(ಇದು ಒಂದು ಜಾನಪದ
ಕಥೆಯ ಭಾವಾನುವಾದ. ಇದನ್ನು A. K. ರಾಮಾನುಜನ್ ಅವರ 'Folktales from India' ಸಂಗ್ರಹದಿಂದ
ಆಯ್ದುಕೊಳ್ಳಲಾಗಿದೆ.)
ಒಂದು ಮೂರ್ಖರ
ಸಾಮ್ರಾಜ್ಯಕ್ಕೆ, ಅವಿವೇಕಿಯೊಬ್ಬ ರಾಜನಾಗಿದ್ದ. ಅವನಿಗೊಬ್ಬ ಪೆದ್ದ ಮಂತ್ರಿ ಕೂಡ ಇದ್ದ. ಅವರ ವಿಚಾರ
ಮತ್ತು ನಡುವಳಿಕೆಗಳು ಬಲು ವಿಚಿತ್ರವಾಗಿದ್ದವು. ಅವರು ಹಗಲು-ರಾತ್ರಿಗಳನ್ನೇ ಬದಲಾಯಿಸಿದ್ದರು. ಅವರ
ಆದೇಶದ ಪ್ರಕಾರ, ರೈತರು ತಮ್ಮ ಹೊಲಗಳಿಗೆ ರಾತ್ರಿ ಉತ್ತಲು ಹೋಗಬೇಕಿತ್ತು. ವ್ಯಾಪಾರಸ್ಥರು ಕತ್ತಲು
ಆಗುವವರೆಗೆ ತಮ್ಮ ಅಂಗಡಿಗಳನ್ನು ತೆಗೆಯುವಂತಿರಲಿಲ್ಲ. ಮತ್ತು ಸೂರ್ಯೋದಯ ಆದೊಡನೆ ಎಲ್ಲರು ನಿದ್ದೆಗೆ
ಜಾರಬೇಕಿತ್ತು. ಅದಕ್ಕೆ ತಪ್ಪಿದರೆ ಮರಣ ದಂಡನೆಯೇ ಶಿಕ್ಷೆ ಆಗಿತ್ತು.
ಒಂದು ದಿನ ಗುರು-ಶಿಷ್ಯರ
ಜೋಡಿ ಆ ಪಟ್ಟಣಕ್ಕೆ ಆಗಮಿಸಿದರು. ಆದರೆ ಹಾಡು-ಹಗಲಿನಲ್ಲಿ ರಸ್ತೆಗಳೆಲ್ಲ ಖಾಲಿ-ಖಾಲಿ. ಎಲ್ಲರು ನಿದ್ದೆಗೆ
ಜಾರಿದ್ದಾರೆ. ದನ-ಕರುಗಳು ಸಹಿತ ಆ ಅಭ್ಯಾಸಕ್ಕೆ ಹೊಂದಿಕೊಂಡುಬಿಟ್ಟಿದ್ದವು. ಅಲ್ಲಿಗೆ ಬಂದ ಈ ಗುರು-ಶಿಷ್ಯರು
ಊರು ಸುತ್ತಿ, ಎಲ್ಲೂ ಊಟ ಸಿಗದೇ ಸುಸ್ತಾದರು. ಆದರೆ ರಾತ್ರಿಯಾದಂತೆ ಊರಿಗೆ ಕಳೆ ಬಂದು ಬಿಟ್ಟಿತು.
ಹಸಿದಿದ್ದ ಆಗಂತುಕರು ದಿನಸಿ ಕೊಳ್ಳಲು ಅಂಗಡಿ ಒಂದಕ್ಕೆ ಹೋದರು. ಅಲ್ಲಿ ಅವರಿಗೆ ಪರಮಾಶ್ಚರ್ಯ. ಅಲ್ಲಿ
ಏನೇ ತೆಗೆದುಕೊಂಡರೂ ಅದರ ಬೆಲೆ ಒಂದೇ ರೂಪಾಯಿ. ಅಕ್ಕಿ, ಬೇಳೆ, ಹಣ್ಣು, ತುಪ್ಪ, ತರಕಾರಿ ಏನೇ ತೆಗೆದುಕೊಂಡರೂ
ಅದರ ಬೆಲೆ ಒಂದೇ ರೂಪಾಯಿ. ಅವರು ತಮಗೆ ಬೇಕಾದ್ದು ಕೊಂಡುಕೊಂಡು ಅಡುಗೆ ಮಾಡಿಕೊಂಡು ಊಟ ಮಾಡಿದರು.
