ನಾನು ಇಂದು ಬರೆಯುತ್ತಿರುವುದು ವರದಕ್ಷಿಣೆಯ ಅನ್ಯಾಯದ ಬಗ್ಗೆ ಅಲ್ಲ. ಆದರೆ ಮದುವೆಯ ನಂತರ ಹೆಂಡತಿಯರು ನಡೆಸುವ ಅನ್ಯಾಯದ ಬಗ್ಗೆ. ಮದುವೆಯನ್ನು ಒಂದು ವ್ಯಾಪಾರ ಮಾಡಿಬಿಡುವುದು ಬರೀ ಗಂಡಸಿಗೆ ಸೀಮಿತವಲ್ಲ. ಗಂಡಸು ನಡೆಸುವ ದೌರ್ಜನ್ಯ ತಡೆಯಲೆಂದೇ ಕಾನೂನುಗಳಿವೆ. ಮತ್ತು ಅದನ್ನು ಪ್ರತಿಭಟಿಸುವ ಹೆಣ್ಣು ಮಕ್ಕಳಿಗೆ ಸಮಾಜದ ಸಹಾಯ ದೊರಕುತ್ತದೆ. ಆದರೆ ದುರಾಸೆಗೆ ಬಿದ್ದ ಹೆಂಡತಿ, ಗಂಡನಿಗೆ ಆಸ್ತಿಯಲ್ಲಿ ಪಾಲು ಕೇಳುವಂತೆ ಇಲ್ಲವೇ ಯಾವುದೇ ದಾರಿಯಲ್ಲಾದರೂ ಗಂಟು ಸಂಪಾದಿಸುವಂತೆ ದುಂಬಾಲು ಬೀಳುತ್ತಾಳಲ್ಲ. ಅದು ಎಷ್ಟೋ ಗಂಡಸರನ್ನು ತಮಗೆ ಇಷ್ಟವಿಲ್ಲದಿದ್ದರೂ, ತಪ್ಪು ದಾರಿ ಹಿಡಿಯುವಂತೆ ಮಾಡಿ, ತಮ್ಮ ಜೀವನದ ಮೌಲ್ಯಗಳ ಜೊತೆ ಹೊಂದಾಣಿಕೆ ಮಾಡಿಕೊಂಡು, ಅಸಮಾಧಾನಕಾರ ಬದುಕನ್ನು ನಡೆಸುವಂತೆ ಮಾಡುತ್ತದೆ. ಅವನು ಹೆಂಡತಿ ಮಾತು ಕೇಳಲು ತಯಾರಿಲ್ಲವೋ, ಅವನ ಮನೆ ಅವನಿಗೆ ಒಂದು ಪ್ರೈವೇಟ ನರಕ. ಗಂಡನಿಗೆ ಎಲ್ಲಿ ಚುಚ್ಚಿದರೆ ಎಷ್ಟು ನೋವಾಗುತ್ತದೆ ಎಂದು ಸಂಪೂರ್ಣ ಅರಿತಿರುವ ಹೆಂಡತಿಯರು, ಶಿಕ್ಷೆ ಕೊಡುವುದರಲ್ಲಿ ತಾವು ಯಮನಿಗೂ ಒಂದು ಕೈ ಮುಂದು ಎನ್ನುವಂತೆ ವರ್ತಿಸುತ್ತಿರುತ್ತಾರೆ. ಗಂಡನಿಗೆ ಈ ಅನುಭವ ಒಂದು ಬಿಸಿ ತುಪ್ಪ. ಹೊರಗೆ ಹೇಳಿಕೊಂಡರೆ, ಸಮಾಜ ಅವನನ್ನು ಹೀಯಾಳಿಸಿ ನಗುತ್ತದೆ. ಯಾವುದೊ ಹಿರಿಯರನ್ನು ಸಂಧಾನಕ್ಕೆ ಕರೆದರೆ, ಆ ಹೆಂಡತಿ ಅತ್ತು ಕರೆದು, ಎಲ್ಲ ಸಮಸ್ಯೆ ಗಂಡನದೇ ಎಂದು ಬಿಂಬಿಸಿಬಿಡುತ್ತಾಳೆ. ಅಲ್ಲಿಗೆ ಆ ಗಂಡನಿಗೆ ನೆಮ್ಮದಿಯಿಂದ ಬದುಕುವ ಎಲ್ಲ ಅವಕಾಶಗಳು ಮುಚ್ಚಿ ಹೋಗುತ್ತವೆ.
