ಬೆಟ್ಟ ಹತ್ತುವ, ಪ್ರಾಕೃತಿಕ ಸೌಂದರ್ಯ ತುಂಬಿದ ನಿರ್ಜನ ಪ್ರದೇಶಗಳನ್ನು ನೋಡುವ ಆನಂದ ಚಾರಣರಿಗಷ್ಟೇ ಗೊತ್ತು. ಅದನ್ನು ಸೆರೆ ಹಿಡಿಯಬಯಸುವವರ ಕತ್ತಲ್ಲಿ ಯಾವಾಗಲು ನೇತಾಡುತಿರುತ್ತದೆ ಕ್ಯಾಮೆರಾ. ಇನ್ನೂ ಕೆಲವರು ತಿಂಡಿಪೋತರು. ತಾವು ಹೋದ ಎಲ್ಲ ಊರುಗಳಲ್ಲಿ ಅಲ್ಲಿಯ ವಿಶಿಷ್ಟ ತಿಂಡಿ ಸವಿಯುವದಲ್ಲದೆ, ತಮಗಿಷ್ಟವಾದ ತಿಂಡಿ ಆ ಊರಿನಲ್ಲಿ ಹೇಗೆ ಮಾಡುತ್ತಾರೆ ಎಂದು ತಿಂದು ನೋಡುವ ಚಪಲ. 'ಅದೇ ಮಸಾಲೆ ದೋಸೆ ಮಾರಾಯ' ಎಂದು ನೀವು ಅವರಿಗೆ ಹೇಳಿದರೆ, 'ಇಲ್ಲಿ ಉಪ್ಪುಕಡಿಮೆ, ಖಾರ ಜಾಸ್ತಿ, ಸಾಂಬಾರ ನಲ್ಲಿ ಅದು ಏನೋ ವಿಶಿಷ್ಟತೆ ಇದೆ' ಎಂದೆಲ್ಲ ಹೇಳಿ ನಮ್ಮ ಬಾಯಿ ಮುಚ್ಚಿಸುತ್ತಾರೆ. ಹೌದಲ್ಲವೇ, ಅವರ ಆನಂದ ಬೇರೆಯವರಿಗೆಲ್ಲಿ ತಿಳಿಯಲು ಸಾಧ್ಯ? ಕೆಲವರಿಗೆ ರಾಜಕೀಯದ ಹುಚ್ಚು. ಇನ್ನೂ ಕೆಲವರಿಗೆ ದೇಶ ಸುತ್ತಿ ಬರುವ ಹವ್ಯಾಸ.
ನಿಮ್ಮ ಸುತ್ತ ಮುತ್ತಲಿರುವ ಎಲ್ಲರನ್ನು ಗಮನಿಸಿ ನೋಡಿ. ಕೆಲವರು ಸುಮ್ಮನೆ ಕುಳಿತು ಹರಟೆ ಹೊಡೆದರೆ, ಕೆಲವರು ಇನ್ನೊಬ್ಬರ ಸಂಸಾರದಲ್ಲಿ ಮೂಗು ತೋರಿಸುತ್ತಾರೆ. ಕೆಲವರಿಗೆ ಹಣ ಗಳಿಸುವದೇ ಆನಂದ. ಕೆಲವರು ಪ್ರಾಣಿ, ಪಕ್ಷಿ ಸಾಕಿ ಆ ಜಗತ್ತಿನಲ್ಲೇ ಮುಳುಗಿ ಹೋಗಿರುತ್ತಾರೆ. ಕೆಲವರು ಭಕ್ತಿ ಪ್ರಿಯರು. ದೇವಸ್ಥಾನ ಸುತ್ತುವ, ಪ್ರಸಾದ ಹಂಚುವ ಕಾಯಕ ಅವರಿಗೆ ತುಂಬಾ ಇಷ್ಟ. ಹೀಗೆ ಪ್ರತಿಯೊಬ್ಬರಿಗೂ ಆನಂದ ಕೊಡುವ ಹವ್ಯಾಸ (ಅಥವಾ ದುರಭ್ಯಾಸಗಳು) ಇದ್ದೇ ಇರುತ್ತವೆ. ಅದು ಬೇರೆಯವರಿಗೆ ಅರ್ಥವಾಗದೆ ಹೋಗಬಹುದು. ಬಲ್ಲವರಿಗಷ್ಟೇ ಗೊತ್ತು ಅದರ ಮರ್ಮ.
