Tuesday, December 15, 2020

ಹಿಮಾಲಯ: ಅದರ ಪಾಡಿಗೆ ಅದನ್ನು ಬಿಟ್ಟಷ್ಟು ವಾಸಿ

ಕಳೆದ ದಶಕದಲ್ಲಿ ಆದ ಪ್ರಕೃತಿ ವಿಕೋಪಗಳಲ್ಲಿ, ಹಿಮಾಲಯ ವಲಯದಲ್ಲಿನ ಕೇದಾರನಾಥ ಮತ್ತು ನೇಪಾಳದಲ್ಲಿ ಆದ ಭೂಕಂಪ, ಭೂಕುಸಿತ, ನೆರೆ ಹಾವಳಿ ಮಾಡಿದ ನಷ್ಟ ಅಪಾರ. ಅಪಾಯಕಾರಿ ಮಟ್ಟದ ಭೂಕಂಪಗಳು ಇಲ್ಲಿ ಆಗುತ್ತಲೇ ಇವೆ. ೧೯೫೦ ರಲ್ಲಿ ಆದ ಭೂಕಂಪ, ಟಿಬೆಟ್ ಮತ್ತು ಅಸ್ಸಾಂ ಪ್ರದೇಶಗಳಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿತ್ತು. ೨೦೧೩ ರಲ್ಲಿ ಕೇದಾರನಾಥ ಪ್ರದೇಶದಲ್ಲಿ ಆದ ಭೂಕುಸಿತ ಮತ್ತು ನೆರೆಯಿಂದ ಸತ್ತಿದ್ದು ಐದು ಸಾವಿರಕ್ಕೂ ಹೆಚ್ಚಿನ ಜನ. ಅಸ್ತಿ ಹಾನಿಯೇನು ಕಡಿಮೆ ಎನ್ನುವ ಹಾಗಿಲ್ಲ.

 

ಇದು ಅನೀರಿಕ್ಷಿತವಾಗಿ ಆದ ಪ್ರಕೃತಿ ವಿಕೋಪ ಎಂದು ಮೇಲ್ನೋಟಕ್ಕೆ ಎನ್ನಿಸಿದರೂ ವಿವರಗಳನ್ನು ಗಮನಿಸುತ್ತಾ ಹೋದಂತೆ ಮನುಷ್ಯನಿಂದ ಉಂಟಾದ ಅಸಮತೋಲನಗಳನ್ನು ಕಡೆಗಣಿಸುವಂತಿಲ್ಲ. ಹಿಮಾಲಯ ಒಂದು ಸೂಕ್ಷ್ಮವಾದ ಪರಿಸರ ಮತ್ತು ಭೂಕಂಪ ಪೀಡಿತ ಪ್ರದೇಶ. ಇಲ್ಲಿರುವುದು ದಕ್ಷಿಣ ಭಾರತದಲ್ಲಿನ ಬೆಟ್ಟಗಳ ಹಾಗೆ ಗಟ್ಟಿ ನಿಲ್ಲುವ ಕಲ್ಲು ಗುಡ್ಡಗಳಲ್ಲ. ಬದಲಿಗೆ ಕಲ್ಲು ಮಣ್ಣುಗಳ ರಾಶಿ  ಮಾಡಿ ಒಂದರ ಮೇಲೆ ಒಂದರಂತೆ ಪೇರಿಸಿದ ಮೆದು ಮಣ್ಣಿನ ಶ್ರೇಣಿ. ಇಲ್ಲಿ ಹೆಚ್ಚಿಗೆ ಮಳೆ ಆದರೆ, ಬೆಟ್ಟದ ಮಣ್ಣು ಕರಗಿ, ಅಲ್ಲಿನ ಕಲ್ಲುಗಳು ಉರುಳಲಾರಂಭಿಸುತ್ತವೆ. ಭಾರತದಲ್ಲೇ ಎತ್ತರದ ಪ್ರದೇಶ ಇದಾಗಿರುವರಿಂದ, ಮಾನ್ಸೂನ್ ಮೋಡಗಳು ಅರಬ್ಬೀ ಸಮುದ್ರದಲ್ಲಿ ಹುಟ್ಟಿ ಈಶಾನ್ಯ ದಿಕ್ಕಿಗೆ ಚಲಿಸಿ, ಮಳೆಯಾಗದೆ ಹಾಗೆ ಉಳಿದ ಮೋಡಗಳು ಇಲ್ಲಿ ಜಮಾವಣೆಗೊಂಡು ಹೆಚ್ಚಿನ ಮಳೆ ಸುರಿಸುತ್ತವೆ. ಇಲ್ಲವೇ ಘರ್ಷಣೆ ಹೆಚ್ಚಾದರೆ ಸ್ಪೋಟಗೊಳ್ಳುತ್ತವೆ. ನಾನು ಹಿಮಾಲಯ ಪ್ರವಾಸ ಹೋದಾಗ, ಮೇಘ ಸ್ಪೋಟವಾಗಿ (Cloud Burst), ಭೂಕುಸಿತದಿಂದ ರಸ್ತೆ ಮುಚ್ಚಿ ಹೋಗಿ ದಾರಿಯಲ್ಲೇ ಇಡೀ ದಿನ ಸಿಕ್ಕು ಹಾಕಿಕೊಂಡು, ಹತ್ತಿರದ ಹಳ್ಳಿಯಲ್ಲಿ ಮಲಗಿ ಮರು ದಿನ ರಸ್ತೆ ಉಪಯೋಗ ಮಾಡುವಂತಾದಾಗ ಮುಂದೆ ಸಾಗಿದ್ದು ನೆನಪಿದೆ.

