Saturday, September 25, 2021

ಮುಸ್ಸಲೋನಿ ಎಂಬ ಸರ್ವಾಧಿಕಾರಿ

(ಫ್ರಾಂಕ್ ಡಿಕೊಟ್ಟೆರ್ ಬರೆದ 'How to be a dictator' ಪುಸ್ತಕದ 'ಮುಸ್ಸಲೋನಿ' ಅಧ್ಯಾಯದ ಆಯ್ದ ಭಾಗದ ಭಾವಾನುವಾದ)

 

ಮುಸ್ಸಲೋನಿ ಜನ ಸಾಮಾನ್ಯರನ್ನು ತನ್ನ ಮೋಡಿಗೆ ಒಳಪಡಿಸಲು ಉತ್ಸುಕನಾಗಿದ್ದ. ಅದಕ್ಕಾಗಿ ಅವನು ದೇಶಾದ್ಯಂತ ಪ್ರವಾಸ ಕೈಗೊಂಡ. ಕಾರ್ಯಕರ್ತರ ಸಾಮೂಹಿಕ ಸಭೆಗಳು, ಸರ್ಕಾರೀ ಕೆಲಸಗಳ ಉದ್ಘಾಟನೆಗಳು ಹೀಗೆ ಯಾವುದೇ ಅವಕಾಶ ಇರಲಿ, ಅವುಗಳ ಮೂಲಕ ನೂರಾರು ಪಟ್ಟಣ, ಹಳ್ಳಿಗಳಲ್ಲಿ ಅವನು ಚಿರಪರಿಚಿತನಾಗಿ ಹೋದ. ತನ್ನ ಓಡಾಟಕ್ಕೆಂದೇ ಒಂದು ರೈಲನ್ನು ನಿಯಮಿಸಿಕೊಂಡ. ಮಾರ್ಗ ಮದ್ಯದಲ್ಲಿ ಜನಸಂದಣಿ ಎಲ್ಲೆಲ್ಲಿ ಇರುತ್ತಿತ್ತೋ, ಅಲ್ಲಿ ಅವನಿದ್ದ ರೈಲು ನಿಧಾನವಾಗಿ ಚಲಿಸುತ್ತಿತ್ತು. ಅವನು ಕಿಟಕಿಯಲ್ಲಿ ನಿಂತು ಕೈ ಬೀಸುತ್ತ ಜನರ ಕಣ್ಣಿಗೆ ತಾನು ಬಿದ್ದಿದ್ದೇನೆ ಎನ್ನುವುದನ್ನು ಖಚಿತಗೊಳಿಸಿಕೊಳ್ಳುತ್ತಿದ್ದ. ಮೊದಲಿಗೆ ಯಾವುದು ರಾಜಕೀಯ ಅವಶ್ಯಕತೆಯಾಗಿತ್ತೋ ಅದು ಕಾಲ ಕ್ರಮೇಣ ಒಂದು ಗೀಳಾಗಿ ಮಾರ್ಪಟ್ಟಿತ್ತು.

 

ತನ್ನ ನಂಬಿಕಸ್ಥರಿಗೆ ಕೆಲವು ಕೆಲಸಗಳ ಜವಾಬ್ದಾರಿ ವಹಿಸಿದ. ಅದರಲ್ಲಿ ಮೊದಲನೆಯದು, ತನ್ನ ಅವಶ್ಯಕತೆ ಎಷ್ಟು ಇದೆ ಎಂದು ಜನರಿಗೆ ಮಾಧ್ಯಮಗಳ ಮೂಲಕ ತೋರಿಸುವುದು, ಅದಕ್ಕೆ ನೆರವಾದ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವುದು, ಸಹಾಯ ಮಾಡದವರನ್ನು ತನ್ನ ಕಪಿ ಮುಷ್ಟಿಯಲ್ಲಿ ಹಿಚುಕಿ ಹಾಕುವುದು. ಎರಡನೆಯದು, ತನ್ನ ರಾಜಕೀಯ ವೈರಿಗಳನ್ನು ಒಬ್ಬೊಬ್ಬರನ್ನಾಗಿ ನಿರ್ಮೂಲ ಮಾಡುವುದು. ಇವೆಲ್ಲದರ ನಡುವೆ ಮುಸ್ಸೊಲೊನಿ ಜನರ ಮಧ್ಯೆ ಆವೇಶದಿಂದ ಭಾಷಣ ಮಾಡುತ್ತಿದ್ದ. ಜನರ ಮನಸ್ಸಿನಿಂದ ತಾನು ಕಣ್ಮರೆಯಾಗದಂತೆ, ಅವರಿಗೆ ಉಳಿದಿರುವ ಕೊನೆಯ ಆಶಾಕಿರಣ, ಭರವಸೆ ತಾನೊಬ್ಬನೇ ಎನ್ನುವ ಸಂದೇಶ ಪರೋಕ್ಷವಾಗಿ ನೀಡಲು ಮರೆಯುತ್ತಿರಲ್ಲ. ಪಕ್ಷದ, ಸರಕಾರದ ಎಲ್ಲ ಕಾರ್ಯಗಳು ಅವನ ಹತೋಟಿಗೆ ಬರಲು ಬಹಳ ಸಮಯ ಏನೂ ತಗುಲಲಿಲ್ಲ. ಆಮೇಲಿಂದ ಅವನ ಮಾತೇ ಅಂತಿಮ ಆಗಿ ಹೋಯಿತು. ಎಲ್ಲ ಊರಿನ, ಎಲ್ಲ ಜನ ಸಂಪರ್ಕ ಸ್ಥಳಗಳಲ್ಲಿ ಅವನ ಫೋಟೋಗಳು ರಾರಾಜಿಸತೊಡಗಿದವು. ಮಾಧ್ಯಮಗಳು ಅವನನ್ನು ಹೊಗಳಿ ಪುಟಗಟ್ಟಲೆ ಬರೆದವು. ಅವನ ಜೀವನ ಚರಿತ್ರೆಯ ಪುಸ್ತಕಗಳು ಒಂದಾದರ ನಂತರ ಇನ್ನೊಂದರಂತೆ ಬಿಡುಗಡೆಯಾದವು. ಅಂತರರಾಷ್ಟ್ರೀಯ ಗಣ್ಯ ವ್ಯಕ್ತಿಗಳೆಲ್ಲ ಅವನಿಗೆ ಭೇಟಿಯ ಗೌರವ ಕೊಡಲು ಬಂದರು. ಅವನ ಜೊತೆ ಕಳೆದ ಕೆಲವೇ ಕ್ಷಣಗಳಿಗೆ, ಅವನದು ಸೂಜಿಗಲ್ಲಿನ ವ್ಯಕ್ತಿತ್ವ ಎಂದು ಹೊಗಳಿದರು.

