Sunday, December 13, 2020

ಮೈಯಲ್ಲಿನ ತೂಕ ಕಡಿಮೆಯಾದಾಗ ಅದು ಹೋಗುವುದು ಎಲ್ಲಿಗೆ?

ಈಗ ಎಲ್ಲರಿಗೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಅಲ್ಲವೇ? ನಿಮ್ಮ ಎತ್ತರಕ್ಕೆ ಅನುಗುಣವಾಗಿ ಇರದೇ ನಿಮ್ಮ ದೇಹದ ತೂಕ ಹೆಚ್ಚಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ ಅಲ್ಲವೇ? ಆಗ ತೂಕ ಹೆಚ್ಚಿದ್ದವರು ಏನೆಲ್ಲಾ ಸಾಹಸ ಮಾಡುತ್ತಾರೆ. ಬೆಳಿಗ್ಗೆ ಇಲ್ಲವೇ ಸಂಜೆ ನಡಿಗೆ, ಲಘು ಓಟ, ಜಿಮ್ ಸೇರಿಕೊಳ್ಳುವುದು, ತಿನ್ನುವ ಆಹಾರದ ಕಡೆಗೆ ಕಾಳಜಿ ವಹಿಸುವುದು,  ಕಡಿಮೆ ಕೊಬ್ಬಿನಂಶ ಇರುವ ಪದಾರ್ಥ ಸೇವಿಸುವುದು ಹೀಗೆ ಎಲ್ಲ ಪ್ರಯತ್ನಗಳು ತೂಕ ಕಡಿಮೆ ಮಾಡಿಕೊಳ್ಳುವುದರ ಕಡೆಗೆ ಸಾಗುತ್ತವೆ. ಅದರ ಪ್ರತಿಫಲ ಎಂಬಂತೆ ತೂಕದ ಯಂತ್ರ ಕಡಿಮೆ ತೂಕ ತೋರಿಸಲು ಶುರು ಮಾಡಿದಾಗ 'ಉಸ್ಸಪ್ಪ' ಎನ್ನುತ್ತಾರೋ ಅಥವಾ ಖುಷಿಯಿಂದ ಇನ್ನು ಹೆಚ್ಚು ನಡಿಗೆ, ಓಟ ಪ್ರಾರಂಭ ಮಾಡುತ್ತಾರೋ ಇಲ್ಲವೇ ಹಳೆಯ ಆಲಸ್ಯಕ್ಕೆ ಶರಣು ಹೋಗುತ್ತಾರೋ ಅವರವರ ಮೇಲೆ ಅವಲಂಬಿತವಾಗಿದೆ. ಆದರೆ ನನಗೆ ಮಾತ್ರ ಪ್ರಶ್ನೆ ಕಾಡಿದ್ದು, ಈ ಮೈಯಲ್ಲಿನ ತೂಕ ಕೊಡುವ ಭೌತಿಕ ವಸ್ತು ದೇಹದಿಂದ ಮರೆಯಾಗಿ ಹೋಗಿದ್ದು ಹೇಗೆ ಎನ್ನುವುದು?


ಅದಕ್ಕೆ ನಾನು ಗೂಗಲ್ ಹುಡುಕಾಟ ಆರಂಭಿಸಿದಾಗ ಕೆಲವು ಕುತೂಹಲ ಎನ್ನಿಸುವ ವಿಷಯಗಳು ಗೊತ್ತಾದವು. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಂಡರಾಯಿತು ಎನ್ನುವ ಉದ್ದೇಶ ಈ ಲೇಖನದ್ದು. ಮೊದಲಿಗೆ ನಾವು ತಿಳಿಕೊಳ್ಳಬೇಕಾದದ್ದು ಕೊಬ್ಬು ಹೇಗೆ ನಮ್ಮ ಮೈ ಸೇರಿತು ಎನ್ನುವುದು, ನಂತರ ಅದು ಕರಗಿ ಹೋಗುವ ಬಗೆಯನ್ನು. 


