನ ಸುತ್ತ ಮುತ್ತಲಿನ ಪ್ರದೇಶ ಹಾಳುಗೆಡವಲು ಆದೇಶ ನೀಡಿದ.

 

ಸುದ್ದಿ ಬಹಮನಿ ಸುಲ್ತಾನ ಫಿರೋಜ್ ಶಾನಿಗೆ ತಲುಪಲು ತಡ ಆಗಲಿಲ್ಲ. ವಿಜಯನಗರವನ್ನು ಆಕ್ರಮಣ ಮಾಡಲು ಇದೆ ಸುಸಂದರ್ಭ ಎಂದರಿತು ಅವನು ತನ್ನ ಸಂಪೂರ್ಣ ಸೇನೆಯೊಂದಿಗೆ ಹಂಪಿ ತಲುಪಿಯೇ ಬಿಟ್ಟ. ಇದು ದೇವರಾಯ ನಿರೀಕ್ಷಿಸಿರಿರಲಿಲ್ಲ. ಅವನು ತನ್ನ ಸೇನೆಯನ್ನು ಮತ್ತು ಸಹಾಯವನ್ನು ಎಲ್ಲ ಕಡೆಯಿಂದ ಬರ ಹೇಳಿದರೂ, ಅವು ತಲಪುವಷ್ಟರಲ್ಲಿ ಆಗಬಹುದಾದ ಅಪಾಯ ಅರಿತು ಸಂಧಿಗೆ ಮುಂದಾದ. ತನ್ನ ಮಗಳನ್ನು ಫಿರೋಜ್ ಶಾನಿಗೆ ಮದುವೆ ಮಾಡಿ ಕೊಟ್ಟು, ಮೂರು ದಿನಗಳ ಕಾಲ ಸತ್ಕರಿಸಿ, ಕಪ್ಪ ಕಾಣಿಕೆಗಳೊಂದಿಗೆ ಅವನನ್ನು ಬೀಳ್ಕೊಟ್ಟ. ಮನಸ್ಸಿನ ಮೂಲೆಯಲ್ಲಿ ಶತ್ರುವಿಗೆ ತಲೆಬಾಗಬೇಕಾದ ಪರಿಸ್ಥಿತಿಗೆ ನೊಂದುಕೊಂಡು ಇದಕ್ಕೆ ಸರಿಯಾದ ಉತ್ತರ ಹೇಳದೇ ಬಿಡುವಿದಿಲ್ಲ ಎಂದು ಶಪಥ ಮಾಡಿದ.

 

ತನ್ನ ಬಹಮನಿ ರಾಜ್ಯಕ್ಕೆ ಮರಳಿದ ಫಿರೋಜ್ ಶಾ, ಪೆರ್ತಾಳ್ ಅನ್ನು ಎಲ್ಲಿದ್ದರು ಹುಡುಕಿ ತರುವಂತೆ ಆದೇಶಿಸಿದ. ಕೆಲವೇ ದಿನಗಳಿಗೆ ಅವನ ಆಸ್ಥಾನಕ್ಕೆ ಪೆರ್ತಾಳ್ ಅನ್ನು ಹಾಜರು ಪಡಿಸಿದರು ಅವನ ಸೈನಿಕರು. ಅವಳ ಸೌಂದರ್ಯ ಕಂಡು ಬೆರಗಾದ ಫಿರೋಜ್ ಶಾ ತನ್ನ ಮಗ ಹಸನ್ ಖಾನ್ ನೊಂದಿಗೆ ಅವಳ ಮದುವೆ ಮಾಡಿಸಿದ.

 

ಅದಾಗಿ ಕೆಲ ವರುಷಗಳಿಗೆ ದೇವರಾಯನಿಗೆ ತನ್ನ ಸೇಡು ತೀರಿಸಿಕೊಳ್ಳುವ ಕಾಲ ಬಂದೆ ಬಿಟ್ಟಿತು. ಯುದ್ಧಕ್ಕೆ ಸಕಲ ತಯ್ಯಾರಿ ಮಾಡಿಕೊಂಡಿದ್ದ ದೇವರಾಯ ಸಲ ಶತ್ರುವನ್ನು ಯುದ್ಧದಲ್ಲಿ ಮಣಿಸಿಯೇ ಬಿಟ್ಟ. ಸೋಲಿನಿಂದ ಕಂಗೆಟ್ಟ ಫಿರೋಜ್ ಶಾ ಅಧಿಕಾರವನ್ನು ತನ್ನ ತಮ್ಮನಿಗೆ ಒಪ್ಪಿಸಿ ರಾಜ್ಯದಿಂದ ಹೊರ ನಡೆದ. ಅವನ ತಮ್ಮ ಅಹ್ಮದ್ ಶಾ ತನ್ನ ಅಣ್ಣನ ಮಗನಾದ ಹಸನ್ ಖಾನ್ ಕಣ್ಣು ಕೀಳಿಸಿ ಗೃಹಬಂಧಿಯನ್ನಾಗಿಸಿದ. ಮತ್ತು ಅವನಿಗೆ ತನ್ನ ಪತ್ನಿ ಪೆರ್ತಾಳ್ ಸೌಂದರ್ಯ ಸವಿಯುವ ಸೌಭಾಗ್ಯ ಕಸಿದುಕೊಂಡುಬಿಟ್ಟ.

 

ಎರಡು ದೊಡ್ಡ ರಾಜ್ಯಗಳ ಕಾದಾಟಕ್ಕೆ ಕಾರಣವಾದ ಪೆರ್ತಾಳ್ ಚೆಲುವು ಅವಳಿಗೆ ಸ್ವತಂತ್ರ ಜೀವನದ ಹಕ್ಕು ಕಸಿಯುವುದಲ್ಲದೆ, ಅವಳನ್ನು ಬಯಸಿದವರಿಗೆ ಕೂಡ ನೆಮ್ಮದಿ ತರಲಿಲ್ಲ.

 

References:

1.      Deva Raya: Wikipedia

2.      Roving Eyes by Mahesh S

3.     A Forgotten Empire by Robert Sewell





No comments:

Post a Comment