Saturday, April 10, 2021

ಶರಣರು ಕಟ್ಟಿದ ಕರುಣಾ ಕೇಂದ್ರ

ಮನೆ ಇಲ್ಲದವರಿಗೂ, ಮನೆ ಸಾಕಾದವರಿಗೂ ಆಶ್ರಯ ನೀಡುವ ಸ್ಥಳ ಮಠ. ಚಿತ್ರದುರ್ಗದ ಮುರುಘರಾಜೇಂದ್ರ ಮಠ ಕೇವಲ ಮನುಶ್ಯರಿಗಲ್ಲದೆ ಹಲವಾರು ಪ್ರಾಣಿ ಪಕ್ಷಿಗಳ ವಾಸ ಸ್ಥಾನ ಕೂಡ ಆಗಿದೆ. ಕನ್ನಡ ಮಣ್ಣಿನಲ್ಲಿ ರಾಜ ಮಹಾರಾಜರು ಸಾಧಿಸಿದ್ದಕ್ಕಿಂತ ಹೆಚ್ಚಿನ ಸಾಧನೆ ಇಲ್ಲಿನ ಸಾಧು, ಸಂತ, ಶರಣರದ್ದು. ನಾಯಕರು ಕಟ್ಟಿದ ಕಲ್ಲಿನ ಕೋಟೆ ಇಂದಿಗೆ ಬಿಸಿಲಿನಲ್ಲಿ ಭಣಗುಡುತ್ತಿದ್ದರೆ, ಶರಣರು ಕಟ್ಟಿದ ಮಠ, ವನ ಮಾತ್ರ ಹಚ್ಚ ಹಸಿರು. ಕೋಟೆ ಅಂದಿನ ಕತ್ತಿಯ ಮೊನಚು, ಫಿರಂಗಿ ಗುಂಡುಗಳು ಹರಿಸಿದ ರಕ್ತ ಮತ್ತು ಮನುಷ್ಯನ ಕ್ರೌರ್ಯದ ನೆನಪು ತಂದರೆ, ಮಠ ಮನುಷ್ಯನ ಇನ್ನೊಂದು ಮುಖವಾದ ಕರುಣೆ ಎನ್ನುವ ತಣ್ಣನೆಯ ತೀರ್ಥ ಪ್ರವಹಿಸುವ ಕೇಂದ್ರವಾಗಿ ಇತಿಹಾಸವನ್ನು ಇಂದಿನ ಕಾಲದ ಜೊತೆಗೆ ಜೋಡಿಸುತ್ತದೆ.

ದುಷ್ಟತೆ ಮೈಗೂಡಿಸಿಕೊಂಡಂತ ಸಮಾಜದ ವಿಷ ತಗ್ಗಿಸಲು, ಮಾನವೀಯತೆಂಬ ಜೀವ ಸೆಲೆ ಬತ್ತದಂತೆ ಕಾಪಾಡಲು ಮಠಗಳನ್ನು ಕಟ್ಟಬೇಕಾದ ಅವಶ್ಯಕತೆಯನ್ನು ಮನಗಂಡ ಶರಣರು ತಾವು ವಿರಕ್ತರಾದರೂ, ಸಮಾಜೋದ್ಧಾರಕ್ಕಾಗಿ ಹಟದಿಂದ ಮಠ ಕಟ್ಟಿದರು. ೧೭ನೆ ಶತಮಾನದಲ್ಲಿ ಈ ಮಠ ಕಟ್ಟಿದ ಶ್ರೀ ಗುರುಸಿದ್ಧ ಸ್ವಾಮಿಗಳಿಂದ, ಅದನ್ನು ಅನವರತ ನಡೆಸಿಕೊಂಡ ಬಂದ ಅನೇಕ ಶರಣರು, ಇಂದು ಅದನ್ನು ಮುನ್ನಡೆಸುವ ಶ್ರೀ ಶಿವಮೂರ್ತಿ ಶರಣರವರೆಗೆ ಹಲವಾರು ಸಂತರ ಜೀವಶಕ್ತಿಯನ್ನು ಈ ಮಠ ತನ್ನದಾಗಿಸಿಕೊಂಡಿದೆ. ೧೫೦ ಕ್ಕೂ ಹೆಚ್ಚು ವಿದ್ಯಾ ಕೇಂದ್ರಗಳನ್ನು ಈ ಮಠ ನಡೆಸುತ್ತ, ಬರಿ ರಾಜಕೀಯ ಅಥವಾ ಧಾರ್ಮಿಕ ಕೇಂದ್ರವಾಗದೆ, ಮನುಷ್ಯನ ಅಜ್ಞಾನವನ್ನು ಹೋಗಲಾಡಿಸುವ ಪ್ರಯತ್ನವನ್ನು ಯಾವತ್ತಿಗೂ ಜಾರಿಯಲ್ಲಿಟ್ಟಿದೆ.

