Sunday, July 31, 2022

ಕುರಿ, ತೋಳ ಮತ್ತು ಕುರಿ ಕಾಯುವ ನಾಯಿ

ಲಕ್ಷಾಂತರ ವರ್ಷಗಳ ಹಿಂದೆ ಮಾನವ ಅಲೆಮಾರಿಯಾಗಿ, ಬೇಟೆಯಾಡುತ್ತ ಜೀವಿಸುತ್ತಿದ್ದ. ಆದರೆ ಅವನು ಕ್ರಮೇಣ ಕೃಷಿಕನಾಗಿ ಮಾರ್ಪಟ್ಟ. ಏಕೆಂದರೆ ಅದು ಬೇಟೆಗೆ ಹೋಲಿಸಿದರೆ ಸುಲಭ ಮತ್ತು ಅದರಿಂದ ಹೆಚ್ಚು ಹೊಟ್ಟೆಗಳನ್ನು ತುಂಬಿಸಬಹುದಾಗಿತ್ತು. ಕೃಷಿ ಜೀವನ ಮನುಷ್ಯರು ಒಟ್ಟಿಗೆ ಬಂದು ಒಂದು ಸಮಾಜ ಕಟ್ಟಲು ಸಹಾಯವಾಯಿತು. ಪ್ರಕೃತಿ ಮನುಷ್ಯನಿಗೆ ಮತ್ತು ಎಲ್ಲ ಜೀವಿಗಳಿಗೆ ಸುಲಭ ಜೀವನ ಹುಡುಕಿಕೊಳ್ಳಲು ಪ್ರಚೋದಿಸುತ್ತದೆ. ಹಾಗಾಗಿ ಎಲ್ಲರಿಗೂ ಕೃಷಿ ಕೆಲಸ ಇಷ್ಟವಾಗದೇ, ಕೃಷಿ ಮಾಡುವವರನ್ನು ದೋಚುವ (ಮೋಸದಿಂದಲೋ ಅಥವಾ ದಬ್ಬಾಳಿಕೆಯಿಂದಲೋ) ಮತ್ತು ಅದರಿಂದ ಸುಲಭ ಜೀವನ ಸಾಗಿಸುವ ವೃತ್ತಿಯನ್ನು ಹಲವರು ಆಯ್ದುಕೊಂಡರು. ಇಂತಹ ಕಳ್ಳರನ್ನು ಎದುರಿಸಲು, ಅವರಿಂದ ಸಾಮಾನ್ಯ ಜನರನ್ನು ರಕ್ಷಿಸಲು ದಂಡನಾಯಕರು, ತಳವಾರರು ಹುಟ್ಟಿಕೊಂಡರು. ಅಂತಹ ಹಲವರು ದಂಡನಾಯಕರಿಗೆ ನಾಯಕ ಆದವನೇ ರಾಜ ಎನಿಸಿಕೊಂಡ. ಹೀಗೆ ನಮ್ಮ ಸಮಾಜ ರೂಪುಗೊಳ್ಳುತ್ತ ಹೋಯಿತು.


ಇಂದಿಗೂ ಕೂಡ ಎಲ್ಲಾ ಸಮಾಜಗಳಲ್ಲಿ ಹಲವಾರು ಲೋಪ ದೋಷಗಳಿರುತ್ತವೆ. ದೌರ್ಬಲ್ಯಗಳಿರುತ್ತವೆ. ಅವುಗಳ ದುರ್ಬಳಕೆ ಮಾಡಿಕೊಳ್ಳುವ ಜನರು ಹುಟ್ಟಿಕೊಳ್ಳುತ್ತಾರೆ. ಉದಾಹರಣೆಗೆ ಮಾಫಿಯಾ ಅಥವಾ  ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು. ಕೆಲವರು ದಬ್ಬಾಳಿಕೆ ಮಾಡುತ್ತಾರೆ. ಇನ್ನು ಕೆಲವರು ಮೋಸ ಮಾಡಿ ತಮ್ಮ ಜಾಣ್ಮೆ ಮೆರೆಯುತ್ತಾರೆ. ಆದರೆ ಅವರು ಬದುಕುವುದು ಸಮಾಜದ ರಕ್ತ ಹೀರುತ್ತ ಅಲ್ಲದೆ ಯಾವುದೇ ಕೃಷಿ ಸಾಧನೆಯಿಂದಲ್ಲ.


ಎಲ್ಲ ಸಮಾಜದಲ್ಲಿ ಮೂರು ವರ್ಗದ ಜನರಿರುತ್ತಾರೆ. ಹೆಚ್ಚಿನವರು ಕುರಿಗಳು. ಅವರಿಗೆ ತಮ್ಮನ್ನು ತಾವು ಕಾಪಾಡಿಕೊಳ್ಳುವುದು ಗೊತ್ತಿಲ್ಲ. ಕೆಲವರು ತೋಳಗಳು. ಅವರು ಕುರಿಗಳನ್ನು ಹರಿದು ತಿನ್ನುತ್ತಾರೆ. ಇನ್ನು ಕೆಲವರು ಕುರಿ ಕಾಯುವ ನಾಯಿಗಳು. ಅವರು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಕುರಿಗಳನ್ನು ಕಾಪಾಡುತ್ತಾರೆ. ಸುತ್ತಲಿನ ಪರಿಸರ ಸದಾ ಗಮನಿಸುತ್ತಾ ಇರುತ್ತಾರೆ. ತೋಳ ಕಣ್ಣಿಗೆ ಬಿದ್ದೊಡನೆ ಎಚ್ಚರಿಸುತ್ತಾರೆ. ಮತ್ತು ಅವಶ್ಯಕತೆ ಬಿದ್ದರೆ ಕಾದಾಟಕ್ಕೆ ಇಳಿಯುತ್ತಾರೆ.


ಉದಾಹರಣೆಗೆ, ಮುಂಬೈ ನಲ್ಲಿ ಭಯೋತ್ಪಾದಕರ ಧಾಳಿಯಾದಾಗ, ಅಲ್ಲಿನ ಸಾರ್ವಜನಕರು ಕುರಿಗಳಾಗಿದ್ದರು. ತೋಳ ಪಾತ್ರ ವಹಿಸಿದ ಭಯೋತ್ಪಾದಕರ ಗುಂಡಿಗೆ ಬಲಿಯಾಗಿ ಸುಲಭದಲ್ಲಿ ಪ್ರಾಣ ತೆತ್ತರು. ಆದರೆ ಆ ತೋಳಗಳನ್ನು ಎದುರಿಸಿದ 'ಬ್ಲಾಕ್ ಕ್ಯಾಟ್ ಕಮಾಂಡೋ' ಗಳು ಮತ್ತು ಶಸ್ತ್ರಸಜ್ಜಿತ ಪೋಲಿಸ್ ರು ವಹಿಸಿದ ಪಾತ್ರ ಕುರಿಗಳನ್ನು ಕಾಯುವುದು ಮತ್ತು ತೋಳವನ್ನು ಓಡಿಸುವುದು ಇಲ್ಲವೇ ಕೊಲ್ಲುವುದು ಆಗಿತ್ತು.


