ನೀವು ದಟ್ಟ ಕಾಡಿನಲ್ಲಿ ಸಫಾರಿಗೆಂದು ಹೊರಟಿರುವಿರಿ. ಅಲ್ಲಿ ನಿಮ್ಮ ಅದೃಷ್ಟಕ್ಕೆ ಹುಲಿ ಕಣ್ಣಿಗೆ ಬೀಳುತ್ತದೆ. ನೀವು ಸುರಕ್ಷಿತ ಗಾಡಿಯಲ್ಲಿ ಕುಳಿತಿದ್ದು, ನಿಮಗೆ ಯಾವ ಅಪಾಯವಿಲ್ಲದಿದ್ದರೂ ನಿಮ್ಮ ಹೃದಯ ಬಡಿತ ಏರುತ್ತದೆ ಮತ್ತು ಉಸಿರಾಟ ತೀವ್ರವಾಗುತ್ತದೆ. ಅವಶ್ಯಕತೆ ಇರದಿದ್ದರೂ ನಿಮ್ಮ ದೇಹ ಓಡಿ ಹೋಗಲು, ಅಥವಾ ತಪ್ಪಿಸಿಕೊಳ್ಳಲು ಸಜ್ಜು ಮಾಡಿಕೊಳ್ಳುತ್ತದೆ. ಏಕೆ ಹೀಗೆ? ಉತ್ತರ ಸುಲಭ. ಮನುಷ್ಯ ಆದಿವಾಸಿಯಾಗಿ ಕಾಡಿನಲ್ಲಿ ಬದುಕುತ್ತಿದ್ದಾಗ, ಹುಲಿಯನ್ನು ಕಂಡರೆ ಹೇಗೆ ಪ್ರತಿಕ್ರಿಯಿಸುತ್ತಿದ್ದನೋ ಅದೇ ಪ್ರತಿಕ್ರಿಯೆ ಇಂದಿಗೂ ಕೂಡ ಮನುಷ್ಯನಲ್ಲಿ ಹಾಸು ಹೊಕ್ಕಾಗಿದೆ. ಲಕ್ಷಾಂತರ ವರುಷಗಳಿಂದ ವಿಕಾಸ ಹೊಂದುತ್ತಿರುವ ಮಾನವ ಕಾಡು ಬಿಟ್ಟು ನಾಗರಿಕತೆಗೆ ಬಂದು ಕೆಲ ಸಾವಿರ ವರುಶಗಳಷ್ಟೇ ಕಳೆದಿವೆ. ಸುಮಾರು ೪೦೦ ಕೋಟಿ ವರುಷ ಇತಿಹಾಸ ಹೊಂದಿರುವ ಜೀವ ವಿಕಾಸಕ್ಕೆ, ಸಾವಿರ ವರುಷಗಳು ಅಲ್ಪ ಸಮಯ ಮಾತ್ರ. ಇಷ್ಟು ಕಡಿಮೆ ಸಮಯದಲ್ಲಿ ಮನುಷ್ಯನ ಜೀನ್ ಗಳು ಮಾರ್ಪಾಡಾಗುವುದು ಅಸಾಧ್ಯ. ಹಾಗಾಗಿ ಅಲೆಮಾರಿ ಮನುಷ್ಯನ ಪ್ರವೃತ್ತಿಗಳು ಆಧುನಿಕ ಮನುಷ್ಯನಲ್ಲಿ ಕೂಡ ಬದಲಾಗದೆ ಹಾಗೆ ಉಳಿದಿವೆ.
