Friday, August 12, 2022

ಹಾಸ್ಯ ಬರಹ: ಕೈಗೆ ಬಂದ ತುತ್ತು ...

ದೇವರು ಕರುಣಾಮಯಿ, ಅವನು ಎಲ್ಲರ ತಪ್ಪುಗಳನ್ನು ಮನ್ನಿಸುತ್ತಾನೆ ಎಂದು ಕೇಳಿದ್ದೆ. ಅದು ನನಗೆ ಅನುಭವ ಆಗುವ ಕಾಲ ಬಂದೇ ಬಿಟ್ಟಿತ್ತು. ಎರಡು ಮೂರು ದಿನಗಳಿಂದ ದುಸು-ಮುಸು ಎನ್ನುತ್ತಿದ್ದ ನನ್ನ ಪತ್ನಿ, ತನ್ನ ಅಕ್ಕಳ ಜೊತೆಗೆ ದೀರ್ಘ ಸಂಭಾಷಣೆ ಕೂಡ ಮಾಡಿ, ತನ್ನ ಬಟ್ಟೆ ಬರೆಗಳನ್ನು ಮಂಚದ ಮೇಲೆ ರಾಶಿ ಹಾಕಿ ಅವುಗಳನ್ನು ಪ್ಯಾಕ್ ಮಾಡುತ್ತಾ ತನ್ನ ದೃಢ ನಿರ್ಧಾರ ಘೋಷಿಸಿಯೇ ಬಿಟ್ಟಳು. 'ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ. ನನಗಿನ್ನು ನಿನ್ನ ಸಹವಾಸ ಸಾಕು!"

 

ಆ ಮಾತು ಕೇಳಿದ ತಕ್ಷಣ ಸಪ್ತ ಸಮುದ್ರಗಳು ಉಕ್ಕೇರಿದ ಹಾಗೆ ನನ್ನ ಹೃದಯ ಸಂತೋಷದ ಕಡಲಾಗಿತ್ತು. 'ಗಗನವೋ ಎಲ್ಲೋ, ಭೂಮಿಯು ಎಲ್ಲೋ" ಎಂದು ನಟಿ ಕಲ್ಪನಾರ ಹಾಗೆ ಗೆಜ್ಜೆ ಕಟ್ಟಿ ಕುಣಿಯಬೇಕು ಎನ್ನಿಸಿಬಿಟ್ಟಿತ್ತು. ಆದರೂ ಸಾವರಿಸಿಕೊಂಡು ಹೇಳಿದೆ "ಅಣ್ಣನ ಹತ್ತಿರ ಬಂದು ನಿನಗೆ ಸೇರಬೇಕಾದ ಆಸ್ತಿ ಪತ್ರಗಳನ್ನು ಬರೆಸಿಕೊಂಡು ಹೋಗು". ಇಷ್ಟಕ್ಕೂ ಅವಳು ಅರ್ಧ ಬಿಟ್ಟು ಪೂರ್ತಿ ಆಸ್ತಿ ತೆಗೆದುಕೊಂಡು ಹೋಗಲಿ. ಆಸ್ತಿ ಯಾವನಿಗೆ ಬೇಕು? ಬೇಕಿರುವುದು ಜೀವನದ ಸ್ವಾತಂತ್ರ್ಯ. "ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ" ಎನ್ನುವ ಹಾಗೆ ಎಲ್ಲದಕ್ಕೂ ಮೂಗು ತೂರಿಸುವ ಮೂದೇವಿ ಜೊತೆ ಯಾರು ಸಂಸಾರ ಮಾಡಿಕೊಂಡಿರುತ್ತಾರೆ? ಮಸ್ಕಿ ಭ್ರಮರಾಂಭ ದೇವಸ್ಥಾನದಲ್ಲಿ ನನ್ನ ಮದುವೆಯಲ್ಲಿ ಊಟ ಮಾಡಿದ ಜನರಿಗಿಂತ ಹೆಚ್ಚಿನ ಜನರಿಗೆ ಅನ್ನ ದಾನ ಮಾಡಿದರೆ ಆ ಪಾಪ ಸಂಪೂರ್ಣ ಕಳೆಯುತ್ತದೆ ಏನೋ? ಅದನ್ನು ಹೇಳಬಲ್ಲ ಯಾವ ಸ್ವಾಮಿಗಳ ಹೆಸರು ನನಗೆ ಆ ಕ್ಷಣಕ್ಕೆ ತೋಚಲಿಲ್ಲ.

