ನಾನು ಚಿಕ್ಕವನಿದ್ದಾಗ (೮೦ ರ ದಶಕದಲ್ಲಿ) ನಮ್ಮೂರು ಮಸ್ಕಿಯಲ್ಲಿ ಇದ್ದದ್ದು ಎರಡೇ ಬೈಕ್ ಗಳು. ಒಂದು ಖ್ಯಾತ ವೈದ್ಯರದ್ದು. ಮತ್ತು ಇನ್ನೊಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರದ್ದು. ಎರಡು ಕೂಡ ಬುಲೆಟ್ ಬೈಕ್ ಗಳೇ. ಕಾಲ ಕ್ರಮೇಣ ತರಹೇವಾರಿ ಬೈಕ್ ಗಳು ಬಂದವು. ಎಜ್ಡಿ, ರಾಜದೂತ್, ಮತ್ತು ಜಾವಾ. ಇನ್ನೊಂದು ದಶಕ ಕಳೆಯುವಷ್ಟರಲ್ಲಿ ಹೀರೋ ಹೋಂಡಾ. ಬಜಾಜ್, ಯಮಹಾಗಳು ಬಂದು ಮನೆಗೊಂದು ಬೈಕ್ ಬಂದಾಗಿತ್ತು. ಆದರೆ ನಾನು ಜೀವನದ ಶುರುವಿನಲ್ಲಿ ತಿಳಿದುಕೊಂಡಿದ್ದು ಕಾರ್ ಅಂದರೆ ಅಂಬಾಸಡರ್ ಮತ್ತು ಬೈಕ್ ಅಂದರೆ ಬುಲೆಟ್. ಇದು ಬರೀ ನಮ್ಮೂರಷ್ಟೇ ಅಲ್ಲ. ನಾವು ನೋಡುತ್ತಿದ್ದ ಕನ್ನಡ ಚಲನ ಚಿತ್ರಗಳಲ್ಲಿ ಕೂಡ ಅವುಗಳೇ ಕಾಣುತ್ತಿದ್ದವು. ನಾಯಕ ಶಂಕರ್ ನಾಗ್ ರಿಂದ ಖಳನಾಯಕ ಸುಧೀರ್ ರವರೆಗೆ ಓಡಿಸುತ್ತಿದ್ದದ್ದು ಬುಲೆಟ್ ಬೈಕ್ ಗಳೇ.
ಆ ಕಾಲಮಾನದಲ್ಲಿದ್ದ ಅನೇಕ ಬೈಕ್ ಕಂಪನಿಗಳು ಮುಚ್ಚಿ ಹೋದವು. ಬುಲೆಟ್ ಕೂಡ ಅದೇ ಹಾದಿಯಲ್ಲಿ ಸ್ವಲ್ಪ ವರ್ಷಗಳ ಕಾಲ ಕಣ್ಮರೆಯಾಗಿತ್ತು. ಆದರೆ ಅದಕ್ಕೆ ಮತ್ತೆ ಪುನರುಜ್ಜೀವನ ಸಿಕ್ಕಿತು. ಕ್ರಮೇಣ ಅದು ತನ್ನ ಬೆಲೆ ಕೂಡ ಹೆಚ್ಚಿಸಿಕೊಂಡು ಮಾರುಕಟ್ಟೆಯಲ್ಲಿ ಹೊಸ ಗ್ರಾಹಕರನ್ನು ಸೆಳೆಯುತ್ತ ಸದ್ದು ಮಾಡತೊಡಗಿತು. ಬದಲಾದ ಪೀಳಿಗೆಗೆ ಹಳೆಯ ಬೈಕ್ ಕೆಲವು ಕಾರಣಗಳಿಂದ ಇಷ್ಟವಾಗತೊಡಗಿತು.
ಬೈಕ್ ಅಂದರೆ ಅಷ್ಟೇನೂ ಹುಚ್ಚು ಇರದಿದ್ದ ನನಗೂ ಕೂಡ ಅದೇಕೋ ಇದನ್ನು ಓಡಿಸುವ ಹುಚ್ಚು ಸೇರತೊಡಗಿತು. ತೆಗೆದುಕೊಳ್ಳಬೇಕೋ, ಬೇಡವೋ ಎನ್ನುವ ಜಿಜ್ಞಾಸೆಯಲ್ಲಿ ಹಲವು ತಿಂಗಳುಗಳು ಕಳೆದು ಹೋದವು. ಕೊನೆಗೆ ದುಡ್ಡು ಜೋಡಿಸಿಕೊಂಡು ಬೈಕ್ ಏರಿದ್ದಾಯಿತು. ಆ ಸಂತೋಷ ನಿಮ್ಮ ಜೊತೆ ಹಂಚಿಕೊಳ್ಳುವ ಸಲುವಾಗಿ ಇದನ್ನು ಬರೆದದ್ದಾಯಿತು.
ಖುಷಿಯನ್ನು ಹಂಚಿಕೊಳ್ಳುವ ನಿಮ್ಮ ಅನುಭವ ಅದ್ಭುತವಾಗಿದೆ.
ReplyDeleteಧನ್ಯವಾದಗಳು ಸುರೇಶ್ !
Delete