(ಫ್ರಾಂಕ್ ಡಿಕೊಟ್ಟೆರ್ ಬರೆದ 'How to be a dictator' ಪುಸ್ತಕದ 'ಮುಸ್ಸಲೋನಿ' ಅಧ್ಯಾಯದ ಆಯ್ದ ಭಾಗದ ಭಾವಾನುವಾದ)
೧೯೩೦ ರ ಹೊತ್ತಿಗೆ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ಮುಸ್ಸಲೋನಿ. ಅವನು ಹೋದ ಕಡೆಯೆಲ್ಲ ಜನ ಸಾಗರ ಮತ್ತು ಚಪ್ಪಾಳೆಗಳ ಸುರಿಮಳೆ. ಅಲ್ಲೊಬ್ಬರು, ಇಲ್ಲೊಬ್ಬರು ಮುಸ್ಸಲೋನಿ ಕಟ್ಟಿದ ಪಕ್ಷವನ್ನು ಟೀಕೆ, ವಿಮರ್ಶೆ ಮಾಡುವವರು ಇದ್ದರೂ ಮುಸ್ಸಲೋನಿಯನ್ನು ಟೀಕೆ ಮಾಡುವವರು ಮಾತ್ರ ಸಮಾಜದ ಹೊರ ನೋಟಕ್ಕೆ ಕಾಣುತ್ತಿರಲಿಲ್ಲ. ಏಕೆಂದರೆ ಮುಸ್ಸಲೋನಿ ಅವರಿಗೆಲ್ಲ ಆರಾಧ್ಯ ದೈವ ಆಗಿಬಿಟ್ಟಿದ್ದ. ಅವನಲ್ಲಿ ಏನು ತಪ್ಪು ಹುಡುಕುವುದು?
ಮುಸ್ಸಲೋನಿ ಮತ್ತು ಅವನ ಪಕ್ಷ ಬಿಟ್ಟರೆ ಜನರಿಗೆ ಬೇರೆ ಆಯ್ಕೆಯೇ ಇರಲಿಲ್ಲ. ಮೊದಲಿಗೆ ಮಂತ್ರಮುಗ್ಧರಾಗಿ ಮುಸ್ಸಲೋನಿಯ ಭಾಷಣ ಕೇಳುತ್ತಿದ್ದ ಜನರಿಗೆ ಕ್ರಮೇಣ ಮುಸ್ಸಲೋನಿಯ ನಿಜಮುಖದ ಗೋಚರವಾಗತೊಡಗಿತು. ಅವನೊಬ್ಬ ಅದ್ಭುತ ನಟ ಮತ್ತು ಅವನು ಹಿಂಬಾಲಕರು ನಾಟಕದ ಇತರ ಪಾತ್ರಧಾರಿಗಳು ಎನ್ನುವ ಅರಿವು ಬರತೊಡಗಿತು. ಬಹಿರಂಗವಾಗಿ ವಿರೋಧಿಸಿದರೆ ಕಠಿಣ ಶಿಕ್ಷೆಗಳಿದ್ದವಲ್ಲ. ಹೀಗಾಗಿ ಹೊರಗೆ ಏನು ಮಾತನಾಡದೆ ಇದ್ದರೂ ತಮ್ಮ ತಮ್ಮ ಜನರೊಡನೆ ಇದ್ದಾಗ M for Mussolini ಅಲ್ಲ ಅದು M for Misery ಎಂದು ನಗೆಯಾಡತೊಡಗಿದರು. ತನ್ನ ಜನಪ್ರಿಯತೆ ಕುಗ್ಗುತ್ತಿರುವುದರ ಸುಳಿವನ್ನು ರಹಸ್ಯ ಏಜೆಂಟ ರಿಂದ ಪಡೆದ ಮುಸ್ಸಲೋನಿ, ಜನರ ಗಮನ ಬೇರೆ ಕಡೆ ಹರಿಸಲು ಹೊಸ ಯೋಜನೆಯೊಂದನ್ನು ಹೆಣೆದ. ಅದು ಪಕ್ಕದ ದೇಶವಾದ ಗ್ರೀಸ್ ಮೇಲೆ ಧಾಳಿ ನಡೆಸುವುದು. ಆದರೆ ಮುಸ್ಸಲೋನಿಯ ದುರಾದೃಷ್ಟಕ್ಕೆ ಅವನ ಸೈನಿಕರು ಪ್ರತಿಕೂಲ ಪರಿಸ್ಥಿತಿಯಿಂದ ಮರಳಿ ಬಂದರು. ತನ್ನ ಸ್ನೇಹಿತ ಹಿಟ್ಲರ್ ನ ಸಹಾಯ ಕೋರಿದ ಮುಸ್ಸಲೋನಿ, ಗ್ರೀಸ್ ದೇಶವನ್ನು ಆಕ್ರಮಿಸಿಕೊಳ್ಳುವಲ್ಲಿ ಸಫಲನಾದ. ಆದರೆ ಹಿಟ್ಲರ್ ನ ಸೈನಿಕರು ಅಲ್ಲಿ ತಮ್ಮ ಅಧಿಪತ್ಯ ಸಾಧಿಸಿ ಮುಸ್ಸಲೋನಿ ಯನ್ನು ಮೂಲೆಗುಂಪು ಮಾಡಿಬಿಟ್ಟರು. ಒಂದು ಕಾಲದ ಸರ್ವಾಧಿಕಾರಿ ಮುಸ್ಸಲೋನಿ ಸುಮ್ಮನೆ ಶಬ್ದ ಮಾಡುವ ಖಾಲಿ ಪಾತ್ರೆಯಾದ.
