Sunday, August 27, 2023

ಗುಡ್ಡದ ಮೇಲೆ ಗುಡಿ ಕಟ್ಟಿದ ಮನುಷ್ಯನೇ ಮೆಟ್ಟಿಲು ಕಟ್ಟಿದ

ಹಲವಾರು ಶತಮಾನಗಳಿಂದ ಬೆಟ್ಟದ ಮೇಲೆ ವಿರಾಜಮಾನನಾಗಿರುವ ಶ್ರೀ ಮಲ್ಲಿಕಾರ್ಜುನ ನನ್ನ ಇಷ್ಟ ದೈವ. ಚಿಕ್ಕಂದಿನಿಂದ ಶ್ರಾವಣದಲ್ಲಿ ಬೆಟ್ಟ ಹತ್ತಿ ಆತನ ದರ್ಶನ ಮಾಡುವ ಅಭ್ಯಾಸ ಇನ್ನು ಬಿಟ್ಟು ಹೋಗಿಲ್ಲ. ಬೆಟ್ಟ ಹತ್ತಿದ ಪ್ರತಿ ಬಾರಿಯೂ ಹೊಸ ವಿಚಾರಗಳು ಮೂಡುತ್ತವೆ. ಅದು ಈ ಬಾರಿಯೂ ಕೂಡ ಆಯಿತು.


ದೇವರು ಮನುಷ್ಯನನ್ನು ಹುಟ್ಟಿಸಿದು ಎಂದು ನಾವೆಲ್ಲ ಅಂದುಕೊಂಡರೆ, ಮನುಷ್ಯನೇ ದೇವರನ್ನು ಹುಟ್ಟಿ ಹಾಕಿದ್ದು ಎಂದು ಸೂಚಿಸುತ್ತದೆ ಡಾರ್ವಿನ್ ವಿಕಾಸವಾದ ಸಿದ್ಧಾಂತ. ಅವೆರಡನ್ನು ಒಟ್ಟು ಮಾಡಿ, ಒಂದು ಕಲ್ಲಿಗೆ ಬಹು ಕಾಲ ಭಕ್ತಿಯಿಂದ ಪೂಜಿಸಿದರೆ, ಅದರಲ್ಲಿ ವಿಶೇಷ ಶಕ್ತಿ ತುಂಬಿ ದೈವ ಕಳೆ ಬರುತ್ತದೆ ಎನ್ನುವ ವಿವರಣೆ ಕೂಡ 'Sapiens ' ಅನ್ನುವ ಪುಸ್ತಕದಲ್ಲಿದೆ. ಮೂರ್ತಿ ಪೂಜೆಯನ್ನು ವಿರೋಧಿಸಿದ ಬುದ್ಧ. ನಶ್ವರವನ್ನೇ ಶಿವನೆಂದರು ನಮ್ಮ ವಚನಕಾರರು.


ಆದರೆ ಅವೆಲ್ಲವನ್ನು ಬದಿಗಿಟ್ಟು ವಿಚಾರ ಮಾಡಿದಾಗ ನನಗೆ ಅನ್ನಿಸಿದ್ದು ಇಷ್ಟು. ಆದಿ ಮಾನವ ಬೆಟ್ಟ ಗುಡ್ಡಗಳಲ್ಲಿ ವಾಸ ಮಾಡುತ್ತಿದ್ದ. ಆಗ ಅವನು ಪೂಜಿಸುತ್ತಿದ್ದ ದೈವಗಳು ಕೂಡ ಬೆಟ್ಟದೆ ಮೇಲೆಯೇ ಇದ್ದವು. ಮುಂದೆ ಆ ಮಾನವ ಬೆಟ್ಟ ಇಳಿದು ಬಯಲಿಗೆ ಬಂದು, ವ್ಯವಸಾಯ ಕಲಿತು ನಾಗರಿಕನಾದ. ಆದರೆ ಬೆಟ್ಟದ ದೈವವನ್ನು ಮರೆಯಲಿಲ್ಲ. ತನ್ನ ನಾಗರಿಕತೆಗೆ ತಕ್ಕಂತೆ ತಾನು ಪೂಜಿಸುತ್ತಿದ್ದ ಜಾಗವನ್ನು ಗುಡಿಯಾಗಿ ಮಾರ್ಪಡಿಸಿದ. ತನಗೆ ಬೆಟ್ಟ ಹತ್ತಿ, ಇಳಿಯಲು ಅನುಕೂಲವಾಗಲೆಂದು ಮೆಟ್ಟಿಲು ನಿರ್ಮಿಸಿದ. ಶತಮಾನಗಳು ಕಳೆದರು ಆ ದೇವಸ್ಥಾನಗಳ ಮೇಲಿನ ಅವನ ಭಕ್ತಿ ಕಡಿಮೆ ಆಗಲಿಲ್ಲ. ಮನುಷ್ಯ ಸಮಾಜದ ಏಳಿಗೆ ಬಯಸುವ ವ್ಯಕ್ತಿಗಳು ಎಲ್ಲ ಕಾಲಕ್ಕೂ ಇರುತ್ತಾರಲ್ಲ. ಅವರು ಸಮಾಜ ಒಟ್ಟಿಗೆ ಕೂಡಲಿ ಎನ್ನುವ ಉದ್ದೇಶದಿಂದ, ಬೆಟ್ಟದ ಮೇಲಿನ ದೈವದ ಹೆಸರಿನಲ್ಲಿ ಜಾತ್ರೆ, ಪೂಜೆಗಳನ್ನು ಏರ್ಪಾಡು ಮಾಡಿದರು. ಹೀಗೆ ದೈವ ಸಮಾಜದ ಒಗ್ಗಟ್ಟಿಗೆ ಮುಖ್ಯ ಕಾರಣವಾಯ್ತು.