ಭಾರತದ ಚರಿತ್ರೆಯನ್ನು ಗಮನಿಸುತ್ತಾ ಹೋಗಿ. ನಮ್ಮ ಹಾಗೆ ಪರಕೀಯರಿಂದ ಹಲವಾರು ಬಾರಿ ಅಕ್ರಮಣಕ್ಕೊಳಗಾದ ದೇಶ ಬೇರೆ ಯಾವುದೂ ಇಲ್ಲ. ಹಾಗೆ ಅಕ್ರಮಣಕ್ಕೊಳಗಾದಾಗ ದೇಶದಲ್ಲಿ ಇದ್ದ ಪರಿಸ್ಥಿತಿ ಗಮನಿಸಿ. ಕುರಿ ಕಾಯುವ ನಾಯಿ ಕಡಿಮೆ ಸಂಖ್ಯೆಯಲ್ಲಿದ್ದಾಗ, ಕುರಿಗಳೇ ಹೆಚ್ಚು ತುಂಬಿಕೊಂಡಿದ್ದಾಗ ತೋಳ ಸುಲಭದಲ್ಲಿ ಗೆಲ್ಲಲು ಸಾಧ್ಯ ಅಲ್ಲವೇ? ತೋಳಗಳ ಹಿಂಡಿನಲ್ಲಿ ಪ್ರತಿ ತೋಳ ಹೋರಾಡುತ್ತದೆ. ಆದರೆ ಕುರಿ ಹಿಂಡು ಚೆಲ್ಲಾಪಿಲ್ಲಿಯಾಗಿ ಸುಲಭಕ್ಕೆ ಪ್ರಾಣ ಕಳೆದುಕೊಳ್ಳುತ್ತವೆ. ಜೊತೆಗೆ ಕೆಲವೇ ಇದ್ದ ಕಾವಲು ನಾಯಿಗಳನ್ನು ಕೂಡ ಸಾವಿನ ಅಂಚಿಗೆ ತಳ್ಳಿಬಿಡುತ್ತವೆ. ನಿಮಗೆ ಪರಿಸ್ಥಿತಿ ಅರ್ಥವಾಗಿರಲಿಕ್ಕೆ ಸಾಕು.


ಇದು ಸಮಾಜದ ಮತ್ತು ದೇಶದ ಮಟ್ಟದಲ್ಲಿ ನಡೆಯುತ್ತಿರುವ ನಿರಂತರ ಪ್ರಕ್ರಿಯೆ. ಇದು ಸಣ್ಣ ಮಟ್ಟದಲ್ಲಿ ಅಂದರೆ ಕುಟುಂಬದ ಒಳ ಜಗಳಗಳಲ್ಲಿ ಕೂಡ ನಡೆಯುತ್ತಿರುತ್ತದೆ. ನಿಮ್ಮ ಕುಟುಂಬದಲ್ಲೇ ಕುರಿ ಯಾರು, ತೋಳ ಯಾರು ಮತ್ತು ಕುಟುಂಬ ಕಾಯುವ ನಾಯಿ ಯಾರು ಎಂದು ಗಮನಿಸಿ ನೋಡಿ. ಎಲ್ಲದಕ್ಕೂ ಮುಂಚೆ ನಿಮ್ಮ ಪಾತ್ರ ಏನು ಎಂದು ತಿಳಿದುಕೊಳ್ಳಿ. ನೀವು ಕುರಿಯಾಗಿದ್ದರೆ ನನ್ನ ಸಂತಾಪಗಳು. ನಿಮ್ಮನ್ನು ದೂಷಣೆಗೆ ಗುರಿ ಮಾಡಿ, ನಿಮ್ಮನ್ನು ಹುರಿ ಮುಕ್ಕುವ ತೋಳಗಳು ಹತ್ತಿರಕ್ಕೆ ಬರುವ ಮುನ್ನವೇ ಎಚ್ಚೆತ್ತುಕೊಳ್ಳಿ. ನಾಯಿಗಳ ಸ್ನೇಹ ಗಳಿಸಿ ಮತ್ತು ಅವುಗಳ ಎಚ್ಚರಿಕೆ ಮೀರದಿರಿ. ಒಂದು ವೇಳೆ ನೀವು ತೋಳವೇ ಆಗಿದ್ದರೆ, ಎಲ್ಲಾ ಸಮಯದಲ್ಲಿ ನಿಮ್ಮ ಆಟ ನಡೆಯುವುದಿಲ್ಲ. ನಿಮ್ಮನ್ನು ಗಮನಿಸುವ ನಾಯಿಗಳು ಇವೆ. ನಿಮ್ಮ ಲೆಕ್ಕಾಚಾರ ಹೆಚ್ಚು ಕಡಿಮೆ ಆದರೆ ನಿಮ್ಮ ಕೊನೆ ಗ್ಯಾರಂಟಿ ಎನ್ನುವುದು ಮರೆಯಬೇಡಿ. ನೀವು ಕುಟುಂಬ ಕಾಯುವ ನಾಯಿ ಆಗಿದ್ದರೆ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು. ಕುರಿ ಎನ್ನುವ ಕುಟುಂಬ ಮತ್ತು ಸಮಾಜದ ರಕ್ಷಣೆ ಮಾಡಿದ್ದಕ್ಕೆ. 


ಇದೇ ತರಹದ ತರ್ಕವನ್ನು ಅಮೆರಿಕದ Navy Seal ಗಳಿಗೆ ಮತ್ತು ಇಸ್ರೇಲ್ ದೇಶದ Mossad ಕಮಾಂಡೋಗಳಿಗೆ ಹೇಳಿಕೊಡಲಾಗುತ್ತವೆ. ಆದರೆ ಇದು ಇತಿಹಾಸ ಓದಿದ ಮತ್ತು ಸಮಾಜವನ್ನು ಗಮನಿಸುವ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬಹುದಾದ ಸಾಮಾನ್ಯ ತಿಳುವಳಿಕೆ.



