Friday, July 1, 2022

ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು

ಇದು 'ನೋಡಿ ಸ್ವಾಮಿ ನಾವಿರೋದು ಹೀಗೆ' ಚಿತ್ರದ ಒಂದು ಹಾಡಿನ ಸಾಲು. ಈ ಹಾಡಿನಲ್ಲಿ ಶಂಕರ್ ನಾಗ್ ಒಂದು ಜೋಪಡಿಯಲ್ಲಿ ಹಾಯಾಗಿ ಕಾಲು ಚಾಚಿ ಕುಳಿತು 'ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು' ಎಂದು ಹಾಡುತ್ತಾರೆ. ಆ ಮನುಷ್ಯ ಬದುಕಿದ್ದು ಹಾಗೇನೇ. ಹಾಗಾಗಿ ಆ ಹಾಡಿನಲ್ಲಿ ಶಂಕರ್ ನಾಗ್ ಮಾಡಿದ್ದು ನಟನೆ ಅನಿಸುವುದಿಲ್ಲ. ಆ ಹಾಡಿನಲ್ಲಿರುವ ಫಿಲಾಸಫಿ ಅನ್ನು ನಾನು ಕೂಡ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ.


ನಮ್ಮೂರು ಅಂದರೆ ನಾನು ಹುಟ್ಟಿ ಬೆಳೆದ ಊರು, ಮಸ್ಕಿ ನಂಗಿಷ್ಟ. ಹತ್ತೆನೆಯ ತರಗತಿ ಮುಗಿದ ಮೇಲೆ ಅಂದಿಗೆ ನಮ್ಮೂರಿನಲ್ಲಿ ಯಾವುದೇ ಕಾಲೇಜುಗಳು ಇಲ್ಲವಾದ್ದರಿಂದ ಊರು ಬಿಡುವುದು ಅವಶ್ಯಕ ಇತ್ತು. ಪಿ.ಯು.ಸಿ. ಮೊದಲನೇ ವರುಷ ಓದಿದ್ದು ಲಿಂಗಸಗೂರಿನಲ್ಲಿ (ಪ್ರತಿ ದಿನ ಬಸ್ ನಲ್ಲಿ ಓಡಾಡಿ).  ಎರಡನೇ ವರುಷ ಓದಿದ್ದು ರಾಯಚೂರಿನಲ್ಲಿ, ಅದು ಮೊದಲನೇ ಬಾರಿಗೆ ಊರು  ಬಿಟ್ಟಿದ್ದು. ಅದಾದ ಮೇಲೆ ೧೯೯೪ ರಲ್ಲಿ ಹೋಗಿದ್ದು ಉರಿ ಬಿಸಿಲಿನಲ್ಲಿ ರಣ ಖಾರ ತಿಂದು, ಖಡಕ್ ಚಹಾ ಕುಡಿದು, ಒರಟು ಮಾತನಾಡುವ ಕಲಬುರ್ಗಿಗೆ. ಆದರೆ ಮುಸ್ಸಂಜೆಯಲ್ಲಿ ಆ ಜನ ಇಷ್ಟ ಪಡುತ್ತಿದ್ದ ಕಿಶೋರ್ ಕುಮಾರ್, ಮೊಹಮ್ಮದ್ ರಫಿ ಹಾಡುಗಳು ಕೂಡ ಅಷ್ಟೇ ತಂಪು. ಹಾಗೆಯೆ ಅಲ್ಲಿಯ ಗುರುದತ್ ಖಾನಾವಳಿ ಊಟ ಬೇರೆ ಯಾವುದರ ಜೊತೆಗೂ ಹೋಲಿಕೆ ಮಾಡುವುದು ಅಸಾಧ್ಯ. ನಂತರ ೧೯೯೯ ರಲ್ಲಿ ಆರು ತಿಂಗಳು ಹುಬ್ಬಳ್ಳಿಯಲ್ಲಿ ತರೆಬೇತಿಗೆಂದು ೧,೫೦೦ ರೂಪಾಯಿ ಸ್ಟೈಪೆಂಡ್ ಪಡೆದು ಅಷ್ಟರಲ್ಲಿ ಜೀವನ ಸಾಗಿಸಿ (ಸ್ವಲ್ಪ ಉಳಿಸಿ ಕೂಡ) ಆ ಊರಿನ ಸವಿ ಸವಿದದ್ದಾಯಿತು.


