ಸುಮಾರು ಎರಡು ವರ್ಷದ ಹಿಂದಿನ ಸಮಯ. ಆ ದಿನ ಬುದ್ಧ ಪೂರ್ಣಿಮೆ. ಸಾಯಂಕಾಲ ವೇಳೆ ಬೆಂಗಳೂರಿನ ಟ್ರಾಫಿಕ್ ನಲ್ಲಿ ಕಾರು ಓಡಿಸುತ್ತಿದ್ದ ನನಗೆ ಒಂದಾದರ ಮೇಲೆ ಒಂದರಂತೆ ಫೋನ್ ಕರೆಗಳು ಬರತೊಡಗಿದ್ದವು. ಎಲ್ಲವುಗಳ ಸಂದೇಶವೂ ಒಂದೇ. ನನ್ನ ತಾಯಿ ತೀರಿಕೊಂಡಿರುವುದಾಗಿ, ಕೂಡಲೇ ಹೊರಟು ಬರಬೇಕೆಂದು ಮನೆಯವರು, ಬಂಧುಗಳು, ಸ್ನೇಹಿತರು ತಿಳಿಸುತ್ತಲೆ ಇದ್ದರು. ಆಘಾತ, ಆತಂಕ ಎನ್ನಿಸಿದರೂ ಸಾವರಿಸಿಕೊಂಡು, ಕಾರನ್ನು ಬಂಧುವೊಬ್ಬರ ಕೈಗೆ ಒಪ್ಪಿಸಿ, ಸೀದಾ ಮೆಜೆಸ್ಟಿಕ್ ಗೆ ಬಂದು ನನ್ನ ಊರಾದ ಮಸ್ಕಿ ಗೆ ಹೋಗುವ ಬಸ್ಸನ್ನು ಏರಿದೆ.
ಬೆಳಿಗ್ಗೆ ಊರಿಗೆ ಬಂದು ಸೇರುವಷ್ಟರಲ್ಲಿ, ಮನೆಯಲ್ಲಿ ತಾಯಿಯ ಅಂತಿಮ ದರ್ಶನದ ವ್ಯವಸ್ಥೆ ಮತ್ತು ಅಂತ್ಯ ಸಂಸ್ಕಾರಕ್ಕೆ ಆಗಬೇಕಾದ ಏರ್ಪಾಡುಗಳು ಆಗುತ್ತಿದ್ದವು. ಲಿಂಗಾಯತ ಸಮಾಜ ಮಾಡುವ ವ್ಯವಸ್ಥಿತ ಏರ್ಪಾಡು ಮತ್ತು ಊರಿನ ಎಲ್ಲ ಧರ್ಮದ ಜನರ ಸಹಕಾರವನ್ನು ಕಂಡು ನನಗೆ ಈ ಊರಲ್ಲಿ ಪ್ರಾಣ ಬಿಡುವುದಕ್ಕೂ ಪುಣ್ಯ ಇರಬೇಕು ಎನ್ನಿಸತೊಡಗಿತ್ತು. ಅಲ್ಲಿಯವರೆಗೆ ಸಾಕಷ್ಟು ಅಂತ್ಯ ಸಂಸ್ಕಾರಗಳಲ್ಲಿ ಭಾಗವಹಿಸಿದ್ದರೂ, ಅಂದು ಮಾತ್ರ ನನ್ನಲ್ಲಿನ ಒಂದು ಭಾಗವು ಸತ್ತು ಹೋಯಿತೆನ್ನುವ ಭಾವನೆ ಮನೆ ಮಾಡಿತ್ತು. ಏನು ಮಾಡುವುದಕ್ಕೂ ತೋಚದಂತಾಗಿತ್ತು.