ಅಷ್ಟೇ ಅಲ್ಲ. ಬೆಟ್ಟ ಹತ್ತಿದ ದಣಿವು ಮನುಷ್ಯನ ಅರೋಗ್ಯ ಸುಧಾರಿಸುತ್ತಿತ್ತು. ಬೆಟ್ಟದ ಮೇಲಿನಿಂದ ನೋಡಿದರೆ, ಮನುಷ್ಯನಿಗೆ ತನ್ನ ಮನೆ ಎಷ್ಟು ಚಿಕ್ಕದು ಕಾಣುತ್ತಲ್ಲವೇ? ಹಾಗೆಯೆ ಆ ಮನೆಯಲ್ಲಿನ ಸಮಸ್ಯೆಗಳು ಕೂಡ ಇನ್ನು ಚಿಕ್ಕವು ಎನ್ನುವ ಅರಿವು ಅವನಿಗೆ ಬೆಟ್ಟದ ಮೇಲೆ ಮೂಡಲು ಸಾಧ್ಯ. ಮನೆಯಲ್ಲಿ ಕುಳಿತಾಗ ಬೆಟ್ಟದಂತಹ ಸಮಸ್ಯೆ ಅನಿಸಿದ್ದು, ಬೆಟ್ಟ ಹತ್ತಿ ನಿಂತಾಗ ಬದಲಾಗಲು ಸಾಧ್ಯ ಇದೆ. ಹಾಗೆಯೆ ಬೆಟ್ಟದ ವಾತಾವರಣ ಕೂಡ ಬೇರೆಯೇ. ಬಯಲಲ್ಲಿ ಬೆಳೆಯದ ಗಿಡ, ಮರಗಳು,  ಬಯಲಲ್ಲಿ ಕಾಣದ ಪ್ರಾಣಿ, ಪಕ್ಷಿಗಳು ಅಲ್ಲಿ ಕಾಣುತ್ತವೆ. ಮೆಟ್ಟಿಲ ಮೇಲೆ ಮೆಲ್ಲಗೆ ಸಾಗುವ ಝರಿಗಳು, ಪಕ್ಕದ ಗುಡ್ಡದಿಂದ ಕೇಳಿಸುವ ನವಿಲಿನ ಕೇಕೆ, ಬಯಲಿಗಿಂತ ಬೆಟ್ಟವನ್ನು ಇಷ್ಟ ಪಡುವ ಮಂಗಗಳು, ಕಲ್ಲಿನಡಿ ಮಲಗಿರಬಹುದಾದ ಸರಿಸೃಪಗಳು ಮನುಷ್ಯನನ್ನು ಸ್ವಲ್ಪ ಕಾಲಕ್ಕಾದರೂ ಬೇರೆಯ ಲಹರಿಯಲ್ಲಿ ಇರುವಂತೆ ಮಾಡುತ್ತವೆ.


ಬೆಟ್ಟ ಇಳಿದು, ಹೊಟ್ಟೆ ಹಸಿವು ಇಂಗಿಸಲು ಹತ್ತಿರದ ಹೋಟೆಲಿಗೆ ತೆರಳಿದೆ. ಆದರೆ ನನ್ನ ವಿಚಾರ ಸರಣಿ ಮತ್ತೆ ಮುಂದುವರೆಯಿತು.


ಕಾಲಕ್ಕೆ ತಕ್ಕಂತೆ ಮಾರ್ಪಾಡು ಆದರೂ, ಆದಿ ಮಾನವನಲ್ಲಿ ಅಡಗಿದ್ದ ಜೀನ್ ಗಳು ನಮ್ಮ ಪೀಳಿಗೆಗಳಿಗೆ ಸಾಗಿ ಬಂದು, ನಮ್ಮನ್ನು ಸ್ವಾರ್ಥಿಗಳಾಗಿ, ಜೀವನ ಸಂಗಾತಿ ಹುಡುಕಿ ವಂಶ ಮುಂದುವರೆಯುವಂತೆ ಪ್ರಚೋದಿಸುವುದರ ಜೊತೆಗೆ, ತಾವು ಬದುಕ್ಕಿದ್ದ ಕಾಲ ಘಟ್ಟವನ್ನು ಮರೆಯದೆ, ಮೂಲಗಳನ್ನು ಹುಡುಕಿ ಕೊಂಡು ಹೋಗುವ ಪ್ರಚೋದನೆಗಳನ್ನು ಕೂಡ ಮಾಡುತ್ತದೆ.