ನಾವು ದೇಹಕ್ಕೆ ಅಗತ್ಯ ಇರುವದಕ್ಕಿಂತ ಹೆಚ್ಚಿನ ಪ್ರೋಟೀನ್, ಕಾರ್ಬೋಹೈಡ್ರೇಟ್ ಆಹಾರ ಸೇವಿಸಿದಾಗ ಅದು ಕೊಬ್ಬಿನಂಶವಾಗಿ ಮಾರ್ಪಟ್ಟು ನಮ್ಮ ದೇಹದಲ್ಲಿ ಶೇಖರವಾಗಿ, ನಮ್ಮ ದೇಹದ ತೂಕವನ್ನು ಹೆಚ್ಚಿಸುತ್ತದೆ. ನಾವು ದೇಹಕ್ಕೆ ಪರಿಶ್ರಮ ಕೊಡುವ ಕೆಲಸದಲ್ಲಿ ತೊಡಗಿದಾಗ, ಆಗ ನಡೆಯುವ ಜೀವರಾಸಾಯನಿಕ ಕ್ರಿಯೆಯಲ್ಲಿ ಅದು ಕರಗಿ ದೇಹಕ್ಕೆ ಶಕ್ತಿ ಕೊಡುವುದಲ್ಲದೆ, ಎರಡು ತ್ಯಾಜ್ಯ ವಸ್ತುಗಳನ್ನು ಉತ್ಪಾದಿಸುತ್ತದೆ. ಆ ತಾಜ್ಯ ವಸ್ತುಗಳು ನೀರು ಮತ್ತು ಕಾರ್ಬನ್ ಡೈಆಕ್ಸೈಡ್. ನೀರು ಬೆವರಿನ ಮೂಲಕ ಇಲ್ಲವೇ ಮೂತ್ರದ ಮೂಲಕ ದೇಹದಿಂದ ಹೊರಗೆ ಹೋದರೆ, ಕಾರ್ಬನ್ ಡೈಆಕ್ಸೈಡ್ ನ್ನು ನಾವು ಉಸಿರಿನ ಮೂಲಕ ಹೊರ ಹಾಕುತ್ತೇವೆ. 

ಆದರೆ ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಇಲ್ಲಿ ನೀರಿನ ಪ್ರಮಾಣ ಕೇವಲ ಶೇಕಡಾ ೧೬ ರಷ್ಟು ಮಾತ್ರ. ಉಳಿದ ಶೇಕಡಾ ೮೪ ರಷ್ಟು ತೂಕ ದೇಹದಿಂದ  ಮರೆಯಾಗಿದ್ದು ನಮ್ಮ ಶ್ವಾಸಕೋಶಗಳ ಮೂಲಕ ಕಾರ್ಬನ್ ಡೈಆಕ್ಸೈಡ್ ಆಗಿ.

C55H104O6 + 78O2 → 55CO2  + 52H2O  + ಶಕ್ತಿ 

ನೀವು ಈ ರಾಸಾಯನಿಕ ಕ್ರಿಯೆಯ ಸಮೀಕರಣ ಗಮನಿಸಿದರೆ, ಇಲ್ಲಿರುವುದು ಕಾರ್ಬನ್, ಹೈಡ್ರೋಜನ್ ಮತ್ತು ಆಕ್ಸಿಜನ್ ಕಣಗಳು ಮಾತ್ರ. ಈ ಮೂರರಲ್ಲಿ ಹೆಚ್ಚಿನ ತೂಕವಿರುವುದು ಕಾರ್ಬನ್ ಅಣುಗಳೇ. ಹಾಗಾಗಿ ತೂಕ ಕಡಿಮೆಯಾದಾಗ, ಅದರಲ್ಲಿ ಕಾರ್ಬನ್ ಅಣುಗಳ ಪಾತ್ರವೇ ಹಿರಿದಾಗಿತ್ತು. 