ನನ್ನ ಯಮುನೋತ್ರಿ ಪ್ರವಾಸದ ಮಾರ್ಗಮಧ್ಯದಲ್ಲಿ ಭೂಕುಸಿತದಿಂದ ರಸ್ತೆ ಮುಚ್ಚಿ ಹೋಗಿರುವುದು


ತರಹದ ಪ್ರದೇಶದಲ್ಲಿ ಆಣೆಕಟ್ಟು ಕಟ್ಟುವುದು ಹಿಮಾಲಯದ ರಚನೆಯ ಮೇಲೆ ಪರಿಣಾಮ ಬೀರುತ್ತದೆ. ನೈಸರ್ಗಿಕ ವಿಕೋಪಗಳು ಅಣೆಕಟ್ಟನ್ನು ಒಡೆದು ಹಾಕದಿದ್ದರೂ ಅದು ಸುರಕ್ಷಿತವಾಗಿ ಕೆಲಸ ಮಾಡುವ ಅವಧಿಯನ್ನು ಗಣನೀಯವಾಗಿ ತಗ್ಗಿಸುತ್ತವೆ. ಮತ್ತು ಭೂಕುಸಿತಗಳು ಆಣೆಕಟ್ಟು ಹಿಡಿದಿಡುವ ನೀರಿನ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಅಲ್ಲದೆ ಹಿಮಾಲಯದಲ್ಲಿ ನಾವು ಕಟ್ಟುವ ರಸ್ತೆಗಳು ಮತ್ತು ಅದಕ್ಕಾಗಿ ಮರಗಳನ್ನು ಕಡಿಯುವುದು, ಬೆಟ್ಟ ಪ್ರದೇಶದಲ್ಲಿ ಅಸಮತೋಲನ ಉಂಟು ಮಾಡಿ ಭೂಕುಸಿತದ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಹಿಮಾಲಯವನ್ನು ಒಂದು ಸಂರಕ್ಷಿತ ಪ್ರದೇಶವೆಂದು ಘೋಷಿಸುವುದು ಕ್ಷೇಮಕರ ಎನ್ನುತ್ತಾರೆ ಪರಿಸರ ತಜ್ಞ ಮತ್ತು ಹಿಮಾಲಯವನ್ನು ದಶಕಗಳ ಕಾಲ ಅಭ್ಯಸಿಸಿದ ಮಹಾರಾಜ ಪಂಡಿತ್. (ಲಿಂಕ್: https://www.nature.com/articles/d41586-020-01809-4 )

 

ಪೈಪೋಟಿಗೆ ಬಿದ್ದ ಭಾರತ ಮತ್ತು ಚೀನಾ ದೇಶಗಳು ಪ್ರದೇಶದಲ್ಲಿ ತಮ್ಮ ಬಲ ತೋರಿಸುಕೊಳ್ಳುವ ಕಾದಾಟ ಮತ್ತು ಇಲ್ಲಿಯ ಸಂಪನ್ಮೂಲಗಳನ್ನು ಉಪಯೋಗಿಸುವ ಉದ್ದೇಶದಿಂದ ರಸ್ತೆ, ಅಣೆಕಟ್ಟುಗಳ ನಿರ್ಮಾಣ ಕಾರ್ಯಗಳನ್ನು ಮುಂದುವರೆಸಿವೆ. ಹಾಗೆಯೆ ಮನುಷ್ಯ ವಾಸವು ಹಿಂದಿಗಿಂತ ಹೆಚ್ಚಿಗೆ ಪ್ರದೇಶಗಳಲ್ಲಿ ಕಾಣುತ್ತಿದೆ. ಆದರೆ ಪ್ರಕೃತಿ ಶಕ್ತಿಯ ಮುಂದೆ ಮನುಷ್ಯ ಶಕ್ತಿ ಯಾವ ಲೆಕ್ಕದ್ದು? ಹಿಮಾಲಯವನ್ನು ಅದರ ಪಾಡಿಗೆ ಬಿಡದ ಮನುಜ ಮುಂದೆ ಒಂದು ದಿನ ಭಾರಿ ಬೆಲೆ ತೆತ್ತಬೇಕಾಗಬಹುದು.

 

(ಚಿತ್ರ: ನನ್ನ ಯಮುನೋತ್ರಿ ಪ್ರವಾಸದ ಮಾರ್ಗಮಧ್ಯದಲ್ಲಿ ಭೂಕುಸಿತದಿಂದ ರಸ್ತೆ ಮುಚ್ಚಿ ಹೋಗಿರುವುದು)

ವಾಯು ಮಾಲಿನ್ಯ: ಸಹನೀಯವಾಗಿಸುವುದು ಹೇಗೆ?

ಕಳೆದ ದಶಕದಲ್ಲಿ ವಾಯು ಮಾಲಿನ್ಯದ ಬಗ್ಗೆ ವಿಚಾರವೇ ಮಾಡದ ನಾವುಗಳು ಇಂದು ಅದರ ಬಗ್ಗೆ ಚಿಂತಿಸುವ ಕಾಲ ಬಂದಿದೆ. ದೇಶದ್ಯಾಂತ ಸ್ಥಾಪಿಸಲಾಗಿರುವ ನೂರಾರು ಸಂವೇದಕಗಳ (Sensor) ಸಹಾಯದಿಂದ ಇಂದು ನಾವು ನಾವು ಉಸಿರಾಡುವ ಗುಣ ಮಟ್ಟದ ಬಗ್ಗೆ ತಿಳಿದುಕೊಳ್ಳಬಹುದು. ಕೆಲವು ಕಡೆ ಉತ್ತಮ ಎಂದೆನಿಸಿದರೆ, ಇನ್ನು ಕೆಲವು ಕಡೆ ಅಪಾಯಕಾರಿ ಎನ್ನುವ ಮಟ್ಟಕ್ಕೆ ವಾಯು ಮಾಲಿನ್ಯವಿದೆ.

 

ಸರಕಾರವಾಗಲಿ, ಜನತೆಯಾಗಲಿ ಇದರ ಕಡೆಗೆ ಗಮನ ಹರಿಸಿಲ್ಲ ಎಂದೇನಿಲ್ಲ.  BS -IV ವಾಹನಗಳಿಂದ BS -VI ಕಡೆಗೆ ಸಾಗಿದ್ದು ಮಾಲಿನ್ಯದ ಮಟ್ಟ ಕಡಿಮೆ ಮಾಡಲು. ಕಲ್ಲಿದ್ದಲ್ಲಿಂದ ಉತ್ಪಾದಿಸುವ ವಿದ್ಯುತ್ ಗೆ ಒತ್ತು ನೀಡದೆ ಗಾಳಿ ಯಂತ್ರ (Wind Power) ಮತ್ತು ಸೌರ ಫಲಕ (Solar Panel) ಗಳಿಂದ ವಿದ್ಯುತ್ ಉತ್ಪಾದನೆಯೆಡೆಗೆ ಸಾಗುತ್ತಿರುವುದು ಇದೇ ಉದ್ದೇಶ. ಗ್ರಾಮೀಣ ಪ್ರದೇಶಗಳಲ್ಲಿ ಅಡಿಗೆಗೆ ಉರುವಲು ಕಟ್ಟಿಗೆ ಬದಲು, LPG ಉಪಯೋಗಿಸುತ್ತಿರುವುದು ಒಳ್ಳೆಯ ಬೆಳವಣಿಗೆಯೇ. ಇದೆಲ್ಲ ಇದ್ದರೂ, ಕೆಲವು ಕಾರ್ಖಾನೆ ಮತ್ತು ಉದ್ದಿಮೆಗಳು ಅಪಾಯಕಾರಿ ಮಟ್ಟದಲ್ಲಿ ಹೊಗೆ ಉಗುಳುವುದು ನಿಂತಿಲ್ಲ. ಯೂರೋಪ್ ದೇಶಗಳಲ್ಲಿ ಅವುಗಳನ್ನು ಆಕಾಶದಲ್ಲಿರುವ ಉಪಗ್ರಹಗಳ ಮೂಲಕ ಪತ್ತೆ ಹಚ್ಚಿ ದಂಡ ವಿಧಿಸುತ್ತಾರೆ. ನಮ್ಮ ಉಪಗ್ರಹಗಳು ಆ ಕೆಲಸ ಮಾಡಲಾರವು ಎಂದಲ್ಲ. ಆದರೆ ಆ ಕಾರ್ಖಾನೆಗಳು ರಾಜಕೀಯ ಧುರೀಣರದ್ದೋ, ಅವರ ಸಂಬಂಧಿಗಳದ್ದೋ ಆಗಿದ್ದರೆ ಅದು ಉಂಟು ಮಾಡುವ ರಾಜಕೀಯ ತೊಡಕು ವಾಯು ಮಾಲಿನ್ಯವನ್ನು ಮುಂದುವರೆಸುತ್ತವೆ.