ಚಿತ್ರ: ಹೋರಾಟದ ನಂತರ ನಾಯಿಯನ್ನು ಕುರಿ ಸಂತೈಸುತ್ತಿರುವುದು  



Wednesday, July 27, 2022

ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ

೧೯೬೦ ಮತ್ತು ೭೦ ರ ದಶಕಗಳಲ್ಲಿ ರಾಜಕುಮಾರ್ ಮತ್ತು ಭಾರತಿ ಅವರು ಒಟ್ಟಾಗಿ ೨೧ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಜೋಡಿ ನೋಡಿಯೇ 'ಭಲೇ ಜೋಡಿ' ಎನ್ನುವ ಚಿತ್ರ ತಯಾರಾಗಿತ್ತು. ಅವರ 'ಹೃದಯ ಸಂಗಮ' ಎನ್ನುವ ಕಪ್ಪು ಬಿಳುಪಿನ ಚಿತ್ರದ ಒಂದು ಹಾಡು ನನಗೆ ಅಚ್ಚು ಮೆಚ್ಚು. ಈ ಹಾಡಿನ ಚಿತ್ರೀಕರಣದಲ್ಲಿ ದೃಶ್ಯ-ವೈಭವಗಳಿಲ್ಲ. ಬಟ್ಟೆ-ಆಭರಣಗಳ ಶ್ರೀಮಂತಿಕೆಯ ಪ್ರದರ್ಶನ ಇಲ್ಲ. ಆದರೆ ಪ್ರೀತಿಯ ತೋರ್ಪಡಿಕೆಯಲ್ಲಿ ಭರ್ತಿ ಶ್ರೀಮಂತಿಕೆ. ಅದರಲ್ಲಿ ನಾಯಕ-ನಾಯಕಿ ಹೀಗೆ ಹಾಡುತ್ತಾರೆ:


'ನೀ ತಂದ ಕಾಣಿಕೆ
ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ
ಅನುರಾಗ ಮಾಲಿಕೆ
ಅದಕಿಲ್ಲ ಹೋಲಿಕೆ'


ಹಳೆಯ ಕೆಲವೇ ಹಾಗಿತ್ತೋ ಅಥವಾ ಇದೆಲ್ಲ ಬರಿ ಕವಿಯ ಕಲ್ಪನೆ ಏನೋ ಗೊತ್ತಿಲ್ಲ. ಆದರೆ ಇಂದಿನ ಹೆಣ್ಣು ಮಕ್ಕಳಿಗೆ ಕಾಣಿಕೆ ಅಂದರೆ ಅದು ವಜ್ರದ್ದೋ ಇಲ್ಲವೇ ಬಂಗಾರದ್ದೋ ಆಗಿರಬೇಕು.ಯಾರಿಗೆ ಬೇಕು ನಗೆ ಹೂವ ಮಾಲಿಕೆ? ಹೇಳಿ, ನೀವೇ ಹೇಳಿ? ಗಂಡಸರೇನು ಕಡಿಮೆ ಇಲ್ಲ. ಮಾವನ ಆಸ್ತಿಯ ಮೌಲ್ಯ ಹೆಂಡತಿಯ ಅನುರಾಗಕ್ಕಿಂತ ಹೆಚ್ಚು ಮುಖ್ಯ.


'ಮೈ ಮರೆತು ನಿಂತೆ ಆ ನಿನ್ನ ನೋಟಕೆ
ನಾ ಹಾಡಿ ಕುಣಿದೆ ನಿನ್ನೆದೆ ತಾಳಕೆ'


ಈ ತರಹದ ನಿಷ್ಕಲ್ಮಶ ಮತ್ತು ಯಾವುದೇ ಷರತ್ತು-ಕರಾರುಗಳಿಲ್ಲದ ಪ್ರೀತಿ ಗಂಡ-ಹೆಂಡತಿ ಇಬ್ಬರೂ ಬಡವರಾಗಿದ್ದರೆ ಮಾತ್ರ ಸಾಧ್ಯವೇನೋ? ಅಲ್ಲಿ ಅಸ್ತಿ-ಅಂತಸ್ತಿನ ಅಡಚಣೆ ಇರುವುದಿಲ್ಲ. ಯಾರು ಹೆಚ್ಚು-ಕಡಿಮೆ ಎನ್ನುವ ವಾದ-ವಿವಾದಗಳಿರುವುದಿಲ್ಲ. ಆಗ ಸಂಗಾತಿಯ ನೋಟಕ್ಕೆ ಮೈ ಮರೆಯುವುದು, ಲಹರಿಯನ್ನು ಗೊತ್ತು ಮಾಡಿಕೊಳ್ಳುವುದು ಸಾಧ್ಯವೋ ಏನೋ? ಅದು ಬಿಟ್ಟು ಕೊಡು-ತೆಗೆದುಕೊಳ್ಳುವ ವ್ಯಾಪಾರದಲ್ಲಿ, ನಾನೇ ಶ್ರೇಷ್ಠ ಎನ್ನುವ ಸ್ಪರ್ಧೆಯಲ್ಲಿ ಹೇಗೆ ಸಾಧ್ಯ? ನೀವುಗಳು ಅವನ್ನೆಲ್ಲ ಮೀರಿ ನಿಂತ ಜೋಡಿಯಾಗಿದ್ದರೆ ನಿಮಗೆ ಅಭಿನಂದನೆಗಳು. ನಿಮ್ಮಂತವರನ್ನು ನೋಡಿಯೇ ಇಂತಹ ಕಾವ್ಯ ಸೃಷ್ಟಿಯಾಗಿರಲಿಕ್ಕೆ ಸಾಧ್ಯ.


'ಈ ಬಾಳ ಗುಡಿಗೆ ನೀನಾದೆ ದೀಪಿಕೆ
ಬೆಳಕಾಗಿ ನಿಂದೆ ನೀ ಎನ್ನ ಜೀವಕೆ'


