Saturday, September 18, 2021

ಕಲ್ಲರಳಿ ಹೂವಾಗಿ, ಹೂವರಳಿ ಹೆಣ್ಣಾಗಿ

"ಕಲ್ಲರಳಿ ಹೂವಾಗಿ,

ಹೂವರಳಿ ಹೆಣ್ಣಾಗಿ"


ಹೀಗೆ ಸಾಗುತ್ತದೆ 'ಕಲ್ಲರಳಿ ಹೂವಾಗಿ' ಚಲನಚಿತ್ರದ ಒಂದು ಗೀತೆ. ಇದು ಒಳ್ಳೆ ಗೀತೆ, ಅದರಲ್ಲೇನಿದೆ ವಿಶೇಷ ಎನ್ನುತ್ತೀರಾ? ನೂರಾರು ಕೋಟಿ ವರುಷಗಳ ದೀರ್ಘ ಕಾಲದಲ್ಲಿ ಮನುಜ ಕುಲ ವಿಕಾಸ ಹೊಂದಿದ ಬಗೆಯನ್ನು ಒಬ್ಬ ಕವಿ ಎರಡು ಸಾಲುಗಳಲ್ಲಿ ಹೇಳಿದ ಬಗೆ ಅಚ್ಚರಿ ಮೂಡಿಸಿತು. ಹಾಡಿನ ಮೊದಲು ಎರಡು ಸಾಲುಗಳು ಅಕ್ಷರಶ ಸತ್ಯ ಎನ್ನುವುದು ಜೀವಶಾಸ್ತ್ರ ಓದಿ ನಾನು ಧೃಢಪಡಿಸಿಕೊಂಡೆ. 


ನಾವು ಉಸಿರಾಡುವುದು ಆಕ್ಸಿಜನ್. ಅದು ನಮಗೆ ಜೀವ ಕೊಟ್ಟರೂ, ಆಕ್ಸಿಜನ್ ಅಣು ಮಾತ್ರ ನಿರ್ಜಿವ ವಸ್ತು. ಹೈಡ್ರೋಜನ್ ಮತ್ತು ಆಕ್ಸಿಜನ್ ಸೇರಿ ಆಗುವ ನೀರು ನಮ್ಮ ಜೀವನಕ್ಕೆ ಅವಶ್ಯಕ. ಆದರೆ ಅದು ಕೂಡ ನಿರ್ಜಿವ ವಸ್ತು. ಇವೆರಡಕ್ಕೆಇನ್ನೆರಡು ನಿರ್ಜಿವ ಕಾರ್ಬನ್ ಮತ್ತು ನೈಟ್ರೋಜನ್ ವಸ್ತುಗಳ ಅಣುಗಳು ಒಟ್ಟಾಗಿ ಸೇರಿ ಅಮೈನೊ ಆಸಿಡ್ ಆಯಿತು. ಈ ಅಮೈನೊ ಆಸಿಡ್ ಸರಪಣಿಯ ಹಾಗೆ ಜೊತೆಗೊಂಡು, ಪ್ರೊಟೀನ್ ಆಯಿತು. ಅದು ಜೀನ್ ಬೆಳವಣಿಗೆಗೆ ಕಾರಣವಾಯಿತು. ಅಲ್ಲಿಂದ ಏಕ ಕೋಶ ಜೀವಿಗಳ ಉಗಮ ಆಯಿತು. ನಿರ್ಜಿವ ಕಲ್ಲರಳಿ ಜೀವ ವಿಕಾಸವಾಯಿತು. 


ಆ ಜೀವಗಳು ವಿಕಾಸ ಹೊಂದುತ್ತ ಹಲವಾರು ವೈವಿಧ್ಯಮಯ ಜಲಚರ, ಸರಿಸೃಪಗಳು, ಮರಗಳು ಸೃಷ್ಟಿಗೊಂಡವು. ಮರಗಳಲ್ಲೇ ವಿವಿಧ ಬಗೆಯ ಮರಗಳ ಸೃಷ್ಟಿಯಾಯಿತು. ಆ ಮರಗಳು ದುಂಬಿಗಳನ್ನು ಆಕರ್ಷಿಸಲು ಪೈಪೋಟಿ ನಡೆಸಲೆಂದು ಹುಟ್ಟಿಕೊಂಡಿದ್ದೇ ಹೂವು. ಕಣ್ಣುಸೆಳೆಯುವ ಬಣ್ಣಗಳು,  ಆಕರ್ಷಕ ವಿನ್ಯಾಸ, ಘಮ್ಮೆನ್ನುವ ಸುವಾಸನೆ ಇವೆಲ್ಲವುಗಳು ಹೂಗಳಲ್ಲಿ ಅಡಕಗೊಂಡವು.  ಪ್ರಕೃತಿ ವಿಕಾಸ ಕಲ್ಲಿಗೆ ಜೀವ ತುಂಬಿ, ಸೌಂದರ್ಯದ ಹೂ ಅರಳಿಸಿತು.


