ಹಣಕಾಸಿನ ವಿಚಾರದಲ್ಲಿ ಮೋಸ ಹೋದ ಅನುಭವಗಳು ಸಾಕಷ್ಟು ಜನರಿಗೆ ಆಗಿರುತ್ತದೆ. ಹಾಗೆಯೆ ಯಾವುದೊ ಕೆಲಸ ಮಾಡಿಕೊಡುತ್ತೇನೆ ಎಂದು ಕರೆದುಕೊಂಡು ಹೋಗಿ ನಡು ನೀರಿನಲ್ಲಿ ಕೈ ಬಿಟ್ಟು ಹೋಗುತ್ತಾರಲ್ಲ. ಅಂತಹ ಅನುಭವಗಳ ಬಗ್ಗೆ ಸಾಕಷ್ಟು ಸ್ನೇಹಿತರಿಂದ ಕೇಳಿ ತಿಳಿದುಕೊಂಡಿದ್ದೇನೆ. ಮರಾ ಮೋಸದಲ್ಲಿ ಆಗುವ ಕೊಲೆ, ಸುಲಿಗೆಗಳ ಬಗ್ಗೆ ದಿನ ಪತ್ರಿಕೆಗಳಲ್ಲಿ ಆಗಾಗ ಓದುತ್ತಿರುತ್ತೇವೆ. ಇವೆಲ್ಲ ಘಟನೆಗಳಲ್ಲಿ ಮೋಸ ಹೋದವರು ಒಂದು ಮುಗ್ದರು ಇಲ್ಲವೇ ಯಾವುದೊ ಕುರುಡು ನಂಬಿಕೆಯಿಂದ ಬಂದು ಸಿಕ್ಕಿ ಹಾಕಿಕೊಂಡವರು. ಆದರೆ ಮೋಸ ಮಾಡುವವರು ಮಾತ್ರ ಚಾಣಾಕ್ಷರು. ಅವರಿಗೆ ಯಾರನ್ನು ಹೇಗೆ ಹಳ್ಳಕ್ಕೆ ಬೀಳಿಸಬೇಕು ಎನ್ನುವುದರಲ್ಲಿ ಪರಿಣಿತಿ ಇದೆ. ಮೋಸಗಾರರು ಯಾಕೆ ಮೋಸ ಮಾಡುತ್ತಾರೆ ಎಂದು ವಿಚಾರ ಮಾಡಿ ನೋಡಿದರೆ, ಅವರು ಕಷ್ಟ ಪಟ್ಟು ದುಡಿಯುವುದಕ್ಕೆ ಇಷ್ಟ ಪಡದೆ ಸುಲಭದ ಮಾರ್ಗಗಳನ್ನೇ ಆಯ್ದುಕೊಂಡಿರುತ್ತಾರೆ. ಆ ಕಲೆ ಒಮ್ಮೆ ಕರಗತವಾದರೆ ಸಾಕು, ಅವರು ಮನುಷ್ಯ ರಕ್ತದ ರುಚಿ ನೋಡಿದ ಹುಲಿಯ ಹಾಗೆ ನರಭಕ್ಷಕರಾಗಿ ತಯಾರಾಗಿ ಹೋಗುತ್ತಾರೆ. ಅಲ್ಲಿಂದ ಅವರಿಗೆ ಬೇರೆ ಯಾವ ವೃತ್ತಿಯು ರುಚಿಸುವುದಿಲ್ಲ. ಬೇಟೆ ಹುಲಿಯ ತಣ್ಣನೆಯ ಕ್ರೌರ್ಯ ಅವರಲ್ಲಿ ಮೈಗೂಡಿ ಬಿಡುತ್ತದೆ. ಮಿಕ ಬಲೆಗೆ ಬೀಳುವವರೆಗೆ ಬೇರೆಯೇ ಮುಸುಕು ಧರಿಸುವ ಅವರು, ತಮ್ಮ ನಿಜ ಗುಣವನ್ನು ತೋರಿಸಿಕೊಡುವುದು ತಮ್ಮ ಬೇಟೆಯನ್ನು ಸವಿಯುವಾಗಲೇ.