ರಾಜಕುಮಾರ್ ಅಷ್ಟೇ ಅಲ್ಲ ಅವರ ಮಗ ಪುನೀತ್ ರ ಕಾಲವೂ ಮುಗಿದು ಹೋಗಿದೆ. ಇಂದಿಗೆ ಆದರ್ಶಮಯ ಚಿತ್ರಗಳು ಇಲ್ಲ. ಇಂದಿಗೆ ಹೆಣ್ಣು ಮಕ್ಕಳು ನೋಡುವುದು ಧಾರಾವಾಹಿಗಳನ್ನು. ಅದರಲ್ಲಿನ ಪಾತ್ರಗಳು ತೊಟ್ಟ ಆಭರಣಗಳನ್ನು ತಾವು ತೊಟ್ಟು ಯಾರಿಗೆ ಹೊಟ್ಟೆ ಉರಿಸಬೇಕು ಎನ್ನುವ ಲೆಕ್ಕಾಚಾರದಲ್ಲಿ ಅವರು ಮೈ ಮರೆತಿರುತ್ತಾರೆ. ಆ ಧಾರಾವಾಹಿಗಳಲ್ಲಿ ಹೆಣ್ಣಿನ ಪಾತ್ರಗಳೇ ಎಲ್ಲ ನಿರ್ಧಾರಗಳನ್ನು ಮಾಡುವುದು ನೋಡಿ ತಮ್ಮ ಕುಟುಂಬ ಕೂಡ ತಮ್ಮ ಕಪಿಮುಷ್ಠಿಯಲ್ಲಿ ಇರಬೇಕೆಂದು ಬಯಸುತ್ತಾರೆ. ಅವರಿಗೆ ಸುಮಧುರ ಗೀತೆಗಳು ಬೇಕಿಲ್ಲ. ಅವರವರ ಲೋಕ ಅವರವರಿಗೆ ಆಗಿ ಹೋಗಿದೆ. ಮಕ್ಕಳು ಮೊಬೈಲ್ ಗೇಮ್ ಗಳಲ್ಲಿ ಕಳೆದು ಹೋಗಿರುತ್ತಾರೆ. ನನ್ನ ತರಹದವರು ಹಳೆಯ ಹಾಡು ಕೇಳುತ್ತ ಹೊಸ ಲೇಖನ ಬರೆಯುತ್ತಾರೆ. ನಿಮ್ಮ ತರಹದವರು  'ಲೈಕ್' ಒತ್ತಿ ನಿಟ್ಟುಸಿರು ಬಿಡುತ್ತೀರಿ.


ವಾಸ್ತವ ಹೇಗಾದರೂ ಇರಲಿ, ಹಾಡು ಕೇಳುತ್ತ ಸಂತೋಷ ಹೊಂದಲು ಸಾಧ್ಯವಾಗುವುದಕ್ಕೆ ಅಲ್ಲವೇ ಹಾಡುಗಳು ಮಾಸದೆ ಉಳಿದಿರುವುದು. ಈ ಹಳೆಯ ಹಾಡು ಒಮ್ಮೆ ಕೇಳಿ ನೋಡಿ.


Tuesday, July 26, 2022

ಮನಸ್ಸು, ದೇಹ ಮತ್ತು ರೋಗ

ಮನಸ್ಸಿನ ಭಾವನೆಗಳಿಗೆ ಬರೀ ಮೆದುಳು ಸ್ಪಂದಿಸುವುದಿಲ್ಲ, ಇಡೀ ದೇಹವೇ ಅದಕ್ಕೆ ಸ್ಪಂದಿಸುತ್ತದೆ. ಅದು ಹೇಗೆ ನೋಡೋಣ. ಬೇರೆಯವರ ಏಳಿಗೆ ಕಂಡರೆ ನಿಮಗೆ ಸಹಿಸಲು ಆಗುವುದಿಲ್ಲ. ಅವರನ್ನು ಕಂಡರೆ ನಿಮಗೆ 'ಹೊಟ್ಟೆ ಉರಿ'. ಯಾರೋ ನಿಮ್ಮನ್ನು ಹಾಡಿ ಹೊಗಳಿ ಬಿಡುತ್ತಾರೆ. ಆಗ ನಿಮಗೆ 'ಹೃದಯ ತುಂಬಿ' ಬರುತ್ತದೆ. ತೀವ್ರ ಕೋಪ ಬಂದಾಗ ಆಗುವುದು 'ಕಣ್ಣು ಕೆಂಪು' ಮತ್ತು ಸಣ್ಣಗೆ ನಡುಗುವುದು 'ಕೈ ಕಾಲು'. ಇನ್ನು ಸಂದೇಹವೇ  ಬೇಕಿಲ್ಲ ಅಲ್ಲವೇ. ಮನಸ್ಸು ಮತ್ತು ದೇಹ ಬೇರೆ ಬೇರೆ ಅಲ್ಲ ಎಂದು ತಿಳಿಯುವುದಕ್ಕೆ.


ಮನಸ್ಸಿನ ಮೇಲೆ ಉಂಟಾಗುವ ದೀರ್ಘ ಕಾಲದ ಪರಿಣಾಮಗಳು ದೇಹದ ಮೇಲೆ ಕೂಡ ಪರಿಣಾಮ ಬೀರತೊಡಗುತ್ತವೆ. ಉದಾಹರಣೆಗೆ, ವಿಪರೀತ ಕೋಪ ಅಜೀರ್ಣತೆ ತಂದಿಡಬಹುದು. ಭುಜಗಳಲ್ಲಿನ ನೋವು ಹೊರಲಾರದ ಜವಾಬ್ದಾರಿಯಿಂದ ಉಂಟಾಗಿರಬಹುದು. ಗಂಟಲು ನೋವು ಮನ ಬಿಚ್ಚಿ ಮಾತನಾಡಲು ಅವಕಾಶ ಇಲ್ಲದ್ದು ಸೂಚಿಸಿರುತ್ತಿರಬಹುದು. ಬಿಟ್ಟು ಹೋಗದ ಕೆಮ್ಮು ನೀವು ನಿಮ್ಮ ಜೊತೆಗೆ ಸಮಾಧಾನದಿಂದ ಇಲ್ಲದಿರುವುದಕ್ಕೆ ಉಂಟಾಗಿರಬಹುದು.


ಸಣ್ಣ-ಪುಟ್ಟ ದೈಹಿಕ ಸಮಸ್ಯೆಗಳಷ್ಟೇ ಅಲ್ಲ. ಹೃದ್ರೋಗ, ಕ್ಯಾನ್ಸರ್ ನಂತಹ ರೋಗಗಳ ಮೂಲ ಕೂಡ ಮನಸ್ಸಿನ ಸಮಸೆಗಳಲ್ಲಿ ಇರುತ್ತದೆ ಎಂದು ಹೇಳುತ್ತಾರೆ ನಿವೃತ್ತ ವೈದ್ಯರಾದ Dr Gabor Mate. ಅವರು ತಮ್ಮ ವೃತ್ತಿ ಅನುಭವಗಳನ್ನು ಒಟ್ಟಾಗಿಸಿ ಒಂದು ಪುಸ್ತಕವನ್ನಾಗಿಸಿದ್ದಾರೆ. ಬರೀ ದೈಹಿಕ ಏರುಪೇರುಗಳು ರೋಗಗಳನ್ನು ಸೃಷ್ಟಿಸುವುದಿಲ್ಲ. ಸುತ್ತಲಿನ ವಾತಾವರಣಕ್ಕೆ ಮನಸ್ಸು ಸ್ಪಂದಿಸಿದ ರೀತಿಯಿಂದ ನಮ್ಮ ಜೀನ್ ಗಳು ಬದಲಾವಣೆ ಹೊಂದಿ ಕ್ಯಾನ್ಸರ್ ನಂತಹ ದೊಡ್ಡ ರೋಗಗಳಿಗೆ ಎಡೆ ಮಾಡಿಕೊಡುತ್ತವೆ ಎನ್ನುವುದು ಅವರ ವೃತ್ತಿ ಜೀವನದ ಅನುಭವ. 