ಪ್ರಕೃತಿ ವಿಕಾಸದ ಇತ್ತೀಚಿನ ಹಂತದಲ್ಲಿ ಹುಟ್ಟಿ ಬಂದದ್ದು ಸಸ್ತನಿಗಳು ಮತ್ತು ಕೊನೆಯಲ್ಲಿ ಮಾನವ. ಪ್ರಕೃತಿ ಅಲ್ಲಿಯವೆರೆಗೂ ಕಲಿತುಕೊಂಡು ಬಂದದ್ದೆನ್ನೆಲ್ಲಾ ಮಾನವನ ಸೃಷ್ಟಿಯಲ್ಲಿ ಧಾರೆ ಎರೆಯಿತು. ಹೂವಿನ ಸೌಂದರ್ಯ, ಆಕರ್ಷಣೆಗಳನ್ನು ವಿವೇಕದ ಜೊತೆಗೂಡಿಸಿ ಹೆಣ್ಣಾಗಿಸಿತು. ಹೂ ಅರಳಿ ಹೆಣ್ಣಾಯಿತು. ಪ್ರಕೃತಿ ಹೆಣ್ಣಿನಲ್ಲಿ ಬರಿ ಅಂದವನ್ನಷ್ಟೇ ತುಂಬದೇ, ಕಂದಮ್ಮಗಳ ಆರೈಕೆಯ ಜವಾಬ್ದಾರಿಯನ್ನು ಹೊರಿಸಿತು. ಗಮನಿಸಿ ನೋಡಿ. ನಾವು ನೀರಿಗೆ ಗಂಗೆ, ಭಾಗೀರಥಿ ಎನ್ನುತ್ತೇವೆ. ಆಹಾರಕ್ಕೆ ಅನ್ನಪೂರ್ಣೆಯನ್ನು ಪೂಜಿಸುತ್ತೇವೆ. ಸಂಪತ್ತಿಗೆ ಲಕ್ಷ್ಮಿ, ವಿದ್ಯೆಗೆ ಸರಸ್ವತಿ ಹೀಗೆ ಮಾನವ ಕಲ್ಯಾಣದ ಜವಾಬ್ದಾರಿಯನ್ನು ಪ್ರಕೃತಿ ಹೆಣ್ಣಿನ ಹೆಗಲೇರಿಸಿತು. ಇನ್ನೊಂದು ಅರ್ಥದಲ್ಲಿ ಪ್ರಕೃತಿಯೇ ಹೆಣ್ಣಾಗಿ ಬದಲಾಯಿತು.


ಹೀಗೆ ಕಲ್ಲು, ಹೂವಾಗಿ, ಹೆಣ್ಣಾಗಿ ಬದಲಾಗಲು ಕೋಟ್ಯಂತರ ವರುಷ ತೆಗೆದುಕೊಂಡರೂ, ಆ ಪ್ರಕ್ರಿಯೆಯನ್ನು ಪ್ರಾಸಬದ್ಧ ಪದಗಳಲ್ಲಿ ಒಂದು ಹಾಡಾಗಿ ಕೇಳುವುದು ಎಷ್ಟು ಚೆಂದ ಅಲ್ಲವೇ?

Thursday, September 16, 2021

ಗೈಡ್ ಎನ್ನುವ ವಿಲಕ್ಷಣ ಚಿತ್ರ

'ಮಾಲ್ಗುಡಿ ಡೇಸ್' ಬರೆದ ಆರ್.ಕೆ.ನಾರಾಯಣ್ ಸೃಜನಶೀಲ ಕಥೆಗಳಿಗೆ ಹೆಸರಾದವರು. ಅವರ ಶೈಲಿ, ಸ್ವಭಾವಕ್ಕೆ ವಿರುದ್ಧ ಎನ್ನಿಸುವ ಕಥಾ ವಸ್ತು ಹೊಂದಿದ್ದ 'ಗೈಡ್'  ಎನ್ನುವ ಕಿರುಕಾದಂಬರಿಯನ್ನು ಅವರು ಬರೆದರು. ಅದೇ ಆಶ್ಚರ್ಯ ಎಂದರೆ ಇನ್ನೂ ಆಶ್ಚರ್ಯವೆನ್ನುವಂತೆ ಅದು ೧೯೬೫ ರಲ್ಲಿ ಹಿಂದಿಯಲ್ಲಿ ಚಲನ ಚಿತ್ರವಾಗಿ ಬಿಟ್ಟಿತು ಕೂಡ. ಅದರ ಕಥಾ ವಸ್ತು ಹೀಗಿದೆ.


