Friday, August 12, 2022

ಕಾಡು ಕುದುರೆ ಓಡಿ ಬಂದಿತ್ತಾ…

ಗಾಯಕ ಶಿವಮೊಗ್ಗ ಸುಬ್ಬಣ್ಣನವರು ಇಂದು ವಿಧಿವಶ ಆಗಿದ್ದಾರೆ. ಅವರು ಮುಂಚೂಣಿಗೆ ಬಂದಿದ್ದು "ಕಾಡು ಕುದುರೆ ಓಡಿ ಬಂದಿತ್ತಾ" ಹಾಡಿನ ಮೂಲಕ. ನಂತರ ಜನಪ್ರಿಯತೆ ಗಳಿಸಿದ್ದು ಸಂತ ಶಿಶುನಾಳ ಶರೀಫರ ಹಾಡುಗಳ ಮೂಲಕ. ೮೩ ವರುಷಗಳ ತುಂಬು ಜೀವನ  ನಡೆಸಿದ ಅವರು ಸಾಕಷ್ಟು ಪ್ರಶಸ್ತಿ, ಗೌರವಗಳಿಗೆ ಪಾತ್ರ ಆಗಿದ್ದಾರೆ. ಅವರ ಕಂಠದಿಂದ ಹಾಡುಗಳಲ್ಲಿ ಹೊರ ಹೊಮ್ಮುವ ಶಕ್ತಿ ಅವರು ಹಾಡಿದ್ದ ಹಾಡುಗಳನ್ನು ಜನರಿಗೆ ಹತ್ತಿರವಾಗಿಸುತ್ತವೆ. ಶಿವಮೊಗ್ಗದಲ್ಲಿ ಹುಟ್ಟಿ ಬೆಳೆದು ಶಾಸ್ತ್ರೀಯ ಸಂಗೀತ ಕಲೆತು ನಂತರ ಬೆಂಗಳೂರಿನಲ್ಲಿ ನೆಲೆಸಿದ್ದ ಅವರು ಕನ್ನಡ ಸಂಸ್ಕೃತಿಯ ಭಾಗವಾಗಿದ್ದರು.

ಚಂದ್ರಶೇಖರ ಕಂಬಾರ ಅವರು ರಚಿಸಿದ ಕಾಡು ಕುದುರೆ ಓಡಿ ಬಂದಿತ್ತಾ ಹಾಡು ಹೀಗಿದೆ: 

ಕಾಡು ಕುದುರೆ ಓಡಿ ಬಂದಿತ್ತಾ
ಕಾಡು ಕುದುರೆ ಓಡಿ ಬಂದಿತ್ತಾ

ಊರಿನಾಚೆ ದೂರದಾರಿ 
ಸುರುವಾಗೊ ಜಾಗದಲ್ಲಿ 
ಮೂಡಬೆಟ್ಟ ಸೂರ್ಯ ಹುಟ್ಟಿ 
ಹೆಸರಿನ ಗುಟ್ಟ ಒಡೆವಲ್ಲಿ 
ಮುಗಿವೇ ಇಲ್ಲದ ಮುಗಿಲಿನಿಂದ 
ಜಾರಿಬಿದ್ದ ಉಲ್ಕೀ ಹಾಂಗ 
ಕಾಡಿನಿಂದ ಚಂಗನೆ ನೆಗೆದಿತ್ತ ||ಪ|| 

ಮೈಯಾ ಬೆಂಕಿ ಮಿರುಗತಿತ್ತ 
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ 
ಹೊತ್ತಿ ಉರಿಯೊ ಕೇಶರಾಶಿ 
ಕತ್ತಿನಾಗ ಕುಣೀತಿತ್ತ 
ಧೂಮಕೇತು ಹಿಂಬಾಲಿತ್ತ 
ಹೌಹಾರಿತ್ತ ಹರಿದಾಡಿತ್ತ 
ಹೈಹೈ ಅಂತ ಹಾರಿಬಂದಿತ್ತ ||1|| 

ಕಣ್ಣಿನಾಗ ಸಣ್ಣ ಖಡ್ಗ 
ಆಸುಪಾಸು ಝಳಪಿಸಿತ್ತ 
ಬೆನ್ನ ಹುರಿ ಬಿಗಿದಿತ್ತಣ್ಣ 
ಸೊಂಟದ ಬುಗುರಿ ತಿರಗತಿತ್ತ 
ಬಿಗಿದ ಕಾಂಡ ಬಿಲ್ಲಿನಿಂದ 
ಬಿಟ್ಟ ಬಾಣಧಾಂಗ ಚಿಮ್ಮಿ 
ಹದ್ದ ಮೀರಿ ಹಾರಿ ಬಂದಿತ್ತ ||2||
 
ನೆಲ ಒದ್ದು ಗುದ್ದ ತೋಡಿ 
ಗುದ್ದಿನ ಬದ್ದಿ ಒದ್ದಿಯಾಗಿ 
ಒರತಿ ನೀರು ಭರ್ತಿಯಾಗಿ 
ಹರಿಯೋಹಾಂಗ ಹೆಜ್ಜೀ ಹಾಕಿ 
ಹತ್ತಿದವರ ಎತ್ತಿಕೊಂಡು 
ಏಳಕೊಳ್ಳ ತಿಳ್ಳೀ ಹಾಡಿ 
ಕಳ್ಳೆ ಮಳ್ಳೆ ಆಡಿಸಿ ಕೆಡವಿತ್ತ ||3||


Song Link: https://www.youtube.com/watch?v=U6m9JSjH8fY

ಕೊನೆಯ ಸಾಲುಗಳನ್ನು ಮತ್ತೆ ಓದಿಕೊಳ್ಳಿ. ಕಾಡು ಕುದುರೆ ಹತ್ತಿದವರ ಎತ್ತಿಕೊಂಡು ಕಳ್ಳೆ ಮಳ್ಳೆ ಆಡಿಸಿ ಕೆಡವಿ ಹೋಗಿದೆ.

ಶಿವಮೊಗ್ಗ ಸುಬ್ಬಣ್ಣನವರಿಗೆ ಶ್ರದ್ಧಾಂಜಲಿಗಳು. 



ಹಾಸ್ಯ ಬರಹ: ಕೈಗೆ ಬಂದ ತುತ್ತು ...

ದೇವರು ಕರುಣಾಮಯಿ, ಅವನು ಎಲ್ಲರ ತಪ್ಪುಗಳನ್ನು ಮನ್ನಿಸುತ್ತಾನೆ ಎಂದು ಕೇಳಿದ್ದೆ. ಅದು ನನಗೆ ಅನುಭವ ಆಗುವ ಕಾಲ ಬಂದೇ ಬಿಟ್ಟಿತ್ತು. ಎರಡು ಮೂರು ದಿನಗಳಿಂದ ದುಸು-ಮುಸು ಎನ್ನುತ್ತಿದ್ದ ನನ್ನ ಪತ್ನಿ, ತನ್ನ ಅಕ್ಕಳ ಜೊತೆಗೆ ದೀರ್ಘ ಸಂಭಾಷಣೆ ಕೂಡ ಮಾಡಿ, ತನ್ನ ಬಟ್ಟೆ ಬರೆಗಳನ್ನು ಮಂಚದ ಮೇಲೆ ರಾಶಿ ಹಾಕಿ ಅವುಗಳನ್ನು ಪ್ಯಾಕ್ ಮಾಡುತ್ತಾ ತನ್ನ ದೃಢ ನಿರ್ಧಾರ ಘೋಷಿಸಿಯೇ ಬಿಟ್ಟಳು. 'ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ. ನನಗಿನ್ನು ನಿನ್ನ ಸಹವಾಸ ಸಾಕು!"

 

ಆ ಮಾತು ಕೇಳಿದ ತಕ್ಷಣ ಸಪ್ತ ಸಮುದ್ರಗಳು ಉಕ್ಕೇರಿದ ಹಾಗೆ ನನ್ನ ಹೃದಯ ಸಂತೋಷದ ಕಡಲಾಗಿತ್ತು. 'ಗಗನವೋ ಎಲ್ಲೋ, ಭೂಮಿಯು ಎಲ್ಲೋ" ಎಂದು ನಟಿ ಕಲ್ಪನಾರ ಹಾಗೆ ಗೆಜ್ಜೆ ಕಟ್ಟಿ ಕುಣಿಯಬೇಕು ಎನ್ನಿಸಿಬಿಟ್ಟಿತ್ತು. ಆದರೂ ಸಾವರಿಸಿಕೊಂಡು ಹೇಳಿದೆ "ಅಣ್ಣನ ಹತ್ತಿರ ಬಂದು ನಿನಗೆ ಸೇರಬೇಕಾದ ಆಸ್ತಿ ಪತ್ರಗಳನ್ನು ಬರೆಸಿಕೊಂಡು ಹೋಗು". ಇಷ್ಟಕ್ಕೂ ಅವಳು ಅರ್ಧ ಬಿಟ್ಟು ಪೂರ್ತಿ ಆಸ್ತಿ ತೆಗೆದುಕೊಂಡು ಹೋಗಲಿ. ಆಸ್ತಿ ಯಾವನಿಗೆ ಬೇಕು? ಬೇಕಿರುವುದು ಜೀವನದ ಸ್ವಾತಂತ್ರ್ಯ. "ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ" ಎನ್ನುವ ಹಾಗೆ ಎಲ್ಲದಕ್ಕೂ ಮೂಗು ತೂರಿಸುವ ಮೂದೇವಿ ಜೊತೆ ಯಾರು ಸಂಸಾರ ಮಾಡಿಕೊಂಡಿರುತ್ತಾರೆ? ಮಸ್ಕಿ ಭ್ರಮರಾಂಭ ದೇವಸ್ಥಾನದಲ್ಲಿ ನನ್ನ ಮದುವೆಯಲ್ಲಿ ಊಟ ಮಾಡಿದ ಜನರಿಗಿಂತ ಹೆಚ್ಚಿನ ಜನರಿಗೆ ಅನ್ನ ದಾನ ಮಾಡಿದರೆ ಆ ಪಾಪ ಸಂಪೂರ್ಣ ಕಳೆಯುತ್ತದೆ ಏನೋ? ಅದನ್ನು ಹೇಳಬಲ್ಲ ಯಾವ ಸ್ವಾಮಿಗಳ ಹೆಸರು ನನಗೆ ಆ ಕ್ಷಣಕ್ಕೆ ತೋಚಲಿಲ್ಲ.