ದೂರದ ಹರಿದ್ವಾರ, ಕಾಶಿಗೆ ಪ್ರವಾಸ ಹೋಗಿ, ಅಲ್ಲಿ ಗಂಗೆಯಲ್ಲಿ ಮುಳುಗೆದ್ದು ಪಾಪ ಪರಿಹಾರ ಎನ್ನುವ ಭ್ರಮೆಯಲ್ಲಿ ವಾಪಸ್ಸು ಬರುವುದಕ್ಕಿಂತ, ನಮ್ಮ ಸುತ್ತ ಮುತ್ತಲಿನ ಮಠಗಳ ಅಂಗಳದ ಕಸ ಬಳೆದು, ನೀರು ಹೊತ್ತು ಹಾಕಿ, ಬಂದವರಿಗೆ ಊಟ ಬಡಿಸಿ, ಶರಣರ ಸಾನ್ನಿಧ್ಯದಲ್ಲಿ ಪ್ರಾರ್ಥಿಸಿದರೆ ಎಂಥಹ ಕಷ್ಟಕರ ಜೀವನವಾದರೂ ಸಹನೀಯವಾದೀತು ಎನ್ನುವುದು ನನ್ನ ಅಭಿಪ್ರಾಯ.





Saturday, April 3, 2021

ಯುದ್ಧಗಳ ಬದಲಾದ ಸ್ವರೂಪವೇ ಚುನಾವಣೆ

ಮನುಷ್ಯ ಚರಿತ್ರೆ ದಾಖಲಿಸುವ ಮುಂಚೆಯೇ ಬುಡಕಟ್ಟು ಜನಾಂಗಗಳು ಗಡಿಗಾಗಿ, ತಮ್ಮ ಶ್ರೇಷ್ಠತೆ ತೋರ್ಪಡಿಸುವುದಕ್ಕಾಗಿ ಕಾದಾಡುತ್ತಿದ್ದರಲ್ಲ. ಅಲ್ಲಿಂದ 1945 ರವರೆಗಿನ ಎರಡನೇ ಜಾಗತಿಕ ಮಹಾ ಯುದ್ಧದವರೆಗೆ ಯುದ್ಧಗಳು ತಮ್ಮ ರಾಜನ ಅಳಿವು ಉಳಿವನ್ನು ನಿರ್ಧರಿಸುತ್ತಿದ್ದವು. ಆದರೆ ಎರಡನೇ ಜಾಗತಿಕ ಯುದ್ಧದಲ್ಲಿ ಹಿಟ್ಲರ್-ಸ್ಟಾಲಿನ್, ಅಮೇರಿಕ-ಜಪಾನ್ ನಡುವಿನ ಹಣ ಹಣಿ ಅಪಾರ ಪ್ರಮಾಣದ ಸಾವು ನೋವು ತಂದ ನಂತರ ಮನುಷ್ಯ ಯುದ್ಧಗಳ ಬದಲಿಗೆ ಚುನಾವಣೆಯನ್ನು ಕಾರ್ಯರೂಪಕ್ಕೆ ತಂದ. ಚುನಾವಣೆಗಳು ಹೊಸ ಜಗತ್ತಿನ ಹರಿಕಾರರಾಗದೆ  ಹಳೆಯ ಯುದ್ಧಗಳ ಹೊಸ ಸ್ವರೂಪವಾಗಿ ಬದಲಾದವು.


ಹಿಂದೆ ಒಬ್ಬ ರಾಜ ಇನ್ನೊಬ್ಬ ರಾಜನ ಮೇಲೆ ಕಾದಾಡಿದರೆ ಇಂದು ಒಂದು ರಾಜಕೀಯ ಪಕ್ಷ ಇನ್ನೊಂದು ಪಕ್ಷದ ಮೇಲೆ ಯುದ್ಧ ಸಾರುತ್ತದೆ. ಅಂದಿಗೆ ರಣ ಕಹಳೆ ಊದಿದರೆ ಇಂದಿಗೆ ಲೌಡ್ ಸ್ಪೀಕರ್ ಗಳ ಹಾವಳಿ. ಅಂದಿಗೆ ದುಡ್ಡು ಕೊಟ್ಟು ಸೈನಿಕರನ್ನು ಮತ್ತು  ಅವರ ನಾಯಕರನ್ನು ಖರೀದಿ ಮಾಡಿದರೆ, ಇಂದಿಗೆ ಮತದಾರರನ್ನು ಮತ್ತು ಎದುರಾಳಿ ನಾಯಕರನ್ನು ಖರೀದಿಸಲಾಗುತ್ತದೆ. ಅಂದಿಗೆ ಮೋಸದಿಂದ ಎದುರಾಳಿಗಳನ್ನು ಇಕ್ಕಟ್ಟಿಗೆ ಸಿಕ್ಕಿಸಿದರೆ, ಇಂದಿನ ಸಿ.ಡಿ. ಪ್ರಕರಣಗಳು ಇನ್ನೇನು? ಅಂದು ಯುದ್ಧವೆಂದರೆ ಹೊಡೆದಾಟ. ಇಂದಿಗೆ ಅದು ವಾಕ್ಸಮರ. ಆವೇಶ ಹೆಚ್ಚಾದಾಗ ಅದು ಬಡಿದಾಟವಾಗಿ ಬದಲಾಗವುದು ಇಂದಿಗೂ ಇದೆ. ಅಂದಿಗೆ ರಾಜ ತನ್ನ ಅಂಗರಕ್ಷಕರ ಜೊತೆ ಬರುತ್ತಿದ್ದ. ಇಂದಿನ ಪುಢಾರಿಗಳು ತಮ್ಮ ಹುಡುಗರ ಗುಂಪನ್ನು ಕಟ್ಟಿಕೊಂಡು ಬರುತ್ತಾರೆ.