ನಾಟ್ಯ ಪ್ರವೀಣೆಯಾದ ನಾಯಕಿಗೆ, ಅವಳನ್ನು ಆದರಿಸದ ಗಂಡ. ಪ್ರವಾಸದ ಸಮಯದಲ್ಲಿ ಊರು ಸುತ್ತಾಡಿಸುವ ಲವಲವಿಕೆಯ 'ಗೈಡ್' ನಲ್ಲಿ ಅವಳಿಗೆ ಪ್ರೇಮಾಂಕುರವಾಗುತ್ತದೆ. ಮದುವೆಯನ್ನು ತೊರೆದು ಹೊರ ಬಂದು ಮತ್ತೆ ಕಾಲಿಗೆ ಗೆಜ್ಜೆ ಕಟ್ಟಿಕೊಳ್ಳುತ್ತಾಳೆ. ಕಥಾನಾಯಕ ಗೈಡ್ ನ ಸಹಾಯದಿಂದ ಯಶಸ್ಸಿನ ಮೆಟ್ಟಿಲೇರುತ್ತಾಳೆ. ಅವಳ ನೃತ್ಯ ಪ್ರದರ್ಶನ ನೋಡಲು ಜನ ಮುಗಿಬೀಳುತ್ತಾರೆ. ಆಗ ಹರಿದು ಬಂದ ದುಡ್ಡನ್ನು ನಾಯಕ ದುರುಪಯೋಗ ಮಾಡಿಕೊಳ್ಳುತ್ತಾನೆ. ನಾಯಕಿ ನೀಡಿದ ದೂರಿನ ಆಧಾರದ ಮೇಲೆ ನಾಯಕ ಜೈಲು ಪಾಲಾಗುತ್ತಾನೆ. ಸಮಾಜವನ್ನು ಎದುರು ಹಾಕಿಕೊಂಡು ನಾಯಕಿಗೆ ಆಶ್ರಯ ನೀಡಿದ ನಾಯಕನಿಗೆ ಅದರಿಂದ ಆಘಾತವಾಗುತ್ತದೆ. ಜೈಲಿನಿಂದ ಬಿಡುಗಡೆಯಾದ ನಂತರ ಗೊತ್ತು ಗುರಿಯಿಲ್ಲದೆ ಅಲೆಯುತ್ತಾನೆ. ದಾರಿಯಲ್ಲಿ ಅವನ ಬಟ್ಟೆಗಳು ಹರಿದು ಅವನ ಅವತಾರವೇ ಬದಲಾಗುತ್ತದೆ. ಒಂದು ಹಳ್ಳಿಯಲ್ಲಿ ಮುಗ್ಧ ಜನರು ಅವನನ್ನು ಸಂತ ಎಂದುಕೊಳ್ಳುತ್ತಾರೆ. ನಾಯಕ ಅದನ್ನು ನಿರಾಕರಿಸುವುದಿಲ್ಲ. ಅವನು ಸಂತನಾಗಿ ಪ್ರಸಿದ್ಧಿಯಾಗಿ, ನಾಯಕಿ ಮತ್ತೆ ಅವನನ್ನು ಹುಡುಕಿ ಬರುವಷ್ಟರಲ್ಲಿ ನಾಯಕನ ಕಥೆಯು ಮುಗಿಯುತ್ತದೆ.