 

ಇಷ್ಟಕ್ಕೂ ನಾನು ಮದುವೆ ಆಗಿದ್ದು 'ಮದುವೆ ಆಗದೆ ಹುಚ್ಚು ಬಿಡುವುದಿಲ್ಲ, ಹುಚ್ಚು ಬಿಡದೆ ಮದುವೆ ಆಗುವುದಿಲ್ಲ' ಎನ್ನುವ ಮನಸ್ಥಿತಿಯಲ್ಲಿ ಇದ್ದಾಗ. ಮದುವೆ ಆದ ಸ್ನೇಹಿತರ ಅನುಭವ ಗಮನಿಸಿದರೆ ಕೆಲವು ಹಾಗೆ. ಕೆಲವು ಹೀಗೆ. ಒಂಥರಾ ಲಾಟರಿ ಇದ್ದ ಹಾಗೆ. ಯಾರೋ ಒಬ್ಬರು  ಲಾಟರಿ ಗೆದ್ದರೆ ಸಾವಿರಾರು, ಲಕ್ಷಾಂತರ ಜನ ದುಡ್ಡು ಕಳೆದುಕೊಳ್ಳುವುದಿಲ್ಲವೇ? ಆದರೆ ಈ ಗಂಡಸರಿಗೆ ಒಂದು ಹುಚ್ಚು ನಂಬಿಕೆ. ತಾವೇ ಗೆಲ್ಲುವುದು ಎನ್ನುವ ಆಸೆಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದುಬಿಡುತ್ತಾರೆ. ಹೂವಿನ ಗಿಡದಲ್ಲಿ ಹೂವು ಉಂಟು, ಮುಳ್ಳು ಉಂಟು. ಹೂವು ಬೇಗ ಬಾಡಿ ಹೋಗುತ್ತದೆ. ಆದರೆ ಮುಳ್ಳು? ಆಮೇಲೆ ಒಂದು ಹೂವಿಗೆ ಒಂದೇ ಮುಳ್ಳಲ್ಲ ಹಲವಾರು ಮುಳ್ಳುಗಳು. ಮದುವೆಯ ಆರಂಭದಲ್ಲಿ ಮಾತ್ರ ಹೂವು ಆಮೇಲೆ ಪಕಳೆಗಳೆಲ್ಲ ಉದುರಿ ಉಳಿಯುವುದು ಮೊನಚು ಮುಳ್ಳು ಮಾತ್ರ.

 

ಅದು ಏನೇ ಇರಲಿ. ದೇವರು ನನ್ನ ಪಾಲಿಗೆ ಕೊನೆಗೂ ಕಣ್ತೆರೆದಿದ್ದ. "ಭಾಗ್ಯದ ಬಾಗಿಲು" ಎನ್ನುವ ಅಣ್ಣಾವ್ರ ಚಲನ ಚಿತ್ರ ಇದೆಯಲ್ಲ. ಅದರ ಪೋಸ್ಟರ್ ಡೌನ್ಲೋಡ್ ಮಾಡಿ ವಾಟ್ಸಪ್ಪ್ ನಲ್ಲಿ ಸ್ನೇಹಿತ ಒಬ್ಬನಿಗೆ ಕಳಿಸಿದೆ. ಸಂಭ್ರಮ, ಉಲ್ಲಾಸ ಹಂಚಿಕೊಳ್ಳಲು ಸ್ನೇಹಿತರಿಗಿಂತ ಬೇರೆ ಯಾರು ಬೇಕು? ಅವನಿಗೆ ಹೊಟ್ಟೆ ಉರಿ ಆಯಿತೋ ಏನೋ? ಆದರೂ ತೋರಿಸಿಕೊಳ್ಳದೆ "ಯಾವಾಗ ಪಾರ್ಟಿ?" ಎಂದು ಮೆಸೇಜ್ ಕಳಿಸಿದ. ಮುಂದೆ ಏನೆಲ್ಲಾ ಮಾಡಬಹುದು ಎಂದು ಮನಸ್ಸು ಮಂಡಿಗೆ ತಿನ್ನತೊಡಗಿತ್ತು. 'ದಿಲ್ ಚಾಹತಾ ಹೈ", "ಜಿಂದಗಿ ನ ಮಿಲೆಗಾ ದುಬಾರಾ" ಚಿತ್ರಗಳಲ್ಲಿ ಸ್ನೇಹಿತರು ಪ್ರವಾಸ ಹೋಗುತ್ತಾರಲ್ಲ. ಹೇಗಾದರೂ ಮಂಗಳೂರಿನಿಂದ ಗೋವಾ ಗೆ ಡ್ರೈವ್ ಮಾಡಿಕೊಂಡ ಹೋಗಬೇಕೆನ್ನುವ ಆಸೆ ಬಾಕಿ ಉಳಿದಿತ್ತು. ಮತ್ತು ದಾರಿಯಲ್ಲಿನ ಪ್ರಕೃತಿಯ ರಮಣೀಯ ಸೊಬಗನ್ನು ಸವಿಯುವ ಇರಾದೆ. ಬೆಟ್ಟದ ತುದಿಯಿಂದ ವಿಶಾಲ ಸಮುದ್ರದ ಫೋಟೋಗಳನ್ನು ತೆಗೆಯುವಾಸೆ, ಕೆಂಪು ಸೂರ್ಯ ನೀರೊಳಗೆ ಮುಳುಗುವುದು, ಎಲ್ಲಿಗೂ ಹೋಗದೆ ಅಲ್ಲಿಯೇ ನಿಂತ ಒಂಟಿ ಬೋಟ್ ಗಳು ಹೀಗೆ ಅನೇಕ ಸನ್ನಿವೇಶಗಳು. ಚಿತ್ರ ತೆಗೆಯಲು ಅಲ್ಲಿ ಅವಕಾಶಗಳಿಗೇನು ಕಡಿಮೆ?

 

ಅದೇ ಐಡಿಯಾ ಹೆಂಡತಿಗೆ ಕೊಟ್ಟಿದ್ದರೆ ಅವಳು ಪ್ರವಾಸಕ್ಕೆ ಖಂಡಿತ ಒಪ್ಪಿಕೊಳ್ಳುತ್ತಿದ್ದಳು. ಆದರೆ ಅವಳ ಲಗೇಜ್ ಕಾರಿನಿಂದ ಹತ್ತಿ ಇಳಿಸುವದರಲ್ಲೇ ಕಾಲ ಕಳೆದು ಹೋಗುತ್ತಿತ್ತು. ಅವಳು ಬೆಳ್ಳಿಗೆ ರೆಡಿ ಆಗುವುದು ಕಾಯುತ್ತ ಕೂತು ತಾಳ್ಮೆಯೆಲ್ಲ ಕರಗಿ ಹೋಗುತ್ತಿತ್ತು. ಅವಳು ಮಾಡಿದ ಶಾಪಿಂಗ್ ವಸ್ತುಗಳನ್ನು ಹೊತ್ತು ತರುವ ಕೂಲಿ ಕೆಲಸ ನನ್ನದೇ. ಅವಳು ಬೀದಿಯಲ್ಲಿ ವ್ಯಾಪಾರಕ್ಕೆ ಇಳಿದರೆ ಸಾಕಷ್ಟು ಹೊತ್ತು ಸುಮ್ಮನೆ ಕೈ ಕಟ್ಟಿ ಬೀದಿಯಲ್ಲಿ ನಿಂತುಕೊಳ್ಳುವ ಕೆಲಸಕ್ಕಿಂತ ಶ್ರವಣ ಬೆಳಗೋಳದಲ್ಲಿ ಗೊಮ್ಮಟ ಆಗುವುದು ವಾಸಿ. ಅವಳು ಮೆಚ್ಚಿದ ಸೀರೆಗೆ ಎಷ್ಟು ಚೆಂದದ ಬಣ್ಣ, ಎಷ್ಟು ಚೆಂದದ ಡಿಸೈನ್ ಎಂದು ಹೊಗಳದೇ ಹೋದರೆ ನಿಮಗೆ ಟೇಸ್ಟ್ ಇಲ್ಲ ಎನ್ನುವ ಕಾಮೆಂಟ್ ಸದಾ ಸಿದ್ಧವಿರುತ್ತಿತ್ತು. ಸೂರ್ಯಾಸ್ತ ಆಕಾಶದಲ್ಲಿ ಮೂಡಿಸುವ ರಂಗು, ಪಕ್ಷಿಗಳ ರೆಕ್ಕೆ ಪುಕ್ಕದಲ್ಲಿ ಮೂಡಿರುವ ಆಕರ್ಷಕ ವಿನ್ಯಾಸಗಳು ಅವೆಲ್ಲ ಫ್ರೀ ಆದರಿಂದ ಅವುಗಳ ಬಗ್ಗೆ ಗಮನ ಹರಿಸುವ ಗೋಜಿಗೆ ಅವಳು ಹೋಗುತ್ತಲೇ ಇರಲಿಲ್ಲ. ಕ್ಯಾಮೆರಾದಲ್ಲಿ ಹೆಚ್ಚಿನ ಫೋಟೋಗಳು ಅವಳದೇ ಇರಬೇಕು. ಮತ್ತು ಫೋಟೋ ತೆಗೆದ ಮೇಲೆ ಅವಳು ಅದನ್ನು ನೋಡಿ ಓಕೆ ಇಲ್ಲ ನಾಟ್ ಓಕೆ ಎಂದು ಹೇಳುತ್ತಾಳೆ. ಅವಳು ಚೆಂದ ಕಾಣುವ ಹಾಗೆ ತೆಗೆಯದೆ ಇದ್ದರೆ ಒಂದು ನನ್ನ ಕ್ಯಾಮೆರಾ ಸರಿ ಇಲ್ಲ ಇಲ್ಲ ನನಗೆ ಫೋಟೋ ತೆಗೆಯಲು ಬರುವುದಿಲ್ಲ ಅಷ್ಟೇ. ಇಷ್ಟೆಲ್ಲಾ ಸಂಗತಿಗಳ ನಡುವೆ ಮಂಗಳೂರು ಶುರು ಆಗಿದ್ದೆಲ್ಲಿ? ಗೋವಾ ಮುಗಿದದ್ದು ಎಲ್ಲಿ ಎಂದು ಗೊತ್ತು ಕೂಡ ಆಗುತ್ತಿರಲಿಲ್ಲ.

