Thursday, December 10, 2020

ಹೆಣ್ಣು ಪ್ರಕೃತಿ ಮಾತೆ ಆದರೆ ಅತ್ತೆಯ ಪಾತ್ರ ಮಾತ್ರ ಏಕೆ ಬೇರೆ?

ಸುಮಾರು ನಾಲ್ಕು ವರುಷಗಳ ಹಿಂದೆ ನಡೆದ ಘಟನೆ. ಅದು ನಮಗೆ ಎರಡನೇ ಮಗ ಹುಟ್ಟಿದ ಸಂದರ್ಭ. ಆಗ ನನ್ನ ಪತ್ನಿಯ ತವರೂರಾದ ಸಿರುಗುಪ್ಪದ ಹೆರಿಗೆ ಆಸ್ಪತ್ರೆ ಒಂದರಲ್ಲಿ ನಾವು ಸುಮಾರು ಒಂದು ವಾರ ಕಾಲ ಇದ್ದೆವು. ಆ ಆಸ್ಪತ್ರೆಯ ಕಟ್ಟಡದಲ್ಲಿ ತುಂಬಾ ಕಿರಿದೆನಿಸುವ, ಆರು ಅಡಿಗೊಂದಕ್ಕೆ ಎನ್ನುವಂತೆ ಹಲವಾರು ಕೋಣೆಗಳು. ಪಕ್ಕದ ಕೋಣೆಯಲ್ಲಿ ಮಾತನಾಡಿದರೆ ಕೇಳುವುದು ಅಷ್ಟೇ ಅಲ್ಲ, ಜೋರಾಗಿ ಉಸಿರಾಡಿದರೂ ಕೇಳಿಸುವಷ್ಟು ಹತ್ತಿರ. ಯಾರ ಕೋಣೆಯಲ್ಲಿ ಮಗು ಅಳುತ್ತಿದೆಯೋ ಅಥವಾ ಯಾರನ್ನು ಯಾರು ಮಾತನಾಡಿಸುತ್ತಿದ್ದರೋ ಎಂದು ಗೊಂದಲಕ್ಕೆ ಈಡಾಗುವ ಪರಿಸ್ಥಿತಿ. ಅಲ್ಲಿ ನನಗೆ ಪತ್ನಿ, ಮಗುವಿಗೆ ಔಷಧ ತಂದು ಕೊಡುವ, ಇಡ್ಲಿ ಕಟ್ಟಿಸಿಕೊಂಡು ಬರುವ, ಮಾತನಾಡಿಸಲು ಬಂದವರನ್ನು ಬಸ್ ನಿಲ್ದಾಣಕ್ಕೆ ಬಿಟ್ಟು ಬರುವ ಜವಾಬ್ದಾರಿ.