ವಿಲಕ್ಷಣ ಎನ್ನಿಸುವ ಈ ಕಥೆಯಲ್ಲಿ, ನಾಯಕ-ನಾಯಕಿ ಪಾತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದು ದೇವ್ ಆನಂದ್ ಮತ್ತು ವಹೀದಾ ರೆಹಮಾನ್. ಕಿಶೋರ್ ಕುಮಾರ್, ಮೊಹಮ್ಮದ್ ರಫಿ, ಲತಾ ಮಂಗೇಶ್ಕರ್ ಹಾಡಿದ ಹಾಡುಗಳು ಅಜರಾಮರ ಎನ್ನುವ ಹಾಗಿವೆ. ಈ ಚಿತ್ರ ಮತ್ತು ಅದರ ಹಾಡುಗಳು ಹಿಂದಿ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲಾದವು. ಹೆಣ್ಣಿನ ಮನಸ್ಸಿನ ಕಂದಕಗಳನ್ನು ಮತ್ತು ಗಂಡಿನ ಸ್ವಭಾವದ ವಿಚಿತ್ರ ತಿರುವುಗಳನ್ನು ಸೇರಿಸಿ ಇಂತಹ ಒಂದು ಕಥೆ ಹೆಣೆದ ಆರ್.ಕೆ.ನಾರಾಯಣ್ ಮತ್ತು ಅದನ್ನು ಚಲನಚಿತ್ರವನ್ನಾಗಿಸಿ ಜನರಿಗೆ ತಲುಪಿಸಿದ ದೇವ್ ಆನಂದ್ ಇಬ್ಬರ ಧೈರ್ಯ ಮೆಚ್ಚುವಂತಹದ್ದು. ಮದುವೆಯಾಗದೆ ಜೊತೆಗಿರುವ ಗಂಡು-ಹೆಣ್ಣಿನ ಸಂಘರ್ಷಗಳನ್ನು ಹೊತ್ತ ಈ ಚಿತ್ರ  ೬೦ ರ ದಶಕದಲ್ಲಿ ತೆರೆ ಕಂಡಿದ್ದು, ಅದು ಸಮಯಕ್ಕೂ ಬಹಳ ಮುನ್ನವೇ ಬಂದ ಹಾಗಿತ್ತು. ಆದರೂ ಗಲ್ಲಾ ಪೆಟ್ಟಿಗೆಯಲ್ಲಿ ಲಾಭ ಗಳಿಸುವುದರ ಜೊತೆಗೆ ಚಿತ್ರದಲ್ಲಿ ಭಾಗಿಯಾದ ಎಲ್ಲರಿಗೂ ಹೆಸರು ತಂದು ಕೊಟ್ಟಿತು. ಈಗಾಗಲೇ ನೀವು ಈ ಚಿತ್ರ ನೋಡಿರದಿದ್ದರೆ, ಒಮ್ಮೆ ಯಾಕೆ ನೋಡಬಾರದು?

  


ಪಾತ್ರಗಳ ನಡುವಿನ ಶುಭ್ರ ಬಿಳಿಯ ವಸ್ತ್ರ

'ಭಕ್ತ ಕುಂಬಾರ' ಚಿತ್ರದಲ್ಲಿ 'ಹರಿ ನಾಮವೇ ಚಂದ, ಅದ ನಂಬಿಕೊ ಕಂದಾ' ಎಂದು ಹಾಡುವ ರಾಜಕುಮಾರ್, 'ಭಕ್ತ ಪ್ರಹ್ಲಾದ' ಚಿತ್ರದಲ್ಲಿ 'ಹರಿಯೇ ವೈರಿ ದಾನವ ಕುಲಕೆ ಮರೆಯದಿರು ಶಿಶುವೇ' ಎಂದು ಹಾಡುತ್ತಾರೆ. ಎಂಥಹ ವಿರೋಧಾಭಾಸ? ಒಂದರಲ್ಲಿ ಹರಿ ಭಕ್ತ, ಇನ್ನೊಂದರಲ್ಲಿ ಹರಿಯ ಪರಮ ವೈರಿ. ನೀರು ತಾನಿಟ್ಟ ಪಾತ್ರೆಯ ಆಕಾರಕ್ಕೆ ಒಗ್ಗಿಕೊಳ್ಳುವಂತೆ, ಅಣ್ಣಾವ್ರಿಗೆ ತಮಗೆ ಸಿಕ್ಕ ಪಾತ್ರಗಳಿಗೆ ನ್ಯಾಯ ಒದಗಿಸುತ್ತ ಹೋಗಲು ಹೇಗೆ ಸಾಧ್ಯವಾಯಿತು? ಏಕೆಂದರೆ ಅವರು ಯಾವುದೇ ಪ್ರತಿಷ್ಠೆಗೆ ಗಂಟು ಬೀಳಲಿಲ್ಲ. ಮೇಕಪ್ ಅಳಿಸಿದ ಮೇಲೆ ಅವರು ತಾವು ನಟಿಸಿದ ಪಾತ್ರಗಳಿಂದ ಹೊರ ಬಂದು ಬಿಡುತ್ತಿದ್ದರು. ಶುಭ್ರ ಬಿಳಿಯ ಬಟ್ಟೆ ಧರಿಸಿ ತಮ್ಮ ವ್ಯಕ್ತಿತ್ವವನ್ನು ಸರಳವಾಗಿಟ್ಟು ಕೊಂಡಿದ್ದರು. ಹೊಸ ಪಾತ್ರಕ್ಕೆ ತಕ್ಕಂತೆ ಬಣ್ಣದ ಬಟ್ಟೆ, ಪಾತ್ರ ಮುಗಿದ ನಂತರ ವಾಪಸ್ಸು ಬಿಳಿಯ ಬಟ್ಟೆ. ಅದಕ್ಕೆ ಅವರಿಗೆ ವೈವಿಧ್ಯಮಯ ಮತ್ತು ವಿರೋಧಾಭಾಸದ ಪಾತ್ರಗಳನ್ನು ತನ್ಮಯತೆಯಿಂದ ಮಾಡಲು ಸಾಧ್ಯವಾಯಿತು.


