'ಭಕ್ತ ಕುಂಬಾರ' ಚಿತ್ರದಲ್ಲಿ 'ಹರಿ ನಾಮವೇ ಚಂದ, ಅದ ನಂಬಿಕೊ ಕಂದಾ' ಎಂದು ಹಾಡುವ ರಾಜಕುಮಾರ್, 'ಭಕ್ತ ಪ್ರಹ್ಲಾದ' ಚಿತ್ರದಲ್ಲಿ 'ಹರಿಯೇ ವೈರಿ ದಾನವ ಕುಲಕೆ ಮರೆಯದಿರು ಶಿಶುವೇ' ಎಂದು ಹಾಡುತ್ತಾರೆ. ಎಂಥಹ ವಿರೋಧಾಭಾಸ? ಒಂದರಲ್ಲಿ ಹರಿ ಭಕ್ತ, ಇನ್ನೊಂದರಲ್ಲಿ ಹರಿಯ ಪರಮ ವೈರಿ. ನೀರು ತಾನಿಟ್ಟ ಪಾತ್ರೆಯ ಆಕಾರಕ್ಕೆ ಒಗ್ಗಿಕೊಳ್ಳುವಂತೆ, ಅಣ್ಣಾವ್ರಿಗೆ ತಮಗೆ ಸಿಕ್ಕ ಪಾತ್ರಗಳಿಗೆ ನ್ಯಾಯ ಒದಗಿಸುತ್ತ ಹೋಗಲು ಹೇಗೆ ಸಾಧ್ಯವಾಯಿತು? ಏಕೆಂದರೆ ಅವರು ಯಾವುದೇ ಪ್ರತಿಷ್ಠೆಗೆ ಗಂಟು ಬೀಳಲಿಲ್ಲ. ಮೇಕಪ್ ಅಳಿಸಿದ ಮೇಲೆ ಅವರು ತಾವು ನಟಿಸಿದ ಪಾತ್ರಗಳಿಂದ ಹೊರ ಬಂದು ಬಿಡುತ್ತಿದ್ದರು. ಶುಭ್ರ ಬಿಳಿಯ ಬಟ್ಟೆ ಧರಿಸಿ ತಮ್ಮ ವ್ಯಕ್ತಿತ್ವವನ್ನು ಸರಳವಾಗಿಟ್ಟು ಕೊಂಡಿದ್ದರು. ಹೊಸ ಪಾತ್ರಕ್ಕೆ ತಕ್ಕಂತೆ ಬಣ್ಣದ ಬಟ್ಟೆ, ಪಾತ್ರ ಮುಗಿದ ನಂತರ ವಾಪಸ್ಸು ಬಿಳಿಯ ಬಟ್ಟೆ. ಅದಕ್ಕೆ ಅವರಿಗೆ ವೈವಿಧ್ಯಮಯ ಮತ್ತು ವಿರೋಧಾಭಾಸದ ಪಾತ್ರಗಳನ್ನು ತನ್ಮಯತೆಯಿಂದ ಮಾಡಲು ಸಾಧ್ಯವಾಯಿತು.
ನಮ್ಮ ಜೀವನ ಅಷ್ಟೊಂದು ವೈವಿಧ್ಯಮಯ ಅಲ್ಲದಿದ್ದರೂ, ಹಲವು ಪಾತ್ರಗಳನ್ನು ನಾವು ಕೂಡ ನಿಜ ಜೀವನದಲ್ಲಿ ನಿಭಾಯಿಸಬೇಕಾಗುತ್ತದೆ. ಹಿಂದೆ ನನ್ನ ತಲೆಯ ಮೇಲೆ ಕೂಡಿಸಿಕೊಂಡು ಮೆರೆಸಿದ ವ್ಯಕ್ತಿಗಳ ವಿರುದ್ಧ ಇಂದು ನಾನು ತಿರುಗಿ ಬಿದ್ದಿದ್ದೇನೆ. ಎಲ್ಲವು ಸರಿ ಇದ್ದಾಗ ರಾಗ, ಅದು ಮುಗಿದ ಮೇಲೆ ದ್ವೇಷ, ಈ ಹಗ್ಗ ಜಗ್ಗಾಟ ನಾನು ಮಾಡದಿದ್ದರೆ ಸರಿ ಇತ್ತೇನೋ ಅನ್ನಿಸಿದೆ. ಆದರೆ ಆ ಎರಡೂ ಪಾತ್ರಗಳ ನಡುವೆ ನಮಗೆ ಇನ್ನೊಂದು ವ್ಯಕ್ತಿತ್ವ ಇರಲು ಸಾಧ್ಯ ಎಂದು ನನಗೆ ಮೊದಲೇ ತಿಳಿದಿರಲಿಲ್ಲ. ಇಷ್ಟಕ್ಕೂ ನಾವು ಪಾತ್ರ ಮುಗಿದ ಮೇಲೆ ಅದರಿಂದ ಹೊರ ಬಂದು ಬಿಡಬೇಕು ಎನ್ನುವ ತಿಳುವಳಿಕೆ ಕೂಡ ತಡವಾಗಿ ಬಂತು.
