Thursday, December 10, 2020

ಹೆಣ್ಣು ಪ್ರಕೃತಿ ಮಾತೆ ಆದರೆ ಅತ್ತೆಯ ಪಾತ್ರ ಮಾತ್ರ ಏಕೆ ಬೇರೆ?

ಸುಮಾರು ನಾಲ್ಕು ವರುಷಗಳ ಹಿಂದೆ ನಡೆದ ಘಟನೆ. ಅದು ನಮಗೆ ಎರಡನೇ ಮಗ ಹುಟ್ಟಿದ ಸಂದರ್ಭ. ಆಗ ನನ್ನ ಪತ್ನಿಯ ತವರೂರಾದ ಸಿರುಗುಪ್ಪದ ಹೆರಿಗೆ ಆಸ್ಪತ್ರೆ ಒಂದರಲ್ಲಿ ನಾವು ಸುಮಾರು ಒಂದು ವಾರ ಕಾಲ ಇದ್ದೆವು. ಆ ಆಸ್ಪತ್ರೆಯ ಕಟ್ಟಡದಲ್ಲಿ ತುಂಬಾ ಕಿರಿದೆನಿಸುವ, ಆರು ಅಡಿಗೊಂದಕ್ಕೆ ಎನ್ನುವಂತೆ ಹಲವಾರು ಕೋಣೆಗಳು. ಪಕ್ಕದ ಕೋಣೆಯಲ್ಲಿ ಮಾತನಾಡಿದರೆ ಕೇಳುವುದು ಅಷ್ಟೇ ಅಲ್ಲ, ಜೋರಾಗಿ ಉಸಿರಾಡಿದರೂ ಕೇಳಿಸುವಷ್ಟು ಹತ್ತಿರ. ಯಾರ ಕೋಣೆಯಲ್ಲಿ ಮಗು ಅಳುತ್ತಿದೆಯೋ ಅಥವಾ ಯಾರನ್ನು ಯಾರು ಮಾತನಾಡಿಸುತ್ತಿದ್ದರೋ ಎಂದು ಗೊಂದಲಕ್ಕೆ ಈಡಾಗುವ ಪರಿಸ್ಥಿತಿ. ಅಲ್ಲಿ ನನಗೆ ಪತ್ನಿ, ಮಗುವಿಗೆ ಔಷಧ ತಂದು ಕೊಡುವ, ಇಡ್ಲಿ ಕಟ್ಟಿಸಿಕೊಂಡು ಬರುವ, ಮಾತನಾಡಿಸಲು ಬಂದವರನ್ನು ಬಸ್ ನಿಲ್ದಾಣಕ್ಕೆ ಬಿಟ್ಟು ಬರುವ ಜವಾಬ್ದಾರಿ.


ಆ ವಾರದಲ್ಲಿ ಒಂದು ದಿನ ಮುಂಜಾನೆ ನಾನು ಆಸ್ಪತ್ರೆಗೆ ತಲುಪಿದಾಗ, ಒಂದು ಕೋಣೆಯಿಂದ ಹೆಣ್ಣು ಮಗಳೊಬ್ಬಳು ಅಳುತ್ತಿರುವುದು ಕೇಳಿ ಬರುತ್ತಿತ್ತು. ವಿಷಯ ಏನೆಂದು ವಿಚಾರಿಸಿದಾಗ, ಹಿಂದಿನ ರಾತ್ರಿ ಆದ ಹೆರಿಗೆಯಲ್ಲಿ ಅವಳ ಮಗುವು ಸತ್ತು ಹುಟ್ಟಿತ್ತು. ಒಂಬತ್ತು ತಿಂಗಳು ಕಾದು, ಮಗುವಿನ ಮುಖ ನೋಡುವ ಹಂಬಲ ಹೊತ್ತ ತಾಯಿಗೆ, ಮಗು ಸತ್ತಿರುವುದು ಆಘಾತಕಾರಿ ವಿಷಯವೇ ಸರಿ. ಆದರೆ ಅಷ್ಟೇ ಇರಲಿಲ್ಲ. ಅವಳಿಗೆ ಈ ತರಹ ಆಗಿದ್ದು ಎರಡನೇ ಬಾರಿ. ಒತ್ತಿಕೊಳ್ಳಲಾಗದ ದುಃಖ ಆ ಹೆಣ್ಣು ಮಗಳನ್ನು ಕಾಡಿದ್ದು ಆಸ್ಪತ್ರೆಯಲ್ಲಿ ಇದ್ದ ಎಲ್ಲರಿಗೂ ತಿಳಿದು ವಿಷಾದ ಭಾವ ಮೂಡಿತ್ತು. ಇಡೀ ಆಸ್ಪತ್ರೆಯೇ ಮಂಕಾಗಿ, ಅವಳದೊಂದೇ ಧ್ವನಿ ಕೇಳಿ ಬರುತಿತ್ತು. ಸ್ವಲ್ಪ ಸಮಯದಲ್ಲಿ ಅವಳ ದುಃಖದ ತೀವ್ರತೆ ಇನ್ನು ಹೆಚ್ಚಾಗತೊಡಗಿತು. ಅವಳ ಮೊದಲ ಮಗು ಸತ್ತಾಗ ಅವಳ ಅತ್ತೆ ಮಾಡಿದ ದೋಷಾರೋಪಗಳ ನೆನಪಾಗಿ ಅವಳ ಅಳು ತೀವ್ರವಾಗತೊಡಗಿತು. ಇನ್ನು ಮುಂದೇನು ಕಾದಿದೆಯೋ ಎನ್ನುವ ಚಿಂತೆ ಕಾಡಿ, ಮಗು ಸತ್ತ ದುಃಖಕ್ಕಿಂತ, ತನ್ನ ಅತ್ತೆಯನ್ನು ಹೇಗೆ ಎದುರಿಸುವುದೋ ಎನ್ನುವ ಭಯ ಅವಳನ್ನು ಕಂಗಾಲು ಮಾಡಿತ್ತು. ಪ್ರಕೃತಿ ಮಾತೆಗೆ ಸರಿ ಸಮನಾಗಿ ಸಲಹುವ ಹೆಣ್ಣು, ಅತ್ತೆಯ ಪಾತ್ರದಲ್ಲಿ ಮಾತ್ರ ಏಕೆ ಕ್ರೂರಿಯಾಗಿ ಬದಲಾಗುತ್ತಾಳೆ ಎನ್ನುವುದು ನನಗೆ ಅಂದಿಗೆ ಅರ್ಥವಾಗದೇ ಹೋಗಿತ್ತು. 


