ನೀವು ಮನುಷ್ಯರೆಲ್ಲ ಹುಲಿಗಳು ಬೆಕ್ಕಿನ ಜಾತಿಗೆ ಸೇರಿದ್ದು ಎನ್ನುತ್ತೀರಿ. ಅದೇಕೋ ನನಗೆ ಒಂಚೂರು ಇಷ್ಟವಾಗುವುದಿಲ್ಲ. ನನಗೆ ಬೆಕ್ಕಿನ ಹಾಗೆ ಮನುಷ್ಯರ ಮಕ್ಕಳ ಜೊತೆಗೆ ಆಟವಾಡುವುದು ಅಥವಾ ಹೆಣ್ಣು ಮಕ್ಕಳಿಂದ ಮುದ್ದಿಸಿಕೊಳ್ಳುವುದು ಅವೆಲ್ಲ ಆಗಿ ಬರುವುದಿಲ್ಲ. ಅವರನ್ನು ಬೇಕಾದರೆ ಬೆಳಗಿನ ಉಪಹಾರಕ್ಕೆ ತಿನ್ನುತ್ತೇನೆ. ನನಗೆ ಬೆಕ್ಕಿನ ಜಾತಿ ಎನ್ನುವುದಕ್ಕಿಂತ ಹುಲಿ ಜಾತಿಯೇ ಎನ್ನುವುದು ಸೂಕ್ತ. ಅಥವಾ ಅದಕ್ಕಿಂತ ಭಯಂಕರವಾಗಿ 'ವ್ಯಾಘ್ರ' ಎಂದು ಕರೆಸಿಕೊಳ್ಳಲು ಇಷ್ಟ. ನಾನು 'ಜಂಗಲ್ ಬುಕ್' ಕಥೆಯನ್ನು ಮನುಷ್ಯರು ತಾವು-ತಾವು ಮಾತನಾಡುವಾಗ ಕೇಳಿಸಿಕೊಂಡಿದ್ದೇನೆ. ಅದರಲ್ಲಿನ 'ಶೇರ್ ಖಾನ್' ಗಿಂತ ವಿಭಿನ್ನವಾಗಿ ನಾನು ಏನು ನಡೆದುಕೊಳ್ಳುತ್ತಿರಲಿಲ್ಲ. 'ಮೌಗ್ಲಿ' ಜೊತೆಗೆ ನನ್ನ ಸ್ನೇಹ ಎಂದಿಗೂ ಸಾಧ್ಯವಿಲ್ಲ.
ನನ್ನ ಮತ್ತು ಮನುಷ್ಯರ ಭೇಟಿ ಅತ್ಯಂತ ಆಕಸ್ಮಿಕವಾದದ್ದು. ನಾನು ಚಿಕ್ಕವನಿದ್ದಾಗ ನನಗೆ ಮನುಷ್ಯ ಜಾತಿ ಇದೆ ಎನ್ನುವ ವಿಷಯವೇ ಗೊತ್ತಿರಲಿಲ್ಲ. ತಾಯಿಯ ಆರೈಕೆಯಲ್ಲಿ ಸೋದರರ ಜೊತೆ ಆಟವಾಡುವುದೇ ನನ್ನ ಜಗತ್ತಾಗಿತ್ತು. ಮರೆಯಲ್ಲಿ ಅಡಗಿ ತಾಯಿ ಬೇಟೆಯಾಡುವುದನ್ನು ಗಮನಿಸುತ್ತಿದ್ದೆ. ಎಲ್ಲಾ ನಾಲ್ಕು ಕಾಲಿನ ಪ್ರಾಣಿಗಳು, ಸಣ್ಣ ಕಾಲುಗಳು-ದೊಡ್ಡ ಹೊಟ್ಟೆ ಇದ್ದರೆ ಅದು ನಮಗೆ ಒಳ್ಳೆ ಊಟ. ಬೇಟೆಯ ಹತ್ತಿರಕ್ಕೆ ಸದ್ದಿಲ್ಲದೇ ಹೋಗಿ, ಅದರ ಗಮನ ಬೇರೆ ಕಡೆಗೆ ತಿರುಗಿದ ಕ್ಷಣದಲ್ಲಿ, ಅದರ ಮೈ ಮೇಲೆ ಎರಗಿ, ಕುತ್ತಿಗೆ ಮುರಿದರೆ ಅಂದಿನ ಬೇಟೆ ಮುಗಿದೇ ಹೋಯಿತು. ತಾಯಿ ನಮ್ಮನ್ನು ಚೆನ್ನಾಗಿ ತರಬೇತಿಗೊಳಿಸಿದ್ದಳು. ಸಂತೋಷಮಯವಾಗಿರುವ ಕಾಲ ಬಹು ಬೇಗ ಕಳೆದು ಹೋಗಿ ಬಿಡುತ್ತದೆ ಅಲ್ಲವೇ? ನಾನು ಸ್ವತಂತ್ರವಾಗಿ ಬೇಟೆಯಾಡುವುವುದನ್ನು ಗಮನಿಸಿದ ನನ್ನ ತಾಯಿ, ನನ್ನ ಮೇಲಿನ ಪ್ರೀತಿಯನ್ನು ಮರೆತು, ತನ್ನ ವ್ಯಾಪ್ತಿ ಪ್ರದೇಶದಿಂದ ಹೊರಗೆ ಅಟ್ಟಿದಳು.
ಸ್ವತಂತ್ರ ಜೀವನ ಆರಾಮದಾಯಕ ಕೂಡ ಆಗಿತ್ತು. ನೀರು ಕುಡಿಯಲು ಬರುವ ಪ್ರಾಣಿಗಳು ಮೈ ಮರೆತಾಗ ಹೊಂಚಿನ ಧಾಳಿ ಮಾಡಿದರೆ, ಅದು ಕೆಲ ದಿನಗಳ ಹಸಿವನ್ನು ನೀಗಿಸುತ್ತಿತ್ತು. ಉಳಿದೆಲ್ಲ ವಿಶ್ರಾಂತಿ ಸಮಯ. ನನ್ನ ಪ್ರದೇಶದಲ್ಲಿ ತಿರುಗಾಡುವಾಗ, ಉಳಿದೆಲ್ಲ ಪ್ರಾಣಿಗಳು ನನ್ನ ನೋಡಿ ಭಯ ಪಡುವುದು ಗಮನಿಸುತ್ತಿದ್ದೆ. ನಾನು ಕಾಡಿನ ರಾಜಕುಮಾರನೇ? ಇರಬಹುದೇನೋ? ನೋಡಲು ವ್ಯಗ್ರವಾಗಿದ್ದಷ್ಟು ಹೆಚ್ಚಿನ ಮರ್ಯಾದೆ. ಅದು ಕಾಡಿನ ನಿಯಮ. ಸುಮ್ಮನೆ ಒಮ್ಮೆ ಗ್ರ್ರ್ರ್ ಅಂದರೆ ಸಾಕು. ನಾನು ಹೋಗಬೇಕಾದ ದಾರಿಯಲ್ಲಿ ಯಾರೂ ಅಡ್ಡಿ ನಿಲ್ಲುತ್ತಿದ್ದಿಲ್ಲ. ರಾಜಕುಮಾರನಾಗಿದ್ದ ನಾನು ಕ್ರಮೇಣ ರಾಜನೇ ಆಗಿಬಿಟ್ಟೆ.