ಕೆಲವು ಮುನ್ನೆಚ್ಚರಿಕೆಗಳನ್ನು
ವಹಿಸಿದರೆ, ಮೋಸಗಾರರ ಜಾಡನ್ನು ಗ್ರಹಿಸುವುದು ಕಷ್ಟದ ಕೆಲಸವೇನಲ್ಲ. ಆದರೆ ಅವರು ನಿಮ್ಮ ಜೊತೆಗೆ ಹಲವಾರು
ವರುಷ ಪ್ರಾಮಾಣಿಕತೆಯಿಂದ ವ್ಯವಹರಿಸಿ, ನಿಮ್ಮ ನಂಬಿಕೆ ಗಳಿಸಿಕೊಂಡಿದ್ದರೆ, ಅವರ ಜೊತೆಗೆ ನಿಮ್ಮ ಮುನ್ನೆಚ್ಚರಿಕೆಗಳು
ಕಡಿಮೆ ಮಟ್ಟದಲ್ಲಿ ಇರುತ್ತವೆ. ಹೀಗೆ ಒಂದು ನಿಮ್ಮ ಅಜಾಗರೂಕತೆಯ ಕ್ಷಣದಲ್ಲಿ, ನಂಬಿಕೆಯ ಸಂಪೂರ್ಣ
ಲಾಭ ಪಡೆದು ನಿಮ್ಮನ್ನು ಅವರು ದೊಡ್ಡ ಕುತ್ತಿಗೆ ಸಿಕ್ಕಿಸಿಬಿಡುತ್ತಾರೆ. ಆಗ ನಿಮಗೆ ಬೇಟೆ ಹುಲಿಯ
ಮತ್ತು ಅದರ ತಣ್ಣನೆಯ ಕ್ರೌರ್ಯದ ದರ್ಶನವಾಗುತ್ತ ಹೋಗುತ್ತದೆ. ನಿಮಗೆ ಸಾಮರ್ಥ್ಯವಿದ್ದಲ್ಲಿ ಅವರ ಕಪಿ
ಮುಷ್ಟಿಯಿಂದ ಹೊರ ಬಂದು, ಅವರನ್ನು ದೂರ ಇಡುತ್ತೀರಿ.
ಒಂದು ವೇಳೆ ಈ
ಮೋಸಗಾರರು ನಿಮ್ಮ ಕುಟುಂಬದವರೇ, ಅಥವಾ ನಿಮ್ಮ ಪತಿ, ಪತ್ನಿಯೇ ಆಗಿದ್ದರೆ? ಆಗ ಮೋಸದಿಂದ ಆದ ನಷ್ಟಕ್ಕಿಂತ,
ನಂಬಿಕೆಗೆ ಆದ ಮೋಸ ಹೆಚ್ಚು ಇರಿಯುತ್ತದೆ. ಚಾಕು ಬೆನ್ನಿಗೆ ಬಿದ್ದಿದ್ದರು, ಅದು ಎದೆಗೆ ಇರಿದಿರುತ್ತದೆ.
ಅರೆ, ಏಕೆ ಹೀಗಾಯ್ತು ಎಂದು ಅವಲೋಕಿಸಿದಾಗ, ಮೋಸದ ಹೆಜ್ಜೆ ಜಾಡುಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.