 

ಹೊರಗಿನ ಶತ್ರುಗಳು ಇಲ್ಲವಾದ ಮೇಲೆ, ತನ್ನದೇ ಪಕ್ಷದಲ್ಲಿ ತನಗೆ ಯಾವುದೇ ಉತ್ತರಾಧಿಕಾರಿ ಹುಟ್ಟದಂತೆ ನೋಡಿಕೊಳ್ಳುವುದನ್ನು ಮುಸ್ಸಲೋನಿ ಮರೆಯಲಿಲ್ಲ. ಯಾರಾದರೂ ತನಗಿಂತ ಜನಮನ್ನಣೆ ಪಡೆದರೆ ಸಾಕು ಅವರನ್ನು ಆ ಜಾಗದಿಂದ ಕೆಳಗಿಳಿಸಿ, ಅಲ್ಲಿ ಒಬ್ಬ ಅನಾಮಿಕನನ್ನು ತಂದು ಕೂರಿಸುತ್ತಿದ್ದ. ಅವನಿಗೆ ಸ್ವಾಮಿ ನಿಷ್ಠೆ ತೋರಿಸದವರೆಲ್ಲ ಮೂಲೆ ಗುಂಪಾಗಿ ಹೋದರು. ಪಕ್ಷದ, ದೇಶದ, ಜನ ಹಿತದ ಧ್ಯೇಯಗಳೆಲ್ಲ ಬದಲಾಗಿ 'ಮುಸ್ಸಲೋನಿ ಎಲ್ಲ ವಿಷಯದಲ್ಲೂ ಸರಿ' ಎನ್ನುವುದೇ ವೇದವಾಕ್ಯವಾಗಿ ಹೋಯಿತು. ಅವನೀಗ ತನ್ನ ಭಾಷಣಗಳನ್ನು ರೇಡಿಯೋದಲ್ಲಿ ಪ್ರಸಾರ ಮಾಡಿ ಇಡೀ ಇಟಲಿ ದೇಶ ಒಂದೇ ಸಲಕ್ಕೆ ತನ್ನ ಮಾತು ಕೇಳುವಂತೆ ಮಾಡಿಕೊಂಡ. ಜನ ನಿಬಿಡ ಸ್ಥಳಗಳಲ್ಲಿ ಬೃಹತ್ ಸ್ಪೀಕರ್ ಗಳು ಅವನ ಭಾಷಣವನ್ನು ಬಿತ್ತರಿಸತೊಡಗಿದವು.


ಅವನು ಸಾರ್ವಜನಿಕವಾಗಿ ಯಾವುದಾದರೂ ಊರಲ್ಲಿ ಭಾಷಣ ಮಾಡುವುದು ಇತ್ತೆಂದರೆ, ಅಂದು ಅಲ್ಲಿ ಶಾಲೆಗಳಿಗೆ, ಅಂಗಡಿ-ಮುಗ್ಗಟ್ಟುಗಳಿಗೆ ರಜೆ ಘೋಷಿಸಲಾಗುತ್ತಿತ್ತು. ಅವನ ಭಾಷಣ ಕೇಳುವುದು ಎಲ್ಲರಿಗೂ ಕಡ್ಡಾಯವಾಗಿತ್ತು. ಅವನು ಭಾಷಣ ಮಾಡುವ ವೇದಿಕೆಯಲ್ಲಿ ಅವನು ಪ್ರಕಾಶಮಾನವಾಗಿ ಕಾಣುವಂತೆ ದೀಪಗಳಿಂದ ಸಜ್ಜುಗೊಳಿಸಲಾಗುತ್ತಿತ್ತು. ಅಲ್ಲಿ ಸೇರಿದ ಜನ ಸಮೂಹ ಅವನ ಹೆಸರನ್ನೇ ಜಪಿಸುವಂತೆ ಹಿನ್ನೆಲೆ ಸಂಗೀತ ನೀಡಲಾಗುತ್ತಿತ್ತು. ಜನರ ಉನ್ಮಾದ ತಾರಕಕ್ಕೇರಿದ ಮೇಲೆ ಮುಸ್ಸಲೋನಿ ವೇದಿಕೆಯ  ಮೇಲೆ ಪ್ರತ್ಯಕ್ಷನಾಗಿ ಅವರ ಹುಚ್ಚನ್ನು ಇನ್ನು ಅಧಿಕಗೊಳಿಸುತ್ತಿದ್ದ.