ಅಂದಿನ ರಾಜ, ಮಹಾರಾಜರು ಇಂದಿನ ಮುಖ್ಯ ಮಂತ್ರಿ, ಪ್ರಧಾನ ಮಂತ್ರಿಗಳಾಗಿ ಬದಲಾಗಿದ್ದಾರೆ ರಾಜನನ್ನು ವಿರೋಧಿಸಿದ ಸಾಮಾನ್ಯರಿಗೆ ಅಂದಿಗೂ ಉಳಿಗಾಲ ಇರಲಿಲ್ಲ, ಇಂದಿಗೂ ಇಲ್ಲ. ಪ್ರಜಾಪ್ರಭುತ್ವ ಮತ್ತು ಚುನಾವಣೆಗಳು ಯುದ್ಧಗಳ ರಕ್ತದೋಕುಳಿ ತಪ್ಪಿಸಿದರೂ, ನಿಜ ಬದಲಾವಣೆಯನ್ನು ತರಲೇ ಇಲ್ಲ. ಬುದ್ಧ, ಶಂಕರ, ಬಸವ, ವಿವೇಕಾನಂದರಂತಹ ಸಮಾಜ ಸುಧಾರಕರು ಮನುಷ್ಯನ ಆಸೆಗಳಿಗೆ ಧರ್ಮ-ಕಾಯಕದ ಕಡಿವಾಣ ಹಾಕಿದರೂ, ಅಧಿಕಾರ ದಾಹದ ಮನುಜರು ರಕ್ತ ಬೀಜಾಸುರನ ಸಂತತಿಯಂತೆ ಹಬ್ಬುತ್ತಲಿದ್ದಾರೆ. ಯುದ್ಧ ಗೆದ್ದವರೇ ಅಂದಿಗೆ ರಾಜರು. ಚುನಾವಣೆಗಳನ್ನು ರಣಭೂಮಿಯನ್ನಾಗಿ ಮಾಡಿಕೊಂಡವರೇ ಇಂದಿನ ಪ್ರಭುಗಳು. 


ಪ್ರಜೆಗಳು ಅಂದಿಗೆ ರಾಜ ಮನೆತನಗಳನ್ನು ಕಂದಾಯ ಕೊಟ್ಟು ಸಲಹಿದರೆ, ಇಂದಿಗೆ ರಾಜಕೀಯ ಪಕ್ಷಗಳನ್ನು ಸಲಹುತ್ತಾರೆ. ಕಾಲ ಬದಲಾಗಿ, ಬದುಕಿನ ಹೊರ ನೋಟ ಬದಲಾದರೂ, ಎಂದೆಂದಿಗೂ ಬದಲಾಗದ ಮನುಜನ ಆಂತರಿಕ ಸ್ವಭಾವದ ಅತಿರೇಕಗಳು ಅಂದಿಗೆ ಯುದ್ಧಗಳಾಗಿ ಬದಲಾದರೆ, ಇಂದಿಗೆ ಅವು ಚುನಾವಣೆಗಳಾಗಿ ಬದಲಾಗಿವೆ.

Monday, March 29, 2021

ನೆರವಾದವರು ಕಣ್ಮರೆಯಾದಾಗ

"ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು" ಎಂದು ಗಾದೆ ಮಾತು ಇದೆಯಲ್ಲ. ಅದು ೨೦೦೯ ರ ಸಮಯ. ನಮ್ಮೂರಾದ ಮಸ್ಕಿಯಲ್ಲಿ ಮನೆ ಕಟ್ಟಿ, ಅದೇ ಮನೆಯಲ್ಲಿ ನಾನು ಮದುವೆಯಾಗ ಹೊರಟಿದ್ದೆ. ಮನೆ ಕಟ್ಟಲು ಸ್ನೇಹಿತರ ಸಹಾಯವಿತ್ತಾದರೂ, ಅವರು ನನಗಿಂತ ತುಂಬಾ ಅನುಭವಸ್ಥರೆನಿದ್ದಿಲ್ಲ. ಕಳ್ಳ ಸುಳ್ಳರೇ ತುಂಬಿರುವ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ, ಸುಣ್ಣಕ್ಕೂ ಬೆಣ್ಣೆಗೂ ವ್ಯತ್ಯಾಸ ತಿಳಿಯದ ನನಗೆ ಹೊಸ ಜಗತ್ತಿನ ಪಾಠಗಳ ಅನಾವರಣ ಆಗುತ್ತಲಿತ್ತು. ಒಪ್ಪಿಕೊಂಡು ಕೆಲಸಕ್ಕೆ ಬಂದ ಗಾರೆ ಕೆಲಸದವರು ಕೆಲಸದ ಅರ್ಧದಲ್ಲೇ ಕಣ್ಮರೆಯಾಗಿ ಬಿಡುತ್ತಿದ್ದರು. ಮತ್ತೆ ಅವರನ್ನು ನಾನು ಹುಡುಕಿ ತಂದು ಕೆಲಸಕ್ಕೆ ಹಚ್ಚಿದರೆ, ಕೆಲ ದಿನಗಳಲ್ಲಿ ಅವರು ಮತ್ತೆ ಕಣ್ಮರೆ. ಹೊಸಬರನ್ನು ಕೆಲಸಕ್ಕೆ ತಂದರೆ, ಹಳಬರು ಬಂದು ತಕರಾರು ತೆಗೆಯುತ್ತಿದ್ದರು. ನನ್ನ ಅನನುಭವದ ಜೊತೆಗೆ, ಶತ್ರುಗಳ ಕೈವಾಡವೂ ಸೇರಿ ಮನೆ ಕೆಲಸ ಮುಂದುವರೆಸುವುದು ಕಗ್ಗಂಟಾಗಿತ್ತು. 


