"ಎಲ್ಲೋ ಜೋಗಪ್ಪ ನಿನ್ನ ಅರಮನೆ?" ಎಂದು ಯಾರಾದರೂ ಕೇಳಿದರೆ ತೋರಿಸಲಿಕ್ಕೆ ಆದರೂ ನಮಗೆ ಮನೆ ಬೇಕಲ್ಲವೇ? ಅದು ಚಿಕ್ಕದಾದರೂ ಆದೀತು, ಶೀಟಿನದು ಆದರೂ ಆದೀತು. ನೆರಳು, ಏಕಾಂತ ಕೊಟ್ಟರೆ ಸಾಕು. ಚಿಕ್ಕ ಮಕ್ಕಳು ಅಮ್ಮನ ಮಡಿಲಿನಲ್ಲಿ ಮಲಗಿದ ಹಾಗೆ, ಮೈ ಚೆಲ್ಲಿ ನಿರಾತಂಕವಾಗಿ ಮಲಗಬಹುದಾದ ಸ್ಥಳ ನಮಗೆ ನಮ್ಮ ಮನೆ. ಯಾವಾಗಲಾದರೂ ಎರಡು-ಮೂರು ದಿನ ಸತತ ಪ್ರವಾಸ ಮಾಡಿ, ಬಸ್-ಸ್ಟಾಂಡ್ ನಲ್ಲೋ, ರೈಲ್ವೆ ಸ್ಟೇಷನ್ ನಲ್ಲೋ ಮಲಗಿದಾಗ, ಯಾವಾಗ ಮನೆ ಸೇರಿದೆವೋ ಎಂದು ಹಾತೊರೆಯುತ್ತಿರುತ್ತೇವೆ. ಸರ್ವಜ್ಞ ತನ್ನ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ವಚನದಲ್ಲಿ ಮೊದಲು ಉಲ್ಲೇಖಿಸಿದ್ದು ಬೆಚ್ಚನೆಯ ಮನೆಯನ್ನು ಅಲ್ಲವೇ? ಸಾಕಷ್ಟು ಜನರ ಗಳಿಕೆಯ ಬಹುಪಾಲು ತಮ್ಮ ಮನೆಯ ಕಟ್ಟುವಿಕೆಗೆ ಖರ್ಚು ಮಾಡಿರುತ್ತಾರೆ. ಮತ್ತು ಅದು ಅವರ ಜೀವಮಾನದ ಸಾಧನೆ ಕೂಡ ಆಗಿರುತ್ತದೆ. ಇಂತಹ ಮನೆಯನ್ನು ಬಿಟ್ಟು ಹೋಗುವ ಸಂಧರ್ಭ ಹಿಂದೆ ಹಲವರಿಗೆ ಬಂದಿತ್ತಲ್ಲವೇ?
ಗೌತಮ, ಬುದ್ಧನಾಗುವುದಕ್ಕಿಂತ ಮುಂಚೆ ರಾಜಕುಮಾರನಾಗಿದ್ದನಲ್ಲವೇ? ರಾಜಕುಮಾರ ಸಿದ್ಧಾರ್ಥ ಸತ್ಯಾನ್ವೇಷಣೆಗೆ ಮನೆ ಬಿಟ್ಟು ಹೊರಟು ನಿಂತಾಗ, ಆತನ ಪತ್ನಿ ಯಶೋಧರೆ ಆ ಅನ್ವೇಷಣೆ, ಸಾಧನೆ ಮನೆಯಲ್ಲಿದ್ದುಕೊಂಡೇ ಮಾಡಬಹುದಲ್ಲವೇ ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಸಿದ್ಧಾರ್ಥ ಕೊಟ್ಟ ಉತ್ತರವೇನು?
ತುಂಬಾ ಶ್ರೀಮಂತನಾಗಿದ್ದು, ಅಷ್ಟೇ ಜಿಪುಣನಾಗಿದ್ದ ನವಕೋಟಿ ನಾರಾಯಣ, ಪುರಂದರ ದಾಸನಾಗಿ ಬದಲಾಗಿ, ಅವನು ಮನೆ ತೊರೆಯುವ ಮುನ್ನ 'ಹೆಂಡತಿ ಸಂತತಿ ಸಾವಿರವಾಗಲಿ' ಎಂದು ಹಾಡಿದ್ದೇಕೆ?
ಮೋಹವೆಂದರೆ ಬರಿ ಧನ-ಕನಕ-ಸ್ತ್ರೀ ಅಷ್ಟೇ ಅಲ್ಲವಲ್ಲ. ನಾವು ಇಷ್ಟ ಪಟ್ಟು ಕಟ್ಟಿಕೊಂಡ ಮನೆಯೂ ಕೂಡ ಮೋಹದ ಒಂದು ಭಾಗ. ಆ ಮನೆಯನ್ನು ತ್ಯಜಿಸಿ ಹೋದವರಿಗೆ ಪ್ರಕೃತಿಯೇ ಮನೆಯಾಗುತ್ತದೆ. ಮಲಗಲು ಮರದ ನೆರಳು, ಪಾಳುಮಂಟಪ, ದೇವಸ್ಥಾನದ ಬಯಲು ಹೀಗೆ ಹಲವಾರು ಸ್ಥಳಗಳು. ಮನೆಯ ಗೋಡೆಗಳು ಬಂಧಿಸಿ ಹಿಡಿದಿಡುವ ಮನಸ್ಥಿತಿ ಬಯಲಿನಲ್ಲಿ ಇರುವುದಿಲ್ಲ. ಆಕಾಶವೇ ಹೊದ್ದಿಕೆಯಾದಾಗ, ಮನದ ವ್ಯಾಪ್ತಿಯೂ ವಿಶಾಲವಾಗುತ್ತದೆ. ಅದನ್ನು ಮನಗಂಡ ಸಾಧು-ಸಂತ-ಶರಣರು, ವಿಶಾಲ ಜಗತ್ತನ್ನೇ ತಮ್ಮ ಮನೆಯನ್ನಾಗಿಸಿಕೊಂಡರು. ಅವರ ಜೀವನ ಅನುಭವ ಕೂಡ ವಿಶಾಲವಾಯಿತು.
ಅವರಿಗೆ ಎಲ್ಲಿ ಹೋದರೂ, 'ಯಾವುದು ನಿಮ್ಮೂರು?', 'ಎಲ್ಲಿ ನಿಮ್ಮ ಮನೆ?' ಎನ್ನುವ ಪ್ರಶ್ನೆ ಎದುರಾಗಲಿಲ್ಲ. ಒಂದು ವೇಳೆ ಅಂತಹ ಪ್ರಶ್ನೆಗಳು ಎದುರಾದರೂ ಮುಗುಳ್ನಗುತ್ತ ಮುಂದೆ ಸಾಗಿದರು. ಆ ಸತ್ಯ ಗೊತ್ತಾಗದ ನಮ್ಮಂಥ ಲೌಕಿಕ ಜನರು, ಯಾರಾದ್ರೂ 'ಎಲ್ಲಿ ನಿಮ್ಮ ಮನೆ?' ಎಂದು ಕೇಳಿದರೆ ಸಾಕು. ನಮ್ಮ ಮನೆಯ ಪೂರ್ತಿ ವಿಳಾಸವನ್ನು ಕೊಡುವ ಪ್ರಯತ್ನ ಮಾಡುತ್ತೇವೆ ಅಲ್ಲವೇ?
No comments:
Post a Comment