 

ಇಷ್ಟಕ್ಕೂ ನಾನು ಮದುವೆ ಆಗಿದ್ದು 'ಮದುವೆ ಆಗದೆ ಹುಚ್ಚು ಬಿಡುವುದಿಲ್ಲ, ಹುಚ್ಚು ಬಿಡದೆ ಮದುವೆ ಆಗುವುದಿಲ್ಲ' ಎನ್ನುವ ಮನಸ್ಥಿತಿಯಲ್ಲಿ ಇದ್ದಾಗ. ಮದುವೆ ಆದ ಸ್ನೇಹಿತರ ಅನುಭವ ಗಮನಿಸಿದರೆ ಕೆಲವು ಹಾಗೆ. ಕೆಲವು ಹೀಗೆ. ಒಂಥರಾ ಲಾಟರಿ ಇದ್ದ ಹಾಗೆ. ಯಾರೋ ಒಬ್ಬರು  ಲಾಟರಿ ಗೆದ್ದರೆ ಸಾವಿರಾರು, ಲಕ್ಷಾಂತರ ಜನ ದುಡ್ಡು ಕಳೆದುಕೊಳ್ಳುವುದಿಲ್ಲವೇ? ಆದರೆ ಈ ಗಂಡಸರಿಗೆ ಒಂದು ಹುಚ್ಚು ನಂಬಿಕೆ. ತಾವೇ ಗೆಲ್ಲುವುದು ಎನ್ನುವ ಆಸೆಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದುಬಿಡುತ್ತಾರೆ. ಹೂವಿನ ಗಿಡದಲ್ಲಿ ಹೂವು ಉಂಟು, ಮುಳ್ಳು ಉಂಟು. ಹೂವು ಬೇಗ ಬಾಡಿ ಹೋಗುತ್ತದೆ. ಆದರೆ ಮುಳ್ಳು? ಆಮೇಲೆ ಒಂದು ಹೂವಿಗೆ ಒಂದೇ ಮುಳ್ಳಲ್ಲ ಹಲವಾರು ಮುಳ್ಳುಗಳು. ಮದುವೆಯ ಆರಂಭದಲ್ಲಿ ಮಾತ್ರ ಹೂವು ಆಮೇಲೆ ಪಕಳೆಗಳೆಲ್ಲ ಉದುರಿ ಉಳಿಯುವುದು ಮೊನಚು ಮುಳ್ಳು ಮಾತ್ರ.

 

