Sunday, May 9, 2021

ಪ್ರಕೃತಿಯ ಪ್ರತಿರೂಪವೇ ತಾಯಿ

ಆಗ ತಾನೇ ಹುಟ್ಟಿದ ಕರುವನ್ನು ನೆಕ್ಕುತ್ತ ಸ್ವಚ್ಛಗೊಳಿಸುವ ಹಸು, ಪ್ರಸವದ ನಂತರ ತನ್ನ ಮರಿಯನ್ನು ಹಿಂಗಾಲಿನಿಂದ ಒದ್ದು ಎಬ್ಬಿಸಿ ಸುರಕ್ಷಿತ ತಾಣಕ್ಕೆ ಕರೆದೊಯ್ಯುವ ಜಿರಾಫೆ, ಚೂಪಾದ ಹಲ್ಲಿದ್ದರೂ, ನೋವಾಗದಂತೆ ಮರಿಯನ್ನು ಬಾಯಲ್ಲಿ ಹಿಡಿದು ಬೇರೆ ಸ್ಥಳಕ್ಕೆ ಸಾಗಿಸುವ ಹುಲಿ, ಮೊಟ್ಟೆ ಒಡೆದು ಹೊರಬರುವವರೆಗೆ ದಿನಗಟ್ಟಲೆ ಕಾಯುವ ಮೊಸಳೆ, ಹುಳುಗಳನ್ನು ಹೆಕ್ಕಿ ತಂದು ಗೂಡಲ್ಲಿರುವ ಮರಿಗಳಿಗೆ ತಿನ್ನಿಸುವ ಪಕ್ಷಿಗಳು, ಮಕ್ಕಳ ಸಂತೋಷವನ್ನೇ ತಮ್ಮ ಸಂತೋಷವನ್ನಾಗಿ ಮಾಡಿಕೊಂಡ ನಮ್ಮ ನಿಮ್ಮೆಲ್ಲರ ತಾಯಂದಿರು ಇವರೆಲ್ಲ ಪ್ರಾಣಿ-ಪಕ್ಷಿ-ಮನುಷ್ಯ ಸಂತತಿಯ ಮುಂದುವರಿಕೆಯಲ್ಲಿ ಒಂದು ಬಹು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ.

 

ಪ್ರಾಯ ಬಂದಾಗ, ಹಾರ್ಮೋನ್ ಬದಲಾವಣೆ ಮಾಡಿ ಸಂಗಾತಿಯನ್ನು ಹುಡುಕುವಂತೆ ಪ್ರೇರೇಪಿಸುವ ಪ್ರಕೃತಿ, ಹೊಸ ಪೀಳಿಗೆಯ ರಕ್ಷಣೆ-ಪೋಷಣೆಗೆ ತಾಯಿಯನ್ನು ಮಗುವಿನ ಜೊತೆಗೆ ಭಾವನೆಯ ಬಂಧದಲ್ಲಿ ಬಿಗಿಯುತ್ತದೆ. ತಾಯಿ ಪ್ರೀತಿಯನ್ನು ಪ್ರಕೃತಿ ಹುಟ್ಟಿಸಿದಿದ್ದರೆ ಹೊಸ ಪೀಳಿಗೆ ಉಳಿಯುವದಂತು? ಹಾಗಾಗಿ ತನ್ನದೇ ಪ್ರತಿರೂಪವನ್ನು ಪ್ರಕೃತಿ ತಾಯಿಯಲ್ಲಿ ಸೃಷ್ಟಿಸಿತು. ಹಾಗೆ ನೋಡಿದರೆ ಪ್ರತಿ ಹೆಣ್ಣಿನಲ್ಲೂ ಒಬ್ಬ ತಾಯಿ ಇರುತ್ತಾಳೆ. ತಮ್ಮಂದಿರ ಬೇಕು-ಬೇಡಗಳನ್ನು ತಾಯಿಯಷ್ಟೇ ಸೂಕ್ಷ್ಮವಾಗಿ ಗ್ರಹಿಸಬಲ್ಲ ಅಕ್ಕಂದಿರು, ಶಾಲೆಯಲ್ಲಿ ಪ್ರೀತಿಯಿಂದಲೇ ತಿದ್ದುವ ಶಿಕ್ಷಕರು ಹೀಗೆ ಪ್ರತಿಯೊಂದು ಹೆಣ್ಣಿನಲ್ಲಿ ತಾಯಿಯ ಭಾವ ಜಾಗೃತವಾಗಿರುತ್ತದೆ. ಅದು ಮನುಷ್ಯರಲ್ಲಷ್ಟೇ ಅಲ್ಲ. ಆನೆ ಹಿಂಡಿನಲ್ಲಿ ತಾಯಿಯಷ್ಟೇ ಕಾಳಜಿ ವಹಿಸುವ ಇತರೆ ಹೆಣ್ಣು ಆನೆಗಳು ಇರುತ್ತವೆ. ಕೋತಿ, ಗೊರಿಲ್ಲಾ ದಂತಹ ಸಂಘ ಜೀವಿಗಳು ಗುಂಪಲ್ಲಿರುವ ಮರಿಗಳನ್ನೆಲ್ಲ ಒಟ್ಟಿಗೆ ಬೆಳೆಸುತ್ತವೆ.