ಅಷ್ಟೊತ್ತಿಗೆ
ಗುರುವಿಗೆ ಅದು ಮೂರ್ಖರ ಸಾಮ್ರಾಜ್ಯ ಎಂದು ಅರ್ಥವಾಗಿತ್ತು. ಅವನು ತನ್ನ ಶಿಷ್ಯನಿಗೆ ಹೇಳಿದ. "ಇದು
ನಾವಿರಬೇಕಾದ ಜಾಗ ಅಲ್ಲ. ಇಲ್ಲಿ ಏನು ಬೇಕಾದರೂ ಆಗಬಹುದು. ಇಲ್ಲಿಂದ ಮುಂದಕ್ಕೆ ಹೋಗೋಣ." ಆದರೆ ಶಿಷ್ಯ
ಹೊಟ್ಟೆಬಾಕ. ಅವನಿಗೆ ಬೇಕಾದದ್ದು ಕಡಿಮೆ ಖರ್ಚಿನಲ್ಲಿ ಭರ್ಜರಿ ಊಟ. ಅವನು ಅಲ್ಲಿಯೇ ಉಳಿಯುವ ನಿರ್ಧಾರ
ಮಾಡಿದ. ಗುರು ಅವನನ್ನು ಅಲ್ಲಿಯೇ ಬಿಟ್ಟು ಮುಂದೆ ಸಾಗಿದ.
ಆ ಪಟ್ಟಣದಲ್ಲಿ
ಮುಂದೊಂದು ದಿನ ಹಗಲು ಹೊತ್ತಿನಲ್ಲಿ ಎಲ್ಲರು ಮಲಗಿದ್ದಾಗ, ಶ್ರೀಮಂತ ವ್ಯಾಪಾರಿ ಒಬ್ಬನ ಮನೆಯಲ್ಲಿ
ಕಳ್ಳತನ ಆಯಿತು. ಗೋಡೆಗೆ ಕನ್ನ ಕೊರೆದು ಕಳ್ಳ ಹೊರ ಬರುವಷ್ಟರಲ್ಲಿ ಗೋಡೆ ಕಳ್ಳನ ಮೇಲೆ ಕುಸಿದು ಅವನು
ಮೃತ ಪಟ್ಟನು. ಕಳ್ಳನ ಸಂಬಂಧಿಕರು ರಾಜನ ಹತ್ತಿರ ನ್ಯಾಯ ಪರಿಹಾರಕ್ಕೆ ಹೋದರು. ಕಳ್ಳತನ ಅವರ ಪುರಾತನ
ವೃತ್ತಿ. ಅದನ್ನು ಮಾಡುವಾಗ ಗೋಡೆ ಭದ್ರವಾಗಿ ಕಟ್ಟಿಸದೆ ಇದ್ದರಿಂದ ಕಳ್ಳ ಮೃತ ಪಟ್ಟಿದ್ದಾನೆ. ಅದರ
ಸಲುವಾಗಿ ಅಪರಾಧಿಗಳನ್ನು ಶಿಕ್ಷಿಸಿ ಅವರಿಗೆ ನ್ಯಾಯ ಒದಗಿಸಬೇಕು ಎಂದು ಕೇಳಿಕೊಂಡರು.
ರಾಜ ಅವರಿಗೆ
ನ್ಯಾಯ ಒದಗಿಸುವುದಾಗಿ ಅಭಯವಿತ್ತ. ಕೂಡಲೇ ಆ ವ್ಯಾಪಾರಿಯನ್ನು ಕರೆ ತರಲು ಹೇಳಿದ. ಅಲ್ಲಿಗೆ ಬಂದ ವ್ಯಾಪಾರಿ
ತನ್ನ ಅಹವಾಲು ಮಂಡಿಸಿದ. ಮನೆ ಅವನದೇ ಆದರೂ, ಅದು ಗೋಡೆ ಕಟ್ಟುವವನು ಭದ್ರವಾಗಿ ಕಟ್ಟದ್ದು ಕಳ್ಳ ಸಾಯಲು
ಕಾರಣ ಎಂದು ಹೇಳಿದ. ಗೋಡೆ ಕಟ್ಟಿದವನನ್ನು ಅಲ್ಲಿಗೆ ಕರೆಸಿದರು. ಅವನು ಗೋಡೆ ಸರಿಯಾಗಿ ಕಟ್ಟದ್ದಕೆ