ಪ್ರಕೃತಿಯು ಎಲ್ಲ ಜೀವಿಗಳಲ್ಲಿ ತಾನು ಜೀವ ಉಳಿಸಿಕೊಳ್ಳುವದಕ್ಕೆ ಮತ್ತು ವಂಶ ಮುಂದುವರೆಸುವುದಕ್ಕೆ ಏನು ಬೇಕು ಅದನ್ನು ಮಾತ್ರ ಜೀನ್ ಗಳಲ್ಲಿ ಸಾಂಕೇತಿಕ ಭಾಷೆಯಲ್ಲಿ ಬರೆದುಬಿಟ್ಟಿದೆ. ಅದಕ್ಕೆ ನೋಡಿ ಆಧುನಿಕ ಮನುಷ್ಯ ಎಲ್ಲ ಸವಲತ್ತುಗಳ ನಡುವೆಯೂ ಕೂಡ ನೆಮ್ಮದಿಯಿಲ್ಲದೆ ಒದ್ದಾಡುವುದು. ನೀವು ಬೆಳಿಗ್ಗೆ ಹೊತ್ತಿಗೆ ದೊಡ್ಡ ಲಾಟರಿ ಗೆದ್ದಿರುವಿರಿ ಎಂದುಕೊಳ್ಳೋಣ. ಆದರೆ ಅಂದು ಮಧ್ಯಾಹ್ನ ನೀವು ಊಟ ಮಾಡುವುದು ತಡ ಮಾಡಿದರೆ, ನಿಮ್ಮ ದೇಹ ಸಂಕಟ ಉಂಟು ಮಾಡಿ ನಿಮ್ಮ ಲಾಟರಿ ಗೆದ್ದ ಸಂತೋಷ ಮರೆತು ಹೋಗುವಂತೆ ಮಾಡುತ್ತದೆ. ಏಕೆಂದರೆ ಪ್ರಕೃತಿಗೆ ಮುಖ್ಯವಾಗಿರುವುದು ನೀವು ಊಟ ಮಾಡಿ ಜೀವ ಉಳಿಸಿಕೊಳ್ಳುವುದು. ಹಾಗೆಯೇ ಅದು ಮೈಥುನದಲ್ಲಿ ಆನಂದವನ್ನು ಕ್ಷಣಿಕವಾಗಿಸಿದೆ. ಅದು ಉಂಟುಮಾಡುವ ಸಂವೇದನೆಗೆ ಮತ್ತೆ ಮತ್ತೆ ಹಾತೊರೆಯುವಂತೆ ಮಾಡುತ್ತದೆ. ಪ್ರಕೃತಿಗೆ ಬೇಕಾಗಿರುವುದು ನೀವು ಜೀವ ಉಳಿಸಿಕೊಳ್ಳುವುದು ಮತ್ತು ನಿಮ್ಮ ವಂಶ ಮುಂದುವರೆಯುವುದು ಮಾತ್ರ. ನೀವು ಸಂತೋಷವಾಗಿರುವುದು ಅಲ್ಲ. ನೀವು ಸಂತೋಷದಲ್ಲಿ ಮೈ ಮರೆತು ಬಿಟ್ಟರೆ ಹೇಗೆ? ಹಾಗಾಗಿ ಅದು ಸಂತೋಷವನ್ನು ಕ್ಷಣಿಕವನ್ನಾಗಿಸಿ, ಮತ್ತೆ ಊಟ ಹುಡುಕಿಕೊಳ್ಳುವಂತೆ, ಸಂಗಾತಿಯನ್ನು ಹುಡುಕಿಕೊಳ್ಳುವಂತೆ ಪ್ರೇರೇಪಿಸುತ್ತ ಹೋಗುತ್ತದೆ. ದುಃಖ ಸಂವೇದನೆಗಳನ್ನು ಹೆಚ್ಚಿಸಿ, ಕ್ಷಣಿಕ ಸಂತೋಷದ ಸಂವೇದನೆಗಳಿಗೆ ಹಾತೊರೆಯುವಂತೆ ಮಾಡುತ್ತದೆ.
ಪ್ರಕೃತಿ ವಿಕಾಸ ಸೃಷ್ಟಿಸಿದ ಜೀವಿಗಳು ಸಂಪೂರ್ಣ ನೆಮ್ಮದಿಯಿಂದ ಬದುಕಲಾರವು. ನೆಮ್ಮದಿ ಪ್ರಕೃತಿಯ ಉದ್ದೇಶ ಅಲ್ಲ. ಬದಲಿಗೆ ಅದು ಜೀವಿಗಳನ್ನು ಸ್ಪರ್ಧೆಗೆ, ಪೈಪೋಟಿಗೆ ಹಚ್ಚುತ್ತದೆ. ಮನುಷ್ಯರಲ್ಲಿ ದುಡ್ಡು, ಆಸ್ತಿ, ಸಾಮಾಜಿಕ ಸ್ಥಾನಮಾನ ಇವುಗಳಿಗೆ ಪ್ರತಿ ದಿನ ಪೈಪೋಟಿ ಏರ್ಪಡುತ್ತದೆ. ಅದರಲ್ಲಿ ಗೆದ್ದವರ ಸಂತೋಷ ಕ್ಷಣಿಕ. ಅವರು ಮತ್ತೆ ಹೆಚ್ಚಿನ ಸ್ಪರ್ಧೆಗೆ ಬೀಳುತ್ತಾರೆ. ಆದರೆ ಸೋತವರ ವೇದನೆ ಮಾತ್ರ ದೀರ್ಘ ಕಾಲಿಕ. ವೇದನೆಯ ಸಂವೇದನೆಗಳನ್ನು ಮರೆಯಲು ಮಾನಸಿಕವಾಗಿ ದುರ್ಬಲನಾದ ಮನುಷ್ಯ ತನ್ನ ಸಂಕಟ ಮರೆಯಲು ನಶೆ ಮಾರ್ಗಗಳನ್ನು ಹುಡುಕುತ್ತಾನೆ. ಅವು ಮನುಷ್ಯನಲ್ಲಿ ಉಂಟು ಮಾಡುವ ರಾಸಾಯನಿಕ ಕ್ರಿಯೆಗಳು, ಸಂವೇದನೆಗಳನ್ನು ತಾತ್ಕಾಲಿಕವಾಗಿ ಬದಲು ಮಾಡಿದರೂ, ಪ್ರಕೃತಿ ಮತ್ತೆ ಮರು ದಿನ ಬೆಳಿಗ್ಗೆ ತನ್ನ ನೋವಿನೊಂದಿಗೆ ವಾಪಸ್ಸು ಆಗುತ್ತದೆ.
