(ವಿಜಯನಗರವನ್ನಾಳಿದ ಅರಸು ಶ್ರೀಕೃಷ್ಣದೇವರಾಯನ ಸಾವು ಮತ್ತು ನಂತರದ ಅಧಿಕಾರ ಹಸ್ತಾಂತರದ ಬಗ್ಗೆ ಇತಿಹಾಸದಲ್ಲಿ ಸಮರ್ಪಕವಾದ ವಿವರಣೆಗಳಿಲ್ಲ. ಆ ಕಾಲಘಟ್ಟದಲ್ಲಿ ನಡೆದಿರಬಹುದಾದ ಸಂಗತಿಗಳ ಬಗ್ಗೆ ಒಂದು ಕಾಲ್ಪನಿಕ ಕಥೆ)
ಅಧ್ಯಾಯ-೧; ವಿರೂಪಾಕ್ಷ ಬೀದಿಯ ವರ್ತಕರು ತಮ್ಮಲ್ಲೇ ಮಾತನಾಡಿಕೊಳ್ಳುವುದು
ಮೊದಲನೆಯ ವರ್ತಕ: ತಲೆ ತಲಾಂತರಗಳಿಂದ ಇಲ್ಲಿನ ಜನರು ವಿರೂಪಾಕ್ಷನಿಗೆ ನಡೆದು ಕೊಂಡರೆ, ನಮ್ಮ ರಾಯ ರಾಜ್ಯದ ಬೊಕ್ಕಸ ಹಣವನ್ನೆಲ್ಲ ತಿರುಪತಿಯಲ್ಲಿ ಸುರಿದು ಬರುತ್ತಾನೆ. ನೀವೇ ನೋಡಿತ್ತಿದ್ದೀರಲ್ಲ. ವಿರೂಪಾಕ್ಷನ ಸನ್ನಿಧಿಗೆ ಕೇವಲ ಎರಡು ಸಲ ದೇಣಿಗೆ ನೀಡಿದರೆ, ತಿರುಪತಿ ವೆಂಕಟೇಶನಿಗೆ ಏಳು ಸಲ ಧನ-ಕನಕ ಅರ್ಪಿಸಿದ್ದಾನೆ.
ಎರಡನೆಯ ವರ್ತಕ: ನಮ್ಮ ರಾಯ ತಿರುಪತಿಗೆ ಹೋಗುವುದು ವರುಷಕ್ಕೊಮ್ಮೆ. ಆದರೆ ಇಲ್ಲಿ ಹಂಪೆಯಲ್ಲಿ ವಿಠಲ ದೇವಸ್ಥಾನ ಕಟ್ಟಿದ ನಂತರ, ಅಲ್ಲಿ ಕೊಡುವ ದಾನಗಳಿಗೆ, ಆ ದೇವಸ್ಥಾನದ ವೈಭವಕ್ಕೆ, ಅಲ್ಲಿನ ಪೇಟೆಗೆ ಕೂಡ ಮೆರುಗು ಬಂದು ನಮ್ಮ ಪೇಟೆ ವ್ಯಾಪಾರ ಕಡಿಮೆ ಆಗಿದೆ.
ಮೂರನೆಯ ವರ್ತಕ: ಇದು ಬರಿ ಶೈವ-ವೈಷ್ಣವ ಸಮಸ್ಯೆ ಅಷ್ಟೇ ಅಲ್ಲ. ರಾಜನ ಆಸ್ಥಾನದಲ್ಲಿ ತೆಲುಗು ಭಾಷಿಕರೇ ತುಂಬಿದ್ದಾರೆ. ಸ್ವತಃ ಪ್ರಭುಗಳೇ ತೆಲುಗಿನಲ್ಲಿ ಕಾವ್ಯ ರಚಿಸುತ್ತಾರೆ. ಸುಮ್ಮನ ಅವರಿಗೆ 'ಆಂಧ್ರ ಭೋಜ' ಎಂದು ಕರೆಯುವರೇ? ಸೈನ್ಯದಲ್ಲಿ ಕೂಡ, ಮಂತ್ರಿ ತಿಮ್ಮರಸರು ತೆಲುಗು ದಳವಾಯಿಗಳಿಗೆ ಹೆಚ್ಚಿನ ಅಧಿಕಾರ ಕೊಟ್ಟಿದ್ದಾರೆ.