Thursday, September 23, 2021

ಕ್ಯಾನ್ಸರ್ ಆದವರ ಮುಂದೆ ನೆಗಡಿ ಎಂಥ ದೊಡ್ಡ ರೋಗ ಎಂದು ಹೇಳುವವರಿಗೆ

ನೀವು ಹಳೇ ಚಿತ್ರಗಳನ್ನು ನೋಡುತ್ತೀರಾ? ನನಗೆ ಭೂತಕಾಲ ಕಾಡಿದಷ್ಟು, ವರ್ತಮಾನ, ಭವಿಷ್ಯ ಕಾಡುವುದಿಲ್ಲ. ಹಾಗಾಗಿ ಟಿ.ವಿ.ಯಲ್ಲಿ ಬರುವ ಹಳೆಯ ಚಿತ್ರಗಳನ್ನು ಆಗಾಗ ನೋಡುತ್ತಿರುತ್ತೇನೆ. ೧೯೭೨ರಲ್ಲಿ ಬಿಡುಗಡೆಯಾದ 'ಬಂಗಾರದ ಮನುಷ್ಯ' ಚಿತ್ರ ಯಾರಿಗೆ ಗೊತ್ತಿಲ್ಲ? ಅದರಲ್ಲಿ ಒಂದು ಸನ್ನಿವೇಶದಲ್ಲಿ ರಾಜಕುಮಾರ್ ತಮ್ಮ ಅಕ್ಕನ ಮಗನಿಗೆ ಬರುವ ೬೦೦ ರೂಪಾಯಿ ಸಂಬಳ ಕುಟುಂಬ ನಿರ್ವಹಣೆಗೆ ಸಾಕಾಗುದಿಲ್ಲವೇ ಎಂದು ದಬಾಯಿಸುತ್ತಾರೆ. ಆ ಕಾಲ ಹಾಗಿತ್ತೇನೋ? ಅದಾಗಿ ೧೫ ವರುಷ ಕಳೆದಿರಲಿಲ್ಲ. ೧೯೮೬ ರಲ್ಲಿ ತೆರೆ ಕಂಡ 'ಭಾಗ್ಯದ ಲಕ್ಷ್ಮಿ ಬಾರಮ್ಮ' ಚಿತ್ರದಲ್ಲಿ, ಅದೇ ರಾಜಕುಮಾರ್, ಸ್ಪರ್ಧೆಯಲ್ಲಿ ಗೆದ್ದರೆ ಸಿಗುವ ೧೦,೦೦೦ ಸಾವಿರ ರೂಪಾಯಿಗಾಗಿ ಸಾವಿರ ಸುಳ್ಳು ಹೇಳುವ ಹಾಸ್ಯಮಯ ಪಾತ್ರವನ್ನು ನಿಭಾಯಿಸುತ್ತಾರೆ. ಕೆಲವು ನೂರು ಅಥವಾ ಕೆಲವು ಸಾವಿರ ರೂಪಾಯಿಗೆ ಎಷ್ಟೊಂದು ಬೆಲೆಯಿತ್ತಲ್ಲವೇ? ದುಡ್ಡಿಗಿದ್ದ ಆ ಬೆಲೆ, ಹೋಟೆಲಿನ ಗಾಜುಗಳನ್ನು ಒಡೆದು, ಸಾವಿರಾರು ರೂಪಾಯಿ ಖರ್ಚು ಮಾಡುವ 'ಅಂಜದ ಗಂಡು' ಚಿತ್ರದ ರವಿಚಂದ್ರನ್ ಅವರ ಪಾತ್ರದಲ್ಲಿ ಕಾಣುವುದಿಲ್ಲ. ಅದೇಕೆ ಎನ್ನುವುದು ಸುಲಭ. ಆ ಚಿತ್ರದ ನಾಯಕನಿಗೆ ಬಡತನ ಎಂದರೆ ಏನು ಎಂದರೆ ಗೊತ್ತಿರುವುದಿಲ್ಲ ಅಷ್ಟೇ. ನಿಜ ಕಷ್ಟಗಳನ್ನು ನೋಡದ ಮನುಷ್ಯರು ಸಣ್ಣ ಪುಟ್ಟ ಸಮಸ್ಯೆಗಳನ್ನು ಕೂಡ ದೊಡ್ಡದೇ ಎಂದುಕೊಳ್ಳುತ್ತಾರೆ.


ನಾನು ಬೆಂಗಳೂರಿಗೆ ಬಂದದ್ದು ೧೯೯೯ ರಲ್ಲಿ. ವಾಪಸ್ಸು ಊರಿಗೆ ಹೋಗುವುದಿಲ್ಲ ಮತ್ತು ಮನೆಯಲ್ಲಿ ಯಾವುದೇ ಕಾರಣಕ್ಕೆ ದುಡ್ಡು ಕೇಳುವುದಿಲ್ಲ ಎನ್ನುವ ಧೃಢ ನಿರ್ಧಾರದಿಂದ ಬೆಂಗಳೂರಿಗೆ ಬಂದಿದ್ದ ನನಗೆ, ಬಂದ ಮೂರೇ ದಿನಕ್ಕೆ ಕೆಲಸ ಸಿಕ್ಕಿತ್ತು. ಭರ್ತಿ ೨,೫೦೦ ರೂಪಾಯಿ ಸಂಬಳ. ತಿಂಗಳ ಕೊನೆಗೆ ೨೦೦-೩೦೦ ರೂಪಾಯಿ ಉಳಿದರೆ ಅದೇ ಹೆಚ್ಚು. ಅದನ್ನೇ ಪೂರ್ತಿ ಒಂದು ವರುಷ ಉಳಿಸಿ, ಅದರಲ್ಲಿ ಒಂದು ಚಿಕ್ಕ ಟಿ.ವಿ. ಖರೀದಿಸುವ ಆಸೆಯಿಂದ ಮಾರುಕಟ್ಟೆಗೆ ಹೋದರೆ ನನ್ನಲ್ಲಿ ಇದ್ದ ಹಣಕ್ಕೆ ಖರೀದಿಸಲು ಸಾಧ್ಯವಾಗಿದ್ದು ಒಂದು ಟೇಪ್ ರೆಕಾರ್ಡರ್ ಮಾತ್ರ. ಅದು ನನ್ನ ಹಲವಾರು ವರುಷಗಳ ಸಂಗಾತಿಯಾಗಿತ್ತು. ಅದಾಗಿ ಇಪ್ಪತ್ತು ವರುಷ ನಂತರದ ಇಂದಿನ ವರ್ತಮಾನಕ್ಕೆ ಬಂದರೆ, ನನ್ನ ಮಗ ತನಗೆ ಆಟ ಆಡಲು ಎರಡು ಸಾವಿರ ರೂಪಾಯಿ ಬೆಲೆಯ ಆಟಿಕೆ ಸಾಮಾನು ಕೇಳುತ್ತಿದ್ದ. ಹಿಂದೆ ನನಗೆ ಅಷ್ಟು ಹಣ ಉಳಿಸಲು ಪೂರ್ತಿ ಒಂದು ವರುಷ ಬೇಕಾಗಿತ್ತು ಎನ್ನುವ ವಿಷಯ ನಾನು ಅವನಿಗೆ ತಿಳಿಸುವುದು ಸಾಧ್ಯವೇ? ನೂರು ರೂಪಾಯಿ ಬಿಡಿ, ಸಾವಿರ ರೂಪಾಯಿಗೆ ಏನು ಬೆಲೆ ಎಂದು ಕೂಡ ಅವನಿಗೆ ತಿಳಿಸುವುದು ಕಷ್ಟ.