ನನಗಿರುವುದು ಪುಸ್ತಕಗಳ ಗೀಳು. 'ಈಗಿನ ಕಾಲದಲ್ಲಿ ಯಾರು ಪುಸ್ತಕ ಓದುತ್ತಾರೆ?' ಎನ್ನುವುದು ಸಾಕಷ್ಟು ಜನರ ಉದ್ಗಾರ. ಪುಸ್ತಕ ಓದುವ ಆನಂದ ಅವರೇನು ಬಲ್ಲರು? ಮತ್ತು ಬೇರೆಯವರ ವಿಚಾರಗಳಿಗೆ ನಾವೇಕೆ ಆನಂದ ಕಳೆದುಕೊಳ್ಳಬೇಕು? ಚಿಕ್ಕಂದಿನಲ್ಲಿ ಓದಿದ ಅಮರ ಚಿತ್ರ ಕಥೆ ಪುಸ್ತಕಗಳು, ಪ್ರತಿ ವಾರ ಓದುತ್ತಿದ್ದ ಸುಧಾ, ತರಂಗ ವಾರಪತ್ರಿಕೆಗಳು, ಸುಮ್ಮನೆ ಕುತೂಹಲಕ್ಕೆಂದು ಅಕ್ಕ ಓದುತ್ತಿದ್ದ ಕಾದಂಬರಿಯ ಕೆಲವು ಪುಟಗಳು ಇವುಗಳನ್ನು ಬಿಟ್ಟರೆ ಪೂರ್ಣ ಪ್ರಮಾಣದ ಪುಸ್ತಕ ಓದಿದ್ದು ಏಳನೆಯ ತರಗತಿ ಮುಗಿದ ಮೇಲೆ ಬಂದ ಬೇಸಿಗೆ ರಜೆಯಲ್ಲಿ. ಅದು ತೇಜಸ್ವಿ ಅವರು ಬರೆದ ಕಿರು ಕಾದಂಬರಿ 'ಕರ್ವಾಲೋ'. ಅಲ್ಲಿಂದ ಆರಂಭ ನನ್ನ ಮತ್ತು ಪುಸ್ತಕಗಳ ಗೆಳೆತನ.
ಯಂಡಮೂರಿಯವರ ಸರಳತೆ, ಚಿತ್ತಾಲರ ಗಂಭೀರತೆ, ಕುವೆಂಪುರವರ ಪ್ರಕೃತಿ ಪ್ರೀತಿ, ತೇಜಸ್ವಿಯವರ ಕ್ರಿಯಾಶೀಲತೆ, ಭೈರಪ್ಪ-ಅನಂತ ಮೂರ್ತಿಯವರ ಕಾದಂಬರಿಗಳಲ್ಲಿನ ವೈಚಾರಿಕತೆ, ಕಾರಂತರ ಜೀವನ ಪ್ರೀತಿ ಇವುಗಳನ್ನು ಸವಿದು ಮುಂದೆ ಇಂಗ್ಲಿಷ್ ಪುಸ್ತಕಗಳಿಗೆ ಜಿಗಿದಿದ್ದಾಯಿತು, ಟಾಗೋರ್ ಅವರ ಸಣ್ಣ ಕಥೆಗಳು, ಟಾಲ್ಸ್ಟಾಯ್ ಅವರ ಕಾದಂಬರಿಗಳು ನನ್ನ ಜೀವನ ಅನುಭವವನ್ನು ವಿಸ್ತಾರಗೊಳಿಸಿದವು. ನಾನಾ ದೇಶದ ಲೇಖಕರ ಪುಸ್ತಕಗಳು ಮುರಕಮಿ (ಜಪಾನ್), ಮಾರ್ಕ್ಯೂಜ್ (ಕೊಲಂಬಿಯಾ), ಹೆಮಿಂಗ್ವೇ (ಅಮೇರಿಕ), ಹರ್ಮನ್ ಹೆಸ್ಸೆ (ಜರ್ಮನಿ), ಬೆನ್ ಒಕ್ರಿ (ಆಫ್ರಿಕಾ) ಹೀಗೆ ವಿವಿಧತೆ ತುಂಬಿದ ಪುಸ್ತಗಳು ಕೈ ಸೇರತೊಡಗಿದವು.