ಅಪರೂಪಕ್ಕೆ ಎನ್ನುವಂತೆ ಅತ್ತೆ-ಸೊಸೆಯ ಹೊಂದಾಣಿಕೆ ಕಂಡ ನಮಗೆ, ಅತ್ತೆ-ಸೊಸೆ ಜಗಳ ಎಲ್ಲರ ಮನೆ ಮಾತು ಎನ್ನುವಷ್ಟು ಸಾಮಾನ್ಯ ವಿಷಯ. ಮುಂದೆ ಹಲವಾರು ಮನಶಾಸ್ತ್ರದ ಪುಸ್ತಕಗಳನ್ನು ಓದಿಕೊಂಡಾಗ ನನಗೆ ಅರ್ಥವಾಗಿದ್ದಿಷ್ಟು. ಮಗಳು, ಸೋದರಿ, ಪತ್ನಿ ಹೀಗೆ ಹಲವಾರು ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸುವ ಹೆಣ್ಣು, ತನ್ನ ತಾಯಿಯ ಪಾತ್ರ ಸ್ವಲ್ಪ ಹೆಚ್ಚೆ ಅನ್ನಿಸುವ ಹಾಗೆ ತನ್ನ ಮಕ್ಕಳನ್ನು ಮಮತೆಯಿಂದ, ತನ್ನ ದೇಹದ ಅವಿಭಾಜ್ಯ ಅಂಗ ಎನ್ನುವ ಹಾಗೆ ಬೆಳೆಸುತ್ತಾಳೆ. ಮುಂದೆ ಅವಳ ಮಗನ ಜೊತೆ ಬಾಳಲು ಬಂದ ಇನ್ನೊಂದು ಹೆಣ್ಣು ಅವಳಿಗೆ ಇಷ್ಟ ಆಗದೆ ಹೋದರೆ, ಅವಳು ತನ್ನ ಪ್ರೀತಿಯಲ್ಲಿ ಪಾಲು ಕೇಳಲು ಬಂದ ಪ್ರತಿಸ್ಪರ್ಧಿ ಎನ್ನುವ ಭಾವ ಮೂಡುತ್ತದೆ. ಅಲ್ಲಿಂದ ಶುರುವಾಗುವ ಅಸಮಾಧಾನ ಎಲ್ಲಿಗೆ ಬೇಕಾದರೂ ತಲುಪಬಹುದು. ತನ್ನ ಮಕ್ಕಳ ದೊಡ್ಡ ದೊಡ್ಡ ತಪ್ಪನ್ನೇ ಕ್ಷಮಿಸಿಬಿಡುವ ಹೆಣ್ಣು, ಸೊಸೆಯ ಚಿಕ್ಕ ಪುಟ್ಟ ತಪ್ಪುಗಳನ್ನು ಕ್ಷಮಿಸಿಬಿಡುವುದರಲ್ಲಿ ಸೋಲುತ್ತಾಳೆ. ಅದುವರೆಗೆ ಕಂಡಿರದ ಅವಳ ಇನ್ನೊಂದು ಮುಖದ ಪರಿಚಯವಾಗುತ್ತ ಹೋಗುತ್ತದೆ. ಒಬ್ಬ ಕೆಟ್ಟ ಅತ್ತೆಯ ಕೈಯಲ್ಲಿ ಪಳಗಿದ ಸೊಸೆ, ಮುಂದೆ ಇನ್ನೊಬ್ಬ ಕೆಟ್ಟ ಅತ್ತೆಯಾಗಿ ಬದಲಾಗುವ ಸಂಭವನೀಯತೆ ಹೆಚ್ಚು ಎನ್ನುತ್ತದೆ ಮನಶಾಸ್ತ್ರ. ಪ್ರತಿಯೊಂದು ಕುಟುಂಬದಲ್ಲಿ ಹೀಗೆ ಎಂದು ಹೇಳಲು ಆಗದಿದ್ದರೂ, ಅತ್ತೆ-ಸೊಸೆಯ ಅಸಮಾಧಾನದ ಪರಂಪರೆ ಮುಂದುವರೆದುಕೊಂಡು ಹೋಗುತ್ತದೆ.


ಇದು ಬರಿ ಸೊಸೆಗೆ ಸೀಮಿತವಲ್ಲ. ದೌರ್ಜನ್ಯಕ್ಕೆ ಒಳಗಾದ ಕೆಲವರು ಮುಂದೆ ಅದರಲ್ಲೇ ಒಂದು ವಿಕೃತಿಯ ಸಂತೋಷ ಕಂಡುಕೊಳ್ಳುವುದು, ಒಬ್ಬ ಸ್ಯಾಡಿಸ್ಟ್ ಆಗಿ ಬದಲಾಗುವುದು ನಾವು ಗಮನಿಸಬಹುದಾದ ಸಂಗತಿ. ಬಹುಶ ಇದನ್ನು ಕಂಡೆ ಗಾಂಧಿ ಹೇಳಿದ್ದು, ಯಾರೋ ನಿಮ್ಮ ಕಣ್ಣನ್ನು ಕಿತ್ತರು ಎಂದು ನೀವು ಇನ್ನೊಬ್ಬರ ಕಣ್ಣು ಕಿತ್ತರೆ, ಜಗತ್ತಿನ ತುಂಬೆಲ್ಲ ಕುರುಡರೇ ತುಂಬಿರುತ್ತಾರೆ ಎಂದು. ಈ ದ್ವೇಷದ ಸರಪಳಿ ತುಂಡಾಗಬೇಕೆಂದರೆ, ನಮಗಾದ ನೋವಿಗೆ ಇನ್ನೊಬರನ್ನು ಬಲಿ ತೆಗೆದುಕೊಳ್ಳುವುದೇ ಇರುವುದು. ಅದು ಸಾಧ್ಯವೇ? ಏಕಾಗಬಾರದು ಎನ್ನುವುದು ನನ್ನ ಅಭಿಮತ. ಹಾಗೇನಾದರು ಆದಲ್ಲಿ, ದೂರದರ್ಶನದಲ್ಲಿ ಅತ್ತೆ-ಸೊಸೆ ಪ್ರೀತಿಯನ್ನು ಬಿಂಬಿಸುವ ಧಾರಾವಾಹಿಗಳು ತುಂಬಿ ಹೋಗಿರುತ್ತವೆ. ಆ ಭಾಗ್ಯ ನಮ್ಮ ಕಾಲಕ್ಕೆ ಬರಬಹುದೇ?

Wednesday, December 9, 2020

ಅವರು ಹೀಗೆ ಮಾಡಬಾರದಾಗಿತ್ತು

'ಛೆ!  ಅವರು ಹೀಗೆ ಮಾಡಬಾರದಾಗಿತ್ತು" ಎಂದು ಕೆಲವೊಂದು ಸಲ ನಾವು ಹೇಳುತ್ತಿರುತ್ತಿವೆ. ಯಾರೋ ಹಾಗೆ ಮಾಡಿದ್ದರೆ ನಾವು ಚಿಂತೆ ಮಾಡುತ್ತಿರಲಿಲ್ಲ. ಆದರೆ ನಮ್ಮ ಬಂಧು, ಸ್ನೇಹಿತರು, ಹತ್ತಿರದವರು ನಾವು ಅಂದುಕೊಳ್ಳದ ರೀತಿಯಲ್ಲಿ ವರ್ತಿಸಿರುತ್ತಾರೆ. ಅದು ನಮಗೆ ಬೇಸರ ಮೂಡಿಸಿ ಈ ಮಾತು ನಮ್ಮಿಂದ ಹೊರಬಿದ್ದಿರುತ್ತದೆ.


ಅವರು ಏಕೆ ಹಾಗೆ ಮಾಡಿದರು ಅನ್ನುವುದಕ್ಕೆ ಹಲವಾರು ಕಾರಣಗಳಿರಬಹುದು. ಆಕಸ್ಮಿಕವೋ, ಗೊತ್ತಿಲ್ಲದೆಯೋ, ಪರಿಸ್ಥಿತಿಯ ಒತ್ತಡದಿಂದಲೋ ಅಥವಾ ಗೊತ್ತಿದ್ದೂ ನಿಮಗೆ ನೋವುಂಟು ಮಾಡಲು ಎಂದೇ ಅವರು ಹಾಗೆ ಮಾಡಿರಬಹುದು. ನೀವು ಅವರನ್ನೇ ಕೇಳಿ ನೋಡಿ, ಆಗ ಪ್ರಾಮಾಣಿಕ, ಸಮಂಜಸ ಎನ್ನುವ ಉತ್ತರ ಬರದಿದ್ದರೆ ಅದು ನೀವು ಜಾಗೃತ ಆಗುವ ಸಮಯ. ನಿಮ್ಮನ್ನು ಬಲಿಪಶು ಮಾಡಲೆಂದೇ ಅಥವಾ ನಿಮ್ಮನ್ನು ದುರುಪಯೋಗ ಮಾಡಿಕೊಳ್ಳಲೆಂದೇ ಅವರು ಹಾಗೆ ವರ್ತಿಸಿದ್ದರೆ,  ನಿಮಗೆ ನೀವು ಬೇರೆ ಪ್ರಶ್ನೆಗಳನ್ನು ಕೇಳಿಕೊಳ್ಳಲೇಬೇಕು ಎನ್ನುವ ಸಮಯ.