ಆ ವಾರದಲ್ಲಿ ಒಂದು ದಿನ ಮುಂಜಾನೆ ನಾನು ಆಸ್ಪತ್ರೆಗೆ ತಲುಪಿದಾಗ, ಒಂದು ಕೋಣೆಯಿಂದ ಹೆಣ್ಣು ಮಗಳೊಬ್ಬಳು ಅಳುತ್ತಿರುವುದು ಕೇಳಿ ಬರುತ್ತಿತ್ತು. ವಿಷಯ ಏನೆಂದು ವಿಚಾರಿಸಿದಾಗ, ಹಿಂದಿನ ರಾತ್ರಿ ಆದ ಹೆರಿಗೆಯಲ್ಲಿ ಅವಳ ಮಗುವು ಸತ್ತು ಹುಟ್ಟಿತ್ತು. ಒಂಬತ್ತು ತಿಂಗಳು ಕಾದು, ಮಗುವಿನ ಮುಖ ನೋಡುವ ಹಂಬಲ ಹೊತ್ತ ತಾಯಿಗೆ, ಮಗು ಸತ್ತಿರುವುದು ಆಘಾತಕಾರಿ ವಿಷಯವೇ ಸರಿ. ಆದರೆ ಅಷ್ಟೇ ಇರಲಿಲ್ಲ. ಅವಳಿಗೆ ಈ ತರಹ ಆಗಿದ್ದು ಎರಡನೇ ಬಾರಿ. ಒತ್ತಿಕೊಳ್ಳಲಾಗದ ದುಃಖ ಆ ಹೆಣ್ಣು ಮಗಳನ್ನು ಕಾಡಿದ್ದು ಆಸ್ಪತ್ರೆಯಲ್ಲಿ ಇದ್ದ ಎಲ್ಲರಿಗೂ ತಿಳಿದು ವಿಷಾದ ಭಾವ ಮೂಡಿತ್ತು. ಇಡೀ ಆಸ್ಪತ್ರೆಯೇ ಮಂಕಾಗಿ, ಅವಳದೊಂದೇ ಧ್ವನಿ ಕೇಳಿ ಬರುತಿತ್ತು. ಸ್ವಲ್ಪ ಸಮಯದಲ್ಲಿ ಅವಳ ದುಃಖದ ತೀವ್ರತೆ ಇನ್ನು ಹೆಚ್ಚಾಗತೊಡಗಿತು. ಅವಳ ಮೊದಲ ಮಗು ಸತ್ತಾಗ ಅವಳ ಅತ್ತೆ ಮಾಡಿದ ದೋಷಾರೋಪಗಳ ನೆನಪಾಗಿ ಅವಳ ಅಳು ತೀವ್ರವಾಗತೊಡಗಿತು. ಇನ್ನು ಮುಂದೇನು ಕಾದಿದೆಯೋ ಎನ್ನುವ ಚಿಂತೆ ಕಾಡಿ, ಮಗು ಸತ್ತ ದುಃಖಕ್ಕಿಂತ, ತನ್ನ ಅತ್ತೆಯನ್ನು ಹೇಗೆ ಎದುರಿಸುವುದೋ ಎನ್ನುವ ಭಯ ಅವಳನ್ನು ಕಂಗಾಲು ಮಾಡಿತ್ತು. ಪ್ರಕೃತಿ ಮಾತೆಗೆ ಸರಿ ಸಮನಾಗಿ ಸಲಹುವ ಹೆಣ್ಣು, ಅತ್ತೆಯ ಪಾತ್ರದಲ್ಲಿ ಮಾತ್ರ ಏಕೆ ಕ್ರೂರಿಯಾಗಿ ಬದಲಾಗುತ್ತಾಳೆ ಎನ್ನುವುದು ನನಗೆ ಅಂದಿಗೆ ಅರ್ಥವಾಗದೇ ಹೋಗಿತ್ತು. 


ಅಪರೂಪಕ್ಕೆ ಎನ್ನುವಂತೆ ಅತ್ತೆ-ಸೊಸೆಯ ಹೊಂದಾಣಿಕೆ ಕಂಡ ನಮಗೆ, ಅತ್ತೆ-ಸೊಸೆ ಜಗಳ ಎಲ್ಲರ ಮನೆ ಮಾತು ಎನ್ನುವಷ್ಟು ಸಾಮಾನ್ಯ ವಿಷಯ. ಮುಂದೆ ಹಲವಾರು ಮನಶಾಸ್ತ್ರದ ಪುಸ್ತಕಗಳನ್ನು ಓದಿಕೊಂಡಾಗ ನನಗೆ ಅರ್ಥವಾಗಿದ್ದಿಷ್ಟು. ಮಗಳು, ಸೋದರಿ, ಪತ್ನಿ ಹೀಗೆ ಹಲವಾರು ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸುವ ಹೆಣ್ಣು, ತನ್ನ ತಾಯಿಯ ಪಾತ್ರ ಸ್ವಲ್ಪ ಹೆಚ್ಚೆ ಅನ್ನಿಸುವ ಹಾಗೆ ತನ್ನ ಮಕ್ಕಳನ್ನು ಮಮತೆಯಿಂದ, ತನ್ನ ದೇಹದ ಅವಿಭಾಜ್ಯ ಅಂಗ ಎನ್ನುವ ಹಾಗೆ ಬೆಳೆಸುತ್ತಾಳೆ. ಮುಂದೆ ಅವಳ ಮಗನ ಜೊತೆ ಬಾಳಲು ಬಂದ ಇನ್ನೊಂದು ಹೆಣ್ಣು ಅವಳಿಗೆ ಇಷ್ಟ ಆಗದೆ ಹೋದರೆ, ಅವಳು ತನ್ನ ಪ್ರೀತಿಯಲ್ಲಿ ಪಾಲು ಕೇಳಲು ಬಂದ ಪ್ರತಿಸ್ಪರ್ಧಿ ಎನ್ನುವ ಭಾವ ಮೂಡುತ್ತದೆ. ಅಲ್ಲಿಂದ ಶುರುವಾಗುವ ಅಸಮಾಧಾನ ಎಲ್ಲಿಗೆ ಬೇಕಾದರೂ ತಲುಪಬಹುದು. ತನ್ನ ಮಕ್ಕಳ ದೊಡ್ಡ ದೊಡ್ಡ ತಪ್ಪನ್ನೇ ಕ್ಷಮಿಸಿಬಿಡುವ ಹೆಣ್ಣು, ಸೊಸೆಯ ಚಿಕ್ಕ ಪುಟ್ಟ ತಪ್ಪುಗಳನ್ನು ಕ್ಷಮಿಸಿಬಿಡುವುದರಲ್ಲಿ ಸೋಲುತ್ತಾಳೆ. ಅದುವರೆಗೆ ಕಂಡಿರದ ಅವಳ ಇನ್ನೊಂದು ಮುಖದ ಪರಿಚಯವಾಗುತ್ತ ಹೋಗುತ್ತದೆ. ಒಬ್ಬ ಕೆಟ್ಟ ಅತ್ತೆಯ ಕೈಯಲ್ಲಿ ಪಳಗಿದ ಸೊಸೆ, ಮುಂದೆ ಇನ್ನೊಬ್ಬ ಕೆಟ್ಟ ಅತ್ತೆಯಾಗಿ ಬದಲಾಗುವ ಸಂಭವನೀಯತೆ ಹೆಚ್ಚು ಎನ್ನುತ್ತದೆ ಮನಶಾಸ್ತ್ರ. ಪ್ರತಿಯೊಂದು ಕುಟುಂಬದಲ್ಲಿ ಹೀಗೆ ಎಂದು ಹೇಳಲು ಆಗದಿದ್ದರೂ, ಅತ್ತೆ-ಸೊಸೆಯ ಅಸಮಾಧಾನದ ಪರಂಪರೆ ಮುಂದುವರೆದುಕೊಂಡು ಹೋಗುತ್ತದೆ.