ಮೊದಲನೆಯ ವರ್ತಕ: ಸಂಗಮ ವಂಶದ ರಾಜರುಗಳೆಲ್ಲ ವಿರೂಪಾಕ್ಷನ ಆಶೀರ್ವಾದ ಪಡೆದು, ಅವನ ಕೃಪೆಯಿಂದ ರಾಜ್ಯ ಆಳಿದವರು ಆದರೆ ಈಗಿನ ತುಳುವ ವಂಶದ ಅರಸರಿಗೆ, ಅದರಲ್ಲೂ ನಮ್ಮ ಈಗಿನ ದೊರೆಗೆ ಮಾತ್ರ ವಿಷ್ಣುವಿನ ಮೇಲೆ ಪರಮ ಪ್ರೀತಿ.
ಎರಡನೆಯ ವರ್ತಕ: ಪ್ರಭುಗಳು ಹೊರಗಿನವರಿಗೆ ಹೆಚ್ಚಿನ ಅವಕಾಶ ನೀಡುವುದು ಮುಂದುವರೆದರೆ ಮುಂದೆ ನಮ್ಮ ಗತಿ?
ಮೂರನೆಯ ವರ್ತಕ: ಸಮಯಕ್ಕೆ ತಕ್ಕಂತೆ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಆದರೆ ಅಲ್ಲಿಯವರೆಗೆ ಸುಮ್ಮನೆ ಇರದೇ ಆಕ್ಷೇಪಿಸಿದರೆ, ರಾಜಭ್ರಷ್ಟ ಎನಿಸಿಕೊಂಡು ತಲೆದಂಡ ತೆರಬೇಕಾದೀತು.
---
ಅಧ್ಯಾಯ-೨; ಮಗನನ್ನು ಕಳೆದುಕೊಂಡ ಶೋಕದಲ್ಲಿ ಶ್ರೀಕೃಷ್ಣದೇವರಾಯ ತನ್ನ ಅರಮನೆಯಲ್ಲಿ ಶೋಕಿಸುತ್ತಿದ್ದಾನೆ.
ಸರಿ ರಾತ್ರಿ ಹೊತ್ತಾಗಿ, ಎಷ್ಟು ಉರುಳಾಡಿದರೂ ಕಣ್ಣಿಗೆ ನಿದ್ದೆ ಮಾತ್ರ ಬರದು. ಹಾಸಿಗೆಯಿಂದ ಎದ್ದು ತನ್ನ ಅರಮನೆಯಲ್ಲೇ ಶ್ರೀಕೃಷ್ಣದೇವರಾಯ ಶತಪಥ ತಿರುಗಲು ತೊಡಗುತ್ತಾನೆ. ಅವನಿಗೆ ತಾನು ಎಡವಿದ್ದೆಲ್ಲಿ ಎಂದು ಅರಿವಾಗುತ್ತಿಲ್ಲ. ರಣರಂಗದಲ್ಲಿ ಸೋಲನ್ನೇ ಕಾಣದ ಅರಸನ ಮಗನಿಗೆ, ಅವನ ಅರಮನೆಯಲ್ಲೇ ವಿಷ ಪ್ರಾಶನವಾಗುವುದು ಎಂದರೇನು?
ರಾಜಧಾನಿಗೆ ಯಾರು ಹೊಸಬರು ಬಂದರೂ, ತಳವಾರ ತನಗೆ ತಿಳಿಸುತ್ತಲೇ ಇದ್ದ. ಇದು ಸುಲ್ತಾನರು ಕಳಿಸಿದ ಬೇಹುಗಾರರ ಮಸಲತ್ತಲ್ಲ. ಏಳು ಸುತ್ತಿನ ಕಾವಲು ದಾಟಿದ ಮೇಲೆ ಮಾತ್ರ ಅರಸನ ಭೇಟಿ ಹಾಗೆ ಅರಮನೆಗೆ ಕಾಲಿಡಲು ಸಾಧ್ಯ. ಇದು ಹೊರಗಿನವರ ಕೆಲಸ ಅಲ್ಲವೇ ಅಲ್ಲ. ಛೆ, ಅಪ್ಪಾಜಿ ತಿಮ್ಮರಸು ಅವರ ಮೇಲೆ ಅನುಮಾನ ಪಟ್ಟು ಅವರನ್ನು ಶಿಕ್ಷಿಸಿದ್ದು ಎಂಥ ತಪ್ಪಾಗಿ ಹೋಯಿತು. ಈ ಕೆಲಸ ಮತ್ತಿನ್ನಾರದ್ದು? ಮಂತ್ರಿ, ದಳವಾಯಿಗಳ ಮನೆಗಳಲ್ಲಿ ಏನು ಮಾತಾದರೂ, ಯಾರು ಬಂದು ಹೋದರೂ ಅದು ತನಗೆ ಅರಿವಿಗೆ ಬರದೇ ಇರಲು ಸಾಧ್ಯವಿದ್ದಿಲ್ಲ. ರಾಜನಾದವನಿಗೆ ಅಂತಹ ಮುನ್ನೆಚ್ಚರಿಕೆ ಇರುವುದಕ್ಕೆ ಅಲ್ಲವೇ ತಾನು ನಂಬಿಗಸ್ಥ ಗುಪ್ತಚರರ ಬಲವಾದ ವ್ಯವಸ್ಥೆ ಕಟ್ಟಿಕೊಂಡಿದ್ದು?