ಆ ಸಂದರ್ಭದಲ್ಲಿ ನನಗೆ ಭೇಟಿಯಾದವನೇ ರಮೇಶ. ಜನ ಅವನನ್ನು ಕರಾಟೆ ರಮೇಶ ಎನ್ನುತ್ತಿದ್ದರು. ಚಿಕ್ಕ ಮಕ್ಕಳಿಗೆ ಕರಾಟೆ ಹೇಳಿಕೊಡುತ್ತಿದ್ದ ಅವನಿಗೆ ಅದು ಹೊಟ್ಟೆ ತುಂಬಿಸದೆ, ತನ್ನ ಕುಲ ಕಸುಬಾದ ಗಾರೆ ಕೆಲಸಕ್ಕೆ ಇಳಿದಿದ್ದ. ಅವನು ಅರ್ಧಕ್ಕೆ ನಿಂತ ನನ್ನ ಮನೆ ಕೆಲಸವನ್ನು ಕೈಗತ್ತಿಕೊಂಡ. ಹಳಬರು ನನ್ನ ಜೊತೆ ತಕರಾರಿಗೆ ಬಂದು, ದೈಹಿಕ ಘರ್ಷಣೆಯ ಮಟ್ಟಕ್ಕೆ ಇಳಿದಾಗ ಈ ರಮೇಶ ನನ್ನ ನೆರವಿಗೆ ಧಾವಿಸಿ ಬಂದ. ಬಂದವರು ಕೈ ಕೈ ಹಿಸುಕಿಕೊಂಡು ಏನು ಮಾಡಲಾಗದೆ ಹಿಂತಿರುಗಿದರು. ಇನ್ನೊಂದು ದಿನ, ಈ ರಮೇಶನನ್ನು ನನ್ನ ಜೊತೆ ಹೋಟೆಲ್ ಒಂದಕ್ಕೆ ತಿಂಡಿಗೆ ಎಂದು ಕರೆದುಕೊಂಡು ಹೋಗಿದ್ದೆ. ಅಲ್ಲಿ ಅವಸರದಲ್ಲಿ ಆಫೀಸ್ ನವರು ನನಗೆ ಕೊಟ್ಟಿದ್ದ ದುಬಾರಿಯಾದ 'ಬ್ಲಾಕ್ ಬೆರಿ' ಫೋನ್ ಬೀಳಿಸಿಕೊಂಡು ಬಿಟ್ಟಿದ್ದೆ. ಅದನ್ನು ಬೇರೆಯವರು ತೆಗೆದುಕೊಂಡು ಆ ಕ್ಷಣವೇ ಅಲ್ಲಿಂದ ಪರಾರಿಯಾಗಿದ್ದರು. ಇದನ್ನೆಲ್ಲಾ ದೂರದಿಂದ ಗಮನಿಸಿದ್ದ ರಮೇಶ ಅವರ ಬೆನ್ನತ್ತಿ, ನನ್ನ ಫೋನ್ ವಾಪಸ್ಸು ತಂದಾಗ ನನಗೆ ಹೋದ ಜೀವ ಬಂದಂತಾಗಿತ್ತು. ನಾನು ನನ್ನ ಮನೆಯ ಕೆಲಸದ ಹೆಚ್ಚಿನ ಜವಾಬ್ದಾರಿ ಅವನಿಗೆ ಹೊರಿಸಿ, ಅವನು ಹೆಚ್ಚು ದುಡಿಯುವಂತೆ ನೋಡಿಕೊಂಡೆ. ಮುಗಿಸಲು ಸಾಧ್ಯವೇ ಎಂದುಕೊಂಡಿದ್ದ ಮನೆ ಕೆಲಸ ಕೆಲವು ತಿಂಗಳುಗಳಲ್ಲಿ ಮುಗಿದೇ ಹೋಯಿತು. ಗೃಹ ಪ್ರವೇಶದ ಪೂಜೆಗೆ, ರಮೇಶನಿಗೆ ಅವನಿಷ್ಟದ ಜೀನ್ಸ್ ಪ್ಯಾಂಟ್, ಜಾಕೆಟ್ ಕೊಡಿಸಿ ನಾನು ಸಂತಸ ಪಟ್ಟಿದ್ದೆ.


