ಒಂದು ಮಾತಿದೆ. ಸಾಕಿದ ನಾಯಿ ಮತ್ತು ದುಡಿದ ದುಡ್ಡು ಬಿಟ್ಟರೆ ಬೇರೆ ಯಾವುದು ನಂಬಿಕೆಗೆ ಅರ್ಹವಲ್ಲ ಎಂದು. ಈ ಮಾತು ಸಂಪೂರ್ಣ ಸತ್ಯವಲ್ಲವಾದರೂ ಬಹುತೇಕ ನಿಜ. ಅವಸರಕ್ಕೆ ಆಗುವ ಸ್ನೇಹಿತರು, ಬಂಧುಗಳು ಪ್ರತಿಯೊಬ್ಬರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲದಿದ್ದರೂ ಒಬ್ಬಿಬ್ಬರು ಆದರೂ ಇದ್ದೆ ಇರುತ್ತಾರೆ. ಆದರೆ ಅವರನ್ನು ಹೊರತು ಪಡಿಸಿ ಉಳಿದವರೆಲ್ಲ ತಮ್ಮ ಅನುಕೂಲಕ್ಕೆ ತಕ್ಕಂತೆ ಆಡುವವರು.
ನಮ್ಮ ಸಮಾಜದಲ್ಲಿ ಸುಳ್ಳು, ಮೋಸಗಳು ಹದವಾಗಿ ಬೆರೆತು ಹೋಗಿವೆ. 'ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು' ಎಂದು ಗಾದೆ ಮಾತೇ ಇದೆಯಲ್ಲ. ಅಂದರೆ ಸುಳ್ಳು ಹೇಳಿದರೆ ತಪ್ಪೇನಿಲ್ಲ ಎನ್ನುವುದು ಸಮಾಜದ ಅಭಿಪ್ರಾಯ. ಹಾಗೆಯೇ ಒಂದು ಯುದ್ಧದಲ್ಲಿ ಮೋಸ ಮಾಡಿ ಗೆಲ್ಲುವುದು ಚಾಣಾಕ್ಷತೆಯ ಸಂಕೇತ ಎನಿಸಿಕೊಳ್ಳುತ್ತದೆ. ಸುಳ್ಳು, ಮೋಸ ಬಲ್ಲವನು ಚಾಣಾಕ್ಷ, ಮೇಧಾವಿ ಎನಿಸಿಕೊಳ್ಳುತ್ತಾನೆ. ರಾಜಕಾರಣಿ ಸುಳ್ಳು ಆಶ್ವಾಸನೆ ಕೊಡುತ್ತಾನೆ ಎಂದು ಗೊತ್ತಿದ್ದರೂ ನಾವು ಭಾಷಣ ಕೇಳಲು ಹೋಗುವುದಿಲ್ಲವೆ? ಇದು ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೂ ಅನ್ವಯಿಸುತ್ತದೆ. ಗಂಡಸು ಹುಟ್ಟಾ ಲಂಪಟ. ಸುಲಭವಾಗಿ ಸುಳ್ಳು ಹೇಳುತ್ತಾನೆ. ಸಿಕ್ಕಿ ಬಿದ್ದರೆ 'ಹೌದು. ಸುಳ್ಳು ಹೇಳಿದೆ. ಏನಿವಾಗ?' ಎಂದು ದಬಾಯಿಸುತ್ತಾನೆ. ಹೆಂಗಸು ಕನ್ನಡಿ ಇಲ್ಲದೆ ಸೀರೆ ಬದಲಾಯಿಸಬಲ್ಲಳು. ಅವಳು ನಿಶ್ಚಯಿಸಿದ್ದಲ್ಲಿ, ಎಂಥ ಜಾಣನಿಗೂ ಪಂಗನಾಮ ಗ್ಯಾರಂಟಿ. ತಂದೆ-ತಾಯಿ, ಗಂಡ-ಹೆಂಡತಿ, ಮಕ್ಕಳು, ಹತ್ತಿರದ ಬಂಧುಗಳು, ಗೊತ್ತೇ ಇರದ ಅಪರಿಚಿತರು ಎಲ್ಲರೂ ಸಮಯಕ್ಕೆ ತಕ್ಕ ಹಾಗೆ ಸುಳ್ಳು ಹೇಳುತ್ತಾರೆ. ಮತ್ತು ಅದು ದೊಡ್ಡ ವಿಷಯ ಏನಲ್ಲ ಎನ್ನುವಂತೆ ವರ್ತಿಸುತ್ತಾರೆ. ಸಮಯ ಪ್ರಜ್ಞೆ ಮತ್ತು ಸೂಕ್ಷ್ಮತೆ ನಮಗೆ ಇರದೇ ಹೋದರೆ ನಾವು ಮೋಸ ಹೋಗುತ್ತಿರುವುದು ಬಹು ಸಮಯದವರೆಗೆ ಗೊತ್ತೇ ಆಗುವುದಿಲ್ಲ.