ನಮ್ಮ ಜೀವನ ಅಷ್ಟೊಂದು ವೈವಿಧ್ಯಮಯ ಅಲ್ಲದಿದ್ದರೂ, ಹಲವು ಪಾತ್ರಗಳನ್ನು ನಾವು ಕೂಡ ನಿಜ ಜೀವನದಲ್ಲಿ ನಿಭಾಯಿಸಬೇಕಾಗುತ್ತದೆ. ಹಿಂದೆ ನನ್ನ ತಲೆಯ ಮೇಲೆ ಕೂಡಿಸಿಕೊಂಡು ಮೆರೆಸಿದ ವ್ಯಕ್ತಿಗಳ ವಿರುದ್ಧ ಇಂದು ನಾನು ತಿರುಗಿ ಬಿದ್ದಿದ್ದೇನೆ. ಎಲ್ಲವು ಸರಿ ಇದ್ದಾಗ ರಾಗ, ಅದು ಮುಗಿದ ಮೇಲೆ ದ್ವೇಷ, ಈ ಹಗ್ಗ ಜಗ್ಗಾಟ ನಾನು ಮಾಡದಿದ್ದರೆ ಸರಿ ಇತ್ತೇನೋ ಅನ್ನಿಸಿದೆ. ಆದರೆ ಆ ಎರಡೂ ಪಾತ್ರಗಳ ನಡುವೆ ನಮಗೆ ಇನ್ನೊಂದು ವ್ಯಕ್ತಿತ್ವ ಇರಲು ಸಾಧ್ಯ ಎಂದು ನನಗೆ ಮೊದಲೇ ತಿಳಿದಿರಲಿಲ್ಲ. ಇಷ್ಟಕ್ಕೂ ನಾವು ಪಾತ್ರ ಮುಗಿದ ಮೇಲೆ ಅದರಿಂದ ಹೊರ ಬಂದು ಬಿಡಬೇಕು ಎನ್ನುವ ತಿಳುವಳಿಕೆ ಕೂಡ ತಡವಾಗಿ ಬಂತು.


ಪ್ರತಿಷ್ಠೆಗೆ, ನಾವು ಅಂದುಕೊಂಡ ಇಮೇಜ್ ಗೆ ಗಂಟು ಬೀಳುವುದನ್ನು ಮನಃಶಾಸ್ತ್ರದಲ್ಲಿ 'ego ' ಎಂದು ಹೇಳಿದರೆ, ಅಧ್ಯಾತ್ಮ ಪ್ರಪಂಚದಲ್ಲಿ ಅದೇ ಅಹಂ. ಯಾವುದರ ಜೊತೆಗೆ ನಾವು ಗುರುತಿಸಿಕೊಳ್ಳುತ್ತೇವೋ, ಅದು ನಮ್ಮನ್ನು ಯಶಸ್ಸಿನ ಶಿಖರಕ್ಕೆ ತಲುಪಿಸಬಹುದು ಅಥವಾ ಸೋಲಿನ ಪ್ರಪಾತಕ್ಕೂ ತಳ್ಳಬಹುದು. ಅದು ನಮ್ಮನ್ನು ಸೋಲು-ಗೆಲುವು, ರಾಗ-ದ್ವೇಷಗಳ ಮಾಯೆಯಲ್ಲಿ ಸಿಲುಕಿಸುತ್ತದೆ. ಯಶಸ್ಸು ತಲೆಗೇರಿ ಅಹಂಕಾರವಾಗಲೂಬಹುದು ಅಥವಾ ಸೋಲು ಹೃದಯದಾಳದಲ್ಲಿ ನೋವು, ಸಂಕಟಗಳ ಕಂದಕ ಸೃಷ್ಟಿಸಬಹುದು. ಅದೇ ನಾವು ಆ ಪಾತ್ರವಾಗದೆ ಹೋದರೆ, ಆ ಪಾತ್ರಕ್ಕೆ ಸಿಕ್ಕುವ ಮರ್ಯಾದೆ-ಅವಮರ್ಯಾದೆ ಎರಡನ್ನು ದೂರದಿಂದ ನಿಂತು ಗಮನಿಸಬಹದು.