ಅವರು ಹೇಗೆ ವರ್ತಿಸಬೇಕಿತ್ತು ಎನ್ನುವದಕ್ಕಿಂತ, ಆಗ ನೀವು ಏನು ಮಾಡಬಹುದಾಗಿತ್ತು ಎನ್ನುವ ವಿಚಾರವೇ ಹೆಚ್ಚು ಉಪಯೋಗಕರ. ಅವರಿಗೆ ತಮಗೆ ಹೇಗೆ ಬೇಕು ಹಾಗೆ ವರ್ತಿಸಿದರು. ಅಲ್ಲಿ ನೀವು ಮಾಡುವುದು ಏನು ಇಲ್ಲ. ಆದರೆ ಅದು ಪುನರಾವರ್ತನೆ ಆಗುವುದಿಲ್ಲ ಎಂದು ಏನು ಗ್ಯಾರಂಟಿ? ಹಾಗಾಗಿ, ಅವರ ಆ ರೀತಿಯ ವರ್ತನೆಗೆ ಮೂಲ ಕಾರಣ ಹುಡುಕುವುದಕ್ಕಿಂತ, ನೀವು ಬೇರೆಯ ಕೆಲಸಕ್ಕೆ ತೊಡಗಬೇಕು. ಆ ಪರಿಸ್ಥಿತಿಯಲ್ಲಿ ನಿಮಗಿರುವ ಆಯ್ಕೆಗಳು ಏನು? ನಿಮ್ಮ ಯಾವ ಪ್ರತಿಕ್ರಿಯೆ ನಿಮ್ಮನ್ನು ಬಲಿಪಶು ಆಗದಂತೆ ತಡೆಯುತ್ತದೆ ಎಂದು ವಿಚಾರ ಮಾಡಿ ನೋಡಿ. ನಿಮಗೆ ಅವರಿಂದಾಗುವ ಹಾನಿಯನ್ನು ಹೇಗೆ ಕಡಿಮೆ ಮಾಡಬಹುದು ಎನ್ನುವ ಕಡೆಗೆ ಲಕ್ಷ್ಯ ಹರಿಸಿ. ನೀವು ನೀಡುವ ಪ್ರತಿಕ್ರಿಯೆ ನೀವು ಮೂಕ ಪ್ರೇಕ್ಷಕರಾಗುವುದನ್ನು ತಪ್ಪಿಸಿ, ಪರಿಸ್ಥಿತಿ ಮತ್ತೆ ನಿಮ್ಮ ಹತೋಟಿಗೆ ಸಿಗುವ ಪ್ರಕ್ರಿಯೆ ಆಗಿರಬೇಕು.


ಪ್ರತಿಯೊಂದು ಸಲ ನೀವು ಗೆದ್ದೇ ಬಿಡುವಿರಿ ಎಂದೇನಿಲ್ಲ. ಆದರೆ ನೀವೀಗ ಮೂಕ ಪ್ರೇಕ್ಷಕರಲ್ಲ, ನೀವೂ ಒಬ್ಬ ಆಟಗಾರರು. ಆಟದಲ್ಲಿನ ಪ್ರತಿಯೊಬ್ಬರ ಮೇಲಿನ ನಿಮ್ಮ ನಿಗಾ, ಅವರ ನಡೆಯನ್ನು ಮೊದಲೇ ಊಹಿಸುವಂತೆ ಮಾಡುತ್ತದೆ. ಅವರ ಪಟ್ಟುಗಳ ಅಂದಾಜು ನಿಮಗೆ ಸಿಗತೊಡಗುತ್ತದೆ. ಅವರು ಹಿಂದೆ ನಿಮಗೆ ಉಂಟು ಮಾಡಿದ್ದ ಆಶ್ಚರ್ಯ ನಡೆಗೆ ಈಗ ಅವಕಾಶವೇ ಇಲ್ಲ. ನಿಮ್ಮನ್ನು ಸುಲಭದಲ್ಲಿ ಸಿಕ್ಕಿಸಿ, ನಿಮಗೆ ನೋವುಂಟು ಮಾಡುವ ಅವರ ಉದ್ದೇಶಗಳಿಗೆ ನೀವು ನೀಡುವ ಪ್ರತಿರೋಧ ನಿಮ್ಮನ್ನು ರಕ್ಷಿಸುತ್ತದೆ. ಈ ವಿದ್ಯೆ ನಿಮಗೆ ಕೈಗತವಾದಾಗ, ನೀವು ಇತರೆ ಬಲಿಪಶುಗಳಿಗೆ ಪರಿಸ್ಥಿತಿಯ ತಿಳುವಳಿಕೆ ನೀಡಿ ಎಚ್ಚರ ಮಾಡಿದರೆ ಆಗ ನೀವೇ ಒಬ್ಬ ಹೀರೋ. ನೀವು ನಿಸ್ಸಹಾಯಕರಲ್ಲ ಎನ್ನುವ ಸಂದೇಶ ಸ್ಪಷ್ಟವಾಗಿ ತಲುಪಿದರೆ ಸಾಕು. ನಿಮ್ಮ ಹಿತ ಶತ್ರುಗಳ ಆಟ ಕಳೆಗುಂದುತ್ತದೆ. 


ನೆನಪಿಡಿ, ಅವರು ಏನು ಮಾಡಿದರು ಎನ್ನುವುದು ಮುಖ್ಯವಲ್ಲ, ನೀವು ಹೇಗೆ ಪ್ರತಿಕ್ರಿಯೆ ನೀಡಿದಿರಿ ಎನ್ನುವುದೇ ಮುಖ್ಯ. ಇನ್ನೊಮ್ಮೆ ಯಾವಾಗಾದರೂ "ಅವರು ಹೀಗೆ ಮಾಡಬಾರದಾಗಿತ್ತು" ಅನ್ನಿಸಿದರೆ, ಅದರಿಂದ ನೀವು ಕಲಿತದ್ದು ಏನು ಎಂದು ತೀರ್ಮಾನಿಸಿ ಮತ್ತು ಇನ್ನೊಮ್ಮೆ ಹಾಗೆ ಆಗುವ ಅವಕಾಶ ನೀಡಬೇಡಿ.

Tuesday, December 8, 2020

ಅಜರಾಮರ ಹೈಡ್ರಾ; ಪಾರ್ಕಿನ್ಸನ್ ವಾಸನೆ

'Invisibilia' ಎನ್ನುವ podcast ನಲ್ಲಿ ಕೇಳಿದ ಎರಡು ಅಧ್ಯಾಯಗಳು ( 'An Unlikely Superpower' on Parkinson Disease and 'The Reluctant Immortalist' on Hydra) ವಿಜ್ಞಾನದ ಹೊಸ ವಿಷಯಗಳನ್ನು ತಿಳಿಸಿಕೊಟ್ಟವು. ಅವುಗಳ ಸಂಕ್ಷಿಪ್ತ ಸಾರಾಂಶ ಇಲ್ಲಿದೆ.


ಪತ್ನಿ ಮೂಸಿ ನೋಡಿ ಕಂಡು ಹಿಡಿದ ರೋಗ:

ಸ್ಕಾಟ್ಲೆಂಡ್ ನಲ್ಲಿ ಒಂದು ಸುಂದರ ಕುಟುಂಬ, 'ಜಾಯ್' ಮತ್ತು ಅವಳ ಪತಿ 'ಲೆಸ್'. ಅವರಿಬ್ಬರೂ ಕಾಲೇಜು ಓದುತ್ತಿರುವಾಗ ಪ್ರೇಮಿಸಿ ಮದುವೆಯಾಗಿದ್ದು. 'ಲೆಸ್' ಡಾಕ್ಟರ್ ಆದರೆ, 'ಜಾಯ್' ಆಗಿದ್ದು ನರ್ಸ್. ಆ ದಂಪತಿಗೆ ಮೂರು ಜನ ಮಕ್ಕಳು.


