ಕಳೆದ ದಶಕದಲ್ಲಿ ಆದ ಪ್ರಕೃತಿ ವಿಕೋಪಗಳಲ್ಲಿ, ಹಿಮಾಲಯ ವಲಯದಲ್ಲಿನ ಕೇದಾರನಾಥ ಮತ್ತು ನೇಪಾಳದಲ್ಲಿ ಆದ ಭೂಕಂಪ, ಭೂಕುಸಿತ, ನೆರೆ ಹಾವಳಿ ಮಾಡಿದ ನಷ್ಟ ಅಪಾರ. ಅಪಾಯಕಾರಿ ಮಟ್ಟದ ಭೂಕಂಪಗಳು ಇಲ್ಲಿ ಆಗುತ್ತಲೇ ಇವೆ. ೧೯೫೦ ರಲ್ಲಿ ಆದ ಭೂಕಂಪ, ಟಿಬೆಟ್ ಮತ್ತು ಅಸ್ಸಾಂ ಪ್ರದೇಶಗಳಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿತ್ತು. ೨೦೧೩ ರಲ್ಲಿ ಕೇದಾರನಾಥ ಪ್ರದೇಶದಲ್ಲಿ ಆದ ಭೂಕುಸಿತ ಮತ್ತು ನೆರೆಯಿಂದ ಸತ್ತಿದ್ದು ಐದು ಸಾವಿರಕ್ಕೂ ಹೆಚ್ಚಿನ ಜನ. ಅಸ್ತಿ ಹಾನಿಯೇನು ಕಡಿಮೆ ಎನ್ನುವ ಹಾಗಿಲ್ಲ.
ಇದು
ಅನೀರಿಕ್ಷಿತವಾಗಿ ಆದ ಪ್ರಕೃತಿ ವಿಕೋಪ
ಎಂದು ಮೇಲ್ನೋಟಕ್ಕೆ ಎನ್ನಿಸಿದರೂ ವಿವರಗಳನ್ನು ಗಮನಿಸುತ್ತಾ ಹೋದಂತೆ ಮನುಷ್ಯನಿಂದ ಉಂಟಾದ ಅಸಮತೋಲನಗಳನ್ನು ಕಡೆಗಣಿಸುವಂತಿಲ್ಲ. ಹಿಮಾಲಯ ಒಂದು ಸೂಕ್ಷ್ಮವಾದ ಪರಿಸರ
ಮತ್ತು ಭೂಕಂಪ ಪೀಡಿತ ಪ್ರದೇಶ. ಇಲ್ಲಿರುವುದು ದಕ್ಷಿಣ ಭಾರತದಲ್ಲಿನ ಬೆಟ್ಟಗಳ ಹಾಗೆ ಗಟ್ಟಿ ನಿಲ್ಲುವ
ಕಲ್ಲು ಗುಡ್ಡಗಳಲ್ಲ. ಬದಲಿಗೆ ಕಲ್ಲು ಮಣ್ಣುಗಳ ರಾಶಿ ಮಾಡಿ
ಒಂದರ ಮೇಲೆ ಒಂದರಂತೆ ಪೇರಿಸಿದ
ಮೆದು ಮಣ್ಣಿನ ಶ್ರೇಣಿ. ಇಲ್ಲಿ ಹೆಚ್ಚಿಗೆ ಮಳೆ ಆದರೆ, ಬೆಟ್ಟದ
ಮಣ್ಣು ಕರಗಿ, ಅಲ್ಲಿನ ಕಲ್ಲುಗಳು ಉರುಳಲಾರಂಭಿಸುತ್ತವೆ. ಭಾರತದಲ್ಲೇ ಎತ್ತರದ ಪ್ರದೇಶ ಇದಾಗಿರುವರಿಂದ, ಮಾನ್ಸೂನ್ ಮೋಡಗಳು ಅರಬ್ಬೀ ಸಮುದ್ರದಲ್ಲಿ ಹುಟ್ಟಿ ಈಶಾನ್ಯ ದಿಕ್ಕಿಗೆ ಚಲಿಸಿ, ಮಳೆಯಾಗದೆ ಹಾಗೆ ಉಳಿದ ಮೋಡಗಳು
ಇಲ್ಲಿ ಜಮಾವಣೆಗೊಂಡು ಹೆಚ್ಚಿನ ಮಳೆ ಸುರಿಸುತ್ತವೆ. ಇಲ್ಲವೇ
ಘರ್ಷಣೆ ಹೆಚ್ಚಾದರೆ ಸ್ಪೋಟಗೊಳ್ಳುತ್ತವೆ. ನಾನು ಹಿಮಾಲಯ ಪ್ರವಾಸ
ಹೋದಾಗ, ಮೇಘ ಸ್ಪೋಟವಾಗಿ (Cloud Burst), ಭೂಕುಸಿತದಿಂದ ರಸ್ತೆ ಮುಚ್ಚಿ ಹೋಗಿ ದಾರಿಯಲ್ಲೇ ಇಡೀ
ದಿನ ಸಿಕ್ಕು ಹಾಕಿಕೊಂಡು, ಹತ್ತಿರದ ಹಳ್ಳಿಯಲ್ಲಿ ಮಲಗಿ ಮರು ದಿನ
ರಸ್ತೆ ಉಪಯೋಗ ಮಾಡುವಂತಾದಾಗ ಮುಂದೆ ಸಾಗಿದ್ದು ನೆನಪಿದೆ.