 

ಶುಭ ವೇಳೆಯಲ್ಲಿ ಅಪಶಕುನ ಏಕೆ? ಪ್ರವಾಸ ಬಿಟ್ಟು ಬೇರೇನೂ ಮಾಡಬಹುದು? ಸದ್ಗುರು ಆಶ್ರಮಕ್ಕೋ ಇಲ್ಲವೇ ಹಿಮಾಲಯದ ಅಡಿಯಲ್ಲಿ ನಡೆಯುವ ಧ್ಯಾನ ಕೇಂದ್ರಗಳಿಗೆ ಹೋಗಿ ನಾಲ್ಕಾರು ದಿನ ತಣ್ಣಗೆ ಕುಳಿತು ಧ್ಯಾನ ಮಾಡಬಹುದು. ಮನೆಯಲ್ಲಿ ಧ್ಯಾನ ಮಾಡಲಿಕ್ಕೆ ಆಗುವುದಿಲ್ಲ ಎಂದಲ್ಲ. ಆದರೆ ಹೆಂಗಸರು ಏನಾದರು ಸಹಿಸಿಯಾರು. ತಮ್ಮ ಗಂಡ ಸಂತೋಷದಿಂದ ಮತ್ತು ನೆಮ್ಮದಿಯಿಂದ ಇರುವುದನ್ನು ಸಹಿಸಲಾರರು. ನನ್ನ ಹೆಂಡತಿ ಅಷ್ಟೇ ಅಲ್ಲ. ಮೊನ್ನೆ ಗೆಳೆಯರು ಸಿಕ್ಕಾಗ ಹೆಚ್ಚು ಕಡಿಮೆ ಎಲ್ಲ ಸ್ನೇಹಿತರ ದೂರು ಇದೆ ಆಗಿತ್ತು ಅವರೊಳಗೆ ವಿವಾಹ ವಿಚ್ಛೇದನ ಪಡೆದ ಸ್ನೇಹಿತನೊಬ್ಬ ನಮ್ಮನ್ನೆಲ್ಲ ಅಯ್ಯೋ ಪಾಪ ಎನ್ನುವಂತೆ ನೋಡುತ್ತಿದ್ದ. ನನಗೂ ಕೂಡ ಅವನ ಹಾಗೆ ನೆಮ್ಮದಿಯ ನಗೆ ಬೀರುವ ಸದವಕಾಶ ಹತ್ತಿರವೇ ಇದೆ ಎನ್ನುವ ಹರ್ಷದಿಂದ ನನ್ನ ಮುಖದಲ್ಲಿ ಮಂದಹಾಸ ಮೂಡಿತ್ತು. 

 

ಕೊನೆ ಕಾಲಕ್ಕೆ ಹೆಂಡತಿಯೇ ದಿಕ್ಕು ಎನ್ನುವ ಮಾತಿದೆಯಲ್ಲ. ಆದರೆ ನಿಜದಲ್ಲಿ ಅವಳು ಗಂಡನ ನಾಲಿಗೆ ಕಿತ್ತುಬಿಟ್ಟಿರುತ್ತಾಳೆ. ಕೊನೆ ಕಾಲದವರೆಗೆ ಹೆಂಡತಿಯ ಜೊತೆಗೆ ಬದುಕಿ ಯಾವ ನರಕಕ್ಕಾದರೂ ಸೈ ಎನ್ನುವಷ್ಟು ಅನುಭವ ಭೂಮಿ ಮೇಲೆಯೇ ಪಡೆಯುವುದಕ್ಕಿಂತ, ಕಾಲಕ್ಕಿಂತ ಸ್ವಲ್ಪ ಮೊದಲೇ ಸ್ನೇಹಿತರ ನಡುವೆಯೇ ಪ್ರಾಣ ಬಿಡುವುದೇ ವಾಸಿ. ಅವರು ನಮ್ಮನ್ನು ಮಣ್ಣು ಮಾಡಿ ಕೈ ತೊಳೆದುಕೊಳ್ಳುತ್ತಾರೆ. ಆಮೇಲೆ ಶಪಿಸಿಸುವ ಗೋಜಿಗೆ ಹೋಗುವುದಿಲ್ಲ. ಸಾಕ್ರಟೀಸ್ ಹೇಳಿದ್ದ ನಿನಗೆ ಕೆಟ್ಟ ಹೆಂಡತಿ ಸಿಕ್ಕರೆ ನೀನು ತತ್ವಜ್ಞಾನಿ ಆಗುತ್ತಿ ಎಂದು. ಆದರೆ ಅವಳು ನಡುವೆಯೇ ಸೋಡಾಚೀಟಿ ಕೊಟ್ಟು ಮತ್ತೆ ನಿಮ್ಮ ಬದುಕು ನಿಮಗೆ ಮರಳಿ ಸಿಕ್ಕರೆ? ಸಾಕ್ರಟೀಸ್ ಹೇಳದೆಯೇ ಉಳಿಸಿದ ಮಾತುಗಳನ್ನು ನಾನು ಹೇಳಿ ಒಂದು ಪುಸ್ತಕ ಹೊರತರಬಹುದು. ಆಗ ಚರಿತ್ರೆಯಲ್ಲಿ ನನಗೆ ಒಂದು ಸ್ಥಾನ ಕೂಡ ದೊರಕಬಹುದು ಎಂದು ಎನಿಸಿ ರೋಮಾಂಚನ ಆಯಿತು. ಎಷ್ಟೆಲ್ಲಾ ಅವಕಾಶಗಳಿವೆ ಈ  ವಿಶಾಲ ಪ್ರಪಂಚದಲ್ಲಿ. ಮತ್ತೆ ಆ ಅವಕಾಶ ಕೊಟ್ಟ ಹೆಂಡತಿಗೆ ನನ್ನ ಪುಸ್ತಕ ಅರ್ಪಿಸಿ ಧನ್ಯವಾದ ಹೇಳಬೇಕು ಎಂದುಕೊಂಡೆ. ಅವಳು ನನ್ನ ಬಿಟ್ಟು ಹೋಗುವುದರಿಂದ ಏನೆಲ್ಲಾ ಬದಲಾವಣೆಗಳು.

 

ಬುದ್ಧನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯ ಆಯಿತು. ಅಲ್ಲಿ ಅವನ ಹೆಂಡತಿ ಅವನ ಬೆನ್ನು ತಿವಿಯುತ್ತ ನಿಂತಿದ್ದರೆ ಅವನ ಜ್ಞಾನೋದಯ ಆಗುತ್ತಿತ್ತೇ? ನೆನಪಿಡಿ, ಬುದ್ಧ ಕಾಂತಿಯುತನಾಗಿ, ಮಂದಹಾಸನಾಗಿ, ಅರೆ ಕಣ್ಣು ತೆರೆದು ಕುಳಿತುಕೊಳ್ಳುವ ಧೈರ್ಯ ಮಾಡಿದ್ದೆ ಅವನ ಹೆಂಡತಿ ಅಲ್ಲಿಲ್ಲ ಎಂದು. ಇಷ್ಟಕ್ಕೂ ಹೆಂಡತಿಯರು ಎಂದರೆ ಕೆಟ್ಟವರು ಎಂದರೇನಲ್ಲ. ಆದರೆ ಅವರು ಹೆಂಡತಿಯರು ಅಷ್ಟೇ. ಅವರು ಸಂತೋಷ ಆಗಿರುವುದು ತಮ್ಮ ಗಂಡನಿಗೆ ಯಾವತ್ತೂ ತೋರಿಸಿಕೊಡುವುದಿಲ್ಲ. ಮತ್ತು ಗಂಡ ಸಂತೋಷ ಪಟ್ಟರೆ ಅವರಿಗೆ ನರಕ ಹೇಗಿರುತ್ತದೆ ಎಂದು ಕಣ್ಮುಂದೆಯೇ ತೋರಿಸಿಕೊಡಲು ಹಿಂದೆ ಮುಂದೆ ನೋಡುವದಿಲ್ಲ. ಅವಳು ತನ್ನ ಮಕ್ಕಳಿಗೆ ಕರುಣಾಮಯಿ, ತವರುಮನೆಯವರಿಗೆ ವಾತ್ಸಲ್ಯ ತೋರುವ ಮಗಳು, ಸಹೋದರಿ. ಆದರೆ ಗಂಡನಿಗೆ ಏಳು ಜನ್ಮದ ಕರ್ಮಗಳನ್ನು ಒಂದೇ ಜನುಮದಲ್ಲಿ ತೀರಿಸಿ ಹೋಗಲು ಬಂದಿರುವ ಯಮಲೋಕದ ಪ್ರತಿನಿಧಿ. ಮದುವೆ ಆಗುವವರೆಗೆ ಮಾತ್ರ ಅವಳು ಗಂಡಿಗೆ ಆಕರ್ಷಣೆ. ಆಮೇಲೆ ಗಂಡನನ್ನು ಬಟ್ಟೆ ಒಗೆದ ಮೇಲೆ ಹಿಂಡಿ ನೀರು ತೆಗೆಯುವ ಹಾಗೆ, ಗಂಡನ ಸಂತೋಷದ ಒಂದು ಹನಿ ಬಿಡದಂತೆ ಹಿಂಡಿ ತೆಗೆದುಬಿಡುತ್ತಾಳೆ. ಆದರೆ ನನಗೆ ಇನ್ನು ಆ ತಾಪತ್ರಯ  ಮುಗಿಯಿತು. ನಾನು ಸ್ವಚಂದ ಹಾರುವ ಹಕ್ಕಿ. ನನ್ನ ಸಂತೋಷ ಕಸಿದುಕೊಳ್ಳುವ ಕರಾರು ಮುಗಿದು ಹೋಗಿದೆ.