ಅದು ಏನೇ ಇರಲಿ. ದೇವರು ನನ್ನ ಪಾಲಿಗೆ ಕೊನೆಗೂ ಕಣ್ತೆರೆದಿದ್ದ. "ಭಾಗ್ಯದ ಬಾಗಿಲು" ಎನ್ನುವ ಅಣ್ಣಾವ್ರ ಚಲನ ಚಿತ್ರ ಇದೆಯಲ್ಲ. ಅದರ ಪೋಸ್ಟರ್ ಡೌನ್ಲೋಡ್ ಮಾಡಿ ವಾಟ್ಸಪ್ಪ್ ನಲ್ಲಿ ಸ್ನೇಹಿತ ಒಬ್ಬನಿಗೆ ಕಳಿಸಿದೆ. ಸಂಭ್ರಮ, ಉಲ್ಲಾಸ ಹಂಚಿಕೊಳ್ಳಲು ಸ್ನೇಹಿತರಿಗಿಂತ ಬೇರೆ ಯಾರು ಬೇಕು? ಅವನಿಗೆ ಹೊಟ್ಟೆ ಉರಿ ಆಯಿತೋ ಏನೋ? ಆದರೂ ತೋರಿಸಿಕೊಳ್ಳದೆ "ಯಾವಾಗ ಪಾರ್ಟಿ?" ಎಂದು ಮೆಸೇಜ್ ಕಳಿಸಿದ. ಮುಂದೆ ಏನೆಲ್ಲಾ ಮಾಡಬಹುದು ಎಂದು ಮನಸ್ಸು ಮಂಡಿಗೆ ತಿನ್ನತೊಡಗಿತ್ತು. 'ದಿಲ್ ಚಾಹತಾ ಹೈ", "ಜಿಂದಗಿ ನ ಮಿಲೆಗಾ ದುಬಾರಾ" ಚಿತ್ರಗಳಲ್ಲಿ ಸ್ನೇಹಿತರು ಪ್ರವಾಸ ಹೋಗುತ್ತಾರಲ್ಲ. ಹೇಗಾದರೂ ಮಂಗಳೂರಿನಿಂದ ಗೋವಾ ಗೆ ಡ್ರೈವ್ ಮಾಡಿಕೊಂಡ ಹೋಗಬೇಕೆನ್ನುವ ಆಸೆ ಬಾಕಿ ಉಳಿದಿತ್ತು. ಮತ್ತು ದಾರಿಯಲ್ಲಿನ ಪ್ರಕೃತಿಯ ರಮಣೀಯ ಸೊಬಗನ್ನು ಸವಿಯುವ ಇರಾದೆ. ಬೆಟ್ಟದ ತುದಿಯಿಂದ ವಿಶಾಲ ಸಮುದ್ರದ ಫೋಟೋಗಳನ್ನು ತೆಗೆಯುವಾಸೆ, ಕೆಂಪು ಸೂರ್ಯ ನೀರೊಳಗೆ ಮುಳುಗುವುದು, ಎಲ್ಲಿಗೂ ಹೋಗದೆ ಅಲ್ಲಿಯೇ ನಿಂತ ಒಂಟಿ ಬೋಟ್ ಗಳು ಹೀಗೆ ಅನೇಕ ಸನ್ನಿವೇಶಗಳು. ಚಿತ್ರ ತೆಗೆಯಲು ಅಲ್ಲಿ ಅವಕಾಶಗಳಿಗೇನು ಕಡಿಮೆ?

 