 

ಮಾಲಿನ್ಯ ತಗ್ಗಿಸುವ ತಂತ್ರಜ್ಞಾನದ (Abatement Technology ) ಉಪಯೋಗ ಮತ್ತು ಅವುಗಳ ನಿರಂತರ ನವೀಕರಣದಿಂದ ಉದ್ದಿಮೆಗಳಿಂದ ಆಗುವ ಮಾಲಿನ್ಯದ ಪ್ರಮಾಣವನ್ನು ಸಾಕಷ್ಟು ಮಟ್ಟಿಗೆ ತಗ್ಗಿಸಲು ಸಾಧ್ಯ. ಅವುಗಳಿಗೆ ಆಗುವ ಹೆಚ್ಚಿನ ಖರ್ಚು ವೆಚ್ಚಗಳಿಗೆ ಹೋಲಿಸಿದರೆ ಅದರಿಂದ ಆಗುವ ಪರೋಕ್ಷ ಲಾಭವೇ ಹೆಚ್ಚಿನದಾಗಿದೆ. ಮಾಲಿನ್ಯ ಉಂಟು ಮಾಡುವ ಅನಾರೋಗ್ಯ, ವೈದ್ಯಕೀಯದ ಖರ್ಚು ಮತ್ತು ಆಗ ನೌಕರರು ಕೆಲಸ ಮಾಡದೇ ಉಂಟಾಗುವ ಆರ್ಥಿಕ ಪೆಟ್ಟು ಇವುಗಳನ್ನು ಲೆಕ್ಕ ಹಾಕಿದರೆ, ವಾಯು ಮಾಲಿನ್ಯ ಕಡಿಮೆ ಮಾಡುವುದಕ್ಕೆ ಮಾಡುವ ಖರ್ಚು ಹೆಚ್ಚು ಎನ್ನಿಸಲಾರದು.

 

ಕೆಲವು ವರ್ಷಗಳ ಹಿಂದೆ ತಮಿಳುನಾಡಿನ ತಾಮ್ರ ತಯಾರಿಕೆ ಘಟಕವೊಂದು ತಾಜ್ಯ ವಸ್ತುಗಳನ್ನು ಸರಿಯಾಗಿ ಪರಿಷ್ಕರಿಸದೆ ಇದ್ದುದರಿಂದ, ಆ ಭಾಗದ ಜನರಲ್ಲಿ ಕ್ಯಾನ್ಸರ್ ರೋಗ ಜಾಸ್ತಿ ಆಗಿ, ಕೊನೆಗೆ ಆ ಕಾರ್ಖಾನೆಯನ್ನು ಮುಚ್ಚಿದ ಉದಾಹರಣೆ ಉಂಟಲ್ಲ. ಹಾಗೆಯೇ ಸಿಮೆಂಟ್ ಕಾರ್ಖಾನೆಗಳು, ಲೋಹದ ಕುಲುಮೆಗಳು ಪರಿಸರವನ್ನು ಹಾಳು ಮಾಡಿದ್ದಲ್ಲದೆ ತಮ್ಮ ನೌಕರರ ಜೀವನಾವಧಿಯನ್ನೇ ಕಡಿಮೆ ಮಾಡಿಲ್ಲವೇ? ಅದಕ್ಕೆ ಅವರನ್ನು ಜವಾಬ್ದಾರರನ್ನಾಗಿ ಮಾಡಿ, ಸೂಕ್ತ ತಿದ್ದುಪಡಿಗಳು ಆಗುವಂತೆ ಮಾಡುವ ಹೊಣೆ ಸರಕಾರದ್ದು ಎಷ್ಟೋ, ಅಷ್ಟೇ ಜವಾಬ್ದಾರಿ ಜನರದ್ದೂ, ತಾವು ಉಪೇಕ್ಷಿಸದೇ, ಎಚ್ಚತ್ತುಕೊಳ್ಳುವ ಕಡೆಗೆ ಆಗಬೇಕಿದೆ.

 

ಪಟ್ಟಣಗಳಲ್ಲಿ ವಾಯು ಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆ ವಾಹನಗಳಿಂದಲೇ. ವಾಹನ ಓಡಾಟ ತಗ್ಗಿಸಿ ಮೆಟ್ರೋ ತರಹದ ಸಮೂಹ ಸಾರಿಗೆ ಉಪಯೋಗಿಸಿದಷ್ಟು ಒಳ್ಳೆಯದು. ಆದರೆ ಅದರ ವ್ಯವಸ್ಥೆ ಇಲ್ಲದ ಕಡೆಗೆ ಹೇಗೆ? ನೀವು ವಾಸಿಸುವ ಜಾಗ ಬದಲಿಸುವುದು ಸೂಕ್ತವೇ? ಯೋಚಿಸಿ ನೋಡಿ.