ಒಂದು ದಿನ ಮನೆಗೆ ಸೇವೆಯಿಂದ ವಾಪಸ್ಸಾದ ಪತಿ ಲೆಸ್ ನ ಮೈಯಿಂದ ಒಂದು ತರಹದ ವಾಸನೆ ಬರುವುದು ಪತ್ನಿ ಜಾಯ್ ಗಮನಿಸಿದಳು. ಆಸ್ಪತ್ರೆಯ ಯಾವುದೊ ವಾಸನೆ ಮೆಟ್ಟಿಕೊಂಡಿರಬಹುದೆಂದು ಪತಿಯನ್ನು ಸ್ನಾನದ ಮನೆಗೆ ದೂಡಿದಳು. ಆದರೂ ಅದು ಕಡಿಮೆಯಾಗಲಿಲ್ಲ. ದಿನ ಕಳೆದಂತೆ  ವಾಸನೆಯ ಘಾಟು ಹೆಚ್ಚುತ್ತಾ ಹೋಯಿತು ಹಾಗೆಯೇ ಲೆಸ್ ನ ವರ್ತನೆಯಲ್ಲೂ ಬದಲಾವಣೆಗಳು ಕಾಣಲಾರಂಭಿಸಿದವು. ಒಂದು ದಿನ ರಾತ್ರಿ ಲೆಸ್ ಸಹನೆ ಕಳೆದುಕೊಂಡು ವಿಚಿತ್ರವಾಗಿ ವರ್ತಿಸಿದಾಗ ಆಸ್ಪತ್ರೆಗೆ ತಪಾಸಣೆಗೆ ಹೋದರು. ಅಲ್ಲಿ ಲೆಸ್ ಗೆ ಪಾರ್ಕಿನ್ಸನ್ ಕಾಯಿಲೆ (ಮೆದುಳು ಮತ್ತು ನರಮಂಡಲಕ್ಕೆ ಸಂಬಂಧಿಸಿದ ರೋಗ) ಇರುವುದು ಗೊತ್ತಾಯಿತು. ಅಲ್ಲಿ ಕುಳಿತಿದ್ದ ಹಲವಾರು ರೋಗಿಗಳ ಮೈಯಿಂದ ಅದೇ ತರಹದ ವಾಸನೆ ಬರುವುದನ್ನು ಜಾಯ್ ಗಮನಿಸಿದಳು. ಮೊದಲಿಗೆ ವೈದ್ಯರು, ವಿಜ್ಞಾನಿಗಳು ಇದನ್ನು ನಿರಾಕರಿಸಿದರೂ, ಜಾಯ್ ನ್ನು ಒಂದು ಪರೀಕ್ಷೆಗೆ ಒಳಪಡಿಸಿದರು. ಈಗಾಗಲೇ ಪಾರ್ಕಿನ್ಸನ್ ಕಾಯಿಲೆ ಇರುವ ಮತ್ತು ಇರದಿರುವ ಸುಮಾರು ೨೫ ಜನರನ್ನು ಒಟ್ಟುಗೂಡಿಸಿ, ಜಾಯ್ ಅವರ ವಾಸನೆಯಿಂದ ಗ್ರಹಿಸಿ ಯಾರಿಗೆ ಕಾಯಿಲೆ ಇದೆ ಮತ್ತು ಯಾರಿಗೆ ಇಲ್ಲ ಎಂದು ನಿಖರವಾಗಿ ಗುರುತಿಸುವುದು ಈ ಪರೀಕ್ಷೆಯ ಉದ್ದೇಶ. ಒಬ್ಬರ ಹೊರತಾಗಿ ಉಳಿದೆಲ್ಲ ಜನರನ್ನು ನಿಖರವಾಗಿ ಗುರುತಿಸಿದಳು ಜಾಯ್. ಸ್ವಲ್ಪ ದಿನದ ನಂತರ ಆ ಇನ್ನೊಬ್ಬರಿಗೂ ಕಾಯಿಲೆ ಇರುವ ಸಂಗತಿ ಪರೀಕ್ಷೆಯ ನಂತರ ತಿಳಿಯಿತು. ಜಾಯ್ ಳ ವಾಸನಾ ಸಾಮರ್ಥ್ಯ ವೈದ್ಯಕೀಯ ಪರೀಕ್ಷೆ ಗುರುತಿಸಿವುದಕ್ಕಿಂತ ಮುಂಚೆಯೇ ಆ ಸಮಸ್ಯೆಯನ್ನು ಗುರುತಿಸಿತ್ತು. ನಂತರದ ಸಂಶೋಧನೆಗಳು ಸಾಬೀತು ಪಡಿಸಿದ್ದು, ಪಾರ್ಕಿನ್ಸನ್ ಕಾಯಿಲೆ ಚರ್ಮದ ಗ್ರಂಥಿಗಳಲ್ಲಿ ಒಂದು ವಿಶಿಷ್ಟ ದ್ರವವನ್ನು ಹೊರಸೂಸಿ ಒಂದು ತರಹದ ವಾಸನೆ ಹೊರಡಿಸುತ್ತದೆ. ಎಲ್ಲರಿಗೂ ಆ ವಾಸನೆಯನ್ನು ಗುರುತಿಸಲು ಆಗದಿದ್ದರು ಜಾಯ್ ತರಹದ ಕೆಲವರಿಗೆ ಸಾಧ್ಯವಾಗುತ್ತದೆ ಎನ್ನುವ ವಿಷಯ. 


ಜಾಯ್ ತನ್ನ ಪತಿಯನ್ನು ಈ ರೋಗಕ್ಕೆ ಕಳೆದುಕೊಂಡರೂ, ಅವಳ ಗ್ರಹಿಕೆ ಇಂದಿಗೆ ಈ ಕಾಯಿಲೆಯ ರೋಗಲಕ್ಷಣಗಳನ್ನು ಮುಂಚಿತವಾಗಿಯೇ ಗುರುತಿಸಲು ವೈದ್ಯಕೀಯ ಲೋಕಕ್ಕೆ ಸಹಾಯವಾಗುತ್ತಿದೆ.

Link:

https://podcasts.google.com/feed/aHR0cHM6Ly9mZWVkcy5ucHIub3JnLzUxMDMwNy9wb2RjYXN0LnhtbA/episode/NTU1MjY5ZTAtODM3Ni00NzAxLWEwNzYtZGJhNWU1NTg5MDI2?sa=X&ved=0CAUQkfYCahcKEwiQ5cqggL7tAhUAAAAAHQAAAAAQAg&fbclid=IwAR0NpB9eYsDdfonS3-mwbkzvp1KpU8LsvsSsBbDAzPdFMBSVyw7bLhwEGZ0


ಅಜರಾಮರ ಹೈಡ್ರಾ:


ಹೈಡ್ರಾ ಇದು ನೀರಿನಲ್ಲಿ ವಾಸಿಸುವ ಸಣ್ಣ ಪ್ರಾಣಿ. ಕೊಳವೆಯಾಕಾರದ, ಬರಿ ೧೦ ಮೀ.ಮೀ. ಉದ್ದ ಬೆಳೆಯುವ ಈ ಪ್ರಾಣಿ ಬಲು ಸೋಜಿಗವಾದದ್ದು. ಇದರ ದೇಹಕ್ಕೆ ವಯಸ್ಸೇ ಆಗುವುದಿಲ್ಲ. ಅಷ್ಟೇ ಎಲ್ಲ, ಇದರ ಬಾಲವನ್ನು ಕಡಿದು ಹಾಕಿದರೆ ಹೊಸ ಬಾಲ ಬೆಳೆಯುತ್ತದೆ. ತಲೆಯನ್ನು ಕಡಿದರೆ, ಹೊಸ ತಲೆ ಬೆಳೆಯುತ್ತದೆ. ತಲೆ, ಬಾಲ ಎರಡನ್ನು ತುಂಡು ಮಾಡಿದರೆ, ನಡುವಿನ ಭಾಗ ತಲೆ ಮತ್ತು ಬಾಲ ಎರಡನ್ನೂ ಬೆಳೆಸಿಕೊಳ್ಳುತ್ತದೆ. ಹೀಗೆ ಇದರ ದೇಹ ಸಂಪೂರ್ಣ ನವೀಕರಣಗೊಳ್ಳುತ್ತ ಸಾಗುವುದರಿಂದ, ಇದಕ್ಕೆ ವಯಸ್ಸಿನ ಸಮಸ್ಯೆ ಕಾಡದೆ, ಅದನ್ನು ಯಾವುದೇ ಮೀನು ಸಂಪೂರ್ಣ ನುಂಗಿ ಜೀರ್ಣಗೊಳಿಸಿ ಕೊಂಡರೆ ಮಾತ್ರ ಅದರ ಜೀವನ ಮುಗಿಯುತ್ತದೆ ಇಲ್ಲದಿದ್ದರೆ ಅಜರಾಮರ ಎನ್ನುವಂತೆ ಜೀವಿಸುತ್ತದೆ. 