ಅಂತ್ಯ ಕ್ರಿಯೆ ಮುಗಿದ ರಾತ್ರಿ, ಮಾಡಲು ಇನ್ನೇನು ಕೆಲಸ ಇಲ್ಲ ಎಂದಾಗ ನೆನಪು ಮಾಡಿಕೊಂಡೆ. ಕೊನೆಯ ಬಾರಿ ಮಾತನಾಡಿದಾಗ ತನಗೆ ಕೆಮ್ಮು ಬಂದಿದ್ದು ಆದರೆ ಅದು ಕಡಿಮೆಯಾಗುತ್ತಿರುವುದಾಗಿ ನನ್ನ ತಾಯಿ ತಿಳಿಸಿದ್ದಳು. ಊರಿಗೆ ಯಾವಾಗ ಬರುತ್ತೀಯ ಎಂದು ಕೇಳಿದ್ದಳು. ಬರುವಷ್ಟರಲ್ಲಿ ಅವಳೇ ಇರಲಿಲ್ಲ. ವಾಂತಿ ಬರುತ್ತಿದೆ ಎಂದು ಮನೆಯ ಹೊರಗಡೆ ಹೋದ ಅವಳು ಹಾಗೆ ಉರುಳಿ ಬಿದ್ದಿದ್ದಳು. ಅವಳಿಗೆ ಕೊನೆಯ ಕ್ಷಣದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆದೊಯ್ದ ನಮ್ಮ ನೆರೆ ಮನೆಯಲ್ಲಿರುವ ಡಾಕ್ಟರ್ ತಿಳಿಸಿದ್ದು, ಅಮ್ಮ ಯಾವುದೇ ಚಿಕಿತ್ಸೆಗೆ ಅವಕಾಶ ನೀಡಲಿಲ್ಲ ಎಂದು. ಅವಳಿಗೆ ಯಾರ ಜೊತೆಗೂ ಕೊನೆಯ ಮಾತು ಆಡುವ ಅವಕಾಶ ನೀಡದೆ ಯಮಧರ್ಮ ಹಟಾತ್ತನೆ ಕರೆದೊಯ್ದಿದ್ದ. ಅಂದು ರಾತ್ರಿ ಎಷ್ಟು ಹೊತ್ತಾದರೂ, ಕಣ್ಣು ಕೆಂಪಾಗಿ, ಮೈ ಬಿಸಿಯೇರಿದರೂ ನನಗೆ ನಿದ್ದೆ ಮಾತ್ರ ಬಾರದು. ನನ್ನ ಮೊಬೈಲ್ ನಲ್ಲಿ ಹಾಕಿಕೊಂಡ ವಿಡಿಯೋನಲ್ಲಿ ಸದ್ಗುರು ಹೇಳುತ್ತಿದ್ದ "ಸಾವು ಸಹಜ ಕ್ರಿಯೆ. ಆದರೆ ಅದು ಬರುವ ಮುಂಚೆಯೇ ನಾವು ಅದನ್ನು ಸ್ವಾಗತಿಸಲು ತಯಾರಿ ಮಾಡಿಕೊಳ್ಳಬೇಕು." ಮಂಕು ಬಡಿದಂತೆ ಎರಡು ದಿನ ಕಳೆದ ನಾನು ಹಿತವಿಲ್ಲದಿದ್ದರೂ ಮತ್ತೆ ಲೌಕಿಕ ಜೀವನಕ್ಕೆ ಸ್ವಲ್ಪ ಅಸಹಜ ಎನ್ನುವ ರೀತಿಯಲ್ಲೇ ಮರಳಿದೆ.
