Thursday, March 17, 2022

ಕವನ ಸಂಕಲನ: ಹರಿದ ಹೊಕ್ಕಳ ಬಳ್ಳಿ; ಲೇಖಕರು: ವರದೇಂದ್ರ

ಚೊಚ್ಚಲ ಕವನ ಸಂಕಲನವನ್ನು ಹೊರ ತಂದಿರುವ ಗೆಳೆಯ ವರದೇಂದ್ರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಬರೀ ಅಕ್ಷರ ಪ್ರೇಮವಿದ್ದರೆ ಸಾಲದು, ಭಾವನೆಗಳ ತುಡಿತವಿರದೆ ಯಾರೂ ಕವಿಯಾಗಲಾರರು. ಕಥೆಗಳನ್ನು ಕಥೆಗಾರ ಸೃಷ್ಟಿಸಿದರೆ, ಕಾವ್ಯಗಳೇ ಕವಿಯನ್ನು ಸೃಷ್ಟಿಸುತ್ತವೆ. ಭಾವನೆಗಳು ತೀವ್ರವಾದಾಗ, ತಾಳಲಾರದ ಪ್ರಸವ ವೇದನೆಯಂತೆ ಕಾವ್ಯ ಮೈದಳೆಯುತ್ತದೆ.


ಕಾದಂಬರಿಕಾರ ನೂರಾರು ಪುಟಗಳಲ್ಲಿ ಹೇಳುವುದನ್ನು ಕಥೆಗಾರ ನೂರಾರು ಸಾಲುಗಳಲ್ಲಿ ಹೇಳಿ ಮುಗಿಸುತ್ತಾನೆ. ಆದರೆ ಕವಿ ಹತ್ತಾರು ಪದಗಳಲ್ಲಿ ಹೆಚ್ಚಿನ ಸರಕನ್ನು ಸಾಗಿಸಿ ಬಿಡುತ್ತಾನೆ. ಅವ್ಯಕ್ತ ಭಾವನೆಗಳು ಪದ ಜೋಡಣೆಯೊಳಗೆ ತೂರಿಕೊಂಡು ಕಾವ್ಯವನ್ನು ಜೀವಂತವಾಗಿಸುತ್ತವೆ. ಕಾಳಿದಾಸನಿಂದ ಕುವೆಂಪುವರೆಗೆ ನೂರಾರು ಕವಿಗಳು ಕಾವ್ಯಗಳನ್ನು ರಚಿಸಿದರೂ ಅದಕ್ಕೆ ಸ್ಪೂರ್ತಿ ಮಾತ್ರ ಪ್ರಕೃತಿ ಮತ್ತು ಅವರ ಸಮಾಜದ ಒಡನಾಟಗಳು. ಕವಿ ತಾನಿರುವ ಕಾಲದ ಸಂಸ್ಕೃತಿಯನ್ನು, ಸಮಾಜವನ್ನು ಪ್ರತಿಬಿಂಬಿಸುತ್ತಾನೆ. ಕಾವ್ಯಗಳು ಅಂದಿನ ಸಮಾಜದ ಭಾವನೆಗಳ ಪ್ರತಿರೂಪವಾಗಿರುತ್ತವೆ. ಮತ್ತೆ ಕೆಲವು ಕಾಲಾತೀತವಾಗಿ ಮಾನವ ಬದುಕಿನ ಸಂಗಾತಿಯಾಗುತ್ತವೆ.  ಅದಕ್ಕೆ ನೋಡಿ ಕರ್ತೃ ಯಾರು ಎಂದು ಗೊತ್ತಿರದಿದ್ದರೂ ಜಾನಪದ ಗೀತೆಗಳು ನಮ್ಮ ಮನದಿಂದ ಮರೆಯಾಗದೆ ಹೋಗದಿರುವುದು.


ಕವಿ ವರದೇಂದ್ರ ಅವರು ನಮ್ಮ-ನಿಮ್ಮ ಅನುಭವಗಳನ್ನೇ ಕಾವ್ಯವನ್ನಾಗಿಸಿದ್ದಾರೆ. ಶಬ್ದ ಜೋಡಣೆ ಅವರದಾದರೂ, ಅನುಭವಗಳು ನಮ್ಮವೂ ಕೂಡ. ಈ ಸಂಕಲನದ ಕವಿತೆಗಳ ಕೆಲ ಸಾಲುಗಳನ್ನು ಓದಿ ನೋಡಿ.


'ಕಲ್ಲೊಳಗೆ ಹುಟ್ಟುವ ಸಸಿಗೆ ವಿಶ್ವಾಸ' (ಬಾ ಯುಗಾದಿ ಮತ್ತೆ)

 

'ಚಟ್ಟಕೆ ದಾರಿ ಮಾಡಿದವರು, ಆದರೂ ಇವರು ನಮ್ಮವರು' (...ವರು)


'ಬೆಳಕ ಕಂಡು ಬೆಂಕಿಯೆಂದರೆ  ಕತ್ತಲೆನು ಮಾಡಿತು' (ದಾರಿ ದೀಪ)


'ಸಾಧನೆಗೆ ಎಲ್ಲೇ ಮೀರುವ ಹಸಿವು'   (ಹಸಿವು)


ವರದೇಂದ್ರ ಅವರ ಸಾಹಿತ್ಯ ಸೇವೆ ಹೀಗೆ ಮುಂದುವರೆಯಲಿ, ಅವರ ಕವಿತೆಗಳು ಓದುಗರ ಮನಗಳ ಸಂಗಾತಿಯಾಗಲಿ ಎಂದು ಹಾರೈಸುವೆ.

(Author Contact: Varadendra, 9945253030)



No comments:

Post a Comment