ಹಾಗಾದರೆ, ಇದು ಕುಟುಂಬದವರ ಕೆಲಸವೇ? ಮಲ ತಮ್ಮ ಅಚ್ಯುತರಾಯನಿಗೆ ಸಿಂಹಾಸನದ ಮೇಲೆ ಕಣ್ಣಿರುವುದು ತಮಗೆ ತಿಳಿಯದ ವಿಷಯವೇನಲ್ಲ. ಅದಕ್ಕೆ ಅಲ್ಲವೇ ಅವನನ್ನು ದೂರದ ಚಂದ್ರಗಿರಿಗೆ ಅಟ್ಟಿದ್ದು? ಅವನು ಅಲ್ಲಿಯೇ ಕುಳಿತು ಮಸಲತ್ತು ಮಾಡುವುದಾದರೆ, ಅವನಿಗೆ ರಾಜಧಾನಿ ಹಂಪೆಯಲ್ಲಿ ಯಾರದೋ ಸಹಕಾರ ಇರಬೇಕಲ್ಲವೇ? ಯಾರಿಗೆ ಅಂತಹ ಆಸೆ ಉಂಟು? ಶ್ರೀಕೃಷ್ಣದೇವರಾಯನ ಮನದಲ್ಲಿ ಕ್ಷಣ ಕಾಲ ಅದು ಅಳಿಯ ರಾಮರಾಯನ ಕೆಲಸವಿರಬಹುದೇ ಅನ್ನಿಸಿತು. ತಕ್ಷಣವೇ ತಲೆ ಕೊಡವಿ, ಅವನು ಯುದ್ಧ ಭೂಮಿಯಲ್ಲಿ ಭುಜಕ್ಕೆ ಭುಜ ಕೊಟ್ಟು ಹೋರಾಡಿ , ನಂಬಿಕೆಗೆ ಅರ್ಹ ಅನ್ನಿಸಿದ ಮೇಲೆ ಅಲ್ಲವೇ ಅವನಿಗೆ ತನ್ನ ಮಗಳನ್ನು ಧಾರೆ ಎರೆದು ಕೊಟ್ಟಿದ್ದು? ಈ ಕೆಲಸ ಅವನದ್ದಿರಿಲಿಕ್ಕಿಲ್ಲ ಎಂದು ಪ್ರಭುಗಳಿಗೆ ಅನ್ನಿಸಿತು. ಆದರೂ ತಮಗೆ ಮೊದಲಿನ ಹಾಗೆ ಸ್ಪಷ್ಟ, ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕಳೆದು ಹೋಗಿದೆ ಎಂದು ಶ್ರೀಕೃಷ್ಣದೇವರಾಯನಿಗೆ ಸ್ವಯಂ ಅನ್ನಿಸತೊಡಗಿತ್ತು.
