ಭಗವಾನ್ ಓಶೋ ಅವರ ಪ್ರವಚನಗಳನ್ನು ಕೇಳಿದಾಗ, ಅವರ ಪುಸ್ತಕಗಳನ್ನು ಓದಿದಾಗ ನನಗೆ ಈತ ಮಹಾ ಜ್ಞಾನಿ ಎನ್ನುವುದರಲ್ಲಿ ಸಂದೇಹವೇ ಉಳಿದಿರಲಿಲ್ಲ. ಆಧ್ಯಾತ್ಮದ ಅರ್ಥವನ್ನು, ಉದ್ದೇಶವನ್ನು ಈತನಷ್ಟು ಸರಳವಾಗಿ, ಸ್ಪಷ್ಟವಾಗಿ ಹೇಳಬಲ್ಲ ಇನ್ನೊಬ್ಬರನ್ನು ನಾನು ನೋಡಿಲ್ಲ. ಆ ವಿಷಯದಲ್ಲಿ ಈತ ಒಬ್ಬ ಮಹಾ ಗುರು. ಆದರೆ ಹಲವು ವರುಶಗಳವರೆಗೆ ಈತನ ಸೆಕ್ರೆಟರಿ ಆಗಿ ಕೆಲಸ ಮಾಡಿದ ಶೀಲಾ ಎನ್ನುವವರು ಬರೆದ 'Don't kill him' ಎನ್ನುವ ಪುಸ್ತಕ ಓದಿ ನೋಡಿ. ಓಶೋ ಎಷ್ಟು ಲಂಪಟನಾಗಿದ್ದ, ಶ್ರೀಮಂತರನ್ನು ಹೇಗೆ ಸುಲಿಗೆ ಮಾಡಿ ಐಷಾರಾಮಿ ಕಾರುಗಳನ್ನು ಖರೀದಿಸುತ್ತಿದ್ದ. ತನ್ನ ಆಶ್ರಮದ ಕಾರುಬಾರುಗಳನ್ನು ಹೇಗೆ ಕುತಂತ್ರಗಳಿಂದ ನಿಭಾಯಿಸುತ್ತಿದ್ದ ಎನ್ನುವ ವಿಷಯಗಳು ಮನದಟ್ಟಾಗುತ್ತವೆ. ಆಧ್ಯಾತ್ಮ ಭೋದಿಸಿದ ಮಹಾ ಗುರುವೇ ವೈಯಕ್ತಿಕ ಜೀವನದಲ್ಲಿ ತೀರಾ ಸಾಧಾರಣ ವ್ಯಕ್ತಿಯ ಹಾಗೆ, ಎಲ್ಲ ತರಹದ ಮನೋವಿಕಾರಗಳೊಂದಿಗೆ ಜೀವಿಸುತ್ತಿದ್ದ ಎನ್ನುವ ವಿಷಯ ಅನುಭವಕ್ಕೆ ಬರುತ್ತದೆ.
ಓಶೋ ವಿಷಯವೇ
ಹೀಗಾದರೆ ಇನ್ನು ಲೌಕಿಕದಲ್ಲಿ ಜೀವನ ಮಾಡುವವರ ಪಾಡೇನು? ನಮ್ಮ ಸುತ್ತ ಮುತ್ತಲಿನ ಎಷ್ಟೋ ಜನರನ್ನು
ನಾವು ದೇವರ ಸಮಾನ ಎಂದುಕೊಂಡಿರುತ್ತೇವೆ. ಅಷ್ಟಲ್ಲದಿದ್ದರೂ ಅವರು ಒಳ್ಳೆಯ ಜನ ಎಂದು ನಂಬಿರುತ್ತೇವೆ.