 

ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ದೇವತೆಗಳು ಅಸ್ತು ಅನ್ನುವ ಮುಂಚೆಯೇ ಹೆಂಡತಿ ಮನಸ್ಸು ಬದಲಾಯಿಸಿದ್ದಳು. ಹೋಗುತ್ತಿರುವುದು ಎರಡು ದಿನಕ್ಕೆ ಅಷ್ಟೇ ಎಂದು ಘೋಷಿಸಿ ಬಂದ ಮೇಲೆ ಇನ್ನು ಪಿಕ್ಚರ್ ಬಾಕಿ ಇದೆ ಎನ್ನುವ ನೋಟ ಬೀರಿ ಹೋದಳು. ನನ್ನ ಕನಸಿನ ಸೌಧ  ಕ್ಷಣಾರ್ಧದಲ್ಲೇ ಕುಸಿದು ಬಿದ್ದಿತ್ತು. ಪುರಾಣ ಕಥೆಯ ಹರಿಶ್ಚಂದ್ರ ಅಸಹಾಯಕತೆಯಿಂದ ನಕ್ಷತ್ರಕನನ್ನು ನೋಡಿದಂತೆ ಅವಳನ್ನು ನೋಡಿದೆ. ಮನೆಯ ಗೋಡೆಯ ಮೇಲೆ ಇದ್ದ ಬುದ್ಧನ ಪೇಂಟಿಂಗ್ ನಲ್ಲಿ ಬುದ್ಧ ಕಣ್ಣು ಅರೆ ತೆರದಿದ್ದು ಏಕೆ ಎಂದು ಗೊತ್ತಾಗಿತ್ತು. ಆದರೆ ಈಗ ಅರೆ ಮುಚ್ಚಿದ್ದು ಏಕೆ ಎಂದು ಕೂಡ ಗೊತ್ತಾಯಿತು. ಸಾಂತ್ವನ ಹೇಳುವಂತೆ ಸಾಯಿಬಾಬ (ಇನ್ನೊಂದು ಗೋಡೆಯ ಮೇಲಿನ ಪೇಂಟಿಂಗ್) ಕರುಣೆಯ ನೋಟ ಬೀರುತ್ತಿದ್ದ. ಸ್ನೇಹಿತ ಮತ್ತೆ ಮೆಸೇಜ್ ಮಾಡಿದ್ದ 'ಯಾವಾಗ ಪಾರ್ಟಿ?' ಯಾವುದೇ ಉತ್ತರ ನೀಡದೆ, ಗಾಳಿ ಹೋದ ಬಲೂನಿನಂತೆ ಸುಮ್ಮನೆ ಹೊದ್ದು ಮಲಗಿದೆ.

Sunday, August 7, 2022

ಕಥೆ: ಮೂರ್ಖರ ಸಾಮ್ರಾಜ್ಯಕ್ಕೆ ಅವಿವೇಕಿ ರಾಜ

(ಇದು ಒಂದು ಜಾನಪದ ಕಥೆಯ ಭಾವಾನುವಾದ. ಇದನ್ನು A. K. ರಾಮಾನುಜನ್ ಅವರ 'Folktales from India' ಸಂಗ್ರಹದಿಂದ ಆಯ್ದುಕೊಳ್ಳಲಾಗಿದೆ.)

 

ಒಂದು ಮೂರ್ಖರ ಸಾಮ್ರಾಜ್ಯಕ್ಕೆ, ಅವಿವೇಕಿಯೊಬ್ಬ ರಾಜನಾಗಿದ್ದ. ಅವನಿಗೊಬ್ಬ ಪೆದ್ದ ಮಂತ್ರಿ ಕೂಡ ಇದ್ದ. ಅವರ ವಿಚಾರ ಮತ್ತು ನಡುವಳಿಕೆಗಳು ಬಲು ವಿಚಿತ್ರವಾಗಿದ್ದವು. ಅವರು ಹಗಲು-ರಾತ್ರಿಗಳನ್ನೇ ಬದಲಾಯಿಸಿದ್ದರು. ಅವರ ಆದೇಶದ ಪ್ರಕಾರ, ರೈತರು ತಮ್ಮ ಹೊಲಗಳಿಗೆ ರಾತ್ರಿ ಉತ್ತಲು ಹೋಗಬೇಕಿತ್ತು. ವ್ಯಾಪಾರಸ್ಥರು ಕತ್ತಲು ಆಗುವವರೆಗೆ ತಮ್ಮ ಅಂಗಡಿಗಳನ್ನು ತೆಗೆಯುವಂತಿರಲಿಲ್ಲ. ಮತ್ತು ಸೂರ್ಯೋದಯ ಆದೊಡನೆ ಎಲ್ಲರು ನಿದ್ದೆಗೆ ಜಾರಬೇಕಿತ್ತು. ಅದಕ್ಕೆ ತಪ್ಪಿದರೆ ಮರಣ ದಂಡನೆಯೇ ಶಿಕ್ಷೆ ಆಗಿತ್ತು.


ಒಂದು ದಿನ ಗುರು-ಶಿಷ್ಯರ ಜೋಡಿ ಆ ಪಟ್ಟಣಕ್ಕೆ ಆಗಮಿಸಿದರು. ಆದರೆ ಹಾಡು-ಹಗಲಿನಲ್ಲಿ ರಸ್ತೆಗಳೆಲ್ಲ ಖಾಲಿ-ಖಾಲಿ. ಎಲ್ಲರು ನಿದ್ದೆಗೆ ಜಾರಿದ್ದಾರೆ. ದನ-ಕರುಗಳು ಸಹಿತ ಆ ಅಭ್ಯಾಸಕ್ಕೆ ಹೊಂದಿಕೊಂಡುಬಿಟ್ಟಿದ್ದವು. ಅಲ್ಲಿಗೆ ಬಂದ ಈ ಗುರು-ಶಿಷ್ಯರು ಊರು ಸುತ್ತಿ, ಎಲ್ಲೂ ಊಟ ಸಿಗದೇ ಸುಸ್ತಾದರು. ಆದರೆ ರಾತ್ರಿಯಾದಂತೆ ಊರಿಗೆ ಕಳೆ ಬಂದು ಬಿಟ್ಟಿತು. ಹಸಿದಿದ್ದ ಆಗಂತುಕರು ದಿನಸಿ ಕೊಳ್ಳಲು ಅಂಗಡಿ ಒಂದಕ್ಕೆ ಹೋದರು. ಅಲ್ಲಿ ಅವರಿಗೆ ಪರಮಾಶ್ಚರ್ಯ. ಅಲ್ಲಿ ಏನೇ ತೆಗೆದುಕೊಂಡರೂ ಅದರ ಬೆಲೆ ಒಂದೇ ರೂಪಾಯಿ. ಅಕ್ಕಿ, ಬೇಳೆ, ಹಣ್ಣು, ತುಪ್ಪ, ತರಕಾರಿ ಏನೇ ತೆಗೆದುಕೊಂಡರೂ ಅದರ ಬೆಲೆ ಒಂದೇ ರೂಪಾಯಿ. ಅವರು ತಮಗೆ ಬೇಕಾದ್ದು ಕೊಂಡುಕೊಂಡು ಅಡುಗೆ ಮಾಡಿಕೊಂಡು ಊಟ ಮಾಡಿದರು.

 

ಅಷ್ಟೊತ್ತಿಗೆ ಗುರುವಿಗೆ ಅದು ಮೂರ್ಖರ ಸಾಮ್ರಾಜ್ಯ ಎಂದು ಅರ್ಥವಾಗಿತ್ತು. ಅವನು ತನ್ನ ಶಿಷ್ಯನಿಗೆ ಹೇಳಿದ. "ಇದು ನಾವಿರಬೇಕಾದ ಜಾಗ ಅಲ್ಲ. ಇಲ್ಲಿ ಏನು ಬೇಕಾದರೂ ಆಗಬಹುದು. ಇಲ್ಲಿಂದ ಮುಂದಕ್ಕೆ ಹೋಗೋಣ." ಆದರೆ ಶಿಷ್ಯ ಹೊಟ್ಟೆಬಾಕ. ಅವನಿಗೆ ಬೇಕಾದದ್ದು ಕಡಿಮೆ ಖರ್ಚಿನಲ್ಲಿ ಭರ್ಜರಿ ಊಟ. ಅವನು ಅಲ್ಲಿಯೇ ಉಳಿಯುವ ನಿರ್ಧಾರ ಮಾಡಿದ. ಗುರು ಅವನನ್ನು ಅಲ್ಲಿಯೇ ಬಿಟ್ಟು ಮುಂದೆ ಸಾಗಿದ.

 

ಆ ಪಟ್ಟಣದಲ್ಲಿ ಮುಂದೊಂದು ದಿನ ಹಗಲು ಹೊತ್ತಿನಲ್ಲಿ ಎಲ್ಲರು ಮಲಗಿದ್ದಾಗ, ಶ್ರೀಮಂತ ವ್ಯಾಪಾರಿ ಒಬ್ಬನ ಮನೆಯಲ್ಲಿ ಕಳ್ಳತನ ಆಯಿತು. ಗೋಡೆಗೆ ಕನ್ನ ಕೊರೆದು ಕಳ್ಳ ಹೊರ ಬರುವಷ್ಟರಲ್ಲಿ ಗೋಡೆ ಕಳ್ಳನ ಮೇಲೆ ಕುಸಿದು ಅವನು ಮೃತ ಪಟ್ಟನು. ಕಳ್ಳನ ಸಂಬಂಧಿಕರು ರಾಜನ ಹತ್ತಿರ ನ್ಯಾಯ ಪರಿಹಾರಕ್ಕೆ ಹೋದರು. ಕಳ್ಳತನ ಅವರ ಪುರಾತನ ವೃತ್ತಿ. ಅದನ್ನು ಮಾಡುವಾಗ ಗೋಡೆ ಭದ್ರವಾಗಿ ಕಟ್ಟಿಸದೆ ಇದ್ದರಿಂದ ಕಳ್ಳ ಮೃತ ಪಟ್ಟಿದ್ದಾನೆ. ಅದರ ಸಲುವಾಗಿ ಅಪರಾಧಿಗಳನ್ನು ಶಿಕ್ಷಿಸಿ ಅವರಿಗೆ ನ್ಯಾಯ ಒದಗಿಸಬೇಕು ಎಂದು ಕೇಳಿಕೊಂಡರು.