ತಿರುಪತಿ ವೆಂಕಟೇಶನಿಗೆ ಹರಕೆ ಹೊತ್ತ ಮೇಲೆಯೇ ಹುಟ್ಟಿದ ತನ್ನ ಮಗನಿಗೆ, ಆ ವೆಂಕಟೇಶ ಯಾಕೆ ಅಕಾಲ ಮರಣ ಕೊಟ್ಟನೆಂದು ದೊರೆಗಳಿಗೆ ತಿಳಿಯದಾಯಿತು. ತಾನು ತಿರುಪತಿಗೆ ಕೊಟ್ಟ ಧನ-ಕನಕಗಳೇನು ಕಡಿಮೆಯೇ? ಆದರೂ ವೆಂಕಟೇಶನಿಗೆ ತಮ್ಮ ವಂಶ ರಾಜ್ಯಭಾರ ಮುಂದುವರೆಸುವುದು ಯಾಕೆ ಇಷ್ಟವಾಗಲಿಲ್ಲವೋ ಎಂದು ಪ್ರಭುಗಳಿಗೆ ತಿಳಿಯಲಿಲ್ಲ. ಇಷ್ಟಕ್ಕೂ ತಮ್ಮ ಆರೋಗ್ಯವೇಕೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ? ತಮ್ಮ ಮೈಯಲ್ಲಿ ಅಲ್ಪ ಪ್ರಮಾಣದ ವಿಷವೇನಾದರೂ ಸೇರಿಕೊಂಡಿದೆಯೇ? ಇನ್ನು ರಣರಂಗದಲ್ಲಿ ಮತ್ತೆ ಖಡ್ಗ ಬೀಸುತ್ತ ಕಾದಲು ಸಾಧ್ಯವೇ? ಕುಮಾರನ ಸಾವಿನ ನಂತರ, ತಮಗೂ ಬದುಕುವ ಆಸೆ ಕುಂದುತ್ತಾ ಹೋಗುತ್ತಿರುವುದೇಕೆ? ಶ್ರೀಕೃಷ್ಣದೇವರಾಯನ ಅಂತರಂಗ ಕಾದ ಬಾಣಲಿಯಾಗಿತ್ತು. ದೇಹ ಮಾತ್ರ ಬಳಲಿ ಬೆಂಡಾಗಿ ಹೋಗಿತ್ತು.
----
ಅಧ್ಯಾಯ-೩; ದಳವಾಯಿಗಳು ತಮ್ಮಲ್ಲೇ ಮಾತನಾಡಿಕೊಳ್ಳುತ್ತಿರುವುದು
ಒಬ್ಬ ದಳವಾಯಿ: ನಮ್ಮ ಅರಸರ ಮುಖ ನೋಡಿ ತಿಂಗಳುಗಳೇ ಆದವು. ಅರಮನೆಯಲ್ಲಿ ಏನು ನಡೆಯುತ್ತಿರಬಹುದು? ಇಷ್ಟಕ್ಕೂ ನಮ್ಮ ರಾಜಕುಮಾರನನ್ನು ಸಾಯಿಸಿದವರು ಯಾರು? ಏಕಿರಬಹುದು?
ಇನ್ನೊಬ್ಬ ದಳವಾಯಿ: ರಾಜ ಮನೆತನದ ವಿಷಯಗಳು ಅಷ್ಟು ಸುಲಭವಲ್ಲ. ಸಂಗಮ ವಂಶದವರನ್ನು ಕೊನೆಗಾಣಿಸಿಯೇ ಅಲ್ಲವೇ ಸಾಳುವ ವಂಶದವರು ಅಧಿಕಾರಕ್ಕೆ ಬಂದಿದ್ದು? ಹಾಗೆಯೆ ಸಾಳುವ ವಂಶದ ರಾಜಕುಮಾರನನ್ನು ಸಾಯಿಸಿಯೇ ಅಲ್ಲವೇ ಶ್ರೀಕೃಷ್ಣದೇವರಾಯನ ಅಣ್ಣ ಪಟ್ಟ ಏರಿದ್ದು ಮತ್ತು ತುಳುವ ವಂಶದ ರಾಜ್ಯಭಾರ ಆರಂಭವಾಗಿದ್ದು? ಅಧಿಕಾರದ ಆಸೆ ಕ್ಷತ್ರಿಯರಿಗೆ ಸಹಜವಾದದ್ದು. ಯುದ್ಧ ಗೆದ್ದೋ, ಇಲ್ಲವೇ ಮೋಸದಿಂದ ಮುಗಿಸಿಯೋ, ಅಧಿಕಾರ ಹಿಡಿದುಕೊಳ್ಳುತ್ತಾರೆ.
ಮತ್ತೊಬ್ಬ ದಳವಾಯಿ: ಈಗಲೂ ಹಾಗೆ ಆಗಬಹುದು ಎನ್ನಿಸುತ್ತಿದೆ. ಕಾದು ನೋಡಬೇಕು ಅಷ್ಟೇ.
---
ಅಧ್ಯಾಯ-೪; ಶ್ರೀಕೃಷ್ಣದೇವರಾಯರ ಸಾವಿನ ನಂತರ ಅವರ ಮಲ ತಮ್ಮ ಅಚ್ಚುತರಾಯರು ಪಟ್ಟವನ್ನೇರಿದ್ದಾರೆ. ಮತ್ತು ಮಂತ್ರಿ ಪದವಿ ಶ್ರೀಕೃಷ್ಣದೇವರಾಯರ ಅಳಿಯ ರಾಮರಾಯರವರದ್ದಾಗಿದೆ.