ಅದೇ ಐಡಿಯಾ ಹೆಂಡತಿಗೆ ಕೊಟ್ಟಿದ್ದರೆ ಅವಳು ಪ್ರವಾಸಕ್ಕೆ ಖಂಡಿತ ಒಪ್ಪಿಕೊಳ್ಳುತ್ತಿದ್ದಳು. ಆದರೆ ಅವಳ ಲಗೇಜ್ ಕಾರಿನಿಂದ ಹತ್ತಿ ಇಳಿಸುವದರಲ್ಲೇ ಕಾಲ ಕಳೆದು ಹೋಗುತ್ತಿತ್ತು. ಅವಳು ಬೆಳ್ಳಿಗೆ ರೆಡಿ ಆಗುವುದು ಕಾಯುತ್ತ ಕೂತು ತಾಳ್ಮೆಯೆಲ್ಲ ಕರಗಿ ಹೋಗುತ್ತಿತ್ತು. ಅವಳು ಮಾಡಿದ ಶಾಪಿಂಗ್ ವಸ್ತುಗಳನ್ನು ಹೊತ್ತು ತರುವ ಕೂಲಿ ಕೆಲಸ ನನ್ನದೇ. ಅವಳು ಬೀದಿಯಲ್ಲಿ ವ್ಯಾಪಾರಕ್ಕೆ ಇಳಿದರೆ ಸಾಕಷ್ಟು ಹೊತ್ತು ಸುಮ್ಮನೆ ಕೈ ಕಟ್ಟಿ ಬೀದಿಯಲ್ಲಿ ನಿಂತುಕೊಳ್ಳುವ ಕೆಲಸಕ್ಕಿಂತ ಶ್ರವಣ ಬೆಳಗೋಳದಲ್ಲಿ ಗೊಮ್ಮಟ ಆಗುವುದು ವಾಸಿ. ಅವಳು ಮೆಚ್ಚಿದ ಸೀರೆಗೆ ಎಷ್ಟು ಚೆಂದದ ಬಣ್ಣ, ಎಷ್ಟು ಚೆಂದದ ಡಿಸೈನ್ ಎಂದು ಹೊಗಳದೇ ಹೋದರೆ ನಿಮಗೆ ಟೇಸ್ಟ್ ಇಲ್ಲ ಎನ್ನುವ ಕಾಮೆಂಟ್ ಸದಾ ಸಿದ್ಧವಿರುತ್ತಿತ್ತು. ಸೂರ್ಯಾಸ್ತ ಆಕಾಶದಲ್ಲಿ ಮೂಡಿಸುವ ರಂಗು, ಪಕ್ಷಿಗಳ ರೆಕ್ಕೆ ಪುಕ್ಕದಲ್ಲಿ ಮೂಡಿರುವ ಆಕರ್ಷಕ ವಿನ್ಯಾಸಗಳು ಅವೆಲ್ಲ ಫ್ರೀ ಆದರಿಂದ ಅವುಗಳ ಬಗ್ಗೆ ಗಮನ ಹರಿಸುವ ಗೋಜಿಗೆ ಅವಳು ಹೋಗುತ್ತಲೇ ಇರಲಿಲ್ಲ. ಕ್ಯಾಮೆರಾದಲ್ಲಿ ಹೆಚ್ಚಿನ ಫೋಟೋಗಳು ಅವಳದೇ ಇರಬೇಕು. ಮತ್ತು ಫೋಟೋ ತೆಗೆದ ಮೇಲೆ ಅವಳು ಅದನ್ನು ನೋಡಿ ಓಕೆ ಇಲ್ಲ ನಾಟ್ ಓಕೆ ಎಂದು ಹೇಳುತ್ತಾಳೆ. ಅವಳು ಚೆಂದ ಕಾಣುವ ಹಾಗೆ ತೆಗೆಯದೆ ಇದ್ದರೆ ಒಂದು ನನ್ನ ಕ್ಯಾಮೆರಾ ಸರಿ ಇಲ್ಲ ಇಲ್ಲ ನನಗೆ ಫೋಟೋ ತೆಗೆಯಲು ಬರುವುದಿಲ್ಲ ಅಷ್ಟೇ. ಇಷ್ಟೆಲ್ಲಾ ಸಂಗತಿಗಳ ನಡುವೆ ಮಂಗಳೂರು ಶುರು ಆಗಿದ್ದೆಲ್ಲಿ? ಗೋವಾ ಮುಗಿದದ್ದು ಎಲ್ಲಿ ಎಂದು ಗೊತ್ತು ಕೂಡ ಆಗುತ್ತಿರಲಿಲ್ಲ.

 