ಓದುವುದು ಮುಗಿದ ಮೇಲೆ ಹೆಚ್ಚು ಸ್ನೇಹಿತರಿದ್ದ ದೂರದ ಪುಣೆಗೆ ನೌಕರಿ ಹುಡುಕಿಕೊಂಡು ಹೋಗಿದ್ದೆ. ಆದರೆ ಮೊದಲ ಇಂಟರ್ವ್ಯೂ ಬಂದಿದ್ದು ಬೆಂಗಳೂರಿನಲ್ಲಿ. ಸಿಕ್ಕಿದ್ದು ಪೂರ್ತಿ ೨,೫೦೦ ರೂಪಾಯಿ ಸಂಬಳದ ನೌಕರಿ. ಮನೆಯಲ್ಲಿ ಮತ್ತೆ ದುಡ್ಡು ಕೇಳುವುದಿಲ್ಲ ಎನ್ನುವ ಧೃಢ ನಿರ್ಧಾರ ಮಾಡಿದ್ದ ನನಗೆ ಅಷ್ಟು ಸಾಕಾಗಿತ್ತು. ಅದೇ ಊರಿನಲ್ಲಿ ನೌಕರಿಗಳು ಬದಲಾದವು. ಆದರೆ ಅಲ್ಲಿಂದ ಇಲ್ಲಿಯವರೆಗೆ ದುಡಿಯುವ ಅವಕಾಶ ನೀಡಿದ್ದು ಬೆಂಗಳೂರೇ. ಬೆಂಗಳೂರು ಎನ್ನುವ ಊರಿಗೆ, ನನಗೆ ನೌಕರಿ ಕೊಟ್ಟಿರುವ ಕಂಪನಿ ಗೆ ಮತ್ತು ಕೇಳಿದಾಗಲೆಲ್ಲ ಸಾಲ ಕೊಡುವ HDFC ಬ್ಯಾಂಕ್ ಗೆ ನಾನು ಚಿರ ಋಣಿ.


ನೆಲೆ ಸಿಕ್ಕಿದ್ದು ಬೆಂಗಳೂರಿನಲ್ಲಿ ಆದರೂ, ನನಗೆ ತಿರುಗುವ ಹುಚ್ಚು. ಮಾರುತಿ-೮೦೦ ಕಾರಲ್ಲಿಗೆಳೆಯರ ಜೊತೆ ಬಂಡೀಪುರ ಪ್ರವಾಸ ಮಾಡಿದ್ದೆ. ಕರ್ನಾಟಕ ಅಷ್ಟೇ ಅಲ್ಲ, ಭಾರತದ ಮೂಲೆ ಮೂಲೆ ನೋಡಿ, ಅರಿಯುವ ಹವ್ಯಾಸ ನನ್ನದು. ಮತ್ತು ಕೆಲಸದ ನಿಮಿತ್ತ ವಿದೇಶಗಳಿಗೆ ಹೋಗುವ ಅವಕಾಶ ಬೇರೆ. ಮೊದಲಿಗೆ ಹೋಗಿದ್ದು ಚಳಿಗಾಲದಲ್ಲಿ ರಸ್ತೆ ಮೇಲೆ ಹಿಮ ಸುರಿದು ನನ್ನನ್ನು ಕಂಗಾಲು ಮಾಡುತ್ತಿದ್ದ ಈರಿ ಎನ್ನುವ ಅಮೇರಿಕಾದಲ್ಲಿರುವ ಒಂದು ಚಿಕ್ಕ ಪಟ್ಟಣಕ್ಕೆ. ನಂತರ ಇಟಲಿ ದೇಶದ ಫ್ಲಾರೆನ್ಸ್ ನಗರದಲ್ಲಿ ಎರಡು ತಿಂಗಳುಗಳ ಕಾಲ ಇದ್ದೆ. ಆಮೇಲೆ ಅಮೇರಿಕಾ ದೇಶದ ಸಾಂಟಾ ಕ್ಲಾರಾ ಎನ್ನುವ ಪಟ್ಟಣದಲ್ಲಿ ತಿಂಗಳುಗಟ್ಟಲೆ ಇರುವ ಅವಶ್ಯಕತೆ ನನ್ನ ನೌಕರಿಗಿತ್ತು. ಸಿಂಗಾಪುರ್ ದೇಶದ ಆರಾಮದಾಯಕತೆ, ತೈವಾನ್ ದೇಶದಲ್ಲಿ ಸಸ್ಯಾಹಾರಿ ಊಟ ಸಿಗದೇ ಬರಿ ಸೇಬು ಹಣ್ಣು ತಿಂದು ಬದುಕಿದ್ದು ಕೂಡ ನನ್ನ ಅನುಭವದ ಒಂದು ಭಾಗ.