ಅದು ಹೇಗೆ ಸಾಧ್ಯ ಎನ್ನುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಅವರು ಇದುವರೆಗೂ ಕಂಡುಕೊಂಡಿದ್ದು, ಹೈಡ್ರಾ ನಲ್ಲಿ ಇದು ಸಾಧ್ಯವಾಗುವಂತೆ ಮಾಡುವುದು ಅವುಗಳ 'stem cells ಜೀವಕೋಶಗಳು. ಇವು ಮನುಷ್ಯನಲ್ಲಿ ಭ್ರೂಣಾವಸ್ಥೆಯಲ್ಲಿ ಅಂಗಾಂಗಗಳು ರೂಪುಗೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸಿ ನಂತರ ಆಯಾ ಅಂಗಾಂಗಗಳ ಜೀವಕೋಶಗಳಾಗಿ ಬದಲಾಗುತ್ತವೆ. ಆದರೆ ಹೈಡ್ರಾ ನಲ್ಲಿ  stem cells  ಹಾಗೆಯೇ ಉಳಿದುಕೊಂಡು ಅವಶ್ಯಕತೆಗೆ ತಕ್ಕಂತೆ ಹೊಸ ಅಂಗಾಂಗಗಳನ್ನು ಬೆಳೆಸುತ್ತವೆ. ಹಾಗೆಯೇ ಇಡೀ ದೇಹವನ್ನು ನವೀಕರಿಸುತ್ತವೆ. ಅಲ್ಲದೆ ಇಡೀ ಜೀವಕ್ಕೆ ಬೇಕಾದ ಮಾಹಿತಿಯೆಲ್ಲವೂ ಜೀನ್ ಗಳ ಮುಖಾಂತರ ಪ್ರತಿಯೊಂದು ಜೀವಕೋಶದಲ್ಲಿ ಉಳಿದುಕೊಂಡು, ಯಾವುದೇ ಭಾಗ ಹಾನಿಗೊಂಡರೆ ಅದನ್ನು ಮತ್ತೆ ಬೆಳೆಸುವ ಕಾರ್ಯ ಸಾಧ್ಯವಾಗುತ್ತದೆ. ಇದರ ಮೇಲಿನ ಸಂಶೋಧನೆಗಳು, ಇದನ್ನು ಮನುಷ್ಯ ಕುಲದ ಒಳಿತಿಗೆ ಉಪಯೋಗಿಸಬಹುದೇ ಎನ್ನುವ ಕಡೆಗೆ ಸಾಗಿವೆ.


ಮನುಷ್ಯನ ಅಜರಾಮರ ಬಯಕೆ ಒಳ್ಳೆಯದೋ, ಅಲ್ಲವೋ ಹೇಗೆ ಹೇಳುತ್ತೀರಿ? ಆದರೆ ದೇಹದ ಭಾಗ ಹಾನಿಗೊಳಗಾದರೆ, ಅದನ್ನು ಹೈಡ್ರಾದ ಹಾಗೆ ಮತ್ತೆ ಬೆಳೆಸಿಕೊಳ್ಳುವುದು ಸಾಧ್ಯ ಆದರೆ ಎಷ್ಟು ಚೆನ್ನ ಅಲ್ಲವೇ?


Link:

https://podcasts.google.com/feed/aHR0cHM6Ly9mZWVkcy5ucHIub3JnLzUxMDMwNy9wb2RjYXN0LnhtbA/episode/YzliM2ViZDQtN2NiNC00MjFmLThmMTYtZTk5NDI4NGMyMGNl?sa=X&ved=0CAUQkfYCahcKEwiYvrfhmb7tAhUAAAAAHQAAAAAQHQ

Friday, December 4, 2020

ಮಧ್ಯ ವಯಸ್ಸಿನ ಬಿಕ್ಕಟ್ಟು ತರುವ ಹೊಸತನ

ಮಕ್ಕಳಿಗೆ ಎಲ್ಲರೂ ಹೇಳುವುದು "ನೀನು ಬೆಳೆದು ದೊಡ್ಡವನಾಗಿ ಏನು ಬೇಕಾದರೂ ಆಗಬಹುದು". ಅದು ಬರಿ 'ಡಾಕ್ಟರ್', 'ಇಂಜಿನಿಯರ್' ಅಲ್ಲವಲ್ಲ. ಏನು ಬೇಕಾದರೂ ಅಂದ್ರೆ, ಏನು ಬೇಕಾದರು ಆಗಬಹುದು. ಕುಸ್ತಿ ಪಟು, ಪೊಲೀಸ್, ಸೈನ್ಯ ಸೇರುವುದು, ಚಿತ್ರ ನಟ ಅಥವಾ ನಟಿ, ಅಂಬಾನಿಗಳಷ್ಟಲ್ಲದಿದ್ದರೂ ತಕ್ಕ ಮಟ್ಟಿಗೆ ಶ್ರೀಮಂತ, ಉದ್ದಿಮೆಗಳ ಒಡೆಯ, ಸಚಿನ್ ತರಹ ಕ್ರಿಕೆಟ್ ಆಟಗಾರ, ಮೋದಿ ತರಹ ಪ್ರಧಾನ ಮಂತ್ರಿ, ಇಲ್ಲವೇ ಜಯಲಲಿತಾ ತರಹ ಮುಖ್ಯ ಮಂತ್ರಿ ಹೀಗೆ ನೂರಾರು ಆಯ್ಕೆಗಳು ಚಿಕ್ಕ ಮಕ್ಕಳಿಗೆ. ಅವರು ಹಾಗಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವ ಹಾಗೆಯೆ ಇಲ್ಲ. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಗುರಿ ಇರುವುದು ಒಳ್ಳೆಯದೇ. ಅದು ಅವರ ಜಗತ್ತಿನ ಪರಿಧಿಯನ್ನು ದೊಡ್ಡದು ಮಾಡುತ್ತದೆ.


ಚಿಕ್ಕ ವಯಸ್ಸಿನಿಂದ ೨೦ ರ ವಯಸ್ಸಿನವರೆಗೆ ಆಶಾವಾದಿಯಾಗಿ ಬೆಳೆದರೆ ತಪ್ಪೇನಿಲ್ಲ. ಆಮೇಲೆ ನಾವು  ಅಂದುಕೊಂಡಿದ್ದು ಆಗದಿದ್ದರೂ, ನಮಗೆ ಸ್ವಲ್ಪ ನಿರಾಸೆ ಆದರೂ, ಸಣ್ಣ ಪಟ್ಟಿಗೆ ಜಗ್ಗುವವರಲ್ಲ ನಾವು. ನಮಗೂ ಒಂದಲ್ಲ ದಿನ ಅವಕಾಶ ಸಿಕ್ಕೇ ಸಿಗುತ್ತದೆ, ನಮ್ಮ ಅದೃಷ್ಟ ಬದಲಾಗುತ್ತದೆ ಮತ್ತು ನಾವು ಅಂದುಕೊಂಡಿದ್ದೆಲ್ಲಾ ಸಾಧ್ಯವಾಗುತ್ತದೆ ಎನ್ನುವ ಮನದ ಮರೆಯ ಆಸೆಗಳಲ್ಲಿ ಇನ್ನೂ ಇಪ್ಪತ್ತು ವರುಷಗಳನ್ನು ಕಳೆದು ಬಿಡುತ್ತೀವಿ.

 