ಈ ಬೆಲೆಯ ಮಹತ್ವ ಬರಿ ದುಡ್ಡಿನ ವಿಚಾರಕ್ಕೆ ಮಾತ್ರ ನಿಲ್ಲುವುದಿಲ್ಲ. ಅದು ಬದುಕಿನ ಇತರ ವಿಷಯಗಳಿಗೂ ಅನ್ವಯಿಸುತ್ತದೆ. ತೆಲುಗು ಚಿತ್ರರಂಗದ ಸಮಂತಾ ಎನ್ನುವ ನಟಿ ಇಂದು ತನ್ನ ಮದುವೆಯನ್ನು ಕೊನೆಗೊಳ್ಳಿಸುವ ವಿಚಾರ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆಯಲ್ಲ. ಅವಳಿಗೆ ಇರುವ ಸೌಂದರ್ಯ, ಕುರೂಪದಿಂದ ಮದುವೆಯಾಗದೆ ಹಾಗೆಯೆ ಉಳಿದು ಹೋದ ಹುಡುಗಿಗೆ, ಅಥವಾ ಮುಖದ ಮೇಲೆ ಆಸಿಡ್ ಸುರಿಸಿಕೊಂಡ ನತದೃಷ್ಟರಿಗೆ ಇದ್ದರೆ ಹೇಗಿರುತ್ತಿತ್ತು? ಸಮಂತಾಗಿರುವ ಅಭಿನಯ ಪ್ರತಿಭೆ, ಹಿಂದೆ ಕನ್ನಡ ಚಿತ್ರರಂಗವನ್ನಾಳಿದ ಜಯಂತಿ, ಕಲ್ಪನಾರಿಗೆ ಕೂಡ ಇತ್ತಲ್ಲ. ಅವರಿಗೆ ವೈವಾಹಿಕ ಜೀವನ ಬೇಕು ಎಂದು ಎಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ನಟಿ ಸಮಂತಾರಿಗೆ ಅವರದೇ ಆದ ವೈಯಕ್ತಿಕ ಕಾರಣಗಳು ಇರಬಹುದು. ಹಾಗೆಯೇ ಅವರ ಜೀವನ ಅವರ ವೈಯಕ್ತಿಕ ವಿಚಾರ. ಆದರೆ ಅವರ ಸಮಸ್ಯೆಗಳು ದುಃಖವನ್ನೇ ನೋಡದ ಮನುಷ್ಯರ ಕಸಿವಿಸಿಯಂತಹವು ಎನ್ನುವುದು ಮಾತ್ರ ನನ್ನ ಅಭಿಪ್ರಾಯ. ಅವರು ಬೇರೆ ಮದುವೆಯಾದರೂ ಅಥವಾ ಹಾಗೆ ಉಳಿದರೂ ಅವರ ವೈಯಕ್ತಿಕ ಜೀವನ ಈಗಿರುವುದಕ್ಕಿಂತ ಉತ್ತಮ ಆಗಲು ಸಾಧ್ಯವೇ ಎನ್ನುವುದು ಸಾಮಾನ್ಯರ ವಿಚಾರಕ್ಕೂ ನಿಲುಕುವಂತಹದ್ದು.


ಎಲ್ಲರಿಗೂ ಅವರದೇ ಆದ ಸಮಸ್ಯೆಗಳಿವೆ. ಆದರೆ ಅವುಗಳು ದೊಡ್ಡ ಸಮಸ್ಯೆ ಹೌದೋ ಅಲ್ಲವೋ ಎಂದು ಅರಿವಾಗಲು ಸಾಕಷ್ಟು ಜನರಿಗೆ ಜೀವನ ಅನುಭವದ ಕೊರತೆ ಇದೆ. ತಮಗೆ ಆಗಿರುವ ನೆಗಡಿ ಎಂತಹ ಭೀಕರದ್ದು ಎಂದು ಅವರು ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಯ ಮುಂದೆ ಹೇಳಲು ಹೊರಡುತ್ತಾರೆ. ತಮಗೆ ಕ್ಯಾನ್ಸರ್ ಆದಾಗ ಅವರು ಇನ್ನೇನು ಮಾಡುತ್ತಾರೋ?