ಸಮಾಧಾನದ
ವಿಷಯವೆಂದರೆ ಈ ಸಮಸ್ಯೆ ಬಡ
ಕುಟುಂಬಗಳಲ್ಲಿ ಇಲ್ಲ. ಅಲ್ಲಿ ಗಂಡನಿಗೂ ಆಸ್ತಿ ಇಲ್ಲ, ಹೆಂಡತಿಗೂ ಇಲ್ಲ. ದುಡಿದರೆ ಹೊಟ್ಟೆ ತುಂಬಾ ಊಟ ಇಲ್ಲದಿದ್ದರೆ ಇಲ್ಲ
ಎನ್ನುವ ಕಡೆ ಆಸ್ತಿ ಸಮಸ್ಯೆ
ಎಲ್ಲಿಯದು? ಹಾಗೆಯೇ ಶ್ರೀಮಂತ ಕುಟುಂಬಗಳಲ್ಲಿ ಗಂಡ-ಹೆಂಡತಿಯರ ನಡುವೆ
ಮನಸ್ತಾಪ ಬಂದರೆ ಅದು ಸುಲಭದಲ್ಲಿ ಡೈವೋರ್ಸ್
ನಲ್ಲಿ ಕೊನೆಗೊಳ್ಳುತ್ತದೆ. ಹಾಗಾಗಿ ಈ ಸಮಸ್ಯೆ ಇರುವುದು
ಮಧ್ಯಮ ವರ್ಗದ ಕುಟುಂಬಗಳಲ್ಲಿ ಮಾತ್ರ. ಇರುವುದರಲ್ಲಿ ನೆಮ್ಮದಿಯಾಗಿ ಇರುವುದು ಅವರಿಗೆ ಬೇಕಿಲ್ಲ. ಹಾಗೆಯೇ ಅಪಾರ ಶ್ರೀಮಂತಿಕೆಯ ಕನಸು
ಕಾಣಲು ಅವರಿಗೆ ಹಗಲು-ರಾತ್ರಿಗಳು ಸಾಕಾಗುವುದಿಲ್ಲ.
ತಮ್ಮ ತಂದೆ-ತಾಯಿಗಳನ್ನು ದೇವರ
ಹಾಗೆ ಕಾಣುವ ಹೆಂಡತಿಯರಿಗೆ, ಗಂಡನ ತಂದೆ-ತಾಯಂದಿರು
ಸುಮ್ಮನೆ ತಿಂದು ಕೂಡುವ ದಂಡ-ಪಿಂಡಗಳ ಹಾಗೆ
ಕಾಣುತ್ತಾರೆ. ತಮ್ಮ ಸಹೋದರ-ಸಹೋದರಿಯರನ್ನು
ಅವರಿರುವ ಹಾಗೆ ಒಪ್ಪಿಕೊಳ್ಳುವ ಅವರು,
ಗಂಡನ ಸಂಬಂಧಿಕರಲ್ಲಿ ಕಾಣುವುದು ದೌರ್ಬಲ್ಯಗಳು ಮಾತ್ರ. ಎಷ್ಟು ಸಾಧ್ಯವೋ ಅಷ್ಟು ಬೇಗ ಆಸ್ತಿ ಭಾಗ
ಮಾಡಿ ಎಂದು ಹಟ ಹಿಡಿದು
ಕೂರುವ ಅವರು ತಾವು ಹಿಡಿದ
ಕೆಲಸದಲ್ಲಿ ಸಫಲರಾಗಿಬಿಡುತ್ತಾರೆ ಕೂಡ. ಹಾಗೆಯೇ ಗಂಡನಿಗೆ
ತನ್ನವರ ಜೊತೆ ಸೌಜನ್ಯದಿಂದ ಇರುವ
ಭಾಗ್ಯವನ್ನು ಕೂಡ ಕಳೆದುಬಿಡುತ್ತಾರೆ.
ವಿಚಾರ
ಮಾಡಿ ನೋಡಿದರೆ, ತಂದೆಯ ಆಸ್ತಿ ಮಗನಿಗೆ ಬರದೇ ಎಲ್ಲಿಗೆ ಹೋಗುತ್ತದೆ?