 

ನೀವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ, ಈ ಲಿಂಕ್ ನಗರದ ಹಲವು ವಲಯದ ವಾಯು ಗುಣಮಟ್ಟವನ್ನು ತಿಳಿಸಿಕೊಡುತ್ತದೆ. ಮೈಸೂರು ರಸ್ತೆಯ ಬಾಪೂಜಿನಗರ ಭಾಗದಲ್ಲಿ ವಾಯು ಮಾಲಿನ್ಯ ಅನಾರೋಗ್ಯಕರ ಮಟ್ಟದಲ್ಲಿ ಇದೆ ಎಂದು ಅದು ತೋರಿಸುತ್ತಿದೆ.

https://aqicn.org/city/india/bengaluru/bapuji-nagar

Monday, December 14, 2020

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇಪ್ಪತ್ತರ ಹರೆಯ

ಕಳೆದ ತಿಂಗಳಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (International Space Station) ಇಪ್ಪತ್ತು ತುಂಬಿತು. ಮುಂದುವರೆದ ದೇಶಗಳಲ್ಲಿ ಇದು ಸುದ್ದಿ ಮಾಡಿದರೂ, ನಮ್ಮ ದೇಶದ ಮಾಧ್ಯಮಗಳಲ್ಲಿ ಇದು ಚರ್ಚೆಯಾಗಲಿಲ್ಲ. ಅದರಲ್ಲಿ ಭಾರತದ ಕೊಡುಗೆ ಏನು ಇರಲಿಲ್ಲ ಎನ್ನುವುದಕ್ಕೋ ಏನೋ? ನಿಜ, ಅದು ಶ್ರೀಮಂತ ದೇಶಗಳ ಯೋಜನೆ. ನೂರು ಬಿಲಿಯನ್ ಡಾಲರ್ ವೆಚ್ಚದ ಯೋಜನೆಯಲ್ಲಿ ಪಾಲ್ಗೊಳ್ಳಲು ನಮಗೆ ಇಪ್ಪತ್ತು ವರುಷಗಳ ಹಿಂದೆ ಸಾಧ್ಯವಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಸ್ರೋ ಸಂಸ್ಥೆಯ ವಿಜಯಗಳು ಭಾರತಕ್ಕೆ ವಿಶ್ವಾಸ ತುಂಬಿ ನಮ್ಮದೇ ಒಂದು ಬಾಹ್ಯಾಕಾಶ ನಿಲ್ದಾಣ ನಿರ್ಮಿಸಲು ಯೋಜನೆ ಹಾಕಿಕೊಳ್ಳುವಂತಾಗಿದೆ.

 

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮನುಜ ಕುಲದ ವಿಕಾಸ ಮತ್ತು ವಿಜ್ಞಾನದ ಪ್ರಗತಿಯ ಸಂಕೇತ. ಇಪ್ಪತ್ತು ವರ್ಷಗಳಲ್ಲಿ ಮನುಷ್ಯರು ಬಾಹ್ಯಾಕಾಶದಲ್ಲಿ ಸುರಕ್ಷಿತವಾಗಿ ಜೀವಿಸಿ, ಅಲ್ಲಿರುವ ಸವಾಲುಗಳನ್ನು ಎದುರಿಸಿ, ಸಮಸ್ಯೆಯಿಲ್ಲದೆ ಭೂಮಿಗೆ ಮರಳುವುದು ಸಾಧ್ಯ ಎನ್ನುವುದು ಹಲವಾರು ಬಾರಿ ತೋರಿಸಿಕೊಟ್ಟಿದೆ. ತುಂಬಾ ದುಬಾರಿ ಎನ್ನಿಸುವ ಯೋಜನೆ, ಕೃತಕ ಉಪಗ್ರಹಗಳು ಮಾಡುವ ಕೆಲಸಕ್ಕಿಂತ ಹೆಚ್ಚಿನದನ್ನು ಸಾಧ್ಯವಾಗಿಸುತ್ತದೆ. ಇದು ಆಕಾಶದಲ್ಲಿ ಹಾರಾಡುವ ಒಂದು ಪ್ರಯೋಗಾಲಯ. Microgravity ಯಲ್ಲಿ ಮಾತ್ರ ಸಾಧ್ಯವಾಗುವಂತ ಪ್ರೋಟೀನ್ ಗಳನ್ನು ಇದರಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಪ್ರಕೃತಿ ವಿಕೋಪಗಳ ಜಾಡು ಹಿಡಿದು ಹೋಗುವುದು ಇದರ ಇನ್ನೊಂದು ಕೆಲಸ. ಭೂಮಿ ಮತ್ತು ಅದರ ಸಮೀಪದ ಆಕಾಶದ ಮೇಲೆ ಸದಾ ಕಣ್ಣಿಟ್ಟು, ಭೂಮಿಯ ಸುತ್ತುವ ಕೇಂದ್ರ ಕಳಿಸುವ ಚಿತ್ರಗಳು ಮತ್ತು ಮಾಹಿತಿ ಅಪಾರ. ಸುಮಾರು ೧೦ ವರುಷಕ್ಕೂ ಹೆಚ್ಚಿನ ಕಾಲ ಆಕಾಶದಲ್ಲಿ ನಿಲ್ದಾಣದ ಜೋಡಣೆಯ ಕಾರ್ಯ ನಡೆಯಿತ್ತಲ್ಲ. ಆಗ ಇದನ್ನು ಕಟ್ಟುವ ಸಲುವಾಗಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನಗಳು ಇಂದು ಮನುಕುಲದ ಕೆಲ ಗಂಭೀರ ಸಮಸ್ಯೆಗಳನ್ನು, ಅದರಲ್ಲೂ ಮುಖ್ಯವಾಗಿ ವೈದ್ಯಕೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯವಾಗಿವೆ. ಹೀಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಆಗಿರುವ ೧೫ ಉಪಯೋಗಗಳ ಪಟ್ಟಿಯನ್ನು ಮಾಡಿದೆ ಅಮೇರಿಕಾದ ನಾಸಾ ಸಂಸ್ಥೆ. (Link: https://www.nasa.gov/mission_pages/station/research/news/15_ways_iss_benefits_earth

ಅಲ್ಲದೆ ಕಳೆದ ವಾರದ ಮುಖ್ಯ ಬೆಳವಣಿಗೆಗಳನ್ನು ಲಿಂಕ್ ಮೂಲಕ ವರದಿ ಮಾಡಿದೆ. Link: https://www.nasa.gov/mission_pages/station/research/news/space-station-science-highlights-07dec20

ಯಮಧರ್ಮ ತೆರೆದು ಹೋದ ಆಧ್ಯಾತ್ಮದ ಬಾಗಿಲು

ಸುಮಾರು ಎರಡು ವರ್ಷದ ಹಿಂದಿನ ಸಮಯ. ಆ ದಿನ ಬುದ್ಧ ಪೂರ್ಣಿಮೆ. ಸಾಯಂಕಾಲ ವೇಳೆ ಬೆಂಗಳೂರಿನ ಟ್ರಾಫಿಕ್ ನಲ್ಲಿ ಕಾರು ಓಡಿಸುತ್ತಿದ್ದ ನನಗೆ ಒಂದಾದರ ಮೇಲೆ ಒಂದರಂತೆ ಫೋನ್ ಕರೆಗಳು ಬರತೊಡಗಿದ್ದವು. ಎಲ್ಲವುಗಳ ಸಂದೇಶವೂ ಒಂದೇ. ನನ್ನ ತಾಯಿ ತೀರಿಕೊಂಡಿರುವುದಾಗಿ, ಕೂಡಲೇ ಹೊರಟು ಬರಬೇಕೆಂದು ಮನೆಯವರು, ಬಂಧುಗಳು, ಸ್ನೇಹಿತರು ತಿಳಿಸುತ್ತಲೆ ಇದ್ದರು. ಆಘಾತ, ಆತಂಕ ಎನ್ನಿಸಿದರೂ ಸಾವರಿಸಿಕೊಂಡು, ಕಾರನ್ನು ಬಂಧುವೊಬ್ಬರ ಕೈಗೆ ಒಪ್ಪಿಸಿ, ಸೀದಾ ಮೆಜೆಸ್ಟಿಕ್ ಗೆ ಬಂದು ನನ್ನ ಊರಾದ ಮಸ್ಕಿ ಗೆ ಹೋಗುವ ಬಸ್ಸನ್ನು ಏರಿದೆ.