 

ಪ್ರಾಣಿ ಸಂಕುಲಕ್ಕೂ, ಮನುಷ್ಯರಿಗೂ ಇರುವ ವ್ಯತ್ಯಾಸ ಎಂದರೆ ತಾಯಿ ಪ್ರಾಣಿಗಳು, ತಮ್ಮ ಮರಿಗಳು ದೊಡ್ಡವರಾದ ಮೇಲೆ ತಮ್ಮ ಭಾವನೆಯನ್ನು ಕಡಿದುಕೊಂಡು ಮುಂದೆ ಸಾಗುತ್ತವೆ. ಆದರೆ ಮನುಷ್ಯರಲ್ಲಿ, ಜನ್ಮ ಕೊಟ್ಟ ತಾಯಿ ದೇವಕಿಗಾಗಲಿ, ಬೆಳೆಸಿದ ತಾಯಿ ಯಶೋದೆಗಾಗಲಿ ತಮ್ಮ ಮಕ್ಕಳು ಎಷ್ಟು ದೊಡ್ಡವರಾದರು ಪ್ರೀತಿ ಕರಗುವುದೇ ಇಲ್ಲ. ಕೆಲವೊಂದು ಸಲ ಅದು ಅತಿಯಾದದ್ದು ಉಂಟು. ಕುರುಡು ಪ್ರೇಮದ ತಾಯಿ ರಾಮಾಯಣಕ್ಕೆ ಕಾರಣವಾದರೆ, ಮಹತ್ವಾಕಾಂಕ್ಷೆ ಉಳ್ಳ ತಾಯಂದಿರು ಮಹಾಭಾರತಕ್ಕೆ ಕಾರಣರಾದರು. ಹಾಗೆಯೆ ಅದು ಹಲವು ಒಳ್ಳೆಯ ಬದಲಾವಣೆಗೂ ದಾರಿಯಾಗಿದೆ. ಛತ್ರಪತಿ ಶಿವಾಜಿ ಒಬ್ಬ ಸಾಹಸಿ ಆಗುವುದಕ್ಕೆ ಕಾರಣ ಆತನ ತಾಯಿಯೇ.

 

ಹೀಗೆ ಇತಿಹಾಸದ ಉದ್ದಕ್ಕೂ ತಾಯಿಯ ಪಾತ್ರ, ಅವರ ನಿಸ್ವಾರ್ಥ ಪ್ರೀತಿ, ಹೊಸ ಪೀಳಿಗೆಗಳನ್ನು ಪೋಷಿಸುವ ಅವರ ಆರೈಕೆಯ ಗುಣ, ಜಗತ್ತಿನಲ್ಲಿ ಜೀವ ಸಂಕುಲ ಮುಂದುವರೆಯಲು ಕಾರಣವಾಗಿದೆ. ಎಲ್ಲ ತಾಯಂದಿರಿಗೂ ಮತ್ತು ತಾಯಿ ಮನಸ್ಸಿನ ಸಹೃದಿಯಿಗಳಿಗೂ ನಮನ.

Saturday, May 1, 2021

ಆಸೆಬುರುಕರಿಗೆ ಅವಕಾಶ ಕೊಟ್ಟಿದ್ದು ನಾವೇ

೧೭೫೭ ನೇ ವರ್ಷದ ಜೂನ್ ತಿಂಗಳು. ವ್ಯಾಪಾರಕ್ಕೆಂದು ಕಲ್ಕತ್ತೆಗೆ ಬಂದಿಳಿದ ಬ್ರಿಟಿಷರು, ಕೋಟೆ ಕಟ್ಟಿ, ಯುದ್ಧ ಸಾಮಗ್ರಿ ಸಂಗ್ರಹಿಸುವುದನ್ನು ವಿರೋಧಿಸಿದ್ದು ಅಂದಿನ ಬಂಗಾಳದ ನವಾಬ ಸಿರಾಜುದ್ದೌಲ. ಬ್ರಿಟಿಷರು ಅಲ್ಲಿ ಸ್ವ-ರಕ್ಷಣೆಯ ಉದ್ದೇಶ ಬಿಟ್ಟರೆ ಬೇರೆ ಏನು ಇಲ್ಲ ಎಂದಿದ್ದು ನವಾಬನಿಗೆ ಸಮಂಜಸ ಅನ್ನಿಸಲಿಲ್ಲ. ಆಗ ನವಾಬನಿನ್ನು ಬಿಸಿ ರಕ್ತದ ಯುವಕ. ಯಾವುದೇ ಯುದ್ಧ ಗೆಲ್ಲಬಲ್ಲನೆಂಬ ಧೈರ್ಯ ಮತ್ತು ತಾಕತ್ತು ಅವನಿಗಿತ್ತು. ಆದರೆ ಇರದೇ ಇದ್ದದ್ದು  ಅನುಭವ ಮತ್ತು ಪರಿಸ್ಥಿತಿ ಹೇಗೆ ಬೇಕಾದರೂ ಬದಲಾಗಬಹುದೆಂಬ ಎಂಬ ಅಂದಾಜು. ಇತ್ತ ಬ್ರಿಟಿಷರ ಮುಂದಾಳತ್ವ ವಹಿಸಿದ್ದು ರಾಬರ್ಟ್ ಕ್ಲೈವ್. ಶ್ರೀಮಂತಿಕೆ, ಅಧಿಕಾರದ ಹಂಬಲದ ಹೊತ್ತು ಭಾರತಕ್ಕೆ ಬಂದವನು. ಲೂಟಿ ಹೊಡೆದ್ದರಲ್ಲಿ ತನಗೂ ಒಂದು ಪಾಲು ಇದೆ ಎನ್ನುವ ಮನಸ್ಥಿತಿ ಇದ್ದವನು.


