ಹಿರಿ ಮಗ, ಕಿರಿ ಸೊಸೆ ಆಗಬಾರದು ಎನ್ನುವುದು ಹಳೇ ಕಾಲದ ಗಾದೆ. ಆದರೆ ಆ ಕಾಲ ಈಗೆಲ್ಲಿ? ಹಿರಿ ಮಗ ಜವಾಬ್ದಾರಿ ತೆಗೆದುಕೊಳ್ಳುವುದು ಇರಲಿ, ಒಣ ಅಹಂಕಾರ ತೋರಿಸಿ ಮನೆಯರನ್ನೆಲ್ಲ ದಾರಿ ತಪ್ಪಿಸುವ ಉದಾಹರಣೆಗಳೇ ಹೆಚ್ಚು. ಹಾಗೆಯೇ ಕಿರಿ ಸೊಸೆ, ಮನೆಯವರನ್ನೆಲ್ಲ ಆರೈಕೆ ಮಾಡುವುದಕ್ಕಿಂತ, ಮನೆ ಗುಟ್ಟನ್ನು ರಟ್ಟು ಮಾಡಿ ಕುಟುಂಬದ ಮರ್ಯಾದೆ ಬೀದಿಗೆ ತಂದು ನಿಲ್ಲಿಸುವುದಕ್ಕೆ ಹಿಂದೂ ಮುಂದು ನೋಡುವುದಿಲ್ಲ. ಕಾಲಕ್ಕೆ ತಕ್ಕಂತೆ ಈ ಗಾದೆ ಮಾರ್ಪಾಡು ಮಾಡುವುದು ಅವಶ್ಯ ಇದೆಯೋನೋ?
ಆದರೆ ಸ್ವಲ್ಪ ವಿಚಾರ ಮಾಡಿ. ಹಿರಿ ಮಗ, ಕಿರಿ ಸೊಸೆ ಎಂದು ಸ್ಥಾನಕ್ಕೆ ತಕ್ಕಂತೆ ಜವಾಬ್ದಾರಿ ಹೊರಿಸುವ ತಾಯಂದಿರು ತಾವು ಸಣ್ಣವರಾಗಿದ್ದಾಗ ಅವರಿಗೆ ಅವರ ಅಪ್ಪನೇ ಜೀವನದಲ್ಲಿ ಮೊದಲ ಹೀರೋ ಆಗಿದ್ದ. ಆವರಿಗೆ ಅಪ್ಪನಿಗಿಂತ ಆದರ್ಶ ಪುರುಷ ಶ್ರೀರಾಮನೂ ಕೂಡ ಅಲ್ಲ. ಅವರು ಬೆಳೆದು ದೊಡ್ಡವರಾದಂತೆಲ್ಲ ಅವರ ಅಪ್ಪನಿಗೂ ಕೂಡ ವಯಸ್ಸಾಗಿಬಿಡುತ್ತದಲ್ಲವೇ? ಆಗ ಹೆಣ್ಣು ಮಕ್ಕಳು ತಮ್ಮ ತಮ್ಮನನ್ನು ಹೀರೋ ಮಾಡಿಬಿಡುತ್ತಾರೆ. ತಮ್ಮನ ವಾರಿಗೆಯ ಹುಡುಗರೆಲ್ಲ ಅವರ ಕಣ್ಣಿಗೆ ಪೋಲಿಗಳು, ಕುಡುಕರು, ಕೆಲಸಕ್ಕೆ ಬಾರದವರಂತೆ ಕಂಡರೆ, ಅಂತಹವರ ನಡುವಿನ ಅವರ ತಮ್ಮ ಮಾತ್ರ ಬಂಗಾರ. ಅದೆಂತ ಕುರುಡು ಪ್ರೀತಿಯೋ? ಮುಂದೆ ಅವರ ತಮ್ಮನಿಗೆ ಮದುವೆಯಾಗಿ ಅವನ ಸಂಸಾರ ಬೇರೆಯಾದಾಗ, ಅದೇ ಹೆಣ್ಣು ಮಕ್ಕಳು ತಮ್ಮ ದೊಡ್ಡ ಮಗನನ್ನು ಮುಂಚೂಣಿಗೆ ತರುತ್ತಾರೆ.
ಒಂದು ವೇಳೆ ನೀವು ನಿಮ್ಮ ಕುಟುಂಬದಲ್ಲಿ ನೀವು ದೊಡ್ಡ ಮಗನಾಗಿ ಹುಟ್ಟಿದ್ದರೆ, ಅಲ್ಲಿ ನಿಮ್ಮ ತಾಯಿಯೇ ನಿಮ್ಮನ್ನು ಹೀರೋ ಮಾಡಿರುತ್ತಾಳೆ. ಒಂದು ವೇಳೆ ನೀವು ಕಿರಿಯ ಮಗನಾಗಿದ್ದರೆ, ನಿಮ್ಮದೇ ಅದೃಷ್ಟ. ಮನೆಯಲ್ಲಿ ಬೇರೆಯವರ ಪ್ರೀತಿ ಸಿಗುತ್ತದೋ ಇಲ್ಲವೋ, ನಿಮ್ಮ ತಾಯಿ ಸಮಯಕ್ಕೆ ಸರಿಯಾಗಿ, ಬಿಸಿ ಬಿಸಿಯಾಗಿ ನೀವು ಕೇಳಿದ್ದು ಮಾಡಿ ಬಡಿಸುತ್ತಾಳೆ. ಒಂದು ವೇಳೆ ನೀವು ಹಿರಿ ಮಗ ಅಲ್ಲ ಆದರೆ ನಿಮಗೆ ಅಕ್ಕ ಇದ್ದರೆ, ಅವಳು ಅಲ್ಪ ಸಮಯಕ್ಕಾದರೂ ನಿಮ್ಮನ್ನು ಕೇಂದ್ರ ಬಿಂದುವನ್ನಾಗಿ ಮಾಡುತ್ತಾಳೆ. ನೀವು ಹಿರಿ ಮಗನೂ ಅಲ್ಲ, ನಿಮಗೆ ಸೋದರಿಯೂ ಇಲ್ಲ ಎಂದರೆ ಏನು ಚಿಂತೆ ಇಲ್ಲ. ನಿಮ್ಮನ್ನು ಹೀರೋ ಮಾಡಲು ಇದ್ದಾಳೆ ನಿಮ್ಮ ಮಗಳು.