ಇತ್ತೀಚಿಗೆ ಈ ಕಲಿಕೆಯನ್ನು ಅಳವಡಿಸಿಕೊಳ್ಳುತ್ತಾ ಹೋಗುತ್ತಿದ್ದೇನೆ. ನನ್ನನ್ನು ಮೆಚ್ಚುವವರನ್ನು, ನನ್ನ ಯಾವ ಪಾತ್ರವನ್ನು ಅವರು ಮೆಚ್ಚಿದ್ದು ಎಂದು ನಾನು ಗಮನಿಸುತ್ತಾ ಹೋಗುತ್ತೇನೆ. ಹಾಗೆಯೆ ನನ್ನನ್ನು ದ್ವೇಷಿಸುವವರು ಕೂಡ ನನ್ನ ಯಾವ ಪಾತ್ರವನ್ನು ಅವರು ದ್ವೇಷಿಸುತ್ತಾರೆ ಎನ್ನುವುದು ಕೂಡ ಗಮನಕ್ಕೆ ಬರುತ್ತಾ ಹೋಗುತ್ತದೆ. ನನಗೆ ಈಗ ಗೊತ್ತಾಗಿದೆ. ಲೌಕಿಕವಾಗಿ ಅವೆರಡು ನಾನೇ ಆದರೂ, ಮನದಾಳದಲ್ಲಿ ಅವೆರಡು ಪಾತ್ರಗಳು ನಾನಲ್ಲ. ಅವಶ್ಯಕತೆ ತಕ್ಕಂತೆ ಬಣ್ಣದ ಬಟ್ಟೆ ಧರಿಸುತ್ತೇನೆ. ಪಾತ್ರ ಮುಗಿದ ಮೇಲೆ ಬಿಳಿ ಬಟ್ಟೆ ಧರಿಸಲು ಮರೆಯುವುದಿಲ್ಲ. ರಾಜಕುಮಾರ್ ರಂತೆ ವೈವಿಧ್ಯಮಯ ಪಾತ್ರ ಅಭಿನಯಿಸುವಷ್ಟು ಪ್ರತಿಭೆ ನನಗಿಲ್ಲ. ಆದರೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಬೇಕು ಮತ್ತು ಆ ಪಾತ್ರಗಳು ನಾವಾಗದಂತೆ ಎಚ್ಚರ ವಹಿಸಬೇಕು ಎನ್ನುವುದನ್ನು ಮಾತ್ರ  ಅವರಿಂದ ಕಲಿತುಕೊಂಡಿದ್ದೇನೆ.

Wednesday, September 15, 2021

ಆಕಾಶದ ನಕ್ಷತ್ರಗಳನ್ನು ಎಣಿಸುವವರಾರು?

ಬೆಂಗಳೂರಿನವರಿಗೆ ಮಾಳಿಗೆಯ ಮೇಲೆ ಮಲಗಿ ಅಭ್ಯಾಸವಿಲ್ಲ. ಆದರೆ ಒಂದೆರಡು ದಶಕಗಳ ಹಿಂದೆ ಉತ್ತರ ಕರ್ನಾಟಕದ ಜನರು ಬೇಸಿಗೆ ಕಾಲದ ರಾತ್ರಿಗಳನ್ನು ಕಳೆಯುತ್ತಿದ್ದದ್ದೇ ಮಾಳಿಗೆಗಳ ಮೇಲೆ. ಆಗ ಹುಣ್ಣಿಮೆ ಬೆಳಕು ತರುವ ಆನಂದ, ಅಮಾವಾಸ್ಯೆ ಕತ್ತಲು ಹುಟ್ಟಿಸುವ ದಿಗಿಲು ಎಲ್ಲವೂ ನಮ್ಮ ಅನುಭವಕ್ಕೆ ಬರಲು ಸಾಧ್ಯವಿತ್ತು. ಮನೆ ಹೊರಗೆ ಕಟ್ಟೆಯ ಮೇಲೆ ಮತ್ತು ಮಾಳಿಗೆ ಮೇಲೆ ಮಲಗಿ ಬೆಳೆದ ನಾನು, ಪ್ರತಿ ರಾತ್ರಿ ಅಂದು ಚಂದ್ರ ಎಲ್ಲಿದ್ದಾನೆ, ಎಷ್ಟು ಚುಕ್ಕಿಗಳು ಕಾಣುತ್ತಿದ್ದಾವೆ ಎಂದು ಆಕಾಶ ದಿಟ್ಟಿಸುತ್ತಲೇ ನಿದ್ರೆಗೆ ಜಾರುತ್ತಿದ್ದೆ. ಆಗ ನನಗೆ ರಾತ್ರಿಯ ಆಕಾಶವೆಂದರೆ ಕಪ್ಪು ಪರದೆಯ ಮೇಲೆ ಮೂಡಿರುವ ಬಿಳಿ ಚುಕ್ಕಿಗಳು ಮಾತ್ರ. ಕೆಲವು ಚುಕ್ಕಿಗಳು ಮಿರಿ ಮಿರಿ ಮಿನುಗಿದರೆ, ಇನ್ನು ಕೆಲವು ಮಂದ. ಕೆಲವು ಮಿಂಚಿ ಮಾಯವಾದರೆ, ಇನ್ನು ಕೆಲವು ಬೇರೆ ಕಡೆ ಪ್ರತ್ಯಕ್ಷ. ಚಂದ್ರನನ್ನು ಗುರುತಿಸುವದಕ್ಕೆ ನಮ್ಮ ಪ್ರಯತ್ನ ನಿಲ್ಲಿಸದೆ, ಸ್ವಲ್ಪ ಪ್ರಯತ್ನ ಪಟ್ಟರೆ ಕೆಂಪು ಬಣ್ಣದ ಮಂಗಳ ಗ್ರಹವನ್ನು ಮತ್ತು ಬೃಹತ್ ಗಾತ್ರದ ಗುರು ಗ್ರಹವನ್ನು ಗುರುತಿಸಲು ಸಾಧ್ಯ, ಟೆಲಿಸ್ಕೋಪ್ ಸಹಾಯ ಪಡೆದರೆ, ನಮ್ಮ ಸೌರ ಮಂಡಲದ ಇತರ ಸದಸ್ಯರನ್ನು ಕಂಡು ಖುಷಿ ಪಡಬಹುದು.