ಪರಸ್ಪರರ ಅಸಮಾಧಾನ ಯುದ್ಧಕ್ಕೆ ಬಂದು ತಲುಪಲು ಹೆಚ್ಚು ಸಮಯ ಬೇಕಿರಲಿಲ್ಲ. ಹೂಗ್ಲಿ ನದಿಯ ದಡದಲ್ಲಿ, ಪ್ಲಾಸ್ಸಿ ಎನ್ನುವ ಸ್ಥಳದಲ್ಲಿ ಇಬ್ಬರು ಮುಖಾಮುಖಿಯಾದರು. ನವಾಬನದೊ ದೊಡ್ಡ ಸೈನ್ಯ. ೩೫,೦೦೦ ಜನ ಕಾಲಾಳುಗಳು, ೧೫,೦೦೦ ಕುದುರೆ ಸವಾರರು, ೫೩ ಫಿರಂಗಿಗಳೊಡನೆ ಬ್ರಿಟಿಷರ ನಾಶಕ್ಕಾಗಿ ಬಂದಿದ್ದ ನವಾಬ. ಬ್ರಿಟಿಷರ ಸೈನ್ಯದಲ್ಲಿದ್ದು ಮೂರು ಸಾವಿರ ಜನ ಮಾತ್ರ. ಆದರೂ ಯುದ್ಧ ಗೆಲ್ಲುವ ಮಹತ್ವಾಕಾಂಕ್ಷೆ ಹೊಂದಿದ್ದ ರಾಬರ್ಟ್ ಕ್ಲೈವ್ ದುರ್ಮಾರ್ಗಗಳನ್ನು ಹುಡುಕತೊಡಗಿದ್ದ. ನವಾಬನ ಸೈನ್ಯಾಧಿಕಾರಿಯಲ್ಲೊಬ್ಬನಾದ ಮಿರ್ ಜಾಫರ್ ಗೆ ನವಾಬನನ್ನಾಗಿ ಮಾಡುವ ಆಸೆ ತೋರಿಸಿ ಸೆಳೆದೇಬಿಟ್ಟ. ಒಂದು ವೇಳೆ ಮಿರ್ ಜಾಫರ್ ಕೊನೆ ಕ್ಷಣದಲ್ಲಿ ಹಿಂಜರಿದರೆ, ಯುದ್ಧ ಗೆಲ್ಲುವ ಸಾಧ್ಯತೆ ಕಡಿಮೆ ಇದ್ದದ್ದರಿಂದ ನವಾಬನ ಜೊತೆ ಸಂಧಾನ ಮಾಡಿಕೊಂಡರಾಯಿತು ಎಂದು ಯೋಚಿಸಿದ್ದ ರಾಬರ್ಟ್ ಕ್ಲೈವ್. 