ಆದರೆ ಸಮಸ್ಯೆ ಶುರುವಾಗುವುದು ನಾವು ೪೦ ರ ವಯಸ್ಸಿನ ಆಸು ಪಾಸಿಗೆ ಬಂದಾಗ. ಈಗ ನಮಗೆ ನಾವು  ಏನೆಂದು ಗೊತ್ತಾಗಿದೆ. ನಮ್ಮ ವ್ಯಕ್ತಿತ್ವದ ಶಕ್ತಿ ಹಾಗು ದೌರ್ಬಲ್ಯಗಳು, ಇವೆರಡರ ಸಂಪೂರ್ಣ ಪರಿಚಯ ಈಗ ನಮಗಿದೆ. ಚಿಕ್ಕಂದಿನಲ್ಲಿ ನಮ್ಮದೇ ಬಿಸಿನೆಸ್ ಇರಬೇಕು ಅಂದುಕೊಂಡ ನಮಗೆ ವ್ಯಾಪಾರ ತರುವ  ಅಪಾಯಗಳನ್ನು ಎದುರಿಸುವ ಮನಸ್ಸಿಲ್ಲ ಹಾಗಾಗಿಯೇ ಅದು ಕನಸಾಗಿಯೇ ಉಳಿಯಿತು ಎನ್ನುವ ಸತ್ಯ ಗೊತ್ತಾಗಿದೆ. ಯಾವುದೊ ದೊಡ್ಡ ಕಂಪನಿಯಲ್ಲಿ ಒಂದು ದೊಡ್ಡ ಹುದ್ದೆ ವಹಿಸಿಕೊಳ್ಳುವ ಕನಸಿಗೆ, ನಮ್ಮ ಶಿಕ್ಷಣದ ಕೊರತೆ ಅಥವಾ ಅದಕ್ಕೆ ಬೇಕಿರುವ ಚಾತುರ್ಯಗಳು ನಮ್ಮ ವ್ಯಕ್ತಿತ್ವಕ್ಕೆ ಹೊಂದುವುದಿಲ್ಲ ಎನ್ನುವ ಕಾರಣಗಳು ಅದನ್ನು ನನಸಾಗಲು ಬಿಡುವುದಿಲ್ಲ ಎನ್ನುವುದು ಮನವರಿಕೆಯಾಗಿದೆ. ಚಲನ ಚಿತ್ರದಲ್ಲಿ ನಾಯಕ, ನಾಯಕಿಯಾಗಲು ನಮಗೆ ರೂಪ-ಲಾವಣ್ಯಗಳ ಕೊರತೆ, ನಮ್ಮ ಮೂಗನ್ನು ಯಾರು ತಿದ್ದಿ ತೀಡಲಿಲ್ಲವಲ್ಲ ಎನ್ನುವುದು ಬೇಸರದ ಸಂಗತಿ. ದೊಡ್ಡ ಉದ್ದಿಮೆಗಾರರಾಗಲು ನಮಗೆ ಸಂಪನ್ಮೂಲಗಳಿಲ್ಲ, ಆದ್ದರಿಂದ ಅದರ ಯೋಚನೆ ನಾವು ಮರೆತು ಹೋದರೂ, ಕೊರಗು ಮಾತ್ರ ಮನಸ್ಸಿನ ಮೂಲೆಯಿಂದ ಹೋಗಲೊಲ್ಲದು.


ಮಧ್ಯ ವಯಸ್ಸು ತಂದು ಒಡ್ಡುವ ಬಿಕ್ಕಟ್ಟು ಎಲ್ಲರನ್ನು ಶಕ್ತಿ ಪರೀಕ್ಷೆಗೆ ಒಳ ಪಡಿಸುತ್ತದೆ. ನಮ್ಮ ಮಕ್ಕಳಿಗೆ 'ಏನು ಬೇಕಾದರೂ ಆಗಬಹುದು' ಎಂದು ಹೇಳಿಕೊಡುವ ನಾವು ಮಾತ್ರ ಅಂದುಕೊಂಡ  ಹಾಗೆ ಆಗುವಲ್ಲಿ ಸೋತಿರುತ್ತೀವಿ. ವಾಸ್ತವದ ಮುಂದೆ ದುಃಖ, ಅವಮಾನ ಹೇಳಿಕೊಂಡು ಪ್ರಯೋಜನವೇನು ಎಂದುಕೊಂಡು ಸುಮ್ಮನಾಗುತ್ತೀವಿ.


ಆದರೆ ಇದೇ ಸಮಸ್ಯೆಯನ್ನು ಬೇರೆ ರೀತಿಯಲ್ಲಿ ನೋಡಿದರೆ, ಅದರ ಪರಿಣಾಮವೇ ಬೇರೆ. 


ಅಂದೊಕೊಂಡ ಹಾಗೆ ಆಗದಿದ್ದರೆ ಏನಂತೆ? ನಾವು ಒಳ್ಳೆಯ ಮಗನಾಗಿ ಅಥವಾ ಮಗಳಾಗಿ, ಸಹೋದರ, ಸಹೋದರಿಯಾಗಿ, ಕುಟುಂಬದಲ್ಲಿ, ಆಫೀಸ್ ನಲ್ಲಿ, ನಮ್ಮ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಬಂದಿದ್ದು ಕಡಿಮೆ ಸಾಧನೆಯೇ? ನಾವು ಕಾಳಿದಾಸನ ಹಾಗೆ ಕಾವ್ಯ ಬರೆಯದಿದ್ದರೆ ಏನಂತೆ? ಸ್ನಾನ ಮಾಡುವಾಗ ನಮಗೆ ಎಂದು ಗುನುಗಿಕೊಳ್ಳುವ ಹಾಡುಗಳು ನಮ್ಮಲ್ಲಿ ತುಂಬುವ ಉಲ್ಲಾಸ ಕಡಿಮೆಯೇ? ನಾವು ಆನಂದಿಸುವ ಹವ್ಯಾಸಗಳನ್ನು ನೆನಪಿಸಿಕೊಳ್ಳಿ. ಟ್ರೆಕಿಂಗ್ ಹೋದಾಗ, ನಾವು ಪಟ್ಟ ಖುಷಿ ನಮ್ಮ ಜೊತೆ ಬಂದಿದ್ದ ನಮ್ಮ ಮೇಲಿನ ಅಧಿಕಾರಿಗಿಂತ ಕಡಿಮೆ ಅನ್ನುವಂತಿರಲಿಲ್ಲ, ಅಲ್ಲವೇ? ನಾವು ಮಧ್ಯಮ ವರ್ಗದವರೇ ಇರಬಹುದು. ಆದರೆ ನಮ್ಮ ಮನೆಗೆ ಯಾರೋ ಪರಿಚಯವಿಲ್ಲದ ಒಬ್ಬ ಶ್ರೀಮಂತ ಬಂದರೆ, ನಮ್ಮ ಮನೆಯ ನಾಯಿ ಅವನಿಗೆ ಕೊಡುವ ಮರ್ಯಾದೆ ಎಷ್ಟಿರುತ್ತದೆ? 


ಬದುಕು ಪ್ರತಿಷ್ಠೆಯ ವಿಷಯದಲ್ಲಿ ಸಾಕಷ್ಟು ಅಸಮಾನತೆಗಳನ್ನು ಸೃಷ್ಟಿಸಿದರೂ, ಜೀವನ ಕೊಡುವ ಆನಂದಗಳಲ್ಲಿ ಎಲ್ಲರಿಗೂ ಸಮಾನ ಅವಕಾಶ ಉಂಟು. ನಿಮ್ಮ ನೆರೆಯ ಕ್ರಿಕೆಟ್ ಟೀಮ್ ನ್ನು ನಿಮ್ಮ ಬ್ಯಾಟಿಂಗ್ ನಿಂದ ಗೆಲ್ಲುವಂತೆ ಮಾಡಿ ನೋಡಿ, ಆಗ ನೀವು ಪಡುವ ಸಂತೋಷ ವಿರಾಟ್ ಕೊಹ್ಲಿಗೆ ಕಡಿಮೆ ಏನು ಅಲ್ಲ. ನಿಮಗೆ ಒಂದು ಶಾಲೆ ಕಟ್ಟುವ ಕನಸು ಸಾಕಾರ ಆಗದಿದ್ದರೆ ಏನಂತೆ? ಒಬ್ಬ ಬಡ ಹುಡುಗನಿಗೆ ಟ್ಯೂಷನ್ ಹೇಳಿ ಕೊಟ್ಟು ಅವನಿಗೆ ಪರೀಕ್ಷೆ ಪಾಸಾಗುವ ವಿಶ್ವಾಸ ತುಂಬಿ ನೋಡಿ, ಕಳೆದುಕೊಂಡ ಸಂತೋಷ ಸ್ವಲ್ಪ ಮಟ್ಟಿಗಾದರೂ ಮತ್ತೆ ನಿಮ್ಮದಾಗುತ್ತದೆ.