 

ಆಕಾಶ ವೀಕ್ಷಣೆಯ ಹವ್ಯಾಸ ಪ್ರಾಚೀನ ಕಾಲದಿಂದಲೂ ಭಾರತೀಯರಿಗಿತ್ತು. ಹೆಣ್ಣು ಮಕ್ಕಳು ಚುಕ್ಕಿ ಸೇರಿಸಿ ರಂಗೋಲಿ ಬಿಡಿಸಿದ ಹಾಗೆ, ಆಕಾಶದ ಚುಕ್ಕಿಗಳನ್ನು ಸೇರಿಸಿ, ಯಾವುದೊ ಒಂದು ಪ್ರಾಣಿಗೆ ಹೋಲಿಕೆ ಮಾಡಿ ಜ್ಯೋತಿಷ್ಯ ಶಾಸ್ತ್ರದ ರಾಶಿಗಳನ್ನು ಮತ್ತು ಅವುಗಳಿಗೆ ನಮ್ಮ ಜೀವನ ಜೊತೆ ಇರಬಹುದಾದ ಅವಿನಾನುಭವ ಸಂಬಂಧಗಳ ಬಗ್ಗೆ ಸವಿಸ್ತಾರ ಸಿದ್ಧಾಂತವನ್ನೇ ಅವರು ಮಂಡಿಸಿದರು. ನಮ್ಮ ಜೀವನವನ್ನು ನಾವು ಕೈಗತ್ತಿಕೊಳ್ಳದೆ ಇದ್ದರೆ, ನಮಗೆ ಶನಿ ಗ್ರಹ ಕಾಡದೆ ಬಿಡುವುದಿಲ್ಲ.

 

ಆಕಾಶ ವೀಕ್ಷಣೆಯ ಹುಚ್ಚು ಪಾಶ್ಚತ್ಯರಿಗೆ ಏನು ಕಡಿಮೆ ಇರಲಿಲ್ಲ. ಕೊಪರ್ನಿಕಸ್ ೧೬ನೆ ಶತಮಾನದಲ್ಲಿ, ಭೂಮಿಯೇ ಸೂರ್ಯನ ಸುತ್ತುವುದು ಎಂದು ಹೇಳಿದ್ದು ಅರಗಿಸಿಕೊಳ್ಳಲು ಮನುಷ್ಯ ಕುಲಕ್ಕೆ ಶತಮಾನಗಳೇ ಬೇಕಾದವು. ಗೆಲಿಲಿಯೋ ತಾನೇ ಒಂದು ಟೆಲಿಸ್ಕೋಪ್ ತಯಾರಿಸಿಕೊಂಡಿದ್ದ. ಭೂಮಿಯ ಸುತ್ತ ಚಂದ್ರ ಸುತ್ತಿದ ಹಾಗೆ, ಗುರು ಗ್ರಹವನ್ನು ಮೂರು ಚಂದ್ರರು ಸುತ್ತುವುದನ್ನು ತನ್ನ ಟೆಲಿಸ್ಕೋಪ್ ಮೂಲಕ ತೋರಿಸಿದ. ಅಲ್ಲಿಂದ ಶುರುವಾದ ನಮ್ಮ ಮನುಜ ಕುಲದ ಆಕಾಶದ ಚುಕ್ಕಿಗಳ ಎಣಿಸುವಿಕೆಯ ಕಾರ್ಯ ಇಂದಿಗೂ ಮುಂದುವರೆದಿದೆ.