ಯುದ್ಧರಂಗದಲ್ಲಿ ಮುಖಾಮುಖಿಯಾದ ಸ್ವಲ್ಪ ಹೊತ್ತಿಗೆ ಮಿರ್ ಜಾಫರ್ ನ ಜೊತೆಗಿದ್ದ ದೊಡ್ಡ ಸೈನ್ಯ ಯುದ್ಧದಲ್ಲಿ ಪಾಲ್ಗೊಳದೇ ಹಿಂದಿರುಗಿತು. ಆಗ ಉಂಟಾದ ಗೊಂದಲ ಯುದ್ಧಕ್ಕೆ ಸನ್ನದ್ದರಾದವನ್ನು ಕೂಡ ಗಾಬರಿಗೊಳಿಸಿತು. ಬ್ರಿಟಿಷರ ಫಿರಂಗಿಗಳನ್ನು ಎದುರಿಸಿ ಹೋರಾಡುತ್ತಿದ್ದವರೂ ಕೂಡ, ಯುದ್ಧ ಬಿಟ್ಟು ಕಾಲ್ಕಿತ್ತರು. ನವಾಬನ ಸೈನ್ಯದಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡರೆ, ಬ್ರಿಟಿಷರಲ್ಲಿ ಆಗಿದ್ದು ೨೨ ಪ್ರಾಣ ಹಾನಿ ಮಾತ್ರ. ಒಂದು ನಿರ್ಣಾಯಕ ಯುದ್ಧವನ್ನು ಮೊದಲ ಬಾರಿಗೆ  ಸುಲಭದಲ್ಲಿ ಗೆದ್ದಿತ್ತು ಬ್ರಿಟಿಷ್ ಮೂಲದ ಈಸ್ಟ್ ಇಂಡಿಯಾ ಕಂಪನಿ. ಹಾಗೆಯೇ ಮಿರ್ ಜಾಫರ್ ನವಾಬನಾದರೂ, ತಾನು ಬ್ರಿಟಿಷರ ಕೈಗೊಂಬೆ ಎನ್ನುವುದು ಅರಿವಾಗಲು ತಡವಾಗಲಿಲ್ಲ.


ಅಲ್ಲಿಯವರೆಗೆ ವ್ಯಾಪಾರ ತರುವ ಲಾಭವನ್ನೇ ನೆಚ್ಚಿಕೊಂಡಿದ್ದ ಈಸ್ಟ್ ಇಂಡಿಯಾ ಕಂಪನಿ ಯುದ್ಧ ಮಾಡುವುದು, ರಾಜ್ಯಭಾರ ಮಾಡುವುದು ಹೆಚ್ಚು ಲಾಭದಾಯಕ ಎನ್ನುವುದು ಕಂಡುಕೊಂಡಿತು. ಕ್ರಮೇಣವಾಗಿ ಇಡೀ ಭಾರತವನ್ನೇ ಆಳುವ ಅವರ ಯೋಜನೆಗೆ ಅಡಿಪಾಯ ಹಾಕಿದ್ದು ರಾಬರ್ಟ್ ಕ್ಲೈವ್ ಎನ್ನುವ ಲೂಟಿಕೋರ. ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಮಾತ್ರ ನಮ್ಮ ಅರಾಜಕತೆ, ಒಳ-ಜಗಳ, ಸಮರ್ಥವಲ್ಲದ ಯುದ್ಧ ಕೌಶಲಗಳು, ದೊಡ್ಡ ಸಂಖ್ಯೆಯಲ್ಲಿದ್ದರೂ ಶಿಸ್ತಿರದ ಸೇನೆ, ಫಿರಂಗಿ-ಬಂದೂಕುಗಳನ್ನು ಭರ್ಚಿ ಹಿಡಿದು ಎದುರಿಸುವ ದಡ್ಡತನ.


ನಮ್ಮ ಮೂರ್ಖತನವನ್ನೇ ಬಂಡವಾಳ ಮಾಡಿಕೊಂಡು ಬ್ರಿಟಿಷರು ನಮ್ಮ ಮೇಲೆ ಅಧಿಕಾರ ಚಲಾಯಿಸಿದ್ದು ಇತಿಹಾಸ. ಶಾಲಾ ಪುಸ್ತಕಗಳಲ್ಲಿ ಸಿಗದಂತಹ ಹಲವಾರು ಮಾಹಿತಿಗಳನ್ನು ನಾನು ಓದಿ ತಿಳಿದುಕೊಂಡಿದ್ದು 'The Anarchy'  ಎನ್ನುವ ಪುಸ್ತಕದ ಮೂಲಕ.




Thursday, April 29, 2021

ಸಮರ್ಪಣೆ, ನಿಸ್ವಾರ್ಥತೆ ಇರದೇ ಇದ್ದರೆ ...

'ಬಾನಲ್ಲು ನೀನೆ, ಭುವಿಯಲ್ಲೂ ನೀನೆ,

ಎಲ್ಲೆಲ್ಲೂ ನೀನೆ, ನನ್ನಲ್ಲೂ ನೀನೇ"

 

ಇದು ಒಂದು ಪ್ರೇಮಗೀತೆ ಆದರೂ, ಭಗವಂತನನ್ನು ಸ್ಮರಿಸಿ ಗೀತೆ ಹಾಡಿದರೆ ಇದು ಒಂದು ಭಕ್ತಿ ಗೀತೆಯಾಗಿ ಬದಲಾದೀತು.