ಆದರೆ ಸಾಕಿದ ನಾಯಿ ತನ್ನ ಜೀವನದುದ್ದಕ್ಕೂ, ಹಾಗೆಯೆ ದುಡಿದ ದುಡ್ಡು ಅದು ಮುಗಿದು ಹೋಗುವವರೆಗೆ ತಮ್ಮ ಒಡೆಯನಿಗೆ ನಂಬಿಕೆಯಿಂದ ನಡೆದುಕೊಳ್ಳುತ್ತವೆ. ಅನುಕೂಲಕ್ಕೆ ತಕ್ಕಂತೆ ಬದಲಾಗುವುದು ಅವುಗಳ ಜಾಯಮಾನದಲ್ಲಿಲ್ಲ. ಹಾಗಾಗಿಯೇ ಇಂತಹದೊಂದು ಮಾತು ರೂಢಿಗೆ ಬಂದಿರಬೇಕು.
ಬರೀ ನಾಯಿ ಮತ್ತು ದುಡಿದ ದುಡ್ಡೇ ಜೀವನ ಅಲ್ಲವಲ್ಲ. ನಾವು ಬದುಕ ಬೇಕಾಗಿರುವುದು ಮನುಷ್ಯರ ಜೊತೆ. ನಿಮಗೆ ಪ್ರಾಮಾಣಿಕ, ನಂಬಿಕಸ್ಥ ಸ್ನೇಹಿತರು ಸಿಕ್ಕಾಗ ಆ ಸ್ನೇಹವನ್ನು ಎಂದಿಗೂ ಕಳೆದುಕೊಳ್ಳಬೇಡಿ. ಆದರೆ ಉಳಿದೆಲ್ಲರ ಜೊತೆಗೆ ಒಂದು ಎಚ್ಚರಿಕೆಯಿಂದ ವರ್ತಿಸಿ. ಎಲ್ಲರಿಗೂ ನಿಮ್ಮನ್ನು ಮೋಸ ಮಾಡುವ ಉದ್ದೇಶ ಇರುವುದಿಲ್ಲ. ಆದರೆ ನೀವು ಎಲ್ಲರನ್ನು ನಂಬುವ ಮುಗ್ಧರು ಎನ್ನುವ ಸಂದೇಶ ನಿಮ್ಮಿಂದ ಹೋದರೆ, ಮೋಸಗಾರರು ನಿಮ್ಮನ್ನು ಸುತ್ತುವರೆಯಲು ಬಹಳ ಸಮಯ ಬೇಕಿಲ್ಲ. ಎಷ್ಟು ಎಚ್ಚರಿಕೆಯಿಂದ ಇದ್ದರೂ ಮೋಸಗಳು ಆಗಿಯೇ ಬಿಡುತ್ತವಲ್ಲ. ಅಂತಹ ಮೋಸಗಾರರಿಂದ ನಗುತ್ತಲೇ ದೂರವಾಗಿ. ಅವರನ್ನು ನೀವು ನಂಬಲು ಅವರು ನೀವು ಸಾಕಿದ ನಾಯಿಯಲ್ಲ. ನಿಮ್ಮ ಪರ್ಸ್ ಅಲ್ಲಿ ಇರುವ ಏಟಿಎಂ ಕಾರ್ಡ್ ಅಲ್ಲ.