Tuesday, September 21, 2021

ರೂಮಿಯ ಸೂಕ್ತಿಗಳು ಮತ್ತು ಕಿರು ಕವಿತೆಗಳ ಅನುವಾದ

ನೀವು ಸಮುದ್ರದ ಹನಿಯಲ್ಲ

ಹನಿಯೊಳಗಿರುವ ಸಮುದ್ರ

--೦--


ನೀವು ಏನನ್ನು ಹುಡುಕುತ್ತಿರುವಿರೋ 

ಅದು ನಿಮ್ಮನ್ನು ಹುಡುಕುತ್ತಿದೆ

--೦--


ಸರಿ-ತಪ್ಪುಗಳ ಆಚೆ ಇದೆ ಒಂದು ಬಯಲು

ನಾನು ನಿಮಗೆ ಅಲ್ಲಿಯೇ ಸಿಗುವೆ


ಆ ಹಸಿರಿನಲ್ಲಿ ಮಲಗಿದಾಗ

ಜಗತ್ತಿನ ಭಾಷೆ, ವಿಚಾರ, ಕಲ್ಪನೆಗಳು

ನಾವು-ನೀವು ಎಲ್ಲವೂ ಅಪ್ರಸ್ತುತ

--೦--


ಮುಂಜಾನೆಯ ತಂಗಾಳಿ

ಬಿಟ್ಟು ಕೊಡಲಿದೆ ಯಾವುದೊ ರಹಸ್ಯ

ಮಲಗಿ ನಿದ್ದೆ ಹೋಗಬೇಡಿ


ನಿಮಗೆ ಏನು ಬೇಕು

ನೀವು ಕೇಳಿಯೇ ಪಡೆಯಬೇಕು

ಮಲಗಿ ನಿದ್ದೆ ಹೋಗಬೇಡಿ


ಎರಡು ಜಗತ್ತುಗಳು ಸಂಧಿಸುವ ಬಾಗಿಲಿನಿಂದ

ಜನ ಒಳಗೆ-ಹೊರಗೆ ಚಲಿಸುತ್ತಲೇ ಇದ್ದಾರೆ


ಬಾಗಿಲು ತೆರೆದೇ ಇದೆ

ಮಲಗಿ ನಿದ್ದೆ ಹೋಗಬೇಡಿ

--೦--


ವಿಚಾರ ಮಾಡಬೇಡಿ

ಕಳೆದು ಹೋಗಬೇಡಿ


ಚಂದ್ರ ನಿಮ್ಮ ಹೃದಯ

ವಿಚಾರಗಳು ಅದರ ಮೇಲಿನ ಮುಸುಕು


ಮುಸುಕು ಸರಿಯಲಿ

ವಿಚಾರಗಳು ನೀರಲ್ಲಿ ಬಿದ್ದು ಹೋಗಲಿ

--೦--


ನಿನ್ನೆ ನಾನು ಮೇಧಾವಿ

ಜಗತ್ತನ್ನೇ ಬದಲಿಸ ಹೊರಟಿದ್ದೆ


ಇಂದು ನಾನು ಬುದ್ದಿವಂತ

ನನ್ನನ್ನು ಮಾತ್ರ ಬದಲಿಸುವೆ

--೦--


ಮಾತು ನದಿ

ಮೌನ ಸಮುದ್ರ


ಹುಡುಕುವುದು ಸಮುದ್ರವಾದರೆ

ನದಿಯಲ್ಲಿ ಕಳೆದು ಹೋಗುವುದೇಕೆ

--೦--

Monday, September 20, 2021

ಹಿರಿ ಮಗ, ಕಿರಿ ಸೊಸೆ ಮತ್ತು ಬಂಗಾರದಂತ ತಮ್ಮ

ಹಿರಿ ಮಗ, ಕಿರಿ ಸೊಸೆ ಆಗಬಾರದು ಎನ್ನುವುದು ಹಳೇ ಕಾಲದ ಗಾದೆ. ಆದರೆ ಆ ಕಾಲ ಈಗೆಲ್ಲಿ? ಹಿರಿ ಮಗ ಜವಾಬ್ದಾರಿ ತೆಗೆದುಕೊಳ್ಳುವುದು ಇರಲಿ, ಒಣ ಅಹಂಕಾರ ತೋರಿಸಿ ಮನೆಯರನ್ನೆಲ್ಲ ದಾರಿ ತಪ್ಪಿಸುವ ಉದಾಹರಣೆಗಳೇ ಹೆಚ್ಚು. ಹಾಗೆಯೇ ಕಿರಿ ಸೊಸೆ, ಮನೆಯವರನ್ನೆಲ್ಲ ಆರೈಕೆ ಮಾಡುವುದಕ್ಕಿಂತ, ಮನೆ ಗುಟ್ಟನ್ನು ರಟ್ಟು ಮಾಡಿ ಕುಟುಂಬದ ಮರ್ಯಾದೆ ಬೀದಿಗೆ ತಂದು ನಿಲ್ಲಿಸುವುದಕ್ಕೆ ಹಿಂದೂ ಮುಂದು ನೋಡುವುದಿಲ್ಲ. ಕಾಲಕ್ಕೆ ತಕ್ಕಂತೆ ಈ ಗಾದೆ ಮಾರ್ಪಾಡು ಮಾಡುವುದು ಅವಶ್ಯ ಇದೆಯೋನೋ?


ಆದರೆ ಸ್ವಲ್ಪ ವಿಚಾರ ಮಾಡಿ. ಹಿರಿ ಮಗ, ಕಿರಿ ಸೊಸೆ ಎಂದು ಸ್ಥಾನಕ್ಕೆ ತಕ್ಕಂತೆ ಜವಾಬ್ದಾರಿ ಹೊರಿಸುವ ತಾಯಂದಿರು ತಾವು ಸಣ್ಣವರಾಗಿದ್ದಾಗ ಅವರಿಗೆ ಅವರ ಅಪ್ಪನೇ ಜೀವನದಲ್ಲಿ ಮೊದಲ ಹೀರೋ ಆಗಿದ್ದ. ಆವರಿಗೆ ಅಪ್ಪನಿಗಿಂತ ಆದರ್ಶ ಪುರುಷ ಶ್ರೀರಾಮನೂ ಕೂಡ ಅಲ್ಲ. ಅವರು ಬೆಳೆದು ದೊಡ್ಡವರಾದಂತೆಲ್ಲ ಅವರ ಅಪ್ಪನಿಗೂ ಕೂಡ ವಯಸ್ಸಾಗಿಬಿಡುತ್ತದಲ್ಲವೇ? ಆಗ ಹೆಣ್ಣು ಮಕ್ಕಳು ತಮ್ಮ ತಮ್ಮನನ್ನು ಹೀರೋ ಮಾಡಿಬಿಡುತ್ತಾರೆ. ತಮ್ಮನ ವಾರಿಗೆಯ ಹುಡುಗರೆಲ್ಲ ಅವರ ಕಣ್ಣಿಗೆ ಪೋಲಿಗಳು, ಕುಡುಕರು, ಕೆಲಸಕ್ಕೆ ಬಾರದವರಂತೆ ಕಂಡರೆ, ಅಂತಹವರ ನಡುವಿನ ಅವರ ತಮ್ಮ ಮಾತ್ರ ಬಂಗಾರ. ಅದೆಂತ ಕುರುಡು ಪ್ರೀತಿಯೋ? ಮುಂದೆ ಅವರ ತಮ್ಮನಿಗೆ ಮದುವೆಯಾಗಿ ಅವನ ಸಂಸಾರ ಬೇರೆಯಾದಾಗ, ಅದೇ ಹೆಣ್ಣು ಮಕ್ಕಳು ತಮ್ಮ ದೊಡ್ಡ ಮಗನನ್ನು ಮುಂಚೂಣಿಗೆ ತರುತ್ತಾರೆ.