ಸಂತೋಷ ಎನ್ನುವುದು ಹೊರಗಡೆ ಸಿಗುವ ವಸ್ತುವಲ್ಲ ಅದು ನಮ್ಮಲ್ಲೇ ಇರಬೇಕು ಎಂದು ಹೇಳಿದ್ದು ಬುದ್ಧ. ಈಗ ಇರುವ ಪರಿಸ್ಥಿತಿಯಲ್ಲಿ ನೀವು ಸಂತೋಷವಾಗಿಲ್ಲ ಎಂದರೆ ನೀವು ಯಾವತ್ತೂ ಕೂಡ ಸಂತೋಷವಾಗಿರಲು ಸಾಧ್ಯವಿಲ್ಲ ಎನ್ನುವುದು ಅವನ ಅಭಿಪ್ರಾಯ. ನೀವು ಏನು ಗಳಿಸಿದರು ಅದರ ಆನಂದ ಸ್ವಲ್ಪ ಸಮಯದಲ್ಲಿ ಕಳೆದು ಹೋಗಿ, ಮತ್ತೆ ಹೆಚ್ಚಿನ ಗಳಿಕೆಗೆ ಮುಂದಾಗುವಂತೆ ನಿಮ್ಮ ಮನಸ್ಸನ್ನು ಪ್ರಕೃತಿ ಪ್ರೇರೇಪಿಸುತ್ತದೆ. ಹೀಗೆ ಬಯಸುವುದನ್ನು ನಿಲ್ಲಿಸದಿದ್ದರೆ, ಬಳಲುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಬುದ್ಧ ಕಂಡುಕೊಂಡಿದ್ದ. ಅದನ್ನೇ ಸರಳವಾಗಿ 'ಆಸೆಯೇ ದುಃಖಕ್ಕೆ ಮೂಲ' ಎಂದು ಹೇಳಿದ. ಗಮನಿಸಿ ನೋಡಿ, ಆಸೆಯನ್ನು ಹುಟ್ಟು ಹಾಕುವುದು ಪ್ರಕೃತಿಯ ಮೂಲ ಗುಣ. ನೀವು ಅದರ ಕೈಗೊಂಬೆಯಾದರೆ, ಅದು ನಿಮ್ಮನ್ನು ಆಟ ಆಡಿಸುತ್ತದೆಯೇ ಹೊರತು ನೆಮ್ಮದಿ ಕೊಡುವುದಿಲ್ಲ. ಪ್ರಕೃತಿಯ ವಿರುದ್ಧ ನಿಮಗೆ ಈಜಲು ಸಾಧ್ಯವಾದರೆ ಮಾತ್ರ ನಿಮಗೆ ಮುಕ್ತಿ ದೊರಕಲು ಸಾಧ್ಯ.