ಅದಕ್ಕೆ ಪರಿಹಾರವಾಗಿ ಅವರು ಏಳು ಸೂತ್ರಗಳನ್ನು ಸೂಚಿಸುತ್ತಾರೆ. ಅದರಲ್ಲಿ ಮೊದಲನೆಯದು ಪರಿಸ್ಥಿತಿಯನ್ನು ಹೇಗಿದೆಯೋ ಹಾಗೆ ಒಪ್ಪಿಕೊಳ್ಳುವುದು. ಅದು ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎರಡನೆಯದು, ನಮ್ಮ ಅರಿವನ್ನು ವಿಸ್ತಾರ ಮಾಡಿಕೊಳ್ಳುವುದು. ಅದು ರೋಗಲಕ್ಷಣಗಳನ್ನು ಬೇಗನೆ ಗುರುತಿಸಲು ಸಹಾಯ ಮಾಡುತ್ತದೆ. ಮತ್ತು ಸಾಧ್ಯ ಪರಿಹಾರಗಳ ಅರಿವು ಕೂಡ ಮೂಡಿಸುತ್ತದೆ. ಮೂರನೆಯದು, ಕೋಪವನ್ನು ಹತ್ತಿಕ್ಕದೆ ಅದನ್ನು ಕಡಿಮೆ ಮಾಡಿಕೊಳ್ಳುವ ದಾರಿ ಹುಡುಕಿಕೊಳ್ಳುವುದು. ನಾಲ್ಕನೆಯದು, ಬೇರೆಯವರು ನಿಮ್ಮ ಮೇಲೆ ದಬ್ಬಾಳಿಕೆ ಮಾಡದಂತೆ ಗಡಿ ರೇಖೆ ಗುರುತಿಸಿ ಅದನ್ನು ಕಾಪಾಡಿಕೊಳ್ಳುವುದು. ನೀವೇ ದಬ್ಬಾಳಿಕೆ ಮಾಡುವ ಪ್ರವೃತ್ತಿಯವರಾಗಿದ್ದರೆ, ಅದರಿಂದ ಹೊರ ಬರುವುದು. ಐದನೆಯದು, ಸಮಸ್ಯೆಗಳನ್ನು ನಾವು ಮುಚ್ಚಿಟ್ಟುಕೊಳ್ಳದೆ, ಸಮಾನ ಮನಸ್ಕರಲ್ಲಿ ಹಂಚಿಕೊಳ್ಳುವುದು. ಉತ್ತಮ ಸಂಬಂಧಗಳನ್ನು ಕಾಪಾಡಿಕೊಳ್ಳುವುದು. ಆರನೆಯದು, ನಮ್ಮಲ್ಲಿರುವ ಸ್ವಂತಿಕೆ ಮತ್ತು ವಿಶೇಷ ಕೌಶಲ್ಯಗಳನ್ನು ಮತ್ತಷ್ಟು ಬೆಳೆಸುವುದರ ಮೂಲಕ ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದು. ಏಳನೆಯದು, ಹವ್ಯಾಸಗಳ ಮೂಲಕ (ಸಾಹಿತ್ಯ, ಸಂಗೀತ, ಚಿತ್ರಕಲೆ ಇತ್ಯಾದಿ) ಮನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸುವುದು ಇಲ್ಲವೇ ನಮ್ಮನ್ನು ಉಲ್ಲಾಸಗೊಳಿಸುವ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು.


ಅಷ್ಟೆಲ್ಲ ಮಾಡಿದರೆ ನಿಮಗೆ ರೋಗ ಬರುವುದೇ ಇಲ್ಲ ಎಂದು ಅವರು ಹೇಳುವುದಿಲ್ಲ. ಆದರೆ ಅವುಗಳನ್ನು ಮಾಡಿದರೆ ನಿಮಗೆ ರೋಗ ಬರುವ ಸಾಧ್ಯತೆಗಳು ಕಡಿಮೆ ಆಗುತ್ತಾ ಹೋಗುತ್ತವೆ. ಏಕೆಂದರೆ ರೋಗ ಉಂಟು ಮಾಡುವ ಮತ್ತು ಉಲ್ಬಣಗೊಳಿಸುವ ಭಾವನೆಗಳು ನಿಮ್ಮಲ್ಲಿ ಹತೋಟಿಗೆ ಬಂದಿರುತ್ತವೆ ಅನ್ನುವ ಕಾರಣಕ್ಕಾಗಿ. ಹೆಚ್ಚಿನ ವಿವರಕ್ಕಾಗಿ "When the Body Says No" ಪುಸ್ತಕ ಓದಿ.

            


Sunday, July 24, 2022

ಕರ್ಮ ಎನ್ನುವ ಪಾಪ-ಪುಣ್ಯದ ಲೆಖ್ಖ

ಕರ್ಮ ಎನ್ನುವುದು ಅಂತೆ-ಕಂತೆಗಳ ಪುರಾಣ. ಅದರಲ್ಲಿ ನಿಮಗೆ ನಂಬಿಕೆ ಇರದೇ ಇದ್ದರೆ ಮುಂದಕ್ಕೆ ಓದಲೇಬೇಡಿ. ಆದರೆ ನನಗೆ ಆಗುತ್ತಿರುವ ಅನುಭವಗಳು ಅದರ ಮೇಲೆ ನಂಬಿಕೆ ಮೂಡಿಸಿವೆ.

 

ಸದ್ಗುರು, ರವಿಶಂಕರ್, ಶಿವಾನಿ ಅವರು ಕರ್ಮದ ಬಗ್ಗೆ ಮಾತನಾಡಿರುವ ಹಲವಾರು ವಿಡಿಯೋಗಳನ್ನು ನೋಡಿದ್ದೇನೆ. ಇಂಟರ್ನೆಟ್ ನಲ್ಲಿ ಸಾಕಷ್ಟು ಲೇಖನಗಳನ್ನು ಓದಿದ್ದೇನೆ. ಅದರ ಬಗ್ಗೆ ಸಾಕಷ್ಟು ವಿಚಾರ ಮಾಡಿದ್ದೇನೆ. ಮತ್ತು ನನ್ನ ಬದುಕಿಗೆ ತಾಳೆ ಹಾಕಿ ನೋಡಿದ್ದೇನೆ. ಕೊನೆಗೆ ನನಗೆ ಅರ್ಥವಾಗಿರುವುದಿಷ್ಟು.