ಒಂದು ವೇಳೆ ನೀವು ನಡುವಿನ ಮಗನಾಗಿದ್ದರೆ, ನೀವು ಮಕ್ಕಳೆಷ್ಟು ಎಂದು ಕೇಳಿದಾಗ ಮಾತ್ರ ಲೆಕ್ಕಕ್ಕೆ ಉಂಟು. ನೀವು ಏನು ಸಾಧಿಸಿದರೂ ಅದನ್ನು ನಿಮ್ಮ ತಾಯಿ ಒಪ್ಪುವುದಿಲ್ಲ. ಅವಳಿಗೆ ದೊಡ್ಡ ಮಗನೇ ಹೀರೋ. ನಿಮ್ಮ ಸೋದರಿಗೆ ಹಲವಾರು ಸೋದರರಿದ್ದರೆ, ಸರ್ಕಸ್ ನಲ್ಲಿ ಜೋಕರ್ ನಾಲ್ಕಾರು ಚೆಂಡುಗಳನ್ನು ಒಂದಾದರ ನಂತರ ಒಂದರಂತೆ ತೂರುತ್ತಾ ಕೈ ಬದಲಾಯಿಸುತ್ತಾನಲ್ಲ. ಆ ಚೆಂಡಿನ ಪರಿಸ್ಥಿತಿ ನಿಮ್ಮದು. ನಿಮಗೆ ಮಗಳು ಕೂಡ ಇರದಿದ್ದರೆ, ನಿಮ್ಮಷ್ಟು ದುರದೃಷ್ಟವಂತರು ಬೇರಿಲ್ಲ. ಏಕೆಂದರೆ ನಿಮ್ಮನ್ನು ಹೀರೋ ಮಾಡಲು ನಿಮ್ಮ ತಾಯಿ, ಸೋದರಿ, ಮಗಳು ಯಾರು ನಿಮ್ಮ ಜೊತೆಗಿಲ್ಲ. ನಿಮ್ಮ ಹೆಂಡತಿಗೆ ಹೀರೋ ಆಗಲು ಅವಳ ಅಪ್ಪ, ತಮ್ಮ ಮತ್ತು ಮಗ ಇದ್ದಾರೆ. ಹಾಗಾಗಿ ನಿಮ್ಮ ಹೆಂಡತಿಗೆ ನೀವು ಗಂಟು ಬಿದ್ದ ಶನಿ ಮಾತ್ರ. ನಾನಾದಕ್ಕೆ ಇವರ ಜೊತೆ ಸಂಸಾರ ಮಾಡುತ್ತಿದ್ದೇನೆ ಎನ್ನುವಂತೆ ಅವಳು ವರ್ತಿಸುತ್ತಿರುತ್ತಾಳೆ. ನೀವು ಏನೇ ಕೆಲಸ ಸಾಧಿಸಿದರೂ, ಅದರ ಕ್ರೆಡಿಟ್ಟು ತನ್ನ ತಂದೆಗೆ, ತಮ್ಮನಿಗೆ ಇಲ್ಲವೇ ಮಗನಿಗೆ ಕೊಡುತ್ತಾಳೆ.
ನೀವು ದೊಡ್ಡ ಮಗನಾಗಿ ಹುಟ್ಟಿದ್ದರೆ, ನೀವು ಹೀರೋ ಆಗುವುದರಲ್ಲಿ ನೀವು ಸಾಧಿಸಿದ್ದಕ್ಕಿಂತ ನಿಮ್ಮ ತಾಯಿಯೇ ಪಾತ್ರವೇ ಹೆಚ್ಚಿತ್ತು. ಅದು ಕುಂತಿ ಧರ್ಮರಾಯನನ್ನು ಮುಂದಿಟ್ಟ ಹಾಗೆ. ನೀವು ಕಿರಿಯ ಮಗನಾಗಿದ್ದರೆ, ನಿಮ್ಮ ತಾಯಿಯ ಸಾವಿನ ನಂತರ ನಿಮ್ಮ ಬದುಕು ಧುರ್ಭರವಾಗುತ್ತದೆ. ನಿಮಗೆ ಸೋದರಿ ಇದ್ದರೆ ಜೀವನದ ಮೊದಲ ಭಾಗದಲ್ಲಿ ಮತ್ತು ಮಗಳು ಇದ್ದರೆ ಜೀವನದ ಕೊನೆಯಲ್ಲಿ ಮರ್ಯಾದೆ. ಅವೆರಡು ಇಲ್ಲದೆ ಹೋದರೆ ನೀವು ಮನೆಯಲ್ಲಿ ಯಾರಿಂದಲೂ, ಯಾವ ಕಾಲಕ್ಕೂ ಸೈ ಅನ್ನಿಸಿಕೊಳ್ಳದ ಅಂತರ್ ಪಿಶಾಚಿ ಮಾತ್ರ.
No comments:
Post a Comment