ಚಿಕ್ಕಂದಿನಲ್ಲಿ ನಾವು ಆಸೆ ಪಟ್ಟಿದ್ದು ದುಡ್ಡು, ಅಧಿಕಾರ, ಪ್ರತಿಷ್ಠೆಗಲ್ಲ. ಆದರೆ ಅವು ತಂದು ಕೊಡುವ ಸಂತೋಷಕ್ಕಾಗಿ. ಸಮಾಜದ ಪ್ರತಿಷ್ಠೆಗೆ ಬೆಂಕಿ ಇಟ್ಟು, ತೆರೆದ ಮನಸ್ಸಿನಿಂದ ವಿಚಾರ ಮಾಡಿ ನೋಡಿ. ನಾವು ಚಿಕ್ಕಂದಿನಲ್ಲಿ ಅಂದುಕೊಂಡ ಹಾಗೆ ಅಲ್ಲದಿದ್ದರೂ, ಸ್ವಲ್ಪ ಬದಲು ಮಾಡಿಕೊಂಡಾದರೂ ಬದುಕಲು ಸಾಧ್ಯ. ನಾನು ಮಧ್ಯ ವಯಸ್ಸು ತಂದು ಒಡ್ಡುವ ಬಿಕ್ಕಟ್ಟನ್ನು ಜೀವನಕ್ಕೆ ಹೊಸತನ ತಂದು ಕೊಡುವ ವಿಷಯವನ್ನಾಗಿ ಬದಲಾಯಿಸಿಯಾಗಿದೆ. 'ಕೈಗಟುಕದ ದ್ರಾಕ್ಷಿ ಹುಳಿ' ಎಂದು ಜನ ನೋಡಿ ನಕ್ಕರೂ ಪರವಾಗಿಲ್ಲ. ಸಕ್ಕರೆ ಕೊಂಡು ಕೊಳ್ಳಲು ಆಗದಿದ್ದರೆ, ಬೆಲ್ಲದ ಚಹಾ ಕುಡಿದು ಸಂತೋಷ ಪಡುವ ಮನಸ್ಥಿತಿ ಇಂದು ನನ್ನದಾಗಿದೆ.


ಶಿಕ್ಷಣಕ್ಕಿಂತ ವಿವೇಕ ದೊಡ್ಡದು. ಬುದ್ಧ ಬುದ್ಧಿಯಿಂದ ಆದವನಲ್ಲವೇ? ನೀವು ನನಗಿಂತ ಜಾಣರು. ನನಸಾಗದ ಕನಸುಗಳಿಗೆ ಕೊರಗದೆ, ನಿಮ್ಮದೇ ವಿಶಿಷ್ಟ ರೀತಿಯ ಜೀವನ ರೂಪಿಸಿಕೊಂಡಿರುತ್ತೀರಿ ಎನ್ನುವ ವಿಶ್ವಾಸ ನನ್ನದು.


Thursday, December 3, 2020

ಕೈಯಲ್ಲಿನ ಫೋನ್ ಬದಲಿಸಿದ ನಮ್ಮ ಜೀವನ ಶೈಲಿಗಳು

"ಊರಿಗೆ ಹೋದ ಮೇಲೆ ಪತ್ರ ಬರಿ". ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬಸ್ ಸ್ಟಾಂಡ್ ನಲ್ಲಿ ಬಸ್ ಹತ್ತಿಸಲು ಬಂದವರು ಹೇಳುತ್ತಿದ್ದ ಸಾಮಾನ್ಯ ಮಾತು. ಇಂದಿಗೆ ಬಸ್ ಹತ್ತಿಸಲು ಬರುವವರ ಸಂಖ್ಯೆಯೂ ಕಡಿಮೆ. ಬರುವ ಒಬ್ಬಿಬ್ಬರು 'ಆಮೇಲೆ ಫೋನ್ ಮಾಡು' ಎಂದು ಹೇಳಿ ಹೊರಡುತ್ತಾರೆ. ಹೋಗುತ್ತಿರುವುದು ಖಾಸಗಿ ಬಸ್ ನಲ್ಲಾದರೆ ಸೀಟು ಹಿಡಿಯುವ ತಾಪತ್ರಯವು ಇಲ್ಲ ಮತ್ತು ಬ್ಯಾಗ್ ಎತ್ತಿಡಲು ಸಹಾಯವೂ ದೊರೆಯುತ್ತದೆ. ಹಾಗಾಗಿ ಊರಿಂದೂರಿಗೆ ಪ್ರಯಾಣ ಇವತ್ತಿಗೆ 'ಚಾ ಕುಡಿದ್ರಾ' ಎಂದು ಕೇಳಿದಷ್ಟೇ ಸುಲಭ. ಹಾಗಾಗಿ ಪ್ರಯಾಣಿಕರ ಮುಖದ ಮೇಲೆ ಯಾವುದೇ ಆತಂಕ ಕಾಣುವುದಿಲ್ಲ. ವಿದೇಶಕ್ಕೆ ಹೋಗುವವರು ಸಹ ಕೈ ಬೀಸಿ ಮುಗುಳ್ನಕ್ಕು ಮತ್ತೆ ಸಿಗುವ ಎನ್ನುವ ಮುಖ ಭಾವ ಹೊತ್ತು ಸಾಗುತ್ತಾರೆ. ಕೈಯಲ್ಲಿನ ಫೋನ್ ಮತ್ತು ನಮ್ಮ ಹೆಬ್ಬೆರಳ ತುದಿಯಲ್ಲಿ ಸಿಗುವ ಸಂಪರ್ಕ ವಿಶಾಲ ಜಗತ್ತನ್ನು ಒಂದು ಚಿಕ್ಕ ಹಳ್ಳಿಯನ್ನಾಗಿ ಮಾರ್ಪಡಿಸಿದೆ.


ಇಂದು ಮಳೆ ಬರಬಹುದೋ ಎಂದು ಆಕಾಶದೆಡೆಗೆ ತಲೆ ಎತ್ತಿ, ಅಂಗೈಯನ್ನು ಹಣೆಯ  ಮೇಲಿಟ್ಟುಕೊಂಡು, ಮೋಡಗಳನ್ನು ದಿಟ್ಟಿಸುವ ಕಾಲವೂ ಮುಗಿದು ಹೋಗಿದೆ. ಸ್ಮಾರ್ಟ್ ಫೋನ್ ನಲ್ಲಿ ಇರುವ ಗೂಗಲ್ ನಲ್ಲಿ ಮಳೆ ಬರುವುದರ ಮುನ್ಸೂಚನೆ ತಾಸು-ತಾಸಿನ ಲೆಕ್ಕದಲ್ಲಿ ಸಿಗುತ್ತದೆ. ಮೊನ್ನೆ ಬೆಂಗಳೂರಿನ ಎಫ್.ಎಂ. ರೇಡಿಯೋ ನಲ್ಲಿ, ಪಿ. ಬಿ. ಶ್ರೀನಿವಾಸ್ ರವರು ಹಾಡಿದ ಹಳೆಯ ಚಲನ ಚಿತ್ರ ಗೀತೆಗಳು  ಪ್ರಸಾರವಾಗುತ್ತಿದ್ದವು. ಅದರಲ್ಲಿ ಒಂದು ಹಾಡು ಹೀಗಿತ್ತು. 


"ಬೀಸೋ ಗಾಳಿಯಲಿ, ಹರಿವ ನೀರ ಅಲೆ

ಹೇಳು ಏನೆಂದಿದೆ ಓ ಗೆಳತಿ?"


ಪ್ರಕೃತಿಯ ಮಧ್ಯೆ ಬದುಕುವವರು ಬೀಸುವ ಗಾಳಿಯ, ಹರಿವ ನೀರಿನ ಸಂದೇಶಗಳನ್ನು ಸ್ವೀಕರಿಸುವುದು ಸಾಧ್ಯವಿತ್ತು, ಕಾಳಿದಾಸ ಮೇಘ ಸಂದೇಶಗಳನ್ನು ಉಪಯೋಗಿಸಿಕೊಂಡ ರೀತಿಯಲ್ಲಿ. ಆದರೆ ಬೆಂಗಳೂರಿನಲ್ಲಿ ಯಾವುದೇ ನದಿಗಳಿಲ್ಲ. ಇಲ್ಲಿ ಮಳೆ ನೀರು ಹರಿಯುವ ಗುಂಡಿಗೆ ಕೊಳಚೆಯೂ ಹರಿಯುತ್ತೆ. (ಅವಕ್ಕೆ ರಾಜ ಕಾಲುವೆ ಎಂದು ಬೇರೆ ಹೆಸರು). ಅವುಗಳ ಮೇಲೆ ಬೀಸುವ ಗಾಳಿ ಹೇಳುವುದು ಮೂಗು ಮುಚ್ಚಿಕೊಳ್ಳಿ ಎಂದು. ಪ್ರಕೃತಿಯನ್ನು ಕೃತಕವಾಗಿಸಿದ ಈ ಊರು ತಂತ್ರಜ್ಞಾನವನ್ನು ಬೆಳೆಸುತ್ತೆ ಆದರೆ ನಿಸರ್ಗವನ್ನು ಕಡೆಗಣಿಸುತ್ತದೆ. ಇಲ್ಲಿ ಎಲ್ಲರಿಗೂ ಪ್ರತಿ ದಿನ ಗೆಲ್ಲುವ ಧಾವಂತ. ಅವರಿಗೆ ಕೈಯಲ್ಲಿನ ಸ್ಮಾರ್ಟ್ ಫೋನ್ ಸಂಗಾತಿ, ಪ್ರಕೃತಿ ಅಲ್ಲವೇ ಅಲ್ಲ.