ಇದು ಬರಿ ಸೊಸೆಗೆ ಸೀಮಿತವಲ್ಲ. ದೌರ್ಜನ್ಯಕ್ಕೆ ಒಳಗಾದ ಕೆಲವರು ಮುಂದೆ ಅದರಲ್ಲೇ ಒಂದು ವಿಕೃತಿಯ ಸಂತೋಷ ಕಂಡುಕೊಳ್ಳುವುದು, ಒಬ್ಬ ಸ್ಯಾಡಿಸ್ಟ್ ಆಗಿ ಬದಲಾಗುವುದು ನಾವು ಗಮನಿಸಬಹುದಾದ ಸಂಗತಿ. ಬಹುಶ ಇದನ್ನು ಕಂಡೆ ಗಾಂಧಿ ಹೇಳಿದ್ದು, ಯಾರೋ ನಿಮ್ಮ ಕಣ್ಣನ್ನು ಕಿತ್ತರು ಎಂದು ನೀವು ಇನ್ನೊಬ್ಬರ ಕಣ್ಣು ಕಿತ್ತರೆ, ಜಗತ್ತಿನ ತುಂಬೆಲ್ಲ ಕುರುಡರೇ ತುಂಬಿರುತ್ತಾರೆ ಎಂದು. ಈ ದ್ವೇಷದ ಸರಪಳಿ ತುಂಡಾಗಬೇಕೆಂದರೆ, ನಮಗಾದ ನೋವಿಗೆ ಇನ್ನೊಬರನ್ನು ಬಲಿ ತೆಗೆದುಕೊಳ್ಳುವುದೇ ಇರುವುದು. ಅದು ಸಾಧ್ಯವೇ? ಏಕಾಗಬಾರದು ಎನ್ನುವುದು ನನ್ನ ಅಭಿಮತ. ಹಾಗೇನಾದರು ಆದಲ್ಲಿ, ದೂರದರ್ಶನದಲ್ಲಿ ಅತ್ತೆ-ಸೊಸೆ ಪ್ರೀತಿಯನ್ನು ಬಿಂಬಿಸುವ ಧಾರಾವಾಹಿಗಳು ತುಂಬಿ ಹೋಗಿರುತ್ತವೆ. ಆ ಭಾಗ್ಯ ನಮ್ಮ ಕಾಲಕ್ಕೆ ಬರಬಹುದೇ?

No comments:

Post a Comment