ಒಂದು ವೇಳೆ ನೀವು ನಿಮ್ಮ ಕುಟುಂಬದಲ್ಲಿ ನೀವು ದೊಡ್ಡ ಮಗನಾಗಿ ಹುಟ್ಟಿದ್ದರೆ, ಅಲ್ಲಿ ನಿಮ್ಮ ತಾಯಿಯೇ ನಿಮ್ಮನ್ನು ಹೀರೋ ಮಾಡಿರುತ್ತಾಳೆ. ಒಂದು ವೇಳೆ ನೀವು ಕಿರಿಯ ಮಗನಾಗಿದ್ದರೆ, ನಿಮ್ಮದೇ ಅದೃಷ್ಟ. ಮನೆಯಲ್ಲಿ ಬೇರೆಯವರ ಪ್ರೀತಿ ಸಿಗುತ್ತದೋ ಇಲ್ಲವೋ, ನಿಮ್ಮ ತಾಯಿ ಸಮಯಕ್ಕೆ ಸರಿಯಾಗಿ, ಬಿಸಿ ಬಿಸಿಯಾಗಿ ನೀವು ಕೇಳಿದ್ದು ಮಾಡಿ ಬಡಿಸುತ್ತಾಳೆ. ಒಂದು ವೇಳೆ ನೀವು ಹಿರಿ ಮಗ ಅಲ್ಲ ಆದರೆ ನಿಮಗೆ ಅಕ್ಕ ಇದ್ದರೆ, ಅವಳು ಅಲ್ಪ ಸಮಯಕ್ಕಾದರೂ ನಿಮ್ಮನ್ನು ಕೇಂದ್ರ ಬಿಂದುವನ್ನಾಗಿ ಮಾಡುತ್ತಾಳೆ. ನೀವು ಹಿರಿ ಮಗನೂ ಅಲ್ಲ, ನಿಮಗೆ ಸೋದರಿಯೂ ಇಲ್ಲ ಎಂದರೆ ಏನು ಚಿಂತೆ ಇಲ್ಲ. ನಿಮ್ಮನ್ನು ಹೀರೋ ಮಾಡಲು ಇದ್ದಾಳೆ ನಿಮ್ಮ ಮಗಳು.


ಒಂದು ವೇಳೆ ನೀವು ನಡುವಿನ ಮಗನಾಗಿದ್ದರೆ, ನೀವು ಮಕ್ಕಳೆಷ್ಟು ಎಂದು ಕೇಳಿದಾಗ ಮಾತ್ರ ಲೆಕ್ಕಕ್ಕೆ ಉಂಟು. ನೀವು ಏನು ಸಾಧಿಸಿದರೂ ಅದನ್ನು ನಿಮ್ಮ ತಾಯಿ ಒಪ್ಪುವುದಿಲ್ಲ. ಅವಳಿಗೆ ದೊಡ್ಡ ಮಗನೇ ಹೀರೋ. ನಿಮ್ಮ ಸೋದರಿಗೆ ಹಲವಾರು ಸೋದರರಿದ್ದರೆ, ಸರ್ಕಸ್ ನಲ್ಲಿ ಜೋಕರ್ ನಾಲ್ಕಾರು ಚೆಂಡುಗಳನ್ನು ಒಂದಾದರ ನಂತರ ಒಂದರಂತೆ ತೂರುತ್ತಾ ಕೈ ಬದಲಾಯಿಸುತ್ತಾನಲ್ಲ. ಆ ಚೆಂಡಿನ ಪರಿಸ್ಥಿತಿ ನಿಮ್ಮದು. ನಿಮಗೆ ಮಗಳು ಕೂಡ ಇರದಿದ್ದರೆ, ನಿಮ್ಮಷ್ಟು ದುರದೃಷ್ಟವಂತರು ಬೇರಿಲ್ಲ. ಏಕೆಂದರೆ ನಿಮ್ಮನ್ನು ಹೀರೋ ಮಾಡಲು ನಿಮ್ಮ ತಾಯಿ, ಸೋದರಿ, ಮಗಳು ಯಾರು ನಿಮ್ಮ ಜೊತೆಗಿಲ್ಲ. ನಿಮ್ಮ ಹೆಂಡತಿಗೆ ಹೀರೋ ಆಗಲು ಅವಳ ಅಪ್ಪ, ತಮ್ಮ ಮತ್ತು ಮಗ ಇದ್ದಾರೆ. ಹಾಗಾಗಿ ನಿಮ್ಮ ಹೆಂಡತಿಗೆ ನೀವು ಗಂಟು ಬಿದ್ದ ಶನಿ ಮಾತ್ರ. ನಾನಾದಕ್ಕೆ ಇವರ ಜೊತೆ ಸಂಸಾರ ಮಾಡುತ್ತಿದ್ದೇನೆ ಎನ್ನುವಂತೆ ಅವಳು ವರ್ತಿಸುತ್ತಿರುತ್ತಾಳೆ. ನೀವು ಏನೇ ಕೆಲಸ ಸಾಧಿಸಿದರೂ, ಅದರ ಕ್ರೆಡಿಟ್ಟು ತನ್ನ ತಂದೆಗೆ, ತಮ್ಮನಿಗೆ ಇಲ್ಲವೇ ಮಗನಿಗೆ ಕೊಡುತ್ತಾಳೆ.