ಎಲ್ಲಿ ಹೋದಲ್ಲಿ ಪುಸ್ತಕಗಳು ನನ್ನ ಜೊತೆಗೆ. ಆಫೀಸ್ ಗೆ ಹೋಗುವಾಗ ಬರುವಾಗ ಬಸ್ ನಲ್ಲಿ ಕುಳಿಕೊಂಡಾಗ ಸಿಗುವ ಸಮಯ ಪುಸ್ತಕಗಳಿಗೆ ಮೀಸಲಾಯಿತು. ಆಗ ನೆಹರು ಅವರು ಬರೆದ 'Glimpses of World History' ಎನ್ನುವ ಪುಸ್ತಕ ಓದಲು ಕೆಲವು ತಿಂಗಳುಗಳು ತೆಗೆದುಕೊಂಡಿದ್ದೆ. ಊರಿಗೆ ಹೊರಟರೆ ನನ್ನ ಬ್ಯಾಗ್ ನಲ್ಲಿ ಒಂದಲ್ಲ ಒಂದು ಪುಸ್ತಕ ಇದ್ದೇ ಇರುತ್ತಿತ್ತು. ಹಾಗೆಯೆ ಕಾರಲ್ಲಿ ಹೊರಟರೆ ಕನಿಷ್ಠ ಮೂರ್ನಾಲ್ಕು ಪುಸ್ತಕಗಳು ಜೊತೆಯಾಗುತ್ತಿದ್ದವು. ಅಲ್ಲದೆ Kindle ಬಂದಾಗಿನಿಂದ ಅದರಲ್ಲೂ ನೂರಾರು ಪುಸ್ತಕಗಳು.
ಪುಸ್ತಕ ಓದುವ ಹವ್ಯಾಸ ನನಗೆ ಸಾಕಷ್ಟು ಹೊಸ ಗೆಳೆಯರನ್ನು ಹುಡುಕಿ ಕೊಟ್ಟಿತು. ಆದರೆ ಹಳೆಯ ಗೆಳೆಯರು ನನ್ನ ಈ ಹವ್ಯಾಸ ನೋಡಿ ಕೆಲವರು ಆಶ್ಚರ್ಯ ಪಟ್ಟರೆ, ಕೆಲವರು ಕನಿಕರ ತೋರಿಸಿದರು. ಒಬ್ಬ ಸ್ನೇಹಿತ ಮುಖಕ್ಕೆ ಹೊಡೆದಂತೆ ಹೇಳಿಯೇ ಬಿಟ್ಟ. "ನಾನು ಶಾಲೆ ಓದುವುದು ಮುಗಿದಾಗಿಂದ ಯಾವುದೇ ಪುಸ್ತಕ ಓದಿಲ್ಲ. ನೀನು ಓದುತ್ತಿ ಎಂದರೆ ನಿನಗೆ ಯಾವುದೊ ದುಃಖ ಕಾಡುತ್ತಿದೆ" ಎಂದು ಸಂಶಯದಿಂದ ನನ್ನ ಮೇಲೆ ಕನಿಕರ ತೋರಿಸಿದ. ಅವನಿಗೆ ಹೇಳಿದೆ "ನಾನು ಪಿಚ್ಚರು ನೋಡುತ್ತೇನೆ, ಊರು ಸುತ್ತುತ್ತೇನೆ. ಆದರೆ ಪುಸ್ತಕ ಓದುವ ಆನಂದ ಅದಕ್ಕಿಂತ ಹೆಚ್ಚಿನದು". ಅವನು ಬೇರೆ ಏನು ಹೇಳಲಿಲ್ಲ ನಿನ್ನ ಸಮಸ್ಯೆ ನಿನಗೆ ಎನ್ನುವಂತೆ. ಬಲ್ಲವರೇ ಬಲ್ಲರು ಎನ್ನುವುದು ಅವನಿಗೂ ಗೊತ್ತು ಎನ್ನುವಂತೆ ನಾನು ಕೂಡ ಸುಮ್ಮನಾದೆ.
