ಕುರಿ ಕಾಯಲು ಬಂದ ಹುಡುಗನಿಗೆ ಕುತೂಹಲ. ತೋಳ ಬಂದರೆ ಜನ ಸಹಾಯಕ್ಕೆ ಬರುವರೇ? ದೊಡ್ಡ ದನಿಯಲ್ಲಿ ಕೂಗಿಯೇ ಬಿಟ್ಟ 'ತೋಳ, ತೋಳ, ತೋಳ'. ಕೇಳಿಸಿಕೊಂಡ ಜನ ಸಹಾಯಕ್ಕೆ ಧಾವಿಸಿದರು. ಆದರೆ ಅದು ತಮಾಷೆಗೆ ಮಾಡಿದ್ದು ಎಂದು ಗೊತ್ತಾದಾಗ ಜನ ಆ ಹುಡುಗನನ್ನು ಬೈದುಕೊಂಡು ಹಿಂತಿರುಗಿದರು.
ಆದರೆ ಒಂದು ದಿನ ತೋಳ ಬಂದೇ ಬಿಟ್ಟಿತು. ಅವನು ಸಹಾಯಕ್ಕೆ ಕೂಗಿಕೊಂಡ. ಆದರೆ ಹುಡುಗನ ಧ್ವನಿಯನ್ನು ಗುರುತಿಸಿದ ಜನ ಅವನನ್ನು ಉಪೇಕ್ಷಿಸಿದರು.
ಆ ಹುಡುಗ ಸಂಜೆಯಾದರೂ ಮನೆಗೆ ಬರೆದದ್ದಕ್ಕೆ ಅವನ ಅಜ್ಜ ಅವನನ್ನು ಹುಡುಕಿಕೊಂಡು ಬಂದ. ತೋಳ ಒಂದು ಕುರಿಯನ್ನು ಎತ್ತಿಕೊಂಡು ಹೋಗಿತ್ತು. ಉಳಿದವುಗಳು ಚೆಲ್ಲಾಪಿಲ್ಲಿಯಾಗಿದ್ದವು. ತಾತ ಮೊಮ್ಮಗನ ಹೆಗಲ ಮೇಲೆ ಕೈ ಹಾಕಿ ಮನೆಗೆ ಕರೆದುಕೊಂಡು ಹೊರಟ. ದಾರಿಯಲ್ಲಿ ಮೊಮ್ಮಗ ಕೇಳಿದ 'ನಾನು ಮಾಡಿದ ತಪ್ಪು ಏನು?'
ತಾತ ಸಮಾಧಾನದಿಂದ ಉತ್ತರಿಸಿದ: 'ಸುಳ್ಳುಗಾರರನ್ನು ಜನ ನಂಬುವುದಿಲ್ಲ'
ಕಥೆ ಹಳೆಯದಾದರೂ ಪುನರಾವರ್ತನೆ ಆಗುತ್ತಲೇ ಇರುತ್ತದೆ. ಏಕೆಂದರೆ ಮೊದಲ ಸಲ (ಅಥವಾ ಮೋಸ ಹೋಗುವುವರೆಗೆ) ಜನ ಸುಳ್ಳುಗಾರರನ್ನು ನಂಬುತ್ತಾರೆ. ಮತ್ತು ಅದರ ಉಪಯೋಗ ಪಡೆದುಕೊಂಡು ಸುಳ್ಳುಗಾರರು ಹೊಸ ಜನರನ್ನು ಹುಡುಕಿಕೊಂಡು ಹೋಗುತ್ತಾರೆ. ನಿಜವಾಗಿ ತೋಳ ಬಂದಾಗ ಸುಳ್ಳುಗಾರನ ಕಥೆ ಮುಗಿಯುತ್ತದೆ. ಮತ್ತೆ ಹೊಸ ಸುಳ್ಳುಗಾರ ಹುಟ್ಟಿಕೊಳ್ಳುತ್ತಾನೆ. ಕಥೆ ಪುನರಾವರ್ತನೆ ಆಗುತ್ತಲೇ ಹೋಗುತ್ತದೆ.
ಮನುಷ್ಯ ಮನುಷ್ಯನನ್ನು ನಂಬುತ್ತಾನೆ. ಅದಕ್ಕೆ ಮನುಷ್ಯ ಮನುಷ್ಯನಿಗೆ ಮೋಸ ಮಾಡಲು ಸಾಧ್ಯವಾಗುತ್ತದೆ. ತೋಳನೆಂಬ ವಿಧಿ ಇದನ್ನು ಸಮತೋಲನ ಮಾಡಲು ತಡವಾಗಿ ಆದರೂ ಬಂದೇ ಬರುತ್ತಾನೆ.
No comments:
Post a Comment