ನನ್ನ ಯಮುನೋತ್ರಿ ಪ್ರವಾಸದ ಮಾರ್ಗಮಧ್ಯದಲ್ಲಿ ಭೂಕುಸಿತದಿಂದ ರಸ್ತೆ ಮುಚ್ಚಿ ಹೋಗಿರುವುದು |
ಈ ತರಹದ ಪ್ರದೇಶದಲ್ಲಿ ಆಣೆಕಟ್ಟು ಕಟ್ಟುವುದು ಹಿಮಾಲಯದ ರಚನೆಯ ಮೇಲೆ ಪರಿಣಾಮ ಬೀರುತ್ತದೆ. ನೈಸರ್ಗಿಕ ವಿಕೋಪಗಳು ಅಣೆಕಟ್ಟನ್ನು ಒಡೆದು ಹಾಕದಿದ್ದರೂ ಅದು ಸುರಕ್ಷಿತವಾಗಿ ಕೆಲಸ ಮಾಡುವ ಅವಧಿಯನ್ನು ಗಣನೀಯವಾಗಿ ತಗ್ಗಿಸುತ್ತವೆ. ಮತ್ತು ಭೂಕುಸಿತಗಳು ಆಣೆಕಟ್ಟು ಹಿಡಿದಿಡುವ ನೀರಿನ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಅಲ್ಲದೆ ಹಿಮಾಲಯದಲ್ಲಿ ನಾವು ಕಟ್ಟುವ ರಸ್ತೆಗಳು ಮತ್ತು ಅದಕ್ಕಾಗಿ ಮರಗಳನ್ನು ಕಡಿಯುವುದು, ಬೆಟ್ಟ ಪ್ರದೇಶದಲ್ಲಿ ಅಸಮತೋಲನ ಉಂಟು ಮಾಡಿ ಭೂಕುಸಿತದ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಹಿಮಾಲಯವನ್ನು ಒಂದು ಸಂರಕ್ಷಿತ ಪ್ರದೇಶವೆಂದು ಘೋಷಿಸುವುದು ಕ್ಷೇಮಕರ ಎನ್ನುತ್ತಾರೆ ಪರಿಸರ ತಜ್ಞ ಮತ್ತು ಹಿಮಾಲಯವನ್ನು ದಶಕಗಳ ಕಾಲ ಅಭ್ಯಸಿಸಿದ ಮಹಾರಾಜ ಪಂಡಿತ್. (ಲಿಂಕ್: https://www.nature.com/articles/d41586-020-01809-4 )
ಪೈಪೋಟಿಗೆ
ಬಿದ್ದ ಭಾರತ ಮತ್ತು ಚೀನಾ
ದೇಶಗಳು ಈ ಪ್ರದೇಶದಲ್ಲಿ ತಮ್ಮ
ಬಲ ತೋರಿಸುಕೊಳ್ಳುವ ಕಾದಾಟ ಮತ್ತು ಇಲ್ಲಿಯ ಸಂಪನ್ಮೂಲಗಳನ್ನು ಉಪಯೋಗಿಸುವ ಉದ್ದೇಶದಿಂದ ರಸ್ತೆ, ಅಣೆಕಟ್ಟುಗಳ ನಿರ್ಮಾಣ ಕಾರ್ಯಗಳನ್ನು ಮುಂದುವರೆಸಿವೆ. ಹಾಗೆಯೆ ಮನುಷ್ಯ ವಾಸವು ಹಿಂದಿಗಿಂತ ಹೆಚ್ಚಿಗೆ ಈ ಪ್ರದೇಶಗಳಲ್ಲಿ ಕಾಣುತ್ತಿದೆ.
ಆದರೆ ಪ್ರಕೃತಿ ಶಕ್ತಿಯ ಮುಂದೆ ಮನುಷ್ಯ ಶಕ್ತಿ ಯಾವ ಲೆಕ್ಕದ್ದು? ಹಿಮಾಲಯವನ್ನು
ಅದರ ಪಾಡಿಗೆ ಬಿಡದ ಮನುಜ ಮುಂದೆ
ಒಂದು ದಿನ ಭಾರಿ ಬೆಲೆ
ತೆತ್ತಬೇಕಾಗಬಹುದು.
(ಚಿತ್ರ:
ನನ್ನ ಯಮುನೋತ್ರಿ ಪ್ರವಾಸದ ಮಾರ್ಗಮಧ್ಯದಲ್ಲಿ ಭೂಕುಸಿತದಿಂದ ರಸ್ತೆ ಮುಚ್ಚಿ ಹೋಗಿರುವುದು)
No comments:
Post a Comment