ಪ್ರಕೃತಿಯ ವಿರುದ್ಧ ನೀವು ಈಜುತ್ತಾ ಹೋದಷ್ಟು ಅದು ನಿಮ್ಮನ್ನು ಮತ್ತೆ ತನ್ನ ದಾರಿಗೆ ಎಳೆದು ತರುತ್ತಾ ಹೋಗುತ್ತದೆ. ಬಯಕೆಗಳನ್ನು ಅದುಮಿಕಂಡಷ್ಟೂ ಅವು ಹೆಚ್ಚುತ್ತಾ ಹೋಗುತ್ತವೆ. ಹಾಗಾಗಿ ಬುದ್ಧನ ಹಿಂಬಾಲಕರೆಲ್ಲ ಅವನ ಹಾಗೆ ಜ್ಞಾನಿಗಳಾಗಲಿಲ್ಲ. ಅದು ಕಷ್ಟದ ಹಾದಿ. ಆದರೆ ಸಾಧ್ಯವೇ ಇಲ್ಲ ಎನ್ನುವ ಹಾಗಿಲ್ಲ. ಅದು ಬುದ್ಧನ ಮಾರ್ಗವೇ ಆಗಬೇಕೆಂದಿಲ್ಲ. ಭಕ್ತಿ ಮಾರ್ಗವಾದರೂ ಆದೀತು. ನಿಸ್ವಾರ್ಥ ಸೇವೆಯ ಕರ್ಮ ಮಾರ್ಗವಾದರೂ ಆದೀತು. ಧ್ಯಾನ ಮಾರ್ಗವಾದರೂ ಆದೀತು. ಜ್ಞಾನ ಸಂಪಾದಿಸುವ ಮಾರ್ಗವಾದರೂ ಆದೀತು. ಅವುಗಳ ಭೋದನೆ ಬೇರೆ ಬೇರೆಯಾದರು ಗುರಿ ಮಾತ್ರ ಒಂದೇ. ಪ್ರಕೃತಿ ನಮ್ಮನ್ನು ಬಂಧಿಸಿಡುವ ಪ್ರಕ್ರಿಯೆಯಗಳಿಂದ ಹೊರ ಬರುವುದು. ಪ್ರಕೃತಿಯನ್ನು ಗೆದ್ದವರನ್ನು ಹಸಿವು, ನೋವು ಬಾಧಿಸುವುದಿಲ್ಲ ಎಂದೇನಿಲ್ಲ. ಆದರೆ ಅದನ್ನು ಸಮಾನ ಮನಸ್ಥಿತಿಯಲ್ಲಿ ಸ್ವೀಕರಿಸುವುದು ಅವರಿಗೆ ಸಾಧ್ಯವಾಗಿರುತ್ತದೆ.
ಪ್ರಕೃತಿಗೆ ತನ್ನನ್ನು ಮೀರಿದ ಸಾಧು-ಸಂತರಿಂದ ಏನು ಉಪಯೋಗ? ಅವರನ್ನು ತನ್ನಲ್ಲಿ ಲೀನವಾಗಿಸಿಕೊಂಡು, ಹೆಚ್ಚಿನ ಸ್ವಾರ್ಥಿಗಳನ್ನು ಹುಟ್ಟು ಹಾಕುತ್ತ ಹೋಗುತ್ತದೆ. ಜೀವಿಗಳನ್ನು ನೆಮ್ಮದಿಯಾಗಿರಲು ಬಿಡದೆ ತನ್ನ ಯೋಜನೆಗೆ ಬಳಸಿಕೊಳ್ಳುತ್ತದೆ. ಗಂಡು ಜಿಮ್ ಗೆ ಹೋಗಿ ದೇಹ ಧಾರ್ಡ್ಯ ಬೆಳೆಸಿಕೊಳ್ಳುತ್ತಾನೆ. ಧನ ಸಂಪಾದಿಸುವ ಹೊಸ ಮಾರ್ಗಗಳನ್ನು ಹುಡುಕುತ್ತ ಹೋಗುತ್ತಾನೆ. ಹೆಣ್ಣು ಬಟ್ಟೆ ಅಂಗಡಿಗೆ, ಆಭರಣ ಅಂಗಡಿಗೆ ಧಾಳಿಯಿಟ್ಟು ತಾನು ಇನ್ನೂ ಸುಂದರ ಕಾಣುವ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾಳೆ. ಅವರಿಬ್ಬರ ಜೋಡಿಯನ್ನು ನೋಡಿ ಪ್ರಕೃತಿ ಮರೆಯಲ್ಲೇ ನಗುತ್ತದೆ. ಅವರ ಯೌವನ ಕಳೆದು ಹೋಗಿ ಜೀವನದ ಅರ್ಥ ಏನು ಎಂದು ಗ್ರಹಿಸುವಷ್ಟರಲ್ಲಿ, ಹೊಸ ಪೀಳಿಗೆಗೆ ತನ್ನ ಮೋಡಿಯನ್ನು ವರ್ಗಾಯಿಸಿರುತ್ತದೆ. ಬುದ್ಧ ಮಂದಹಾಸ ಬೀರಿದರೆ, ಪ್ರಕೃತಿ ಗಹಗಹಿಸಿ ನಗುತ್ತದೆ.