ನನ್ನ ತಲೆಯಲ್ಲಿರುವುದು ಪುಸ್ತಕದ ಬದನೇಕಾಯಿ ಗಿಡವೋ ಎನ್ನುವ ಸಂಶಯ ಮೂಡಿ, ಚಹಾ ಹೀರುತ್ತಾ ಸುತ್ತಲಿನ ಜನರನ್ನು ಗಮನಿಸತೊಡಗಿದೆ.


ಚಿಕ್ಕಂದಿನಲ್ಲಿ ಶಾಲೆ ಓದುತ್ತಿರುವಾಗ ಬಡ ಸ್ನೇಹಿತರನ್ನು ತನ್ನ ಮನೆಗೆ ಊಟಕ್ಕೆ (ವಾರಾನ್ನ) ಕರೆದುಕೊಂಡು ಹೋಗುತ್ತಿದ್ದ ಸ್ನೇಹಿತ ಕಣ್ಣಿಗೆ ಬಿದ್ದ. ಈಗ ಅವನು ತನ್ನ ಅಂಗಡಿಯ ಮುಂದೆ ಗೋವಿನ ಪೂಜೆ ಮಾಡುತ್ತಿದ್ದ ಅದಕ್ಕೆ ಹಣ್ಣು ತಿನ್ನಿಸುತ್ತಿದ್ದ. ಚಿಕ್ಕಂದಿನ ಅವನ ನಡುವಳಿಕೆ ನಲವತ್ತು ವರುಷ ಕಳೆದರು ಬದಲಾಗಿರಲಿಲ್ಲ. ಅದಕ್ಕೆ ಕಾರಣ ಅವನಲ್ಲಿನ ಜೀನ್ ಗಳು ಎಂದಾದರೆ, ಬೆಟ್ಟದ ದೈವದ ಆಕರ್ಷಣೆ ಕೂಡ ನಮ್ಮ ಪೂರ್ವಜರ ಬಳುವಳಿ ಏಕಾಗಿರಬಾರದು?


ಸಾವಿರಾರು ವರುಷ ಹಿಂದೆ ಬದುಕಿದ್ದ ನಮ್ಮ ಹಿರಿಯರು, ತಮ್ಮ ಬೆಟ್ಟದ ದೈವದ ನಂಬಿಕೆಯನ್ನು ಕೂಡ ನಮಗೆ ವರ್ಗಾಯಿಸುತ್ತ ಹೋದರು. ಕೆಲ ಪೀಳಿಗೆಯವರು ಸುಸಜ್ಜಿತ ಗುಡಿ ಕಟ್ಟಿದರೆ, ಇನ್ನು ಕೆಲವರು ಮೆಟ್ಟಿಲು ಕಟ್ಟಿದರು. ಇಂದಿನ ಪೀಳಿಗೆಯವರು ಆ ಮೆಟ್ಟಿಲುಗಳಿಗೆ ಸುಣ್ಣ ಬಳಿದು ಅಂದ ಹೆಚ್ಚಿಸಿದರು. ನಾನು ತಪ್ಪದೆ ಪ್ರತಿ ವರುಷ ದರ್ಶನಕ್ಕೆ ಬರುತ್ತೇನೆ.   


ಪುರಾವೆ ಕೇಳುವ ವಿಜ್ಞಾನದಲ್ಲಿ ಮುಂದೆ ಒಂದು ದಿನ ಇವೆಲ್ಲವುಗಳಿಗೆ ಸಮರ್ಪಕ ವಿವರಣೆ ಸಿಗಬಹುದು. ನನಗೆ ದೇವರ ಮುಂದೆ ತಲೆ ಬಾಗಿಸುವುದನ್ನು ಕಲಿಸಿದ ಅಜ್ಜಿಯ ಭಕ್ತಿ ನನಗೆ ಅಂಧಾನುಕರಣೆ ಅನಿಸುವುದಿಲ್ಲ. ಇವತ್ತಿಗೆ ನನ್ನ ಅಜ್ಜಿ ಇಲ್ಲ. ಮುಂದೆ ಒಂದು ದಿನ ನಾನೂ ಇರುವುದಿಲ್ಲ. ಆದರೆ ಬೆಟ್ಟದ ದೈವ ಇರುತ್ತದೆ. ಹಾಗೆಯೆ ಶ್ರೀ ಮಲ್ಲಿಕಾರ್ಜುನನ ಭಕ್ತರು  ಯಾವತ್ತಿಗೂ ಇರುತ್ತಾರೆ.



No comments:

Post a Comment