ಬೇರೆಯ ಸಮಸ್ಯೆಗಳು ನನ್ನನ್ನು ಅವರಿಸಿದರೂ, ನಡೆದು ಹೋದದ್ದು ಜೀರ್ಣಿಸಿಕೊಳ್ಳಲು ಕೆಲವು ತಿಂಗಳುಗಳೇ ಬೇಕಾದವು. ಆದರೆ ಆ ಸಮಯದಲ್ಲಿ ನನ್ನ ವಿಚಾರಗಳು ಬದಲಾಗತೊಡಗಿದವು. ದುಡ್ಡು, ಅಸ್ತಿ, ಮರ್ಯಾದೆ ಸಂಪಾದಿಸುವುದಕ್ಕಿಂತ ದ್ವೇಷ, ಗರ್ವ, ಅಹಂ ಗಳನ್ನು ಕಳೆದುಕೊಳ್ಳುವುದೇ ಜೀವನ ಎನ್ನಿಸತೊಡಗಿತು. ಅದುವರೆಗೆ ಓದಿದ ಉಪನಿಷತ್ತುಗಳೆಲ್ಲ ಸಪ್ಪೆ ಎನ್ನಿಸತೊಡಗಿದವು. ಹಿಮಾಲಯದ ಗುಡಿಗಳಿಗೆ ಹೋಗದಿದ್ದರೂ, ಗಂಗೆಯ ಮಡಿಲು ಸೇರದಿದ್ದರು ಜೀವನಕ್ಕೆ ಮುಕ್ತಿ ಎನ್ನುವುದು ಎಲ್ಲರಿಗೂ ಸಾಧ್ಯ ಎನ್ನುವ ನಂಬಿಕೆ ಬಲವಾಗತೊಡಗಿತು. 'ಎಲ್ಲೋ ಹುಡುಕಿದೆ ಇಲ್ಲದ ದೇವರ' ಎಂದು ಬರೆದಿದ್ದು ಶಿವರುದ್ರಪ್ಪನವರೇ ಆದರೂ, ಅದು ನನ್ನ ಹಾಗೆ ನೂರಾರು, ಸಾವಿರಾರು ಜನರ ಎದೆಯಾಳದ ಧ್ವನಿ ಎನ್ನಿಸತೊಡಗಿತು. ಮಾತಿಗಿಂತ ಮೌನ ಶ್ರೇಷ್ಟ ಎಂದು ಹೇಳಿದ್ದು ಓಶೋ ಮಹಾಗುರು. ಅದುವರೆಗೆ ಧ್ಯಾನ ಎಂದರೆ ಏನು ಎಂದು ಗೊತ್ತಿರದಿದ್ದ ನನಗೆ, ಯಾವುದೇ ಚಿತ್ತ ವಿಕಾರಗಳಿಲ್ಲದೆ ಸುಮ್ಮನೆ ಕುಳಿಕೊಳ್ಳುವುದು ಸಾಧ್ಯವಾಗತೊಡಗಿತು. ಭಾವನೆಗಳೆಲ್ಲ ಕರಗಿ ಸ್ಪಷ್ಟತೆ ಮೂಡಲಾರಂಭಿಸಿತು.
ನನ್ನ ಸುಪ್ತ ಮನಸ್ಸು ತಿಳಿದುಕೊಂಡದ್ದು ನನ್ನ ಅರಿವಿಗೆ ಬರಲು ಇನ್ನು ಹೆಚ್ಚಿನ ಸಮಯ ತಗುಲಿತು. ನನಗೆ ಇಂದು ಭಾವನೆಗಳೆಲ್ಲ ತಹಬದಿಗೆ ಬಂದ ಮೇಲೆ ಅನಿಸುವುದು ಏನೆಂದರೆ, ಅವಸರದಲ್ಲಿ ನನ್ನ ತಾಯಿಯನ್ನು ಕರೆದೊಯ್ದ ಯಮಧರ್ಮ, ನನ್ನನ್ನು ಮುಂದೊಂದು ದಿನ ಕರೆದೊಯ್ಯಲು ಬರುವುದಾಗಿ ಖಡಕ್ಕಾಗಿ ಎಚ್ಚರಿಸಿ ಹೋಗಿದ್ದ. ಆದರೆ ಅಲ್ಲಿಯವರೆಗೆ ನಿನಗೆ ತಿಳಿದಿದ್ದು, ಸಾಧ್ಯವಾಗಿದ್ದು