ಎಲ್ಲಿಯಾದರೂ ಹೊಸ ಕೆಲಸ ಕೊಡಿಸುವಂತೆ ನನಗೆ ರಮೇಶ ಗಂಟು ಬಿದ್ದಿದ್ದ. ಆದರೆ ಅಷ್ಟೇನೂ ಕೌಶಲ್ಯತೆ ಇಲ್ಲದ ಅವನಿಗೆ ಹೆಚ್ಚಿನ ಕೆಲಸ ದೊರಕುತ್ತಿದ್ದಿಲ್ಲ. ಆಗೊಮ್ಮೆ, ಈಗೊಮ್ಮೆ ಅನಿವಾರ್ಯ ಸಮಯದಲ್ಲಿ ನನ್ನ ಹತ್ತಿರ ದುಡ್ಡು ಕೇಳಿ ಪಡೆಯುತ್ತಿದ್ದ. ದುಡ್ಡಿನ ವಿಷಯದಲ್ಲಿ ಅವನು ಹೆಸರು ಕೆಡಿಸಿಕೊಂಡಿದ್ದಾನೆ ಎಂದು ನನಗೆ ಸ್ನೇಹಿತನೊಬ್ಬ ತಿಳಿಸಿದ್ದ. ಇದರ ನಡುವೆ ಅವನು ಕುಡಿಯುವುದು ಅತಿಯಾಗಿತ್ತು. ರಾತ್ರಿ ಕುಡಿದು ಫೋನ್ ಮಾಡಿ ನನ್ನ ಹತ್ತಿರ ಬೈಸಿಕೊಂಡಿದ್ದ. ನನ್ನ ಜಗತ್ತು ಮತ್ತು ಸಮಸ್ಯೆಗಳು ಕೂಡ ಬೇರೆಯಾಗಲಾರಂಭಿಸದ್ದವು. ಕೆಲ ವರ್ಷಗಳಿಗೆ ನನ್ನ ಮತ್ತು ರಮೇಶನ ಸಂಪರ್ಕ ಕಡಿದೇ ಹೋಯಿತು.


ಮೊನ್ನೆ ಊರಿಗೆ ಹೋದಾಗ ರಮೇಶನ ಬಗ್ಗೆ ವಿಚಾರಿಸಿದೆ. ಅವನು ಕೋವಿಡ್ ಸಮಸ್ಯೆಯಲ್ಲಿ ತೀರಿ ಹೋದ ಎಂದು ತಿಳಿಯಿತು. ಅವನಿಗೆ ಇತರ ಅನಾರೋಗ್ಯ ಇತ್ತು ಎಂದು ಕೂಡ ತಿಳಿಸಿದರು. ಕೆಲ ತಿಂಗಳುಗಳ ಹಿಂದೆ ನಮ್ಮ ಮನೆಯ ಒಂದು ಚಿಕ್ಕ ಕೆಲಸ ಮಾಡಿಕೊಟ್ಟು ಹೋಗಿದ್ದ. ಅಷ್ಟೊತ್ತಿಗೆ ಆಗಲೇ ಅವನಲ್ಲಿ ಅನಾರೋಗ್ಯ ಮನೆ ಮಾಡಿತ್ತು. ಒಂದು ಸಲ ಭೇಟಿಯಾದರೆ ಆಯಿತು ಎಂದು ನಾನು ಅಂದುಕೊಳ್ಳುವಷ್ಟರಲ್ಲಿ ಅವನು ಲೋಕವನ್ನೇ ತ್ಯಜಿಸಿದ್ದ.


ಅಂತಹ ಹೇಳಿಕೊಳ್ಳುವಂತ ಕೆಲಸಗಾರ ಅವನಾಗಿರಲಿಲ್ಲ. ಹಾಗಾಗಿ ನನ್ನ ಊರಿನಲ್ಲಿ ಮತ್ತು ನನ್ನ ಸ್ನೇಹಿತರಲ್ಲಿ ಅವನಿಗೆ ಯಾವ ವಿಶೇಷ ಸ್ಥಾನವು ಇರಲಿಲ್ಲ. ಆದರೆ ಬುದ್ಧಿ ತಿಳಿಯದ ಸಮಯದಲ್ಲಿ, ನನಗೆ ಆಸರೆಯಾಗಿ ನಿಂತಿದ್ದ. ಅಸಹಾಯಕ ಪರಿಸ್ಥಿತಿಯಲ್ಲಿ, ನನ್ನ ಕೈ ಬಲ ಪಡಿಸಿದ್ದ. ಅವನ ಸಾವಿನ ಸುದ್ದಿ ನೆರವಾದವರು ಕಣ್ಮರೆಯಾದಾಗ ಹುಟ್ಟಿಸುವ ವಿಷಾದವನ್ನು ನನ್ನಲ್ಲಿ ಕೂಡ ಹುಟ್ಟಿಸಿ ಹೋಯಿತು.

ವಯಸ್ಸು, ಭಾಷೆಗಳು ಅಡ್ಡಿಯಾಗದ ಸ್ನೇಹ

ಸುಮಾರು ಹತ್ತು ವರ್ಷಗಳ ಹಿಂದೆ ಅಮೆರಿಕೆಯ ಸಾಂಟಾ ಕ್ಲಾರಾ ಪಟ್ಟಣದಲ್ಲಿ 'ಕ್ವಾಲಿಟಿ ಇನ್'  ಎಂಬ  ಹೋಟೆಲಿನಲ್ಲಿ ಸುಮಾರು ಎರಡು ತಿಂಗಳುಗಳು ಉಳಿದುಕೊಂಡಿದ್ದೆ. ಜೊತೆಗಿದ್ದ ಸಹೋದ್ಯೋಗಿಗಳು ಒಂದೆರಡು ವಾರದಲ್ಲಿ ವಾಪಸ್ಸು ಹೊರಟು ಬಿಟ್ಟರು. ನಾನು ಒಬ್ಬಂಟಿಯಾಗಿ ಹಲವು ವಾರ ಕಳೆಯಬೇಕಾದ ಅಗತ್ಯ ನನಗಿತ್ತು. ಚಳಿಗಾಲದ ಆ ಸಮಯದಲ್ಲಿ ಪ್ರವಾಸಿಗರು ತುಂಬಾ ಕಡಿಮೆ ಇದ್ದರು. ಇಡೀ ಹೋಟೆಲಿನಲ್ಲಿ ಒಂದೆರಡು ರೂಮುಗಳನ್ನು ಬಿಟ್ಟರೆ ಉಳಿದವೆಲ್ಲ ಖಾಲಿ ಖಾಲಿ. ಹಗಲು ಹೊತ್ತಿನಲ್ಲಿ ಆಫೀಸ್ ನಲ್ಲಿ ಹೊತ್ತು ಕಳೆದದ್ದು ಗೊತ್ತಾಗುತ್ತಿರಲಿಲ್ಲ. ಆದರೆ ಸಾಯಂಕಾಲಗಳು ಮತ್ತು ವಾರಾಂತ್ಯದಲ್ಲಿ ಏನು ಮಾಡುವುದು?  ತೆಗೆದುಕೊಂಡು ಹೋಗಿದ್ದ ಪುಸ್ತಕಗಳೆನ್ನೆಲ್ಲ ಓದಿ ಮುಗಿಸಿ ಆಯಿತು. ಹತ್ತಿರವಿದ್ದ ಶಾಪಿಂಗ್ ಸೆಂಟರ್ ಗಳೆನ್ನೆಲ್ಲ ಸುತ್ತಿದ್ದಾಯಿತು. ಆದರೂ ಬೇಸರ ಕಳೆಯಲೊಲ್ಲದು. 