ಆದರೆ ಅದು ತಾನಾಗಿಯೇ ಆಗುವ
ಹೊತ್ತಿನವರೆಗೆ ಕಾಯುವ ತಾಳ್ಮೆ ಹೆಂಡತಿಯರಿಗಿಲ್ಲ. ತಾವು ಮದುವೆಯಾಗಿದ್ದು ಗಂಡನ
ಆಸ್ತಿಯ ವ್ಯಾಪಾರ ಸರಿಯಾಗಿ ನಡೆಯಲು ಎನ್ನುವಂತೆ ಅವಸರಕ್ಕೆ ಬಿದ್ದು ಮನೆ-ಮನಗಳನ್ನು ಮುರಿದುಬಿಡುತ್ತಾರೆ.
ಗಮನಿಸಿ ನೋಡಿ. ಎಷ್ಟೋ ಆಸ್ತಿ ಜಗಳಗಳು ಮೇಲ್ನೋಟಕ್ಕೆ ಗಂಡಸರ ಹೊಡೆದಾಟ ಅನ್ನಿಸಿದರೂ, ಅವರು ಕೈಗೊಂಬೆಯ ಹಾಗೆ
ವರ್ತಿಸಿರುತ್ತಾರೆ. ದೂರದರ್ಶನದಲ್ಲಿ ಬರುವ ಎಷ್ಟೋ ಧಾರಾವಾಹಿಗಳ
ವಿಷಯ ವಸ್ತು ಇದೇ ಆಗಿರುತ್ತದೆ. ಒಬ್ಬರ
ಮನೆ ಮುರಿದು ಬೀಗುವ ಹೆಂಗಸರಿಗೆ ಅದರ ಕರ್ಮದ ಫಲ
ಎನ್ನುವಂತೆ ಅವರಿಗೆ ಇವರ ಮನೆ ಮುರಿಯುವ
ಸೊಸೆಯಂದಿರೇ ಸಿಗುತ್ತಾರೆ. ಬಡಿದಾಡಿ ತೆಗೆದುಕೊಂಡ ಆಸ್ತಿ ಇವರ ಕೊನೆ ವಯಸ್ಸಿನಲ್ಲಿ
ಮತ್ತೆ ಕೈ ಬಿಟ್ಟು ಹೋಗುತ್ತದೆ.
ಹಾಗೆಯೇ ಅವರ ಮಕ್ಕಳು ಕೂಡ
ದೂರವಾಗುತ್ತಾರೆ. ತಾವು ಗಂಡನ ಜೊತೆ
ತೋರಿಸಿದ ಕ್ರೂರತನ ಮರೆತ ಅವರು, ತಮ್ಮ
ಮಕ್ಕಳು ಅವರ ಹೆಂಡತಿಯ ಕೈಯಲ್ಲಿ
ನಲುಗಿ ಹೋಗುವುದನ್ನು ನೋಡಿ ಕೈ-ಕೈ
ಹಿಸುಕಿಕೊಳ್ಳುತ್ತಾರೆ. ಆಸ್ತಿ ಜಗಳಗಳ ಜೀವನ ಚಕ್ರ ಮುಂದುವರೆಯುತ್ತ
ಹೋಗುತ್ತದೆ.
ಗಂಡಸು
ತನ್ನ ಹೆಂಡತಿಯ ಮೇಲೆ ನಡೆಸುವ ದೌರ್ಜನ್ಯ
ಎಲ್ಲೆಲ್ಲ ಸುದ್ದಿಯಾಗುತ್ತದೆ. ಆದರೆ ಮದುವೆಯಾಗಿ ತನ್ನ
ಗಂಡನನ್ನು ಖರೀದಿ ಮಾಡಿದ್ದೇನೆ ಎಂದು ವರ್ತಿಸುವ ಹೆಂಡತಿಯರು
ಸಾಕಷ್ಟು ಮನೆಗಳಲ್ಲಿದ್ದರೂ ಅವರು ಮಾತ್ರ ಎಲ್ಲೂ
ಸುದ್ದಿಯಾಗುವುದಿಲ್ಲ. ಹಾಗೆಂದು ಅವರು ಕಾಲಚಕ್ರನ ಮಹಿಮೆಗೆ
ಸಿಕ್ಕದೆ ಹೋಗುವವರಲ್ಲ.