ನೀವು ಗೊತ್ತಿರದ ಹೊಸ ಜಾಗಗಳಿಗೆ ಹೋಗುತ್ತಿರುವಿರಿ. ಆದರೆ ದಾರಿ ಗೊತ್ತಿಲ್ಲದ ನಿಮಗೆ ಇಂದಿಗೆ ಜಿ.ಪಿ.ಎಸ್ ಇದೆ. ಆದರೆ ಹಿಂದೆ ರಸ್ತೆಯಲ್ಲಿ ಹೋಗುತ್ತಿರುವವರು ಅಥವಾ ಅಕ್ಕ ಪಕ್ಕದ ಅಂಗಡಿಗಳವರು  ನಿಮಗೆ ಮಾರ್ಗದರ್ಶನ ನೀಡುತ್ತಿದ್ದರು. ಸುಮಾರು ಹತ್ತು ವರ್ಷಗಳ ಹಿಂದೆ ಕೆಮ್ಮಣ್ಣುಗುಂಡಿಯ ಹತ್ತಿರ ನಾನು ದಾರಿ ಹೇಗೆ ಎಂದು ಕೇಳಿದ್ದು ರಸ್ತೆಯ ಹತ್ತಿರವೇ ಆಡಿಕೊಂಡಿದ್ದ ಚಿಕ್ಕ ಮಕ್ಕಳ ಗುಂಪನ್ನು. ಅವರು ಸರಿ ದಾರಿ ತೋರಿಸಿಯಾದ ಮೇಲೆ, ನಾನು 'ಥ್ಯಾಂಕ್ಸ್' ಹೇಳಿ ಮುಂದೆ ಬರುವಷ್ಟರಲ್ಲಿ, ಆ ಮಕ್ಕಳು ಜೋರಾಗಿ 'ಇವರು ಬೆಂಗಳೂರಿನವರು ಇರಬೇಕು, ಅದಕ್ಕೆ ಥ್ಯಾಂಕ್ಸ್ ಹೇಳುತ್ತಿದ್ದಾರೆ' ಎಂದು ಮಾತಾಡಿಕೊಳ್ಳುತ್ತಿದ್ದರು. ಈ ಥರದ ಅನುಭವಗಳು ಅಥವಾ ದಾರಿ ತಪ್ಪಿದ ಅನುಭವಗಳಿಗೆ ಇಂದಿಗೆ ಅವಕಾಶವೇ ಇಲ್ಲ. ಜಿ.ಪಿ.ಎಸ್ ಸರಿ ದಾರಿ ತೋರಿಸಿ, ನೀವು ಇಲ್ಲಿಗೆ ಬಂದಾಯಿತು ಎಂದು ಹೇಳಿ ಸುಮ್ಮನಾಗುತ್ತದೆ. ಅದಕ್ಕೆ ಮನುಷ್ಯ ಸಹಜ ಭಾವನೆಗಳು ಬರಲು ಹೇಗೆ ಸಾಧ್ಯ?


ಇಂದಿಗೆ ಫೇಸ್ ಬುಕ್ ನಿಮಗೆ ನೆನಪಿಸುತ್ತಿದೆ ವರ್ಷದ ಹಿಂದೆ ಅಥವಾ ಕೆಲವು ವರ್ಷಗಳ ಹಿಂದೆ ಈ ದಿನ ಏನು ಮಾಡುತ್ತಿದ್ದೀರಿ ಎಂದು. ಅದು ನಮ್ಮನ್ನು ಹಳೆಯ ನೆನಪಿಗಳಿಗೆ ಕರೆದೊಯ್ಯುತ್ತದೆ. ಆದರೆ ಸ್ಮಾರ್ಟ್ ಫೋನ್ ಇಲ್ಲದ ಕಾಲದಲ್ಲಿ ಬೆಳೆದ ನಮಗೆ ಗುಡ್ಡ ಹತ್ತಿದ್ದು, ಹಳ್ಳದಲ್ಲಿ ಆಡಿದ್ದು, ಕಾಲುವೆಯಲ್ಲಿ ಈಜು ಕಲಿತದ್ದು ನೆನಪಿಸಲು ಯಾವುದೇ ಸ್ಮಾರ್ಟ್ ಫೋನ್ ಮತ್ತು ಫೇಸ್ ಬುಕ್ ಸಹಾಯ ಬೇಕಿರಲಿಲ್ಲ ಅಲ್ಲವೇ. ಆದರೂ ಸ್ಮಾರ್ಟ್ ಫೋನ್ ಒಂದು ಹಿತ ನೀಡುವ ಸಂಗಾತಿಯಾಗಿದೆ. ಅದಕ್ಕೆ ಇರುವ ನೆನಪಿನ ಶಕ್ತಿಯ ಅಗಾಧತೆಯ ಮುಂದೆ ನಾವು ಕುಬ್ಜರು. 


ತಂತ್ರಜಾನದ ಬೆಳವಣಿಗೆ ಮತ್ತು ಅದು ಸ್ಮಾರ್ಟ್ ಫೋನ್ ಗಳಲ್ಲಿ ಜೋಡಿಗೊಂಡ ರೀತಿ ಅದ್ಭುತ. ಅದರಿಂದ ಆಗಿರುವ ಅನುಕೂಲಗಳನ್ನು ಅಲ್ಲಗೆಳೆಯಲು ಸಾಧ್ಯವೇ ಇಲ್ಲ. ಆದರೆ ಅದು ನಮ್ಮನ್ನು ಕೆಲವು ಸಲ ಭಾವನಾರಹಿತ ಮನುಜರನ್ನಾಗಿ, ನಮ್ಮ ಜೀವನ ಶೈಲಿ ಬದಲಾಯಿಸಿದರೂ ಅದನ್ನು ಸಹಿಸಿಕೊಳ್ಳಲೇ ಬೇಕು. ಇಂದಿಗೆ ನಾನು ನಿಮ್ಮನ್ನು ತಲುಪುತ್ತಿರುವುದು ಅದೇ ತಂತ್ರಜ್ಞಾನದ ಮೂಲಕ ಅಲ್ಲವೇ? ಎಲ್ಲ ಸ್ನೇಹಿತರ ಆಗು-ಹೋಗುಗಳನ್ನು ತಿಳಿದುಕೊಳ್ಳುವ ಸೌಲಭ್ಯ ಕಲ್ಪಿಸಿದ ಈ ತಂತ್ರಜಾನಕ್ಕೆ ಶರಣು. ಪೋಸ್ಟ್ ಆಫೀಸ್ ಮುಂದೊಂದು ದಿನ ಮುಚ್ಚಿ ಹೋದರೆ ಅಥವಾ ಬೇರೆ ಕಾರ್ಯಗಳಿಗೆ ಬದಲಾದರೆ ಏನಂತೆ? ನಾವೀಗಾಗಲೇ ವಾಟ್ಸ್ ಆಪ್ ಸೇರಿ ಆಗಿದೆಯಲ್ಲ. ಗೊತ್ತಿಲ್ಲದ ಊರೋ, ದಾರಿಯಲ್ಲಿ ಮಳೆ-ಚಳಿ ಎಲ್ಲದಕ್ಕೂ ನಮಗೆ ಮುನ್ಸೂಚನೆಗಾಗಿ, ದಾರಿ ದೀಪದಂತೆ ಕೈಯಲ್ಲಿ ಇದೆಯಲ್ಲ ನಮ್ಮ ಆಪ್ತ ಮಿತ್ರ, ನಮ್ಮ ಸ್ಮಾರ್ಟ್-ಫೋನ್.