Sunday, August 20, 2023

ಬಯಲು ಗಣೇಶ, ಸರ್ಕಲ್ ಮಾರಮ್ಮ

ಬೆಂಗಳೂರು ವೈವಿಧ್ಯತೆ ತುಂಬಿದ ಊರು. ಅದು ಸಾಧ್ಯವಾಗಿದ್ದು ಅಲ್ಲಿನ ವಲಸಿಗರಿಂದ. ಬರೀ ಬೀದರ್ ನಿಂದ ಚಾಮರಾಜನಗರ ವರೆಗಿನ ಜನ ಇಲ್ಲಿ ಬಂದು ನೆಲೆಗೊಂಡಿದ್ದಾರೆ ಎಂದುಕೊಳ್ಳಬೇಡಿ. ಕಾಶ್ಮೀರ್ ದಿಂದ ಕನ್ಯಾಕುಮಾರಿ ವರೆಗಿನ ಜನ ಇಲ್ಲಿ ತಮ್ಮ ಮನೆ ಕಟ್ಟಿದ್ದಾರೆ ಎನ್ನುವುದು ಸೂಕ್ತ. ಇಲ್ಲಿರುವ MNC ಕಂಪನಿ ಗಳನ್ನು ನಿರ್ವಹಣೆ ಮಾಡಲಿಕ್ಕೆ ವಿದೇಶಿಯರು ಕೂಡ ಇಲ್ಲಿ ನೆಲೆ ಕಂಡುಕೊಂಡಿರುವುದು ನೀವು ಗಮನಿಸಬಹುದು. ವಿವಿಧ ದೇಶ, ಭಾಷೆ, ಸಂಸ್ಕೃತಿಯ ಜನರು ಒಟ್ಟಿಗೆ ಬದುಕಿದಾಗ ಅಲ್ಲಿಯ ಜನರ ಬದುಕು ಕೂಡ ವೈವಿಧ್ಯವಾಗುತ್ತ ಹೋಗುತ್ತದೆ.

ಜನ ಬಂದ ಮೇಲೆ ಅವರ ದೇವರುಗಳು ಬೆಂಗಳೂರಿಗೆ ಬರದೇ ಇರುತ್ತಾರೆಯೇ? ಶಿವ, ವಿಷ್ಣು, ಪಾರ್ವತೀ, ಲಕ್ಷ್ಮಿ, ಗಣೇಶ, ಆಂಜನೇಯ, ಪೈಗಂಬರ್, ಜೀಸಸ್, ಗುರು ನಾನಕ್ ಹೀಗೆ ಎಲ್ಲ ಧರ್ಮದ ದೇವರುಗಳು ಕೂಡ ಇಲ್ಲಿ ಪ್ರತಿಷ್ಠಾಪಿತರಾಗಿದ್ದರೆ. ಅದರಲ್ಲೂ ದೇವಿಯ ಹಲವು ರೂಪಗಳು - ಬನಶಂಕರಿ, ರಾಜ ರಾಜೇಶ್ವರಿ, ಮೀನಾಕ್ಷಿ ಎಲ್ಲರ ಹೆಸರಲ್ಲೂ ದೊಡ್ಡ ದೊಡ್ಡ ದೇವಾಲಯಗಳು ಇವೆ. ಹಾಗೆಯೆ ಬೆಂಗಳೂರಿನ ನಾಡ ದೇವಿಯಾದ ಅಣ್ಣಮ್ಮ ದೇವಿಯು ಕೂಡ ಭಕ್ತಿಯಿಂದ ಪೂಜಿಸಲ್ಪಡುತ್ತಾಳೆ.

ನಿಮಗೆ ತಿರುಪತಿಗೆ ಹೋಗುವುದು ದೂರ ಎನಿಸಿದರೆ, ಶ್ರೀನಿವಾಸನ ದರ್ಶನವನ್ನು, ಬೆಂಗಳೂರಿನ ಹೊರವಲಯದಲ್ಲಿರುವ ರಾಮೋಹಳ್ಳಿಯ ಅದೇ ಶೈಲಿಯಲ್ಲಿರುವ ದೇವಸ್ಥಾನದಲ್ಲಿ ಮಾಡಬಹುದು. ರಾಘವೇಂದ್ರರ ದರ್ಶನಕ್ಕೆ ನೀವು ಮಂತ್ರಾಲಯಕ್ಕೆ ಹೋಗಬೇಕಿಲ್ಲ. ಮಾಗಡಿ ರಸ್ತೆಯಲ್ಲಿರುವ ಕಾಮಧೇನು ಕ್ಷೇತ್ರಕ್ಕೆ ಹೋಗಬಹುದು. ಸರ್ಪದೋಷ ನಿವಾರಣೆ ಪೂಜೆಗೆ ಕುಕ್ಕೆಗೆ ಹೋಗಬೇಕೆಂದಿಲ್ಲ. ಬದಲಾಗಿ ಮುಕ್ತಿನಾಗ ದೇವಸ್ಥಾನಕ್ಕೆ ಹೋಗಬಹುದು. ದೂರದ ದೇವಸ್ಥಾನಗಳಿಗೆ ಹೋಗುವ ಬದಲು ಹೆಚ್ಚು-ಕಡಿಮೆ ಅದೇ ಅನುಭವ ನಿಮಗೆ ಬೆಂಗಳೂರಲ್ಲೇ ಲಭ್ಯ. ಹಾಗೆಯೆ ಯೋಗ ಸಾಧನೆಗೆ ಸದ್ಗುರು, ಶ್ರೀ ರವಿಶಂಕರ್, ಪತ್ರೀಜಿಯವರ ಪಿರಮಿಡ್ ಎಲ್ಲವೂ ಬೆಂಗಳೂರಿಂದ ಒಂದೆರಡು ಘಂಟೆಗಳಲ್ಲಿ ತಲುಪಲು ಸಾಧ್ಯ.

ಆದರೆ ಬೆಂಗಳೂರಿನ ಗುಡಿಗಳ ವೈಶಿಷ್ಟ್ಯ ಏನೆಂದರೆ, ದೇವ-ದೇವಿಯರ ದೇವಸ್ಥಾನಗಳು ಬರೀ ಅವರ ಶಕ್ತಿನಾಮಗಳನ್ನು ಒಳಗೊಳ್ಳದೆ ಅವು ಯಾವ ಸ್ಥಳಗಳಲ್ಲಿವೆ ಅದರ ಗುರುತು ಆ ದೇವಸ್ಥಾನದ ಹೆಸರಿನೊಂದಿಗೆ ಸೇರಿಕೊಂಡಿವೆ. ಉದಾಹರಣೆಗೆ, ಬಯಲು ಗಣೇಶ, ಸರ್ಕಲ್ ಮಾರಮ್ಮ, ಕಣಿವೆ ಆಂಜನೇಯ. ಊರು ಮತ್ತು ಹೊರ ವಲಯ ಬೆಳೆದಂತೆಲ್ಲ  ದೇವಸ್ಥಾನಗಳು ಕೂಡ ಅವುಗಳಿಗೆ ಹೊಂದಿಕೊಂಡು ಈ ಊರಿನ ವಿಶೇಷ ಗುರುತುಗಳಾಗಿವೆ.




No comments:

Post a Comment