Sunday, April 25, 2021

ಕನ್ನಡ ಮಣ್ಣಿನ ಧ್ರುವತಾರೆ

ಈ ವಾರ ಪೂರ್ತಿ ದೂರದರ್ಶನದಲ್ಲಿ ರಾಜಕುಮಾರ್ ಅಭಿನಯದ ಸಾಲು ಸಾಲು ಚಿತ್ರಗಳು. ಹಾಗೆಯೇ ಪತ್ರಿಕೆ, ಸೋಶಿಯಲ್ ಮೀಡಿಯಾ ದಲ್ಲೂ ಕೂಡ ರಾಜ್ ರ ನೆನಪಿಸಿಕೊಳ್ಳುವ ಲೇಖನಗಳು ಹಲವಾರು. ಇಂದಿನ ವಿಷಯ ಬಿಡಿ. ೫೦ ವರುಷಗಳಿಗೆ ಮುಂಚೆ ರೇಡಿಯೋನೇ ಲಕ್ಸುರಿ ಅನ್ನೋ ಕಾಲ ಇತ್ತಲ್ಲ. ಆಗ ಅದರಲ್ಲೂ ಕೂಡ 'ನಾನೇ ರಾಜಕುಮಾರ' ಎನ್ನುವ ಹಾಡು ಜನಪ್ರಿಯವಾಗಿತ್ತು. ಅವರ ಕಪ್ಪು-ಬಿಳುಪು ಚಿತ್ರಗಳು ಹಣ ಹಾಕಿದ ನಿರ್ಮಾಪಕರಿಗೆ ಮತ್ತು ನಾಲ್ಕಾಣೆ ಕೊಟ್ಟು ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೂ ನಿರಾಸೆ ಮಾಡಲಿಲ್ಲ. ಆರಂಭದಲ್ಲಿ ಭಕ್ತಿ ಪ್ರಧಾನ, ಕೌಟುಂಬಿಕ ಮತ್ತು ಪೌರಾಣಿಕ ಚಿತ್ರಗಳಲ್ಲಿ ಅವರು ಪ್ರಸಿದ್ಧಿಗೆ ಬಂದರೂ, ಆ ಚೌಕಟ್ಟನ್ನು ಮೀರಿ ಮುಂದೆ ಸಾಮಾಜಿಕ ಚಿತ್ರಗಳು, ಬಾಂಡ್ ಚಿತ್ರಗಳಲ್ಲಿ ಕೂಡ ಲೀಲಾಜಾಲವಾಗಿ ಅಭಿನಯಿಸಿ ತೋರಿಸಿದರಲ್ಲ.


ಐತಿಹಾಸಿಕ ವ್ಯಕ್ತಿಗಳು ಹೇಗಿದ್ದರೋ ನಾವು ತಿಳಿಯೆವು. ಆದರೆ 'ಮಯೂರ' ಎಂದರೆ ನನಗೆ ಕಣ್ಮುಂದೆ ಬರುವುದು ಕತ್ತಿ ಹಿಡಿದ ರಾಜಕುಮಾರ್ ಚಿತ್ರ. ಹಾಗೆಯೇ 'ಭಕ್ತ ಕನಕದಾಸ' ಎಂದರೆ 'ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ' ಎಂದು ರಾಜಕುಮಾರ್ ದೀನವಾಗಿ ಹಾಡುವ ಹಾಡು. 'ಕವಿರತ್ನ ಕಾಳಿದಾಸ', 'ಶ್ರೀಕೃಷ್ಣದೇವರಾಯ' ಮುಂತಾದ ಧೀಮಂತ ವ್ಯಕ್ತಿತ್ವಗಳಿಗೆ ಅವರು ಬಣ್ಣ ತುಂಬಿದ್ದು, ನಮ್ಮ ಕಲ್ಪನೆಗಳಿಗೆ ಸ್ಪಷ್ಟತೆ ಕೊಟ್ಟಿತು. ಆ ಪಾತ್ರಗಳಲ್ಲಿ ಬೇರೆಯವರನ್ನು ಕಲ್ಪಿಸಿಕೊಳ್ಳುವುದು ನನಗೆ ಅಸಾಧ್ಯದ ಮಾತು.


ರಾಜಕುಮಾರ್ ಅವರ ಅಭಿಮಾನಿ ಬಳಗವು ಅಪಾರವಾಗಿ ಬೆಳೆಯಿತಲ್ಲ. 'ತಾಯಿಗೆ ತಕ್ಕ ಮಗ' ಚಿತ್ರ ಬಿಡುಗಡೆಯ ನೂಕು ನುಗ್ಗಲಿನಲ್ಲಿ ಕೆಲ ಜನ ಸತ್ತೇ ಹೋದರು. 'ಹುಲಿಯ ಹಾಲಿನ ಮೇವು' ಚಿತ್ರದ ಟಿಕೆಟ್ ಗಳನ್ನು ಸ್ಟೇಡಿಯಂನಲ್ಲಿ ವಿತರಿಸಲಾಗಿತ್ತು. ಅವರ ಸಿನಿಮಾ ಬರಿ ಮನರಂಜನೆಗೆ ಸೀಮಿತವಾಗಲಿಲ್ಲ. 'ನಾವಿರುವ ತಾಣವೇ ಗಂಧದ ಗುಡಿ' ಎಂದು ಹಾಡಿ, ನಮ್ಮಕನ್ನಡ ನಾಡಿನ ಪ್ರೇಮವನ್ನು ಜಾಗೃತಗೊಳಿಸಿದರು.


ಅವರ ನೂರಾರು ಚಿತ್ರಗಳಲ್ಲಿನ ಪಾತ್ರಗಳು, ಅವುಗಳು ನಮ್ಮ ಸಾಮಾಜಿಕ ಬದುಕಿಗೆ ನೈತಿಕ ಚೌಕಟ್ಟು, ಆದರ್ಶಗಳನ್ನು ತುಂಬಿದ್ದು, ಯಾವುದೇ ಒಬ್ಬ ನಟ ಕೊಡಬಹುದಾದ ಮಹತ್ತರ ಕೊಡುಗೆ. ಅದಕ್ಕೆ ಅಲ್ಲವೇ, ಇಂದಿಗೆ ಅವರಿಲ್ಲ ಎಂದರೂ ಅವರ ಪ್ರಭಾವ ಕಡಿಮೆ ಆಗದೆ ಇರುವುದು. ಅದಕ್ಕೆ ಅವರು ನನಗೆ ಸ್ವಲ್ಪವೂ ಹೊಳಪು ಕಳೆದುಕೊಳ್ಳದ ಧ್ರುವತಾರೆ ಎನಿಸುತ್ತಾರೆ.

No comments:

Post a Comment