ಒಂದು ಸಾಯಂಕಾಲ ಹೋಟೆಲ್ ಗೆ ಮರಳಿದಾಗ, ಹೋಟೆಲ್ ನ ಮಾಲೀಕ ತನ್ನ ಆಫೀಸ್ ನ ಹೊರಗೆ ನಿಂತು ನನಗೆ ಒಳ ಬರುವಂತೆ ಆಹ್ವಾನಿಸಿದ. ಸುಮಾರು ಎಪ್ಪತ್ತು ವರುಷ ಮೀರಿದ, ಧಡೂತಿ ದೇಹದ, ದಕ್ಷಿಣ ಕೊರಿಯಾ ಮೂಲದ ವ್ಯಕ್ತಿ ಆತ. ತುಂಬಾ ಮಿತ ಭಾಷಿಯಾದ ಆತ ನನ್ನನ್ನು ಮಾತನಾಡಿಸಿದ್ದು ನನಗೆ ಆಶ್ಚರ್ಯ ಮತ್ತು ಸಂತೋಷ ಒಟ್ಟಿಗೆ ಆಯಿತು. ಹೃದಯ ಬೇನೆಯಿಂದ ಬಳಲುತ್ತಿದ್ದ ಆತ ತುಂಬಾ ಪ್ರಯಾಸ ಪಟ್ಟು, ಹರುಕು-ಮುರುಕು ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದ.  ಆತನ ಹೆಸರು ಯುವಾನ್ ಎಂದು ತಿಳಿಯಿತು. ಆದರೆ ಆತನ ಉಳಿದ ಮಾತುಗಳು ನನಗೆ ಅರ್ಥ ಆಗುತ್ತಿರಲಿಲ್ಲ. ಆತನ ಜೊತೆ ಮಾತನಾಡುತ್ತ ನಾನು ಯಾವುದೊ ಸಂಬಂಧ ಇಲ್ಲದ ಪ್ರಶ್ನೆಗಳನ್ನು ಕೇಳಿದೆ. ಆತ ಅದಕ್ಕೆ ಅರ್ಥವಾಗದಂತೆ ಉತ್ತರ ಕೊಟ್ಟ. ನಮ್ಮ ಮಾತುಕತೆ ಅಸಮರ್ಪಕ ಆಗಿದ್ದರೂ, ನಾನು ಸಮಾಧಾನದಿಂದ ಆತನ ಮಾತುಗಳನ್ನು ಕೇಳಿಸಿಕೊಳ್ಳುವುದು ಆತನಿಗೆ ಇಷ್ಟವಾಗಿ ಹೋಯಿತು. ಆ ರಾತ್ರಿ ನನ್ನ ರೂಮಿಗೆ ಹಣ್ಣಿನ ಬುಟ್ಟಿ ಕಳುಹಿಸಿಕೊಟ್ಟ.