 

ರಾಜ ಅವರಿಗೆ ನ್ಯಾಯ ಒದಗಿಸುವುದಾಗಿ ಅಭಯವಿತ್ತ. ಕೂಡಲೇ ಆ ವ್ಯಾಪಾರಿಯನ್ನು ಕರೆ ತರಲು ಹೇಳಿದ. ಅಲ್ಲಿಗೆ ಬಂದ ವ್ಯಾಪಾರಿ ತನ್ನ ಅಹವಾಲು ಮಂಡಿಸಿದ. ಮನೆ ಅವನದೇ ಆದರೂ, ಅದು ಗೋಡೆ ಕಟ್ಟುವವನು ಭದ್ರವಾಗಿ ಕಟ್ಟದ್ದು ಕಳ್ಳ ಸಾಯಲು ಕಾರಣ ಎಂದು ಹೇಳಿದ. ಗೋಡೆ ಕಟ್ಟಿದವನನ್ನು ಅಲ್ಲಿಗೆ ಕರೆಸಿದರು. ಅವನು ಗೋಡೆ ಸರಿಯಾಗಿ ಕಟ್ಟದ್ದಕೆ ಕಾರಣ ಹೇಳಿದ. ಆ ದಿನ ಹುಡುಗಿಯೊಬ್ಬಳು ರಸ್ತೆಯಲ್ಲಿ ಆ ಕಡೆಗೆ, ಈ ಕಡೆಗೆ ಹಲವಾರು ಬಾರಿ ಓಡಾಡಿ ಅವಳ ಗೆಜ್ಜೆ ಸಪ್ಪಳದಿಂದ ಅವನು ವಿಮುಖನಾಗಿ ಗೋಡೆ ಭದ್ರವಾಗಿ ಕಟ್ಟಲು ಸಾಧ್ಯವಾಗಲಿಲ್ಲ ಎಂದು. ಆ ಹುಡುಗಿಯನ್ನು ಅಲ್ಲಿಗೆ ಬರ ಹೇಳಿದರು. ಆ ಹುಡುಗಿ ಅಂದು ಅಲ್ಲಿ ಸಾಕಷ್ಟು ಬಾರಿ ಓಡಾಡಲಿಕ್ಕೆ ಕಾರಣ, ಆ ರಸ್ತೆಯಲ್ಲಿದ್ದ ಅಕ್ಕಸಾಲಿಗನ ಅಂಗಡಿ. ಅವನು ಇವಳ ಆಭರಣ ಮಾಡಿಕೊಡದೆ ಆಗ ಬಾ, ಈಗ ಬಾ ಎಂದು ಸತಾಯಿಸುತ್ತಿದ್ದ. ಅದಕ್ಕೆ ಹಲವಾರು ಬಾರಿ ಅವನ ಅಂಗಡಿಗೆ ಹೋಗಬೇಕಾಗಿ ಬಂತು ಎಂದು ಹೇಳಿದಳು. ಅಕ್ಕಸಾಲಿಗನನ್ನು ರಾಜನ ಆಸ್ಥಾನಕ್ಕೆ ಕರೆಸಿದರು. ಅವನು ತನ್ನ ಕಥೆ ಹೇಳಿದ. ಒಬ್ಬ ವ್ಯಾಪಾರಿ ತನ್ನ ಆಭರಣಗಳನ್ನು ಮೊದಲು ಮಾಡಿಕೊಡಲು ಒತ್ತಡ ಹೇರಿದ್ದ. ಆ ಕಾರಣದಿಂದ ಅವನಿಗೆ ಹುಡುಗಿಯ ಆಭರಣ ಮಾಡಿಕೊಡಲು ಸಾಧ್ಯವಾಗದೆ ಸತಾಯಿಸಿದ್ದು ಎಂದು ಹೇಳಿದ. ಅವನಿಗೆ ತೊಂದರೆ ಕೊಟ್ಟ ವ್ಯಾಪಾರಿ ಬೇರೆ ಯಾರು ಅಲ್ಲ. ಗೋಡೆ ಬಿದ್ದು ಕಳ್ಳ ಸತ್ತನಲ್ಲ.  ಆ ಮನೆ ಮಾಲೀಕನೇ ಆಗಿದ್ದ. ತುಂಬಾ ಕ್ಲಿಷ್ಟಕರ ಸಮಸ್ಯೆ ಒಂದಕ್ಕೆ ಪರಿಹಾರ ಸಿಕ್ಕಿಯೇ ಬಿಟ್ಟಿತು. ರಾಜ-ಮಂತ್ರಿ  ಸೇರಿ ಆ ವ್ಯಾಪಾರಿಯೇ ಅಪರಾಧಿ ಎನ್ನುವ ನಿರ್ಧಾರಕ್ಕೆ ಬಂದರು ಮತ್ತು ಅವನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದರು.

 

ಆದರೆ ಆ ವ್ಯಾಪಾರಿಗೆ ತುಂಬಾ ವಯಸ್ಸಾಗಿ ಹೋಗಿತ್ತು. ಅವನು ತುಂಬಾ ಕೃಶನಾಗಿ ಹೋಗಿದ್ದ. ಅಷ್ಟು ತೆಳ್ಳನೆಯ ವ್ಯಕ್ತಿಗೆ ಮರಣ ದಂಡನೆ ಕೊಟ್ಟರೆ ಏನು ಚೆನ್ನ ಎಂದು ಮಂತ್ರಿಗೆ ಅನ್ನಿಸಿತು. ಅವನು ತನ್ನ ಅನಿಸಿಕೆ ರಾಜನಿಗೆ ಹೇಳಿದ. ರಾಜ ಕೂಡ ವಿಚಾರ ಮಾಡಿ ನೋಡಿದ. ಯಾರೋ ಒಬ್ಬರಿಗೆ ಶಿಕ್ಷೆ ಆಗಲೇಬೇಕು. ತೆಳ್ಳನೆಯ ವ್ಯಾಪಾರಿಯ ಬದಲು ಒಬ್ಬ ದಷ್ಟಪುಷ್ಟ ವ್ಯಕ್ತಿಯ ತಲೆ ಕತ್ತರಿಸಬೇಕು ಎನ್ನುವ ನಿರ್ಧಾರಕ್ಕೆ ಅವರು ಬಂದರು. ದಪ್ಪನೆಯ ವ್ಯಕ್ತಿಯ ಹುಡುಕಾಟಕ್ಕೆ ತೊಡಗಿದಾಗ ಅವರಿಗೆ ಸಿಕ್ಕಿದ್ದು ಗುರುವಿನ ಹಿಂದೆ ಹೋಗದೆ ಅಲ್ಲಿಯೇ ಉಳಿದುಕೊಂಡಿದ್ದ ಶಿಷ್ಯ. ಅವನು ಚೆನ್ನಾಗಿ ಉಂಡು ತಿಂದು ಬಲಿತಿದ್ದ. ರಾಜ ಭಟರು ಅವನನ್ನು ವಧಾ ಸ್ಥಾನಕ್ಕೆ ಎಳೆದುಕೊಂಡು ಬಂದರು. ಅವನಿಗೆ ತಾನು ಮಾಡಿದ ತಪ್ಪು ಏನೆಂದು ತಿಳಿಯದು. ಎಷ್ಟು ಕೇಳಿಕೊಂಡರು ರಾಜಭಟರು ಅವನನ್ನು ಬಿಡಲಿಲ್ಲ. ಕೊನೆಗೆ ಅವನು ತನ್ನ ಗುರುವಿನಲ್ಲಿ ಪ್ರಾರ್ಥಿಸಿದ. ಗುರುವಿಗೆ ದಿವ್ಯದೃಷ್ಟಿಯಲ್ಲಿ ಎಲ್ಲ ಅರ್ಥ ಆಯಿತು. ಶಿಷ್ಯನ ಪ್ರಾಣ ಉಳಿಸಲು ಅವರು ಅಲ್ಲಿಗೆ ದೌಡಾಯಿಸಿ ಬಂದರು. ಅವರು ತಮ್ಮ ಶಿಷ್ಯನಿಗೆ ಬೈಯುತ್ತಾ ಅವನ ಕಿವಿಯಲ್ಲಿ ಏನೋ ಹೇಳಿದರು.

 

ನಂತರ ರಾಜನನ್ನು ಉದ್ದೇಶಿಸಿ ಕೇಳಿದರು "ಓ, ಬುದ್ದಿವಂತರಲ್ಲಿ ಶ್ರೇಷ್ಠನಾದ ರಾಜನೇ, ಗುರು-ಶಿಷ್ಯರಲ್ಲಿ ಯಾರು ದೊಡ್ಡವರು?"

 

ರಾಜ ಹೇಳಿದ "ಗುರುವೇ ದೊಡ್ಡವನು. ಅದರಲ್ಲಿ ಸಂದೇಹವೇ ಇಲ್ಲ. ಏಕೆ ಈ ಪ್ರಶ್ನೆ?"

 

ಅದಕ್ಕೆ ಗುರುಗಳು ಹೇಳಿದರು "ಹಾಗಾದರೆ ಮೊದಲಿಗೆ ನನ್ನನ್ನು ವಧಿಸಿ. ನಂತರ ನನ್ನ ಶಿಷ್ಯನನ್ನು ವಧಿಸಿ."

 

ಅದನ್ನು ಕೇಳಿದ ಶಿಷ್ಯ ರೋಧಿಸತೊಡಗಿದ "ಮೊದಲು ನನ್ನನ್ನು ವಧಿಸಿ. ನನಗೆ ಮರಣದಂಡನೆ ಶಿಕ್ಷೆ ನೀಡಿ"

 

ರಾಜ ಗೊಂದಲಕ್ಕೀಡಾಗಿ ಗುರುವನ್ನು ಕೇಳಿದ "ಒಬ್ಬ ದಪ್ಪನೆಯ ಮನುಷ್ಯನಿಗೆ ಶಿಕ್ಷೆ ನೀಡುವುದಕ್ಕಾಗಿ ನಿಮ್ಮ ಶಿಷ್ಯನನ್ನು ಎಳೆದು ತಂದೆವು. ಆದರೆ ನೀವೇಕೆ ಸಾಯಲು ಇಷ್ಟ ಪಡುವಿರಿ?"

 

ಗುರು ರಾಜನನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿ, ಯಾರಿಗೂ ಕೇಳಿಸದಂತೆ ಮೆತ್ತನೆಯ ಧ್ವನಿಯಲ್ಲಿ ಹೇಳಿದ. "ಇಲ್ಲಿ ಯಾರು ಮೊದಲು ಸಾಯುವರೋ, ಅವರಿಗೆ ಮುಂದಿನ ಜನ್ಮದಲ್ಲಿ ಈ ರಾಜ್ಯಕ್ಕೆ ರಾಜನಾಗುವ ಯೋಗ ಇದೆ. ನಂತರ ಸತ್ತವನು ಮಂತ್ರಿಯಾಗಬೇಕು. ನಾನು ರಾಜನಾಗುವ ಆಸೆಯಿಂದ ಮೊದಲು ಸಾಯಲು ಇಚ್ಛಿಸುತ್ತೇನೆ."