ಹುಲಿಗಳು ಅದೃಷ್ಟ ಅಥವಾ ಹಣೆಬರಹಗಳನ್ನು ನಂಬಿ ಬದುಕುವುದಿಲ್ಲ. ಎಲ್ಲ ಸರಿಯಿತ್ತು. ಈ ಮನುಷ್ಯರನ್ನು ಅಕಸ್ಮಾತ್ ಆಗಿ ಭೇಟಿ ಆಗುವವರೆಗೆ. ಒಬ್ಬನಲ್ಲ, ಹಲವರು ಇದ್ದರು. ಅವರು ದೊಡ್ಡ ಕೋತಿಗಳ ತರಹ ಕಾಣುತ್ತಿದ್ದರು. (ನೀವು ನನಗೆ ಬೆಕ್ಕಿನ ಜಾತಿ ಅಂದದ್ದು ನೆನಪು ಮಾಡಿಕೊಳ್ಳಿ). ಆದರೆ ಅವರು ಮರದಿಂದ ಮರಕ್ಕೆ ಹಾರುತ್ತಿದ್ದಿಲ್ಲ. ನೋಡಲು ತುಂಬಾ ನಿಶ್ಶಕ್ತರ ಹಾಗೆ ಕಾಣುತ್ತಿದ್ದರು. ಅವರನ್ನು ತಿನ್ನಲು ನನಗೇನು ಇಷ್ಟವಿದ್ದಿಲ್ಲ. ಆದರೆ ನನಗೆ ಅವರನ್ನು ನೋಡಿ ಅಸಹನೆಯಿಂದ ರೇಗುವಂತೆ ಆಗಿತ್ತು. ಅವರನ್ನು ಓಡಿಸುವ ಉದ್ದೇಶದಿಂದ ನಾನು ಒಬ್ಬನ ಮುಂದೆ ಧುತ್ತನೆ ನಿಂತು, ಮೆಲ್ಲಗೆ ಗುರ್ರ್ ಎಂದೆ. ಅವನು ಗಲಾಟೆ ಮಾಡಿ ಎಲ್ಲ ಜನರ ಗಮನ ಸೆಳೆಯುವಂತೆ ಮಾಡಿಬಿಟ್ಟ. ಮನುಷ್ಯರ ಗುಂಪು ಅಲ್ಲಿ ಸೇರತೊಡಗಿದ್ದಂತೆ ನಾನು ಅಲ್ಲಿಂದ ಜಿಗಿದು ಮರೆಯಾದೆ. ಹೆದರಿಕೆಯಿಂದಲ್ಲ, ಅಸಹ್ಯದಿಂದ, ಜಿಗುಪ್ಸೆಯಿಂದ.
ಆ ಘಟನೆ ನಡೆದಾಗಿಂದ, ನನ್ನನ್ನು ಮನುಷ್ಯ ಕಣ್ಣುಗಳು ಗಮನಿಸುವುದು ನನ್ನ ಅರಿವಿಗೆ ಬರುತ್ತಿತ್ತು. ನನ್ನ ಮತ್ತು ಮನುಷ್ಯರ ಮುಖಾ-ಮುಖಿ ಸ್ವಲ್ಪೇ ದಿನಗಳಲ್ಲಿ ಮತ್ತೆ ಆಯಿತು. ಅವನು ಗೋಪುರ ಒಂದರ ಮೇಲೆ ಒಂದು ಉದ್ದನೆಯ ಕೋಲೊಂದನ್ನು ನನಗೆ ಗುರಿ ಮಾಡಿ ಹಿಡಿದಿದ್ದ. ತಡೆಯಲಾರದ ಕೋಪ ನನ್ನ ನೆತ್ತಿಗೇರಿ, ಅವನ ಮೇಲೆ ಆ ಕ್ಷಣದಲ್ಲೇ ಹಾರಿದೆ. ಏನಾಶ್ಚರ್ಯ! ಅವನು ಹಿಡಿದ ಕೋಲಿನಿಂದ ಬೆಂಕಿಯ ಉಂಡೆ ಸಿಡಿದು ನನ್ನ ಹಿಂಗಾಲನ್ನು ಸೇರಿತು. ಅಪಾರ ನೋವಿನಿಂದ ಕೆಳಗೆ ಬಿದ್ದ ನನಗೆ ಮತ್ತೆ ಓಡಲು ಆಗಲಿಲ್ಲ. ಕೆಲ ಸಮಯದಲ್ಲೇ ನನ್ನ ಪ್ರಜ್ಞೆ ಕಳೆದು ಹೋಯಿತು.
