ನೀವು ಯಾವುದೊ ಸಿನಿಮಾ ನೋಡಲು ಹೋಗಿರುತ್ತೀರಿ. ಅದು ನಿಮಗೆ ಇಷ್ಟವಾಗಿ ಬಿಡುತ್ತದೆ. ಸ್ವಲ್ಪ ಸಮಯದ ನಂತರ ಅದನ್ನು ಇನ್ನೊಮ್ಮೆ ನೋಡಲು ಹೋಗುತ್ತೀರಿ. ಈ ಸಲ ನಿಮಗೆ ಆ ಸಿನಿಮಾ ಮೊದಲ ಸಲ ನೋಡಿದ್ದಕ್ಕಿಂತ ಚೆನ್ನಾಗಿ ಅರ್ಥವಾಗುತ್ತದೆ. ಅದೇಕೆ? ನೋಡಿದ್ದು ಅದೇ ಸಿನಿಮಾ, ಅವೇ ಕಣ್ಣುಗಳ ಮೂಲಕ. ಬದಲಾಗಿದ್ದು ಏನು? ಅಲ್ಲಿ ಬದಲಾಗಿದ್ದು ನಿಮ್ಮ ಮನಸ್ಥಿತಿ. ಮೊದಲ ಸಲ ಕುತೂಹಲದಿಂದ ಸಿನಿಮಾ ನೋಡಿರುತ್ತೀರಿ. ಅದು ನಿಮ್ಮ ಭಾವನೆಗಳನ್ನು ಬಡಿದೆಬ್ಬಿಸಿರುತ್ತದೆ. ಆಗ ನಿಮ್ಮ ಕಣ್ಣು ನೋಡಿದ್ದು ನಿಮ್ಮ ಮನಸ್ಸು ಸಂಪೂರ್ಣ ಗ್ರಹಿಸಲು ಸಾಧ್ಯವಾಗದೆ ಹೋಗುತ್ತದೆ. ಎರಡನೆಯ ಸಲ ಸಿನಿಮಾ ನೋಡಿದಾಗ ನಿಮಗೆ ಮೊದಲಿನ ಕುತೂಹಲ ಇಲ್ಲ. ಮತ್ತು ನಿಮ್ಮ ಭಾವನೆಗಳು, ಉದ್ವೇಗಗಳು ನಿಮ್ಮ ಹಿಡಿತದಲ್ಲಿ ಇವೆ. ಹಾಗಾಗಿ ನಿಮ್ಮ ಕಣ್ಣು ನೋಡಿದ್ದು, ನಿಮ್ಮ ಮನಸ್ಸಿನ ಗ್ರಹಿಕೆಗೆ ಸಂಪೂರ್ಣ ಬರಲು ಸಾಧ್ಯವಾಯಿತು. ಕಣ್ಣು ಮತ್ತು ಗ್ರಹಿಕೆಯ ನಡುವೆ ತಡೆಗೋಡೆಯಾಗಿದ್ದು ಭಾವನೆಗಳು. ಆ ಪರದೆ ಸರಿದ ಮೇಲೆ, ನೀವು ವಾಸ್ತವಕ್ಕೆ ಹತ್ತಿರವಾದಿರಿ.
ನಮ್ಮ ಮನಸ್ಸು ಹಲವಾರು ಕಾರ್ಯಗಳನ್ನು ನಿಭಾಯಿಸುತ್ತದೆ. ವಿಷಯಗಳನ್ನು ಗ್ರಹಿಸುವುದು, ನೆನಪಿಡುವುದು, ವಿಚಾರ ಮಾಡುವುದು, ಭಾವನೆಗಳನ್ನು ಹೊಮ್ಮಿಸುವುದು ಹೀಗೆ ಇವೆಲ್ಲವುಗಳನ್ನು ಒಟ್ಟಾಗಿ ನಾವು ಮನಸ್ಸು ಎನ್ನುತ್ತೇವೆ. ಇವುಗಳಲ್ಲಿ ಭಾವನೆಗಳು ಅವಶ್ಯಕವು ಹೌದು ಆದರೆ ಅವು ಅತಿಯಾದಾಗ ಮನಸ್ಸಿನ ಉಳಿದ ಕಾರ್ಯಗಳು ಮಸುಕಾಗಿ ಬಿಡುತ್ತವೆ. ಭಾವನೆಗಳು ಹೆಚ್ಚಾದಾಗ ಅವು ಉದ್ವೇಗಗಳಾಗಿ ಬದಲಾಗಿ ನಮ್ಮ ಅಹಂ ಅನ್ನು ಪೋಷಿಸುತ್ತವೆ. ಉದ್ವೇಗಗಳು ಹಿಡಿತದಲ್ಲಿ ಇರದ ಮನುಷ್ಯನನ್ನು ಗಮನಿಸಿ ನೋಡಿ. ಅವನಲ್ಲಿ ವಿವೇಕ ಎನ್ನುವುದು ಸಂಪೂರ್ಣ ಮರೆಯಾಗಿ ಹೋಗಿರುತ್ತದೆ. ಆದರೆ ಜೀವನದಲ್ಲಿ ನಡೆಯುವ ಎಷ್ಟೋ ಘಟನೆಗಳು, ದೊಡ್ಡ ದೊಡ್ಡ ಸೋಲುಗಳು, ಹತ್ತಿರದವರ ಮರಣ ಇತ್ಯಾದಿ ಮನುಷ್ಯನ ಅಹಂ ಅನ್ನು ಘಾಸಿಗೊಳಿಸುತ್ತವೆ. ಅಹಂ ಕುಗ್ಗಿದಾಗ, ಆ ಜಾಗದಲ್ಲಿ ಕ್ರಮೇಣ ವಿವೇಕ ತುಂಬಿಕೊಳ್ಳುತ್ತದೆ. ಪ್ರಜ್ಞೆ ಜಾಗೃತವಾಗುತ್ತ ಹೋಗುತ್ತದೆ. ಏಕೆಂದರೆ ಈಗ ಅವನಿಗೆ ಉದ್ವೇಗಗಳ ತೀವ್ರತೆ ಕಡಿಮೆಯಾಗಿ, ವಾಸ್ತವದ ಸರಿಯಾದ ಗ್ರಹಿಕೆ ಸಾಧ್ಯವಾಗಿದೆ. ಅಲ್ಲಿಂದ ಮುಂದೆ ಅವನು ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾಗಿರಲು ಸಾಧ್ಯ. ಅವನೀಗ ಅಹಂ ಅನ್ನು ಪೋಷಿಸುವ ಭಾವನೆಗಳನ್ನು ಮೀರಿ ಬೆಳೆದಿದ್ದಾನೆ.