ನೀವು ದೊಡ್ಡ ಮಗನಾಗಿ ಹುಟ್ಟಿದ್ದರೆ, ನೀವು ಹೀರೋ ಆಗುವುದರಲ್ಲಿ ನೀವು ಸಾಧಿಸಿದ್ದಕ್ಕಿಂತ ನಿಮ್ಮ ತಾಯಿಯೇ ಪಾತ್ರವೇ ಹೆಚ್ಚಿತ್ತು. ಅದು ಕುಂತಿ ಧರ್ಮರಾಯನನ್ನು ಮುಂದಿಟ್ಟ ಹಾಗೆ. ನೀವು ಕಿರಿಯ ಮಗನಾಗಿದ್ದರೆ, ನಿಮ್ಮ ತಾಯಿಯ ಸಾವಿನ ನಂತರ ನಿಮ್ಮ ಬದುಕು ಧುರ್ಭರವಾಗುತ್ತದೆ. ನಿಮಗೆ ಸೋದರಿ ಇದ್ದರೆ ಜೀವನದ ಮೊದಲ ಭಾಗದಲ್ಲಿ ಮತ್ತು ಮಗಳು ಇದ್ದರೆ ಜೀವನದ ಕೊನೆಯಲ್ಲಿ ಮರ್ಯಾದೆ. ಅವೆರಡು ಇಲ್ಲದೆ ಹೋದರೆ ನೀವು ಮನೆಯಲ್ಲಿ ಯಾರಿಂದಲೂ, ಯಾವ ಕಾಲಕ್ಕೂ ಸೈ ಅನ್ನಿಸಿಕೊಳ್ಳದ ಅಂತರ್ ಪಿಶಾಚಿ ಮಾತ್ರ.

ಉದ್ವೇಗಗಳು ಕಡಿಮೆಯಾದಾಗ ಆ ಜಾಗದಲ್ಲಿ ವಿವೇಕ ತುಂಬಿಕೊಳ್ಳುತ್ತದೆ

ನೀವು ಯಾವುದೊ ಸಿನಿಮಾ ನೋಡಲು ಹೋಗಿರುತ್ತೀರಿ. ಅದು ನಿಮಗೆ ಇಷ್ಟವಾಗಿ ಬಿಡುತ್ತದೆ. ಸ್ವಲ್ಪ ಸಮಯದ ನಂತರ ಅದನ್ನು ಇನ್ನೊಮ್ಮೆ ನೋಡಲು ಹೋಗುತ್ತೀರಿ. ಈ ಸಲ ನಿಮಗೆ ಆ ಸಿನಿಮಾ ಮೊದಲ ಸಲ ನೋಡಿದ್ದಕ್ಕಿಂತ ಚೆನ್ನಾಗಿ ಅರ್ಥವಾಗುತ್ತದೆ. ಅದೇಕೆ? ನೋಡಿದ್ದು ಅದೇ ಸಿನಿಮಾ, ಅವೇ ಕಣ್ಣುಗಳ ಮೂಲಕ. ಬದಲಾಗಿದ್ದು ಏನು? ಅಲ್ಲಿ ಬದಲಾಗಿದ್ದು ನಿಮ್ಮ ಮನಸ್ಥಿತಿ. ಮೊದಲ ಸಲ ಕುತೂಹಲದಿಂದ ಸಿನಿಮಾ ನೋಡಿರುತ್ತೀರಿ. ಅದು ನಿಮ್ಮ ಭಾವನೆಗಳನ್ನು ಬಡಿದೆಬ್ಬಿಸಿರುತ್ತದೆ. ಆಗ ನಿಮ್ಮ ಕಣ್ಣು ನೋಡಿದ್ದು ನಿಮ್ಮ ಮನಸ್ಸು ಸಂಪೂರ್ಣ ಗ್ರಹಿಸಲು ಸಾಧ್ಯವಾಗದೆ ಹೋಗುತ್ತದೆ. ಎರಡನೆಯ ಸಲ ಸಿನಿಮಾ ನೋಡಿದಾಗ ನಿಮಗೆ ಮೊದಲಿನ ಕುತೂಹಲ ಇಲ್ಲ. ಮತ್ತು ನಿಮ್ಮ ಭಾವನೆಗಳು, ಉದ್ವೇಗಗಳು ನಿಮ್ಮ ಹಿಡಿತದಲ್ಲಿ ಇವೆ. ಹಾಗಾಗಿ ನಿಮ್ಮ ಕಣ್ಣು ನೋಡಿದ್ದು, ನಿಮ್ಮ ಮನಸ್ಸಿನ ಗ್ರಹಿಕೆಗೆ ಸಂಪೂರ್ಣ ಬರಲು ಸಾಧ್ಯವಾಯಿತು. ಕಣ್ಣು ಮತ್ತು ಗ್ರಹಿಕೆಯ ನಡುವೆ ತಡೆಗೋಡೆಯಾಗಿದ್ದು ಭಾವನೆಗಳು. ಆ ಪರದೆ ಸರಿದ ಮೇಲೆ, ನೀವು ವಾಸ್ತವಕ್ಕೆ ಹತ್ತಿರವಾದಿರಿ.


