Monday, March 29, 2021

ನೆರವಾದವರು ಕಣ್ಮರೆಯಾದಾಗ

"ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು" ಎಂದು ಗಾದೆ ಮಾತು ಇದೆಯಲ್ಲ. ಅದು ೨೦೦೯ ರ ಸಮಯ. ನಮ್ಮೂರಾದ ಮಸ್ಕಿಯಲ್ಲಿ ಮನೆ ಕಟ್ಟಿ, ಅದೇ ಮನೆಯಲ್ಲಿ ನಾನು ಮದುವೆಯಾಗ ಹೊರಟಿದ್ದೆ. ಮನೆ ಕಟ್ಟಲು ಸ್ನೇಹಿತರ ಸಹಾಯವಿತ್ತಾದರೂ, ಅವರು ನನಗಿಂತ ತುಂಬಾ ಅನುಭವಸ್ಥರೆನಿದ್ದಿಲ್ಲ. ಕಳ್ಳ ಸುಳ್ಳರೇ ತುಂಬಿರುವ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ, ಸುಣ್ಣಕ್ಕೂ ಬೆಣ್ಣೆಗೂ ವ್ಯತ್ಯಾಸ ತಿಳಿಯದ ನನಗೆ ಹೊಸ ಜಗತ್ತಿನ ಪಾಠಗಳ ಅನಾವರಣ ಆಗುತ್ತಲಿತ್ತು. ಒಪ್ಪಿಕೊಂಡು ಕೆಲಸಕ್ಕೆ ಬಂದ ಗಾರೆ ಕೆಲಸದವರು ಕೆಲಸದ ಅರ್ಧದಲ್ಲೇ ಕಣ್ಮರೆಯಾಗಿ ಬಿಡುತ್ತಿದ್ದರು. ಮತ್ತೆ ಅವರನ್ನು ನಾನು ಹುಡುಕಿ ತಂದು ಕೆಲಸಕ್ಕೆ ಹಚ್ಚಿದರೆ, ಕೆಲ ದಿನಗಳಲ್ಲಿ ಅವರು ಮತ್ತೆ ಕಣ್ಮರೆ. ಹೊಸಬರನ್ನು ಕೆಲಸಕ್ಕೆ ತಂದರೆ, ಹಳಬರು ಬಂದು ತಕರಾರು ತೆಗೆಯುತ್ತಿದ್ದರು. ನನ್ನ ಅನನುಭವದ ಜೊತೆಗೆ, ಶತ್ರುಗಳ ಕೈವಾಡವೂ ಸೇರಿ ಮನೆ ಕೆಲಸ ಮುಂದುವರೆಸುವುದು ಕಗ್ಗಂಟಾಗಿತ್ತು. 


ಆ ಸಂದರ್ಭದಲ್ಲಿ ನನಗೆ ಭೇಟಿಯಾದವನೇ ರಮೇಶ. ಜನ ಅವನನ್ನು ಕರಾಟೆ ರಮೇಶ ಎನ್ನುತ್ತಿದ್ದರು. ಚಿಕ್ಕ ಮಕ್ಕಳಿಗೆ ಕರಾಟೆ ಹೇಳಿಕೊಡುತ್ತಿದ್ದ ಅವನಿಗೆ ಅದು ಹೊಟ್ಟೆ ತುಂಬಿಸದೆ, ತನ್ನ ಕುಲ ಕಸುಬಾದ ಗಾರೆ ಕೆಲಸಕ್ಕೆ ಇಳಿದಿದ್ದ. ಅವನು ಅರ್ಧಕ್ಕೆ ನಿಂತ ನನ್ನ ಮನೆ ಕೆಲಸವನ್ನು ಕೈಗತ್ತಿಕೊಂಡ. ಹಳಬರು ನನ್ನ ಜೊತೆ ತಕರಾರಿಗೆ ಬಂದು, ದೈಹಿಕ ಘರ್ಷಣೆಯ ಮಟ್ಟಕ್ಕೆ ಇಳಿದಾಗ ಈ ರಮೇಶ ನನ್ನ ನೆರವಿಗೆ ಧಾವಿಸಿ ಬಂದ. ಬಂದವರು ಕೈ ಕೈ ಹಿಸುಕಿಕೊಂಡು ಏನು ಮಾಡಲಾಗದೆ ಹಿಂತಿರುಗಿದರು. ಇನ್ನೊಂದು ದಿನ, ಈ ರಮೇಶನನ್ನು ನನ್ನ ಜೊತೆ ಹೋಟೆಲ್ ಒಂದಕ್ಕೆ ತಿಂಡಿಗೆ ಎಂದು ಕರೆದುಕೊಂಡು ಹೋಗಿದ್ದೆ. ಅಲ್ಲಿ ಅವಸರದಲ್ಲಿ ಆಫೀಸ್ ನವರು ನನಗೆ ಕೊಟ್ಟಿದ್ದ ದುಬಾರಿಯಾದ 'ಬ್ಲಾಕ್ ಬೆರಿ' ಫೋನ್ ಬೀಳಿಸಿಕೊಂಡು ಬಿಟ್ಟಿದ್ದೆ. ಅದನ್ನು ಬೇರೆಯವರು ತೆಗೆದುಕೊಂಡು ಆ ಕ್ಷಣವೇ ಅಲ್ಲಿಂದ ಪರಾರಿಯಾಗಿದ್ದರು. ಇದನ್ನೆಲ್ಲಾ ದೂರದಿಂದ ಗಮನಿಸಿದ್ದ ರಮೇಶ ಅವರ ಬೆನ್ನತ್ತಿ, ನನ್ನ ಫೋನ್ ವಾಪಸ್ಸು ತಂದಾಗ ನನಗೆ ಹೋದ ಜೀವ ಬಂದಂತಾಗಿತ್ತು. ನಾನು ನನ್ನ ಮನೆಯ ಕೆಲಸದ ಹೆಚ್ಚಿನ ಜವಾಬ್ದಾರಿ ಅವನಿಗೆ ಹೊರಿಸಿ, ಅವನು ಹೆಚ್ಚು ದುಡಿಯುವಂತೆ ನೋಡಿಕೊಂಡೆ. ಮುಗಿಸಲು ಸಾಧ್ಯವೇ ಎಂದುಕೊಂಡಿದ್ದ ಮನೆ ಕೆಲಸ ಕೆಲವು ತಿಂಗಳುಗಳಲ್ಲಿ ಮುಗಿದೇ ಹೋಯಿತು. ಗೃಹ ಪ್ರವೇಶದ ಪೂಜೆಗೆ, ರಮೇಶನಿಗೆ ಅವನಿಷ್ಟದ ಜೀನ್ಸ್ ಪ್ಯಾಂಟ್, ಜಾಕೆಟ್ ಕೊಡಿಸಿ ನಾನು ಸಂತಸ ಪಟ್ಟಿದ್ದೆ.


ಎಲ್ಲಿಯಾದರೂ ಹೊಸ ಕೆಲಸ ಕೊಡಿಸುವಂತೆ ನನಗೆ ರಮೇಶ ಗಂಟು ಬಿದ್ದಿದ್ದ. ಆದರೆ ಅಷ್ಟೇನೂ ಕೌಶಲ್ಯತೆ ಇಲ್ಲದ ಅವನಿಗೆ ಹೆಚ್ಚಿನ ಕೆಲಸ ದೊರಕುತ್ತಿದ್ದಿಲ್ಲ. ಆಗೊಮ್ಮೆ, ಈಗೊಮ್ಮೆ ಅನಿವಾರ್ಯ ಸಮಯದಲ್ಲಿ ನನ್ನ ಹತ್ತಿರ ದುಡ್ಡು ಕೇಳಿ ಪಡೆಯುತ್ತಿದ್ದ. ದುಡ್ಡಿನ ವಿಷಯದಲ್ಲಿ ಅವನು ಹೆಸರು ಕೆಡಿಸಿಕೊಂಡಿದ್ದಾನೆ ಎಂದು ನನಗೆ ಸ್ನೇಹಿತನೊಬ್ಬ ತಿಳಿಸಿದ್ದ. ಇದರ ನಡುವೆ ಅವನು ಕುಡಿಯುವುದು ಅತಿಯಾಗಿತ್ತು. ರಾತ್ರಿ ಕುಡಿದು ಫೋನ್ ಮಾಡಿ ನನ್ನ ಹತ್ತಿರ ಬೈಸಿಕೊಂಡಿದ್ದ. ನನ್ನ ಜಗತ್ತು ಮತ್ತು ಸಮಸ್ಯೆಗಳು ಕೂಡ ಬೇರೆಯಾಗಲಾರಂಭಿಸದ್ದವು. ಕೆಲ ವರ್ಷಗಳಿಗೆ ನನ್ನ ಮತ್ತು ರಮೇಶನ ಸಂಪರ್ಕ ಕಡಿದೇ ಹೋಯಿತು.


ಮೊನ್ನೆ ಊರಿಗೆ ಹೋದಾಗ ರಮೇಶನ ಬಗ್ಗೆ ವಿಚಾರಿಸಿದೆ. ಅವನು ಕೋವಿಡ್ ಸಮಸ್ಯೆಯಲ್ಲಿ ತೀರಿ ಹೋದ ಎಂದು ತಿಳಿಯಿತು. ಅವನಿಗೆ ಇತರ ಅನಾರೋಗ್ಯ ಇತ್ತು ಎಂದು ಕೂಡ ತಿಳಿಸಿದರು. ಕೆಲ ತಿಂಗಳುಗಳ ಹಿಂದೆ ನಮ್ಮ ಮನೆಯ ಒಂದು ಚಿಕ್ಕ ಕೆಲಸ ಮಾಡಿಕೊಟ್ಟು ಹೋಗಿದ್ದ. ಅಷ್ಟೊತ್ತಿಗೆ ಆಗಲೇ ಅವನಲ್ಲಿ ಅನಾರೋಗ್ಯ ಮನೆ ಮಾಡಿತ್ತು. ಒಂದು ಸಲ ಭೇಟಿಯಾದರೆ ಆಯಿತು ಎಂದು ನಾನು ಅಂದುಕೊಳ್ಳುವಷ್ಟರಲ್ಲಿ ಅವನು ಲೋಕವನ್ನೇ ತ್ಯಜಿಸಿದ್ದ.


ಅಂತಹ ಹೇಳಿಕೊಳ್ಳುವಂತ ಕೆಲಸಗಾರ ಅವನಾಗಿರಲಿಲ್ಲ. ಹಾಗಾಗಿ ನನ್ನ ಊರಿನಲ್ಲಿ ಮತ್ತು ನನ್ನ ಸ್ನೇಹಿತರಲ್ಲಿ ಅವನಿಗೆ ಯಾವ ವಿಶೇಷ ಸ್ಥಾನವು ಇರಲಿಲ್ಲ. ಆದರೆ ಬುದ್ಧಿ ತಿಳಿಯದ ಸಮಯದಲ್ಲಿ, ನನಗೆ ಆಸರೆಯಾಗಿ ನಿಂತಿದ್ದ. ಅಸಹಾಯಕ ಪರಿಸ್ಥಿತಿಯಲ್ಲಿ, ನನ್ನ ಕೈ ಬಲ ಪಡಿಸಿದ್ದ. ಅವನ ಸಾವಿನ ಸುದ್ದಿ ನೆರವಾದವರು ಕಣ್ಮರೆಯಾದಾಗ ಹುಟ್ಟಿಸುವ ವಿಷಾದವನ್ನು ನನ್ನಲ್ಲಿ ಕೂಡ ಹುಟ್ಟಿಸಿ ಹೋಯಿತು.

ವಯಸ್ಸು, ಭಾಷೆಗಳು ಅಡ್ಡಿಯಾಗದ ಸ್ನೇಹ

ಸುಮಾರು ಹತ್ತು ವರ್ಷಗಳ ಹಿಂದೆ ಅಮೆರಿಕೆಯ ಸಾಂಟಾ ಕ್ಲಾರಾ ಪಟ್ಟಣದಲ್ಲಿ 'ಕ್ವಾಲಿಟಿ ಇನ್'  ಎಂಬ  ಹೋಟೆಲಿನಲ್ಲಿ ಸುಮಾರು ಎರಡು ತಿಂಗಳುಗಳು ಉಳಿದುಕೊಂಡಿದ್ದೆ. ಜೊತೆಗಿದ್ದ ಸಹೋದ್ಯೋಗಿಗಳು ಒಂದೆರಡು ವಾರದಲ್ಲಿ ವಾಪಸ್ಸು ಹೊರಟು ಬಿಟ್ಟರು. ನಾನು ಒಬ್ಬಂಟಿಯಾಗಿ ಹಲವು ವಾರ ಕಳೆಯಬೇಕಾದ ಅಗತ್ಯ ನನಗಿತ್ತು. ಚಳಿಗಾಲದ ಆ ಸಮಯದಲ್ಲಿ ಪ್ರವಾಸಿಗರು ತುಂಬಾ ಕಡಿಮೆ ಇದ್ದರು. ಇಡೀ ಹೋಟೆಲಿನಲ್ಲಿ ಒಂದೆರಡು ರೂಮುಗಳನ್ನು ಬಿಟ್ಟರೆ ಉಳಿದವೆಲ್ಲ ಖಾಲಿ ಖಾಲಿ. ಹಗಲು ಹೊತ್ತಿನಲ್ಲಿ ಆಫೀಸ್ ನಲ್ಲಿ ಹೊತ್ತು ಕಳೆದದ್ದು ಗೊತ್ತಾಗುತ್ತಿರಲಿಲ್ಲ. ಆದರೆ ಸಾಯಂಕಾಲಗಳು ಮತ್ತು ವಾರಾಂತ್ಯದಲ್ಲಿ ಏನು ಮಾಡುವುದು?  ತೆಗೆದುಕೊಂಡು ಹೋಗಿದ್ದ ಪುಸ್ತಕಗಳೆನ್ನೆಲ್ಲ ಓದಿ ಮುಗಿಸಿ ಆಯಿತು. ಹತ್ತಿರವಿದ್ದ ಶಾಪಿಂಗ್ ಸೆಂಟರ್ ಗಳೆನ್ನೆಲ್ಲ ಸುತ್ತಿದ್ದಾಯಿತು. ಆದರೂ ಬೇಸರ ಕಳೆಯಲೊಲ್ಲದು. 


ಒಂದು ಸಾಯಂಕಾಲ ಹೋಟೆಲ್ ಗೆ ಮರಳಿದಾಗ, ಹೋಟೆಲ್ ನ ಮಾಲೀಕ ತನ್ನ ಆಫೀಸ್ ನ ಹೊರಗೆ ನಿಂತು ನನಗೆ ಒಳ ಬರುವಂತೆ ಆಹ್ವಾನಿಸಿದ. ಸುಮಾರು ಎಪ್ಪತ್ತು ವರುಷ ಮೀರಿದ, ಧಡೂತಿ ದೇಹದ, ದಕ್ಷಿಣ ಕೊರಿಯಾ ಮೂಲದ ವ್ಯಕ್ತಿ ಆತ. ತುಂಬಾ ಮಿತ ಭಾಷಿಯಾದ ಆತ ನನ್ನನ್ನು ಮಾತನಾಡಿಸಿದ್ದು ನನಗೆ ಆಶ್ಚರ್ಯ ಮತ್ತು ಸಂತೋಷ ಒಟ್ಟಿಗೆ ಆಯಿತು. ಹೃದಯ ಬೇನೆಯಿಂದ ಬಳಲುತ್ತಿದ್ದ ಆತ ತುಂಬಾ ಪ್ರಯಾಸ ಪಟ್ಟು, ಹರುಕು-ಮುರುಕು ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದ.  ಆತನ ಹೆಸರು ಯುವಾನ್ ಎಂದು ತಿಳಿಯಿತು. ಆದರೆ ಆತನ ಉಳಿದ ಮಾತುಗಳು ನನಗೆ ಅರ್ಥ ಆಗುತ್ತಿರಲಿಲ್ಲ. ಆತನ ಜೊತೆ ಮಾತನಾಡುತ್ತ ನಾನು ಯಾವುದೊ ಸಂಬಂಧ ಇಲ್ಲದ ಪ್ರಶ್ನೆಗಳನ್ನು ಕೇಳಿದೆ. ಆತ ಅದಕ್ಕೆ ಅರ್ಥವಾಗದಂತೆ ಉತ್ತರ ಕೊಟ್ಟ. ನಮ್ಮ ಮಾತುಕತೆ ಅಸಮರ್ಪಕ ಆಗಿದ್ದರೂ, ನಾನು ಸಮಾಧಾನದಿಂದ ಆತನ ಮಾತುಗಳನ್ನು ಕೇಳಿಸಿಕೊಳ್ಳುವುದು ಆತನಿಗೆ ಇಷ್ಟವಾಗಿ ಹೋಯಿತು. ಆ ರಾತ್ರಿ ನನ್ನ ರೂಮಿಗೆ ಹಣ್ಣಿನ ಬುಟ್ಟಿ ಕಳುಹಿಸಿಕೊಟ್ಟ.


ದಿನ ಸಾಯಂಕಾಲ ನಾನು ಬರುವುದನ್ನು ಎದುರು ನೋಡುತ್ತಾ ಆತ ನನ್ನನು ಪ್ರತಿ ದಿನ ಮಾತನಾಡಿಸಲಾರಂಭಿಸಿದ. ನನಗೆ ಕ್ರಮೇಣ ಆತನ ಮಾತುಗಳು ಅರ್ಥ ಆಗಲಾರಂಭಿಸಿದವು. ನಮ್ಮ ಪರಿಚಯ ಸ್ನೇಹಕ್ಕೆ ತಿರುಗಿತು. ಉಳಿದೆಲ್ಲ ಭಾರತೀಯರು ತುಂಬಾ ಗಲಾಟೆ ಹಾಕುತ್ತಾರೆ ಆದರೆ ನಾನು ಹಾಗಲ್ಲ ಎಂದು ತಿಳಿಸಿದ. ತನ್ನ ಕುಟುಂಬದ, ಆರೋಗ್ಯದ ಸಮಸ್ಯೆಗಳನ್ನು ನನ್ನ ಹತ್ತಿರ ಹೇಳುತ್ತಿದ್ದ. ಒಬ್ಬನೇ ಇದ್ದು ಬೇಜಾರಾಗಿ ಹೋಗಿದ್ದ ನಾನು  ಸುಮ್ಮನೆ ಹೂಂ ಗುಡುತ್ತ, ಆಗೊಮ್ಮೆ ಈಗೊಮ್ಮೆ ನನಗೆ ತಿಳಿದದ್ದು ಹೇಳುತ್ತಾ ಹೋಗುತ್ತಿದ್ದೆ. ಅಷ್ಟರಲ್ಲಿ ನಾನು ಭಾರತಕ್ಕೆ ವಾಪಸ್ಸಾಗುವ ದಿನ ಬಂದೇ ಬಿಟ್ಟಿತು. ಅಂದು ಆತ ನನಗೆ ಊಟಕ್ಕೆ ಎಂದು ತನಗೆ ಇಷ್ಟವಾದ ಕಡೆ ಕರೆದುಕೊಂಡು ಹೋದ. ದಕ್ಷಿಣ ಕೊರಿಯಾದ ಆ ರೆಸ್ಟಾರಂಟ್ ನಲ್ಲಿ ಸಸ್ಯಾಹಾರಿ ತಿಂಡಿ ಯಾವುದೂ ಇರಲಿಲ್ಲ. ಕೊನೆಗೆ ಅಡುಗೆ ಮನೆಯಿಂದ ಬಾಣಸಿಗನನ್ನು ಕರೆದು ಅವರ ಭಾಷೆಯಲ್ಲಿ ಏನೋ ಹೇಳಿದ. ಅನ್ನಕ್ಕೆ ಮೊಟ್ಟೆ ಸೇರಿಸಿ ಮಾಡಿದ ಒಂದು ವಿಚಿತ್ರ ಬಗೆಯ ಭಕ್ಷ್ಯ ನನಗಾಗಿ ತಯಾರಾಗಿ ಬಂತು. ಮತ್ತೆ ಉಳಿದುಕೊಂಡಿದ್ದ ಹೋಟೆಲಿಗೆ ವಾಪಸ್ಸು ಕರೆ ತಂದು, ಇನ್ನೊಂದು ಸಲ ಬಂದಾಗ ಬಂದು ಕಾಣು ಎಂದು ಹೇಳಿ, ಕೊನೆಯ ದಿನದ ಹೋಟೆಲಿನ ಚಾರ್ಜ್ ತೆಗೆದುಕೊಳ್ಳದೆ ನನ್ನನ್ನು ಬೀಳ್ಕೊಟ್ಟ. 


ಒಂದೆರಡು ವರ್ಷದ ನಂತರ ನಾನು ಅಲ್ಲಿಗೆ ಹೋದಾಗ ಬೇರೆ ಹೋಟೆಲಿನಲ್ಲಿ ಉಳಿದುಕೊಂಡರೂ, ಆತನನ್ನು ಭೇಟಿಯಾಗಲು ಹೋದೆ. ಅನಾರೋಗ್ಯದ ಕಾರಣ ಆತ ಹೋಟೆಲಿಗೆ ಬರುತ್ತಿಲ್ಲ, ಆತನ ಮಕ್ಕಳು ಹೋಟೆಲ್ ನಡೆಸುತ್ತಾರೆ ಎಂದು ತಿಳಿಯಿತು. ನಮ್ಮ ಅನೀರೀಕ್ಷಿತ ಸ್ನೇಹಕ್ಕೆ ಅಲ್ಲಿಗೆ ತೆರೆ ಬಿದ್ದಿತು.



Friday, March 26, 2021

ಮೆಜೆಸ್ಟಿಕ್ ಅನ್ನುವ ಮಾಯಾವಿ ಲೋಕ

ನಾನು ಬೆಂಗಳೂರಿಗೆ ಬಂದು ಇಪ್ಪತ್ತು ವರ್ಷಗಳಿಗೂ ಮಿಕ್ಕಿತು. ಊರಿಗೆ ಬಂದವಳು ನೀರಿಗೆ ಬರದೇ ಇರುತ್ತಾಳೆಯೇ ಎನ್ನುವ ಹಾಗೆ ನಾನು  ಈ ಮೆಜೆಸ್ಟಿಕ್ಕಿಗೆ ನೂರಾರು ಸಲ ಬಂದಿದ್ದೇನೆ. ಪ್ರತಿ ಸಲವೂ ಇಲ್ಲಿರುವ ವಿರೋಧಾಭಾಸವು ಅಚ್ಚರಿ ಮೂಡಿಸುತ್ತದೆ. ಇಲ್ಲಿರುವ ಕಟ್ಟಡಗಳಲ್ಲಿ ಲಾಜ್, ಬಾರ್, ಟ್ರಾವೆಲ್ ಏಜನ್ಸಿ ಗಳದ್ದೇ ದರ್ಬಾರು. ಆದರೆ ಬೀದಿಯಲ್ಲಿ ಶೇಂಗಾ, ಪಾನ್ ಬೀಡದಿಂದ ಹಿಡಿದು ಅತ್ಯಾಧುನಿಕ ಇಲೆಕ್ಟ್ರಾನಿಕ್ ಉಪಕರಣಗಳು ಲಭ್ಯ. ಸುಸಜ್ಜಿತ ಹೋಟೆಲಿನಲ್ಲಿ ನೀವು ೩೦೦ ರೂಪಾಯಿ ಕೊಟ್ಟು ಹೊಟ್ಟೆ ತುಂಬಿಸಿಕೊಂಡರೆ, ಅದನ್ನೇ ನೀವು ಮೂವತ್ತು ರೂಪಾಯಿಯಲ್ಲಿ ಆ ಹೋಟಲ್ ನ ಎದುರಿಗೆ ಇರುವ ಬಂಡಿಯಲ್ಲಿ ಎಗ್ ರೈಸ್ ತಿಂದು ತುಂಬಿಸಿಕೊಳ್ಳಬಹುದು. ಇಲ್ಲವೇ ನಿಮ್ಮ ಜೇಬು ಖಾಲಿ ಇದ್ದರೆ, ಹತ್ತು ರೂಪಾಯಿಗೆ ಎರಡು ಬಾಳೆ ಹಣ್ಣು ತಿಂದು ಬಸ್ ಹತ್ತಬಹುದು. ಹೀಗೆ ನಿಮ್ಮ ಜೇಬಿನಲ್ಲಿರುವ ದುಡ್ಡಿಗೆ ತಕ್ಕಂತೆ ಇಲ್ಲಿ ಬೀದಿಯಿಂದ ಆಕಾಶದವರೆಗೆ ಏಣಿ ಉಂಟು. ಇದು ಮೆಜೆಸ್ಟಿಕ್ ನಲ್ಲಿ ಕಾಣ ಸಿಕ್ಕ ಹಾಗೆ ಬೆಂಗಳೂರಿನ ಇತರೆ ಪ್ರದೇಶಗಳಲ್ಲಿ ಕಂಡು ಬರುವುದಿಲ್ಲ. ಏಕೆಂದರೆ ಬೆಂಗಳೂರು ಎನ್ನುವ ಊರು ನಿಮ್ಮ ಆದಾಯಕ್ಕೆ ತಕ್ಕಂತೆ ನಿಮ್ಮನ್ನು ವ್ಯವಸ್ಥಿತವಾಗಿ ವಿಂಗಡಿಸುತ್ತ ಹೋಗುತ್ತದೆ. ಉದಾಹರಣೆಗೆ ವೈಟ್ ಫೀಲ್ಡ್ ನಲ್ಲಿರುವ ryaan ಇಂಟರ್ನ್ಯಾಷನಲ್ ಸ್ಕೂಲ್ ಅಥವಾ ಸಹಕಾರ ನಗರದಲ್ಲಿರುವ ಕೆನಡಿಯನ್ ಸ್ಕೂಲ್ ಗೆ ನೀವು ಮಾರುತಿ ಕಾರಲ್ಲಿ ಹೋದರೆ ಅಲ್ಲಿನ ವಾಚುಮನ್  ನಿಮ್ಮನ್ನು ನಿಮಗೆ ಈ ಸ್ಕೂಲ್ ಸರಿ ಹೊಂದುವುದಿಲ್ಲ ಎಂದು ನಿಮಗೆ ವಾಪಸ್ಸು ಕಳುಹಿಸುತ್ತಾನೆ. ಹಾಗೆಯೇ ಇಲ್ಲಿರುವ ಕೆಲವು ಕ್ಲಬ್ ಗಳು ಹಾಗೆಯೆ ರೆಸಾರ್ಟ್ ಗಳು ಕಡಿಮೆ ವೆಚ್ಚದವರಿಗೆ ನೋಟಕ್ಕೂ ಸಹ ಸಾಧ್ಯವಾಗುವುದಿಲ್ಲ. ಕೋರಮಂಗಲ, ಇಂದಿರಾನಗರದಲ್ಲಿ ನೀವು ವಾಸಿಸಲು ನಿಮ್ಮ ಆದಾಯ ಪ್ರತಿ ತಿಂಗಳಿಗೂ ಕೆಲ ಲಕ್ಷಗಳಿಗೂ ಮಿಕ್ಕಬೇಕು.


ನೀವು ಮುಂಬೈ, ದೆಹಲಿ ಸುತ್ತಿದ್ದರೆ ಈ ತರಹದ ವಿರೋಧಾಭಾಸವನ್ನು ಊರಿನ ಉದ್ದಗಲಕ್ಕೂ ಕಾಣಬಹುದು. ಆದರೆ ನಮ್ಮ ಬೆಂಗಳೂರು ಮಾತ್ರ ಮೆಜೆಸ್ಟಿಕ್ ಹೊರತು ಪಡಿಸಿ ಬಡವ - ಶ್ರೀಮಂತರನ್ನು ಒಂದೇ ಉಸಿರಿನಲ್ಲಿ ಮಾತನಾಡಿಸುವುದಿಲ್ಲ.  ಹೀಗೆ ಕಾಸಿಗೆ ತಕ್ಕಂತೆ ಕಜ್ಜಾಯ ಎನ್ನುವ ಊರಿನ ಮೆಜೆಸ್ಟಿಕ್ ಭಾಗ ಮಾತ್ರ ಎಲ್ಲ ಜನರಿಗೂ ಕೇಂದ್ರ ಸ್ಥಳವಾಗಿ, ಅವರವರ ಭಾವಕ್ಕೆ, ಭಕುತಿಗೆ ತಕ್ಕಂತೆ ಸೇವೆ ಒದಗಿಸುತ್ತದೆ. ಹಾಗಾಗಿ ನನಗೆ ಇದು  ಮಾಯಾವಿ ಲೋಕದ ಹಾಗೆ ತೋರುತ್ತದೆ.

Sunday, March 14, 2021

ಯಶಸ್ಸಿನ ತುದಿಯಲ್ಲಿ ಎಲ್ಲರೂ ಒಬ್ಬಂಟಿಗರೇ

ನಮ್ಮ ಶಾಲಾ ದಿನಗಳಲ್ಲಿ ನಮಗೆ ನೂರಾರು ಜನ ಸ್ನೇಹಿತರಿದ್ದರಿಲ್ಲ. ಆದರೆ ಇಂದಿಗೆ ಅವರಲ್ಲಿ ಕೆಲವರು ಮಾತ್ರ ಸಂಪರ್ಕದಲ್ಲಿ ಉಳಿದು, ಉಳಿದವರೆಲ್ಲ ಕಳೆದು ಹೋಗಲಿಲ್ಲವೇ? ನಾವು ಚಿಕ್ಕವರಿದ್ದಾಗ 'ಅದು ಸರಿ, ಇದು ತಪ್ಪು' ಅಥವಾ 'ಅವರು ಒಳ್ಳೆಯವರು, ಇವರು ಕೆಟ್ಟವರು' ಎನ್ನುವ ಭಾವ ಬಲವಾಗಿ ಇರಲಿಲ್ಲ. ಹಾಗಾಗಿ ಊರಿನ ಜನರೆಲ್ಲಾ ಹತ್ತಿರದವರು ಎನಿಸುತ್ತಿದ್ದರು. ಮುಂದೆ ಕಹಿ ಸತ್ಯಗಳ ಅರಿವಾದಂತೆ ನಮ್ಮ ಆತ್ಮೀಯರ ಸಂಖ್ಯೆ ಕ್ಷೀಣಿಸುತ್ತಾ ಹೋಯಿತು. ನೂರಾರು ತೋರಿಕೆಯ ಸ್ನೇಹಿತರ ಬದಲು, ಹತ್ತಾರು ನಿಜ ಸ್ನೇಹಿತರಿದ್ದರೆ ಸಾಕು ಎನಿಸುವಂತೆ ಆಯಿತು. ನಮಗೇ ಇಂತಹ ಅನುಭವಗಳು ಆಗಬೇಕಾದರೆ ಯಶಸ್ಸಿನ ಮೆಟ್ಟಿಲನ್ನು ಏರಿದ ಮಹಾನುಭಾವರ ಜೀವನ ಇನ್ನೂ ಒಬ್ಬಂಟಿ ತನದಿಂದ ಕೂಡಿರುತ್ತದೆ ಎನ್ನುವುದು ಪಿ.ವಿ.ನರಸಿಂಹ ರಾವ್ ರವರ ಜೀವನಗಾಥೆಯನ್ನು (Book: Half Lion by Vinay Sitapati) ಓದಿದಾಗ ಅರಿವಾಯಿತು.


ಆಂಧ್ರ ಪ್ರದೇಶದ ಹಳ್ಳಿಯೊಂದರಲ್ಲಿ ಹುಟ್ಟಿ, ಕುಟುಂಬದ  ಆಸ್ತಿಯನ್ನು ಉಳಿಸಿಕೊಳ್ಳಲು ರಾಜಕಾರಣಕ್ಕೆ ಬಂದು, ಹಳ್ಳಿ, ತಾಲೂಕು, ಜಿಲ್ಲಾ ಮಟ್ಟದ ರಾಜಕಾರಣದಿಂದ ರಾಜ್ಯ ಮಟ್ಟದ ರಾಜಕಾರಣಕ್ಕೆ ಏರಿ ನಂತರ ದೆಹಲಿಯ ಗದ್ದುಗೆ ಏರಿದವರು ಪಿ.ವಿ.ನರಸಿಂಹ ರಾವ್. ಒಂದೂರಿಂದ ಇನ್ನೊಂದೂರಿಗೆ, ಸಣ್ಣ ಸಮಸ್ಯೆಗಳಿಂದ ದೊಡ್ಡ ಸಮಸ್ಯೆಗಳಿಗೆ ದಾಪುಗಾಲಿಟ್ಟವರು ಅವರು. ಇಂದಿರಾ ಗಾಂಧಿಯವರಿಗೆ ಹತ್ತಿರದವರಾಗಿ, ಹಲವು ಹುದ್ದೆಗಳನ್ನು ನಿಭಾಯಿಸಿದ ಅವರು ರಾಜೀವ್ ರಿಂದ ಕಡೆಗಣಿಸಲ್ಪಟ್ಟರು. ರಾಜೀವರ ಮರಣಾ ನಂತರ ಒಲಿದು ಬಂದ ಪ್ರಧಾನಿ ಪಟ್ಟವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ, ಭಾರತದ ಆರ್ಥಿಕ ವ್ಯವಸ್ಥೆಯನ್ನು ಬದಲಾಯಿಸಿದ ಹೆಗ್ಗಳಿಕೆ ಅವರದ್ದು. ಆದರೆ ಅವರ ವೈಯಕ್ತಿಕ ಜೀವನದಲ್ಲಿ ಅವರನ್ನು ಒಬ್ಬಂಟಿತನ ಕಾಡದೆ ಇರಲಿಲ್ಲ. ಯಶಸ್ಸು, ಅಧಿಕಾರ ತಂದೊಡ್ಡುವ ಹಲವಾರು ಧರ್ಮ ಸಂಕಟಗಳು ನೂರಾರು ಜನರು ಸುತ್ತಲಿದ್ದರೂ, ಒಬ್ಬಂಟಿತನ ಕಾಡುವಂತೆ ಮಾಡಿಬಿಡುತ್ತವೆ. ಪ್ರಧಾನಿ ಪಟ್ಟದ ಮುಂಚೆ, ಅಧಿಕಾರದ ನಡುವೆ ಮತ್ತು ನಂತರ ಪಿ.ವಿ.ನರಸಿಂಹ ರಾವ್ ರವರು ಕಳೆದ ಹಲವಾರು ಒಬ್ಬಂಟಿ ಸಂಜೆ, ರಾತ್ರಿಗಳನ್ನು ದಾಖಲಿಸುತ್ತದೆ ಈ ಪುಸ್ತಕ.


ಯಶಸ್ಸಿನ ತುದಿಯಲ್ಲಿ ನಿಮಗೆ ನಿಮ್ಮನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಹಾಗೆಯೇ ಪ್ರಾಮಾಣಿಕವಾಗಿ ಅಭಿಪ್ರಾಯ ಹಂಚಿಕೊಳ್ಳಲು ಗೆಳೆಯರೂ ಉಳಿದಿರುವುದಿಲ್ಲ.




Wednesday, February 17, 2021

ಇದೊಂದು ಮಾತು ಕೇಳುವುದು ಬಾಕಿಯಿತ್ತು

ಯಾವುದಾದರು ಜಗಳದಲ್ಲಿ, ಸಾಕಷ್ಟು ಅಪವಾದಗಳನ್ನು ಕೇಳಿ ಆದ ಮೇಲೆ, ಸಹನೆಯ ಕೊನೆ ಹಂತದಲ್ಲಿ "ಇದೊಂದು ಮಾತು ಕೇಳುವುದು ಬಾಕಿಯಿತ್ತು" ಎಂದು ಅವರಿವರು ಮಾತನಾಡುವುದು ಕೇಳುತ್ತಿರುತ್ತೇವೆ. ಅಥವಾ ಅಂತಹ ಅನುಭವ ನಮಗೇ ಆಗಿರುತ್ತದೆ. (ನಿಮಗೆ ಅಂತಹ ಅನುಭವ ಆಗಿರದೆ ಇದ್ದರೆ ನಿಮ್ಮನ್ನು ನೀವು ಲಕ್ಕಿ ಅಂದುಕೊಳ್ಳಬೇಡಿ. ಅಂತಹ ಅನುಭವಕ್ಕಾಗಿ ನೀವು ಕಾಯುತ್ತಿದ್ದಿರಿ ಎಂದಷ್ಟೇ ಅದರ ಅರ್ಥ).


ವ್ಯಕ್ತಿತ್ವ ಪಕ್ವವಾಗುವ ದಾರಿಯಲ್ಲಿ ನೋವುಗಳು ಸಹಜ. ಇತರರು ನಮ್ಮನ್ನು ನಾವು ಅಂದುಕೊಂಡ ಹಾಗೆ ನೋಡದೆ ಹೋಗಬಹುದು. ಸಂಬಂಧಗಳಲ್ಲಿ ಹೊಂದಾಣಿಕೆಗೆ ನಾವು ಎಷ್ಟೇ  ಪ್ರಾಮಾಣಿಕ ಪ್ರಯತ್ನ ಪಟ್ಟರೂ, ಅದು ಇತರರಿಗೆ ಒಪ್ಪಿಗೆ ಆಗದೆ ಹೋಗಬಹುದು. ನಮ್ಮ ಜೊತೆಯಲ್ಲಿರುವ ಎಲ್ಲರಿಗೂ, ಎಲ್ಲ ಕಾಲದಲ್ಲೂ ನಮ್ಮ ಅನಿಸಿಕೆ, ಅಭಿಪ್ರಾಯಗಳು ಸರಿ ಕಾಣಬೇಕೆಂದು ಏನಿದೆ? ಆಗ ಮೂಡಿದ ಭಿನ್ನಾಭಿಪ್ರಾಯಗಳು, ನಮ್ಮನ್ನು ಟೀಕೆ, ವಿಮರ್ಶೆಗೆ ಗುರಿ ಮಾಡುತ್ತವೆ. ಸಣ್ಣ ಪುಟ್ಟ ಟೀಕೆಗೆ ಬೆದರದ ನಾವು, ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ಹೋದಾಗ, ಕೊನೆಗೆ ನಮಗೆ ಸಹನೀಯವಲ್ಲದ ಮಾತು ಕೇಳಿ ಬಂದಾಗ ನಮಗರಿವಿಲ್ಲದಂತೆ ಹೇಳುತ್ತೇವೆ "ಇದೊಂದು ಮಾತು ಕೇಳುವುದು ಬಾಕಿಯಿತ್ತು"


ಎಷ್ಟೋ ಸಲ ಇಂತಹ ಮಾತು ನಿರ್ಣಾಯಕ ಹಂತದಲ್ಲಿ ಬಂದು ಬಿಡುತ್ತದೆ. ಅಲ್ಲಿಂದಾಚೆಗೆ ಯಾವುದೊ ಒಂದು ನಿರ್ಣಯದಲ್ಲಿ ಕೊನೆಗೊಳ್ಳುವ ವಿವಾದ ನಮ್ಮನ್ನು ಘಾಸಿಗೊಳಿಸುವುದು ಸಹಜ. ಆಗ ನಮಗೆ ನೋವಾಗುವುದು ಬೇರೆಯವರು ನಮ್ಮನ್ನು ಅರ್ಥ ಮಾಡಿಕೊಂಡ ರೀತಿಗೆ. 


ಯಾವುದಾದರೂ ಕೆಲಸ ನಾವು ಸ್ವಯಂ ತೃಪ್ತಿಗಾಗಿ ಮಾಡಿದ್ದರೆ, ಇತರರು ಅದನ್ನು ಹೊಗಳಿದರೂ ಇಲ್ಲವೇ  ತೆಗಳಿದರೂ ನಾವೇಕೆ ಅದರ ಕಡೆಗೆ ಗಮನ ಹರಿಸುತ್ತಿದ್ದೆವು? ಇಲ್ಲಿ ಸ್ವಲ್ಪ ವಿಚಾರ ಮಾಡಿ ನೋಡಿದರೆ ನಮಗೇ ಅರಿವಾಗುವುದು ನಮಗೆ ಘಾಸಿ ಮಾಡಿದ್ದು ಬೇರೆಯವರು ನಮ್ಮನ್ನು ಆದರಿಸಲಿ ಎನ್ನುವ ನಮ್ಮ ಸುಪ್ತ ಮನಸಿನ ಬಯಕೆಯಿಂದ. ನಮಗೆ ನಾವು ಏನೋ ಅಂದುಕೊಂಡಿರುತ್ತೇವೆಲ್ಲ, ಅದು ನಮ್ಮನ್ನು ದಾರಿ ತಪ್ಪಿಸುತ್ತದೆ. ಅದರಿಂದ ಹೊರ ಬಂದು ನಿರ್ಲಿಪ್ತ ಮನಸ್ಸಿನಿಂದ ನಡೆದುಕೊಂಡರೆ ನಮಗೆ ನೋವುಂಟು ಮಾಡುವ ಶಕ್ತಿ ಯಾರಿಗೆ ಇದೆ? ಇನ್ನೊಬ್ಬರು ಏನಾದ್ರು ಅನ್ನಲಿ, ಅವರು ಕೊಡುವ ಸರ್ಟಿಫಿಕೇಟ್ ನಮಗೇನು ಉಪಯೋಗ? ನಮಗೆ ನಾವು ಏನು ಎಂಬುದರ ಅರಿವು ಬಂದ ಮೇಲೆ ನಮಗೆ ಬೇರೆಯವರ ಸಮರ್ಥನೆಯ ಅವಶ್ಯಕತೆ ಇರುವುದಿಲ್ಲ. ಆಗ ನಮಗೆ ವ್ಯಕ್ತಿತ್ವದಲ್ಲಿ ಬರುವ ಪಕ್ವತೆ ಒಂದು ತಡೆಗೋಡೆಯಾಗಿ ಅಪವಾದಗಳಿಗೆ ಪ್ರತಿರೋಧ ಒಡ್ಡುತ್ತದೆ. ಯಾರು ಏನು ಎಂದರೂ, ಅದು ನಮ್ಮ ಕಿವಿಯನ್ನು ದಾಟಿ ಹೃದಯ ತಲುಪಿ ಘಾಸಿಗೊಳಿಸುವುದಿಲ್ಲ.


ಅಪವಾದಗಳು ಮತ್ತೆ ಬಂದೇ ಬರುತ್ತವೆ. ಆವಾಗ "ಇದೊಂದು ಮಾತು ಕೇಳುವುದು ಬಾಕಿಯಿತ್ತು" ಎನ್ನುವ ಮಾತು ನಿಮ್ಮ ಬಾಯಿಂದ ಹೊರಬಿದ್ದರೂ, ಅದು ನಿಮಗೆ ಯಾವುದೇ ನೋವು ಉಂಟು ಮಾಡದೇ ಇದ್ದರೆ ನಿಮಗೆ ಅಭಿನಂದನೆಗಳು.