ಎಷ್ಟೋ ದಿನಗಳ ದೀರ್ಘ ನಿದ್ದೆಯ ನಂತರ ನನಗೆ ಎಚ್ಚರವಾದಾಗ ನಾನು ಕಾಡಿನಲ್ಲಿ ಇದ್ದಿಲ್ಲ. ಅದು ಒಂದು ಚಿಕ್ಕ ನಡುಗಡ್ಡೆಯ ಹಾಗೆ ತೋರುತ್ತಿತ್ತು. ಅದರ ಸುತ್ತ ಆಳವಾಗಿ ತೋಡಿಬಿಟ್ಟಿದ್ದರು. ಅದರಾಚೆಗೆ ಎತ್ತರದ ಗೋಡೆ ಮತ್ತು ಅದರ ಮೇಲೆ ಕಬ್ಬಿಣದ ಕಂಬಿಗಳು. ಎಷ್ಟು ಚಿಕ್ಕ ಜಾಗ. ಎರಡು ಸಲ ನೆಗೆದರೆ ಆ ಪ್ರದೇಶ ಮುಗಿದೇ ಹೋಗುತ್ತಿತ್ತು. ಸುಮ್ಮನೆ ನಡೆಯಬೇಕು. ಅಲ್ಲಿಯೇ ಸುತ್ತಬೇಕು. ನಾನು ಅಲ್ಲಿ ಬಂದಿಯಾಗಿದ್ದೇನೆ ಎನ್ನುವುದು ಅರಿವಾಯಿತು. ಹತ್ತಿರದಲ್ಲಿ ಇತರ ಪ್ರಾಣಿ-ಪಕ್ಷಿಗಳ ಸದ್ದು ಕೇಳಿಬರುತ್ತಿತ್ತು. ಅವರುಗಳು ಕೂಡ ನನ್ನ ಹಾಗೆ ಬಂದಿಯಾಗಿರಬಹುದು ಎನ್ನಿಸಿತು. ಭೂಮಿ ಮೇಲೆ ಇಂತಹ ಜಾಗವೂ ಉಂಟೆ? ನೆಮ್ಮದಿಯ ವಿಷಯ ಎಂದರೆ ಊಟ ಮಾತ್ರ ಪ್ರತಿ ದಿನ ಇದ್ದಲ್ಲಿಗೆ ಬರುತ್ತಿತ್ತು. ಮೈ-ಕೈಗೆ ಕೆಲಸವಿಲ್ಲದೇ, ಬೇಟೆಯಾಡದೆ, ಉಗುರುಗಳಿಂದ, ಕೋರೆ ಹಲ್ಲುಗಳಿಂದ ಪ್ರಾಣಿಗಳ ಚರ್ಮವನ್ನು ಹರಿಯದೆ ಪ್ರತಿ ದಿನ ಅದೇ ಸಮಯಕ್ಕೆ ಹಾಕಿದ ಮಾಂಸ ತಿನ್ನುವುದು ಬೇಸರದ ಸಂಗತಿ. ಪ್ರತಿ ದಿನ ಊಟ ಸಿಗದೇ ಇದ್ದರು ಕಾಡಿನ ಅನಿಶ್ಚಿತ ಬದುಕು ಚೆನ್ನಾಗಿತ್ತು ಅನಿಸುತ್ತಿತ್ತು.