ನಮ್ಮ ಮನಸ್ಸು ಹಲವಾರು ಕಾರ್ಯಗಳನ್ನು ನಿಭಾಯಿಸುತ್ತದೆ. ವಿಷಯಗಳನ್ನು ಗ್ರಹಿಸುವುದು, ನೆನಪಿಡುವುದು, ವಿಚಾರ ಮಾಡುವುದು, ಭಾವನೆಗಳನ್ನು ಹೊಮ್ಮಿಸುವುದು ಹೀಗೆ ಇವೆಲ್ಲವುಗಳನ್ನು ಒಟ್ಟಾಗಿ ನಾವು ಮನಸ್ಸು ಎನ್ನುತ್ತೇವೆ. ಇವುಗಳಲ್ಲಿ ಭಾವನೆಗಳು ಅವಶ್ಯಕವು ಹೌದು ಆದರೆ ಅವು ಅತಿಯಾದಾಗ ಮನಸ್ಸಿನ ಉಳಿದ ಕಾರ್ಯಗಳು ಮಸುಕಾಗಿ ಬಿಡುತ್ತವೆ. ಭಾವನೆಗಳು ಹೆಚ್ಚಾದಾಗ ಅವು ಉದ್ವೇಗಗಳಾಗಿ ಬದಲಾಗಿ ನಮ್ಮ ಅಹಂ ಅನ್ನು ಪೋಷಿಸುತ್ತವೆ. ಉದ್ವೇಗಗಳು ಹಿಡಿತದಲ್ಲಿ ಇರದ ಮನುಷ್ಯನನ್ನು ಗಮನಿಸಿ ನೋಡಿ. ಅವನಲ್ಲಿ ವಿವೇಕ ಎನ್ನುವುದು ಸಂಪೂರ್ಣ ಮರೆಯಾಗಿ ಹೋಗಿರುತ್ತದೆ. ಆದರೆ ಜೀವನದಲ್ಲಿ ನಡೆಯುವ ಎಷ್ಟೋ ಘಟನೆಗಳು, ದೊಡ್ಡ ದೊಡ್ಡ ಸೋಲುಗಳು, ಹತ್ತಿರದವರ ಮರಣ ಇತ್ಯಾದಿ ಮನುಷ್ಯನ ಅಹಂ ಅನ್ನು ಘಾಸಿಗೊಳಿಸುತ್ತವೆ. ಅಹಂ ಕುಗ್ಗಿದಾಗ, ಆ ಜಾಗದಲ್ಲಿ ಕ್ರಮೇಣ ವಿವೇಕ ತುಂಬಿಕೊಳ್ಳುತ್ತದೆ. ಪ್ರಜ್ಞೆ ಜಾಗೃತವಾಗುತ್ತ ಹೋಗುತ್ತದೆ. ಏಕೆಂದರೆ ಈಗ ಅವನಿಗೆ ಉದ್ವೇಗಗಳ ತೀವ್ರತೆ ಕಡಿಮೆಯಾಗಿ, ವಾಸ್ತವದ ಸರಿಯಾದ ಗ್ರಹಿಕೆ ಸಾಧ್ಯವಾಗಿದೆ. ಅಲ್ಲಿಂದ ಮುಂದೆ ಅವನು ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾಗಿರಲು ಸಾಧ್ಯ. ಅವನೀಗ ಅಹಂ ಅನ್ನು ಪೋಷಿಸುವ ಭಾವನೆಗಳನ್ನು ಮೀರಿ ಬೆಳೆದಿದ್ದಾನೆ.


ಈ ವಿಷಯ ಬೇಗ ಅರ್ಥವಾದಷ್ಟು ನಮಗೆ ಒಳ್ಳೆಯದು. ಭಾವನೆಗಳು ಹುಟ್ಟಿಸುವ ಭ್ರಮಾಲೋಕಕ್ಕಿಂತ, ವಾಸ್ತವದಲ್ಲಿ ಬದುಕಿದಷ್ಟು ವಾಸಿ. ನಿಮ್ಮ ಮನೆಯಲ್ಲಿ ತಾನೇ ದೊಡ್ಡವನು ಎನ್ನುವ ಅಹಂ  ಯಾರಿಗಾದರೂ ಇದ್ದರೆ, ಅವರನ್ನು ಮೊದಲು ಸೋಲಲು ಬಿಡಿ. ಅದೇ ಅವರಿಗೆ ನೀವು ನೀಡುವ ದೊಡ್ಡ ನೆರವು. ಸೋತ ನಂತರ ಕ್ರಮೇಣ ಅವರು ಪ್ರಜ್ಞಾವಂತರಾಗಲು ಸಾಧ್ಯ. ಅದು ಬಿಟ್ಟು ಅವರ ಅಹಂ ಅನ್ನು ಪೋಷಿಸದರೆ ಅವರು ಬದಲಾಗುವುದು ಸಾಧ್ಯವೇ ಇಲ್ಲ. ಹಾಗೆಯೇ ನಮ್ಮ ಮಕ್ಕಳು ಏನಾದರೂ ಕೇಳಿದಾಗ, ಅದನ್ನು ಕೇಳಿದ ತಕ್ಷಣ ಕೊಡಿಸಿಬೇಡಿ. ಮುಂದೊಂದು ದಿನ ನೀವು ಕೊಡಿಸುವುದಿಲ್ಲ ಎಂದಾಗ ಅವರು ಭಾವನಾತೀತರಾಗಿ, ಉದ್ವೇಗಕ್ಕೆ ಬಿದ್ದು ನಿಮ್ಮ ಜೊತೆ ಜಗಳಕ್ಕೆ ನಿಲ್ಲುತ್ತಾರೆ. ಅದರ ಬದಲು, ಕಾಯುವಿಕೆ ಹುಟ್ಟಿಸುವ ವಿವೇಕವನ್ನು ಸಣ್ಣ ವಯಸ್ಸಿನಿಂದಲೇ ಕಲಿಸಿ ಕೊಡಿ. ಅದು ಅವರನ್ನು ಪ್ರಜ್ಞಾವಂತರನ್ನಾಗಿಸುವದಕ್ಕೆ ಸಹಾಯವಾಗುತ್ತದೆ.


ಬೇರೆಯವರ ಬಗ್ಗೆ ಮಾತನಾಡುವ ಮೊದಲು ನಮ್ಮ ಭಾವನೆಗಳನ್ನು, ಉದ್ರೇಕಗಳನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಬೇಕು ಅಲ್ಲವೇ? ಅದು ಮಾತನಾಡಿದಷ್ಟು ಸುಲಭ ಅಲ್ಲ. ಆದರೆ ನಮ್ಮನ್ನು ನಾವು ಗಮನಿಸುತ್ತಾ ಹೋದಾಗ ಕ್ರಮೇಣ ಅವುಗಳ ತೀವ್ರತೆ ಕಡಿಮೆಯಾಗಲು ಸಾಧ್ಯ. ಆದರೆ ಅದನ್ನು ಗೆದ್ದ ನಂತರ, ನಮ್ಮ ಮನಸ್ಸಿಗೆ ಹತ್ತು ಆನೆ ಬಲ ಬರುತ್ತದೆ. ಅಲ್ಲಿಂದ ನಾವು ತೆಗೆದುಕೊಳ್ಳುವ ನಿರ್ಧಾರಗಳು, ನಮ್ಮನ್ನು ಪ್ರಗತಿಯ ಪಥಕ್ಕೆ ಒಯ್ಯುತ್ತವೆ.