 

'ಪೂಜಿಸಲೆಂದೇ ಹೂಗಳ ತಂದೆ,

ದರುಶನ ಕೋರಿ ನಾ ನಿಂದೆ,

ತೆರೆಯೋ ಬಾಗಿಲನು, ರಾಮ'

 

ಇದು ಒಂದು ದೇವರ ಪೂಜೆ ಗೀತೆ ಎನಿಸಿದರೂ, ಒಂದು ಪ್ರೇಮ ಗೀತೆಯ ತರಹ ಚಿತ್ರಿತಗೊಂಡಿದೆ. ಪ್ರೇಮವಾಗಲಿ, ಭಕ್ತಿಯಾಗಲಿ ಒಂದೇ ಭಾವನೆಯ ತಳಹದಿಯ ಮೇಲೆ ಹುಟ್ಟಿದಂತವು. ಹಾಗಾಗಿ ಎರಡಕ್ಕೂ ಹೆಚ್ಚಿನ ವ್ಯತಾಸವೇನಿಲ್ಲ. ಸಮರ್ಪಣಾ ಹಾಗು ನಿಸ್ವಾರ್ಥ ಭಾವದಿಂದ ಕೂಡಿದ್ದರೆ, ಎರಡು ಕೂಡ ಸುಲಲಿತವಾಗಿ ಸಾಗುತ್ತವೆ. ಇಲ್ಲವೇ ಭ್ರಮ ನಿರಸನ ಎನ್ನುವುದು ಕಟ್ಟಿಟ್ಟ ಬುತ್ತಿ.

 

ಒಂದು ವೇಳೆ ಪ್ರೇಮವು ಸ್ವಾರ್ಥದಿಂದ ಕೂಡಿದ್ದರೆ, ಯಾವುದೊ ಮಹಾನ್ ಪ್ರೇಮಿಯನ್ನು ತಾನು ಪ್ರೀತಿಸಿದ್ದೇನೆ ಎನ್ನುವ ಭ್ರಮೆಯಲ್ಲಿ 'ತೆರೆಯೋ ಬಾಗಿಲನು' ಎಂದು ಹಾಡಿದರೆ, ತೆರೆದ ಬಾಗಿಲಿನಾಚೆ ಇರುವುದು ಒಬ್ಬ ಅಡ್ಡನಾಡಿ, ನಿರುಪಯೋಗಿ ರಾಮ ಎಂದು ಗೊತ್ತಾದಾಗ ನಿರಾಸೆ ಆಗುವುದಿಲ್ಲವೇ? ಪ್ರೀತಿಸುವುದಕ್ಕಿಂತ ಮುಂಚೆಯೇ ತನ್ನ ರಾಮ ಎಂಥವನು ಎನ್ನುವ ಅರಿವು ಇರಬೇಕಿತ್ತಲ್ಲವೇ? ಹಾಗೆಯೇ ಭಕ್ತಿಯೂ ಕೂಡ ಅಷ್ಟೇ. ಯಾವುದೊ ಆಸೆಯನ್ನು ಮನದಲ್ಲಿಟ್ಟುಕೊಂಡು, 'ಇಂದ್ರ-ಚಂದ್ರ' ಎಂದು ದೇವರನ್ನು ಗುಣಗಾನ ಮಾಡುತ್ತಾ ಹಾಡಿದರೆ, ದೇವರು ಒಲಿದೆ ಒಲಿಯುತ್ತಾನೆ ಎಂದು ಏನು ಗ್ಯಾರಂಟಿ?

 

ಪ್ರೇಮಿ ಹೇಗೆ ಕೈ ಕೊಟ್ಟು ಪಾರಾಗುತ್ತಾನೋ, ದೇವರು ಕೂಡ ಕೇಳಿದ್ದು ಕೊಡದೆ ಆಟವಾಡಿಸುತ್ತಾನೆ.

 

ಅದಕ್ಕೆ ಸಮರ್ಪಣೆ, ನಿಸ್ವಾರ್ಥತೆ ಇರದೇ ಇದ್ದರೆ ಪ್ರೇಮವಾಗಲಿ, ಭಕ್ತಿಯಾಗಲಿ ವ್ಯರ್ಥ ಎಂದು ನನಗೆ ಅನಿಸಿದ್ದು. ನೀ ಹೇಗಿದ್ದಿಯೋ ಹಾಗೆ ನನಗೆ ಒಪ್ಪಿಗೆ ಎನ್ನುವ ಪ್ರೇಮಿ, ನೀನು ಕೊಟ್ಟಿದ್ದೆ ನನಗೆ ಪ್ರಸಾದ ಎನ್ನುವ ಭಕ್ತ ಇವರಿಬ್ಬರ ಶೃದ್ಧೆ ಬಹಳ ದೊಡ್ಡದು. ಅವರಿಗೆ ನಿರಾಸೆ ಎನ್ನುವುದಿಲ್ಲ. ಆದರೆ ಅಂತಹ ಪ್ರೇಮಿಗಳಾಗಲಿ, ಭಕ್ತರಾಗಲಿ ಇರುವುದು ವಿರಳ. ಹಾಗಾಗಿ ಪ್ರೀತಿ ವಿರಸದಲ್ಲಿ ಮತ್ತು ಭಕ್ತಿ ಭ್ರಮ ನಿರಸನದಲ್ಲಿ ಬದಲಾಗುವ ಸಂಭವನೀಯತೆಯೇ ಹೆಚ್ಚು. ಹಾಗೆಯೇ ಸಮರ್ಪಣೆ, ನಿಸ್ವಾರ್ಥತೆ ಇದ್ದಲ್ಲಿ  ಪ್ರೇಮ, ಭಕ್ತಿಗಳು ಕೂಡ ಅಜರಾಮರ.