ಕಾರ್ಬನ್ ನಮ್ಮ ದೇಹ ಸೇರಿದ್ದು ನಮ್ಮ ಊಟದ ಮೂಲಕ ಹಾಗು ಹೈಡ್ರೋಜನ್ ನಾವು ಕುಡಿಯುವ ನೀರಿನ ಮೂಲಕ ಮತ್ತು ಊಟದಲ್ಲಿನ ನೀರಿನಂಶದಿಂದ. ಆಕ್ಸಿಜನ್ ನಮ್ಮ ದೇಹದ ಒಳಗೆ ಬಂದಿದ್ದು, ನಾವು ಉಸಿರು ಒಳಗೆ ಎಳೆದುಕೊಂಡಾಗ. ಆದರೆ ಅದು ಜೀವಕೋಶಗಳ ಶಕ್ತಿ ಉತ್ಪಾದನೆಯ ಕ್ರಿಯೆಯಲ್ಲಿ ಭಾಗವಹಿಸಿ ಹೊರ ಹೋಗುವಾಗ ಕಾರ್ಬನ್ ಡೈಆಕ್ಸೈಡ್ ಆಗಿ ಮಾರ್ಪಟ್ಟು, ಹೆಚ್ಚು ತೂಕದ ಕಾರ್ಬನ್ ಅಣುಗಳನ್ನು ದೇಹದಿಂದ ಹೊರಕ್ಕೆ ಹಾಕಿತು. ಹಾಗೆ ದೇಹದ ಭಾರವೂ ಕಡಿಮೆಯಾಯಿತು. 

ನಾವು ಉಸಿರಾಡುವ ಗಾಳಿ ನಮ್ಮ ಕಣ್ಣಿಗೆ ಕಾಣದೆ ಹೋಗುವುದರಿಂದ, ಅದರ ಬೃಹತ್ ಎನ್ನಿಸುವ ಪ್ರಮಾಣ ನಮ್ಮ ಗಮನಕ್ಕೆ ಬರದೇ ಹೋಗುತ್ತದೆ. ಆದರೆ ನೆನಪಿಡಿ. ನಿಮ್ಮ ಗೆಳೆಯ ಹತ್ತು ಕೆ.ಜಿ. ತೂಕ ಕಳೆದುಕೊಂಡರೆ ಅದರಲ್ಲಿ ೮.೪ ಕೆ.ಜಿ. ತೂಕ ಮರೆಯಾಗಿ ಹೋದದ್ದು ಅವನ ಉಸಿರಾಟದ ಮೂಲಕ. ಒಂದು ತಾಸಿನ ವ್ಯಾಯಾಮ ೩೯ ಗ್ರಾಂ ನಷ್ಟು ತೂಕದ ಕಾರ್ಬನ್ ನ್ನು ದೇಹದಿಂದ ಹೊರಗೆ ಹಾಕುತ್ತದೆ. ಮತ್ತೆ ಅದೇ ಪ್ರಮಾಣ ಊಟದ ಮೂಲಕ ದೇಹ ಸೇರದಂತೆ ನೋಡಿಕೊಂಡರೆ, ಒಂದು ತಿಂಗಳಲ್ಲಿ ಎಷ್ಟು ತೂಕ ಕಳೆದುಕೊಳ್ಳಬಹುದು ಎಂದು ನೀವೇ ಲೆಕ್ಕ ಹಾಕಿ.

 ನಾನು ಈ ವಿಷಯ ತಿಳಿದುಕೊಂಡಿದ್ದು ಲಿಂಕ್ ನಲ್ಲಿರುವ ವಿವರಣೆಯಿಂದ. ಹೆಚ್ಚಿನ ಮಾಹಿತಿಗೆ ಅದನ್ನೇ ಓದಿ ನೋಡಿ.


Source: https://www.bmj.com/content/349/bmj.g7257

Link: https://www.bmj.com/content/349/bmj.g7257

2 comments: