'ಬಾನಲ್ಲು ನೀನೆ, ಭುವಿಯಲ್ಲೂ ನೀನೆ,
ಎಲ್ಲೆಲ್ಲೂ
ನೀನೆ, ನನ್ನಲ್ಲೂ ನೀನೇ"
ಇದು
ಒಂದು ಪ್ರೇಮಗೀತೆ ಆದರೂ, ಭಗವಂತನನ್ನು ಸ್ಮರಿಸಿ ಈ ಗೀತೆ ಹಾಡಿದರೆ
ಇದು ಒಂದು ಭಕ್ತಿ ಗೀತೆಯಾಗಿ
ಬದಲಾದೀತು.
'ಪೂಜಿಸಲೆಂದೇ
ಹೂಗಳ ತಂದೆ,
ದರುಶನ
ಕೋರಿ ನಾ ನಿಂದೆ,
ತೆರೆಯೋ
ಬಾಗಿಲನು, ರಾಮ'
ಇದು
ಒಂದು ದೇವರ ಪೂಜೆ ಗೀತೆ
ಎನಿಸಿದರೂ, ಒಂದು ಪ್ರೇಮ ಗೀತೆಯ
ತರಹ ಚಿತ್ರಿತಗೊಂಡಿದೆ. ಪ್ರೇಮವಾಗಲಿ, ಭಕ್ತಿಯಾಗಲಿ ಒಂದೇ ಭಾವನೆಯ ತಳಹದಿಯ
ಮೇಲೆ ಹುಟ್ಟಿದಂತವು. ಹಾಗಾಗಿ ಎರಡಕ್ಕೂ ಹೆಚ್ಚಿನ ವ್ಯತಾಸವೇನಿಲ್ಲ. ಸಮರ್ಪಣಾ ಹಾಗು ನಿಸ್ವಾರ್ಥ ಭಾವದಿಂದ
ಕೂಡಿದ್ದರೆ, ಎರಡು ಕೂಡ ಸುಲಲಿತವಾಗಿ
ಸಾಗುತ್ತವೆ. ಇಲ್ಲವೇ ಭ್ರಮ ನಿರಸನ ಎನ್ನುವುದು
ಕಟ್ಟಿಟ್ಟ ಬುತ್ತಿ.
ಒಂದು
ವೇಳೆ ಪ್ರೇಮವು ಸ್ವಾರ್ಥದಿಂದ ಕೂಡಿದ್ದರೆ, ಯಾವುದೊ ಮಹಾನ್ ಪ್ರೇಮಿಯನ್ನು ತಾನು ಪ್ರೀತಿಸಿದ್ದೇನೆ ಎನ್ನುವ
ಭ್ರಮೆಯಲ್ಲಿ 'ತೆರೆಯೋ ಬಾಗಿಲನು' ಎಂದು ಹಾಡಿದರೆ, ತೆರೆದ
ಬಾಗಿಲಿನಾಚೆ ಇರುವುದು ಒಬ್ಬ ಅಡ್ಡನಾಡಿ, ನಿರುಪಯೋಗಿ
ರಾಮ ಎಂದು ಗೊತ್ತಾದಾಗ ನಿರಾಸೆ
ಆಗುವುದಿಲ್ಲವೇ? ಪ್ರೀತಿಸುವುದಕ್ಕಿಂತ ಮುಂಚೆಯೇ ತನ್ನ ರಾಮ ಎಂಥವನು
ಎನ್ನುವ ಅರಿವು ಇರಬೇಕಿತ್ತಲ್ಲವೇ? ಹಾಗೆಯೇ ಭಕ್ತಿಯೂ ಕೂಡ ಅಷ್ಟೇ. ಯಾವುದೊ
ಆಸೆಯನ್ನು ಮನದಲ್ಲಿಟ್ಟುಕೊಂಡು, 'ಇಂದ್ರ-ಚಂದ್ರ' ಎಂದು ದೇವರನ್ನು ಗುಣಗಾನ
ಮಾಡುತ್ತಾ ಹಾಡಿದರೆ, ದೇವರು ಒಲಿದೆ ಒಲಿಯುತ್ತಾನೆ ಎಂದು ಏನು ಗ್ಯಾರಂಟಿ?
ಪ್ರೇಮಿ
ಹೇಗೆ ಕೈ ಕೊಟ್ಟು ಪಾರಾಗುತ್ತಾನೋ,
ದೇವರು ಕೂಡ ಕೇಳಿದ್ದು ಕೊಡದೆ ಆಟವಾಡಿಸುತ್ತಾನೆ.
ಅದಕ್ಕೆ
ಸಮರ್ಪಣೆ, ನಿಸ್ವಾರ್ಥತೆ ಇರದೇ ಇದ್ದರೆ ಪ್ರೇಮವಾಗಲಿ,
ಭಕ್ತಿಯಾಗಲಿ ವ್ಯರ್ಥ ಎಂದು ನನಗೆ ಅನಿಸಿದ್ದು.
ನೀ ಹೇಗಿದ್ದಿಯೋ ಹಾಗೆ ನನಗೆ ಒಪ್ಪಿಗೆ
ಎನ್ನುವ ಪ್ರೇಮಿ, ನೀನು ಕೊಟ್ಟಿದ್ದೆ ನನಗೆ
ಪ್ರಸಾದ ಎನ್ನುವ ಭಕ್ತ ಇವರಿಬ್ಬರ ಶೃದ್ಧೆ
ಬಹಳ ದೊಡ್ಡದು. ಅವರಿಗೆ ನಿರಾಸೆ ಎನ್ನುವುದಿಲ್ಲ. ಆದರೆ ಅಂತಹ ಪ್ರೇಮಿಗಳಾಗಲಿ,
ಭಕ್ತರಾಗಲಿ ಇರುವುದು ವಿರಳ. ಹಾಗಾಗಿ ಪ್ರೀತಿ ವಿರಸದಲ್ಲಿ ಮತ್ತು ಭಕ್ತಿ ಭ್ರಮ ನಿರಸನದಲ್ಲಿ ಬದಲಾಗುವ
ಸಂಭವನೀಯತೆಯೇ ಹೆಚ್ಚು. ಹಾಗೆಯೇ ಸಮರ್ಪಣೆ, ನಿಸ್ವಾರ್ಥತೆ ಇದ್ದಲ್ಲಿ ಪ್ರೇಮ,
ಭಕ್ತಿಗಳು ಕೂಡ ಅಜರಾಮರ.