Wednesday, April 28, 2021

ರಾಜಣ್ಣನ ನಾಯಕಿಯರು

ಕಲಾಸಾರ್ವಭೌಮ ರಾಜಕುಮಾರ್ ಗೆ ಹೆಚ್ಚಿನ ಚಿತ್ರಗಳಲ್ಲಿ ಜೊತೆಯಾದದ್ದು ಅಭಿನಯ ಶಾರದೆ ಜಯಂತಿ ಅವರು. ಅವರಿಬ್ಬರೂ ಸುಮಾರು ೩೫ ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ. ನಂತರದ ಸರದಿ ಭಾರತಿ ಅವರದ್ದು. ಸುಮಾರು ೨೧ ಚಿತ್ರಗಳಲ್ಲಿ ಜೋಡಿಯಾಗಿ ಜನಪ್ರಿಯರಾದ ಇವರನ್ನು ಕಂಡೆ 'ಭಲೇ ಜೋಡಿ' ಎನ್ನುವ ಚಿತ್ರ ತೆರೆಗೆ ಬಂದಿತ್ತು. 'ಮೇಯರ್ ಮುತ್ತಣ್ಣ', 'ದೂರದ ಬೆಟ್ಟ', ಐತಿಹಾಸಿಕ ದಾಖಲೆ ಮಾಡಿದ 'ಬಂಗಾರದ ಮನುಷ್ಯ' ಚಿತ್ರಗಳಲ್ಲಿ ರಾಜಣ್ಣನಿಗೆ ಸರಿಸಾಟಿ ಎನ್ನುವಂತೆ ಜೊತೆ ನೀಡಿದ್ದು ಭಾರತಿಯವರು.


ಜಯಪ್ರದ ಅವರ ಜೊತೆ ಬಂದ ಕೆಲವೇ ಚಿತ್ರಗಳು  'ಸನಾದಿ ಅಪ್ಪಣ್ಣ', 'ಹುಲಿಯ ಹಾಲಿನ ಮೇವು', 'ಕವಿರತ್ನ ಕಾಳಿದಾಸ' ಅದ್ಭುತ ಯಶಸ್ಸನ್ನು ಕಂಡವು.


ರಾಜಣ್ಣನ ಮೊದಲಿನ ಚಿತ್ರಗಳಲ್ಲಿ ನಾಯಕಿಯಾಗಿದ್ದ ಫಂಡರಿಬಾಯಿ ಅವರು ಕೊನೆಯ ಚಿತ್ರಗಳಲ್ಲಿ ರಾಜಕುಮಾರ್ ಗೆ ತಾಯಿಯಾಗಿ ನಟಿಸಿದರು. 'ಜೀವನ ಚೈತ್ರ' ಚಿತ್ರದಲ್ಲಿ ಮಗ ವಿಶ್ವ ಬರುವವರೆಗೆ ಕಾದಿದ್ದು ಕೊನೆಗೆ ಅವನ ತೋಳಿನಲ್ಲಿ ಪ್ರಾಣ ಬಿಡುವ ಅವರ ಪಾತ್ರ ಮರೆಯುವುದೆಂತು?


ಆದವಾನಿ ಲಕ್ಶ್ಮಿದೇವಿ ಅವರು ರಾಜಕುಮಾರ್ ಜೊತೆಗೆ ಪೋಷಕ ಪಾತ್ರಗಲ್ಲಿ ನಟಿಸಿದರೆ, ಅವರ ಮಗಳು ರೂಪಾದೇವಿ ಅವರು ರಾಜಕುಮಾರ್ ಗೆ 'ಯಾರಿವನು', 'ಸಮಯದ ಗೊಂಬೆ' ಚಿತ್ರಗಳಲ್ಲಿ ನಾಯಕಿಯಾದರು. ಹಾಗೆಯೇ 'ಹಾವಿನ ಹೆಡೆ' ಚಿತ್ರದಲ್ಲಿ ಅಣ್ಣಾವ್ರು ತಮ್ಮ ಮೊಮ್ಮಗಳ ವಯಸ್ಸಿನ ನಟಿಯ ಜೊತೆ ನಾಯಕ ಪಾತ್ರದಲ್ಲಿ ಮಿಂಚಿದ್ದು ಉಂಟಲ್ಲ.