ದಿನ ಸಾಯಂಕಾಲ ನಾನು ಬರುವುದನ್ನು ಎದುರು ನೋಡುತ್ತಾ ಆತ ನನ್ನನು ಪ್ರತಿ ದಿನ ಮಾತನಾಡಿಸಲಾರಂಭಿಸಿದ. ನನಗೆ ಕ್ರಮೇಣ ಆತನ ಮಾತುಗಳು ಅರ್ಥ ಆಗಲಾರಂಭಿಸಿದವು. ನಮ್ಮ ಪರಿಚಯ ಸ್ನೇಹಕ್ಕೆ ತಿರುಗಿತು. ಉಳಿದೆಲ್ಲ ಭಾರತೀಯರು ತುಂಬಾ ಗಲಾಟೆ ಹಾಕುತ್ತಾರೆ ಆದರೆ ನಾನು ಹಾಗಲ್ಲ ಎಂದು ತಿಳಿಸಿದ. ತನ್ನ ಕುಟುಂಬದ, ಆರೋಗ್ಯದ ಸಮಸ್ಯೆಗಳನ್ನು ನನ್ನ ಹತ್ತಿರ ಹೇಳುತ್ತಿದ್ದ. ಒಬ್ಬನೇ ಇದ್ದು ಬೇಜಾರಾಗಿ ಹೋಗಿದ್ದ ನಾನು  ಸುಮ್ಮನೆ ಹೂಂ ಗುಡುತ್ತ, ಆಗೊಮ್ಮೆ ಈಗೊಮ್ಮೆ ನನಗೆ ತಿಳಿದದ್ದು ಹೇಳುತ್ತಾ ಹೋಗುತ್ತಿದ್ದೆ. ಅಷ್ಟರಲ್ಲಿ ನಾನು ಭಾರತಕ್ಕೆ ವಾಪಸ್ಸಾಗುವ ದಿನ ಬಂದೇ ಬಿಟ್ಟಿತು. ಅಂದು ಆತ ನನಗೆ ಊಟಕ್ಕೆ ಎಂದು ತನಗೆ ಇಷ್ಟವಾದ ಕಡೆ ಕರೆದುಕೊಂಡು ಹೋದ. ದಕ್ಷಿಣ ಕೊರಿಯಾದ ಆ ರೆಸ್ಟಾರಂಟ್ ನಲ್ಲಿ ಸಸ್ಯಾಹಾರಿ ತಿಂಡಿ ಯಾವುದೂ ಇರಲಿಲ್ಲ. ಕೊನೆಗೆ ಅಡುಗೆ ಮನೆಯಿಂದ ಬಾಣಸಿಗನನ್ನು ಕರೆದು ಅವರ ಭಾಷೆಯಲ್ಲಿ ಏನೋ ಹೇಳಿದ. ಅನ್ನಕ್ಕೆ ಮೊಟ್ಟೆ ಸೇರಿಸಿ ಮಾಡಿದ ಒಂದು ವಿಚಿತ್ರ ಬಗೆಯ ಭಕ್ಷ್ಯ ನನಗಾಗಿ ತಯಾರಾಗಿ ಬಂತು. ಮತ್ತೆ ಉಳಿದುಕೊಂಡಿದ್ದ ಹೋಟೆಲಿಗೆ ವಾಪಸ್ಸು ಕರೆ ತಂದು, ಇನ್ನೊಂದು ಸಲ ಬಂದಾಗ ಬಂದು ಕಾಣು ಎಂದು ಹೇಳಿ, ಕೊನೆಯ ದಿನದ ಹೋಟೆಲಿನ ಚಾರ್ಜ್ ತೆಗೆದುಕೊಳ್ಳದೆ ನನ್ನನ್ನು ಬೀಳ್ಕೊಟ್ಟ. 


ಒಂದೆರಡು ವರ್ಷದ ನಂತರ ನಾನು ಅಲ್ಲಿಗೆ ಹೋದಾಗ ಬೇರೆ ಹೋಟೆಲಿನಲ್ಲಿ ಉಳಿದುಕೊಂಡರೂ, ಆತನನ್ನು ಭೇಟಿಯಾಗಲು ಹೋದೆ. ಅನಾರೋಗ್ಯದ ಕಾರಣ ಆತ ಹೋಟೆಲಿಗೆ ಬರುತ್ತಿಲ್ಲ, ಆತನ ಮಕ್ಕಳು ಹೋಟೆಲ್ ನಡೆಸುತ್ತಾರೆ ಎಂದು ತಿಳಿಯಿತು. ನಮ್ಮ ಅನೀರೀಕ್ಷಿತ ಸ್ನೇಹಕ್ಕೆ ಅಲ್ಲಿಗೆ ತೆರೆ ಬಿದ್ದಿತು.