ಅವರು ಕೂಡ ನಮ್ಮನ್ನು ಹಾಗೆಯೆ ನಂಬಿಸುವ ಪ್ರಯತ್ನ ಮಾಡಿರುತ್ತಾರೆ. ಸಮಯ, ಸಂದರ್ಭ ಬರುವವರೆಗೂ ಆ ಭ್ರಮೆ
ಹಾಗೆಯೆ ಉಳಿದುಕೊಂಡುಬಿಡುತ್ತದೆ. ಆದರೆ ವಿಧಿ ಇರುವುದನ್ನು ಹಾಗೆಯೆ ಇರಲು ಎಲ್ಲಿ ಬಿಡುತ್ತದೆ? ಅಂದುಕೊಳ್ಳದ
ವೇಳೆಯಲ್ಲಿ, ಪರಿಸ್ಥಿತಿ ಹಠಾತ್ತನೆ ಬದಲಾಗುತ್ತದೆ. ಆಗ ದೇವರಂತಹ ಮನುಷ್ಯರ ಒಳ್ಳೆಯತನದ ಮುಖವಾಡ ಕಳಚಿ
ಬೀಳುತ್ತದೆ. ಅದುವರೆಗೆ ನಾವು ಅಂದುಕೊಂಡಿದ್ದು ಶುದ್ಧ ಸುಳ್ಳು ಎನ್ನುವ ವಿಷಯ ನಮಗೆ ಮನದಟ್ಟಾಗುತ್ತದೆ.
ಅಷ್ಟೇ ಅಲ್ಲ, ಅದುವರೆಗೂ ಅವರು ನಮ್ಮನ್ನು ಯಾಮಾರಿಸಿದ್ದು ಮುಖಕ್ಕೆ ರಾಚಿಬಿಡುತ್ತದೆ.
'ಸಿಕ್ಕಿ ಬಿದ್ದರೆ
ಮಾತ್ರ ಕಳ್ಳ' ಎನ್ನುವುದು ಹಳೆಯ ಗಾದೆ. ಅದಕ್ಕೆ ತಕ್ಕಂತೆ ಸಾಕಷ್ಟು ಜನರದು ಮೋಸದ ಜೀವನ. ತಾಯಿಯ ಪಾತ್ರ
ಬಿಟ್ಟರೆ ಉಳಿದೆಲ್ಲ ಸಂಬಂಧಗಳು ಒಂದಲ್ಲ ಒಂದು ರೀತಿಯ ವ್ಯಾಪಾರವೇ. ಆಸ್ತಿಯ ಜಗಳಕ್ಕೆ ಬಿದ್ದ ಅಣ್ಣ-ತಮ್ಮರನ್ನು
ನೋಡಿ. ಅದಕ್ಕೂ ಮುಂಚೆ ಅವರು ಅಣ್ಣ-ತಮ್ಮರ ತರಹವೇ ಇದ್ದರಲ್ಲ. ಆಸ್ತಿ ಜಗಳ ಬಂದಾಗ ಆ ಪ್ರೀತಿ ಎಲ್ಲಿಗೆ
ಹೋಯಿತು? ರಾತ್ರಿ ಕುಡಿದು ಬಂದು ಹೆಂಡತಿಯನ್ನು ಪೀಡಿಸುವ ಗಂಡ, ಹಗಲಿನಲ್ಲಿ ತನ್ನ ಹೆಂಡತಿಯ ಜೊತೆಗೆ
ದೇವಸ್ಥಾನಕ್ಕೆ ಹೋದಾಗ ಆದರ್ಶ ಪತಿಯ ವೇಷ ಹಾಕಿರುವುದಿಲ್ಲವೇ? ಅನೈತಿಕ ಸಂಬಂಧಗಳನ್ನು ಇಟ್ಟುಕೊಂಡ
ಪತಿವ್ರತೆಯರು ಸಿಕ್ಕಿ ಬೀಳುವವರೆಗೆ ಮಾತ್ರ ಗಂಡನಿಗೆ ನಿಷ್ಠೆಯುಳ್ಳವರು. ಗುಟ್ಟು ಹೊರ ಬಿದ್ದ ಮೇಲೆ
ಅವರು ಗಂಡನ ಮೇಲೆ ನೂರೆಂಟು ಅಪವಾದಗಳನ್ನು ಹೊರಿಸದೆ ಬಿಡುವುದಿಲ್ಲ. ಪ್ರಾಣ ಬೇಕಾದರೂ ಕೊಡ್ತೀನಿ ಅನ್ನುವ
ಸ್ನೇಹಿತನನ್ನು ಸಾಲ ತೆಗೆದುಕೊಳ್ಳುವಾಗ ಶೂರಿಟಿ ಹಾಕಲು ಕರೆದು ನೋಡಿ. ಅವರು ನಿಜ ಸ್ನೇಹಿತರು ಹೌದೋ
ಅಲ್ಲವೋ ತಿಳಿದೇ ಬಿಡುತ್ತದೆ. ಯಾವುದಾದರು ಹಗರಣಗಳಲ್ಲಿ ಸಿಕ್ಕಿ ಹಾಕಿಕೊಳ್ಳುವವರೆಗೆ, ರಾಜಕಾರಣಿಗಳು
ಪ್ರಾಮಾಣಿಕರೋ, ಅಲ್ಲವೋ ತಿಳಿಯುವುದಿಲ್ಲ. ಅಲ್ಲಿಯವರೆಗೆ ಅವರು ಲೋಕ ಕಲ್ಯಾಣದ ಭಾಷಣಗಳನ್ನು ಮಾಡುತ್ತಲೇ
ಇರುತ್ತಾರೆ.