ಶುಭ ವೇಳೆಯಲ್ಲಿ ಅಪಶಕುನ ಏಕೆ? ಪ್ರವಾಸ ಬಿಟ್ಟು ಬೇರೇನೂ ಮಾಡಬಹುದು? ಸದ್ಗುರು ಆಶ್ರಮಕ್ಕೋ ಇಲ್ಲವೇ ಹಿಮಾಲಯದ ಅಡಿಯಲ್ಲಿ ನಡೆಯುವ ಧ್ಯಾನ ಕೇಂದ್ರಗಳಿಗೆ ಹೋಗಿ ನಾಲ್ಕಾರು ದಿನ ತಣ್ಣಗೆ ಕುಳಿತು ಧ್ಯಾನ ಮಾಡಬಹುದು. ಮನೆಯಲ್ಲಿ ಧ್ಯಾನ ಮಾಡಲಿಕ್ಕೆ ಆಗುವುದಿಲ್ಲ ಎಂದಲ್ಲ. ಆದರೆ ಹೆಂಗಸರು ಏನಾದರು ಸಹಿಸಿಯಾರು. ತಮ್ಮ ಗಂಡ ಸಂತೋಷದಿಂದ ಮತ್ತು ನೆಮ್ಮದಿಯಿಂದ ಇರುವುದನ್ನು ಸಹಿಸಲಾರರು. ನನ್ನ ಹೆಂಡತಿ ಅಷ್ಟೇ ಅಲ್ಲ. ಮೊನ್ನೆ ಗೆಳೆಯರು ಸಿಕ್ಕಾಗ ಹೆಚ್ಚು ಕಡಿಮೆ ಎಲ್ಲ ಸ್ನೇಹಿತರ ದೂರು ಇದೆ ಆಗಿತ್ತು ಅವರೊಳಗೆ ವಿವಾಹ ವಿಚ್ಛೇದನ ಪಡೆದ ಸ್ನೇಹಿತನೊಬ್ಬ ನಮ್ಮನ್ನೆಲ್ಲ ಅಯ್ಯೋ ಪಾಪ ಎನ್ನುವಂತೆ ನೋಡುತ್ತಿದ್ದ. ನನಗೂ ಕೂಡ ಅವನ ಹಾಗೆ ನೆಮ್ಮದಿಯ ನಗೆ ಬೀರುವ ಸದವಕಾಶ ಹತ್ತಿರವೇ ಇದೆ ಎನ್ನುವ ಹರ್ಷದಿಂದ ನನ್ನ ಮುಖದಲ್ಲಿ ಮಂದಹಾಸ ಮೂಡಿತ್ತು. 

 

ಕೊನೆ ಕಾಲಕ್ಕೆ ಹೆಂಡತಿಯೇ ದಿಕ್ಕು ಎನ್ನುವ ಮಾತಿದೆಯಲ್ಲ. ಆದರೆ ನಿಜದಲ್ಲಿ ಅವಳು ಗಂಡನ ನಾಲಿಗೆ ಕಿತ್ತುಬಿಟ್ಟಿರುತ್ತಾಳೆ. ಕೊನೆ ಕಾಲದವರೆಗೆ ಹೆಂಡತಿಯ ಜೊತೆಗೆ ಬದುಕಿ ಯಾವ ನರಕಕ್ಕಾದರೂ ಸೈ ಎನ್ನುವಷ್ಟು ಅನುಭವ ಭೂಮಿ ಮೇಲೆಯೇ ಪಡೆಯುವುದಕ್ಕಿಂತ, ಕಾಲಕ್ಕಿಂತ ಸ್ವಲ್ಪ ಮೊದಲೇ ಸ್ನೇಹಿತರ ನಡುವೆಯೇ ಪ್ರಾಣ ಬಿಡುವುದೇ ವಾಸಿ. ಅವರು ನಮ್ಮನ್ನು ಮಣ್ಣು ಮಾಡಿ ಕೈ ತೊಳೆದುಕೊಳ್ಳುತ್ತಾರೆ. ಆಮೇಲೆ ಶಪಿಸಿಸುವ ಗೋಜಿಗೆ ಹೋಗುವುದಿಲ್ಲ. ಸಾಕ್ರಟೀಸ್ ಹೇಳಿದ್ದ ನಿನಗೆ ಕೆಟ್ಟ ಹೆಂಡತಿ ಸಿಕ್ಕರೆ ನೀನು ತತ್ವಜ್ಞಾನಿ ಆಗುತ್ತಿ ಎಂದು. ಆದರೆ ಅವಳು ನಡುವೆಯೇ ಸೋಡಾಚೀಟಿ ಕೊಟ್ಟು ಮತ್ತೆ ನಿಮ್ಮ ಬದುಕು ನಿಮಗೆ ಮರಳಿ ಸಿಕ್ಕರೆ? ಸಾಕ್ರಟೀಸ್ ಹೇಳದೆಯೇ ಉಳಿಸಿದ ಮಾತುಗಳನ್ನು ನಾನು ಹೇಳಿ ಒಂದು ಪುಸ್ತಕ ಹೊರತರಬಹುದು. ಆಗ ಚರಿತ್ರೆಯಲ್ಲಿ ನನಗೆ ಒಂದು ಸ್ಥಾನ ಕೂಡ ದೊರಕಬಹುದು ಎಂದು ಎನಿಸಿ ರೋಮಾಂಚನ ಆಯಿತು. ಎಷ್ಟೆಲ್ಲಾ ಅವಕಾಶಗಳಿವೆ ಈ  ವಿಶಾಲ ಪ್ರಪಂಚದಲ್ಲಿ. ಮತ್ತೆ ಆ ಅವಕಾಶ ಕೊಟ್ಟ ಹೆಂಡತಿಗೆ ನನ್ನ ಪುಸ್ತಕ ಅರ್ಪಿಸಿ ಧನ್ಯವಾದ ಹೇಳಬೇಕು ಎಂದುಕೊಂಡೆ. ಅವಳು ನನ್ನ ಬಿಟ್ಟು ಹೋಗುವುದರಿಂದ ಏನೆಲ್ಲಾ ಬದಲಾವಣೆಗಳು.