ಬೆಳಿಗ್ಗೆ ಊರಿಗೆ ಬಂದು ಸೇರುವಷ್ಟರಲ್ಲಿ, ಮನೆಯಲ್ಲಿ ತಾಯಿಯ ಅಂತಿಮ ದರ್ಶನದ ವ್ಯವಸ್ಥೆ ಮತ್ತು ಅಂತ್ಯ ಸಂಸ್ಕಾರಕ್ಕೆ ಆಗಬೇಕಾದ ಏರ್ಪಾಡುಗಳು ಆಗುತ್ತಿದ್ದವು. ಲಿಂಗಾಯತ ಸಮಾಜ ಮಾಡುವ  ವ್ಯವಸ್ಥಿತ ಏರ್ಪಾಡು ಮತ್ತು ಊರಿನ ಎಲ್ಲ ಧರ್ಮದ ಜನರ ಸಹಕಾರವನ್ನು ಕಂಡು ನನಗೆ ಈ ಊರಲ್ಲಿ ಪ್ರಾಣ ಬಿಡುವುದಕ್ಕೂ ಪುಣ್ಯ ಇರಬೇಕು ಎನ್ನಿಸತೊಡಗಿತ್ತು. ಅಲ್ಲಿಯವರೆಗೆ ಸಾಕಷ್ಟು ಅಂತ್ಯ ಸಂಸ್ಕಾರಗಳಲ್ಲಿ ಭಾಗವಹಿಸಿದ್ದರೂ, ಅಂದು ಮಾತ್ರ ನನ್ನಲ್ಲಿನ ಒಂದು ಭಾಗವು ಸತ್ತು ಹೋಯಿತೆನ್ನುವ ಭಾವನೆ ಮನೆ ಮಾಡಿತ್ತು. ಏನು ಮಾಡುವುದಕ್ಕೂ ತೋಚದಂತಾಗಿತ್ತು.


ಅಂತ್ಯ ಕ್ರಿಯೆ ಮುಗಿದ ರಾತ್ರಿ, ಮಾಡಲು ಇನ್ನೇನು ಕೆಲಸ ಇಲ್ಲ ಎಂದಾಗ ನೆನಪು ಮಾಡಿಕೊಂಡೆ. ಕೊನೆಯ ಬಾರಿ ಮಾತನಾಡಿದಾಗ ತನಗೆ ಕೆಮ್ಮು ಬಂದಿದ್ದು ಆದರೆ ಅದು ಕಡಿಮೆಯಾಗುತ್ತಿರುವುದಾಗಿ ನನ್ನ ತಾಯಿ ತಿಳಿಸಿದ್ದಳು. ಊರಿಗೆ ಯಾವಾಗ ಬರುತ್ತೀಯ ಎಂದು ಕೇಳಿದ್ದಳು. ಬರುವಷ್ಟರಲ್ಲಿ ಅವಳೇ ಇರಲಿಲ್ಲ. ವಾಂತಿ ಬರುತ್ತಿದೆ ಎಂದು ಮನೆಯ ಹೊರಗಡೆ ಹೋದ ಅವಳು ಹಾಗೆ ಉರುಳಿ ಬಿದ್ದಿದ್ದಳು. ಅವಳಿಗೆ ಕೊನೆಯ ಕ್ಷಣದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆದೊಯ್ದ ನಮ್ಮ ನೆರೆ ಮನೆಯಲ್ಲಿರುವ ಡಾಕ್ಟರ್ ತಿಳಿಸಿದ್ದು, ಅಮ್ಮ ಯಾವುದೇ ಚಿಕಿತ್ಸೆಗೆ ಅವಕಾಶ ನೀಡಲಿಲ್ಲ ಎಂದು. ಅವಳಿಗೆ ಯಾರ ಜೊತೆಗೂ ಕೊನೆಯ ಮಾತು ಆಡುವ ಅವಕಾಶ ನೀಡದೆ ಯಮಧರ್ಮ ಹಟಾತ್ತನೆ ಕರೆದೊಯ್ದಿದ್ದ. ಅಂದು ರಾತ್ರಿ ಎಷ್ಟು ಹೊತ್ತಾದರೂ, ಕಣ್ಣು ಕೆಂಪಾಗಿ, ಮೈ ಬಿಸಿಯೇರಿದರೂ  ನನಗೆ ನಿದ್ದೆ ಮಾತ್ರ ಬಾರದು. ನನ್ನ ಮೊಬೈಲ್ ನಲ್ಲಿ ಹಾಕಿಕೊಂಡ ವಿಡಿಯೋನಲ್ಲಿ ಸದ್ಗುರು ಹೇಳುತ್ತಿದ್ದ "ಸಾವು ಸಹಜ ಕ್ರಿಯೆ. ಆದರೆ ಅದು ಬರುವ ಮುಂಚೆಯೇ ನಾವು ಅದನ್ನು ಸ್ವಾಗತಿಸಲು ತಯಾರಿ ಮಾಡಿಕೊಳ್ಳಬೇಕು." ಮಂಕು ಬಡಿದಂತೆ ಎರಡು ದಿನ ಕಳೆದ ನಾನು ಹಿತವಿಲ್ಲದಿದ್ದರೂ ಮತ್ತೆ ಲೌಕಿಕ ಜೀವನಕ್ಕೆ ಸ್ವಲ್ಪ ಅಸಹಜ ಎನ್ನುವ ರೀತಿಯಲ್ಲೇ ಮರಳಿದೆ.


