"ಕುಲ ಕುಲ ಕುಲವೆಂದು ಹೊಡೆದಾಡದಿರಿ,
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ, ಬಲ್ಲಿರಾ?"
-ಕನಕದಾಸ
ಜಾತಿ-ವರ್ಗ ಬೇಧಗಳಿದ್ದರಿಂದಲೇ ಕನಕದಾಸರು ಈ ಗೀತೆ ರಚಿಸಿದರಲ್ಲವೇ? ಈ ಜಾತಿ ಪದ್ದತಿ ತುಂಬಾನೇ ಹಳೆಯದು. ವೇದ, ಪುರಾಣಗಳಲ್ಲಿ ಇದರ ಉಲ್ಲೇಖವಿದೆ.
ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರಾತ್ ದ್ವಿಜ ಉಚ್ಯತೇ
- ಸ್ಕಂದ ಪುರಾಣ
ಹುಟ್ಟಿನಿಂದಲ್ಲ, ಸಂಸ್ಕಾರದಿಂದ ಬ್ರಾಹ್ಮಣ ಎಂದು ನಮ್ಮ ಪುರಾಣಗಳು ಹೇಳುತ್ತವೆ. ಆದರೆ ಹುಟ್ಟಿನಿಂದಲೇ ಜಾತಿಯನ್ನು ಪುರಸ್ಕರಿಸುವ ಪದ್ಧತಿಯೇ ಜನ ಸಾಮಾನ್ಯರಲ್ಲಿ ಬಳಕೆಗೆ ಬಂತು. ಅಷ್ಟೇ ಅಲ್ಲದೆ ಒಳ ಪಂಗಡಗಳು ಹುಟ್ಟಿಕೊಂಡವು. ಮತ್ತು ಅವುಗಳು ಆಯಾ ಧರ್ಮ ಸಂಸ್ಥಾಪಕರ ವಿಚಾರಗಳಿಗೆ ವಿರುದ್ಧವಾಗಿದ್ದವು.
ಬುದ್ಧನ ವಿಚಾರಗಳಿಗೆ ವಿರುದ್ಧವಾಗಿ ಬೌದ್ಧ ಧರ್ಮದಲ್ಲಿ ಹೀನಾಯಾನ ಮತ್ತು ಮಹಾಯಾನ ಎನ್ನುವ ಎರಡು ಪಂಗಡಗಳಾದವು. ಕ್ರಿಶ್ಚಿಯನ್ ಧರ್ಮ ಶುರು ಆದಾಗ ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ ಅನ್ನುವ ಬೇಧ ಭಾವ ಇರಲಿಲ್ಲ. ಹಾಗೆಯೆ ಮುಸ್ಲಿಮರಲ್ಲಿ ಶಿಯಾ-ಸುನ್ನಿ ಎನ್ನುವ ಪಂಗಡಗಳಿರಲಿಲ್ಲ. ಕಾಲ ಕಳೆದ ಹಾಗೆ ಬ್ರಾಹ್ಮಣರಲ್ಲಿ ಕೂಡ ಶೈವ-ವೈಷ್ಣವ ಪಂಗಡಗಳು ಹುಟ್ಟಿಕೊಂಡವು.
ಜಾತಿ ಅಸಮಾನತೆಯನ್ನು ವಿರೋಧಿಸಿ ಹೊಸ ಧರ್ಮವನ್ನು ಹುಟ್ಟು ಹಾಕಿದಾತ ಬಸವಣ್ಣ. ದಲಿತರ ಮನೆಯಲ್ಲಿ ಊಟ ಮಾಡಿ, ಅಂತರಜಾತಿಯ ವಿವಾಹ ಮಾಡಿಸಿ, ರಾಜನ ಕೆಂಗಣ್ಣಿಗೆ ಗುರಿಯಾದಾತ ಆತ. ಆದರೆ ಇಂದು ನೋಡಿ. ಎಷ್ಟು ಜನ ಲಿಂಗಾಯತರು ಅಂತರಜಾತಿಯ ವಿವಾಹ ಒಪ್ಪಿಕೊಳ್ಳುತ್ತಾರೆ? ಲಿಂಗಾಯತರು, ಲಿಂಗಾಯತ ಮಠಗಳು ಕಟ್ಟಿದ ಸಂಸ್ಥೆಗಳು ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡುತ್ತವೆ. ಅದು ಜಾತಿ-ಬೇಧ ಮಾಡದೆ ದಾಸೋಹ ನಡೆಸಿದ ಬಸವಣ್ಣನ ಇಚ್ಛೆಗೆ ವಿರೋಧವಾಗಿಲ್ಲವೇ? ಜಾತಿಗಳು ತರುವ ಅಸಮಾನತೆಯನ್ನು ತೊಡೆಯಲು ಕಟ್ಟಿದ ಲಿಂಗಾಯತ ಧರ್ಮದಲ್ಲಿ ಇಂದಿಗೆ ಅನೇಕ ಒಳ ಪಂಗಡಗಳಿವೆ.
ಪ್ರಪಂಚದ ಎಲ್ಲ ಜಾತಿಗಳು ಅವುಗಳ ಸಂಸ್ಥಾಪಕರ ಮೂಲ ವಿಚಾರಗಳಿಗೆ ಅನುಗುಣ ಆಗಿರದೆ, ಸಮಾಜದ ಜನರ ಅನುಕೂಲಕ್ಕೆ ತಕ್ಕಂತೆ ಬದಲಾಗಿವೆ. ಇರುವ ಜಾತಿಗಳಲ್ಲಿಯೇ ಒಳ ಪಂಗಡಗಳಾಗಿವೆ. ಹಾಗಾಗಿ ಜಾತಿ ಪದ್ದತಿ ಮತ್ತು ಮೇಲು-ಕೀಳು ಭಾವನೆಗಳು ದೂರವಾಗುವುದೆಂತು? ಅನೇಕ ಸಾಧು-ಸಂತರ, ಶಂಕರ-ಬಸವ-ಶರೀಫರಂತಹ ಸಮಾಜ ಸುಧಾರಕರ ಪ್ರಯತ್ನಗಳು ಅವರು ಬಯಸಿದ ನಿಜ ಬದಲಾವಣೆ ತರಲೆ ಇಲ್ಲ.
ಅಷ್ಟೆಲ್ಲ ಜಾತಿ ಮೇಲು-ಕೀಳು ಎಂದು ಹೊಡೆದಾಡುವ ಜನರ ಕೊನೆ ಮಾತ್ರ 'ಸತ್ಯ ಹರಿಶ್ಚಂದ್ರ ' ಚಿತ್ರದ 'ಕುಲದಲ್ಲಿ ಮೇಲ್ಯಾವುದೋ' ಗೀತೆಯ ಹಾಗೆ:
"ಇಟ್ಟ ಗಂಧಾ ಬೂದಿ ನಾಮ
ಚಟ್ಟ ಕಟ್ಟಲು ನಿರನಾಮಾ
ಉತ್ತಮ ಮಧ್ಯಮ ಅಧಮರೆಲ್ಲರು
ಸತ್ತಮೇಲೆ ಸಮರಾದಾರು
ಮಸಣದಲ್ಲಿ ಈ ವೀರಬಾಹುವ
ಕೈಯ ಮೇಲ್ಗಡೆ ಬೂದಿಯಾದರು
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ"
No comments:
Post a Comment