ನಟಿ ಕಾಂಚನ ಅವರ ಜೊತೆಗೆ ಒಂದು ಪಾತ್ರದಲ್ಲಿ ನಾಯಕನಾದರೆ, ಇನ್ನೊಂದು ಪಾತ್ರದಲ್ಲಿ ಮಗನಾಗಿ ಅಭಿನಯಿಸುತ್ತಾರೆ ರಾಜಕುಮಾರ್. ಇದು 'ಶಂಕರ್ ಗುರು' ಮತ್ತು 'ಬಬ್ರುವಾಹನ' ಚಿತ್ರಗಳಲ್ಲುಂಟು. 


ರಾಜಕುಮಾರ್ ಅವರ ಕೊನೆಯ  ಚಿತ್ರಗಳಲ್ಲಿ ಅವರಿಗೆ ನಾಯಕಿರಾಗಿದ್ದು ಗೀತಾ ಮತ್ತು ಮಾಧವಿ ಅವರು. ಇವರಿಬ್ಬರ ವಿರುದ್ಧ ಸ್ವಭಾವದ ಪಾತ್ರಗಳ ನಡುವೆ 'ಅನುರಾಗ ಅರಳಿತು' ಚಿತ್ರದಲ್ಲಿನ ಅಣ್ಣಾವ್ರ ಅಭಿನಯ ನನಗೆ ಅಚ್ಚು ಮೆಚ್ಚು. ಹಾಗೆಯೇ 'ಆಕಸ್ಮಿಕ' ಚಿತ್ರದಲ್ಲಿ ಇವರಿಬ್ಬರು ಒಬ್ಬರಾದ ನಂತರ ಇನ್ನೊಬರು ಬಂದು ಹೋಗುತ್ತಾರೆ.


ರಸಿಕರ ರಾಜನಿಗೆ ತೆರೆಯ ಮೇಲೆ ೪೫ ಕ್ಕೂ ಹೆಚ್ಚು ನಾಯಕಿಯರು. ರಾಜಕುಮಾರ್ ಅವರ ಚಿತ್ರಗಳು ಮತ್ತು ಪಾತ್ರಗಳು ಎಷ್ಟು ವೈವಿಧ್ಯವೋ ಅವರ ನಾಯಕಿಯರು ಕೂಡ ಅಷ್ಟೇ.

ಕಣ್ಣೀರು ಮಾರೋ ಬಜಾರು

ಇಂದಿಗೆ ದಿನಕ್ಕೆ ನೂರಾರು ಲೆಕ್ಕದಲ್ಲಿ ಬೆಂಗಳೂರಿನಲ್ಲಿ ಹಾಗೆಯೇ ಸಾವಿರ ಲೆಕ್ಕದಲ್ಲಿ ಭಾರತದಲ್ಲಿ, ಕೋವಿಡ್ ಸಂಬಂದಿಸಿದ ಸಾವುಗಳು ಸಂಭವಿಸುತ್ತಿವೆಯಲ್ಲ. ಆಸ್ಪತ್ರೆಗೆ ಸೇರಿದ ಸಾವಿರಾರು ಜನ ಗುಣ ಹೊಂದಿ ಮನೆಗೆ ಮರಳಿ ನೇಪಥ್ಯಕ್ಕೆ ಸರಿದು ಹೋದರೂ, ಅದಕ್ಕೆ ಹೋಲಿಸದರೆ ಕಡಿಮೆ ಪ್ರಮಾಣದ ಸಾವುಗಳು ಹೆಚ್ಚಿನ ಮಟ್ಟದ ಸುದ್ದಿಯಾಗುತ್ತಲಿವೆ.

 