ಇಟಲಿ ದೇಶದ ಜನರು ತಮ್ಮ ನಾಯಕನ ಮಾತುಗಳನ್ನು ನಂಬದೆ ನಿಜ ಸುದ್ದಿ ತಿಳಿಯಲು ಬ್ರಿಟಿಷ್ ದೇಶದ ರೇಡಿಯೋ ಸ್ಟೇಷನ್ ಗಳಿಂದ ಸುದ್ದಿ ಕೇಳತೊಡಗಿದದರು. ಇತ್ತ ಆಫ್ರಿಕಾ ದೇಶಗಳ ಕಡೆ ಆಕ್ರಮಣಕ್ಕೆ ಹೋಗಿದ್ದ ಮುಸ್ಸಲೋನಿಯ ಸೇನೆ ಸೋತು ಸುಣ್ಣವಾಯಿತು. ಒಂದು ಕಾಲದಲ್ಲಿ 'ಅತಿ ಹೆಚ್ಚು ಫೋಟೋ ತೆಗೆಸಿಕೊಂಡ ವ್ಯಕ್ತಿ' ಎಂದು ಪ್ರಸಿದ್ಧಿ ಪಡೆದಿದ್ದ ಮುಸ್ಸಲೋನಿಯ ಚಿತ್ರಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗದೆ ತಿಂಗಳುಗಳು ಸವೆದವು. ಸ್ವತಃ ಮುಸ್ಸಲೋನಿ ತನ್ನ ಭಾಷಣಗಳನ್ನು ನಿಲ್ಲಿಸಿಬಿಟ್ಟ. ಅವನು ಬದುಕಿದ್ದಾನೋ, ಇಲ್ಲವೋ ಎಂದು ಅನುಮಾನ ಪಡುವಷ್ಟರ ಮಟ್ಟಿಗೆ ಅವನಿಂದ ಯಾವುದೇ ಸುದ್ದಿ ಬರುವುದು ನಿಂತು ಹೋಯಿತು.
ಹದಿನೆಂಟು ತಿಂಗಳ ನಂತರ ತನ್ನ ಮೌನ ಮುರಿದು ಮಾತನಾಡಿದ ಮುಸ್ಸಲೋನಿ ಯ ಧ್ವನಿಯಲ್ಲಿ ಯಾವುದೇ ಮಾಂತ್ರಿಕತೆ ಉಳಿದಿರಲಿಲ್ಲ. ಆ ಹೊತ್ತಿಗೆ ಇಟಲಿಯ ದೊಡ್ಡ ಪಟ್ಟಣಗಳ ಮೇಲೆ ಪಕ್ಕದ ದೇಶಗಳ ಧಾಳಿ ನಡೆದಿತ್ತು. ಅದರಿಂದ ಜನರನ್ನು ಉಳಿಸುವ ಶಕ್ತಿ ಮುಸ್ಸಲೋನಿ ಯಲ್ಲಿ ಉಳಿದಿರಲಿಲ್ಲ. ಅವನನ್ನು ಆರಾಧಿಸಿದ ಜನರೇ ಅವನು ಸತ್ತರೆ ಚೆನ್ನ ಎಂದು ಮಾತನಾಡುವಂತೆ ಆಯಿತು. ಇಟಲಿ ದೇಶದ ಜನನಾಯಕರೆಲ್ಲ ಸೇರಿ ಮುಸ್ಸಲೋನಿಯನ್ನು ಕೆಳಗಿಳಿಸುವ ನಿರ್ಧಾರಕ್ಕೆ ಬಂದರು. ಆದರೆ ಮುಸ್ಸಲೋನಿಗೆ ಇನ್ನೂ ಒಬ್ಬ ಸ್ನೇಹಿತ ಉಳಿದೆ ಇದ್ದ. ಅವನು ಹಿಟ್ಲರ್. ಅವನ ಸಹಾಯದಿಂದ ತನ್ನ ಕೆಲವು ವೈರಿಗಳನ್ನು ಮುಸ್ಸಲೋನಿ ಮುಗಿಸಿದರೂ, ಅವನ ಕಾಲ ಮಿಂಚಿ ಹೋಗಿತ್ತು. ಅವನ ವಿರೋಧಿಗಳು ಮುಸ್ಸಲೋನಿಯನ್ನು ಮತ್ತು ಅವನ ಹಿಂಬಾಲಕರನ್ನು ಶೂಟ್ ಮಾಡಿ ಸಾಯಿಸಿ, ಮಿಲಾನ್ ನಗರದಲ್ಲಿ ತಲೆ ಕೆಳಗೆ, ಕಾಲು ಮೇಲೆ ಮಾಡಿ ಜನರ ವೀಕ್ಷಣೆಗೆಂದು ನೇತು ಹಾಕಿದರು. ಅದಕ್ಕೆ ಮೊದಲೇ ಮುಸ್ಸಲೋನಿ ತನ್ನ ಆಪ್ತರಲ್ಲಿ ತನ್ನ ನಟನೆ ಮುಗಿದಿರುವುದಾಗಿ ಮತ್ತು ತಾನು ಜೀವಂತ ಶವ ಅಷ್ಟೇ ಎಂದು ಹೇಳಿಕೊಂಡಿದ್ದ.