ಒಳ್ಳೆಯವರು ಈ
ಲೋಕದಲ್ಲಿ ಇಲ್ಲ ಎಂದೇನಿಲ್ಲ. ಆದರೆ ಅವರ ವೇಷ ಹಾಕಿ ಮೋಸ, ಸುಲಿಗೆ ಮಾಡುವ ಜನರೇ ಅಧಿಕ. ಎಲ್ಲರನ್ನು
ಒಳ್ಳೆಯವರೇ ಎಂದು ತಿಳಿದುಕೊಳ್ಳುತ್ತಿದ್ದ ನನ್ನ ಮುಗ್ಧತೆಗೆ ಸರಿಯಾದ ಪಾಠಗಳನ್ನು ಹಲವಾರು ಜನ ಕಲಿಸಿದ್ದಾರೆ.
ಅಳೆದು, ತೂಗಿ, ಪರೀಕ್ಷಿಸಿ ನೋಡುವವರೆಗೆ ಯಾರನ್ನೂ ಒಳ್ಳೆಯವರು ಎಂದು ನಿರ್ಣಯಿಸಬಾರದು ಎಂದು ತಿಳಿದುಕೊಳ್ಳುವಷ್ಟರಲ್ಲಿ
ಹಲವಾರು ಬಾರಿ ಮೂರ್ಖನಾಗಿ ಹೋಗಿದ್ದೇನೆ. ಮನುಷ್ಯ ಮನುಷ್ಯನನ್ನು ನಂಬದೆ ಬದುಕಲು ಸಾಧ್ಯವೇ ಎಂದು ದಯವಿಟ್ಟು
ಕೇಳಬೇಡಿ. ಅದು ರಾತ್ರಿ ಕಂಡ ಭಾವಿಗೆ ಹಗಲು ಬಿದ್ದ ಹಾಗೆ. ಸಂಪೂರ್ಣ ನಂಬಿಕೆ ಇಟ್ಟಲ್ಲಿ ಮೋಸ ಹೋಗುವುದು
ಸುಲಭ. ಆದರೆ ಜಾಗರೂಕತೆ ಇದ್ದಲ್ಲಿ ಎಡವುವ ಸಾಧ್ಯತೆಯೂ ಕಡಿಮೆ ಆಗುತ್ತದೆ. ಆ ಎಚ್ಚರಿಕೆ ನಮ್ಮಲ್ಲಿ ಇರಬೇಕಷ್ಟೆ.
ಏಕೆಂದರೆ ನಮ್ಮ ಸಮಾಜದ ಸಾಕಷ್ಟು ಜನ ಮುಖವಾಡ ಕಳಚುವವರೆಗೆ ಮಾತ್ರ ಒಳ್ಳೆಯವರು. ಅವರಿಗೆ ತಮ್ಮ ಕೆಟ್ಟತನ
ತೋರಿಸುವ ಸಂದರ್ಭ ಬಂದಿರಲಿಲ್ಲ ಅಷ್ಟೇ. ಮುಖವಾಡ ಕಳಚಿದ ಮೇಲೆ ಕಾಣುವುದೇ ಅವರ ನಿಜವಾದ ಮುಖ. ಅಲ್ಲಿಯವರೆಗೆ
ಅವರದು ಆದರ್ಶ ವ್ಯಕ್ತಿತ್ವಗಳ ಅಭಿನಯ ಮಾತ್ರ.
No comments:
Post a Comment