ಪ್ರತಿಷ್ಠೆಗೆ, ನಾವು ಅಂದುಕೊಂಡ ಇಮೇಜ್ ಗೆ ಗಂಟು ಬೀಳುವುದನ್ನು ಮನಃಶಾಸ್ತ್ರದಲ್ಲಿ 'ego ' ಎಂದು ಹೇಳಿದರೆ, ಅಧ್ಯಾತ್ಮ ಪ್ರಪಂಚದಲ್ಲಿ ಅದೇ ಅಹಂ. ಯಾವುದರ ಜೊತೆಗೆ ನಾವು ಗುರುತಿಸಿಕೊಳ್ಳುತ್ತೇವೋ, ಅದು ನಮ್ಮನ್ನು ಯಶಸ್ಸಿನ ಶಿಖರಕ್ಕೆ ತಲುಪಿಸಬಹುದು ಅಥವಾ ಸೋಲಿನ ಪ್ರಪಾತಕ್ಕೂ ತಳ್ಳಬಹುದು. ಅದು ನಮ್ಮನ್ನು ಸೋಲು-ಗೆಲುವು, ರಾಗ-ದ್ವೇಷಗಳ ಮಾಯೆಯಲ್ಲಿ ಸಿಲುಕಿಸುತ್ತದೆ. ಯಶಸ್ಸು ತಲೆಗೇರಿ ಅಹಂಕಾರವಾಗಲೂಬಹುದು ಅಥವಾ ಸೋಲು ಹೃದಯದಾಳದಲ್ಲಿ ನೋವು, ಸಂಕಟಗಳ ಕಂದಕ ಸೃಷ್ಟಿಸಬಹುದು. ಅದೇ ನಾವು ಆ ಪಾತ್ರವಾಗದೆ ಹೋದರೆ, ಆ ಪಾತ್ರಕ್ಕೆ ಸಿಕ್ಕುವ ಮರ್ಯಾದೆ-ಅವಮರ್ಯಾದೆ ಎರಡನ್ನು ದೂರದಿಂದ ನಿಂತು ಗಮನಿಸಬಹದು.
ಇತ್ತೀಚಿಗೆ ಈ ಕಲಿಕೆಯನ್ನು ಅಳವಡಿಸಿಕೊಳ್ಳುತ್ತಾ ಹೋಗುತ್ತಿದ್ದೇನೆ. ನನ್ನನ್ನು ಮೆಚ್ಚುವವರನ್ನು, ನನ್ನ ಯಾವ ಪಾತ್ರವನ್ನು ಅವರು ಮೆಚ್ಚಿದ್ದು ಎಂದು ನಾನು ಗಮನಿಸುತ್ತಾ ಹೋಗುತ್ತೇನೆ. ಹಾಗೆಯೆ ನನ್ನನ್ನು ದ್ವೇಷಿಸುವವರು ಕೂಡ ನನ್ನ ಯಾವ ಪಾತ್ರವನ್ನು ಅವರು ದ್ವೇಷಿಸುತ್ತಾರೆ ಎನ್ನುವುದು ಕೂಡ ಗಮನಕ್ಕೆ ಬರುತ್ತಾ ಹೋಗುತ್ತದೆ. ನನಗೆ ಈಗ ಗೊತ್ತಾಗಿದೆ. ಲೌಕಿಕವಾಗಿ ಅವೆರಡು ನಾನೇ ಆದರೂ, ಮನದಾಳದಲ್ಲಿ ಅವೆರಡು ಪಾತ್ರಗಳು ನಾನಲ್ಲ. ಅವಶ್ಯಕತೆ ತಕ್ಕಂತೆ ಬಣ್ಣದ ಬಟ್ಟೆ ಧರಿಸುತ್ತೇನೆ. ಪಾತ್ರ ಮುಗಿದ ಮೇಲೆ ಬಿಳಿ ಬಟ್ಟೆ ಧರಿಸಲು ಮರೆಯುವುದಿಲ್ಲ. ರಾಜಕುಮಾರ್ ರಂತೆ ವೈವಿಧ್ಯಮಯ ಪಾತ್ರ ಅಭಿನಯಿಸುವಷ್ಟು ಪ್ರತಿಭೆ ನನಗಿಲ್ಲ. ಆದರೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಬೇಕು ಮತ್ತು ಆ ಪಾತ್ರಗಳು ನಾವಾಗದಂತೆ ಎಚ್ಚರ ವಹಿಸಬೇಕು ಎನ್ನುವುದನ್ನು ಮಾತ್ರ ಅವರಿಂದ ಕಲಿತುಕೊಂಡಿದ್ದೇನೆ.
No comments:
Post a Comment