ಕಲಾಸಾರ್ವಭೌಮ ರಾಜಕುಮಾರ್ ಗೆ ಹೆಚ್ಚಿನ ಚಿತ್ರಗಳಲ್ಲಿ ಜೊತೆಯಾದದ್ದು ಅಭಿನಯ ಶಾರದೆ ಜಯಂತಿ ಅವರು. ಅವರಿಬ್ಬರೂ ಸುಮಾರು ೩೫ ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ. ನಂತರದ ಸರದಿ ಭಾರತಿ ಅವರದ್ದು. ಸುಮಾರು ೨೧ ಚಿತ್ರಗಳಲ್ಲಿ ಜೋಡಿಯಾಗಿ ಜನಪ್ರಿಯರಾದ ಇವರನ್ನು ಕಂಡೆ 'ಭಲೇ ಜೋಡಿ' ಎನ್ನುವ ಚಿತ್ರ ತೆರೆಗೆ ಬಂದಿತ್ತು. 'ಮೇಯರ್ ಮುತ್ತಣ್ಣ', 'ದೂರದ ಬೆಟ್ಟ', ಐತಿಹಾಸಿಕ ದಾಖಲೆ ಮಾಡಿದ 'ಬಂಗಾರದ ಮನುಷ್ಯ' ಚಿತ್ರಗಳಲ್ಲಿ ರಾಜಣ್ಣನಿಗೆ ಸರಿಸಾಟಿ ಎನ್ನುವಂತೆ ಜೊತೆ ನೀಡಿದ್ದು ಭಾರತಿಯವರು.
ಜಯಪ್ರದ ಅವರ ಜೊತೆ ಬಂದ ಕೆಲವೇ ಚಿತ್ರಗಳು 'ಸನಾದಿ ಅಪ್ಪಣ್ಣ', 'ಹುಲಿಯ ಹಾಲಿನ ಮೇವು', 'ಕವಿರತ್ನ ಕಾಳಿದಾಸ' ಅದ್ಭುತ ಯಶಸ್ಸನ್ನು ಕಂಡವು.
ರಾಜಣ್ಣನ ಮೊದಲಿನ ಚಿತ್ರಗಳಲ್ಲಿ ನಾಯಕಿಯಾಗಿದ್ದ ಫಂಡರಿಬಾಯಿ ಅವರು ಕೊನೆಯ ಚಿತ್ರಗಳಲ್ಲಿ ರಾಜಕುಮಾರ್ ಗೆ ತಾಯಿಯಾಗಿ ನಟಿಸಿದರು. 'ಜೀವನ ಚೈತ್ರ' ಚಿತ್ರದಲ್ಲಿ ಮಗ ವಿಶ್ವ ಬರುವವರೆಗೆ ಕಾದಿದ್ದು ಕೊನೆಗೆ ಅವನ ತೋಳಿನಲ್ಲಿ ಪ್ರಾಣ ಬಿಡುವ ಅವರ ಪಾತ್ರ ಮರೆಯುವುದೆಂತು?
ಆದವಾನಿ ಲಕ್ಶ್ಮಿದೇವಿ ಅವರು ರಾಜಕುಮಾರ್ ಜೊತೆಗೆ ಪೋಷಕ ಪಾತ್ರಗಲ್ಲಿ ನಟಿಸಿದರೆ, ಅವರ ಮಗಳು ರೂಪಾದೇವಿ ಅವರು ರಾಜಕುಮಾರ್ ಗೆ 'ಯಾರಿವನು', 'ಸಮಯದ ಗೊಂಬೆ' ಚಿತ್ರಗಳಲ್ಲಿ ನಾಯಕಿಯಾದರು. ಹಾಗೆಯೇ 'ಹಾವಿನ ಹೆಡೆ' ಚಿತ್ರದಲ್ಲಿ ಅಣ್ಣಾವ್ರು ತಮ್ಮ ಮೊಮ್ಮಗಳ ವಯಸ್ಸಿನ ನಟಿಯ ಜೊತೆ ನಾಯಕ ಪಾತ್ರದಲ್ಲಿ ಮಿಂಚಿದ್ದು ಉಂಟಲ್ಲ.
ನಟಿ ಕಾಂಚನ ಅವರ ಜೊತೆಗೆ ಒಂದು ಪಾತ್ರದಲ್ಲಿ ನಾಯಕನಾದರೆ, ಇನ್ನೊಂದು ಪಾತ್ರದಲ್ಲಿ ಮಗನಾಗಿ ಅಭಿನಯಿಸುತ್ತಾರೆ ರಾಜಕುಮಾರ್. ಇದು 'ಶಂಕರ್ ಗುರು' ಮತ್ತು 'ಬಬ್ರುವಾಹನ' ಚಿತ್ರಗಳಲ್ಲುಂಟು.
ರಾಜಕುಮಾರ್ ಅವರ ಕೊನೆಯ ಚಿತ್ರಗಳಲ್ಲಿ ಅವರಿಗೆ ನಾಯಕಿರಾಗಿದ್ದು ಗೀತಾ ಮತ್ತು ಮಾಧವಿ ಅವರು. ಇವರಿಬ್ಬರ ವಿರುದ್ಧ ಸ್ವಭಾವದ ಪಾತ್ರಗಳ ನಡುವೆ 'ಅನುರಾಗ ಅರಳಿತು' ಚಿತ್ರದಲ್ಲಿನ ಅಣ್ಣಾವ್ರ ಅಭಿನಯ ನನಗೆ ಅಚ್ಚು ಮೆಚ್ಚು. ಹಾಗೆಯೇ 'ಆಕಸ್ಮಿಕ' ಚಿತ್ರದಲ್ಲಿ ಇವರಿಬ್ಬರು ಒಬ್ಬರಾದ ನಂತರ ಇನ್ನೊಬರು ಬಂದು ಹೋಗುತ್ತಾರೆ.
ರಸಿಕರ ರಾಜನಿಗೆ ತೆರೆಯ ಮೇಲೆ ೪೫ ಕ್ಕೂ ಹೆಚ್ಚು ನಾಯಕಿಯರು. ರಾಜಕುಮಾರ್ ಅವರ ಚಿತ್ರಗಳು ಮತ್ತು ಪಾತ್ರಗಳು ಎಷ್ಟು ವೈವಿಧ್ಯವೋ ಅವರ ನಾಯಕಿಯರು ಕೂಡ ಅಷ್ಟೇ.
No comments:
Post a Comment