ಕಾರಣ ಹೇಳಿದ. ಆ ದಿನ ಹುಡುಗಿಯೊಬ್ಬಳು ರಸ್ತೆಯಲ್ಲಿ ಆ ಕಡೆಗೆ, ಈ ಕಡೆಗೆ ಹಲವಾರು ಬಾರಿ ಓಡಾಡಿ ಅವಳ
ಗೆಜ್ಜೆ ಸಪ್ಪಳದಿಂದ ಅವನು ವಿಮುಖನಾಗಿ ಗೋಡೆ ಭದ್ರವಾಗಿ ಕಟ್ಟಲು ಸಾಧ್ಯವಾಗಲಿಲ್ಲ ಎಂದು. ಆ ಹುಡುಗಿಯನ್ನು
ಅಲ್ಲಿಗೆ ಬರ ಹೇಳಿದರು. ಆ ಹುಡುಗಿ ಅಂದು ಅಲ್ಲಿ ಸಾಕಷ್ಟು ಬಾರಿ ಓಡಾಡಲಿಕ್ಕೆ ಕಾರಣ, ಆ ರಸ್ತೆಯಲ್ಲಿದ್ದ
ಅಕ್ಕಸಾಲಿಗನ ಅಂಗಡಿ. ಅವನು ಇವಳ ಆಭರಣ ಮಾಡಿಕೊಡದೆ ಆಗ ಬಾ, ಈಗ ಬಾ ಎಂದು ಸತಾಯಿಸುತ್ತಿದ್ದ. ಅದಕ್ಕೆ
ಹಲವಾರು ಬಾರಿ ಅವನ ಅಂಗಡಿಗೆ ಹೋಗಬೇಕಾಗಿ ಬಂತು ಎಂದು ಹೇಳಿದಳು. ಅಕ್ಕಸಾಲಿಗನನ್ನು ರಾಜನ ಆಸ್ಥಾನಕ್ಕೆ
ಕರೆಸಿದರು. ಅವನು ತನ್ನ ಕಥೆ ಹೇಳಿದ. ಒಬ್ಬ ವ್ಯಾಪಾರಿ ತನ್ನ ಆಭರಣಗಳನ್ನು ಮೊದಲು ಮಾಡಿಕೊಡಲು ಒತ್ತಡ
ಹೇರಿದ್ದ. ಆ ಕಾರಣದಿಂದ ಅವನಿಗೆ ಹುಡುಗಿಯ ಆಭರಣ ಮಾಡಿಕೊಡಲು ಸಾಧ್ಯವಾಗದೆ ಸತಾಯಿಸಿದ್ದು ಎಂದು ಹೇಳಿದ.
ಅವನಿಗೆ ತೊಂದರೆ ಕೊಟ್ಟ ವ್ಯಾಪಾರಿ ಬೇರೆ ಯಾರು ಅಲ್ಲ. ಗೋಡೆ ಬಿದ್ದು ಕಳ್ಳ ಸತ್ತನಲ್ಲ. ಆ ಮನೆ ಮಾಲೀಕನೇ
ಆಗಿದ್ದ. ತುಂಬಾ ಕ್ಲಿಷ್ಟಕರ ಸಮಸ್ಯೆ ಒಂದಕ್ಕೆ ಪರಿಹಾರ ಸಿಕ್ಕಿಯೇ ಬಿಟ್ಟಿತು. ರಾಜ-ಮಂತ್ರಿ ಸೇರಿ ಆ ವ್ಯಾಪಾರಿಯೇ ಅಪರಾಧಿ ಎನ್ನುವ ನಿರ್ಧಾರಕ್ಕೆ ಬಂದರು
ಮತ್ತು ಅವನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದರು.
ಆದರೆ ಆ ವ್ಯಾಪಾರಿಗೆ
ತುಂಬಾ ವಯಸ್ಸಾಗಿ ಹೋಗಿತ್ತು. ಅವನು ತುಂಬಾ ಕೃಶನಾಗಿ ಹೋಗಿದ್ದ. ಅಷ್ಟು ತೆಳ್ಳನೆಯ ವ್ಯಕ್ತಿಗೆ ಮರಣ
ದಂಡನೆ ಕೊಟ್ಟರೆ ಏನು ಚೆನ್ನ ಎಂದು ಮಂತ್ರಿಗೆ ಅನ್ನಿಸಿತು. ಅವನು ತನ್ನ ಅನಿಸಿಕೆ ರಾಜನಿಗೆ ಹೇಳಿದ.
