(Gregory David Roberts ಅವರು ಬರೆದ ‘Shantaram’ ಪುಸ್ತಕದ ಮೊದಲ ಪುಟಗಳ ಭಾವಾನುವಾದ. ಬಹಳ ದಿನದ ಮೇಲೆ ಒಂದು ಒಳ್ಳೆಯ ಕಾದಂಬರಿ ಓದಿದ ಅನುಭವ ಆದ್ದರಿಂದ, ಅದರ ಲೇಖಕರು ಬರೆದ ಪರಿಚಯ ಪುಟಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಅನುವಾದಿಸಿದ್ದೇನೆ.)
ಬಹುಕಾಲದ ಹಿಂದೆ
ಮಾಟಗಾತಿಯೊಬ್ಬಳು ನನಗೆ ಹೇಳಿದ್ದಳು. ಎಲ್ಲಾ ಜನರು ಒಂದಲ್ಲ ಒಂದು ವರ್ಗಕ್ಕೆ ಸೇರಿರುತ್ತಾರೆ. ಕೆಲವರು ರೈತರು. ಅವರು ಯಾವ
ಊರಿಗೆ ಹೋದರು, ಗುಂಡಿ ತೆಗೆಯುವುದು, ಬೀಜ ಬಿತ್ತುವುದು, ಫಸಲು ಕಾಯುವುದು ಇಂತಹ ಕೆಲಸಗಳೇ ಅವರಿಗೆ
ಇಷ್ಟವಾಗುವುದು. ಅದೇ ತರಹ ಕೆಲವರು ಕಟ್ಟಡ ನಿರ್ಮಾಣ ಮಾಡುವವರು, ಇನ್ನು ಕೆಲವರು ಸಂಗೀತಗಾರರು. ಹಾಗೆಯೆ
ಕೆಲವರು ಕುಶಲಕರ್ಮಿಗಳು, ನಟರು, ಸಾಧು-ಸಂತರು, ಶಿಕ್ಷಕರು. ಹೀಗೆ ಅವರವರ ಕಾಯಕ ಅವರಿಗೆ ಇಷ್ಟ. ಸ್ವಲ್ಪ
ಜನ ಮಾಟಗಾತಿಯರು, ನನ್ನ ತರಹ. ಕೆಲವರು ಕ್ಷತ್ರಿಯರು ನಿನ್ನ ತರಹ.
ಅವಳು ಹೇಳಿದ್ದು
ನಾನು ಆಗ ಪೂರ್ತಿಯಾಗಿ ನಂಬಲಿಲ್ಲ ಹಾಗೆಯೆ ತೆಗೆದು ಹಾಕಲಿಲ್ಲ ಕೂಡ. ಆದರೆ ಅದು ಆತ್ಮದ ಕರೆಗಂಟೆ ಎಂದು
ನನಗೆ ಸಮಯ ಕಳೆದಂತೆ ಅರ್ಥವಾಗತೊಡಗಿತು.
ಅನಿವಾರ್ಯವೋ ಅಥವಾ
ವಿಮೋಚನೇ ಇಲ್ಲವೋ, ಕ್ಷತ್ರಿಯರಿಗೆ ಹೋರಾಟದ ಹಾದಿ ಬಿಟ್ಟು ಬೇರೆ ರುಚಿಸುವುದಿಲ್ಲ. ಹೋರಾಡುವುದನ್ನು
ಅವರು ಚಿಕ್ಕಂದಿನಲ್ಲೇ ಕಲಿಯುತ್ತಾರೆ. ಕರಾಟೆ, ಬಾಕ್ಸಿಂಗ್
ಇತ್ಯಾದಿ ಕ್ರೀಡೆಗಳನ್ನು ಆಸಕ್ತಿಯಿಂದ ಗಮನಿಸುತ್ತಾರೆ. ಸಮರ ಕಲೆಗಳು ಅವರನ್ನು ಸೆಳೆಯುತ್ತವೆ. ಚಾಕು
ಬಳಸುವದು, ಬಡಿಗೆ ಹಿಡಿದು ತಮ್ಮನ್ನು ರಕ್ಷಿಸಿಕೊಳ್ಳುವುದು ಅವರಿಗೆ ಸುಲಭದಲ್ಲಿ ದಕ್ಕುತ್ತವೆ. ಅವರು
ಸೈನಿಕರೋ, ಪೊಲೀಸರೋ ಇಲ್ಲವೇ ದರೋಡೆಕೋರರೋ ಆಗುತ್ತಾರೆ ಅಂದಲ್ಲ. ಆದರೆ ಅವರು ದಬ್ಬಾಳಿಕೆಯನ್ನು, ಅನ್ಯಾಯವನ್ನು
ಸಹಿಸಿಕೊಳ್ಳಲಾರರು. ಮತ್ತು ದುರ್ಬಲರ ರಕ್ಷಣೆಗೆ ಕಾಳಗಕ್ಕೆ ಇಳಿಯಲು ಹಿಂದೆ ಮುಂದೆ ನೋಡುವುದಿಲ್ಲ.