ಇದಕ್ಕೆ ಏನು ಕಾರಣ ಎಂದು ವಿಚಾರ ಮಾಡಿದರೆ, ನಾವು, ನಮ್ಮ ಸರ್ಕಾರ, ನಮ್ಮ ಸಮಾಜ, ನಮ್ಮ ವೈದ್ಯಕೀಯ ವ್ಯವಸ್ಥೆ ಇಂತಹ ದೊಡ್ಡ ಪ್ರಮಾಣದ ಕೋವಿಡ್ ಪ್ರಮಾಣಕ್ಕೆ ತಯ್ಯಾರಿ ಮಾಡಿಕೊಳ್ಳದಿರುವುದು. 'ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೋಡು' ಎಂಬ ಗಾದೆ ಮಾತು ಭಾರತಕ್ಕೆ ಮಾತ್ರ ಅನ್ವಯ ಎನ್ನುವಂತೆ ಇಂದಿಗೆ ಎರಡನೇ ಅಲೆಗೆ ಭಾರತದಲ್ಲಿ ಮಾತ್ರ ಹೆಚ್ಚಿನ ಸಾವು ಸಂಭವಿಸುತ್ತಿವೆ. ಪರಿಸ್ಥಿತಿಯಲ್ಲಿ ಬರೀ ಕೆಲವರನ್ನೇ ದೂರಿ ಏನು ಉಪಯೋಗ ಹೇಳಿ? ವೈದ್ಯರು, ಆಸ್ಪತ್ರೆ ಸಿಬ್ಬಂದಿ ಕೂಡ ಮನುಷ್ಯರೇ ಅಲ್ಲವೇ? ಅವರು ಕೂಡ ಒತ್ತಡಕ್ಕೆ ಒಳಗಾಗುತ್ತಾರೆ. ಹಾಗೆಯೇ ಎಲ್ಲ ವೃತ್ತಿಗಳಲ್ಲಿ ಇರುವಂತೆಯೇ, ಇಲ್ಲಿಯೂ ಅಲ್ಪ ಪ್ರಮಾಣದ ಪರಿಸ್ಥಿತಿಯ ಲಾಭ ಪಡೆಯುವ ಮನಸ್ಥಿತಿ ಉಳ್ಳವರೂ ಇದ್ದಾರೆ. ಲಾಭ ಪಡೆಯುವದಕ್ಕೆಂದೇ ಸೃಷ್ಟಿಯಾದ ಖಾಸಗಿ ಆಸ್ಪತ್ರೆಗಳು ತಮ್ಮ ಲಾಭ-ನಷ್ಟದ ವಿಚಾರವನ್ನು ಮಾಡಿಯೇ ಮಾಡುತ್ತವೆ. ಅದನ್ನು ಜಗಜ್ಜಾಹೀರು ಮಾಡದಿದ್ದರೂ, ಅವರ ಲೆಕ್ಕಾಚಾರ ಅವರಿಗೆ ಅಲ್ಲವೇ. ಆದರೆ ಇದೆಲ್ಲರ ನಡುವೆ ನಾವು ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿ ಕಡೆ ಯಾಕೆ ಗಮನ ಕೊಡಲಿಲ್ಲ? ಎಲ್ಲಿಯೋ ಕಟ್ಟುವ ರಾಮ ಮಂದಿರಕ್ಕೆ ದೇಣಿಗೆ ನೀಡುವ ನಾವು, ನಮ್ಮ ಊರಿನ ಆಸ್ಪತ್ರೆಯ ಕುಂದು-ಕೊರತೆಗಳ ಬಗ್ಗೆ ವಿಚಾರಿಸಲಿಲ್ಲ. 'ಮಾಡಿದ್ದುಣ್ಣೋ ಮಹರಾಯ' ಎನ್ನುವಂತೆ ಇಂದು ನಮ್ಮ ಕರ್ಮ ಫಲಗಳನ್ನು ನಾವು ಅನುಭವಿಸುತ್ತಿದ್ದೇವೆ ಅಷ್ಟೇ.

 

ಆದರೆ ಅವಘಡಗಳು ಸಂಭವಿಸುತ್ತಿರುವುದು ಬರೀ ವೈದ್ಯಕೀಯ ವ್ಯವಸ್ಥೆಯಲ್ಲಷ್ಟೇ ಅಲ್ಲವಲ್ಲ. ಔಷಧಿಗಳ ಅಭಾವ, ಆಂಬುಲೆನ್ಸ್ ಗೆ ಕಾಯುವಿಕೆ, ಸತ್ತ ನಂತರ ಅಂತ್ಯ ಸಂಸ್ಕಾರದಲ್ಲಿ ಆಗುತ್ತಿರುವ ಅನ್ಯಾಯ ಇವೆಲ್ಲೆವುಗಳನ್ನು ಗಮನಿಸಿದರೆ ಇಲ್ಲಿ ಒಂದು ಕಣ್ಣೀರು ಮಾರೋ ಬಜಾರು ಸೃಷ್ಟಿಯಾಗಿದೆ. ಸತ್ತವರು ಪುಣ್ಯ ಕಂಡರೂ, ಅವರ ಸಂಬಂಧಿಗಳ ಕರುಣಾಜನಕ ರೋಧನ ನೋಡಲಾಗದು. ಇಲ್ಲಿ ಸಾಮಾನ್ಯ ಜನ, ಸಂಘ ಸಂಸ್ಥೆಗಳು ಹೆಚ್ಚಿಗೆ ಮಾಡುವುದೇನಿಲ್ಲ. ದೊಡ್ಡ ಕಾರ್ಖಾನೆಗಳು ತಮ್ಮ ಉತ್ಪಾದನೆಯನ್ನು ನಿಲ್ಲಿಸಿ ಆಕ್ಸಿಜನ್ ಉತ್ಪಾದನೆ ಕಡೆ ಗಮನ ಹರಿಸಿದರೂ, ಉಳಿದ ವೈದ್ಯಕೀಯ ವಿಷಯಗಳಲ್ಲಿ ಅವರು ತಲೆ ಹಾಕುವಂತಿಲ್ಲ. ಹಾಗಾಗಿಯೇ ಸಂಭವಿಸುತ್ತಿರುವ ಸಾವುಗಳನ್ನು ನೋಡುತ್ತಾ ಅಸಹಾಯಕರಾಗಿ ನಿಲ್ಲುವ ಪರಿಸ್ಥಿತಿ ಸಾಮಾನ್ಯ ಮನುಷ್ಯನದ್ದು.