 

ರಾಜ ಚಿಂತೆಗೆ ಬಿದ್ದ. ಅವನಿಗೆ ಮುಂದಿನ ಜನ್ಮದಲ್ಲೂ ತನ್ನ ರಾಜ್ಯವನ್ನು ಬೇರೆಯವರಿಗೆ ಬಿಟ್ಟು ಕೊಡಲು ಇಷ್ಟ ಇರಲಿಲ್ಲ. ರಹಸ್ಯದಲ್ಲಿ ಮಂತ್ರಿಯನ್ನು ಕರೆದು ಸಮಾಲೋಚಿಸಿದ. ಅವರಿಬ್ಬರೂ ಮುಂದಿನ ಜನ್ಮದಲ್ಲಿ ರಾಜ್ಯವನ್ನು ಬೇರೆಯವರಿಗೆ ಬಿಟ್ಟು ಕೊಡುವ ಬದಲು ತಾವೇ ಸತ್ತು ಮರು ಜನ್ಮದಲ್ಲಿ ರಾಜ ಮಂತ್ರಿಯಾಗಿ ಅಧಿಕಾರ ನಡೆಸುವ ಆಲೋಚನೆಗೆ ಬಂದರು. ತಮ್ಮ ಸೇವಕರಿಗೆ ಮರುದಿನ ಬೆಳಿಗ್ಗೆ ಗುರು-ಶಿಷ್ಯರ ತಲೆ ಕಡಿಯುವಂತೆ ಆದೇಶ ನೀಡಿದರು. ಆದರೆ ರಾತ್ರಿಯ ವೇಳೆ ಗುರು-ಶಿಷ್ಯರನ್ನು ಸೆರೆಮನೆಯಿಂದ ಆಚೆ ಕಳಿಸಿ, ಆ ಜಾಗದಲ್ಲಿ ತಾವು ಮುಸುಕು ಹಾಕಿಕೊಂಡು ಮಲಗಿದರು.

 

ಮರುದಿನ ಬೆಳಿಗ್ಗೆ ಅವರಿಬ್ಬರ ತಲೆ ಕಡಿಯಲಾಯಿತು. ಅವರ ಮುಸುಕು ತೆಗೆದ ಮೇಲೆ ಜನ ಗಾಬರಿ ಆದರು. ತಮ್ಮ ರಾಜ್ಯಕ್ಕೆ ಇನ್ನಾರು ದಿಕ್ಕು ಎಂದು ಆಲೋಚಿಸತೊಡಗಿದರು. ಯಾರೋ ಒಬ್ಬರು ಗುರು-ಶಿಷ್ಯರನ್ನು ಕೇಳಿ ನೋಡೋಣ ಎಂದು ಹೇಳಿದರು. ಶಿಷ್ಯ ಮಂತ್ರಿಯಾಗುವುದಕ್ಕೆ ತಕ್ಷಣ ಒಪ್ಪಿಕೊಂಡ. ಆದರೆ ಗುರು ಹಲವಾರು ಷರತ್ತುಗಳನ್ನು ಹಾಕಿದ. ಅವನು ಎಲ್ಲ ವಿಷಯಗಳನ್ನು ಬದಲು ಮಾಡುವ ಅಧಿಕಾರಕ್ಕೆ ಜನ ಒಪ್ಪಿಕೊಂಡ ಮೇಲೆ ಅವನು ರಾಜನಾದ. ಅಲ್ಲಿಂದ ಮುಂದೆ ಆ ರಾಜ್ಯದಲ್ಲಿ ಹಗಲು-ಹಗಲಾಗಿಯೇ ಮತ್ತು ರಾತ್ರಿ-ರಾತ್ರಿಯಾಗಿಯೇ ಬದಲಾಯಿತು.

ಗೇಮ್ ಗಳು ಹೊಸ ಪೀಳಿಗೆಯವರಿಗೆ ಸೇರಿದ್ದು

ಚಕ್ರವರ್ತಿ ಅಶೋಕ ತನ್ನ ಸಂದೇಶಗಳನ್ನು ಕಲ್ಲಿನಲ್ಲಿ ಕೆತ್ತಿಸುತ್ತಿದ್ದ. ನಂತರದ ರಾಜರುಗಳು ತಾಮ್ರದ ಹಾಳೆಗಳ ಮೇಲೆ, ಇಲ್ಲವೇ ರೇಷ್ಮೆ ಬಟ್ಟೆಯ ಮೇಲೆ ತಮ್ಮ ಸಂದೇಶಗಳನ್ನು ಬರೆಯತೊಡಗಿದರು. ೧೭-೧೮ನೆ ಶತಮಾನದ ಹೊತ್ತಿಗೆ ಪ್ರಿಂಟಿಂಗ್ ಪ್ರೆಸ್ ಮತ್ತು ಕಾಗದದ ಆವಿಷ್ಕಾರ ಆಗಿತ್ತು. ಆಗ ಎಲ್ಲರ ಕೈಯಲ್ಲೂ, ಎಲ್ಲರ ಮನೆಯಲ್ಲೂ ಪುಸ್ತಕಗಳು. ಎರಡನೇ ಜಾಗತಿಕ ಮಹಾ ಯುದ್ಧದ ಹೊತ್ತಿಗೆ ಹಿಟ್ಲರ್, ಮುಸ್ಸಲೋನಿ ತಮ್ಮ ಭಾಷಣಗಳನ್ನು ರೇಡಿಯೋ ನಲ್ಲಿ ಬಿತ್ತರಿಸಲು ಆರಂಭಿಸಿದ್ದರು. ನಂತರ ಬಂದಿದ್ದು ಚಲನಚಿತ್ರಗಳು. ಅದು ಒಂದು ದೊಡ್ಡ ಉದ್ಯಮವೇ ಆಗಿ ಬೆಳೆಯಿತು. ಆದರೆ ಅದರ ತಲೆಯ ಮೇಲೆ ಕಾಲು ಇಡಲೆಂಬಂತೆ ಬಂತು ಟಿವಿ. ಇಂಟರ್ನೆಟ್, ಯೂಟ್ಯೂಬ್, tiktok ಬಂದ ಮೇಲೆ ಟಿವಿ ಕೂಡ ಹಿಂದೆ ಬಿತ್ತು. ಆದರೆ ಇಂದಿನ ಚಿಣ್ಣರನ್ನು ನೋಡಿ. ಅವರಿಗೆ ಗೇಮ್ ಗಳು ಸೆಳೆದಷ್ಟು ಬೇರೆ ಯಾವುದು ಸೆಳೆಯುವುದಿಲ್ಲ.


ಮನುಷ್ಯ ಕಲ್ಪನಾ ಜೀವಿ. ಅವನಿಗೆ ಹಗಲುಗನಸುಗಳು ಹುಟ್ಟಿಸುವ ರೋಮಾಂಚನ ವಾಸ್ತವ ಹುಟ್ಟಿಸುವುದಿಲ್ಲ. ಅದಕ್ಕೆ ಅವನು ಬೇರೆಯ ಲೋಕದಲ್ಲಿ ಕಳೆದು ಹೋಗಲು ಇಷ್ಟ ಪಡುತ್ತಾನೆ. ಅದಕ್ಕೆ ಸಹಾಯವಾಗಿದ್ದು ಮೊದ ಮೊದಲಿಗೆ ಪುಸ್ತಕಗಳು, ಕಾದಂಬರಿಗಳು. ಚಲನಚಿತ್ರಗಳು ಹುಟ್ಟಿಸುವ ಉದ್ರೇಕದ ಭಾವನೆಗಳು ಪುಸ್ತಕಗಳು ಹುಟ್ಟಿಸಲು ಸಾಧ್ಯವೇ? ಕ್ರಮೇಣ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗಿ ಚಲನಚಿತ್ರ ನೋಡುವವರ ಸಂಖ್ಯೆ ಜಾಸ್ತಿ ಆಯಿತು. ಬೋರಾಗಿಸುವ ಎರಡು ತಾಸಿನ ಚಿತ್ರ ನೋಡದೆ ಹತ್ತು youtube ವಿಡಿಯೋ ನೋಡುವ ಅವಕಾಶ ಇದ್ದರೆ ಜನ ಅದನ್ನೇ ಕೇಳುವುದಿಲ್ಲವೇ? ಆದರೆ ವಿಡಿಯೋ ನೋಡುವ ರೋಮಾಂಚನಕ್ಕಿಂತ ಗೇಮ್ ಆಡುವ ಥ್ರಿಲ್ ದೊಡ್ಡದು. ನೀವು ಗೇಮ್ ಆಡಲು ಶುರು ಇಟ್ಟರೆ ನಿಮಗೆ ಬೇರೆ ಯಾವುದೂ ರುಚಿಸುವುದಿಲ್ಲ. ಆತಂಕಕಾರಿ ವಿಷಯ ಎಂದರೆ ಗೇಮ್ ಗಳು ನಮ್ಮ ಮೆದುಳಿನಲ್ಲಿ ಹುಟ್ಟಿಸುವ ಡೋಪಮೈನ್ ರಭಸ ನಮ್ಮನ್ನು ಮತ್ತೆ ಮತ್ತೆ ಅದೇ ಅನುಭವಕ್ಕೆ ಹಾತೊರೆಯುವಂತೆ ಮಾಡುತ್ತದೆ. ಕ್ರಮೇಣ ಮನುಷ್ಯ ಅದಕ್ಕೆ ದಾಸನಾಗಿ ಹೋಗುತ್ತಾನೆ. ಅದು ಡ್ರಗ್ ಗಳು ಹುಟ್ಟಿಸುವ ನಶೆಗೆ ಮನುಷ್ಯ ದಾಸ ಆದಂತೆ. ಡ್ರಗ್ ಮತ್ತು ಗೇಮ್ ಗಳು ಕಾರ್ಯ ನಿರ್ವಹಿಸುವ ವೈಖರಿ ಬೇರೆ ಬೇರೆಯಾದರು ಅದರ ಪರಿಣಾಮ ಮಾತ್ರ ಒಂದೇ. ಡ್ರಗ್ ಗಳು ಮನುಷ್ಯನನ್ನು ಬೇಗನೆ ಸಾವಿನ ದವಡೆಗೆ ಒಯ್ದರೆ, ಗೇಮ್ ಗಳು ಹಾಗೆ ಮಾಡುವುದಿಲ್ಲ. ಬದಲಿಗೆ ಅವನ ಸೃಜನಶೀಲತೆ ಕಸಿದುಕೊಳ್ಳುತ್ತವೆ. ಆ ಮನುಷ್ಯನಿಗೆ ಬೇರೆಯವರ ಸುಖ-ದುಃಖಗಳು ಅರಿವಿಗೆ ಬರುವುದಿಲ್ಲ. ಏಕೆಂದರೆ ಅವನು ಜೀವಿಸುವುದು ಅವನದೇ ಲೋಕದಲ್ಲಿ.