 

ಕರ್ಮ ಎನ್ನುವುದು ಪಾಪ-ಪುಣ್ಯಗಳ ಪ್ರತ್ಯೇಕ ಲೆಖ್ಖ. ಆದರೆ ಅದು ಗಣಿತದ ಲೆಖ್ಖವಲ್ಲ. ಅನುಭವಗಳ ಲೆಖ್ಖ. ನೀವು ಇತರರಲ್ಲಿ ಒಳ್ಳೆಯ ಅನುಭೂತಿ ಮೂಡಿಸಿದ್ದರೆ ಅದರ ಫಲವು ನಿಮಗೆ ಉಂಟು. ಹಾಗೆಯೆ ನೀವು ಇತರರಿಗೆ ಅನ್ಯಾಯ ಮತ್ತು ನೋವು ಉಂಟು ಮಾಡಿದ್ದರೆ ಅದೇ ಅನುಭವ ನಿಮಗೆ ಕಟ್ಟಿಟ್ಟ ಬುತ್ತಿ. ಆ ಅನುಭವಗಳ ಪಾಠ ಕಲಿಯುವವರೆಗೆ ಆ ಸನ್ನಿವೇಶಗಳು ಮತ್ತು ವ್ಯಕ್ತಿಗಳು ನಮ್ಮ ಜೀವನದಲ್ಲಿ ಪುನರಾವರ್ತನೆ ಆಗುತ್ತಲೇ ಇರುತ್ತಾರೆ. ಹಾಗಾಗಿ ನೀವು ಎಷ್ಟು ಬೇಗ ಪಾಠ ಕಲಿಯುತ್ತಿರೋ ಅಷ್ಟು ಉತ್ತಮ.

 

ಸುಲಭ ಲೆಕ್ಕಾಚಾರದ ಪ್ರಕಾರ (ಜನ್ಮ ದಿನ ಮತ್ತು ರಾಶಿಯ ಅನುಗುಣವಾಗಿ) ನಾನು ಈ ಜನ್ಮಕ್ಕೆ ತಂದ ಕರ್ಮದ ಹೊರೆ ಎಂದರೆ, ಹಿಂದಿನ ಜನ್ಮಗಳಲ್ಲಿ ಅಹಂಕಾರಿಯಾಗಿ ಬೇರೆಯವರ ಭಾವನೆಗಳಿಗೆ ಬೆಲೆ ಕೊಡದೆ ನಡೆದುಕೊಂಡಿದ್ದು. ಅದರ ಫಲವಾಗಿಯೇನೋ ಎನ್ನುವಂತೆ ನನಗೆ ನನ್ನ ಭಾವನೆಗಳಿಗೆ ಬೆಲೆ ಕೊಡದ ಒರಟರೆ ಇಂದಿಗೆ ನನ್ನ ಬಂಧು-ಬಳಗವಾಗಿದ್ದಾರೆ. ಅದು ನಾನು ಮಾಡಿದ ಕರ್ಮ ನಾನು ಅನುಭವಿಸದೇ ವಿಧಿ ಇಲ್ಲ ಎನ್ನುವಂತೆ. ಆದರೆ ಅದರ ಪಾಠ ನನಗೆ ಮನದಟ್ಟಾಗಿ ಹೋಗಿದೆ. ಪಾಠ ಕಲಿಯದೇ ಇರುವ ಮೂರ್ಖತನದ ಶಾಪ ನನಗೆ ದೇವರು ನೀಡಿಲ್ಲ. ಅದು ಯಾವ ಪುಣ್ಯ ಕರ್ಮದ ಫಲವೋ?

 

ಕರ್ಮವನ್ನು ನೀವು ನಂಬಿದರೆ, ಈಗ ನಮ್ಮ ಜೊತೆಗೆ ಅನ್ಯಾಯದಿಂದ ನಡೆದುಕೊಳ್ಳುವ ಜನರನ್ನು ನಾವು ಬೈದುಕೊಳ್ಳುವಂತೆ ಇಲ್ಲ. ಹಾಗೆ ಮಾಡಿದರೆ ಮುಂದಿನ ಜನ್ಮದಲ್ಲಿ ಅದೇ ಜನರ ಜೊತೆಗೆ ನಮ್ಮ ಜೀವನ. ಅದು ಪಾಠ ಕಲಿಯದೇ ಇದ್ದದ್ದಕ್ಕಾಗಿ. ಬಿ.ಕೆ.ಶಿವಾನಿ ಅವರ ಪ್ರಕಾರ ನಾವು ಅವರಿಗೆ ಕ್ಷಮೆ ಕೇಳಬೇಕು. ಅದು ನಮಗೆ ನೆನಪಿರದ ಯಾವುದೊ ಜನ್ಮದಲ್ಲಿ ನಾವು ಅವರಿಗೆ ಮಾಡಿರಬಹುದಾದ ಅನ್ಯಾಯಕ್ಕಾಗಿ. ಕ್ಷಮೆ ಯಾಚನೆಯಿಂದ ನಮ್ಮ ಕರ್ಮದ ಹೊರೆ ಕಡಿಮೆ ಆಗುತ್ತದೆ. ಹಾಗೆ ಪಾಠ ಸಂಪೂರ್ಣ ಕಲಿತ ಮೇಲೆ, ನಮಗೆ ಅವರ ಜೊತೆ ಇರುವ ಕರ್ಮದ ಸಂಬಂಧ ಕಳಚಿ ಬೀಳುತ್ತದೆ. ಅದಾಗದೆ ಹೊಸ ಜೀವನ ಶುರು ಆಗದು.