ಮಾಡಿಕೋ ಎನ್ನುವಂತೆ, ನನಗೆ ಆಧ್ಯಾತ್ಮದ ಬಾಗಿಲು ತೆರೆದು ಹೋಗಿದ್ದ. ಯಮನಿಗೆ ಯಾವುದಾದರೂ ಧರ್ಮ ಇದ್ದರೆ ಅದು ಇದೇ ಏನೋ ಎನ್ನುವಂತೆ. ತೆರೆದ ಬಾಗಿಲಿನ ಆಚೆ ಇರುವ ಬುದ್ಧ-ಶಂಕರ-ಬಸವ-ಅಕ್ಕ-ಶರೀಫ-ದಾಸರು ನನ್ನ ಕಾಲದವರಲ್ಲರಾದರೂ, ನನಗೆ ಹೆಚ್ಚು ಆತ್ಮೀಯ ಎನ್ನಿಸತೊಡಗಿದರು. ವೇದ-ಪುರಾಣ-ಗೀತೆಗಳು ಸಪ್ಪೆ ಎನಿಸತೊಡಗಿದವು. ಭಕ್ತಿಯೇ ಪೂಜೆ, ಧರ್ಮವೇ ಪ್ರಸಾದ, ಕರುಣೆಯೇ ತೀರ್ಥ ಎನ್ನುವ ತಿಳುವಳಿಕೆ ಬಂದಿತು. ನಮ್ಮ ಗುಡಿಗಳಲ್ಲಿ ನಡೆಯುವುದು ಅದರ ಅಂಧ ಅನುಕರಣೆ ಮಾತ್ರ ಎನ್ನುವ ಸ್ಪಷ್ಟತೆ ಮೂಡಿತು.
ಅರ್ಥವಿಲ್ಲದ ಜೀವನದಲ್ಲಿ, ಏನು ನಿನ್ನ ಗುರಿ ಎಂದು ಕೇಳಿ ಹೋದ ಯಮ ಮತ್ತೆ ಬರುವಷ್ಟರಲ್ಲಿ ಉತ್ತರ ಹುಡುಕಿಕೊಳ್ಳಬೇಕು. ಆತನ ಮೇಲೆ ನನಗೆ ಯಾವುದೇ ದೂರುಗಳಿಲ್ಲ. ಬದಲಿಗೆ ಜೀವನ ನನಗೆ ಈಗಾಗಲೇ ಕೊಟ್ಟಿರುವ ಸೌಕರ್ಯಗಳಿಗೆ ಋಣಿಯಾಗಿದ್ದೇನೆ. ಅದರಲ್ಲೇ ನನ್ನಿಂದ ಸಾಧ್ಯ ಆಗುವುದರ ಕಡೆಗೆ ಹೆಜ್ಜೆ ಇಟ್ಟಿದ್ದೇನೆ. ಸ್ವಾರ್ಥದಿಂದಾಚೆಗೆ ಇಡುವ ಪುಟ್ಟ ಹೆಜ್ಜೆಗಳು ನನ್ನಲ್ಲಿ ಹೊಸ ಉತ್ಸಾಹ ಮೂಡಿಸಿವೆ. ಅಡಿಗರು ತಮ್ಮ ಕಾವ್ಯದಲ್ಲಿ ಹೇಳಿದ ಹಾಗೆ ದೂರ ತೀರಕೆ ಕರೆಯುವ ಮೋಹನ ಮುರಳಿಯ ಕರೆ ಪ್ರತಿಯೊಬ್ಬರಿಗೆ ಅವರ ಸಮಯ ಬಂದಾಗ ಕೇಳಿಯೇ ಕೇಳಿಸುತ್ತದೆ. ಅದಕ್ಕೆ ಮುಂಚೆ ನಮ್ಮ ಕರ್ಮದ ಹೊರೆ ಕಡಿಮೆ ಮಾಡಿಕೊಳ್ಳುವ ಅವಕಾಶಗಳ ಸದುಪಯೋಗ ಮಾಡಿಕೊಳ್ಳುವುದು ನಮಗೆ ಬಿಟ್ಟಿದ್ದು. ನಾನು ಆ ದಿಶೆಯಲ್ಲಿ ಈಗಾಗಲೇ ಹೆಜ್ಜೆ ಇಟ್ಟಾಗಿದೆ. ಬದುಕು ಕಳೆದು ಹೋಗುವ ಮುನ್ನವೇ ಬದುಕಬೇಕಲ್ಲವೇ?
No comments:
Post a Comment