 

ಬುದ್ಧನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯ ಆಯಿತು. ಅಲ್ಲಿ ಅವನ ಹೆಂಡತಿ ಅವನ ಬೆನ್ನು ತಿವಿಯುತ್ತ ನಿಂತಿದ್ದರೆ ಅವನ ಜ್ಞಾನೋದಯ ಆಗುತ್ತಿತ್ತೇ? ನೆನಪಿಡಿ, ಬುದ್ಧ ಕಾಂತಿಯುತನಾಗಿ, ಮಂದಹಾಸನಾಗಿ, ಅರೆ ಕಣ್ಣು ತೆರೆದು ಕುಳಿತುಕೊಳ್ಳುವ ಧೈರ್ಯ ಮಾಡಿದ್ದೆ ಅವನ ಹೆಂಡತಿ ಅಲ್ಲಿಲ್ಲ ಎಂದು. ಇಷ್ಟಕ್ಕೂ ಹೆಂಡತಿಯರು ಎಂದರೆ ಕೆಟ್ಟವರು ಎಂದರೇನಲ್ಲ. ಆದರೆ ಅವರು ಹೆಂಡತಿಯರು ಅಷ್ಟೇ. ಅವರು ಸಂತೋಷ ಆಗಿರುವುದು ತಮ್ಮ ಗಂಡನಿಗೆ ಯಾವತ್ತೂ ತೋರಿಸಿಕೊಡುವುದಿಲ್ಲ. ಮತ್ತು ಗಂಡ ಸಂತೋಷ ಪಟ್ಟರೆ ಅವರಿಗೆ ನರಕ ಹೇಗಿರುತ್ತದೆ ಎಂದು ಕಣ್ಮುಂದೆಯೇ ತೋರಿಸಿಕೊಡಲು ಹಿಂದೆ ಮುಂದೆ ನೋಡುವದಿಲ್ಲ. ಅವಳು ತನ್ನ ಮಕ್ಕಳಿಗೆ ಕರುಣಾಮಯಿ, ತವರುಮನೆಯವರಿಗೆ ವಾತ್ಸಲ್ಯ ತೋರುವ ಮಗಳು, ಸಹೋದರಿ. ಆದರೆ ಗಂಡನಿಗೆ ಏಳು ಜನ್ಮದ ಕರ್ಮಗಳನ್ನು ಒಂದೇ ಜನುಮದಲ್ಲಿ ತೀರಿಸಿ ಹೋಗಲು ಬಂದಿರುವ ಯಮಲೋಕದ ಪ್ರತಿನಿಧಿ. ಮದುವೆ ಆಗುವವರೆಗೆ ಮಾತ್ರ ಅವಳು ಗಂಡಿಗೆ ಆಕರ್ಷಣೆ. ಆಮೇಲೆ ಗಂಡನನ್ನು ಬಟ್ಟೆ ಒಗೆದ ಮೇಲೆ ಹಿಂಡಿ ನೀರು ತೆಗೆಯುವ ಹಾಗೆ, ಗಂಡನ ಸಂತೋಷದ ಒಂದು ಹನಿ ಬಿಡದಂತೆ ಹಿಂಡಿ ತೆಗೆದುಬಿಡುತ್ತಾಳೆ. ಆದರೆ ನನಗೆ ಇನ್ನು ಆ ತಾಪತ್ರಯ  ಮುಗಿಯಿತು. ನಾನು ಸ್ವಚಂದ ಹಾರುವ ಹಕ್ಕಿ. ನನ್ನ ಸಂತೋಷ ಕಸಿದುಕೊಳ್ಳುವ ಕರಾರು ಮುಗಿದು ಹೋಗಿದೆ.