 

ನೀವು ಯೋಗಿಗಳನ್ನು ಗಮನಿಸಿದರೆ ಅವರು ಯಾರ ಜೊತೆಗೂ ಕರ್ಮವನ್ನು ಕಟ್ಟಿಕೊಳ್ಳುವ ಗೊಡವೆಗೆ ಹೋಗುವುದೇ ಇಲ್ಲ. ಬುದ್ಧನ ಬಗ್ಗೆ ಒಂದು ಕಥೆಯಿದೆ. ಒಬ್ಬ ಮನುಷ್ಯ ಬುದ್ಧನ ಎದುರಿಗೆ ನಿಂತು, ಎಲ್ಲರ ಎದುರಿಗೆ ಬುದ್ಧನನ್ನು ವಾಚಾಮಗೋಚರವಾಗಿ ನಿಂದಿಸುತ್ತಾನೆ. ತಾಳ್ಮೆ ಕಳೆದುಕೊಳ್ಳದ ಬುದ್ಧ ಶಾಂತಿಯಿಂದ ಉತ್ತರಿಸುತ್ತಾನೆ. "ನೀನು ಕೊಟ್ಟ ಯಾವ ಉಡುಗೊರೆಯನ್ನು ನಾನು ಸ್ವೀಕರಿಸುತ್ತಿಲ್ಲ. ಅವೆಲ್ಲ ನಿನ್ನಲ್ಲೇ ಇರಲಿ."

 

ಬುದ್ಧನಿಗಿದ್ದ ಪ್ರೌಢಿಮೆ ನಮಗಿಲ್ಲ. ಉದ್ವೇಗಕ್ಕೆ ಸಿಕ್ಕು ಮನಸ್ಸಿಗೆ ತೋಚಿದ ಉತ್ತರ ನೀಡಿ ಕರ್ಮದ ಸುಳಿಗೆ ಸಿಲುಕಿ ನಾವು ಒದ್ದಾಡುತ್ತೇವೆ. ಪಾಠ ಪುನರಾವರ್ತನೆ ಆಗುತ್ತಾ ಹೋಗುತ್ತದೆ. ಶಿವಾನಿ ಅಕ್ಕಳ ಮಾತಿಗೆ ತಲೆಬಾಗಿ ಇಂದು ನಾನು ಹಿಂದೆ ಮಾಡಿರಬಹುದಾದ ಎಲ್ಲ ಅನ್ಯಾಯಗಳಿಗೆ, ಅದರಿಂದ ನೋವು ಅನುಭವಿಸಿದ ಎಲ್ಲರಲ್ಲಿ ಕ್ಷಮೆ ಕೋರುತ್ತೇನೆ. ಮುಂದೆ ಒಂದು ದಿನ ಕರ್ಮದ ಹೊರೆ ಕಡಿಮೆ ಎನಿಸಿದರೆ ನಿಮಗೆ ಖಂಡಿತ ತಿಳಿಸುತ್ತೇನೆ.

 

ಇದ್ಯಾವ ಪುರಾಣ ಎಂದು ನಿಮಗೆ ಅನ್ನಿಸಿದರೆ, ನಾನು ನಿಮಗೆ ಮುಂಚೆಯೇ ಈ ಲೇಖನ ಓದದೇ ಇರಲು ಎಚ್ಚರಿಸಿದ್ದೆ. ಧನ್ಯವಾದಗಳು!

Friday, July 22, 2022

ಅಹಂ ಬ್ರಹ್ಮಾಸ್ಮಿಯೋ ಅಥವಾ ನಕ್ಷತ್ರ ಧೂಳೋ?

ಸಂಸ್ಕೃತದಲ್ಲಿ 'ಅಹಂ ಬ್ರಹ್ಮಾಸ್ಮಿ' (ನಾವು ಕೂಡ ಬ್ರಹ್ಮ) ಎನ್ನುವ ಮಾತಿದೆ. ಯೋಗದ ಅರ್ಥ ಮತ್ತು ಉದ್ದೇಶ ಬ್ರಹ್ಮ ಅಥವಾ ಸೃಷ್ಟಿಕರ್ತನಲ್ಲಿ ಒಂದಾಗುವುದು.

 

ಇಂಗ್ಲಿಷ್ ನಲ್ಲಿ ಸ್ವಲ್ಪ ಬೇರೆಯ ತರಹದ ವ್ಯಖ್ಯಾನ ಇದೆ . ಅದರ ಪ್ರಕಾರ ನಾವೆಲ್ಲ ನಕ್ಷತ್ರ ಧೂಳು (Star Dust). ಅದು ನಿಜವೇ. ನಾವು ಜನ್ಮ ತಳೆದದ್ದು ಭೂಮಿಯ ಸಂಪನ್ಮೂಲಗಳಿಂದ. ಭೂಮಿ ಮೈ ತಳೆದದ್ದು ಸೂರ್ಯನಿಂದ ಸಿಡಿದ ತುಂಡಿನಿಂದ. ಅಂದರೆ ನಾವೆಲ್ಲ ಸೂರ್ಯನ ತುಂಡುಗಳಿಂದ ರೂಪುಗೊಂಡ ದೇಹಗಳೇ. ಅಷ್ಟೇ ಅಲ್ಲ ಸೂರ್ಯನ ಶಕ್ತಿಯೇ ಗಿಡ, ಮರಗಳಿಗೆ ಜೀವ ತುಂಬಿ ನಮಗೆ ಪ್ರತಿ ದಿನದ ಆಹಾರ ಒದಗಿಸುತ್ತದೆ. ಸೂರ್ಯನಿಂದ ರೂಪುಗೊಂಡ, ಸೂರ್ಯನಿಂದಲೇ ಜೀವಂತವಾಗಿರುವ ನಾವು ಸೂರ್ಯನ ಧೂಳಿನ ಕಣಗಳೇ ಸರಿ.

 

ಸತ್ತ ಮೇಲೆ ದೇಹ ಮಣ್ಣಲ್ಲಿ ಮಣ್ಣಾಗಿ ಮತ್ತೆ ಸೃಷ್ಟಿಯಲ್ಲಿ ಒಂದಾಗುತ್ತದೆ. ದೈಹಿಕವಾಗಿ ಗಮನಿಸಿದರೆ ಅಹಂ ಬ್ರಹ್ಮಾಸ್ಮಿ ಮತ್ತು ನಕ್ಷತ್ರ ಧೂಳು ಒಂದೇ ತರಹದ ಅರ್ಥ ಒದಗಿಸುತ್ತದೆ. ಆದರೆ 'ಅಹಂ ಬ್ರಹ್ಮಾಸ್ಮಿ' ಗೆ ಇರುವ ಪಾರಮಾರ್ಥಿಕ ಅರ್ಥ ನಕ್ಷತ್ರ ಧೂಳಿಗೆ ಇಲ್ಲ. ದೈಹಿಕ ಅಸ್ತಿತ್ವಕ್ಕೆ ಮೀರಿದ ಆತ್ಮದ ಇರುವಿಕೆಯ ಬಗ್ಗೆ ನಕ್ಷತ್ರದ ಧೂಳು ಮಾತನಾಡುವುದಿಲ್ಲ. ಅದು ನಂಬುವುದು ಕಣ್ಣಿಗೆ ಕಾಣುವ ಅಥವಾ ಅಳತೆಗೆ ಸಿಗುವಂತಹದ್ದು ಮಾತ್ರ.