ರಾಜ ಕೂಡ ವಿಚಾರ ಮಾಡಿ ನೋಡಿದ. ಯಾರೋ ಒಬ್ಬರಿಗೆ ಶಿಕ್ಷೆ ಆಗಲೇಬೇಕು. ತೆಳ್ಳನೆಯ ವ್ಯಾಪಾರಿಯ ಬದಲು
ಒಬ್ಬ ದಷ್ಟಪುಷ್ಟ ವ್ಯಕ್ತಿಯ ತಲೆ ಕತ್ತರಿಸಬೇಕು ಎನ್ನುವ ನಿರ್ಧಾರಕ್ಕೆ ಅವರು ಬಂದರು. ದಪ್ಪನೆಯ ವ್ಯಕ್ತಿಯ
ಹುಡುಕಾಟಕ್ಕೆ ತೊಡಗಿದಾಗ ಅವರಿಗೆ ಸಿಕ್ಕಿದ್ದು ಗುರುವಿನ ಹಿಂದೆ ಹೋಗದೆ ಅಲ್ಲಿಯೇ ಉಳಿದುಕೊಂಡಿದ್ದ
ಶಿಷ್ಯ. ಅವನು ಚೆನ್ನಾಗಿ ಉಂಡು ತಿಂದು ಬಲಿತಿದ್ದ. ರಾಜ ಭಟರು ಅವನನ್ನು ವಧಾ ಸ್ಥಾನಕ್ಕೆ ಎಳೆದುಕೊಂಡು
ಬಂದರು. ಅವನಿಗೆ ತಾನು ಮಾಡಿದ ತಪ್ಪು ಏನೆಂದು ತಿಳಿಯದು. ಎಷ್ಟು ಕೇಳಿಕೊಂಡರು ರಾಜಭಟರು ಅವನನ್ನು
ಬಿಡಲಿಲ್ಲ. ಕೊನೆಗೆ ಅವನು ತನ್ನ ಗುರುವಿನಲ್ಲಿ ಪ್ರಾರ್ಥಿಸಿದ. ಗುರುವಿಗೆ ದಿವ್ಯದೃಷ್ಟಿಯಲ್ಲಿ ಎಲ್ಲ
ಅರ್ಥ ಆಯಿತು. ಶಿಷ್ಯನ ಪ್ರಾಣ ಉಳಿಸಲು ಅವರು ಅಲ್ಲಿಗೆ ದೌಡಾಯಿಸಿ ಬಂದರು. ಅವರು ತಮ್ಮ ಶಿಷ್ಯನಿಗೆ
ಬೈಯುತ್ತಾ ಅವನ ಕಿವಿಯಲ್ಲಿ ಏನೋ ಹೇಳಿದರು.
ನಂತರ ರಾಜನನ್ನು
ಉದ್ದೇಶಿಸಿ ಕೇಳಿದರು "ಓ, ಬುದ್ದಿವಂತರಲ್ಲಿ ಶ್ರೇಷ್ಠನಾದ ರಾಜನೇ, ಗುರು-ಶಿಷ್ಯರಲ್ಲಿ ಯಾರು
ದೊಡ್ಡವರು?"
ರಾಜ ಹೇಳಿದ
"ಗುರುವೇ ದೊಡ್ಡವನು. ಅದರಲ್ಲಿ ಸಂದೇಹವೇ ಇಲ್ಲ. ಏಕೆ ಈ ಪ್ರಶ್ನೆ?"
ಅದಕ್ಕೆ ಗುರುಗಳು
ಹೇಳಿದರು "ಹಾಗಾದರೆ ಮೊದಲಿಗೆ ನನ್ನನ್ನು ವಧಿಸಿ. ನಂತರ ನನ್ನ ಶಿಷ್ಯನನ್ನು ವಧಿಸಿ."
ಅದನ್ನು ಕೇಳಿದ
ಶಿಷ್ಯ ರೋಧಿಸತೊಡಗಿದ "ಮೊದಲು ನನ್ನನ್ನು ವಧಿಸಿ. ನನಗೆ ಮರಣದಂಡನೆ ಶಿಕ್ಷೆ ನೀಡಿ"
ರಾಜ ಗೊಂದಲಕ್ಕೀಡಾಗಿ
ಗುರುವನ್ನು ಕೇಳಿದ "ಒಬ್ಬ ದಪ್ಪನೆಯ ಮನುಷ್ಯನಿಗೆ ಶಿಕ್ಷೆ ನೀಡುವುದಕ್ಕಾಗಿ ನಿಮ್ಮ ಶಿಷ್ಯನನ್ನು
ಎಳೆದು ತಂದೆವು. ಆದರೆ ನೀವೇಕೆ ಸಾಯಲು ಇಷ್ಟ ಪಡುವಿರಿ?"