"ಬದುಕು ಕರೆದೊಯ್ದ ಕಡೆ ಹೋದೆ ನಾನು" ಎಂದು ನಾನು ಈಗ ಹಾಡಬಹುದು. ಆದರೆ ಅದಕ್ಕೆ ಸಹಾಯವಾಗಿದ್ದು ಚಿಕ್ಕಂದಿನಲ್ಲಿ ನೋಡಿದ್ದ "ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು" ಎನ್ನುವ ಗೀತೆ. ಬದುಕು ನಡೆಸಿದ ಊರುಗಳೆಲ್ಲ ನಮ್ಮವೇ ಎನ್ನುವ ಭಾವ ನನ್ನದು. ಮತ್ತೆ ಕಲಬುರ್ಗಿಗೆ ಅಥವಾ ಹುಬ್ಬಳಿಗೆ ಹೋಗಿ ಜೀವನ ನಡೆಸುವ ಅವಶ್ಯಕತೆ ಬಂದರೆ ಎರಡನೆಯ ವಿಚಾರ ಮಾಡದೇ ಹೊರಟು ಬಿಡುತ್ತೇನೆ. ಆದರೆ ದುಡಿಯುವ ಅವಶ್ಯಕತೆ ಕೊನೆಯಾಗುತ್ತ ಬಂದಿದೆ. ಅದು ಸಾಧ್ಯವಾಗಿದ್ದು ಇಪ್ಪತ್ತು ವರುಷ ದುಡಿದು ಉಳಿಸಿದ ಹಣದಿಂದ. ಹಾಗಾಗಿ ಮತ್ತೆ ಹುಟ್ಟೂರಿಗೆ ಇಂದಲ್ಲ ನಾಳೆ ಮರಳುವ ಇರಾದೆ ನನ್ನದು. ಅಲ್ಲಿ ನನ್ನ ಬಾಲ್ಯ ಸ್ನೇಹಿತರಿದ್ದಾರೆ. ಓದಿದ ಶಾಲೆ ಇದೆ. ನಡೆದುಕೊಂಡ ದೇವಸ್ಥಾನಗಳು ಇವೆ. ಅಲ್ಲಿ ನಾನು ಪರಕೀಯ ಎನ್ನುವ ಭಾವನೆ ಬೇಕಿಲ್ಲ. 


ಆದರೆ ಯಾವ ಊರಲ್ಲೂ ನನಗೆ ನಾನು ಪರಕೀಯ ಎನ್ನುವ ಭಾವನೆ ಮೂಡಿಲ್ಲ. ಏಕೆಂದರೆ ನಾನು ಅವರಲ್ಲಿ ಒಬ್ಬವನಾಗಿ ಹೋಗಿದ್ದೆ. ಹಿಮಾಲಯ ಪ್ರವಾಸ ಹೋದಾಗ ಮೂರು ಹೊತ್ತು ಆಲೂ ಪರೋಟ ತಿಂದು ಜೀವನ ಕಳೆದಿದ್ದೇನೆ, ಸಂತೋಷವಾಗಿಯೇ! ಹಾಗೆಯೆ ಕೆಲವು ತಿಂಗಳುಗಳ ಹಿಂದೆ ಕುಟುಂಬದ ಜೊತೆ ಪ್ರವಾಸ ಹೋದಾಗ, ಎಲ್ಲ ಊರುಗಳು ಕೂಡ ನಮ್ಮೂರೇ ಅನಿಸುತಿತ್ತು. ಹೆಂಡತಿ ಒಪ್ಪಿದ್ದರೆ ರಿಷಿಕೇಶ ದಲ್ಲಿ ಅಥವಾ ನೈನಿತಾಲ್ ನಲ್ಲಿ ದೀರ್ಘ ಕಾಲ ಕಳೆಯಲು ನನಗೆ ಯಾವ ಯಾವ ಅಭ್ಯಂತರವೂ ಇರಲಿಲ್ಲ.


ನನ್ನ ಮಟ್ಟಿಗೆ ಯಾವ ಊರು ಹೆಚ್ಚಲ್ಲ, ಕಡಿಮೆ ಕೂಡ ಅಲ್ಲ. ಅಲ್ಲಿ ನಮಗೆ ಜೀವನ ಅವಕಾಶ ಇದ್ದರೆ, ಕೆಲವು ಗೆಳೆಯರು ಸಿಕ್ಕರೆ ಅದೇ ನಮ್ಮೂರು. ಅದೇ ಅಲ್ಲವೇ ಶಂಕರ್ ನಾಗ್ ಚಿತ್ರದಲ್ಲಿ ಹಾಡಿದ್ದು.


"ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು

ಯಾರು ಸ್ನೇಹದಿ ಬರುವರೋ ಅವರೇ ನಮ್ಮೋರು"





No comments:

Post a Comment