ಗೋಡೆಯ ಆಚೆಗಿನ ಕಬ್ಬಿಣದ ಸರಳಿನ ಹಿಂದೆ ನಿಂತು ಮನುಷ್ಯರು ನನ್ನನ್ನು ನೋಡಲು ಬರುತ್ತಾರೆ. ಈ ಪ್ರಪಾತವನ್ನು ಜಿಗಿಯುವುದು ನನಗೆ ಕಷ್ಟ ಏನಲ್ಲ. ಆದರೆ ಕಬ್ಬಿಣದ ಸರಳುಗಳು ನನ್ನನ್ನು ಘಾಸಿಗೊಳಿಸುತ್ತವೆ ಎನ್ನುವ ಅರಿವು ನನಗಿದೆ. ಅದಿಲ್ಲದಿದ್ದರೆ ಈ ಮನುಷ್ಯರನ್ನು ಹುರಿ ಮುಕ್ಕಿ ಬಿಡುತ್ತಿದ್ದೆ. ಅವರು ನನ್ನನ್ನು ದಿಟ್ಟಿಸಿ ನೋಡುವುದು ನನಗೆ ಇಷ್ಟ ಆಗುವುದಿಲ್ಲ. ಆದರೆ ನನಗೆ ಬೇರೆ ದಾರಿ ಇಲ್ಲ. ಅದಕ್ಕೆ ಅವರ ಮೇಲೆ ಗಮನ ಹರಿಸಲು ಹೋಗುವುದಿಲ್ಲ. ಅತ್ತಿತ್ತ ತಿರುಗುತ್ತೇನೆ. ಇಲ್ಲವೇ ಮಲಗಿ ನಿದ್ದೆ ಹೊಡೆಯುತ್ತೇನೆ.
ನೋಡಿ, ಯಾವ ಹುಲಿಯೂ ಡೈರಿ ಬರೆಯುವುದಿಲ್ಲ. ಓದುವುದು. ಬರೆಯುವುದು ಮಾಡಲಿಕ್ಕೆ ಅವುಗಳು ಭೂಮಿಗೆ ಬಂದಿಲ್ಲ. ಆದರೆ ಬೇಟೆಯಾಡಲು ಅವಕಾಶ ಇಲ್ಲದ ನನಗೆ ಹೊತ್ತು ಕಳೆಯುವುದೆಂತು? ನಿರುತ್ಸಾಹದ ಬದುಕು ನನ್ನದಾಗಿದೆ. ಬೇಟೆ ಪ್ರಾಣಿಗಳನ್ನು ಕೊಲ್ಲದಿದ್ದರೆ ಸಮಯವನ್ನಾದರೂ ಹೇಗಾದರೂ ಕೊಲ್ಲಬೇಕಲ್ಲವೇ? ಅದಕ್ಕೋಸ್ಕರ ಈ ಡೈರಿ ಬರೆಯುತ್ತಿದ್ದೇನೆ ಅಷ್ಟೇ. ಹಳೆಯ ನೆನಪುಗಳನ್ನು ಮೆಲಕು ಹಾಕುತ್ತ ಹೇಗೋ ಜೀವನ ನೂಕಬೇಕು. ಮೃಗಾಲಯದಲ್ಲಿ ಪ್ರಾಣಿಗಳು ಹೆಚ್ಚಿನ ಕಾಲ ಬದುಕುತ್ತವಂತೆ. ಅದಕ್ಕೆ ಸ್ವಾತಂತ್ರದ ಬೆಲೆ ತೆರಬೇಕು ನೋಡಿ. ಹಿಂದೆ ಮುಂದೆ ನೋಡದೆ ಪ್ರಾಣಿಗಳನ್ನು ಸಿಗಿದು ಹಾಕುತ್ತಿದ್ದ ನನಗೆ ಅಭಿಪ್ರಾಯ ಹಂಚಿಕೊಳ್ಳುವುದು ಏನಂತಲೇ ಗೊತ್ತಿರಲಿಲ್ಲ. ಹೆಚ್ಚಿಗೆ ವಿಚಾರ ಮಾಡುವುದು ನನಗೆ ಒಗ್ಗುವುದಿಲ್ಲ. ಇಂದು ಮಾತನಾಡಿದ್ದು ಜಾಸ್ತಿಯೇ ಆಯಿತು. ನಾನು ಸ್ವಲ್ಪ ಮಲಗುತ್ತೇನೆ.