 

ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ದೇವತೆಗಳು ಅಸ್ತು ಅನ್ನುವ ಮುಂಚೆಯೇ ಹೆಂಡತಿ ಮನಸ್ಸು ಬದಲಾಯಿಸಿದ್ದಳು. ಹೋಗುತ್ತಿರುವುದು ಎರಡು ದಿನಕ್ಕೆ ಅಷ್ಟೇ ಎಂದು ಘೋಷಿಸಿ ಬಂದ ಮೇಲೆ ಇನ್ನು ಪಿಕ್ಚರ್ ಬಾಕಿ ಇದೆ ಎನ್ನುವ ನೋಟ ಬೀರಿ ಹೋದಳು. ನನ್ನ ಕನಸಿನ ಸೌಧ  ಕ್ಷಣಾರ್ಧದಲ್ಲೇ ಕುಸಿದು ಬಿದ್ದಿತ್ತು. ಪುರಾಣ ಕಥೆಯ ಹರಿಶ್ಚಂದ್ರ ಅಸಹಾಯಕತೆಯಿಂದ ನಕ್ಷತ್ರಕನನ್ನು ನೋಡಿದಂತೆ ಅವಳನ್ನು ನೋಡಿದೆ. ಮನೆಯ ಗೋಡೆಯ ಮೇಲೆ ಇದ್ದ ಬುದ್ಧನ ಪೇಂಟಿಂಗ್ ನಲ್ಲಿ ಬುದ್ಧ ಕಣ್ಣು ಅರೆ ತೆರದಿದ್ದು ಏಕೆ ಎಂದು ಗೊತ್ತಾಗಿತ್ತು. ಆದರೆ ಈಗ ಅರೆ ಮುಚ್ಚಿದ್ದು ಏಕೆ ಎಂದು ಕೂಡ ಗೊತ್ತಾಯಿತು. ಸಾಂತ್ವನ ಹೇಳುವಂತೆ ಸಾಯಿಬಾಬ (ಇನ್ನೊಂದು ಗೋಡೆಯ ಮೇಲಿನ ಪೇಂಟಿಂಗ್) ಕರುಣೆಯ ನೋಟ ಬೀರುತ್ತಿದ್ದ. ಸ್ನೇಹಿತ ಮತ್ತೆ ಮೆಸೇಜ್ ಮಾಡಿದ್ದ 'ಯಾವಾಗ ಪಾರ್ಟಿ?' ಯಾವುದೇ ಉತ್ತರ ನೀಡದೆ, ಗಾಳಿ ಹೋದ ಬಲೂನಿನಂತೆ ಸುಮ್ಮನೆ ಹೊದ್ದು ಮಲಗಿದೆ.

No comments:

Post a Comment