Friday, March 26, 2021

ಮೆಜೆಸ್ಟಿಕ್ ಅನ್ನುವ ಮಾಯಾವಿ ಲೋಕ

ನಾನು ಬೆಂಗಳೂರಿಗೆ ಬಂದು ಇಪ್ಪತ್ತು ವರ್ಷಗಳಿಗೂ ಮಿಕ್ಕಿತು. ಊರಿಗೆ ಬಂದವಳು ನೀರಿಗೆ ಬರದೇ ಇರುತ್ತಾಳೆಯೇ ಎನ್ನುವ ಹಾಗೆ ನಾನು  ಈ ಮೆಜೆಸ್ಟಿಕ್ಕಿಗೆ ನೂರಾರು ಸಲ ಬಂದಿದ್ದೇನೆ. ಪ್ರತಿ ಸಲವೂ ಇಲ್ಲಿರುವ ವಿರೋಧಾಭಾಸವು ಅಚ್ಚರಿ ಮೂಡಿಸುತ್ತದೆ. ಇಲ್ಲಿರುವ ಕಟ್ಟಡಗಳಲ್ಲಿ ಲಾಜ್, ಬಾರ್, ಟ್ರಾವೆಲ್ ಏಜನ್ಸಿ ಗಳದ್ದೇ ದರ್ಬಾರು. ಆದರೆ ಬೀದಿಯಲ್ಲಿ ಶೇಂಗಾ, ಪಾನ್ ಬೀಡದಿಂದ ಹಿಡಿದು ಅತ್ಯಾಧುನಿಕ ಇಲೆಕ್ಟ್ರಾನಿಕ್ ಉಪಕರಣಗಳು ಲಭ್ಯ. ಸುಸಜ್ಜಿತ ಹೋಟೆಲಿನಲ್ಲಿ ನೀವು ೩೦೦ ರೂಪಾಯಿ ಕೊಟ್ಟು ಹೊಟ್ಟೆ ತುಂಬಿಸಿಕೊಂಡರೆ, ಅದನ್ನೇ ನೀವು ಮೂವತ್ತು ರೂಪಾಯಿಯಲ್ಲಿ ಆ ಹೋಟಲ್ ನ ಎದುರಿಗೆ ಇರುವ ಬಂಡಿಯಲ್ಲಿ ಎಗ್ ರೈಸ್ ತಿಂದು ತುಂಬಿಸಿಕೊಳ್ಳಬಹುದು. ಇಲ್ಲವೇ ನಿಮ್ಮ ಜೇಬು ಖಾಲಿ ಇದ್ದರೆ, ಹತ್ತು ರೂಪಾಯಿಗೆ ಎರಡು ಬಾಳೆ ಹಣ್ಣು ತಿಂದು ಬಸ್ ಹತ್ತಬಹುದು. ಹೀಗೆ ನಿಮ್ಮ ಜೇಬಿನಲ್ಲಿರುವ ದುಡ್ಡಿಗೆ ತಕ್ಕಂತೆ ಇಲ್ಲಿ ಬೀದಿಯಿಂದ ಆಕಾಶದವರೆಗೆ ಏಣಿ ಉಂಟು. ಇದು ಮೆಜೆಸ್ಟಿಕ್ ನಲ್ಲಿ ಕಾಣ ಸಿಕ್ಕ ಹಾಗೆ ಬೆಂಗಳೂರಿನ ಇತರೆ ಪ್ರದೇಶಗಳಲ್ಲಿ ಕಂಡು ಬರುವುದಿಲ್ಲ. ಏಕೆಂದರೆ ಬೆಂಗಳೂರು ಎನ್ನುವ ಊರು ನಿಮ್ಮ ಆದಾಯಕ್ಕೆ ತಕ್ಕಂತೆ ನಿಮ್ಮನ್ನು ವ್ಯವಸ್ಥಿತವಾಗಿ ವಿಂಗಡಿಸುತ್ತ ಹೋಗುತ್ತದೆ. ಉದಾಹರಣೆಗೆ ವೈಟ್ ಫೀಲ್ಡ್ ನಲ್ಲಿರುವ ryaan ಇಂಟರ್ನ್ಯಾಷನಲ್ ಸ್ಕೂಲ್ ಅಥವಾ ಸಹಕಾರ ನಗರದಲ್ಲಿರುವ ಕೆನಡಿಯನ್ ಸ್ಕೂಲ್ ಗೆ ನೀವು ಮಾರುತಿ ಕಾರಲ್ಲಿ ಹೋದರೆ ಅಲ್ಲಿನ ವಾಚುಮನ್  ನಿಮ್ಮನ್ನು ನಿಮಗೆ ಈ ಸ್ಕೂಲ್ ಸರಿ ಹೊಂದುವುದಿಲ್ಲ ಎಂದು ನಿಮಗೆ ವಾಪಸ್ಸು ಕಳುಹಿಸುತ್ತಾನೆ. ಹಾಗೆಯೇ ಇಲ್ಲಿರುವ ಕೆಲವು ಕ್ಲಬ್ ಗಳು ಹಾಗೆಯೆ ರೆಸಾರ್ಟ್ ಗಳು ಕಡಿಮೆ ವೆಚ್ಚದವರಿಗೆ ನೋಟಕ್ಕೂ ಸಹ ಸಾಧ್ಯವಾಗುವುದಿಲ್ಲ. ಕೋರಮಂಗಲ, ಇಂದಿರಾನಗರದಲ್ಲಿ ನೀವು ವಾಸಿಸಲು ನಿಮ್ಮ ಆದಾಯ ಪ್ರತಿ ತಿಂಗಳಿಗೂ ಕೆಲ ಲಕ್ಷಗಳಿಗೂ ಮಿಕ್ಕಬೇಕು.


ನೀವು ಮುಂಬೈ, ದೆಹಲಿ ಸುತ್ತಿದ್ದರೆ ಈ ತರಹದ ವಿರೋಧಾಭಾಸವನ್ನು ಊರಿನ ಉದ್ದಗಲಕ್ಕೂ ಕಾಣಬಹುದು. ಆದರೆ ನಮ್ಮ ಬೆಂಗಳೂರು ಮಾತ್ರ ಮೆಜೆಸ್ಟಿಕ್ ಹೊರತು ಪಡಿಸಿ ಬಡವ - ಶ್ರೀಮಂತರನ್ನು ಒಂದೇ ಉಸಿರಿನಲ್ಲಿ ಮಾತನಾಡಿಸುವುದಿಲ್ಲ.  ಹೀಗೆ ಕಾಸಿಗೆ ತಕ್ಕಂತೆ ಕಜ್ಜಾಯ ಎನ್ನುವ ಊರಿನ ಮೆಜೆಸ್ಟಿಕ್ ಭಾಗ ಮಾತ್ರ ಎಲ್ಲ ಜನರಿಗೂ ಕೇಂದ್ರ ಸ್ಥಳವಾಗಿ, ಅವರವರ ಭಾವಕ್ಕೆ, ಭಕುತಿಗೆ ತಕ್ಕಂತೆ ಸೇವೆ ಒದಗಿಸುತ್ತದೆ. ಹಾಗಾಗಿ ನನಗೆ ಇದು  ಮಾಯಾವಿ ಲೋಕದ ಹಾಗೆ ತೋರುತ್ತದೆ.