ಬೇರೆಯ ಸಮಸ್ಯೆಗಳು ನನ್ನನ್ನು ಅವರಿಸಿದರೂ, ನಡೆದು ಹೋದದ್ದು ಜೀರ್ಣಿಸಿಕೊಳ್ಳಲು ಕೆಲವು ತಿಂಗಳುಗಳೇ ಬೇಕಾದವು. ಆದರೆ ಆ ಸಮಯದಲ್ಲಿ ನನ್ನ ವಿಚಾರಗಳು ಬದಲಾಗತೊಡಗಿದವು. ದುಡ್ಡು, ಅಸ್ತಿ, ಮರ್ಯಾದೆ ಸಂಪಾದಿಸುವುದಕ್ಕಿಂತ ದ್ವೇಷ, ಗರ್ವ, ಅಹಂ ಗಳನ್ನು ಕಳೆದುಕೊಳ್ಳುವುದೇ ಜೀವನ ಎನ್ನಿಸತೊಡಗಿತು. ಅದುವರೆಗೆ ಓದಿದ ಉಪನಿಷತ್ತುಗಳೆಲ್ಲ ಸಪ್ಪೆ ಎನ್ನಿಸತೊಡಗಿದವು. ಹಿಮಾಲಯದ ಗುಡಿಗಳಿಗೆ ಹೋಗದಿದ್ದರೂ, ಗಂಗೆಯ ಮಡಿಲು ಸೇರದಿದ್ದರು ಜೀವನಕ್ಕೆ ಮುಕ್ತಿ ಎನ್ನುವುದು ಎಲ್ಲರಿಗೂ ಸಾಧ್ಯ ಎನ್ನುವ ನಂಬಿಕೆ ಬಲವಾಗತೊಡಗಿತು. 'ಎಲ್ಲೋ ಹುಡುಕಿದೆ ಇಲ್ಲದ ದೇವರ' ಎಂದು ಬರೆದಿದ್ದು ಶಿವರುದ್ರಪ್ಪನವರೇ ಆದರೂ, ಅದು ನನ್ನ ಹಾಗೆ ನೂರಾರು, ಸಾವಿರಾರು ಜನರ ಎದೆಯಾಳದ ಧ್ವನಿ ಎನ್ನಿಸತೊಡಗಿತು. ಮಾತಿಗಿಂತ ಮೌನ ಶ್ರೇಷ್ಟ ಎಂದು ಹೇಳಿದ್ದು ಓಶೋ ಮಹಾಗುರು. ಅದುವರೆಗೆ ಧ್ಯಾನ ಎಂದರೆ ಏನು ಎಂದು ಗೊತ್ತಿರದಿದ್ದ ನನಗೆ, ಯಾವುದೇ ಚಿತ್ತ ವಿಕಾರಗಳಿಲ್ಲದೆ ಸುಮ್ಮನೆ ಕುಳಿಕೊಳ್ಳುವುದು ಸಾಧ್ಯವಾಗತೊಡಗಿತು. ಭಾವನೆಗಳೆಲ್ಲ ಕರಗಿ ಸ್ಪಷ್ಟತೆ ಮೂಡಲಾರಂಭಿಸಿತು.


ನನ್ನ ಸುಪ್ತ ಮನಸ್ಸು ತಿಳಿದುಕೊಂಡದ್ದು ನನ್ನ ಅರಿವಿಗೆ ಬರಲು ಇನ್ನು ಹೆಚ್ಚಿನ ಸಮಯ ತಗುಲಿತು. ನನಗೆ ಇಂದು ಭಾವನೆಗಳೆಲ್ಲ ತಹಬದಿಗೆ ಬಂದ ಮೇಲೆ ಅನಿಸುವುದು ಏನೆಂದರೆ, ಅವಸರದಲ್ಲಿ ನನ್ನ ತಾಯಿಯನ್ನು ಕರೆದೊಯ್ದ ಯಮಧರ್ಮ, ನನ್ನನ್ನು ಮುಂದೊಂದು ದಿನ ಕರೆದೊಯ್ಯಲು ಬರುವುದಾಗಿ ಖಡಕ್ಕಾಗಿ ಎಚ್ಚರಿಸಿ ಹೋಗಿದ್ದ. ಆದರೆ ಅಲ್ಲಿಯವರೆಗೆ ನಿನಗೆ ತಿಳಿದಿದ್ದು, ಸಾಧ್ಯವಾಗಿದ್ದು  ಮಾಡಿಕೋ ಎನ್ನುವಂತೆ, ನನಗೆ ಆಧ್ಯಾತ್ಮದ ಬಾಗಿಲು ತೆರೆದು ಹೋಗಿದ್ದ. ಯಮನಿಗೆ ಯಾವುದಾದರೂ ಧರ್ಮ ಇದ್ದರೆ ಅದು ಇದೇ ಏನೋ ಎನ್ನುವಂತೆ. ತೆರೆದ ಬಾಗಿಲಿನ ಆಚೆ ಇರುವ ಬುದ್ಧ-ಶಂಕರ-ಬಸವ-ಅಕ್ಕ-ಶರೀಫ-ದಾಸರು ನನ್ನ ಕಾಲದವರಲ್ಲರಾದರೂ, ನನಗೆ ಹೆಚ್ಚು ಆತ್ಮೀಯ ಎನ್ನಿಸತೊಡಗಿದರು. ವೇದ-ಪುರಾಣ-ಗೀತೆಗಳು ಸಪ್ಪೆ ಎನಿಸತೊಡಗಿದವು. ಭಕ್ತಿಯೇ ಪೂಜೆ, ಧರ್ಮವೇ ಪ್ರಸಾದ, ಕರುಣೆಯೇ ತೀರ್ಥ ಎನ್ನುವ ತಿಳುವಳಿಕೆ ಬಂದಿತು. ನಮ್ಮ ಗುಡಿಗಳಲ್ಲಿ ನಡೆಯುವುದು ಅದರ ಅಂಧ ಅನುಕರಣೆ ಮಾತ್ರ ಎನ್ನುವ ಸ್ಪಷ್ಟತೆ ಮೂಡಿತು.