ನಾನು ಚಿಕ್ಕವನಿದ್ದಾಗ ನಮ್ಮ ಮನೆಯಲ್ಲಿ ಇದ್ದದ್ದು ರೇಡಿಯೋ ಮಾತ್ರ. ನನ್ನ ಅಕ್ಕಳಿಗೆ ಕಾದಂಬರಿ ಓದುವ ಹವ್ಯಾಸ ಇತ್ತು. ಆದರೆ ಅವುಗಳು ನಮ್ಮ ಮೆದುಳಿನಲ್ಲಿ ಹುಟ್ಟಿಸುವ ಡೋಪಮೈನ್ ರಭಸ ಅಷ್ಟರಲ್ಲೇ ಇತ್ತು. ಎಲ್ಲರ ಮನೆಯಲ್ಲಿ ಬಂದ ಹಾಗೆ ನಮ್ಮ ಮನೆಯಲ್ಲಿ ಕೂಡ ಬಂದೆ ಬಿಟ್ಟಿತು ಟಿವಿ. ಕಟುಕರ ಮನೆಯ ಗಿಳಿ 'ಕೊಲ್ಲು, ಕತ್ತರಿಸು' ಎಂದ ಹಾಗೆ ಅದು ಬದಲಾದ ಕಾಲಮಾನವನ್ನು ತೋರಿಸುತ್ತಿತ್ತು. ಸ್ಮಾರ್ಟ್ ಫೋನ್ ಗಳು ನಮ್ಮ ಕೈ ಸೇರಿದ ಮೇಲೆ ನಾವು ವಾಸ್ತವಕ್ಕಿಂತ ಕಲ್ಪನೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದೇವೆ. ನೀವು ಬರಹಗಾರ ಆದರೆ ನಿಮ್ಮ ಬರಹಗಳನ್ನು ಹತ್ತಿಪ್ಪತ್ತು ಜನ ಓದಿದರೆ ಅದೇ ಜಾಸ್ತಿ. ಅದೇ ನೀವು ಚಿಕ್ಕ ವಿಡಿಯೋಗಳನ್ನು ಮಾಡಿದರೆ ಕನಿಷ್ಠ ನೂರು ಜನ ಆದರೂ ನೋಡುತ್ತಾರೆ. ಆದರೆ ಅವುಗಳನ್ನು ಮೀರಿಸುವಂತೆ ಬಂದಿರುವ ಗೇಮ್ ಗಳು ಹೊಸ ಪೀಳಿಗೆಯ ಮಕ್ಕಳನ್ನು ವ್ಯಸನಿಗಳನ್ನಾಗಿಸಿವೆ. ಅದು ಅಲ್ಪ ಪ್ರಮಾಣದಲ್ಲಿ ಇದ್ದರೆ ಒಳ್ಳೆಯದು ಇರುತ್ತಿತ್ತೇನೋ? ಆದರೆ ಮನುಷ್ಯನ ಮೆದುಳು ರೂಪುಗೊಂಡಿದ್ದೆ ರೋಮಾಂಚನ ಬಯಸಲು. ಅಪಾಯ ಎಂದು ಗೊತ್ತಿದ್ದರೂ F1 ರೇಸಿಂಗ್ ಜನ ನೋಡಲು ಹೋಗುವುದಿಲ್ಲವೆ? ಎತ್ತರದಿಂದ ನೆಗೆಯುವ ಬಂಗೀ ಜಂಪಿಂಗ್ ಹುಟ್ಟಿಸುವ ರೋಮಾಂಚನ ಪಡೆಯಲು ಜನ ದುಡ್ಡು ಖರ್ಚು ಮಾಡುವುದಿಲ್ಲವೇ?


ನನ್ನ ಆರು ವರ್ಷದ ಮಗ ತಾನು ದೊಡ್ಡವನಾದ ಮೇಲೆ ಗೇಮರ್ ಆಗುತ್ತೇನೆ ಎಂದು ಹೇಳುತ್ತಾನೆ. ನಾನು ಅಸಹಾಯಕತೆಯಿಂದ ಅವನನ್ನು ನೋಡುತ್ತೇನೆ. ಆದರೆ ಪ್ರಕೃತಿ ವಿಕಾಸಗೊಂಡಿದ್ದು ಹೀಗೆಯೇ. ಪುಸ್ತಕಗಳು ಹೊಸದಾಗಿ ಬಂದಾಗ, ಅದು ಕೆಟ್ಟ ಹವ್ಯಾಸ ಎಂದು ಹೇಳುವ ಕೆಲವರಾದರೂ ಇದ್ದರೇನೋ? ಆದರೆ ಪುಸ್ತಕಗಳು ನಿಲ್ಲಲಿಲ್ಲ. ಹಾಗೆಯೆ ಇಂದಿನ ಕಾಲಕ್ಕೆ ಗೇಮ್ ಗಳು. ಅವು ಹೊಸ ಪೀಳಿಗೆಗೆ ಸೇರಿದ್ದು. ಇದು ಇಷ್ಟಕ್ಕೆ ನಿಲ್ಲುತ್ತದೆ ಎಂದುಕೊಳ್ಳಬೇಡಿ. AR/VR ತಂತ್ರಜ್ಞಾನ ಅಭಿವೃದ್ಧಿ ಆಗುತ್ತಿದೆಯಲ್ಲ. ಅದು ಹುಟ್ಟಿಸುವ ಭ್ರಮಾ ಲೋಕ ತುಂಬಾನೇ ವಿಚಿತ್ರವಾದದ್ದು. ಅದರ ಮೇಲೆ Facebook ಸೇರಿದಂತೆ ಹಲವಾರು ಸಂಸ್ಥೆಗಳು ಕೋಟ್ಯಂತರ ರೂಪಾಯಿ ವ್ಯಯಿಸುತ್ತಿವೆ. ನಮ್ಮ ಆಫೀಸ್ ನಲ್ಲಿ ಕೂಡ ಅದರ ಲ್ಯಾಬ್ ಇದೆ. ಅದರ ಒಳ ಹೊಕ್ಕಾಗ ಆದ ಅನುಭವ ರೋಮಾಂಚನಕಾರಿ. ಅದು ನಮ್ಮ ಮೆದುಳಿನಲ್ಲಿ ಹುಟ್ಟಿಸುವ ಡೋಪಮೈನ್ ರಭಸ ಹೆಚ್ಚಿನ ಪ್ರಮಾಣದ್ದು.


ಪಂಚೇಂದ್ರಿಯಗಳಲ್ಲಿ ಮುಖ್ಯವಾದದ್ದು ಕಣ್ಣು. ಅದು ಕೂಡ ಮೆದುಳಿನ ಒಂದು ಭಾಗ. ಹಾಗಾಗಿ ಕಣ್ಣು ಹುಟ್ಟಿಸುವ ಭ್ರಮೆಗೆ ಮೆದುಳು ತಕ್ಷಣವೇ ಪ್ರತಿಕ್ರಿಯೆ ನೀಡುತ್ತದೆ. ಅದಕ್ಕಾಗಿ ನೀವು ಧ್ಯಾನಕ್ಕೆ ಕುಳಿತಾಗ ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳುತ್ತೀರಿ. ಕಣ್ಣು ಮುಚ್ಚಿದ್ದರೆ ಮೆದುಳಿಗೆ ಸಿಗುವ ಮಾಹಿತಿ ಕಡಿಮೆ ಆಗುತ್ತದೆ ಆಗ ನಿಮ್ಮ ಮನಸ್ಸು ಶಾಂತ ಆಗುತ್ತದೆ. ಆದರೆ ಧ್ಯಾನ ಮಾಡುವುದು ಪ್ರಕೃತಿ ವಿರುದ್ಧದ ಈಜು. ನೀವು ಶಾಂತ ಆದರೆ ನಿಮ್ಮನ್ನು ಹುಟ್ಟಿಸಿ ಪ್ರಕೃತಿಗೆ ಏನು ಪ್ರಯೋಜನ? ಅದಕ್ಕೆ ಅದು ನಮ್ಮನ್ನು ಹೊಸ ಅನುಭವಗಳಿಗೆ ಹಾತೊರೆಯುವಂತೆ ಮಾಡುವ ಸ್ವಭಾವಗಳನ್ನು ನಮ್ಮ ಜೀನ್ ಗಳಲ್ಲಿ ಬರೆದುಬಿಟ್ಟಿದೆ. ಎಲ್ಲ ಆವಿಷ್ಕಾರಗಳಿಗೂ ಅದೇ ಮೂಲ. ಹಿಂದೆ ಒಂದು ಕಾಲದಲ್ಲಿ ಪುಸ್ತಕ, ಚಲನ ಚಿತ್ರಗಳು ಹುಟ್ಟಿದ್ದು ಇದೇ ತರಹದ ತುಡಿತದಿಂದ. ಇಂದಿಗೆ ಗೇಮ್ ಗಳು. ಮುಂದೆ ಬರಲಿರುವ AR/VR ಕೂಡ ಪ್ರಕೃತಿ ವಿಕಾಸದ ಒಂದು ಭಾಗವೇ.

Wednesday, August 3, 2022

ಸುಖಕ್ಕಿಂತ ದುಃಖಗಳೇ ನಮ್ಮನ್ನು ಹೆಚ್ಚು ಮನುಷ್ಯರನ್ನಾಗಿಸುತ್ತವೆ

ಬಡತನಕೆ ಉಣುವ ಚಿಂತೆ,
ಉಣಲಾದರೆ ಉಡುವ ಚಿಂತೆ, 
ಉಡಲಾದರೆ ಇಡುವ ಚಿಂತೆ,
ಇಡಲಾದರೆ ಹೆಂಡಿರ ಚಿಂತೆ,
ಹೆಂಡಿರಾದರೆ ಮಕ್ಕಳ ಚಿಂತೆ,
ಮಕ್ಕಳಾದರೆ ಬದುಕಿನ ಚಿಂತೆ,
ಬದುಕಾದರೆ ಕೇಡಿನ ಚಿಂತೆ,
ಕೇಡಾದರೆ ಮರಣದ ಚಿಂತೆ

~ ಅಂಬಿಗರ ಚೌಡಯ್ಯ

ಹೌದಲ್ಲವೇ? ಒಂದು ಕಾಲದಲ್ಲಿ ಹಣದಿಂದ ಹೆಚ್ಚು-ಕಡಿಮೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದುಕೊಂಡಿದ್ದೆ. ಆಗ ನಾನಿನ್ನು ಈ ವಚನ ಓದಿರಲಿಲ್ಲ ಅಷ್ಟೇ. ಈಗ ನನಗೆ ಉಣುವ ಚಿಂತೆ ಇಲ್ಲ. ಆದರೆ ಅದಕ್ಕೆ ತಕ್ಕಂತೆ ಕಾಡುವ ಚಿಂತೆಗಳ ಸ್ವರೂಪ ಕೂಡ ಬದಲಾಗಿದೆ. ಓಶೋ ಒಂದು ಪ್ರವಚನದಲ್ಲಿ ಹೇಳಿದ್ದ. ನೀವು ಶ್ರೀಮಂತರಾಗಿ, ಆಗಲೂ ಕೂಡ ನಿಮಗೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ಆವಾಗ ನಿಮ್ಮ ಮನಸ್ಸು ಆಧ್ಯಾತ್ಮಿಕತೆ ಕಡೆಗೆ ಹೊರಳುವುದು ಎಂದು. ಸೂಪರ್ ಸ್ಟಾರ್ ಎನಿಸಿಕೊಂಡ ರಜನೀಕಾಂತ್ ಹಿಮಾಲಯದ ಗುಹೆಗಳಿಗೆ ಧ್ಯಾನ ಮಾಡಲು ಹೋಗುವುದಿಲ್ಲವೆ? ಅವರು ತಮ್ಮ ಚಿತ್ರಗಳಲ್ಲಿ ಮಾಡುವ ಮ್ಯಾಜಿಕ್ ಅವರ ಸ್ವಂತ ಜೀವನದಲ್ಲಿ ಮಾಡಲು ಸಾಧ್ಯವೇ? ಅವರಿಗೆ ಗೊತ್ತಾಗಿದೆ. ನಟನೆ ಮಾಡುವುದು ಪ್ರೇಕ್ಷಕರಿಗಾಗಿ, ಮತ್ತು ಧ್ಯಾನ ಮಾಡುವುದು ತಮಗಾಗಿ ಎಂದು.