ಈ ವಿಷಯ ಬೇಗ ಅರ್ಥವಾದಷ್ಟು ನಮಗೆ ಒಳ್ಳೆಯದು. ಭಾವನೆಗಳು ಹುಟ್ಟಿಸುವ ಭ್ರಮಾಲೋಕಕ್ಕಿಂತ, ವಾಸ್ತವದಲ್ಲಿ ಬದುಕಿದಷ್ಟು ವಾಸಿ. ನಿಮ್ಮ ಮನೆಯಲ್ಲಿ ತಾನೇ ದೊಡ್ಡವನು ಎನ್ನುವ ಅಹಂ ಯಾರಿಗಾದರೂ ಇದ್ದರೆ, ಅವರನ್ನು ಮೊದಲು ಸೋಲಲು ಬಿಡಿ. ಅದೇ ಅವರಿಗೆ ನೀವು ನೀಡುವ ದೊಡ್ಡ ನೆರವು. ಸೋತ ನಂತರ ಕ್ರಮೇಣ ಅವರು ಪ್ರಜ್ಞಾವಂತರಾಗಲು ಸಾಧ್ಯ. ಅದು ಬಿಟ್ಟು ಅವರ ಅಹಂ ಅನ್ನು ಪೋಷಿಸದರೆ ಅವರು ಬದಲಾಗುವುದು ಸಾಧ್ಯವೇ ಇಲ್ಲ. ಹಾಗೆಯೇ ನಮ್ಮ ಮಕ್ಕಳು ಏನಾದರೂ ಕೇಳಿದಾಗ, ಅದನ್ನು ಕೇಳಿದ ತಕ್ಷಣ ಕೊಡಿಸಿಬೇಡಿ. ಮುಂದೊಂದು ದಿನ ನೀವು ಕೊಡಿಸುವುದಿಲ್ಲ ಎಂದಾಗ ಅವರು ಭಾವನಾತೀತರಾಗಿ, ಉದ್ವೇಗಕ್ಕೆ ಬಿದ್ದು ನಿಮ್ಮ ಜೊತೆ ಜಗಳಕ್ಕೆ ನಿಲ್ಲುತ್ತಾರೆ. ಅದರ ಬದಲು, ಕಾಯುವಿಕೆ ಹುಟ್ಟಿಸುವ ವಿವೇಕವನ್ನು ಸಣ್ಣ ವಯಸ್ಸಿನಿಂದಲೇ ಕಲಿಸಿ ಕೊಡಿ. ಅದು ಅವರನ್ನು ಪ್ರಜ್ಞಾವಂತರನ್ನಾಗಿಸುವದಕ್ಕೆ ಸಹಾಯವಾಗುತ್ತದೆ.
ಬೇರೆಯವರ ಬಗ್ಗೆ ಮಾತನಾಡುವ ಮೊದಲು ನಮ್ಮ ಭಾವನೆಗಳನ್ನು, ಉದ್ರೇಕಗಳನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಬೇಕು ಅಲ್ಲವೇ? ಅದು ಮಾತನಾಡಿದಷ್ಟು ಸುಲಭ ಅಲ್ಲ. ಆದರೆ ನಮ್ಮನ್ನು ನಾವು ಗಮನಿಸುತ್ತಾ ಹೋದಾಗ ಕ್ರಮೇಣ ಅವುಗಳ ತೀವ್ರತೆ ಕಡಿಮೆಯಾಗಲು ಸಾಧ್ಯ. ಆದರೆ ಅದನ್ನು ಗೆದ್ದ ನಂತರ, ನಮ್ಮ ಮನಸ್ಸಿಗೆ ಹತ್ತು ಆನೆ ಬಲ ಬರುತ್ತದೆ. ಅಲ್ಲಿಂದ ನಾವು ತೆಗೆದುಕೊಳ್ಳುವ ನಿರ್ಧಾರಗಳು, ನಮ್ಮನ್ನು ಪ್ರಗತಿಯ ಪಥಕ್ಕೆ ಒಯ್ಯುತ್ತವೆ.