ರಾಮರಾಯ ತನ್ನ ಅಂತರಂಗದಲ್ಲೇ ಮೆಲುಕು ಹಾಕುತ್ತಿದ್ದ. ಯಾವುದೇ ಸಾಹಸಿ ಬರಿ ಧನ-ಐಶ್ವರ್ಯಗಳಿಗೆ ಮರುಳಾಗಿ ಕಾದಾಟಕ್ಕೆ ಇಳಿಯುವುದಿಲ್ಲ. ಅವನಿಗೆ ಅಧಿಕಾರದ ಆಸೆಯೇ ಮೂಲವಾಗಿರುತ್ತದೆ. ತನ್ನ ಮಾವ ಮತ್ತು ಅವನ ಮಂತ್ರಿ ತಿಮ್ಮರಸು ಇವರುಗಳೇ ಅಧಿಕಾರ ಮುಂದುವರೆಸಿದ್ದರೆ, ತನಗೆ ಮಂತ್ರಿಯಾಗುವ ಅವಕಾಶ ಎಲ್ಲಿರುತ್ತಿತ್ತು? ಇಷ್ಟಕ್ಕೂ ಬರೀ ಮಂತ್ರಿ ಪದವಿ ತನಗೆ ಸಮಾಧಾನ ತರುವ ವಿಷಯ ಅಲ್ಲ. ಆದರೆ ರಾಜ್ಯದ ಎಲ್ಲದ ಅಧಿಕಾರಗಳ ಮೇಲೆ ಹಿಡಿತ ಸಾಧಿಸಿದ ಮೇಲೆ ಅಲ್ಲವೇ ತನ್ನನ್ನು ರಾಜ ಎಂದು ಜನತೆ ಒಪ್ಪಿಕೊಳ್ಳುವುದು? ಈಗಿರುವ ಮಂತ್ರಿ ಪದವಿಯ ಸಹಾಯದಿಂದ ಉಳಿದ ರಾಜ್ಯಭಾರದ ಅಧಿಕಾರಗಳನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವುದಕ್ಕೆ ಎಷ್ಟು ಸಮಯ ಬೇಕಾಗಬಹುದು? ಅಲ್ಲಿಯವರೆಗೆ ಮಾತ್ರ ಅಚ್ಚುತರಾಯನಿಗೆ ತನ್ನ ಸಹಕಾರ ಸಾಧ್ಯ. ಅವನ ನಂತರ ವಿಜಯನಗರ ಸಾಮ್ರಾಜ್ಯದ ಸಂಪೂರ್ಣ ಅಧಿಕಾರ ತನ್ನದೇ.
ತಾನು ಸಾಹಸಿಯಾದದ್ದಕ್ಕೆ ಅಲ್ಲವೇ ಶ್ರೀಕೃಷ್ಣದೇವರಾಯ ತನ್ನನ್ನು ಅಳಿಯನಾಗಿ ಒಪ್ಪಿಕೊಂಡಿದ್ದು. ಅವನ ಮಗಳನ್ನು ಮದುವೆಯಾದ ತಾನು ರಾಜ ಕುಟುಂಬದ ಸದಸ್ಯನೇ ಆಗಲಿಲ್ಲವೇ? ಸಂಗಮ, ಸಾಳುವ ವಂಶಗಳು ಕೊನೆಯಾದ ಹಾಗೆ ಈ ತುಳುವ ವಂಶದ ಅಧಿಕಾರ ಕೂಡ ಕೊನೆಯಾಗಬಾರದೇಕೆ? ಇಷ್ಟಕ್ಕೂ ಅಧಿಕಾರ ಯಾರ ಸ್ವತ್ತೂ ಅಲ್ಲ. ಬಲದಿಂದಲೋ, ಬುದ್ಧಿಯಿಂದಲೋ ಗೆದ್ದವನಿಗೆ ಸಲ್ಲುತ್ತದೆ ಅಧಿಕಾರ. ಹಿಂದೆ ಶ್ರೀಕೃಷ್ಣದೇವರಾಯನನ್ನು ಸಾಯಿಸುವುದಕ್ಕೆ ಅವರ ಅಣ್ಣ ಆಜ್ಞೆ ಮಾಡಿರಲಿಲ್ಲವೇ? ತಿಮ್ಮರಸು ಯುಕ್ತಿಯಿಂದಲೇ ಅಲ್ಲವೇ ಶ್ರೀಕೃಷ್ಣದೇವರಾಯ ಪಟ್ಟವನ್ನೇರಿದ್ದು? ಹಾಗೆಯೆ ಇನ್ನೊಬ್ಬರ ಯುಕ್ತಿಗೆ ಅವರಿಬ್ಬರೂ ಪ್ರಾಣ ತೆತ್ತರು.