ಎಂತಹ ವ್ಯಕ್ತಿಯನ್ನು ನಂಬಿ ಬಿಟ್ಟೆನೆಲ್ಲಾ ಎಂದು ನಮಗೆ ನಾವೇ ಅಂದುಕೊಳ್ಳುತ್ತೇವೆ. ಆ ವ್ಯಕ್ತಿಗೆ
ಕಷ್ಟ ಕಾಲದಲ್ಲಿ ನೀವು ಸಹಾಯ ಮಾಡಿದ್ದರಂತೂ ಮುಗಿದೇ ಹೋಯಿತು. 'ನೀನೆ ಸಾಕಿದ ಗಿಣಿ' ಹಾಡಿನ ಪ್ರತಿ
ಪದದ ಭಾವಾರ್ಥ ನೀವು ಬಿಡಿಸಿ ಹೇಳಬಲ್ಲಿರಿ.
ಆಗಿ ಹೋದದ್ದಕ್ಕೆ ಕೊರಗುವುದಕ್ಕಿಂತ, ಮುಂದೆ ಮಾಡಬೇಕಾದ್ದರ ಬಗ್ಗೆ ಯೋಚಿಸುವುದು ಜಾಣತನ. ಆದರೆ ಮುಂದಿನ ದಾರಿಗಳು ಎಲ್ಲವೂ ನೋವಿನಿಂದ ಕೂಡಿರುತ್ತವಲ್ಲ. ನೀವು ಅವರನ್ನು ಕ್ಷಮಿಸಿದರೂ, ಅವರು ಮತ್ತೆ ಕತ್ತಿ ಮಸೆಯತೊಡಗುತ್ತಾರೆ. ಮತ್ತೆ ಅವರನ್ನು ನಂಬುವುದು ರಾತ್ರಿ ಕಂಡ ಭಾವಿಯಲ್ಲಿ ಹಗಲು ಬಿದ್ದ ಹಾಗೆ. ತಣ್ಣನೆಯ ಕ್ರೌರ್ಯದ ನರಭಕ್ಷಕ ಹುಲಿ ಬದಲಾದ ಕಥೆ ಎಲ್ಲಾದರೂ ಕೇಳಿದ್ದೀರಾ? ಸಾಧ್ಯವಾದಲ್ಲಿ ಆ ಸಂಬಂಧದಿಂದ ಹೊರ ಬರುವುದು ಇಲ್ಲವಾದಲ್ಲಿ ಮನಸ್ಸಿನಿಂದ ಕಿತ್ತು ಹಾಕುವುದು ನಿಮಗೆ ಉಳಿದಿರುವ ದಾರಿ. ಅವರಿಗಿರುವ ಆಯುಧಗಳನ್ನೆಲ್ಲ ಕಿತ್ತು ಹಾಕಿ, ಅವರಿಗೆ ನಿಮ್ಮನ್ನು ಘಾಸಿಗೊಳಿಸುವ ಮಾರ್ಗಗಳನ್ನೆಲ್ಲ ಮುಚ್ಚಿ ಹಾಕದಿದ್ದರೆ, ಮತ್ತೆ ಹಳೇ ಅನುಭವಗಳಿಗೆ ನೀವು ತಯಾರಾಗಬೇಕು. 'ಬ್ಲಾಕ್ ಮೇಲ್' ಮಾಡುವವರನ್ನು ನೀವು ಹೊರ ಸಮಾಜಕ್ಕೆ ಬಹಿರಂಗ ಪಡಿಸಿದಾಗ, ಅವರ ಆಟಗಳು ಮತ್ತು ಅವುಗಳಿಗಿರುವ ಕಿಮ್ಮತ್ತು ಇವುಗಳ ಸತ್ಯ ದರ್ಶನ ಅವರಿಗೆ ಆಗಿಯೇ ತೀರುತ್ತದೆ. ಆಗ ನಿಮ್ಮನ್ನು ಬಿಟ್ಟು ಬೇರೆ ಬಲಿಪಶುವನ್ನು ಅವರು ಹುಡುಕತೊಡಗುತ್ತಾರೆ. ಅವರೆಂದಿಗೂ ಬದಲಾಗುವುದಿಲ್ಲ. ಬದಲಾಗಬೇಕಾದದ್ದು ನಾವುಗಳು ಅಷ್ಟೇ.