 

ಆದರೆ ವಿಜ್ಞಾನ ಬೆಳೆದಂತೆಲ್ಲ ಪುರಾತನ ಕಾಲದ ಯೋಗ ಅಭ್ಯಾಸಗಳಿಗೆ, ಧ್ಯಾನ ತಂದುಕೊಡುವ ದೈಹಿಕ ಲಾಭಗಳಿಗೆ ಪುರಾವೆ ಸಿಗತೊಡಗಿದೆ. ಆದರೆ ಧ್ಯಾನ ನಮ್ಮಲ್ಲಿ ಮೂಡಿಸುವ ಪ್ರಜ್ಞೆಗಳಿಗೆ ವಿಜ್ಞಾನ ಹುಡುಕಿರುವ ವಿವರಣೆ ಅಷ್ಟಕಷ್ಟೇ. ಕ್ರಮೇಣ ಅದು ಕೂಡ ಬದಲಾಗುತ್ತದೆ. ಕಣ್ಣಿಗೆ ಕಾಣಿಸಿದ ಮತ್ತು ಕಿವಿಗೆ ಕೇಳಿಸದ ತರಂಗಾಂತರಗಳಲ್ಲಿ (wavelength) ಅದ್ಭುತ ಜಗತ್ತೇ ಅಡಗಿದೆ. ಭೂಮಿಯ ಗುರುತ್ವಾಕರ್ಷಣೆ ಶಕ್ತಿ ನಮ್ಮ ಕಣ್ಣಿಗೆ ಕಾಣುವುದಿಲ್ಲ, ಕಿವಿಗೆ ಕೇಳಿಸುವುದಿಲ್ಲ, ನಾಲಿಗೆ ರುಚಿಗೆ, ಮೂಗಿನ ವಾಸನೆಗೆ ನಿಲುಕುವುದಿಲ್ಲ ಮತ್ತು ಚರ್ಮದ ಸ್ಪರ್ಶಕ್ಕೆ ದೊರಕುವುದಿಲ್ಲ. ಆದರೆ ನಮ್ಮ ಅನುಭವಕ್ಕೆ ಬರುತ್ತದೆ. ಅದನ್ನು ಪರೀಕ್ಷೆ ಮಾಡಬೇಕೆ? ಒಂದು ಚೆಂಡನ್ನು ನಿಮ್ಮ ತಲೆಯ ಮೇಲೆ ತೂರಿ ನೋಡಿ.

 

ಪಂಚೇದ್ರಿಯಗಳಿಗೆ ನಿಲುಕದ ಗ್ರಹಿಕೆಗಳು ವಿಶ್ವದ ತುಂಬಾ ವ್ಯಾಪಿಸಿವೆ. ಪ್ರಕೃತಿಯು ನಮ್ಮ ಉಳಿವಿಗೆ ಎಷ್ಟು ಸಾಕೋ ಅಷ್ಟು ಮಾತ್ರದ ಶಕ್ತಿಯನ್ನು ನಮ್ಮ ಪಂಚೇಂದ್ರಿಯಗಳಿಗೆ ನೀಡಿತು. ಅದರ ಮುಂದಿನ ಕಲಿಕೆ ಮಾತ್ರ ನಮ್ಮ ಪ್ರಯತ್ನಕ್ಕೆ ಬಿಟ್ಟಿದ್ದು. ವಿಜ್ಞಾನ ಬೆಳೆದಂತೆಲ್ಲ, ತಂತ್ರಜ್ಞಾನ ಅಭಿವೃದ್ಧಿಯಾದಂತೆಲ್ಲ ಅವುಗಳ ಉಪಯೋಗ ಪ್ರತಿದಿನ ಮಾಡುತ್ತೇವೆ. ಉದಾಹರಣೆಗೆ ಮೈಕ್ರೋವೇವ್ ಓವನ್ ನಲ್ಲಿ ಬೆಂಕಿ ಇಲ್ಲದೆ ಅಡುಗೆ ಬಿಸಿಯಾಗಿದ್ದು ಹೇಗೆ? ನಮ್ಮ ಸೆಲ್ ಫೋನ್ ಗಳು ಹಿಂದಿನ ತಲೆಮಾರಿನವರಿಗೆ ಒಂದು ಅದ್ಭುತದಂತೆ ತೋರುತ್ತವೆಯೋ ಏನೋ?

 

ಒಂದು ಕಾಲದಲ್ಲಿ ಭೂಮಿ ಚಪ್ಪಟೆ ಆಗಿದೆ, ಅದೇ ವಿಜ್ಞಾನ ಎಂದು ನಂಬಿದ್ದ ನಾವುಗಳು ಕಾಲ ಕ್ರಮೇಣ ನಮ್ಮ ನಂಬಿಕೆಗಳನ್ನು ಬದಲಾಯಿಸಿಕೊಂಡೆವು. ಹಾಗೆಯೆ ಯೋಗ, ಧ್ಯಾನ ತಂದು ಕೊಡುವ ಮಾನಸಿಕ ಪ್ರಭುದ್ಧತೆ ವೈರಾಗ್ಯವನ್ನು ಮೀರಿದ ವಿಜ್ಞಾನ ಎನ್ನುವ ತಿಳುವಳಿಕೆ ನಮಗೆ ಈಗ ಇರದೇ ಹೋಗಬಹುದು. ಆದರೆ ಆ ಅನಿಸಿಕೆ ಬದಲಾಗುವ ಕಾಲ ತುಂಬಾ ದೂರ ಇರಲಿಕ್ಕಿಲ್ಲ. ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಕಂಡುಕೊಂಡ ಸತ್ಯಗಳ ಹಾಗೆ, ಯೋಗಿಗಳು ಧ್ಯಾನದ ಮೂಲಕ ಕಂಡ ಸತ್ಯಗಳು ಕೂಡ ಅಷ್ಟೇ ನಿಖರವಾದವು ಎನ್ನುವ ನಂಬಿಕೆ ನಮಗೆ ಕ್ರಮೇಣ ಮೂಡಬಹುದು.

 

ಇದೆಲ್ಲ ಅನಿಸಿದ್ದು 'Stalking the wild pendulum' ಎನ್ನುವ ಪುಸ್ತಕ ಓದಿದ ಮೇಲೆ. ಆ ಪುಸ್ತಕದ ಪರಿಚಯ ನನ್ನ ಹಿಂದಿನ ಲೇಖನದಲ್ಲಿದೆ. ಒಮ್ಮೆ ಓದಿ ನೋಡಿ.