ಅರಸನಾದವನಿಗೆ ತನ್ನ ಜೀವದ ಮತ್ತು ಅವನ ಉತ್ತರಾಧಿಕಾರಿಗಳ ಜೀವದ ಅಪಾಯ ಎಂದೆಂದಿಗೂ ಇರುತ್ತದೆ. ಅಪಾಯವನ್ನು ಉಪೇಕ್ಷಿಸಿದಾಗ ಆಗುವ ಹಾನಿ ಅಪಾರ. ಅಂತಹ ಮೈಮರೆತ ಸನ್ನಿವೇಶದಲ್ಲೇ ಅಲ್ಲವೇ ಶ್ರೀಕೃಷ್ಣದೇವರಾಯ ತನ್ನ ಮಗನನ್ನು ಕಳೆದುಕೊಂಡಿದ್ದು. ಅವರ ಅಣ್ಣ ಸಾಳುವ ವಂಶವನ್ನು ಕೊನೆಗೊಳಿಸಿದ್ದು ಹೀಗೆಯೇ. ಹಾಗಿದ್ದಲ್ಲಿ ಇತಿಹಾಸ ಶ್ರೀಕೃಷ್ಣದೇವರಾಯನ ತಪ್ಪುಗಳನ್ನೇಕೆ ಮನ್ನಿಸಬೇಕು? ರಾಜನಾಗಿ ಅಧಿಕಾರ ಅನುಭವಿಸಿದವನಿಗೆ ಅದು ತಂದೊಡ್ಡುವ ಅಪಾಯಗಳಿಗೆ ತಲೆಯೊಡ್ಡಬೇಕಾದದ್ದು ಕೂಡ ರಾಜಧರ್ಮವೇ. ಅವನು ಉಪಾಯವಾಗಿ ಅಧಿಕಾರಕ್ಕೆ ಬಂದಿದ್ದು ರಾಜಧರ್ಮವಾದರೆ, ಅವನ ಅಂತ್ಯಕ್ಕೆ ಬೇರೆಯವರು ಉಪಾಯ ಮಾಡುವುದು ಕೂಡ ರಾಜಧರ್ಮವೇ.
[ಶ್ರೀಕೃಷ್ಣದೇವರಾಯನ ಸಾವಿನ ಪ್ರಯೋಜನವಾಗಿದ್ದು, ಅವನ ನಂತರ ಅಧಿಕಾರಕ್ಕೆ ಬಂದ ಅವನ ಮಲ ತಮ್ಮ ಅಚ್ಚುತರಾಯನಿಗೆ ಮತ್ತು ಹೆಚ್ಚಿನ ಅಧಿಕಾರ ದೊರಕಿಸಿಕೊಂಡ ರಾಮರಾಯನಿಗೆ. ಅಚ್ಚುತರಾಯನ ಸಾವಿನ ನಂತರ ಅವನ ಮಗನನ್ನು ಹೆಸರಿಗೆ ಮಾತ್ರ ರಾಜನನ್ನಾಗಿ ಮಾಡಿ, ಸಂಪೂರ್ಣ ಅಧಿಕಾರವನ್ನು ತನ್ನ ಕೈಗತ್ತಿಕೊಂಡ ರಾಮರಾಯ ಶ್ರೀಕೃಷ್ಣದೇವರಾಯನ ಸಾವಿನಿಂದ ಹೆಚ್ಚಿನ ಪ್ರಮಾಣದ ಪ್ರಯೋಜನ ಪಡೆಯುವುದರಿಂದ ಅವನ ಮೇಲೆ ಸಂಶಯ ಪಟ್ಟು ಈ ಕಥೆ ಹೆಣೆದಿರಲಾಗಿರುತ್ತದೆ. ಇದು ಒಂದು ಕಲ್ಪನೆ ಮಾತ್ರ. ಇದಕ್ಕೆ ಯಾವ ಆಧಾರಗಳು ಇರುವುದಿಲ್ಲ.]