ಹತ್ತುವರುಷಗಳ ಕಠಿಣ
ಜೈಲು ವಾಸದಲ್ಲಿ ಹಲವಾರು ಕ್ಷತ್ರಿಯರನ್ನು ಹತ್ತಿರದಿಂದ ಗಮನಿಸಿದ್ದೇನೆ. ಅವರಲ್ಲಿ ಹೋರಾಟ ಭಾವ ಎಷ್ಟು
ದಟ್ಟವಾಗಿದೆಯೋ ಅಷ್ಟೇ ಸರಾಗವಾಗಿ ಅವರು ಕವಿತೆ ರಚಿಸಬಲ್ಲರು. ಮತ್ತು ಕೆಲವರು ಇತಿಹಾಸವನ್ನು ಅರೆದು
ಕುಡಿದವರು. ಮತ್ತು ಕೆಲವರು ತತ್ವಜ್ಞಾನ ವಿಷಯದಲ್ಲಿ ಪ್ರಭುದ್ಧ ವಾದ ಮಂಡಿಸಬಲ್ಲವರು.
ಸಮವಸ್ತ್ರ ಧರಿಸಿದ
ಸೈನಿಕರೆಲ್ಲ ಕ್ಷತ್ರಿಯರಲ್ಲ. ಹಾಗೆಯೆ ಸೂಟು ಬೂಟು ಧರಿಸಿದ್ದರು, ಕೆಲವರಲ್ಲಿ ಕ್ಷತ್ರಿಯರ ರಕ್ತ ಕುದಿಯುತ್ತಿರಬಹುದು.
ಮತ್ತೆ ಬೀದಿ ಬದಿಯ ಒರಟರೆಲ್ಲ ಕ್ಷತ್ರಿಯರಲ್ಲ. ಏಕೆಂದರೆ
ಕ್ಷತ್ರಿಯರು ಒರಟರಲ್ಲ ಮತ್ತು ಒರಟರು ಕ್ಷತ್ರಿಯರಲ್ಲ.
'ಶಾಂತಾರಾಮ್' ಪುಸ್ತಕದ
ಮುಖ್ಯ ಪಾತ್ರ ಕೂಡ ಒಬ್ಬ ಕ್ಷತ್ರಿಯ. ಜೈಲಿನಿಂದ ತಪ್ಪಿಸಿಕೊಂಡು ತನ್ನ ಧೈರ್ಯ ಮತ್ತು ಬದುಕುವ ಆಸೆಯನ್ನು
ಅವನು ನವೀಕರಣಗೊಳಿಸುತ್ತಾನೆ. ಆದರೆ ಕಾನೂನು ಬಾಹಿರ ದುಷ್ಕೃತ್ಯಗಳನ್ನು ಎಸಗಿದ್ದಕ್ಕೆ ಅವನಿಗೆ ನೋವಿದೆ.
ಮತ್ತು ತನ್ನ ಘನತೆಯನ್ನು ಬಿಟ್ಟು ಕೊಡದ ಹೋರಾಟ ಅವನಿಗೆ ಅವನ ಜೀವನದ ಗಮ್ಯವನ್ನು ತಲುಪಲು ಸಹಾಯ ಮಾಡುತ್ತದೆ.
ಸಮಾಧಾನದ ವಿಷಯ ಎಂದರೆ ಜೀವನದ ಆ ಪಯಣದಲ್ಲಿ ನಾವು ಒಬ್ಬಂಟಿಗರಲ್ಲ.