ಆದರೆ ಇದರಲ್ಲಿ ಆಸಕ್ತಿಯ ವಿಷಯ ಎಂದರೆ 'ಉಣುವ ಚಿಂತೆ, ಹೆಂಡತಿಯ ಚಿಂತೆ, ಮಕ್ಕಳ ಚಿಂತೆ'  ಎಂದ ವಚನಕಾರ 'ಉಣುವ ಸಂತೋಷ, ಹೆಂಡತಿಯ ಸಂತೋಷ, ಮಕ್ಕಳ ಸಂತೋಷ'  ಎಂದು ಹೇಳಲಿಲ್ಲ. ಅದು ಏಕೆಂದರೆ ಸಂತೋಷ ಕ್ಷಣಿಕ, ಚಿಂತೆ ದೀರ್ಘ ಕಾಲದ್ದು. ಪರೀಕ್ಷೆಯಲ್ಲಿ ಮೊದಲ ದರ್ಜೆ ಗಳಿಸಿದ ಸಂತೋಷ ಹದಿನೈದು ದಿನದಲ್ಲಿ ಮರೆಯಾಗುತ್ತದೆ. ಆದರೆ ಫೇಲಾದ ಚಿಂತೆ ವರುಷವಿಡೀ ಕಾಡುತ್ತದೆ. ಪ್ರಕೃತಿ ನಮ್ಮನ್ನು ರೂಪುಗೊಳಿಸಿದ್ದು ಹಾಗೆಯೆ. ಅದು ನಮ್ಮ ಮೆದುಳಿನಲ್ಲಿ ರಾಸಾಯನಿಕಗಳ ಮೂಲಕ ಕ್ಷಣಿಕ ಕಾಲದ ಮಟ್ಟಿಗೆ ಸಂತೋಷ ಹುಟ್ಟಿಸಿ, ನಾವುಗಳು ಮತ್ತೆ ಮತ್ತೆ ಆ ಅನುಭವಕ್ಕೆ ಹಾತೊರೆಯುವಂತೆ ಮಾಡುತ್ತದೆ. ಹಾಗಾಗಿ ಸಂತೋಷ ಎನ್ನುವುದು ನೆನಪು ಮಾತ್ರ. ಆದರೆ ದುಃಖ ಎನ್ನುವುದು ಪಕ್ಕದಲ್ಲೇ ಇರುವ ಪ್ರತಿ ಕ್ಷಣ ಚುಚ್ಚಿ ಇರಿಯುವ ಸಂಗಾತಿ.

ಅದನ್ನು ನಮ್ಮ ವಚನಕಾರರು ಎಂದೋ ಅರಿತಿದ್ದರು. 'ಸಾಸಿವೆ ಕಾಳಿನಷ್ಟು ಸುಖಕ್ಕೆ, ಸಾಗರದಷ್ಟು ದುಃಖ ನೋಡಾ' ಎಂದು ಅಲ್ಲಮ ಪ್ರಭುಗಳು ಹೇಳಲಿಲ್ಲವೇ? ಅವರಿಗೆ ಸುಖ ಮತ್ತು ದುಃಖಗಳ ನಡುವಿನ ಅಪಾರ ಪ್ರಮಾಣದ ಅಂತರ ಮತ್ತು ತೀವ್ರತೆಯ ಅರಿವಿತ್ತು.ಆದರೆ ಪ್ರಕೃತಿ, ನಮ್ಮ ಮನಸ್ಥಿತಿಯನ್ನು ಸಾಸಿವೆ ಕಾಳಿನಷ್ಟು ಸಿಗುವ ಸುಖಕ್ಕೆ ಬೆಂಬತ್ತಿ ಹೋಗಿ, ಸಾಗರದಷ್ಟು ದುಃಖವನ್ನು ಅನುಭವಿಸುವಂತೆ ಮಾಡಿಬಿಡುತ್ತದೆ. ಅಂಬಿಗರ ಚೌಡಯ್ಯ ಹೇಳಿದಂತೆ ಉಣುವ ಚಿಂತೆಯಿಂದ, ಮರಣದ ಚಿಂತೆಗೆ ನಮಗರಿವಿಲ್ಲದಂತೆ ಬದಲಾಗುತ್ತ ಹೋಗಿಬಿಡುತ್ತೇವೆ. ಆದರೆ ವಚನಕಾರರು ತಮ್ಮ ಇಷ್ಟ ದೈವದ ಮೊರೆ ಹೊಕ್ಕು, ಶಿವಚಿಂತನೆಯಲ್ಲಿ ಇಲ್ಲವೇ ಗುಹೇಶ್ವರನ ಧ್ಯಾನದಲ್ಲಿ ಕಾಲ ಕಳೆದು ಮಾಯೆಯಿಂದ ಹೊರ ಬರುತ್ತಾರೆ. ಅದರಿಂದಲೇ 'ಮನದ ಮುಂದಣ ಆಸೆಯೇ ಮಾಯೆ' ಎನ್ನುವ ವಚನ ಅವರಿಗೆ ಹೇಳಲು ಸಾಧ್ಯವಾಗುತ್ತದೆ.

ಸುಖ ಅಲ್ಪ ಕಾಲದ್ದು, ದುಃಖ ದೀರ್ಘ ಕಾಲದ್ದು ಅಂದರೆ ನಾವು ಸುಖದ ಹಿಂದೆ ಬೀಳದೆ, ದುಃಖವನ್ನು ದೂರವಿಡುವ ಕಾರ್ಯ ಕೈಗತ್ತಿಕೊಳ್ಳಬೇಕಲ್ಲವೇ? ಅದನ್ನೇ ನೋಡಿ ಬುದ್ಧ ಮಾಡಿದ್ದು. ಅವನು ಸುಖದ ಮೂಲ ಯಾವುದು ಎಂದು ಕೇಳಲಿಲ್ಲ. ಬದಲಿಗೆ ದುಃಖದ ಮೂಲ ಯಾವುದು ಎಂದು ಹುಡುಕಿದ. ಅವನಿಗೆ ಜ್ಞಾನೋದಯ ಆಯಿತು. 'ಆಸೆಯೇ ದುಃಖದ ಮೂಲ' ಎನ್ನುವ ಸರಳ ಸತ್ಯವನ್ನು ಜಗತ್ತಿಗೆ ಸಾರಿದ. ಸತ್ಯ ಸರಳ ಆದರೆ ಸುಲಭ ಅಲ್ಲ. ಸಂತೋಷ ನೀವು ಬೇಡ ಎಂದು ತಿರಸ್ಕಿರಿಸದರೆ ಅದು ಪ್ರಕೃತಿಯ ವಿರುದ್ಧದ ಈಜು. ಅದು ಮತ್ತೆ ಸುಖಕ್ಕೆ ನಿಮ್ಮನ್ನು ಚಡಪಡಿಸುವಂತೆ ಮಾಡುತ್ತದೆ. ಮತ್ತೆ ಲೌಕಿಕದ ತಿರುಗಣಿಗೆ ಬೀಳುವಂತೆ ಮಾಡುತ್ತದೆ. ಬುದ್ಧ ದುಃಖದ ತೀವ್ರತೆ ಅನುಭವಿಸದೇ ಇದ್ದರೆ ಅದರ ಮೂಲ ಹುಡುಕಲು ಹೋಗುತ್ತಿರಲಿಲ್ಲ. ಶಿವಧ್ಯಾನದ ಆಶ್ರಯ ಇರದಿದ್ದರೆ ದಾಸರಿಗೆ, ವಚನಕಾರರಿಗೆ ಮುಕ್ತಿ ಎಲ್ಲಿತ್ತು?


ಇತಿಹಾಸ ಹೇಳುವುದು ಕೂಡ ಇದನ್ನೇ. ಒಂದು ಗೆದ್ದ ದೊಡ್ಡಸ್ತಿಕೆಗೆ, ಹಲವಾರು ಸೋಲಿನ ಅವಮಾನಗಳು ಜೊತೆಯಾಗಿಬಿಡುತ್ತವೆ. ಗೆಲುವಿಗಿಂತ ಸೋಲು ಭೀಕರ. ಗೆಲುವು ಮದ ಏರಿಸಿದರೆ, ಸೋಲು ಪಾಠ ಕಲಿಸುತ್ತದೆ. ಸುಖಕ್ಕಿಂತ ದುಃಖಗಳೇ ನಮ್ಮನ್ನು ಹೆಚ್ಚು ಮನುಷ್ಯರನ್ನಾಗಿಸುತ್ತವೆ. ದುಃಖಗಳೇ ಸಿದ್ಧಾರ್ಥನನ್ನು ಬುದ್ಧನನ್ನಾಗಿ ಬದಲಾಯಿಸಿದ್ದು. ಆ ಸತ್ಯದ ಅರಿವೇ ಬಸವಣ್ಣ, ಅಲ್ಲಮರಾದಿಯಾಗಿ ವಚನಕಾರರನ್ನು ಅಜರಾಮರ ಆಗಿಸಿದ್ದು.