ಅರ್ಥವಿಲ್ಲದ ಜೀವನದಲ್ಲಿ, ಏನು ನಿನ್ನ ಗುರಿ ಎಂದು ಕೇಳಿ ಹೋದ ಯಮ ಮತ್ತೆ ಬರುವಷ್ಟರಲ್ಲಿ ಉತ್ತರ ಹುಡುಕಿಕೊಳ್ಳಬೇಕು. ಆತನ ಮೇಲೆ ನನಗೆ ಯಾವುದೇ ದೂರುಗಳಿಲ್ಲ. ಬದಲಿಗೆ ಜೀವನ ನನಗೆ ಈಗಾಗಲೇ ಕೊಟ್ಟಿರುವ ಸೌಕರ್ಯಗಳಿಗೆ ಋಣಿಯಾಗಿದ್ದೇನೆ. ಅದರಲ್ಲೇ ನನ್ನಿಂದ ಸಾಧ್ಯ ಆಗುವುದರ ಕಡೆಗೆ ಹೆಜ್ಜೆ ಇಟ್ಟಿದ್ದೇನೆ. ಸ್ವಾರ್ಥದಿಂದಾಚೆಗೆ ಇಡುವ ಪುಟ್ಟ ಹೆಜ್ಜೆಗಳು ನನ್ನಲ್ಲಿ ಹೊಸ ಉತ್ಸಾಹ ಮೂಡಿಸಿವೆ. ಅಡಿಗರು ತಮ್ಮ ಕಾವ್ಯದಲ್ಲಿ ಹೇಳಿದ ಹಾಗೆ ದೂರ ತೀರಕೆ ಕರೆಯುವ ಮೋಹನ ಮುರಳಿಯ ಕರೆ ಪ್ರತಿಯೊಬ್ಬರಿಗೆ ಅವರ ಸಮಯ ಬಂದಾಗ ಕೇಳಿಯೇ ಕೇಳಿಸುತ್ತದೆ. ಅದಕ್ಕೆ ಮುಂಚೆ ನಮ್ಮ ಕರ್ಮದ ಹೊರೆ ಕಡಿಮೆ ಮಾಡಿಕೊಳ್ಳುವ ಅವಕಾಶಗಳ ಸದುಪಯೋಗ ಮಾಡಿಕೊಳ್ಳುವುದು ನಮಗೆ  ಬಿಟ್ಟಿದ್ದು. ನಾನು ಆ ದಿಶೆಯಲ್ಲಿ ಈಗಾಗಲೇ ಹೆಜ್ಜೆ ಇಟ್ಟಾಗಿದೆ. ಬದುಕು ಕಳೆದು ಹೋಗುವ ಮುನ್ನವೇ ಬದುಕಬೇಕಲ್ಲವೇ?

Sunday, December 13, 2020

ಮೈಯಲ್ಲಿನ ತೂಕ ಕಡಿಮೆಯಾದಾಗ ಅದು ಹೋಗುವುದು ಎಲ್ಲಿಗೆ?

ಈಗ ಎಲ್ಲರಿಗೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಅಲ್ಲವೇ? ನಿಮ್ಮ ಎತ್ತರಕ್ಕೆ ಅನುಗುಣವಾಗಿ ಇರದೇ ನಿಮ್ಮ ದೇಹದ ತೂಕ ಹೆಚ್ಚಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ ಅಲ್ಲವೇ? ಆಗ ತೂಕ ಹೆಚ್ಚಿದ್ದವರು ಏನೆಲ್ಲಾ ಸಾಹಸ ಮಾಡುತ್ತಾರೆ. ಬೆಳಿಗ್ಗೆ ಇಲ್ಲವೇ ಸಂಜೆ ನಡಿಗೆ, ಲಘು ಓಟ, ಜಿಮ್ ಸೇರಿಕೊಳ್ಳುವುದು, ತಿನ್ನುವ ಆಹಾರದ ಕಡೆಗೆ ಕಾಳಜಿ ವಹಿಸುವುದು,  ಕಡಿಮೆ ಕೊಬ್ಬಿನಂಶ ಇರುವ ಪದಾರ್ಥ ಸೇವಿಸುವುದು ಹೀಗೆ ಎಲ್ಲ ಪ್ರಯತ್ನಗಳು ತೂಕ ಕಡಿಮೆ ಮಾಡಿಕೊಳ್ಳುವುದರ ಕಡೆಗೆ ಸಾಗುತ್ತವೆ. ಅದರ ಪ್ರತಿಫಲ ಎಂಬಂತೆ ತೂಕದ ಯಂತ್ರ ಕಡಿಮೆ ತೂಕ ತೋರಿಸಲು ಶುರು ಮಾಡಿದಾಗ 'ಉಸ್ಸಪ್ಪ' ಎನ್ನುತ್ತಾರೋ ಅಥವಾ ಖುಷಿಯಿಂದ ಇನ್ನು ಹೆಚ್ಚು ನಡಿಗೆ, ಓಟ ಪ್ರಾರಂಭ ಮಾಡುತ್ತಾರೋ ಇಲ್ಲವೇ ಹಳೆಯ ಆಲಸ್ಯಕ್ಕೆ ಶರಣು ಹೋಗುತ್ತಾರೋ ಅವರವರ ಮೇಲೆ ಅವಲಂಬಿತವಾಗಿದೆ. ಆದರೆ ನನಗೆ ಮಾತ್ರ ಪ್ರಶ್ನೆ ಕಾಡಿದ್ದು, ಈ ಮೈಯಲ್ಲಿನ ತೂಕ ಕೊಡುವ ಭೌತಿಕ ವಸ್ತು ದೇಹದಿಂದ ಮರೆಯಾಗಿ ಹೋಗಿದ್ದು ಹೇಗೆ ಎನ್ನುವುದು?


ಅದಕ್ಕೆ ನಾನು ಗೂಗಲ್ ಹುಡುಕಾಟ ಆರಂಭಿಸಿದಾಗ ಕೆಲವು ಕುತೂಹಲ ಎನ್ನಿಸುವ ವಿಷಯಗಳು ಗೊತ್ತಾದವು. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಂಡರಾಯಿತು ಎನ್ನುವ ಉದ್ದೇಶ ಈ ಲೇಖನದ್ದು. ಮೊದಲಿಗೆ ನಾವು ತಿಳಿಕೊಳ್ಳಬೇಕಾದದ್ದು ಕೊಬ್ಬು ಹೇಗೆ ನಮ್ಮ ಮೈ ಸೇರಿತು ಎನ್ನುವುದು, ನಂತರ ಅದು ಕರಗಿ ಹೋಗುವ ಬಗೆಯನ್ನು. 