ಗುರು ರಾಜನನ್ನು
ಸ್ವಲ್ಪ ದೂರ ಕರೆದುಕೊಂಡು ಹೋಗಿ, ಯಾರಿಗೂ ಕೇಳಿಸದಂತೆ ಮೆತ್ತನೆಯ ಧ್ವನಿಯಲ್ಲಿ ಹೇಳಿದ. "ಇಲ್ಲಿ
ಯಾರು ಮೊದಲು ಸಾಯುವರೋ, ಅವರಿಗೆ ಮುಂದಿನ ಜನ್ಮದಲ್ಲಿ ಈ ರಾಜ್ಯಕ್ಕೆ ರಾಜನಾಗುವ ಯೋಗ ಇದೆ. ನಂತರ ಸತ್ತವನು
ಮಂತ್ರಿಯಾಗಬೇಕು. ನಾನು ರಾಜನಾಗುವ ಆಸೆಯಿಂದ ಮೊದಲು ಸಾಯಲು ಇಚ್ಛಿಸುತ್ತೇನೆ."
ರಾಜ ಚಿಂತೆಗೆ
ಬಿದ್ದ. ಅವನಿಗೆ ಮುಂದಿನ ಜನ್ಮದಲ್ಲೂ ತನ್ನ ರಾಜ್ಯವನ್ನು ಬೇರೆಯವರಿಗೆ ಬಿಟ್ಟು ಕೊಡಲು ಇಷ್ಟ ಇರಲಿಲ್ಲ.
ರಹಸ್ಯದಲ್ಲಿ ಮಂತ್ರಿಯನ್ನು ಕರೆದು ಸಮಾಲೋಚಿಸಿದ. ಅವರಿಬ್ಬರೂ ಮುಂದಿನ ಜನ್ಮದಲ್ಲಿ ರಾಜ್ಯವನ್ನು ಬೇರೆಯವರಿಗೆ
ಬಿಟ್ಟು ಕೊಡುವ ಬದಲು ತಾವೇ ಸತ್ತು ಮರು ಜನ್ಮದಲ್ಲಿ ರಾಜ ಮಂತ್ರಿಯಾಗಿ ಅಧಿಕಾರ ನಡೆಸುವ ಆಲೋಚನೆಗೆ
ಬಂದರು. ತಮ್ಮ ಸೇವಕರಿಗೆ ಮರುದಿನ ಬೆಳಿಗ್ಗೆ ಗುರು-ಶಿಷ್ಯರ ತಲೆ ಕಡಿಯುವಂತೆ ಆದೇಶ ನೀಡಿದರು. ಆದರೆ
ರಾತ್ರಿಯ ವೇಳೆ ಗುರು-ಶಿಷ್ಯರನ್ನು ಸೆರೆಮನೆಯಿಂದ ಆಚೆ ಕಳಿಸಿ, ಆ ಜಾಗದಲ್ಲಿ ತಾವು ಮುಸುಕು ಹಾಕಿಕೊಂಡು
ಮಲಗಿದರು.
ಮರುದಿನ ಬೆಳಿಗ್ಗೆ
ಅವರಿಬ್ಬರ ತಲೆ ಕಡಿಯಲಾಯಿತು. ಅವರ ಮುಸುಕು ತೆಗೆದ ಮೇಲೆ ಜನ ಗಾಬರಿ ಆದರು. ತಮ್ಮ ರಾಜ್ಯಕ್ಕೆ ಇನ್ನಾರು
ದಿಕ್ಕು ಎಂದು ಆಲೋಚಿಸತೊಡಗಿದರು. ಯಾರೋ ಒಬ್ಬರು ಗುರು-ಶಿಷ್ಯರನ್ನು ಕೇಳಿ ನೋಡೋಣ ಎಂದು ಹೇಳಿದರು. ಶಿಷ್ಯ
ಮಂತ್ರಿಯಾಗುವುದಕ್ಕೆ ತಕ್ಷಣ ಒಪ್ಪಿಕೊಂಡ. ಆದರೆ ಗುರು ಹಲವಾರು ಷರತ್ತುಗಳನ್ನು ಹಾಕಿದ. ಅವನು ಎಲ್ಲ
ವಿಷಯಗಳನ್ನು ಬದಲು ಮಾಡುವ ಅಧಿಕಾರಕ್ಕೆ ಜನ ಒಪ್ಪಿಕೊಂಡ ಮೇಲೆ ಅವನು ರಾಜನಾದ. ಅಲ್ಲಿಂದ ಮುಂದೆ ಆ
ರಾಜ್ಯದಲ್ಲಿ ಹಗಲು-ಹಗಲಾಗಿಯೇ ಮತ್ತು ರಾತ್ರಿ-ರಾತ್ರಿಯಾಗಿಯೇ ಬದಲಾಯಿತು.