ಕಳೆದ ವಾರ ಬೆಂಗಳೂರಿನ ವಿಜಯನಗರದಲ್ಲಿನ ಕನ್ನಡ ಪುಸ್ತಕ ಮಾರುವ ಅಂಗಡಿಗೆ ಹೋಗಿದ್ದೆ. ಯಥಾ ಪ್ರಕಾರ ಹತ್ತು-ಹನ್ನೆರಡು ಪುಸ್ತಕಗಳನ್ನು ತೆಗೆದುಕೊಂಡೆ. ವಸುಧೇಂದ್ರ, ಜೋಗಿ, ಕಾರಂತ ಮತ್ತು ಹೊಸ ಲೇಖಕರ ಪುಸ್ತಕಗಳ ಜೊತೆಗೆ ಕನಕದಾಸರ ಕೀರ್ತನೆಗಳು ನನ್ನ ಮಡಿಲು ಸೇರಿದವು. ಅವುಗಳನ್ನು ಅಂಗಡಿಯವರು ಕೊಟ್ಟ ಬ್ಯಾಗ್ ನಲ್ಲಿ ಹಾಕಿಕೊಂಡು ಅವುಗಳನ್ನು ನನ್ನ ದ್ವಿ ಚಕ್ರ ವಾಹನದಲ್ಲಿ ನೇತಾಡಲು ಬಿಟ್ಟು, ಸ್ನೇಹಿತನ ಜೊತೆ ಚಹಾ ಕುಡಿಯಲು ಹೋದೆ. ವಾಪಸ್ಸು ಬಂದರೆ ಪುಸ್ತಕಗಳ ಚೀಲ ಹಾಗೆಯೆ ನೇತಾಡುತ್ತಿತ್ತು. ಅದನ್ನು ನೋಡಿ ನನ್ನ ಸ್ನೇಹಿತ ಹೇಳಿದ 'ಯಾರಾದರೂ ಹಳೆಯ ಚಪ್ಪಲಿ ಕಳ್ಳತನ ಮಾಡಬಹುದು ಆದರೆ ಪುಸ್ತಕಗಳನ್ನು ಮುಟ್ಟುವುದಿಲ್ಲ'. ಆ ಮಾತು ನಿಜ ಅನ್ನಿಸಿತು. ಪುಸ್ತಕ ಕಳ್ಳತನವಾದರೂ ಅವುಗಳು ಕೊಡುವ ವಿದ್ಯೆ, ಜ್ಞಾನ , ಆನಂದ ಕಳ್ಳತನ ಮಾಡಲು ಸಾಧ್ಯವೇ?
ಹೆಚ್ಚಿನ ಸಮಾಜ ಪುಸ್ತಕಗಳನ್ನು ಅಸಡ್ಡೆಯಿಂದ ನೋಡಿದರೆ ಅದು ಅವರ ನಷ್ಟ ಅಷ್ಟೇ. ಇಷ್ಟಕ್ಕೂ ಪುಸ್ತಕ ಪ್ರೇಮಿಗಳು ಅದಕ್ಕೆಲ್ಲಿ ತಲೆ ಕೆಡಿಸಿಕೊಳ್ಳುತ್ತಾರೆ? ಬಲ್ಲವರೇ ಬಲ್ಲರು ಎಂದುಕೊಂಡು ಸುಮ್ಮನಾಗುತ್ತಾರೆ.
No comments:
Post a Comment