ನಾವು ದೇಹಕ್ಕೆ ಅಗತ್ಯ ಇರುವದಕ್ಕಿಂತ ಹೆಚ್ಚಿನ ಪ್ರೋಟೀನ್, ಕಾರ್ಬೋಹೈಡ್ರೇಟ್ ಆಹಾರ ಸೇವಿಸಿದಾಗ ಅದು ಕೊಬ್ಬಿನಂಶವಾಗಿ ಮಾರ್ಪಟ್ಟು ನಮ್ಮ ದೇಹದಲ್ಲಿ ಶೇಖರವಾಗಿ, ನಮ್ಮ ದೇಹದ ತೂಕವನ್ನು ಹೆಚ್ಚಿಸುತ್ತದೆ. ನಾವು ದೇಹಕ್ಕೆ ಪರಿಶ್ರಮ ಕೊಡುವ ಕೆಲಸದಲ್ಲಿ ತೊಡಗಿದಾಗ, ಆಗ ನಡೆಯುವ ಜೀವರಾಸಾಯನಿಕ ಕ್ರಿಯೆಯಲ್ಲಿ ಅದು ಕರಗಿ ದೇಹಕ್ಕೆ ಶಕ್ತಿ ಕೊಡುವುದಲ್ಲದೆ, ಎರಡು ತ್ಯಾಜ್ಯ ವಸ್ತುಗಳನ್ನು ಉತ್ಪಾದಿಸುತ್ತದೆ. ಆ ತಾಜ್ಯ ವಸ್ತುಗಳು ನೀರು ಮತ್ತು ಕಾರ್ಬನ್ ಡೈಆಕ್ಸೈಡ್. ನೀರು ಬೆವರಿನ ಮೂಲಕ ಇಲ್ಲವೇ ಮೂತ್ರದ ಮೂಲಕ ದೇಹದಿಂದ ಹೊರಗೆ ಹೋದರೆ, ಕಾರ್ಬನ್ ಡೈಆಕ್ಸೈಡ್ ನ್ನು ನಾವು ಉಸಿರಿನ ಮೂಲಕ ಹೊರ ಹಾಕುತ್ತೇವೆ. 

ಆದರೆ ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಇಲ್ಲಿ ನೀರಿನ ಪ್ರಮಾಣ ಕೇವಲ ಶೇಕಡಾ ೧೬ ರಷ್ಟು ಮಾತ್ರ. ಉಳಿದ ಶೇಕಡಾ ೮೪ ರಷ್ಟು ತೂಕ ದೇಹದಿಂದ  ಮರೆಯಾಗಿದ್ದು ನಮ್ಮ ಶ್ವಾಸಕೋಶಗಳ ಮೂಲಕ ಕಾರ್ಬನ್ ಡೈಆಕ್ಸೈಡ್ ಆಗಿ.

C55H104O6 + 78O2 → 55CO2  + 52H2O  + ಶಕ್ತಿ 

ನೀವು ಈ ರಾಸಾಯನಿಕ ಕ್ರಿಯೆಯ ಸಮೀಕರಣ ಗಮನಿಸಿದರೆ, ಇಲ್ಲಿರುವುದು ಕಾರ್ಬನ್, ಹೈಡ್ರೋಜನ್ ಮತ್ತು ಆಕ್ಸಿಜನ್ ಕಣಗಳು ಮಾತ್ರ. ಈ ಮೂರರಲ್ಲಿ ಹೆಚ್ಚಿನ ತೂಕವಿರುವುದು ಕಾರ್ಬನ್ ಅಣುಗಳೇ. ಹಾಗಾಗಿ ತೂಕ ಕಡಿಮೆಯಾದಾಗ, ಅದರಲ್ಲಿ ಕಾರ್ಬನ್ ಅಣುಗಳ ಪಾತ್ರವೇ ಹಿರಿದಾಗಿತ್ತು. 

ಕಾರ್ಬನ್ ನಮ್ಮ ದೇಹ ಸೇರಿದ್ದು ನಮ್ಮ ಊಟದ ಮೂಲಕ ಹಾಗು ಹೈಡ್ರೋಜನ್ ನಾವು ಕುಡಿಯುವ ನೀರಿನ ಮೂಲಕ ಮತ್ತು ಊಟದಲ್ಲಿನ ನೀರಿನಂಶದಿಂದ. ಆಕ್ಸಿಜನ್ ನಮ್ಮ ದೇಹದ ಒಳಗೆ ಬಂದಿದ್ದು, ನಾವು ಉಸಿರು ಒಳಗೆ ಎಳೆದುಕೊಂಡಾಗ. ಆದರೆ ಅದು ಜೀವಕೋಶಗಳ ಶಕ್ತಿ ಉತ್ಪಾದನೆಯ ಕ್ರಿಯೆಯಲ್ಲಿ ಭಾಗವಹಿಸಿ ಹೊರ ಹೋಗುವಾಗ ಕಾರ್ಬನ್ ಡೈಆಕ್ಸೈಡ್ ಆಗಿ ಮಾರ್ಪಟ್ಟು, ಹೆಚ್ಚು ತೂಕದ ಕಾರ್ಬನ್ ಅಣುಗಳನ್ನು ದೇಹದಿಂದ ಹೊರಕ್ಕೆ ಹಾಕಿತು. ಹಾಗೆ ದೇಹದ ಭಾರವೂ ಕಡಿಮೆಯಾಯಿತು. 

ನಾವು ಉಸಿರಾಡುವ ಗಾಳಿ ನಮ್ಮ ಕಣ್ಣಿಗೆ ಕಾಣದೆ ಹೋಗುವುದರಿಂದ, ಅದರ ಬೃಹತ್ ಎನ್ನಿಸುವ ಪ್ರಮಾಣ ನಮ್ಮ ಗಮನಕ್ಕೆ ಬರದೇ ಹೋಗುತ್ತದೆ. ಆದರೆ ನೆನಪಿಡಿ. ನಿಮ್ಮ ಗೆಳೆಯ ಹತ್ತು ಕೆ.ಜಿ. ತೂಕ ಕಳೆದುಕೊಂಡರೆ ಅದರಲ್ಲಿ ೮.೪ ಕೆ.ಜಿ. ತೂಕ ಮರೆಯಾಗಿ ಹೋದದ್ದು ಅವನ ಉಸಿರಾಟದ ಮೂಲಕ. ಒಂದು ತಾಸಿನ ವ್ಯಾಯಾಮ ೩೯ ಗ್ರಾಂ ನಷ್ಟು ತೂಕದ ಕಾರ್ಬನ್ ನ್ನು ದೇಹದಿಂದ ಹೊರಗೆ ಹಾಕುತ್ತದೆ. ಮತ್ತೆ ಅದೇ ಪ್ರಮಾಣ ಊಟದ ಮೂಲಕ ದೇಹ ಸೇರದಂತೆ ನೋಡಿಕೊಂಡರೆ, ಒಂದು ತಿಂಗಳಲ್ಲಿ ಎಷ್ಟು ತೂಕ ಕಳೆದುಕೊಳ್ಳಬಹುದು ಎಂದು ನೀವೇ ಲೆಕ್ಕ ಹಾಕಿ.

 ನಾನು ಈ ವಿಷಯ ತಿಳಿದುಕೊಂಡಿದ್ದು ಲಿಂಕ್ ನಲ್ಲಿರುವ ವಿವರಣೆಯಿಂದ. ಹೆಚ್ಚಿನ ಮಾಹಿತಿಗೆ ಅದನ್ನೇ ಓದಿ ನೋಡಿ.


Source: https://www.bmj.com/content/349/bmj.g7257

Link: https://www.bmj.com/content/349/bmj.g7257