 

ನಮ್ಮ ಸೌರ ಮಂಡಲವನ್ನೇ ನಮ್ಮ ಜಗತ್ತು ಎಂದುಕೊಂಡಿದ್ದ ನಾವು, ನಮ್ಮ ಸೂರ್ಯನಿಗಿಂತ ನೂರು ಪಟ್ಟು ದೊಡ್ಡ ಸೂರ್ಯ ಇರುವ ಸಂಗತಿ ತಿಳಿದುಕೊಂಡೆವು. ಸ್ವಂತ ಬೆಳಕು ಚೆಲ್ಲುವ ನಕ್ಷತ್ರಗಳಲ್ಲಿ ಸೂರ್ಯನು ಕೂಡ ಒಂದು ನಕ್ಷತ್ರ. ಹೀಗೆ ಮೂರು ಸಾವಿರಕ್ಕೂ ಹೆಚ್ಚು ನಕ್ಷತ್ರಗಳು ಸೇರಿ ನಮ್ಮ ಮಿಲ್ಕಿ ವೆ ಗ್ಯಾಲಕ್ಸಿ (ತಾರಾಗಣ) ಆಗಿದೆ. ನಮ್ಮ ಪಕ್ಕದ ಆಂಡ್ರೊಮೆಡಾ ಗ್ಯಾಲಕ್ಸಿ, ನಮ್ಮ ಗ್ಯಾಲಕ್ಸಿ ಗಿಂತ ದೊಡ್ಡದು.  ಹೀಗೆ ಕೋಟ್ಯಂತರ ಗ್ಯಾಲಕ್ಸಿ ಗಳನ್ನೂ ಒಟ್ಟಾಗಿ ಯೂನಿವರ್ಸ್ (ಬ್ರಹ್ಮಾಂಡ) ಎನ್ನುತ್ತೇವೆ. ಈ ಬ್ರಹ್ಮಾಂಡಕ್ಕೆ ಇರುವ ಹಲವಾರು ಆಯಾಮಗಳನ್ನು ಒಟ್ಟಾಗಿ multiverse ಎನ್ನುತ್ತೇವೆ.

 

ಆಕಾಶದ ಚುಕ್ಕಿಗಳನ್ನು ಎಣಿಸುವ ವಿಫಲ ಯತ್ನಗಳನ್ನು ಚಿಕ್ಕಂದಿನಲ್ಲೇ ಕೈ ಬಿಟ್ಟಿರುವವರು ನಾವಾದರೆ, ಪ್ರಯತ್ನ ಜಾರಿಯಲ್ಲಿಟ್ಟಿರುವವರು ಮಾತ್ರ ಹೊಸ ಹೊಸ ನಕ್ಷತ್ರಗಳನ್ನು ಹುಡುಕಿ ಪಟ್ಟಿಗೆ ಸೇರಿಸುತ್ತಲೇ ಇದ್ದಾರೆ. ಈ ಕಾರ್ಯ ಹಲವು ಶತಮಾನಗಳಿಂದ ಜಾರಿಯಲ್ಲಿದೆ. ಆದರೂ ಮುಗಿಯಲು ಸಾಧ್ಯ ಆಗುತ್ತಿಲ್ಲ. ಏಕೆಂದರೆ ಬ್ರಹ್ಮಾಂಡ ಅಗಾಧ ಅಷ್ಟೇ ಅಲ್ಲ, ಅನಂತ ಕೂಡ.

Monday, September 13, 2021

ನೋಡಿದ ಕಡೆಯೆಲ್ಲ ದೇವರು

 ದೇವರನ್ನು ಎಲ್ಲೆಲ್ಲೋ ಹುಡುಕಿದೆ,

ಸಿಕ್ಕಿದ್ದು ಬರೀ ನಾನೇ


ನನ್ನನ್ನೇ ಹುಡುಕತೊಡಗಿದೆ,
ನೋಡಿದ ಕಡೆಯೆಲ್ಲ ದೇವರು

- ರೂಮಿ (ಪರ್ಷಿಯಾ ದೇಶದ ಕವಿ)